"ವಿದ್ಯಾರ್ಥಿಗಳ ಪ್ರಶ್ನೆಗಳು - ಉತ್ತರಗಳು"

 

ಮಾಧವಿ: " ವಿದ್ಯಾರ್ಥಿಯರಿಗೆ ಧ್ಯಾನದ ಅವಶ್ಯಕತೆ ಏಕಿದೆ ?"

 

ಪತ್ರೀಜಿ: "ವಿದ್ಯೆಯ ಮೇಲೆ ಏಕಾಗ್ರತೆ ಸಂಪಾದಿಸಿಕೊಳ್ಳಲು ವಿದ್ಯಾರ್ಥಿಗೆ ಧ್ಯಾನದ ಅವಶ್ಯಕತೆ ತುಂಬಾ ಇದೆ. ಏಕಾಗ್ರತೆಯನ್ನು ಅಭಿವೃದ್ಧಿಪಡಿಸಿಕಳ್ಳುವ ಮಾರ್ಗವೇ ಧ್ಯಾನ. ನಿನ್ನ ಏಕಾಗ್ರತೆಯನ್ನು ಚುರುಕುಗೊಳಿಸಲಿಕ್ಕಾಗಿಯೇ ಧ್ಯಾನ ಮಾಡಬೇಕು. ಕೃಷ್ಣನಿಗೂ, ಬುದ್ಧನಿಗೂ ಏಕಾಗ್ರತೆ ಅಧಿಕವಾಗಿರುವ ಕಾರಣ ಅವರು ಹೆಚ್ಚು ಧ್ಯಾನ ಮಾಡಿರುವುದರಿಂದ.

 

ಅನೂಷ: ಮನುಷ್ಯನಿಗೆ ಧ್ಯಾನ ಯಾವ ರೀತಿಯಲ್ಲಿ ಉಪಯೋಗವಾಗುತ್ತದೆ ?

 

ಪತ್ರೀಜಿ: "ಅನೇಕ ರೀತಿಯಲ್ಲಿ ಉಪಯೋಗವಾಗುತ್ತದೆ. ಧ್ಯಾನ ಮಾಡಿದರೇ ನಾವು ಊಟ ಸರಿಯಾಗಿ ಮಾಡುತ್ತೇವೆ. ಬಾಯಿಂದ ಮಾತು ಸರಿಯಾದ ರೀತಿಯಲ್ಲಿ ಬರುತ್ತದೆ. ಆಲೋಚನೆಗಳು ಸರಿಯಾಗಿರುತ್ತವೆ. ದೃಷ್ಟಿ ಸರಿಯಾಗಿರುತ್ತದೆ. ನಾವು ಮಾಡುವ ಕೆಲಸಗಳೆಲ್ಲಾ ಸರಿಯಾಗಿರುತ್ತದೆ. ಏಕಾಗ್ರತೆ ಇದ್ದರೆ, ಎಲ್ಲಾ ಕೆಲಸಗಳೂ ಶ್ರದ್ಧೆಯಿಂದ ಮಾಡಲಾಗುತ್ತದೆ. ಈ ರೀತಿಯಲ್ಲಿ ಧ್ಯಾನದಿಂದ ಅನೇಕ ಬಗೆಯ ಉಪಯೋಗಗಳಿವೆ. "

 

ಕಿರಣ್: ನಿದ್ರೆಯನ್ನು ಜಯಿಸುವುದು ಹೇಗೆ ?

 

ಪತ್ರೀಜಿ: ನಿದ್ರೆಯನ್ನು ಜಯಿಸಿದವರನ್ನು ’ ಗುಡಾಕೇಶ ’ ಎನ್ನುತ್ತಾರೆ. ಅರ್ಜುನನಿಗೆ ಇನ್ನೊಂದು ಹೆಸರು ’ಗುಡಾಕೇಶ’. ತ್ಯಾಗರಾಜಸ್ವಾಮಿ ಅವರು ಸಹ ’ ನಿದ್ರೆಯನ್ನು ನಿರಾಕರಿಸಿ ತಂಬೂರಿಯನ್ನು ಕೈಹಿಡಿ ’ ಎಂದು ಹೇಳಿದ್ದಾರೆ. ನಿದ್ರೆಯನ್ನು ಜಯಿಸಬೇಕಾದರೇ ರಾತ್ರಿ ಹೊತ್ತು ಊಟ ಕಡಿಮೆ ತಿನ್ನಬೇಕು. ಮಕ್ಕಳಾದರೇ ಚೆನ್ನಾಗಿ ತಿನ್ನಬೇಕು. ಆದರೆ, ದೊಡ್ಡವರು ಮಾತ್ರ ರಾತ್ರಿ ಹೊತ್ತು ತುಂಬಾ ಕಡಿಮೆ ಉಣ್ಣಬೇಕು. ಹಿರಿಯರು ನಿದ್ರೆ ಕಡಿಮೆ ಮಾಡಬೇಕು. ಅಷ್ಟೇ ವಿನಹ ನಿದ್ರೆಯನ್ನು ’ ಜಯಿಸ ’ಬೇಕಾಗಿಲ್ಲ. ನಿದ್ರೆ ಮಾಡದೇ ಇರುವುದು ಎನ್ನುವುದು ನಿದ್ರೆಯನ್ನು ಜಯಿಸುವುದಲ್ಲ. ನಿದ್ರೆಯನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲಿಕ್ಕಾಗಿಯೇ ಧ್ಯಾನ ಮಾಡಬೇಕು. ಅದು ಧ್ಯಾನದಿಂದಲೇ ಸಾಧ್ಯ.

 

ಪೃಥ್ವಿ: ನಿದ್ರೆಗೂ ಧ್ಯಾನಕ್ಕೂ ಇರುವ ವ್ಯತ್ಯಾಸವೇನು ?

 

ಪತ್ರೀಜಿ: ’ ನಿದ್ರೆ ’ ಅಂದರೆ, ಅರಿವಿಲ್ಲದ ’ ಧ್ಯಾನ ’. ’ ಧ್ಯಾನ ’ ಅಂದರೆ, ಅರಿವಿನಿಂದ ಮಾಡುವ ’ ನಿದ್ರೆ ’. ’ನಿದ್ರೆ’ ಎಂದರೂ ’ ಧ್ಯಾನ ’ ಎಂದರೂ ಎರಡರಲ್ಲೂ ನಿಜಕ್ಕೂ ಆತ್ಮಪದಾರ್ಥ ಎನ್ನುವುದು ಶರೀರದಿಂದ ಹೊರಬರುವುದೇ. ನಿದ್ರೆಯಲ್ಲಿ ನಮಗೆ ತಿಳಿಯದೇನೆ ಹೊರಗೆ ಬರುತ್ತೇವೆ. ಧ್ಯಾನದಲ್ಲಿ ನಾವು ಅರಿವಿನಿಂದ ಹೊರಗೆ ಬರುತ್ತೇವೆ. ನಿದ್ರೆಯಲ್ಲೂ, ಧ್ಯಾನದಲ್ಲೂ ಮನುಷ್ಯರಿಗೆ ಪ್ರಶಾಂತತೆ ಬರುತ್ತದೆ. ಪ್ರಕೃತಿ-ಸಹಜವಾಗಿ ನಿದ್ರೆ ಬಂದು ನಮಗೆ ಪ್ರಶಾಂತತೆ ಸಿಗುತ್ತದೆ. ಧ್ಯಾನದಲ್ಲಿ ನಮ್ಮ ಪ್ರಶಾಂತತೆಯನ್ನು ನಾವೇ ತಂದುಕೊಳ್ಳುತ್ತೇವೆ. ನಿದ್ರೆ ಎಂಬುವುದು ಪ್ರಕೃತಿ ಕೊಡುವ ವರ. ಧ್ಯಾನ ಎಂಬುವುದು ನಮಗೆ ನಾವೇ ಪಡೆಯುವ ವರ.

 

ವೆಂಕಟೇಷ್: ಕಷ್ಟಗಳನ್ನು ಹೇಗೆ ಎದುರಿಸಬೇಕು ?

 

ಪತ್ರೀಜಿ: ಪ್ರತಿಯೊಬ್ಬರಿಗೂ ಕಷ್ಟಗಳು ಬರುತ್ತವೆ. ಕೆಲವರು ಅದರಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿ ಓಡಿಹೋಗುತ್ತಾರೆ. ಅಂತವರು ಹೇಡಿಗಳು. ಕಷ್ಟಗಳನ್ನು ಎದುರಿಸಬೇಕಾದರೇ ಕಷ್ಟದಿಂದ ಬರುವ ಫಲದ ಮೇಲೆ ಗಮನವಿಡಬೇಕು. ಮರದ ಮೇಲಿರುವ ಹಣ್ಣು ಸಿಗಬೇಕಾದರೆ ಮರ ಹತ್ತಲು ಕಷ್ಟಪಡಬೇಕು. ’ ಕಷ್ಟ ’ದಿಂದ ಬರುವ ’ ಫಲ ’ದ ಮೇಲೆ ಆಸೆ ಇಟ್ಟು, ತಕ್ಕಮಟ್ಟಿಗೆ ಕಷ್ಟಪಟ್ಟರೇನೆ ಫಲ ಅನುಭವಿಸಬಲ್ಲೆವು.

 

ಲಕ್ಷ್ಮೀ: ಜ್ಞಾನಕ್ಕೂ-ವಿದ್ಯಾಭ್ಯಾಸಕ್ಕೂ ಇರುವ ವ್ಯತ್ಯಾಸವೇನು ?

 

ಪತ್ರೀಜಿ: ವಿದ್ಯೆ ಒಂದು ವಿಷಯ ಹೇಳಿಕೊಡುತ್ತದೆ, ಆದರೆ, ಜ್ಞಾನ ಎಂಬುವುದು ನಮಗೆ ಸರಿಯಾಗಿ ಹೇಗೆ ಜೀವಿಸಬೇಕೋ ಹೇಳಿಕೊಡುತ್ತದೆ. ’ ಧ್ಯಾನ ’ ಎನ್ನುವ ವಿದ್ಯೆ ಕಲಿತುಕೊಂಡರೆ ’ ಜ್ಞಾನ ’ ಎನ್ನುವ ಫಲ ಸಿಗುತ್ತದೆ. ಜ್ಞಾನ ಅಂದರೆ ಹಾಯಾಗಿ ಜೀವಿಸುವ ವಿಧಾನ.

 

ಗುಪ್ತ: ನಾನು ’ ಅಬ್ದುಲ್ ಕಲಾಮ್ ’ ಅವರ ಹಾಗೆ ಆಗಬೇಕಾದರೆ ಏನು ಮಾಡಬೇಕು ?

 

ಪತ್ರೀಜಿ: ವಿಜಯದ ಮೇಲೆ ದೃಷ್ಟಿ ಇಡಬೇಕು. ದಿನಕ್ಕೆ ಮೂರು ಗಂಟೆಗಳ ಕಾಲ ಧ್ಯಾನ ಮಾಡಬೇಕು.

 

ರಮಣ: ಇತರರನ್ನು ಅರ್ಥಮಾಡಿಕೊಳ್ಳುವುದು ಹೇಗೆ ?

 

ಪತ್ರೀಜಿ: ನಿನ್ನ ನೀನು ಅರ್ಥಮಾಡಿಕೊಂಡರೇ ಇತರರನ್ನು ಸಹ ಅರ್ಥಮಾಡಿಕೊಳ್ಳಬಲ್ಲೆ. ನಿನ್ನ ನೀನು ಪ್ರೀತಿಸಿದರೇನೆ ಇತರರನ್ನು ಪ್ರೀತಿಸಬಲ್ಲೆವು. ನಿನ್ನ ನೀನು ಅರ್ಥಮಾಡಿಕೋ. ಅದು ಧ್ಯಾನ ಮಾಡುವುದರಿಂದ ಅಭ್ಯಾಸವಾಗುತ್ತದೆ.

 

ರಾವ್: ನೀವು ನಿಮ್ಮ ಅಮ್ಮನವರಿಂದ ಏನು ಕಲಿತಿರುವಿರಿ?

 

ಪತ್ರೀಜಿ: ಅನೇಕ ವಿಷಯಗಳನ್ನು ಕಲಿತಿದ್ದೇನೆ. ಮುಖ್ಯವಾಗಿ ಅವರ ಹತ್ತಿರ ಕಷ್ಟಗಳನೆಲ್ಲಾ ಕಿರುನಗುವಿನಿಂದ ಸ್ವೀಕರಿಸುವುದು, ಚೆನ್ನಾಗಿ ಕಷ್ಟಪಡುವುದು ಕಲಿತುಕೊಂಡಿದ್ದೇನೆ. ಆದರೆ, ನಮ್ಮ ಅಮ್ಮನ ಹತ್ತಿರ ಒಂದು ಮೂರ್ಖತನವಿದೆ. ಒಂದು ಬಾರಿ ನನ್ನ ಸ್ನೇಹಿತರನ್ನು ಕರೆದುಕೊಂಡು ಊಟಕ್ಕೆ ಮನೆಗೆ ಬಂದೆ. ನಮ್ಮ ತಾಯಿ ಬದನೇಕಾಯಿ ಪಲ್ಯ ಎಲ್ಲರಿಗೂ ಸ್ವಲ್ಪ ಸ್ವಲ್ಪ ಬಡಿಸಿ ನನಗೆ ಹೆಚ್ಚು ಬಡಿಸಿದಳು. ಅದು ನೋಡಿ ’ ತಾಯಿ ಪ್ರೀತಿ ಕುರಡು ’ ಎಂದು ನಮ್ಮ ತಾಯಿಯ ಹತ್ತಿರವೇ ಕಲಿತುಕೊಂಡೆ. ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳಬೇಕು ಎನ್ನುವುದನ್ನು ಎಲ್ಲಾ ತಾಯಂದಿರೂ ಮೊದಲು ಕಲಿತುಕೊಳ್ಳಬೇಕು.

