ಕರ್ನಾಟಕ ಧ್ಯಾನ ಮಹಾಚಕ್ರ-1

"ಬ್ರಹ್ಮರ್ಷಿ ಪತ್ರೀಜಿಯವರ ಜ್ಞಾನ ಸಂದೇಶಗಳು”

 

"ಎನ್‌ಲೈಟೆನ್‌ಮೆಂಟ್"

ಈದಿನ ನಾವು ಮೂರು ಮುಖ್ಯವಾದ ಅಂಶಗಳನ್ನು ಕುರಿತು ಕಲಿತುಕೊಳ್ಳೋಣ. 1) ಬುದ್ಧಂ ಶರಣಂ ಗಚ್ಛಾಮಿ 2) ಬುದ್ಧ ಧರ್ಮಂ ಶರಣಂ ಗಚ್ಛಾಮಿ 3) ಬುದ್ಧ ಸಂಘಂ ಶರಣಂ ಗಚ್ಛಾಮಿ.

"ಶರಣಂ ಗಚ್ಛಾಮಿ" ಅಂದರೆ ನಾವು ಹುಡುಕುತ್ತಿದ್ದೇವೆ. (we seek), ನೀವು ಹುಡುಕುತ್ತಿರುವಿರಿ, ನಾವೆಲ್ಲರೂ ಹುಡುಕುತ್ತಿದ್ದೇವೆ. We seek enlightenment (ಪೂರ್ಣಜ್ಞಾನ ಪ್ರಕಾಶ) ನಾವೆಲ್ಲರೂ ಪೂರ್ಣಜ್ಞಾನ ಪ್ರಕಾಶವನ್ನು ಹುಡುಕುತ್ತಿದ್ದೇವೆ. ಬುದ್ಧಂ ಅಂದರೆ ಒಬ್ಬ ಪ್ರತ್ಯೇಕ ವ್ಯಕ್ತಿ ಅಲ್ಲ. ಬುದ್ಧಂ ಎಂದರೆ ಎನ್‌ಲೈಟೆನ್‌ಮೆಂಟ್. ಬುದ್ಧಂ ಶರಣಂ ಗಚ್ಛಾಮಿ ಅಂದರೆ I am seeking refuge in enlightenment ನಾನು ಪೂರ್ಣ ಜ್ಞಾನಪ್ರಕಾಶವನ್ನು ಪಡೆಯುವ ಮಾರ್ಗವನ್ನು ಹುಡುಕುತ್ತಿದ್ದೇನೆ. ನನಗೆ ಎನ್‌ಲೈಟೆನ್‌ಮೆಂಟ್ ಬೇಕು. ನಾನು ಎನ್‌ಲೈಟೆನ್‌ಮೆಂಟ್ ಪಡೆಯಲು ಆ ಮಾರ್ಗದಲ್ಲಿ ಹೊರಟಿದ್ದೇನೆ. ಅದೇ ನಮ್ಮೆಲ್ಲರ ಧ್ಯೇಯ. ಪ್ರಾಣಿಪಕ್ಷಿಗಳಿಗೆ ಎನ್‌ಲೈಟೆನ್‌ಮೆಂಟ್‌ನ ಅವಶ್ಯಕತೆ ಇಲ್ಲ. ಮಾನವಕುಲಕ್ಕೆ ಮಾತ್ರ ಎನ್‌ಲೈಟೆನ್‌ಮೆಂಟ್ ಪಡೆಯುವ ಅವಶ್ಯಕತೆ ಇದೆ. ಆದರೆ, ಪ್ರಾಣಿಪಕ್ಷಿಗಳಿಗೆ ಎನ್‌ಲೈಟೆನ್‌ಮೆಂಟ್ ಇದೆ ಎಂದು ಅರ್ಥವಲ್ಲ. ಜೀವಾತ್ಮ ಮಾನವ ಶರೀರಧಾರಣೆ ಆದನಂತರ ಅದಕ್ಕೆ ಎನ್‌ಲೈಟೆನ್‌ಮೆಂಟ್ ಹೊಂದುವ ಅವಶ್ಯಕತೆ ಇದೆ. ಅದಕ್ಕೆ "ಬುದ್ಧಂ ಶರಣಂ ಗಚ್ಛಾಮಿ" ಎನ್ನುವ ವಾಕ್ಯವನ್ನು ಹೇಳಲಾಗಿದೆ. ಜನಗಳು ಬಂದು ನಾವು ಏನು ಮಾಡಬೇಕು ಎಂದು ನನ್ನನ್ನು ಕೇಳುತ್ತಾರೆ. ನನ್ನ ಧ್ಯೇಯವೇನು? ನಿಮ್ಮ ಧ್ಯೇಯ ನನ್ನ ಧ್ಯೇಯಕ್ಕಿಂತಾ ಬೇರೆಯಲ್ಲ ಎಲ್ಲರದೂ ಒಂದೇ ಧ್ಯೇಯ. ಅದೇ ಎನ್‌ಲೈಟೆನ್‌ಮೆಂಟ್‌ಗಾಗಿ ಹುಡುಕಾಟ. ತಂದೆ-ತಾಯಿಯರು, ಗಂಡ, ಹೆಂಡತಿ, ಮಕ್ಕಳು ನಮ್ಮನ್ನು ಆಳುವವರು, ಮುಖ್ಯಮಂತ್ರಿ, ಪ್ರಧಾನಮಂತ್ರಿ, ಶಾಲೆಯ ಶಿಕ್ಷಕಿ, ಬಸ್ ಚಾಲಕ, ಸಿತಾರ್ ನುಡಿಸುವವರು, ವಯೊಲಿನ್ ನುಡಿಸುವವರು, ತಬಲಾ ಬಾರಿಸುವವರು, ಅಡುಗೆ ಮಾಡುವವರು, ಎಲ್ಲರೂ ಎನ್‌ಲೈಟೆನ್ ಆಗಿರಬೇಕು. ಅದೇ ಎಲ್ಲರ ಜೀವನದ ಧ್ಯೇಯ. ಇದೆಲ್ಲದರ ಸಾರಾಂಶವೇ "ಬುದ್ಧಂ ಶರಣಂ ಗಚ್ಛಾಮಿ!"