 

ಕುಮಾರ್: ಜ್ಞಾನ ಹೇಗೆ ಸಂಪಾದಿಸಬೇಕು ?

 

ಪತ್ರೀಜಿ: ಧ್ಯಾನದಿಂದಲೇ ಜ್ಞಾನ. ಜ್ಞಾನದಿಂದಲೇ ಮುಕ್ತಿ.

 

ಕಿರಣ್: ಧ್ಯಾನ ಮಾಡಿದರೆ ವ್ಯಾಯಾಮ ಸಹ ಮಾಡಬೇಕಾ ?

 

ಪತ್ರೀಜಿ: ಧ್ಯಾನಕ್ಕೂ, ವ್ಯಾಯಾಮಕ್ಕೂ ಸಂಬಂಧವಿಲ್ಲ. ಧ್ಯಾನ ಮನಸ್ಸಿನ ಶಾಂತಿಗಾಗಿ ಮಾಡಬೇಕು. ವ್ಯಾಯಾಮ ಶಾರೀರಿಕ ಬಲಕ್ಕಾಗಿ ಮಾಡಬೇಕು. ಆದ್ದರಿಂದ, ಪ್ರತಿದಿನಾ ವ್ಯಾಯಾಮ, ಧ್ಯಾನ ಎರಡೂ ಮಾಡಬೇಕು.

 

ವರ್ಮ : ಮುಂಜಾನೆ ಏಳಬೇಕೆಂದರೆ, ಏನುಮಾಡಬೇಕು ?"

 

ಪತ್ರೀಜಿ: ರಾತ್ರಿ ಮಲಗುವುದಕ್ಕಿಂತಾ ಮುಂಚೆ ’ ನಾನು ಮುಂಜಾನೆ 4.30 ಗಂಟೆಗೆ ಏಳಬೇಕು ’ ಎಂದು ಜೋರಾಗಿ ಮೂರುಬಾರಿ ಹೇಳಿಕೊ. ಅದೇ ಎಚ್ಚರಿಕೆಯ (ಅಲಾರಂನ) ಹಾಗೆ ಕೆಲಸ ಮಾಡುತ್ತದೆ.

 

ಬಾಚೀ: ಆರೋಗ್ಯವಂತನಿಗೂ, ಕೋರಿಕೆಗಳು ಇಲ್ಲದವನಿಗೂ ಧ್ಯಾನದ ಅವಶ್ಯಕತೆ ಇದೆಯಾ ?

 

ಪತ್ರೀಜಿ: ಬಯಕೆಗಳಿರಬೇಕು. ಆದರೆ, ಒಳ್ಳೆಯ ಬಯಕೆಗಳಿರಬೇಕು. ಎಲ್ಲಾ ರೀತಿಯಲ್ಲೂ ಆರೋಗ್ಯವಂತನು-ಯೋಗಿ. ಧ್ಯಾನವಿಲ್ಲದೇ ’ ಎಲ್ಲಾ ರೀತಿಯಲ್ಲಿ ಆರೋಗ್ಯ ’ ಸಾಧ್ಯವಾಗುವುದಿಲ್ಲ. ಧ್ಯಾನವಿದ್ದರೇನೆ ಮಾನಸಿಕ, ಶಾರೀರಕ ಆರೋಗ್ಯ ಉಂಟಾಗುತ್ತದೆ. ನಮ್ಮ ಕೋರಿಕೆಗಳು ಗಾಂಧೀಜಿ ಕೋರಿಕೆಗಳ ಹಾಗಿರಬೇಕು; ವೀರಪ್ಪನ್ ಕೋರಿಕೆಗಳ ಹಾಗಿರಬಾರದು. ಶಾರೀರಕಪರವಾಗಿಯೂ, ಮಾನಸಿಕಪರವಾಗಿಯೂ, ಬುದ್ಧಿಪರವಾಗಿಯೂ, ಆತ್ಮಪರವಾಗಿಯೂ, ಆರೋಗ್ಯವಂತನಾಗಿರುವವನು ಇನ್ನು ಧ್ಯಾನ ಮಾಡುವುದಿಲ್ಲ; ಧ್ಯಾನ ಹೇಳಿಕೊಡುತ್ತಾನೆ.

 

ಸಂತೋಷ್: ಒಬ್ಬ ಯೋಗಿಗೂ, ಶಾಸ್ತ್ರಜ್ಞನಿಗೂ ಇರುವ ವ್ಯತ್ಯಾಸವೇನು ?

 

ಪತ್ರೀಜಿ: ಯೋಗಿ ಸಹ ಒಬ್ಬ ಶಾಸ್ತ್ರಜ್ಞನೇ. ಯೋಗಿ ’ ಆತ್ಮಜ್ಞಾನ ’ ಶಾಸ್ತ್ರಜ್ಞ.

 

ರಾಕೇಷ್: ಯೋಗಿಗೆ ಸಮಸ್ಯೆಗಳಿರುತ್ತವೆಯಾ? ಇದ್ದರೆ, ಅವುಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತಾರೆ?

 

ಪತ್ರೀಜಿ: ಅವರವರ ಸಮಸ್ಯೆಗಳು ಅವರವರಿಗಿರುತ್ತವೆ. ಮೀನಿನ ಸಮಸ್ಯೆ ಮೀನಿಗೆ. ತಿಮಿಂಗಲದ ಸಮಸ್ಯೆ ತಿಮಿಂಗಲಗಳಿಗೆ. ಯೋಗಿ ಧ್ಯಾನ ಮಾಡುವುದರಿಂದ ಸಮಸ್ಯೆಯ ಮೂಲ ಅರ್ಥಮಾಡಿಕೊಂಡು ಆ ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ಹೊಂದಿರುತ್ತಾನೆ.

 

ಭಾಸ್ಕರ್: ಸ್ನೇಹವನ್ನು ಹೇಗೆ ಬೆಳೆಸಿಕೊಳ್ಳಬೇಕು?

 

ಪತ್ರೀಜಿ: ತುಂಬಾ ಒಳ್ಳೆಯ ಪ್ರಶ್ನೆ ಕೇಳಿದ್ದಿಯಾ? ಅಭಿನಂದನೆಗಳು. ಇತರರ ಜೊತೆ ಸ್ನೇಹ ಬೆಳೆಸಿಕೊಳ್ಳಬೇಕಾದರೇ ಮುಂಚಿತವಾಗಿ ನಿನ್ನ ಜೊತೆ ನಿನಗೆ ಸ್ನೇಹ ಬೆಳೆಯಬೇಕು. ’ ನಿನ್ನ ಜೊತೆ ನೀನು ಸ್ನೇಹದಿಂದ ಇರುವುದು ’ ಎಂದರೆ ಧ್ಯಾನ ಮಾಡುವುದೇ. ಆದ್ದರಿಂದ, ನೀನು ಚೆನ್ನಾಗಿ ಧ್ಯಾನಮಾಡು; ಇತರರಿಂದಲೂ ಧ್ಯಾನ ಮಾಡಿಸು.

 

ಶರ್ಮ: ನೀವು ಧ್ಯಾನ ಪ್ರಾರಂಭಿಸಿದಾಗ ಬಂದ ಒಂದು ಧ್ಯಾನ ಅನುಭವವನ್ನು ಹೇಳುವಿರಾ ?

 

ಪತ್ರೀಜಿ: ನನ್ನ ಜೀವನದಲ್ಲಿ ನಾನು ಧ್ಯಾನ ಪ್ರಾರಂಭಿಸುವುದಕ್ಕಿಂತಾ ಮುಂಚೆಯೆ ... ನನಗೆ ಆಧ್ಯಾತ್ಮಿಕತೆಗೆ ಸಂಬಂಧಿಸಿದ ವಿಷಯವೆಲ್ಲಾ ಪೂರ್ಣವಾಗಿ ತಿಳಿದಿತ್ತು. ಆದರೆ, ಧ್ಯಾನ ಪ್ರಾರಂಭಿಸಿದ ಅನೇಕ ದಿನಗಳವರೆಗೂ, ಧ್ಯಾನಾನುಭವಗಳೇನು ಬರಲಿಲ್ಲ. ತುಂಬಾ ಸಮಯದನಂತರ ಒಂದು ದಿನ ಮೂಲಾಧಾರದಿಂದ ಕಂಪನಗಳು ಪ್ರಾರಂಭವಾಯಿತು, ಸುಳಿಗಳು ತಿರುಗುತ್ತಾ, ಊರ್ಧ್ವಮುಖದೆಡೆ ಹೋದಂತೆ ಭಾಸವಾಯಿತು. ಆ ಸುಳಿಗಳು ಮೇಲಕ್ಕೆ ಬಂದು ಅದರ ಅನುಭವ ಅಲ್ಲಿಗೆ ನಿಲ್ಲಿತು.

 

ಪುನಃ ಅನೇಕ ದಿನಗಳನಂತರ ಮತ್ತೊಂದು ಅಂತಹ ಅನುಭವವೇ ಬಂದು ಸೂಕ್ಷ್ಮಶರೀರ ಹೊರಬಂತು. ಸಿಲ್ವರ್‌ಕಾರ್ಡ್ ಸಮೇತ ನನ್ನ ಸೂಕ್ಷ್ಮಶರೀರವನ್ನು ನಾನು ನೋಡಿಕೊಂಡೆ.

 

ಮತ್ತೊಂದು ಬಾರಿ, ಒಂದು ದೊಡ್ಡ ಸಮುದ್ರದ ಅಡಿಯಿಂದ ನಾನು ಮೇಲಕ್ಕೆ ಬಂದೆ. ತಲೆ ಮಾತ್ರವೇ ನೀರಿನ ಮೇಲಕ್ಕೆ ಬಂದು, ವಿಶಾಲ ವಿಶ್ವವೆಲ್ಲಾ ದರ್ಶನ ನೀಡಿತು. ಇವೆಲ್ಲಾ ಧ್ಯಾನ ಪ್ರಾರಂಭಿಸಿದ ಮೊದಲನೆಯ ಅನುಭವಗಳು.

* * *

 

ಶರ್ಮ: ಪಾಶ್ಚಾತ್ಯ ದೇಶಗಳಲ್ಲಿ ಧ್ಯಾನ ಪ್ರಚಾರದಲ್ಲಿ ಬರುವ ತೊಂದರೇಗಳೇನು ?

 

ಪತ್ರೀಜಿ: ಎರಡು ತೊಂದರೆಗಳಿವೆ. ಒಂದು ಮಾಂಸಾಹಾರ, ಎರಡನೆಯದು ಮಿತಿಮೀರಿದ ಸಂಪಾದನೆ ಮಾಡಬೇಕೆನ್ನುವ ತೃಷ್ಣೆ. ಮಾಂಸಾಹಾರ ತಿನ್ನುವಷ್ಟು ಕಾಲ ಆಧ್ಯಾತ್ಮಿಕ ಅಭಿವೃದ್ಧಿ ಬರಲು ಅಸಾಧ್ಯ. ಅದೇ ವಿಧವಾಗಿ ಪ್ರತಿಯೊಂದನ್ನೂ ಹಣದಿಂದ ಸಾಧಿಸಬಹುದೆಂದು ತಪ್ಪು ತಿಳಿವಳಿಕೆ ಇರುವುದರಿಂದ, ಶಾರೀರಕ ಸುಖಕ್ಕೆ ಹೆಚ್ಚು ಬೆಲೆ ಕೊಡುವುದರಿಂದ, ಧ್ಯಾನದ ಕಡೆ ಮನಸ್ಸು ಹೋಗುವುದಿಲ್ಲ. ’ ನಿಮಗೆ ಬೇಕಾದರೆ ಎಷ್ಟು ಹಣ ಬೇಕಾದರೂ ಕೊಡುತ್ತೇವೆ. ಆದರೆ, ಅನೇಕ ಗಂಟೆಗಳಕಾಲ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಲಾರೆವು ’ ಎನ್ನುತ್ತಾರೆ. ಈ ಪರಿಸ್ಥಿತಿ ಈ ಭೂಮಂಡಲದಲ್ಲಿ 2012ನೇ ವರ್ಷದವರೆಗು ಮಾತ್ರವೆ ಮುಂದುವರೆಯುತ್ತದೆ. ಅನಂತರ ಪಾಶ್ಚಾತ್ಯ ದೇಶಗಳು ಕೂಡಾ ಆಧ್ಯಾತ್ಮಿಕತೆಯಲ್ಲಿ ನಾಯಕತ್ವ ವಹಿಸುತ್ತದೆ.