ಕಡಿಮೆ ಎನ್‌ಲೈಟೆನ್‌ಮೆಂಟ್‌ನಿಂದ ಸ್ವಲ್ಪ ಹೆಚ್ಚು ಎನ್‌ಲೈಟೆನ್‌ಮೆಂಟ್ ಕಡೆಗೆ, ಅಲ್ಲಿಂದ ಇನ್ನೂ ಹೆಚ್ಚು ಆತ್ಮಜ್ಞಾನ ಪಡೆಯುವ ಕಡೆ ನಮ್ಮ ಪ್ರಯಾಣ ಸಾಗುತ್ತದೆ. ನಾವೆಲ್ಲರೂ ಎನ್‌ಲೈಟೆನ್ ಆಗಿರುವವರೇ. ಆದರೆ, ಕೆಲವರಿಗೆ ೦% ಇನ್ನೂ ಕೆಲವರಿಗೆ 1%, 5.56%, 10%, 15%, 67.80% ಅಥವಾ 99.99% ಎನ್‌ಲೈಟೆನ್‌ಮೆಂಟ್ ಆಗಿರುತ್ತದೆ. ನಾವೆಲ್ಲರೂ ಪೂರ್ಣಜ್ಞಾನ ಪಡೆಯುವ ಹಾದಿಯಲ್ಲಿ ಪಯಣಿಸುತ್ತಿದ್ದೇವೆ. ಆತ್ಮಜ್ಞಾನಪ್ರಕಾಶ ಪಡೆಯುವ ಹಾದಿಯಲ್ಲಿ ನಮ್ಮನ್ನು ನಾವು ಉದ್ಧಾರ ಮಾಡಿಕೊಳ್ಳಲಿಕ್ಕಾಗಿ ಇಲ್ಲಿ ಬಂದು ಒಗ್ಗೂಡಿದ್ದೇವೆ. ನಾವು ಮಾತನಾಡುವ ಮಾತುಗಳು ಹೇಗಿರಬೇಕು? ನಾವು ಬರೆಯುವ ಬರವಣೆಗೆ ಹೇಗಿರಬೇಕು? ಇತರರ ಜೊತೆ ನಮ್ಮ ಮಾತು-ಕಥೆ ಹೇಗಿರಬೇಕು? ಹೇಗೆ ಉಣ್ಣಬೇಕು? ಏನು ಉಣ್ಣಬೇಕು? ಹೇಗೆ ಮಲಗಬೇಕು? ಏನು ನೋಡಬೇಕು? ಏನನ್ನು ಕೇಳಿಸಿಕೊಳ್ಳಬೇಕು? ಹೇಗೆ ಯೋಚಿಸಬೇಕು? ಯಾವ ಪುಸ್ತಕ ಓದಬೇಕು? ಯಾವ ಪುಸ್ತಕ ಓದಬಾರದು? ಇವೆಲ್ಲವೂ ಎನ್‌ಲೈಟೆನ್‌ಮೆಂಟ್. ನಾವು ಪ್ರತಿಕ್ಷಣ ನಮ್ಮನ್ನು ನಾವು ಸರಿತಿದ್ದಿಕೊಳ್ಳುತ್ತಿರಬೇಕು. ಈ ಎಲ್ಲಾ ವಿಚಾರಗಳಲ್ಲೂ ನಮ್ಮನ್ನು ನಾವು ಉತ್ತಮಗೊಳಿಸಿಕೊಳ್ಳುತ್ತಿರಬೇಕು. ಇದರ ಅರ್ಥವೇ ಬುದ್ಧಂ ಶರಣಂ ಗಚ್ಛಾಮಿ. ಈ ಹುಡುಕಾಟವನ್ನೇ ಎನ್‌ಲೈಟೆನ್‌ಮೆಂಟ್ ಎಂದು ಹೇಳುತ್ತಾರೆ. ಮರಣಾನಂತರ ಜೀವನವನ್ನು ಕುರಿತು ಅರಿತುಕೊಳ್ಳುವವರೆಗೂ ನಿಮಗೆ ಎನ್‌ಲೈಟೆನ್‌ಮೆಂಟ್ ಎನ್ನುವುದು ಅಸಂಭವ ...