 

ಶರ್ಮ: ಸರ್! ನೀವು ಧ್ಯಾನ ಮಾಡುವಾಗ ಸಂಗೀತ ಹಾಡುತ್ತೀರ, ಕೊಳಲು ಸಹ ನುಡಿಸುತ್ತೀರ. ಸಂಗೀತಕ್ಕೂ ಧ್ಯಾನಕ್ಕೂ ಸಂಬಂಧವೇನು ?

 

ಪತ್ರೀಜಿ: ಅದು ಪ್ರಕೃತಿ, ಪುರುಷ ಸಂಬಂಧ. ಪ್ರಕೃತಿ ಅಂದರೆ ಲಯ. ಪ್ರಕೃತಿಯಲ್ಲಿ ಎಲ್ಲಾ ಲಯಬದ್ಧವಾಗಿ ಸಾಗುತ್ತದೆ. ಸೂರ್ಯೋದಯ-ಸೂರ್ಯಾಸ್ತ, ಋತುಗಳು, ಕಾಲಗಳು... ಎಲ್ಲಾ ಲಯಬದ್ಧವಾಗಿ... ಒಂದು ಕ್ರಮಕಾಲ ಪರಿಮಾಣದಲ್ಲಿ ನಡೆಯುತ್ತಿರುತ್ತದೆ. ಪುರುಷ ಅಂದರೆ ಆತ್ಮ. ಅದೇ ಶೃತಿ.

 

ಶೃತಿ ಲಯಗಳ ಮಿಲನವೇ ಸಂಗೀತ. ಪ್ರಕೃತಿ ಪುರುಷ ಸಮಾಗಮ, ಅಂದರೆ, ವಿಶ್ವಚೈತನ್ಯ, ಆತ್ಮಗಳ ಸಂಗಮವೇ ಧ್ಯಾನ. ಆದ್ದರಿಂದ, ಸಂಗೀತವನ್ನು ಆಲಿಸುತ್ತಾ ಧ್ಯಾನ ಮಾಡುವುದು ಸುಲಭವಾಗುತ್ತದೆ.

 

ಶರ್ಮ: ಬಂಧುತ್ವ-ಮಿತ್ರತ್ವ... ಈ ಎರಡನ್ನೂ ಬೇರ್ಪಡಿಸಿ ನೋಡುವುದು ಹೇಗೆ ?

 

ಪತ್ರೀಜಿ: ಬಂಧುತ್ವ ಎನ್ನುವುದು ಬಂಧನಗಳನ್ನು ಉಂಟುಮಾಡುತ್ತದೆ. ಬಂಧುತ್ವದ ಬಂಧನಗಳನ್ನು ಕತ್ತರಿಸಿದರೇ ಮುಕ್ತಿ. ಎಲ್ಲಿ ಅಪೇಕ್ಷೆ (Expectation) ಇರುತ್ತದೆಯೊ ಅಲ್ಲಿ ಬಂಧುತ್ವ ಇದ್ದಹಾಗೆ. ನಿನ್ನ ಮಗನಿಂದ ನೀನು ಏನಾದರೂ ಆಶಿಸಿದರೆ, ಅದು ಬಂಧುತ್ವ. ಹಾಗಲ್ಲದೇ ನಿನ್ನ ಮಗನಿಂದ ಏನೂ ಆಶಿಸದೇ, ಯಥಾರ್ಥ ಪರಿಸ್ಥಿತಿಯನ್ನು ಸ್ವೀಕರಿಸಲಾದರೆ, ಅಲ್ಲಿ ಮಿತ್ರತ್ವ ಇದ್ದಹಾಗೆ. ಅಂತಹ ಮಿತ್ರತ್ವ ಮಾತ್ರವೇ ಊರ್ಧ್ವಲೋಕಗಳಿಗೆ ನಮ್ಮ ಜೊತೆ ಬರುತ್ತದೆ.

 

ಶರ್ಮ: ಧ್ಯಾನದಲ್ಲಿ ಅನುಭವಿಸುವ ಆನಂದಸ್ಥಿತಿಗೂ, ನಿತ್ಯ ಜೀವನದಲ್ಲಿ ಪಡೆಯುವ ಆನಂದಕ್ಕೂ ವ್ಯತ್ಯಾಸವಿದೆಯಾ ?

 

ಪತ್ರೀಜಿ: ಮೂರು ಬಗೆಯ ಆನಂದಸ್ಥಿತಿಗಳಿವೆ: ಶಾರೀರಿಕ ಆನಂದ, ಮಾನಸಿಕ ಆನಂದ, ಆತ್ಮಾನಂದ. ಶರೀರಕ್ಕೆ ಬೇಕಾದ ಅವಶ್ಯಕತೆಗಳನ್ನೆಲ್ಲಾ ಒದಗಿಸುವುದರಿಂದ...ಊಟ, ಬಟ್ಟೆ, ವಸತಿಯಿಂದ...ಶರೀರ ಆನಂದವನ್ನು ಹೊಂದುತ್ತದೆ. ಒಳ್ಳೆಯ ಸುಮಧುರ ಸಂಗೀತ, ಪ್ರೇಮಪೂರ್ವಕವಾದ ಮಾತುಗಳು ಮುಂತಾದ ಸ್ಥಿತಿಯಿಂದ ಮಾನಸಿಕ ಆನಂದ ಲಭ್ಯವಾಗುತ್ತದೆ.

 

ಧ್ಯಾನದಲ್ಲಿ ಅನುಭವಿಸುವುದು ಬ್ರಹ್ಮಾನಂದ ಸ್ಥಿತಿ. ಧ್ಯಾನದಲ್ಲಿ ಆತ್ಮ ಆನಂದಸ್ಥಿತಿಯಲ್ಲಿರುತ್ತದೆ. ಈ ಮೂರು ಆನಂದಗಳು ಅವಶ್ಯಬೇಕು. ಸದಾ ಶರೀರಾನಂದವನ್ನು ಮಾತ್ರವೇ ಹೊಂದುತ್ತಾ, ಉಳಿದ ಎರಡನ್ನೂ ಪಡೆಯದೇ ಇರಬಾರದು. ಮೂರನ್ನೂ ಜೀವನದಲ್ಲಿ ಸಮಪಾಲಲ್ಲಿ ಅನುಭವಿಸುವುದೇ ಬುದ್ಧತ್ವ.

 

ಶರ್ಮ: ತ್ಯಾಗರಾಜ, ಅನ್ನಮಾಚಾರ್ಯ ಕೀರ್ತನೆಗಳಲ್ಲಿರುವ ಆಧ್ಯಾತ್ಮಿಕತೆಯನ್ನು ವಿವರಿಸಿ ?

ಪತ್ರೀಜಿ: ಅನ್ನಮಾಚಾರ್ಯರು, ತ್ಯಾಗರಾಜರು ಇವರು ಯೋಗೀಶ್ವರರು. ಅವರು ಅವರವರ ಜನ್ಮಗಳಲ್ಲಿ ಸಂಗೀತ ಪ್ರಚಾರವನ್ನು ಜೀವನದ ಕಾರ್ಯಕ್ರಮವಾಗಿ ಆರಿಸಿಕೊಂಡು ಬಂದಿದ್ದಾರೆ. ಅವರು ಆಗಿನ ಪರಿಸ್ಥಿತಿಗಳಿಗೆ ಅನುಗುಣವಾಗಿ, ಅವಶ್ಯಕತೆಯ ಮೇಲೆ, ವಿವಿಧ ಕಥಾವಸ್ತುಗಳ ಮೇಲೆ ಹಾಡುಗಳನ್ನು ಬರೆದರು. ಆ ಹಾಡುಗಳಲ್ಲಿರುವ ಸಂಗೀತವನ್ನು ಆಸ್ವಾದಿಸಬೇಕು. ಆ ಹಾಡುಗಳಲ್ಲಿರುವ ಸಾಹಿತ್ಯವನ್ನು ಆನಂದಿಸಬೇಕು. ಅಷ್ಟೇ ವಿನಹ ಆ ಹಾಡುಗಳೇ ನಮ್ಮ ’ ಆಧ್ಯಾತ್ಮಿಕ ದಾರಿ ’ ಅಲ್ಲ. ಹಾಡುಗಳಿಂದ ಬರುವ ಮಾನಸಿಕ ಆನಂದವನ್ನು ಅನುಭವಿಸಬೇಕು, ಪುನಃ ಸಹಜವಾದ ’ಆಧ್ಯಾತ್ಮಿಕ ದಾರಿ’ ಆದ ಧ್ಯಾನಕ್ಕೆ ಬರಬೇಕು. ಧ್ಯಾನದಿಂದಲೇ ಮುಕ್ತಿ. ಧ್ಯಾನದಿಂದಲೇ ಆತ್ಮಾನಂದವನ್ನು ಹೊಂದುತ್ತೇವೆ. ಅಷ್ಟೇ ವಿನಹ ಹಾಡು ಹಾಡುವುದರಿಂದ ಮುಕ್ತಿ ಅಲ್ಲ.

 

ಶರ್ಮ: ಪವಿತ್ರತೆ ಎಂದರೆ ಏನು? ಇದು ಎಲ್ಲರಿಗೂ ಒಂದೇನಾ ?

 

ಪತ್ರೀಜಿ: ಪವಿತ್ರತೆ ಎನ್ನುವ ಮಾತು ಒಂದು ಸಾಪೇಕ್ಷ ಪದ. ಅವರವರಿಗೆ ಇರುವ ಜ್ಞಾನದ ಮಟ್ಟದ ಮೇಲೆ ಅವರು ಕೆಲವು ವಿಷಯಗಳನ್ನು ಪವಿತ್ರವಾಗಿ ಭಾವಿಸುತ್ತಾರೆ. ಹಂದಿ ಎನ್ನುವುದು ಕೆಲವರಿಗೆ ಅಪವಿತ್ರ. ಹಸು ಎನ್ನುವುದು ಕೆಲವರಿಗೆ ಪವಿತ್ರ. ತುಳಸಿ ಗಿಡ ಕೆಲವರಿಗೆ ಪವಿತ್ರ. ಕೆಲವರು ಅದನ್ನು ಪವಿತ್ರವಾಗಿ ಭಾವಿಸುವುದಿಲ್ಲ. ಕೆಲವರು ಕೆಲವು ಕಾರ್ಯಗಳನ್ನು ಅತಿ ಪವಿತ್ರವಾಗಿ ಆಚರಿಸುತ್ತಾರೆ. ಅವೇ ಕಾರ್ಯಗಳು ಇನ್ನು ಕೆಲವರಿಗೆ ಪವಿತ್ರ ಕಾರ್ಯಗಳಲ್ಲ.

 

ಆದ್ದರಿಂದ, ಪವಿತ್ರತೆ ಎನ್ನುವ ವಿಷಯ ದೇಶಕಾಲ ಪರಿಸ್ಥಿತಿಗಳಿಗೆ ಅನುಗಣವಾಗಿ ಅವರವರ ಅಜ್ಞಾನದಿಂದ ಅವರಿಗೆ ಹೇಗೆಬೇಕೊ ಅವರು ನಿರ್ಣಯಿಸಿಕೊಳ್ಳುತ್ತಾರೆ. ನಿಜಕ್ಕೂ ನೋಡಿದರೆ ಎಲ್ಲಾ ಪವಿತ್ರವೇ.

* * *

 

ಮೌನಿಕ: ಆಧ್ಯಾತ್ಮಿಕತೆ ಅಂದರೆ ಏನು ?

 

ಪತ್ರೀಜಿ: ಆಧ್ಯಾತ್ಮಿಕತೆ ಅಂದರೆ ದೇವರನ್ನು ಪೂಜಿಸುವುದಲ್ಲ. ನಾವೇ ದೇವರು ಎಂದು ತಿಳಿದುಕೊಳ್ಳುವುದೇ ಆಧ್ಯಾತ್ಮಿಕತೆ. ಎಲ್ಲರನ್ನೂ ಗೌರವಿಸುವುದೇ ಆಧ್ಯಾತ್ಮಿಕತೆ. ಸಕಲ ವಿದ್ಯಾ ವಿಷಯ ಸಂಪನ್ನನಾದ ಪಂಡಿತನನ್ನು, ಮತ್ತು ಯಾವ ವಿದ್ಯೆಯೂ ಕಲಿತುಕೊಳ್ಳದ ಪಾಮರನನ್ನು ಕೂಡಾ ಸರಿಸಮಾನವಾಗಿ ಗೌರವಿಸುವುದೇ ಆಧ್ಯಾತ್ಮಿಕತೆ. ಜೀವನದ ಸತ್ಯಗಳನ್ನು ತಿಳಿದುಕೊಳ್ಳುವುದೇ ಆಧ್ಯಾತ್ಮಿಕತೆ. ಇವು ಧ್ಯಾನ ಮಾಡುವುದರಿಂದಲೇ ತಿಳಿದುಬರುತ್ತದೆ. ನಾನು ದೇವರು ಎಂದು ತಿಳಿದುಕೊಳ್ಳಲು ಸಾಧ್ಯವಾದಾಗಲೆಲ್ಲಾ ಧ್ಯಾನಸಾಧನೆ ಮಾಡುತ್ತಾ ಇರುವುದೇ ಆಧ್ಯಾತ್ಮಿಕತೆ!