ಎರಡು ರೀತಿಯ ಎನ್‌ಲೈಟೆನ್‌ಮೆಂಟ್‌ಗಳಿವೆ.
1)ಮರಣಾನಂತರ ಜೀವನದ ಅರಿವು ಇರುವುದಿಲ್ಲ.
2)ಮರಣಾನಂತರ ಜೀವನದ ಅರಿವು ಇರುವುದು.
ಮರಣದನಂತರ ಏನಾಗುತ್ತದೆ, ಪುನರ್ಜನ್ಮ ಎಂದರೆ ಏನು? ಇವೆಲ್ಲಾ basic ಎನ್‌ಲೈಟೆನ್‌ಮೆಂಟ್. ಹೇಗೆ (ಏನು) ಮಾತನಾಡಬೇಕು? ಹೇಗೆ (ಏನು) ಮಾತನಾಡಬಾರದು, ಇದು ಮೂಲಭೂತವಾದ ಜ್ಞಾನ. ಇದು ಪ್ರತಿಯೊಬ್ಬರಿಗೂ ಗೊತ್ತಿರಬೇಕು. ಅನಂತರ ಪ್ರಾಣಿಕುಲದ ಮೇಲೆ ದಯ, ಕರುಣೆ ಇರತಕ್ಕದ್ದು. ಬುದ್ಧಂ ಶರಣಂ ಗಚ್ಛಾಮಿ ಎಂದರೆ ಈ ಎರಡು ವಿಷಯಗಳ ಕಡೆ ಗಮನ ಇರಬೇಕು. Commonsense in material world ಮತ್ತು ಆಧ್ಯಾತ್ಮಿಕದಲ್ಲಿ ಜ್ಞಾನ ಇರಬೇಕು.