 

ಪ್ರತ್ಯೂಷ: ಬುದ್ಧತ್ವ ಅಂದರೆ ಏನು ?

 

ಪತ್ರೀಜಿ: ನಮಗೆ ಅವಶ್ಯಕತೆ ಇಲ್ಲದ ಕೆಲಸಗಳನ್ನು ಮಾಡಬಾರದು. ಹಾಗೆಯೆ, ಇತರರಿಗೆ ಅವಶ್ಯಕತೆ ಇಲ್ಲದ ಕೆಲಸಗಳನ್ನು ಸಹ ಮಾಡಬಾರದು. ನಮ್ಮ ಅವಶ್ಯಕತೆ ಜೊತೆ ಎಲ್ಲರ ಅವಶ್ಯಕತೆಗಳನ್ನು ಗುರ್ತಿಸಿ ನೂಡಲಾಗುವುದೇ ಬುದ್ಧತ್ವ. ಬುದ್ಧಿಯಿಂದ ಮಾತನಾಡುತ್ತಾ ಎಲ್ಲಾ ವಿಷಯಗಳಲ್ಲೂ ಮಿತವಾಗಿರುವುದೇ ಬುದ್ಧತ್ವ. ಊಟ, ವಿದ್ಯಾಭ್ಯಾಸ, ಸಂಪಾದನೆ, ನಿದ್ರೆ, ಸೇವೆ ಎಲ್ಲಾದರಲ್ಲೂ ಮಿತವಾಗಿರುವುದೇ ಬುದ್ಧತ್ವ. ಮಧ್ಯೇ ಮಾರ್ಗವೇ ಬುದ್ಧತ್ವ.

 

ಅನಿಲ್: ಶ್ರೀ ಸದಾನಂದಯೋಗಿಯವರ ಕುರಿತು ತಿಳಿಸಿ ?

 

ಪತ್ರೀಜಿ: ಜನವರಿ 1ರಂದು, 1981ನಲ್ಲಿ ಮೊದಲನೆಯ ಬಾರಿ ಕರ್ನೂಲ್‌ನಲ್ಲಿ ಶ್ರೀ ಸದಾನಂದಯೋಗಿಯವರನ್ನು ನೋಡಿದೆನು. ಮೊದಲನೆಯ ಬಾರಿ ನೋಡಿದಾಗ ಅವರು ನನ್ನ ಮೇಲೆ ಕೆಳಗೆ ನೋಡಿ, ಏನು ಬೇಕು? ಇಲ್ಲಿ ಬ್ರಹ್ಮಜ್ಞಾನ ವಿನಹ ಇನ್ನೆನೂ ಸಿಗುವುದಿಲ್ಲ. ಎಂದರು ನನಗೆ ಬೇಕಾಗಿರುವುದು ಬ್ರಹ್ಮಜ್ಞಾನವೇ ಎಂದು ಹೇಳಿದೆ. ಮರುದಿನ ಬಾ ಎಂದು ಹೇಳಿ ಜನವರಿ 2ರಂದು, 1981ನೇ ದಿನ ನನಗೆ ಪ್ರಪ್ರಥಮವಾಗಿ ಜ್ಞಾನಬೋಧನೆ ಮಾಡಿದರು. ಮೂರನೆಯ ದಿನ ಧ್ಯಾನ ಹೇಗೆ ಮಾಡಬೇಕೊ ಹೇಳಿಕೊಟ್ಟರು.

 

ಎರಡೂವರೆ ವರ್ಷ ಅವರೊಡನೆ ನಾನು ಜೀವನ ಸಾಗಿಸಿದೆ. ಅವರು ದೇಹತ್ಯಾಗಮಾಡುವ ಮುನ್ನ ಒಂದು ತಿಂಗಳು ಮುಂಚಿತವಾಗಿಯೆ ನನ್ನ ಕರೆದು, ಸುಭಾಷ್! ನಾನು ಮೇ 22ರಂದು ಈ ಶರೀರ ತ್ಯಜಿಸುತ್ತೇನೆ, ಏರ್ಪಾಟುಗಳೆಲ್ಲಾ ಮಾಡು ಎಂದು ಹೇಳಿದರು. ಆಗ ಕರ್ನೂಲ್ ಜಿಲ್ಲೆಯಲ್ಲಿ ಬನಗಾನಪಲ್ಲಿಯ ಹತ್ತಿರ ನಾನು, ಮತ್ತಿತರರು ಅವರ ಶಿಷ್ಯರು ಸೇರಿ ಅವರ ಭಕ್ತನಾದ ನಂದವರಂ ನಿವಾಸಿಯಾದ ಶ್ರೀ ಚೆನ್ನಾರೆಡ್ಡಿ ಅವರ ಹೊಲದಲ್ಲಿ ಒಂದು ಸ್ಥಳದಲ್ಲಿ ಎಲ್ಲಾ ಏರ್ಪಾಟುಗಳು ಮಾಡಿದವು. ಅಲ್ಲೇ ಅವರು ಶರೀರ ತ್ಯಜಿಸಿದನಂತರ ಸಮಾಧಿ ನಿರ್ಮಾಣ ಮಾಡಿದೆವು. ಆ ಗ್ರಾಮದ ಹೆಸರು ನಂದವರಂ. ಪ್ರತಿ ವರ್ಷ ಗುರುಪೂರ್ಣಮಿಯ ದಿನ ತಪ್ಪದೇ ಧ್ಯಾನ ಉತ್ಸವಗಳು ನಡೆಯುತ್ತವೆ. ಅಲ್ಲಿಗೆ ಗುರುಪೂರ್ಣಮಿ ದಿನ ತಪ್ಪದೇ ಬನ್ನಿ. ಅವರು ಶ್ರೀಸದಾನಂದಯೋಗಿ ... ಒಂದು ಪರಮಾತ್ಮ .

 

ಭಾಗ್ಯಲಕ್ಷ್ಮಿ: ಶರೀರದಲ್ಲಿರುವ ಷಟ್ ಚಕ್ರಗಳನ್ನು ಕುರಿತು ತಿಳಿಸಿ ?

 

ಪತ್ರೀಜಿ: ಶರೀರದಲ್ಲಿ ಷಟ್‌ಚಕ್ರಗಳೆಂದು ಏನೂ ಇಲ್ಲ. ಲಿಂಗಮಯಕೋಶ ಅಥವಾ ಪ್ರಾಣಮಯಕೋಶದಲ್ಲಿ ಅವುಗಳಿಗೆ ಅನೇಕ ಶಕ್ತಿಕೇಂದ್ರಗಳಿವೆ. ಅವುಗಳಲ್ಲಿ ಮುಖ್ಯವಾದದನ್ನು ’ಷಟ್‌ಚಕ್ರಗಳು’ ಎನ್ನುತ್ತಾರೆ. ಈ ಊರಿನಲ್ಲಿ ಅನೇಕ ಸಂದುಗೊಂದುಗಳಿವೆ. ಮುಖ್ಯವಾದ ಕೂಡು ರಸ್ತೆಗಳು ಕೆಲವು ಇರುತ್ತವೆ. ಹಾಗೆಯೇ, ಪ್ರಾಣಮಯ ಶರೀರದಲ್ಲಿ 7೦,೦೦೦ ನಾಡಿಗಳಿವೆ. ಅದರಲ್ಲಿ ಆರು ಮುಖ್ಯವಾದ ಶಕ್ತಿ ಕೂಡಿಕೆಗಳಿವೆ. ಅವುಗಳನ್ನು ಷಟ್‌ಚಕ್ರಗಳು ಎಂದರು. ಇವು ಸೂಕ್ಷ್ಮ ಶರೀರದಿಂದ ಸ್ಥೂಲಶರೀರದೊಳಗೆ ಶಕ್ತಿಯನ್ನು ಕಳುಹಿಸುವ ಶಕ್ತಿ ಕೇಂದ್ರಗಳು. "

 

ಜ್ಯೋತಿ: ಮನಸ್ಸು, ಬುದ್ಧಿ, ಆತ್ಮಗಳಿಗೆ ಇರುವ ಭೇದಗಳನ್ನು ವಿವರಿಸಿ ? "

 

ಪತ್ರೀಜಿ: ಮನಸ್ಸು ಎನ್ನುವುದು ನಿನ್ನ ಸಮಾಜ ನಿನಗೆ ನೀಡಿದೆ. ನೀನು ಒಬ್ಬ ಹಿಂದುವಾಗಿ ಹುಟ್ಟಿದರೆ ಒಂದು ಹಿಂದು ಮನಸ್ಸು ಇರುತ್ತದೆ; ಒಬ್ಬ ಮುಸ್ಲಿಮ್ ಆಗಿ ಹುಟ್ಟಿದರೆ ಮುಸ್ಲಿಂ ಮನಸ್ಸು ಇರುತ್ತದೆ; ನೀನು ಎಲ್ಲಿ ಬೆಳೆದರೆ ಅಲ್ಲಿ ಆ ಸಮಾಜದ ಪ್ರಭಾವದಿಂದ ನಿನಗೆ ಮನಸ್ಸು ಏರ್ಪಡುತ್ತದೆ. ಬುದ್ಧೀ ಕರ್ಮಾನು ಸಾರಿಣೀ ಎನ್ನುತ್ತಾರೆ. ನಿನ್ನ ಬುದ್ಧಿ ನಿನ್ನ ಜನ್ಮ ಪರಂಪರೆಯಲ್ಲಿ ಮಾಡಿದ ಕರ್ಮಗಳನ್ನು ಅನುಸರಿಸಿ ಬರುತ್ತದೆ. ಒಳ್ಳೆಯ ಕರ್ಮಗಳನ್ನು ಮಾಡಿದ್ದರೆ ಒಳ್ಳೆಯ ಬುದ್ಧಿ, ಕೆಟ್ಟ ಕರ್ಮಗಳನ್ನು ಮಾಡಿದ್ದರೆ ಕೆಟ್ಟ ಬುದ್ಧಿ ಇರುತ್ತದೆ. ಮತ್ತು ಆತ್ಮ ನಿನ್ನ ಶರೀರದಲ್ಲಿ ಇರುತ್ತಾ ನಿನ್ನ ಮನಸ್ಸನ್ನೂ, ಬುದ್ಧಿಯನ್ನೂ ಹೊಂದಿರುತ್ತದೆ. "

 

* * *

 

ಮೊದಲನೆಯಪ್ರಶ್ನೆ: ದೇಹಪರವಾದ ವಿಷಯಗಳು ಯಾವುದು? ಆತ್ಮ ಪರವಾದ ವಿಷಯಗಳು ಯಾವುದು ?"

 

ಪತ್ರೀಜಿ: ವ್ಯಕ್ತಿಗತವಾಗಿ ಮಾತ್ರವೇ ಉಪಯೋಗವಾಗುವುದು ದೇಹಪರವಾದ ವಿಷಯಗಳು. ಸಮಾಜಕ್ಕೆ ಉಪಯೋಗವಾಗುವುದು ಆತ್ಮಪರವಾದ ವಿಷಯಗಳು. ಏಕೆಂದರೆ, ’ ಮಮ ಆತ್ಮಾ ಸರ್ವ ಭೂತಾತ್ಮ ’ ಎಂದರಲ್ಲವೇ ಅದಕ್ಕಾಗಿ.

 

ಶರ್ಮ: ಸ್ವಲ್ಪ ವಿವರಿಸಿ ?

 

ಪತ್ರೀಜಿ: ಮುಖಾಮುಖಿ ಯಲ್ಲಿ ’ ವಿವರಣೆಗಳು ’ ಇರುವುದಿಲ್ಲ. ಪ್ರಶ್ನೆಗಳಿಗೆ ನೇರ ಉತ್ತರಗಳೇ ಇರುತ್ತವೆ.

 

ಎರಡನೆಯಪ್ರಶ್ನೆ: ನನ್ನನ್ನು ಒಬ್ಬ ಇಂಜನೀರಿಂಗ್ ವಿದ್ಯಾರ್ಥಿ ಕೇಳಿರುವ ಪ್ರಶ್ನೆ; ನಾನು ಸಾಧಿಸಬೇಕೆಂದುಕೊಂಡಿದೆಲ್ಲಾ ಸಾಧಿಸುತ್ತಿದ್ದೇನೆ. ನನ್ನ ಆರೋಗ್ಯ ತುಂಬಾ ಚೆನ್ನಾಗಿದೆ. ನಾನು ಆನಂದವಾಗಿದ್ದೇನೆ. ಹೀಗಿರುವಾಗ ನನಗೆ ಧ್ಯಾನದ ಅವಶ್ಯಕತೆ ಏಕೆ ?

 

ಪತ್ರೀಜಿ: ಈಗ ನಿನಗಿರುವ ಆನಂದ ಸದಾ ಇರಲು, ಕಾರ್ಯಸಾಧನೆ ನಿರಂತರ ಸಾಗಲು, ಆರೋಗ್ಯವಾಗಿ ಜೀವನ ಪೂರ್ತಿ ಇರಲು, ಈ ದಿನದಿಂದಲೇ ಧ್ಯಾನ ಮಾಡಬೇಕು.

 

ಮೂರನೆಯಪ್ರಶ್ನೆ: ಖಲೀಲ್ ಜಿಬ್ರಾನ್ ತನ್ನ ’ ಪ್ರವಕ್ತ ’ ಎನ್ನುವ ಪುಸ್ತಕದಲ್ಲಿ ಕೆಲಸವನ್ನು ಕುರಿತು ಮಾತನಾಡುತ್ತಾ, ’ ನೀನು ಮಾಡುವ ಪ್ರತಿಯೊಂದು ಕೆಲಸ ಪ್ರಾರಂಭಿಸುವುದಕ್ಕಿಂತಾ ಮುಂಚಿತವಾಗಿಯೇ ನಿನಗಾಗಿ ನಿರ್ದೇಶಿಸಲಾಗಿದೆ ’ ಎಂದರು. ಹಾಗೆ ಅಂದರೆ ಏನು ?

 

ಪತ್ರೀಜಿ: ದೈಹಿಕ ಆಕೃತಿ (ಫಿಜಿಕಲ್ ಬಾಡಿ) ತಯಾರಾಗುವುದಕ್ಕಿಂತಾ ಮುಂಚೆ ಮಾನಸಿಕ ಆಕೃತಿ (ಮೆಂಟಲ್ ಬಾಡಿ) ತಯಾರಾಗುತ್ತದೆ. ಮನೆ ಕಟ್ಟುವುದಕ್ಕಿಂತಾ ಮುಂಚೆ ಮನೆಗೆ ಸಂಬಂಧಿಸಿದ ’ ನಕ್ಷೆ ’ ಎಲ್ಲಾ sಸಿದ್ಧವಾದಹಾಗೆ, ನೀನು ಹುಟ್ಟುವುದಕ್ಕಿಂತಾ ಮುಂಚೆ, ಹುಟ್ಟಿದನಂತರ ಮಾಡಬೇಕಾದ ಕೆಲಸಗಳನ್ನು ಕುರಿತು ಪೂರ್ಣ ಜ್ಞಾನ ತಯಾರಾಗಿರುತ್ತದೆ. ನಕ್ಷೆಯಲ್ಲಿ ಚಿಕ್ಕ ಚಿಕ್ಕ ಬದಲಾವಣೆಗಳು ಇರಬಹುದು. ಆದರೆ, ನೀನು ಮಾಡುವುದೆಲ್ಲಾ ಆ ನಕ್ಷೆಯನ್ನು ಅನುಸರಿಸುವುದೇ.

 

ಪತ್ರೀಜಿ: ಮೂರು ಪ್ರಶ್ನೆಗಳು ಸಮಾಜಪರವಾಗಿಯೇ ಕೇಳಿರುವೆ. ಯಾವುದಾದರೂ ವ್ಯಕ್ತಿಗತವಾದ ಪ್ರಶ್ನೆ ಕೇಳು.

 

ಶರ್ಮ: ಒಂದು ವಿಷಯ ನನಗೆ ’ ಬೇಡ ’ ಎಂದುಕೊಂಡರೂ ಸಹ, ಆ ವಿಷಯವನ್ನು ಬಿಡಿಸಿಕೊಳ್ಳಲಾಗುತ್ತಿಲ್ಲ. ನೀವು ’ ಡಿಟಾಚ್‌ಮೆಂಟ್ (ವಿರಾಗ, ವಿರಕ್ತಿ, ವೈರಾಗ್ಯ) ಒಂದು ಕ್ಷಣ ಮಾತ್ರವೇ ’ ಎನ್ನುತ್ತೀರ. ಇದು ನಾನು ಹೇಗೆ ಸಾಧಿಸಲಿ ?

 

ಪತ್ರೀಜಿ: ಆರು ತಿಂಗಳು ಒಬ್ಬರ ಜೊತೆ ಕೂಡಿಕೊಂಡು ಇದ್ದರೆ ಅವರಂತೇ ಆಗುತ್ತೇವೆ. ಯೋಗಿಗಳ ಜೊತೆ ಆರು ತಿಂಗಳುಕಾಲ ನಿರಂತರ ಸಜ್ಜನ ಸಾಂಗತ್ಯ ಮಾಡು. ಅದು ಸಾಧ್ಯವಾಗುತ್ತದೆ.

 

ಶರ್ಮ: ಪಿರಮಿಡ್ ಮಾಸ್ಟರ್ ಅಂದರೆ ಯಾರು ?

 

ಪತ್ರೀಜಿ: ದೇಶ ಕಾಲ ಪರಿಸ್ಥಿತಿಗಳಿಗೆ ಅತೀತರಾಗಿ ಇರುವವರೇ ಪಿರಮಿಡ್ ಮಾಸ್ಟರ್. ’ಪರಿಸ್ಥಿತಿಗಳು ಸರಿಯಿಲ್ಲ; ಆದ್ದರಿಂದ, ಧ್ಯಾನ ಮಾಡಲಾಗುತ್ತಿಲ್ಲ! ಆತ್ಮಜ್ಞಾನದಲ್ಲಿ ಇರಲಾಗುತ್ತಿಲ್ಲ!’, ’ಕಾಲ ಸರಿಯಾಗಿಲ್ಲ!’,-’ಕಾಲ ಕೂಡಿಬರುತ್ತಿಲ್ಲ!’-ಇವೆಲ್ಲಾ ಅರ್ಥವಿಲ್ಲದ ಮಾತುಗಳು. ಅನಾನುಕೂಲ ಪರಿಸ್ಥಿತಿಗಳು ಸದಾ ಇರುತ್ತವೆ. ಅವುಗಳನ್ನು ನಾವು ಬದಲಾಯಿಸಲಾಗುವುದಿಲ್ಲ. ಪರಿಸ್ಥಿತಿಗಳಿಗೆ ಅನುಗುಣವಾಗಿ ನಾವು ಬದಲಾಗಬೇಕು. ಕಾಲಕ್ಕೆ ಅನುಗುಣವಾಗಿ ನಮ್ಮನ್ನ ನಾವು ಬದಲಾಯಿಸಿಕೊಳ್ಳುತ್ತಾ ’ಧ್ಯಾನ’ ಸಾಧನೆ, ’ಜ್ಞಾನ’ ಸಾಧನೆ ಮಾಡಬೇಕು.

 

ನಿಮಗೆ, ನನಗೆ ಇರುವ ಸಂಬಂಧ ಆತ್ಮಪರವಾದದ್ದು. ಯಾವಾಗ ನೀವು ಆತ್ಮಜ್ಞಾನದಲ್ಲಿ ಇರುವುದಿಲ್ಲವೊ ನಿಮಗೂ, ನನಗೂ ಸಂಬಂಧ ಕಡಿದುಹೋದಹಾಗೆ!

 

ನಮ್ಮ ಮನಸ್ಸುಗಳಲ್ಲಿ ಆಗುವ ಭಾವೋದ್ವೇಗಗಳು ಎಲ್ಲಾ ಸತ್ಯವೇ! ಆತ್ಮ ಸತ್ಯವೆ! ಈ ಎರಡರನ್ನೂ ಹೊಂದಾಣಿಕೆ ಮಾಡುತ್ತಾ ಜೀವಿಸಬೇಕು. ಭಾವೋದ್ವೇಗಗಳು ಇಲ್ಲದ ಜೀವನ ನಿಸ್ಸಾರವಾಗಿರುತ್ತದೆ. ಎರಡನ್ನು ಸಮನ್ವಯಗೊಳಿಸುವುದರಲ್ಲೇ ಇದೆ ನಿಮ್ಮ ಪ್ರಜ್ಞೆ.

 

ಯಾರು ಜ್ಞಾನ ಪ್ರಚಾರಕ್ಕಾಗಿ ಕಷ್ಟಪಡುತ್ತಾರೊ ಅವರು ಸತ್ತನಂತರ ಸತ್ಯಲೋಕಕ್ಕೆ ಸೇರುತ್ತಾರೆ. ಜೀವಿಸಿರುವಾಗ ಸತ್ಯಲೋಕ ನಿವಾಸಿಗಳ ಜೊತೆ ಸ್ನೇಹ ಉಂಟಾಗುತ್ತದೆ.

 

ಅನೂಷ: ಎಂದಿಗೂ ಮಾನಸಿಕ ಉದ್ವೇಗ ಬರದೇ ಶಾಂತವಾಗಿರುವ ವಿಧಾನ ಯಾವುದು?

 

ಪತ್ರೀಜಿ: ’ಮಾನಸಿಕ ಉದ್ವೇಗ’ ಯಾಕೆ ಬರುತ್ತದೆ? ’ಪರೀಕ್ಷೆಗಳು ಹೇಗೆ ಬರೆಯುತ್ತೇವೊ?’ ಎಂದು ಭಯಕ್ಕೆ ಮಾನಸಿಕ ಉದ್ವೇಗ ಆಗುತ್ತದೆ. ನಿನಗೇ ಅಲ್ಲ ಅರ್ಜುನನಿಗೆ ಕೂಡಾ ಮಾನಸಿಕ ಉದ್ವೇಗ ಆಗಿತ್ತು. ’ಆ ದ್ರೋಣರನ್ನು ಹೇಗೆ ಕೊಲ್ಲಲಿ?’, ’ಭೀಷ್ಮನನ್ನು ಹೇಗೆ ಸಾಯಿಸಲಿ?’ ಎಂದು ಆಗ ’ನೀನು ಯೋಗಿ ಆಗಪ್ಪಾ’ ಎಂದು ಕೃಷ್ಣ ಹೇಳಿದನು. ಮಹಾವೀರನಾದ ಅರ್ಜುನನಿಗೆ ಮಾನಸಿಕ ಉದ್ವೇಗ ಬಂದಿತ್ತು. ಕೃಷ್ಣನಿಗೆ ಮಾತ್ರ ಉದ್ವೇಗ ಎಂದಿಗೂ ಬರಲಿಲ್ಲ. ಮಾನಸಿಕ ಉದ್ವೇಗ ಇಲ್ಲದೇ ಯುದ್ಧ ಮಾಡಬೇಕಾದರೆ ಮುಂಜಾನೆ ಎದ್ದು ಧ್ಯಾನ ಮಾಡಬೇಕು. ಧ್ಯಾನ ವಿದ್ಯೆಯಲ್ಲಿ ನಿಷ್ಣಾತರಾದವರಿಗೆ ಮಾನಸಿಕ ಉದ್ವೇಗ ಇರುವುದಿಲ್ಲ. ಕೃಷ್ಣನು ಧ್ಯಾನ ವಿದ್ಯೆಯಲ್ಲಿ ನಿಷ್ಣಾತನು. ಆದ್ದರಿಂದ, ಕೃಷ್ಣನಿಗೆ ಮಾನಸಿಕ ಉದ್ವೇಗ ಇಲ್ಲ. ಅರ್ಜುನನಿಗೆ ಮಾನಸಿಕ ಉದ್ವೇಗ ಇದೆ.

 

ನಂದಬಾಲ: ಆಟಗಳನ್ನಾಡುತ್ತಾ, ಹಾಡುಗಳನ್ನು ಹಾಡುತ್ತಾ, ಹಾಯಾಗಿರುವ ನಮಗೆ ಧ್ಯಾನದ ಅವಶ್ಯಕತೆ ಏಕೆ?

 

ಪತ್ರೀಜಿ: ಆಟಗಳನ್ನು ಇನ್ನೂ ಚೆನ್ನಾಗಿ ಆಡಲು, ಹಾಡುಗಳನ್ನು ಇನ್ನೂ ಚೆನ್ನಾಗಿ ಹಾಡಲು ಧ್ಯಾನದ ಅವಶ್ಯಕತೆ ಇದೆ!

 

Y.S.Nಮೂರ್ತಿ: ಮಾನವರಿಗೆ ಮತಭೇದ ಏಕೆ ಬರುತ್ತದೆ?

 

ಪತ್ರೀಜಿ: ಮಾನವರಿಗೆ ಮತಭೇದ ಅವರ ಮೂರ್ಖತನದಿಂದ ಬರುತ್ತಿದೆ. ಮನುಷ್ಯರು ಒಂದು ಜನ್ಮದಲ್ಲಿ ಮಹಮ್ಮದೀಯನಾಗಿ, ಒಂದು ಸಲ ಕ್ರಿಸ್ಟಿಯನ್ ಆಗಿ ಒಂದು ಸಲ ಹೆಣ್ಣಾಗಿ, ಮತ್ತೊಂದು ಜನ್ಮದಲ್ಲಿ ಗಂಡಾಗಿ ಜನ್ಮಿಸುತ್ತಾ ಇರುತ್ತಾರೆ. ಆದರೆ, ಹುಟ್ಟಿದನಂತರ ಮರೆತು, ’ ನಾನು ಮುಸ್ಲಿಮ್ ’, ’ನಾನು ಕ್ರಿಸ್ಟಿಯನ್’, ಎಂದುಕೊಳ್ಳುತ್ತಾ ತಮ್ಮ ಜನ್ಮ ಪರಂಪರೆಯನ್ನು ಮರೆಯುತ್ತಾನೆ. ಜನ್ಮ ಪರಂಪರೆಯನ್ನು ಮರೆತು ಹೋಗುವವರು ಮತಭೇದಗಳಲ್ಲಿ ಸಿಕ್ಕಿಕೊಳ್ಳುತ್ತಾನೆ. ಜನ್ಮ ಪರಂಪರೆ ತಿಳಿದುಕೊಳ್ಳಬೇಕಾದರೆ ತಪ್ಪದೇ ಧ್ಯಾನ ಮಾಡಬೇಕು.