ಬುದ್ಧಿ ಎಂದರೆ 1) material wisdom 2) spiritual wisdom ಆಧ್ಯಾತ್ಮಿಕ ಜ್ಞಾನ ಉದಾ: ನಿಮ್ಮ ತಟ್ಟೆಯಲ್ಲಿ ಅನ್ನವನ್ನು ಬಡಿಸಿಕೊಂಡು ಅರ್ಧ ತಿಂದು ಇನ್ನೂ ಅರ್ಥ ಪೋಲು ಮಾಡಿದರೆ ಅದು material wisdom ಅಲ್ಲ. ನಿಮಗೆ ಎಷ್ಟು ಬೇಕೊ ಅಷ್ಟು ಮಾತ್ರ ಬಡಿಸಿಕೊಂಡು ಪೂರ್ತಿ ಊಟ ಮಾಡಬೇಕು. ಎಲ್ಲಂದಲ್ಲೇ ಕಸ ಎಸೆಯಬಾರದು. ಇದೆಲ್ಲಾ material wisdom. ಬುದ್ಧಿ ಎಂದರೆ ಪ್ರಾಪಂಚಿಕ ಜ್ಞಾನ ಮತ್ತು ಆಧ್ಯಾತ್ಮಿಕ ಜ್ಞಾನ.

ಬುದ್ಧಂ ಎನ್ನುವ ಪದ ಬುದ್ಧಿಯಿಂದ ಬಂದಿದೆ. ಬುದ್ಧಿ ಎಂದರೆ ಏನು? ಯಾರನ್ನಾದರೂ ವೇದಿಕೆ ಮೇಲೆ ಕರೆದು ಮೈಕ್ ಕೊಟ್ಟು ಮಾತನಾಡು ಎಂದಾಗ ಅತಿ ಮಾತನಾಡಿದರೆ ನನಗೆ ವಿಪರೀತ ಎನಿಸುತ್ತದೆ. ಹಾಗೆ ಮನ ಬಂದಂತೆ ಮಾತನಾಡಬಾರದು. ಮೈಕ್ ಕೈಗೆ ಕೊಟ್ಟಾಗ ಹಲವಾರು ಸಲ ಯೋಚಿಸಬೇಕು. ಏನು ಮಾತನಾಡಬೇಕು. ಏನು ಮಾತನಾಡಬಾರದು. ಎಷ್ಟು ಮಾತನಾಡಬೇಕು ಎಂದು ಯೋಚಿಸಿ ಮಾತನಾಡಬೇಕೆ ವಿನಹ ಕೇಳುವರಿದ್ದಾರೆಂದು ಮೈಕ್ ಕೈಯಲ್ಲಿ ಇದೆ ಎಂದು ಇಷ್ಟಬಂದ ಹಾಗೆ ಮಾತನಾಡಬಾರದು. ಯಾರಾದರೂ ಮಾತನಾಡಲು ನಿಂತಾಗ ನಾನು ಅವರಲ್ಲಿ ಎಷ್ಟು ಬುದ್ಧಿ ಇದೆ ಎಂದು ಅಳೆದು ಬಿಡುತ್ತೇನೆ. ಎಂದಿಗೂ ಮನ ಬಂದಂತೇ ಮಾತನಾಡಬೇಡಿ. ನೀವು perfect ಬುದ್ಧ ಆಗುವವರೆಗೂ ನೀವು ಬುದ್ಧನಂತೇ ಮಾತನಾಡಲಾಗುವುದಿಲ್ಲ. ಒಬ್ಬ ಬುದ್ಧ ಮಾತ್ರವೇ ಸರಿಯಾಗಿ ಮಾತನಾಡಬಲ್ಲ.