 

ನಾಗರಾಜು: ನಮ್ಮ ಹಿಂದೂ ಸಾಂಪ್ರದಾಯದ ಪ್ರಕಾರ ಜ್ಞಾನವನ್ನು ಉಚಿತವಾಗಿ ಹಂಚಬೇಕು. ಆದರೆ, ಈಗ ಕೆಲವರು ಸ್ವಾಮಿಗಳು ಕಾಲು ಹಿಡಿದುಕೊಂಡರೆ ಹತ್ತು ಸಾವಿರ, ಮನೆಗೆ ಬಂದರೆ ಇಪತ್ತು ಸಾವಿರ, ಎನ್ನುತ್ತಾ ಭಕ್ತರನ್ನು ದೋಚಿಕೊಳ್ಳುತ್ತಿದ್ದಾರೆ.

 

ಪತ್ರೀಜಿ: ಅವರು ಬೆಲೆ ಇಡುವುದರಲ್ಲಿ ತಪ್ಪಿಲ್ಲ. ನೀನು ಅಲ್ಲಿಗೆ ಹೋಗುವುದರಲ್ಲಿ ತಪ್ಪಿದೆ. ಅವರು ನಿನ್ನ ದೋಚಿಕೊಳ್ಳುತ್ತಿಲ್ಲ. ನೀನೆ ದೋಚಿಕೊಳ್ಳಲ್ಪಡುತ್ತಿರುವೆ. ’ ಬುದ್ಧಿ ’ ಇದ್ದರೆ ಅಂತಹ ಸ್ವಾಮೀಜಿಗಳ ಹತ್ತಿರ ಹೋಗಬೇಡ. ಧ್ಯಾನಿಗಳ ಹತ್ತಿರ ಹೋಗು. ಸ್ವಾಮೀಜಿಗಳನ್ನು ಬೈಯಬೇಡ, ನಿನ್ನನ್ನು ನೀನು ಬೈಯುವುದನ್ನು ಕಲಿತುಕೊ.

 

ಹರೀಷ್: ’ ಧ್ಯಾನ ಮಾಡಲು ಪ್ರಶಾಂತ ವಾತಾವರಣಬೇಕು ’ ಎನ್ನುತ್ತಾರೆ. ಎಲ್ಲರಿಗೂ ಅಂತಹ ವಾತಾವರಣ ಸಿಗುವುದು ಕಷ್ಟ. ಮತ್ತೆ ಏನುಮಾಡಬೇಕು ?

 

ಪತ್ರೀಜಿ: ಧ್ಯಾನ ಮಾಡಲು ಪ್ರಶಾಂತ ವಾತಾವರಣ ಬೇಕು ಎನ್ನುವುದು ಸರಿ. ನೀನು ಸ್ಕೂಟರ್ ಕಲಿತುಕೊಳ್ಳುವಾಗ ಊರಾಚೆಗೆ ಹೋಗಿ ಕಲಿತುಕೊಳ್ಳುತ್ತಿಯಲ್ಲವೇ. ಹಾಗೆಯೇ, ಎಲ್ಲರೂ ನಿದ್ರಿಸುವಾಗ ನೀನು ಎದ್ದು ಕುಳಿತುಕೊಂಡು ಧ್ಯಾನ ಮಾಡಬೇಕು.

 

ಶ್ವೇತ: ಒಂದೊಂದು ಸಲ ಧ್ಯಾನಮಾಡಲು ಆಸಕ್ತಿ ಇರುವುದಿಲ್ಲ. ಆಗ ಏನು ಮಾಡಬೇಕು ?

 

ಪತ್ರೀಜಿ: ಆಸಕ್ತಿ ಇಲ್ಲದಿರುವಾಗ ಧ್ಯಾನ ಮಾಡಬಾರದು. ಹಸಿವೆ ಆದಾಗಲೇ ಊಟ ತಿನ್ನಬೇಕು. ಜಿಲೇಬಿ ಚೆನ್ನಾಗಿರುತ್ತದೆ. ಹಸಿವೆ ಇಲ್ಲದಿರುವಾಗ ತಿನ್ನಬಾರದು. ಹಾಗೆ ಆಸಕ್ತಿ ಇಲ್ಲದಿರುವಾಗ ಧ್ಯಾನವೇ ಅಲ್ಲ, ಯಾವ ಕೆಲಸವೂ ಮಾಡಬಾರದು. ಆಸಕ್ತಿ ಇದ್ದು ’ ಎಲ್ಲರೂ ಏನಂತಾರೊ ’ ಎಂದು ಧ್ಯಾನ ಮಾಡದೇ ಇರಬಾರದು. ನಿನಗೆ ಆಸಕ್ತಿ ಇದ್ದರೆ ಸಾವಿರಜನ ನಿನ್ನ ಹೆದರಿಸುತ್ತಿದ್ದರೂ ನೀನು ಮಾಡಬೇಕು. ಪ್ರಹ್ಲಾದನಿಗೆ ಆಸಕ್ತಿ ಇದೆ. ಯಾರಿಗೂ ಹೆದರಲಿಲ್ಲ. ಆಸಕ್ತಿ ಇದ್ದರೆ ತಂದೆಗಾದರೂ, ತಾಯಿಗಾದರೂ ಭಯಪಡಬೇಕಾದ ಅವಶ್ಯಕತೆ ಇಲ್ಲ.

 

ಸುಬ್ರಮಣ್ಯ: ಧ್ಯಾನದಿಂದ ಆತ್ಮವಿಶ್ವಾಸ ಹೆಚ್ಚುತ್ತದಾ? ನಿಮ್ಮ ಜೀವನದ ಒಂದು ಅನುಭವವನ್ನು ಹೇಳಿ.

 

ಪತ್ರೀಜಿ: ನನ್ನ ಎದುರಿಗೆ ಕುಳಿತಿರುವ ಈ ಸಾವಿರಾರು ಜನ ನನ್ನ ಆತ್ಮವಿಶ್ವಾಸದಿಂದಲೇ ಇಲ್ಲಿಗೆ ಬಂದಿದ್ದಾರೆ.

 

ಹಾರಿಕ: ಪರೀಕ್ಷೆಗಳನ್ನು ಎದುರಿಸಲು ಪ್ರತಿದಿನ ಮಾಡುವ ಧ್ಯಾನ ಹೇಗೆ ಉಪಯೋಗವಾಗುತ್ತದೆ ?

 

ಪತ್ರೀಜಿ: ಪರೀಕ್ಷೆಗಳನ್ನು ಬರೆಯುವಾಗ ನಿನಗೆ ಏನಾಗುತ್ತದೆ ?

 

ಹಾರಿಕ: ಮಾನಸಿಕ ಉದ್ವೇಗವಾಗುತ್ತದೆ. ಓದಿದ್ದು ನೆನಪಿಗೆ ಬರುವುದಿಲ್ಲ.

 

ಪತ್ರೀಜಿ: ಆ ಮಾನಸಿಕ ಉದ್ವೇಗ ತೆಗೆದರೆ ಭಯ ಹೋಗುತ್ತದೆ; ಧ್ಯಾನದಲ್ಲಿ ಕುಳಿತಾಗ ಮಾನಸಿಕ ಉದ್ವೇಗ ಇಲ್ಲದ ಸ್ಥಿತಿ ಅನುಭವಕ್ಕೆ ಬರುತ್ತದೆ. ಅನೇಕ ಬಾರಿ ಅಭ್ಯಾಸ ಮಾಡುವುದರಿಂದ ವೇದಿಕೆ ಮೇಲೆ ಚೆನ್ನಾಗಿ ನಟಿಸಬಲ್ಲೆವು. ಪ್ರತಿದಿನ ಧ್ಯಾನದಲ್ಲಿ ಮಾನಸಿಕ ಉದ್ವೇಗ ಇಲ್ಲದ ಸ್ಥಿತಿಯನ್ನು ಪ್ರಯತ್ನಪೂರ್ವಕವಾಗಿ ಕಲಿತುಕೊಂಡರೆ ಪರೀಕ್ಷೆಗಳು ಭಯವಿಲ್ಲದೆ ಎದುರಿಸಬಹುದು.

 

ಅಮಲ್ರೀಚರ್ಡ್: ಧ್ಯಾನದಲ್ಲಿ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುವುದು ಹೇಗೆ ?

 

ಪತ್ರೀಜಿ: ವಾಹನ ಚಾಲಿಸುತ್ತಿರುವಾಗ ಟ್ರಾಫಿಕ್ (ವಾಹನಗಳ ಓಡಾಟ) ತಪ್ಪಿಸಿಕೊಳ್ಳುತ್ತಾ ಹೇಗೆ ಹೋಗುತ್ತೀಯೊ, ಅದೇ ವಿಧವಾಗಿ ಪ್ರಾವೀಣ್ಯತೆಯನ್ನು ಸಂಪಾದಿಸುವುದರಿಂದ ಎಲ್ಲಾ ಬಗೆಯ ಪ್ರತಿಕೂಲ ಪರಿಸ್ಥಿತಿಗಳನ್ನು ಮೀರಬಹುದು." Practice of Meditation makes a man perfect"

 

ರಾಘವ: ಒಂದು ಪ್ರತ್ಯೇಕ ಆಸನ, ಅಂದರೆ, ಕುಳಿತುಕೊಳ್ಳುವ ವಿಧಾನ ಧ್ಯಾನಕ್ಕೆ ಉಪಯೊಗವಾಗುತ್ತದೆಯಾ ?

 

ಪತ್ರೀಜಿ: ಬೇಕಾಗಿಲ್ಲ. ನೀವು ಸುಃಖವಾಗಿ, ಕಷ್ಟವಿಲ್ಲದೇ ಯಾವ ಭಂಗಿಯಲ್ಲಾದರೂ ಕುಳಿತುಕೊಳ್ಳಬಹುದು.

 

ಮೌನಿಕ: ನಾನು ವೈದ್ಯನಾಗಲಾ ? ಇಂಜನೀರ್ ಆಗಲಾ ?

 

ಪತ್ರೀಜಿ: ನಾನು ಇಂಜನೀರ್ ಆಗು ಎಂದು ಹೇಳುತ್ತೇನೆ. ಏಕೆಂದರೆ, ನನಗೆ ವೈದ್ಯರುಗಳ ಮೇಲೆ ನಂಬಿಕೆ ಇಲ್ಲ. ನಿನಗೆ ವೈದ್ಯನಾಗಬೇಕೆಂದು ಇದ್ದರೆ, ಧ್ಯಾನದಿಂದ ದಿವ್ಯಚಕ್ಷುವು ತೆರೆಯುವ ಹಾಗೆ ಮಾಡಿಕೊ. ಅದರಿಂದ ವ್ಯಾಧಿಗಳು ಹೇಗೆ ಬರುತ್ತವೊ ಹೇಗೆ ನಿವಾರಿಸಿಕೊಳ್ಳಬಹುದೋ ತಿಳಿಯುತ್ತದೆ.

 

ಶ್ರೀನಾಥ್: ನಾವು ತಿನ್ನುವ ಆಹಾರ ನಮ್ಮ ಆಲೋಚನೆಗಳನ್ನು ಪ್ರಭಾವಿತವಾಗಿಸುತ್ತದಾ ?

 

ಪತ್ರೀಜಿ: ನಾವು ತಿನ್ನುವ ಆಹಾರ ನಮ್ಮ ಆರೋಗ್ಯವನ್ನು, ನಮ್ಮ ಆಲೋಚನೆಗಳನ್ನು ಖಂಡಿತಾ ಪ್ರಭಾವಿತಗೊಳಿಸುತ್ತದೆ. ಅದಕ್ಕೆ ಮಾಂಸಾಹಾರ ತಿನ್ನುವುದು ಬಿಡಬೇಕು. ಮಾಂಸಾಹಾರ ನಮ್ಮಲ್ಲಿ ಹಿಂಸಾ ಪ್ರವೃತ್ತಿಯನ್ನು ಅಧಿಕವಾಗಿಸುತ್ತದೆ. ಅದಕ್ಕೆ ಹಣ್ಣು ಮುಂತಾದ ಸಾತ್ವಿಕ ಆಹಾರ ಸೇವಿಸಬೇಕು.

 

ಗೋಪಿ: ದೇವನೊಬ್ಬನೇ ಆದರೆ ವಿವಿಧ ಮತಗಳೇಕೆ? ಒಂದೇ ಯೂನಿವರ್ಸಲ್(ಸಾರ್ವಜನಿಕ) ಮತ ಇರಬಾರದಾ ?