ಬುದ್ಧಿ ಎನ್ನುವುದು ಒಂದು Rustic commonsense; ಬುದ್ಧಿ ಎನ್ನುವುದು ಒಂದು Rustic spiritual sense.

ನಾವು ಬುದ್ಧಂ ಶರಣಂ ಗಚ್ಛಾಮಿ ಎಂದಾಗ, ನಾವು ಶುದ್ಧ ಲೌಕಿಕ ಆತ್ಮಜ್ಞಾನಪ್ರಕಾಶವನ್ನು ಹುಡುಕುತ್ತಿದ್ದೇವೆ ಮತ್ತು ಹಾಗೆಯೇ ಶುದ್ಧ ಆಧ್ಯಾತ್ಮಿಕ ಆತ್ಮಜ್ಞಾನಪ್ರಕಾಶವನ್ನೂ ಸಹ ಹುಡುಕುತ್ತಿರುತ್ತೇವೆ. ಮರಣಾನಂತರದ ಜೀವನ ಇರುವುದನ್ನು ನೀವು ತಿಳಿದುಕೊಳ್ಳದಿದ್ದರೆ, ಮರಣದ ಮುನ್ನ ಇರುವ ಜೀವನವನ್ನೂ ಸಹ ಅರ್ಥಮಾಡಿಕೊಳ್ಳಲಾರಿರಿ.

ಗೌತಮಬುದ್ಧರು ಎನ್‌ಲೈಟೆನ್ ಆಗುವುದಕ್ಕಿಂತಾ ಮುಂಚೆ ಎನ್‌ಲೈಟೆನ್ ಆಗಿದ್ದರು. ಎನ್‌ಲೈಟೆನ್ ಆದನಂತರ ಇನ್ನೂ ಹೆಚ್ಚು ಎನ್‌ಲೈಟೆನ್ ಆಗಿದ್ದರು. ಅವರು ಎನ್‌ಲೈಟೆನ್ ಆಗುವುದಕ್ಕಿಂತಾ ಮುಂಚೆ ಎಂದಿಗೂ ಯಾವ ತರಹದ ತಪ್ಪೂ ಮಾಡಿರಲಿಲ್ಲ. ಅವರ ಯೊಚನೆಗಳು ಸಹ ಎಂದಿಗೂ ನಕಾರಾತ್ಮಕವಾಗಿ ಇರಲಿಲ್ಲ. ಅವರು ಎನ್‌ಲೈಟೆನ್ ಆಗುವುದಕ್ಕಿಂತಾ ಮುಂಚೆಯೇ ಅವರು ಮಹಾ ಆತ್ಮಜ್ಞಾನಪ್ರಕಾಶ ಹೊಂದಿದ್ದರು. ಅವರು ಎನ್‌ಲೈಟೆನ್ ಆದನಂತರ ಇನ್ನೂ ಹೆಚ್ಚಾಗಿ ಎನ್‌ಲೈಟೆನ್ (ಜ್ಞಾನೋದಯ) ಆಗಿದ್ದರು.

ಬುದ್ಧಂ ಶರಣಂ ಗಚ್ಛಾಮಿ ಎಂದಾಗ ಎನ್‌ಲೈಟೆನ್ ಆಗುವುದಕ್ಕಿಂತಾ ಮುಂಚೆ ಆಗಿರುವ ಎನ್‌ಲೈಟೆನ್‌ಮೆಂಟ್ ಮತ್ತು ಎನ್‌ಲೈಟೆನ್ ಆದನಂತರದ ಎನ್‌ಲೈಟೆನ್‌ಮೆಂಟ್ ಬಗ್ಗೆ ಮಾತನಾಡಿಕೊಳ್ಳುತ್ತೇವೆ. ಎನ್‌ಲೈಟೆನ್ ಎನ್ನುವುದು ಸತತವಾಗಿ ನಡೆಯುವ ಪ್ರಕ್ರಿಯೆ. ನೀವು ಮೀನನ್ನು ಕೊಂದು ತಿಂದರೆ ಎನ್‌ಲೈಟೆನ್ ಆಗುವಿರಾ? ಗಂಡ ಹೆಂಡತಿಯನ್ನು ಬಲವಂತವಾಗಿ ಅನುಭವಿಸಿದರೆ ಅವನು ಎನ್‌ಲೈಟೆನ್ ಆಗುವನಾ? ಇಲ್ಲವೇಇಲ್ಲ. ಇಂತಹ ಅನೇಕ ವಿಚಾರಗಳನ್ನು ಎನ್‌ಲೈಟೆನ್ ಆಗುವುದಕ್ಕಿಂತಾ ಮುಂಚೆ ಅರಿಯತಕ್ಕದ್ದು. ಎಲ್ಲಿ ಎನ್‌ಲೈಟೆನ್ ಇರುತ್ತದೆಯೊ ಅಲ್ಲಿ ಆರೋಗ್ಯ, ಸಂತೋಷ, ಶಾಂತಿ, ಸುಖ ಮುಂತಾದುವೆಲ್ಲಾ ನೆಲೆಸಿರುತ್ತವೆ. ಎನ್‌ಲೈಟೆನ್ ಇಲ್ಲದಿದ್ದರೆ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಮುಂತಾದುವೆಲ್ಲಾ ಇರುವುದೇ ಇಲ್ಲ. ನಮಗೆ ಎನ್‌ಲೈಟೆನ್ ಆಗುವುದಕ್ಕಿಂತಾ ಮುಂಚೆ ತುಂಬಾ ಎನ್‌ಲೈಟೆನ್ ಆಗುವ ಅವಶ್ಯಕತೆ ಇದೆ. ಹಾಗೆ ಎನ್‌ಲೈಟೆನ್ ಆದನಂತರ ಸಹ ಇನ್ನೂ ತುಂಬಾ ಎನ್‌ಲೈಟೆನ್ ಆಗುವ ಅವಶ್ಯಕತೆ ಇದೆ.

ನನಗೆ ಮರಣಾನಂತರ ಜೀವನದ ಬಗ್ಗೆ ಗೊತ್ತಿದೆ. ನಾನು ಆತ್ಮ ಎಂದು ಗೊತ್ತಾಗಿದೆ. ನಾನು ಶರೀರವಲ್ಲ, ಕಣಗಳ ಸಮುದಾಯವಲ್ಲ. ನಾನು ಒಂದು ಕಿಡ್ನಿ ಅಲ್ಲ, ಕೈಕಾಲುಗಳಲ್ಲ , ಎದೆಅಲ್ಲ. ನಾನು ಆತ್ಮ ಎಂದು ನನಗೆ ತಿಳಿದು ಬಂದಿದೆ. ‘ಮಮಾತ್ಮ ಸರ್ವಭೂತಾತ್ಮ’ ಎಂದು ಸಹ ಗೊತ್ತಾಗಿದೆ. ಇಷ್ಟೆಲ್ಲಾ ಅರಿತನಂತರ ಸಹ ನಮಗೆ ಇನ್ನೂ ತುಂಬಾ ಎನ್‌ಲೈಟೆನ್‌ಮೆಂಟ್ ಆಗಬೇಕಾಗಿದೆ.

ನೀವು ತಪ್ಪದೇ ಸೂಕ್ಷ್ಮಶರೀರವನ್ನು ಕುರಿತು, ಕಾರಣ ಶರೀರವನ್ನು ಕುರಿತು, ಮಹಾಕಾರಣ ಶರೀರವನ್ನು ಕುರಿತು ತಿಳಿದುಕೊಳ್ಳಬೇಕು. ನಾವು ಪುನರ್ಜನ್ಮವನ್ನು ಕುರಿತು, ‘ಪುನರಪಿ ಜನನಂ ಪುನರಪಿ ಮರಣಂ’ ಕುರಿತು ತಿಳಿದುಕೊಳ್ಳಬೇಕು. ಹೀಗೆ ಅನೇಕಾನೇಕ ವಿಚಾರಗಳಿವೆ ನಾವು ತಿಳಿದುಕೊಳ್ಳಲು.