 

ಪತ್ರೀಜಿ: ತುಂಬಾ ಒಳ್ಳೆಯ ಪ್ರಶ್ನೆ. ಇದೆ ಪ್ರಶ್ನೆ ನನಗೆ ಚಿಕ್ಕಂದಿನಲ್ಲಿ ಬಂತು. ಅದಕ್ಕೆ ನ್ಯೂ ಏಜ್ ಮೂವ್ಮೆಂಟ್ ಪ್ರಾರಂಭಿಸಿದ್ದೇನೆ. ಅದೇ ಸಾರ್ವಜನಿಕ ಮತ.

 

ಕೌಷಿಕ್: ವಿಜ್ಞಾನಿಗೂ, ತತ್ವಜ್ಞಾನಿಗೂ ಇರುವ ವ್ಯತ್ಯಾಸವೇನು ?

 

ಪತ್ರೀಜಿ: ಧ್ಯಾನ ಸಮುಪಾರ್ಜನೆ ಅಂದರೆ, ಪ್ರೀತಿ ಇರುವವನು ತತ್ವಜ್ಞಾನಿ, ತತ್ವಜ್ಞಾನಿ ಆದರೆ ವಿನಹ ವಿಜ್ಞಾನಿ ಆಗಲಾರ.

 

ಹಮೀದ್: ವಿವಿಧ ಮತಸ್ಥರು ಧ್ಯಾನ ಮಾಡಿದರೇ ಒಂದೇ ತರಹ ಅನುಭೂತಿ ಹೊಂದುತ್ತದಾ ?

 

ಪತ್ರೀಜಿ: ವಿವಿಧ ಮತಸ್ಥರು ರಸಾಯನಶಾಸ್ತ್ರ ಪ್ರಯೋಗಗಳು ಮಾಡಿದರೆ ಒಂದೇ ಫಲಿತಾಂಶ ಇರುತ್ತದೊ ಇಲ್ಲವೊ ? ಹಾಗೆಯೆ, ಧ್ಯಾನದಲ್ಲಿ ಕೂಡಾ ಎಲ್ಲರ ಮತಸ್ಥರಿಗೂ ಬರುವ ಅನುಭವ ಒಂದೆ.

 

ಸುಬ್ರಮಣ್ಯ: ನಾನು ಓದಲು ಒಂದು ಒಳ್ಳೆಯ ಪುಸ್ತಕದ ಹೆಸರು ತಿಳಿಯಪಡಿಸಿ.

 

ಪತ್ರೀಜಿ: ರಿಚರ್ಡ್ ಬಾಕ್ ಬರೆದ ’ ಜೊನಾಥನ್ ಲಿವಿಂಗ್‌ಸ್ಟನ್‌ಸೀಗಲ್ ’. ಈ ಪುಸ್ತಕ ಅನೇಕ ಜನರನ್ನು ಪ್ರಭಾವಿತಗೊಳಿಸಿದೆ. ಒಂದು ಸೀಗಲ್ ಪಕ್ಷಿ ಕುರಿತ ಕಥೆ ಇದರಲ್ಲಿದೆ. ವಿದ್ಯಾರ್ಥಿಗಳೆಲ್ಲರೂ ಈ ಪುಸ್ತಕವನ್ನು ತಪ್ಪದೇ ಓದಬೇಕು.

 

ಹಮೀದ್: ಧ್ಯಾನ ಎನ್ನುವುದು ಇಂಡಿಯಾ - ಪಾಕಿಸ್ತಾನ್ ಸಮಸ್ಯೆಗಳನ್ನು ಪರಿಹರಿಸುತ್ತದೆಯಾ ?

 

ಪತ್ರೀಜಿ: ಧ್ಯಾನಕ್ಕೂ, ಇಂಡಿಯಾ ಪಾಕಿಸ್ತಾನ್ ಸಮಸ್ಯೆಗೂ ಸಂಬಂಧವಿಲ್ಲ. ಕೃಷ್ಣನಿಗೆ ಕುರುಕ್ಷೇತ್ರ ಸಂಗ್ರಾಮವನ್ನು ನಿಲ್ಲಿಸಲಾಗಲಿಲ್ಲ. ಗಾಂಧೀಜಿಗೆ ಇಂಡಿಯಾ ಪಾಕಿಸ್ತಾನ್ ವಿಭಜನೆಯನ್ನು ನಿಲ್ಲಿಸಲಾಗಲಿಲ್ಲ. ಧ್ಯಾನದಿಂದ ವ್ಯಕ್ತಿಗತ ಬದಲಾವಣೆ ಬರುತ್ತದೆ. ನನ್ನ ಧ್ಯಾನ ನಿನ್ನ ಸಮಸ್ಯೆಗಳನ್ನು ತೀರಿಸುವುದಿಲ್ಲ. ಇಂಡಿಯಾ ಪ್ರಜೆಗಳು, ಪಾಕಿಸ್ತಾನ್ ಪ್ರಜೆಗಳು ಎಲ್ಲರೂ ಸೇರಿ ಧ್ಯಾನ ಮಾಡಿದರೆ ಸಮಸ್ಯೆಗಳಿರುವುದಿಲ್ಲ. ಈಗ ಹೇಳು ಇಂಡಿಯಾ, ಪಾಕಿಸ್ತಾನ್ ಯುದ್ಧ ನಿಲ್ಲಿಸಬೇಕಾದರೆ ಏನು ಮಾಡಬೇಕು?

 

ಹಮಿದ್: ನಾನು ಧ್ಯಾನ ಮಾಡಬೇಕು. ಎಲ್ಲರಿಂದಲೂ ಧ್ಯಾನ ಮಾಡಿಸಬೇಕು.

 

ಮೌನಿಕ: ನೀವು ಅಬ್ದುಲ್ ಕಲಾಮ್ ಅವರ ’ ವಿಂಗ್ಸ್ ಆಫ್ ಫೈರ್ ’ ಪುಸ್ತಕ ಓದಿದ್ದೀರಾ ? ಅವರು ಸಹ ಒಬ್ಬ ’ಯೋಗಿ’ ಎಂದು ಅಂದುಕೊಳ್ಳುತ್ತಿದ್ದೀರಾ ?

 

ಪತ್ರೀಜಿ: ಆ ಪುಸ್ತಕ ಓದಿದ್ದೇನೆ. ಅವರು ’ ಯೋಗಿ ’ ಅಲ್ಲ ಒಬ್ಬ ’ ಯೋಗೀಶ್ವರರು ’.

 

ಹೇಮಂತ್ಕುಮಾರ್: ನನ್ನ ಅಂತರ್ಗತ ಶಕ್ತಿಯನ್ನು ಹೇಗೆ ತಿಳಿದುಕೊಳ್ಳಬೇಕು ?

 

ಪತ್ರೀಜಿ: ಅಂತರ್ಗತ ಶಕ್ತಿಯನ್ನು ಕುರಿತು ತಿಳಿದುಕೊಳ್ಳಬೇಕು ಎಂದುಕೊಳ್ಳುವುದು ತುಂಬಾ ಒಳ್ಳೆಯ ವಿಷಯ. ನಿನ್ನ ಅಂತರ್ಗತ ಶಕ್ತಿಯನ್ನು ಕುರಿತು ತಿಳಿದುಕೊಳ್ಳಬೇಕಾದರೆ ಮುಂಚಿತವಾಗಿ ಹೊರಗಿನ ವಿಷಯಗಳನ್ನು ಕುರಿತು ಆಲೋಚಿಸುವುದು, ಕೇಳಿಸಿಕೊಳ್ಳುವುದು, ನೋಡುವುದು ಬಿಡಬೇಕು. ’ಹೊರಗೆ’ ತಿರುಗುವುದನ್ನು ಬಿಡಬೇಕು. ಈ ’ ಹೊರಗಿನ ’ ವಿಷಯ ವ್ಯಾಮೋಹವನ್ನು ಬಿಟ್ಟು, ’ ಶ್ವಾಸದ ಮೇಲೆ ಗಮನ ’ ಇಟ್ಟು ಅಂತರ್ಮುಖರಾದಾಗ ನಿನ್ನಲ್ಲಿರುವ ಅಖಂಡವಾದ, ಅಪಾರವಾದ ಅಂತರ್ ಶಕ್ತಿಯನ್ನು ತಿಳಿದುಕೊಳ್ಳಬಲ್ಲೆ. ’ ಶ್ವಾಸದ ಮೇಲೆ ಗಮನ ’ದಿಂದ ಅಂತರ್ ಶಕ್ತಿಯನ್ನು ತಿಳಿದುಕೊಳ್ಳಬಲ್ಲೆ.

 

ಸೀತೆ: ’ ಧ್ಯಾನ ’ ಅಂದರೆ ಏನು? ನಿಮಗೆ ಧ್ಯಾನ ಮಾಡಬೇಕೆಂಬ ಆಲೋಚನೆ ಹೇಗೆ ಬಂದಿತು ?

 

ಪತ್ರೀಜಿ: ’ ಧ್ಯಾನ ನಿರ್ವಿಷಯ ಮನಃ ’ ಮನಸ್ಸಿನಲ್ಲಿ ಯಾವ ವಿಷಯವೂ ಯಾವ ವಸ್ತುವೂ, ಯಾವ ವ್ಯಕ್ತಿಯೂ ಇಲ್ಲದೇ ಮಾಡುವುದೇ ಧ್ಯಾನ.

 

ಬಾಲ್ಯದಿಂದಲೂ ನನಗೆ ’ ಏನೋ ’ ಮಾಡಬೇಕೆಂದು ಅನಿಸುತ್ತಿತ್ತು. ಅದೇನೊ ತಿಳಿಯುತ್ತಿರಲಿಲ್ಲ. ತಂದೆಗೂ ಗೊತ್ತಿಲ್ಲ. ತಾಯಿಗೂ ಗೊತ್ತಿಲ್ಲ. ನಮ್ಮ ದೊಡ್ಡಣ್ಣ ’ ಅಮೆರಿಕಾ ಹೋಗು ’, ’ I.A.S. ಓದು ’ ಎನ್ನುತ್ತಿದ್ದರು. ’ ಇದು ನನಗಾಗಿ ಅಲ್ಲ ’ ಅನಿಸುತ್ತಿತ್ತು. ಅಮ್ಮ ಸಂಗೀತ ಕಲಿತುಕೊ ಎಂದರು-ಕಲಿತುಕೊಂಡೆ. ಆದರೆ, ಅದು ಸಾಲದು ಎನಿಸಿತು.

 

ಮದುವೆ ಮಾಡಿಕೊಂಡೆ. ಹೆಂಡತಿ ಒಮ್ಮೆ ಚೆನ್ನಾಗಿ ಕಾಣುತ್ತಿದ್ದಳು. ಇನ್ನೊಮ್ಮೆ ಚೆನ್ನಾಗಿ ಕಾಣುತ್ತಿರಲಿಲ್ಲ. ’ಇನ್ನೂ ಏನೋ ಇದೆ’ ಅನಿಸಿತು. ಆ ಏನೋ ಒಂದು ಹುಡುಕುತ್ತಿರುವಾಗ, ಕಚೇರಿಯಲ್ಲಿರುವ ಮಿತ್ರ ರಾಮಚಂದ್ರಾರೆಡ್ಡಿ ಅವರಿಂದ ಈ ಮಾರ್ಗಕ್ಕೆ ಬಂದೆ.

 

ನಾನು ಧ್ಯಾನ ಕಲಿತಿದ್ದು ’ ಗುರುವಿ ’ನಿಂದಲ್ಲ, ’ ಮಿತ್ರ ’ನಿಂದ ಬಂದೆ. ಅದಕ್ಕೆ ನಾನು ಒಬ್ಬ ’ಮೈತ್ರೇಯ ಬುದ್ಧ’ನಾದೆ. ಒಂದು ಮಿತ್ರತ್ವ ಇರುವ ಬುದ್ಧನಾದೆ. ನಾನು ಒಬ್ಬ ’ ಗುರುವಿ ’ನಿಂದ ಧ್ಯಾನಕ್ಕೆ ಬರಲಿಲ್ಲ. ಅದಕ್ಕೆ ನಾನು ಯಾರಿಗೂ ’ ಗುರುವು ’ ಅಲ್ಲ. ಎಲ್ಲರಿಗೂ ನಾನು ಒಬ್ಬ ಕಲ್ಯಾಣಮಿತ್ರ. ಎಲ್ಲರಿಗೂ ನಾನು ಒಬ್ಬ ಧ್ಯಾನ ಮಿತ್ರ.

 

1977ನೇ ವರ್ಷದಲ್ಲಿ ಮಿತ್ರನಾದ ರಾಮಚೆನ್ನಾರೆಡ್ಡಿ ಅವರಿಗೆ ವಿಪರೀತವಾಗಿ ಬೆನ್ನು ನೋವು ಕಾಣಿಸಿಕೊಂಡಿತ್ತು. ಯಾವ ವೈದ್ಯರ ಹತ್ತಿರ ಹೋದರೂ ಕಡಿಮೆಯಾಗಲಿಲ್ಲ. ತಮಿಳುನಾಡಿನಲ್ಲಿರುವ ವೆಲ್ಲೂರು ಆಸ್ಪತ್ರೆಯಲ್ಲಿ ಎರಡು ತಿಂಗಳು ಇದ್ದರೂ ಕಡಿಮೆಯಾಗಲಿಲ್ಲ ಮರಳಿ ಬರುತ್ತಿರುವಾಗ ಬಸ್ಸಿನಲ್ಲಿ ಒಬ್ಬಾತ ’ಧ್ಯಾನ ಮಾಡು, ನೋವು ಹೋಗುತ್ತದೆ ’ ಎಂದು ಹೇಳಿದನು. ಆತ ಯಾರೋ ಗೊತ್ತಿಲ್ಲ; ರಾಮಚೆನ್ನಾರೆಡ್ಡಿ ಅವರು ಧ್ಯಾನ ಮಾಡಲು ಪ್ರಾರಂಭಿಸಿದರು. ಅವರಿಗೆ ಧ್ಯಾನ ಹೇಗೆ ಮಾಡುವುದೊ ಗೊತ್ತಿಲ್ಲ. ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳುತ್ತಿದ್ದ. ನಿದ್ರೆ ಬರದೇ ಇದ್ದರೂ ಧ್ಯಾನ ಮಾಡುತ್ತಿದ್ದ. 30 ದಿನಗಳಲ್ಲೇ ಬೆನ್ನು ನೋವು ಪೂರ್ಣ ಗುಣವಾಯಿತು.

 

ಕೆಲವು ದಿನಗಳನಂತರ ಅನಂತಪುರಂ ಜಿಲ್ಲೆ ರಾಯದುರ್ಗದಲ್ಲಿರುವ ಒಬ್ಬ ಫರ್ಟಿಲೈಜರ್ ಡೀಲರ್, ರಾಮಚೆನ್ನಾರೆಡ್ಡಿ ಅವರ ಮನೆಯಲ್ಲಿ ಮಲಗಿಕೊಂಡರು. ರಾಮಚಂದ್ರಾರೆಡ್ಡಿ ಅವರಿಗೆ ನಿದ್ರೆ ಬರದಕಾರಣ ಧ್ಯಾನ ಮಾಡುತ್ತಿದ್ದರು. ಮರುದಿನ ಅವರನ್ನು ಕೇಳಿದರು ’ ರಾತ್ರಿ ಮಂಚದ ಮೇಲೆ ಕುಳಿತು ಏನುಮಾಡುತ್ತಿದ್ದೆ ? ಎಂದು, ’ ಧ್ಯಾನಮಾಡುತ್ತಿದ್ದೆ ’ ಎಂದನು. ಹೇಗೆ ಮಾಡುತ್ತಿರುವೆ ? ಎಂದು ಕೇಳಿದನು. ’ ಏನಿದೆ? ಕಣ್ಣುಗಳನ್ನು ಮುಚ್ಚಿಕೊಂಡು ಸುಮ್ಮನೆ ಕುಳಿತುಕೊಳ್ಳುತ್ತಿದ್ದೇನೆ ’ ಎಂದರು. ’ಹಾಗಲ್ಲ, ’ ಶ್ವಾಸ ಮೇಲೆ ಗಮನವಿಡು ’ ಎಂದನು, ಹಾಗೆ ಹೇಳಿದವರ ಹೆಸರು ಬಂಡಿ ರಾಮದಾಸಪ್ಪ. ಆ ಬಂಡಿ ರಾಮದಾಸಪ್ಪನಿಗೆ ಯಾರು ಹೇಳಿದರೆಂದರೆ, ಗೌತಮ ಬುದ್ಧನೇ ಅವರಲ್ಲಿ ಪ್ರವೇಶಿಸಿ, ರಾಮಚೆನ್ನಾರೆಡ್ಡಿ ಅವರಿಗೆ ಹೇಳಿಸಿ ಅವರಿಂದ ನನಗೆ ಹೇಳಿಸಿದರು.

 

ವಾಣಿ: ರಾಜಕೀಯವೆಂದರೆ ಜನರಿಗೆ ಸ್ವಲ್ಪವೂ ಒಳ್ಳೆಯ ಅಭಿಪ್ರಾಯ ಇಲ್ಲದ ಈ ದಿನಗಳಲ್ಲಿ ಧ್ಯಾನಿಗಳೇ ಪರಿಪಾಲಕರಾಗಬೇಕು ಎನ್ನುವ ನಿನಾದದಿಂದ ಒಂದು ರಾಜಕೀಯ ಪಕ್ಷವನ್ನು ಪ್ರಾರಂಭಿಸಿ, ಚುನಾವಣೆ ಸಂಭ್ರಮಗಳಲ್ಲಿ ಧ್ಯಾನಿಗಳನ್ನು ವಿಸ್ತಾರವಾಗಿ ಭಾಗವಹಿಸುವ ಹಾಗೆ ಮಾಡುವುದರಲ್ಲಿ ನಿಮ್ಮ ಉದ್ದೇಶ ಏನು ?

 

ಪತ್ರೀಜಿ: ಜೀವನದಲ್ಲಿ ಎಲ್ಲಾ ಬಗೆಯ ಆಟಗಳನ್ನು ಆಡಬೇಕು. ಎಲ್ಲಾ ವಿಧವಾದ ಹಾಡುಗಳನ್ನು ಹಾಡಬೇಕು. ಎಲ್ಲಾ ರೀತಿಯ ರುಚಿಗಳನ್ನು ಅನುಭವಿಸಬೇಕು. ಎಲ್ಲಾ ಬಗೆಯ ರಸಗಳನ್ನು ಹೀರಬೇಕು."

 

ಅನೇಕಾನೇಕ ಸಂಘಪರವಾದ, ಕ್ರಿಯಾತ್ಮಕ ಕಾರ್ಯಕಲಾಪಗಳಲ್ಲಿ ರಾಜಕೀಯ ಎನ್ನುವುದು ಕೂಡಾ ಒಂದು ಪ್ರಮುಖ ಕಾರ್ಯಕಲಾಪ. ಬಾಧ್ಯತೆ ಇರುವ ಪ್ರತಿಯೊಬ್ಬ ಪೌರನಿಗೂ ರಾಜಕೀಯ ಸ್ಪೃಹೆ, ರಾಜಕೀಯ ಅವಗಾಹನೆ ಎನ್ನುವುದು ತುಂಬಾ ಮುಖ್ಯ. ಸಾಮಾನ್ಯ ಪೌರರಿಗೆ ರಾಜಕೀಯ ಚೈತನ್ಯ ತುಂಬಾ ಅವಶ್ಯಕತೆ ಇರುವಾಗ ಆಧ್ಯಾತ್ಮಿಕ ಪೌರರಿಗೆ ಅದು ಇನ್ನೂ ಹೆಚ್ಚಿನ ಅವಶ್ಯಕತೆ ಇದೆ.

 

ಆಧ್ಯಾತ್ಮಿಕ ಪೌರರು ತಮ್ಮ ಸ್ವಂತ ವ್ಯಕ್ತಿಗತ ಸಂಕ್ಷೇಮವನ್ನು ಪೂರ್ತಿಯಾಗಿ ಸಾಧಿಸಿರುವರು. ತಮ್ಮ ಸ್ವಂತ ವ್ಯಕ್ತಿಗತ ಜೀವನಗಳನ್ನು ಶುಚೀಕರಿಸಿದ ಮುತ್ತುಗಳ ಹಾಗೆ ಮಾಡಿಕೊಂಡಿರುವರು. ಅನಂತರದ ಕಾರ್ಯಕ್ರಮವೇ ಸಂಘವನ್ನು ತೊಳೆದ ಮುತ್ತಿನಹಾಗೆ ಮಾಡುವುದು. ಈ ಹಿನ್ನೆಲೆಯಲ್ಲಿ ಸಾಂಘಿಕ ಕಾರ್ಯಕಲಾಪಗಳಲ್ಲಿ ಪ್ರಧಾನ ಭೂಮಿಕೆಯನ್ನು ನಿರ್ವಹಿಸುತ್ತಿರುವ ರಾಜಕೀಯಗಳನ್ನು ಪ್ರಕ್ಷಾಳನೆ ಮಾಡುವುದು ಎನ್ನುವುದು ಆಧ್ಯಾತ್ಮಿಕ ಪೌರರ ಪ್ರಥಮ ಕರ್ತವ್ಯ.

 

ಪಿರಮಿಡ್ ಧ್ಯಾನಿಗಳಿಗೂ, ಪಿರಮಿಡ್ ಆತ್ಮಜ್ಞಾನ ಪರಾಯಣರಿಗೂ ಒಂದು ಆಧ್ಯಾತ್ಮಿಕ ರಾಜಕೀಯ ಪಕ್ಷವನ್ನು ಸ್ಥಾಪಿಸುವುದೆನ್ನುವುದು, ಆ ಪಕ್ಷದ ಆಶಯಗಳ ಪ್ರಚಾರ ಎನ್ನುವುದು, ಚುನಾವಣೆಯಲ್ಲಿ ಭಾಗವಹಿಸುವುದೆನ್ನುವುದು-ಇದೆಲ್ಲಾ ಒಂದು ನೂತನ ಆಟ; ಒಂದು ವಿನೂತನ ಹಾಡು, ಹೊಸ ನಿನಾದ. ಹೊಸ ರುಚಿ. ಹೊಸ ವಿದ್ಯಾಭ್ಯಾಸ. ಹೊಸ ವಿಜ್ಞಾನ. ಹೊಸ ಸಾಂಘಿಕ ಕಾರ್ಯಕಲಾಪ. ಹೊಸ ಕರ್ತವ್ಯ. ಹೊಸ ವಿಕಾಸ.

 

ಪ್ರಸನ್ನ: ಸೋಲು, ಗೆಲುವುಗಳ ಮೇಲೆ, ಈಗಿನ ಸಮಾಜ ವ್ಯಕ್ತಿಗಳಿಗೆ ಕೊಡುವ ಬೆಲೆ ಆಧಾರಪಟ್ಟು ಇರುತ್ತದಲ್ಲವೇ. ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಹೆಸರಿನಲ್ಲಿ ನೀವು ಮಾಡಿರುವ ಸಾಹಸದ ಹಿಂದಿರುವ ಸ್ಫೂರ್ತಿ ತುಂಬಾ ಉನ್ನತವಾದದ್ದೇ ಆದರೂ, ಅದರಿಂದ ಎದುರಿಸಬೇಕಾದ ವಿಮರ್ಶೆಗಳು, ಅಪ್ರತಿಷ್ಠೆಗಳನ್ನು ಕುರಿತು ನಿಮ್ಮ ವ್ಯಾಖ್ಯಾನಾ ?

 

ಪತ್ರೀಜಿ: ಭಾರತದೇಶ ಸ್ವತಂತ್ರ್ಯ ದೇಶ. ಪ್ರತಿಯೊಬ್ಬರಿಗೂ ವಿಮರ್ಶೆಗಳು, ಚರ್ಚೆಗಳು ಎನ್ನುವುದು ಅತ್ಯಂತ ಸಹಜ. ಅಜ್ಞಾನಿಗಳೂ, ಅಲ್ಪಜ್ಞಾನಿಗಳೂ 99% ಇರುವ ಈ ವರ್ತಮಾನ ಸಮಾಜದಲ್ಲಿ, ಅಜ್ಞಾನದ, ಅಲ್ಪಜ್ಞಾನದ ವಿಮರ್ಶೆಗಳೇ, ವ್ಯಾಖ್ಯಾನಗಳೇ ಬಹಳವಾಗಿರುವುದು ಕೂಡಾ ಅತ್ಯಂತ ಸಹಜ. ಅಜ್ಞಾನಿಗಳ, ಅಲ್ಪಜ್ಞಾನಿಗಳ ಮೂರ್ಖ ವಿಮರ್ಶೆಗಳನ್ನು, ವಿವೇಕ ರಹಿತ ವ್ಯಾಖ್ಯಾನಗಳನ್ನು ಸ್ವಲ್ಪವೂ ಲೆಕ್ಕವಿಡದೇ ಇರುವುದು ಜ್ಞಾನಿಗಳಿಗೆ ಅತ್ಯಂತ ಸಹಜ. ಅದರಲ್ಲೂ ಪಿರಮಿಡ್ ಧ್ಯಾನಗಳಿಗೂ, ಪಿರಮಿಡ್ ಆತ್ಮಜ್ಞಾನ ಪರಾಯಣರಿಗೂ ಇನ್ನು ಹೇಳಬೇಕಾಗಿಲ್ಲ. ಇದು ಅವರಿಗೆ ಬಹಳ ಸರಳ ವಿದ್ಯೆ. "

 

ಕೊನೆಯ ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಧ್ಯಾನಿಗಳೇ ಪರಿಪಾಲಕರಾಗಿ ಇರಲು ಅರ್ಹರು; ಆತ್ಮಜ್ಞಾನಿಗಳೇ ಪರಿಪಾಲಕರಾಗಿ ಇರಲು ಸಾಮರ್ಥ್ಯವುಳ್ಳವರು. ಏಕೆಂದರೆ, ಧ್ಯಾನಿಗಳೇ, ಆತ್ಮಜ್ಞಾನಪಾರಾಯಣರೇ ನಿಸ್ವಾರ್ಥರಾಗಿ, ನಿಪುಣರಾಗಿ ಇರುತ್ತಾರೆ.

Go to top