ಜ್ಞಾನೋದಯ ಆಗುವುದಕ್ಕಿಂತಾ ಮುಂಚೆ ತುಂಬಾ ಜ್ಞಾನೋದಯ ಆಗಬೇಕಾಗಿದೆ. ಜ್ಞಾನೋದಯ ಆದನಂತರ ಸಹಾ ಇನ್ನೂ ತುಂಬಾ ಜ್ಞಾನೋದಯ ಆಗ ಬೇಕಾಗಿದೆ. ನನ್ನ ಪೂರ್ವ ಕರ್ಮದ ಪ್ರಕಾರ ನನಗೆ ಎನ್‌ಲೈಟೆನ್ ಆಗುವುದಕ್ಕಿಂತಾ ಮುಂಚೆ ಎನ್‌ಲೈಟೆನ್ ಕುರಿತು, ಎನ್‌ಲೈಟೆನ್ ಆದನಂತರ ಇನ್ನೂ ಆಗಬೇಕಾದ ಎನ್‌ಲೈಟೆನ್ ಕುರಿತು ನನಗೆ ಚೆನ್ನಾಗಿ ಗೊತ್ತಿದೆ. ಅದಕ್ಕಾಗಿಯೇ ನನಗೆ ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡಲು ಆಗುತ್ತಿದೆ.

ಎನ್‌ಲೈಟೆನ್‌ಮೆಂಟ್, ಬುದ್ಧಂ ಇವು ತುಂಬಾ ವಿಶಾಲವಾದ ವಿಷಯಗಳು. ತುಂಬಾ ಆಳವಾದ ವಿಷಯಗಳು. ಸಂಗೀತದ, ಕ್ರಿಕೆಟ್‌ನ ಶಿಷ್ಯರ ತರಹ ನಾವು ಎನ್‌ಲೈಟೆನ್‌ಮೆಂಟ್‌ನ ಶಿಷ್ಯರು. ನೀವು ನಿಮ್ಮ ದೇಹವನ್ನು ತ್ಯಜಿಸಿದಾಗ, ದೇಹದಲ್ಲಿದ್ದಾಗಿನ ಎನ್‌ಲೈಟೆನ್‌ಮೆಂಟ್‌ಗಿಂತ, ನಿಮಗೆ ಹೆಚ್ಚಿನ ಎನ್‌ಲೈಟೆನ್‌ಮೆಂಟ್ ಉಂಟಾಗುವುದಿಲ್ಲ. ನೀವು ಉಟ್ಟ ಬಟ್ಟೆಯನ್ನು ಮಾತ್ರವೇ ಬಿಟ್ಟಿರುತ್ತೀರಿ, ಪಡೆದಿರುವ ಎನ್‌ಲೈಟೆನ್ ಮಟ್ಟ ಅದೇ ಆಗಿರುತ್ತದೆ. ಸೂಕ್ಷ್ಮಲೋಕಗಳಿಗೆ ಹೋದ ಮಾತ್ರಕ್ಕೇ ನೀವು ಹೆಚ್ಚು ಆತ್ಮಜ್ಞಾನಪ್ರಕಾಶವನ್ನು ಹೊಂದುವುದಿಲ್ಲ. ಶರೀರಕ್ಕೂ ಎನ್‌ಲೈಟೆನ್‌ಗೂ ಏನೂ ಸಂಬಂಧವಿಲ್ಲ. ಈ ಸತ್ಯ ಅರ್ಥವಾದರೆ ಎನ್‌ಲೈಟೆನ್‌ಮೆಂಟ್‌ಗೆ ಮುಂಚೆ ಇನ್ನು ಎಷ್ಟೋ ಎನ್‌ಲೈಟೆನ್‌ಮೆಂಟ್ ಆಗಬೇಕಾಗಿದೆ.

ಮನುಷ್ಯನಿಗೂ ಸಸ್ಯಸಂಕುಲಕ್ಕೂ, ಮನುಷ್ಯನಿಗೂ ಪ್ರಾಣಿಪಕ್ಷಿಗಳ ಸಂಬಂಧಗಳಿಗೆ ತುಂಬಾ ಎನ್‌ಲೈಟೆನ್‌ಬೇಕು. ಎನ್‌ಲೈಟೆನ್ ಎಂದರೆ ಮಾನವ-ಸೂಕ್ಷ್ಮಲೋಕಗಳ ಸಂಬಂಧ, ಮಾನವ-ಕಾರಣಲೋಕಗಳ ಸಂಬಂಧ. ಈ ಸೃಷ್ಟಿಗೆಲ್ಲಾ ಒಂದೇ ಒಂದು ಸರ್ಕಾರವಿದೆ. ಎರಡು ಸರ್ಕಾರಗಳಿಲ್ಲ. ಆ ಒಂದು ಸರ್ಕಾರ ಏನೆಂದರೆ ಈ ಸೃಷ್ಟಿಯಲ್ಲಿ ಸರ್ಕಾರ ಎನ್ನುವುದೇ ಇಲ್ಲ. ಯಾವ ಒಬ್ಬ ಎನ್‌ಲೈಟೆನ್ ಮಾಸ್ಟರ್ ಇನ್ನೊಬ್ಬರನ್ನು ಆಳುವುದಿಲ್ಲ. ಪ್ರತಿಯೊಬ್ಬ ಎನ್‌ಲೈಟೆನ್ ಮಾಸ್ಟರ್ ತನ್ನನ್ನು ತಾನೇ ಆಳುತ್ತಾನೆ. ಯಾವ ಸರ್ಕಾರ ಇಲ್ಲದಂತೇ ಈ ಸೃಷ್ಟಿ ಸೃಷ್ಟಿಸಲ್ಪಟ್ಟಿದೆ. ನಾವು ಹೆಚ್ಚು ಹೆಚ್ಚು ಎನ್‌ಲೈಟೆನ್ ಆಗಲು ತುಂಬಾ ಧ್ಯಾನ ಮಾಡಬೇಕು. ತುಂಬಾ ಓದಬೇಕು. ತುಂಬಾ ಸೇವೆ ಮಾಡಬೇಕು. ಸಜ್ಜನ ಸಾಂಗತ್ಯ ಮಾಡಬೇಕು. ಇದು ಸತತವಾಗಿ ನಡೆಯುವ ಅದ್ಭುತ ಪ್ರಕ್ರಿಯೆ.

ಬುದ್ಧ ಧರ್ಮ ಅಂದರೆ ಏನು? ಎನ್‌ಲೈಟೆನ್ ಆಗುವುದಕ್ಕಿಂತಾ ಮುಂಚೆ ನೀವು ಇರುವ ಧರ್ಮ ಬೇರೆ, ಎನ್‌ಲೈಟೆನ್ ಆದನಂತರ ನೀವು ಆಚರಿಸುವ ಧರ್ಮ ಬೇರೆ.

ಬುದ್ಧ ಧರ್ಮ ಅಂದರೆ ಏನು? ಅದು ಬುದ್ಧನ ಧರ್ಮ. ಬುದ್ಧನ ಧರ್ಮ ಬೇರೆ. ಬುದ್ಧ ಆಗದವರ ಧರ್ಮಬೇರೆ. ಬುದ್ಧನ ಕರ್ತವ್ಯವೇನು? ಬುದ್ಧನ ಧರ್ಮ, ಬುದ್ಧನ ಕರ್ತವ್ಯ ಇನ್ನೊಬ್ಬರು ಎನ್‌ಲೈಟೆನ್ ಆಗಲು ಸಹಾಯ ಮಾಡುವುದು. ಅದೇ ಬುದ್ಧ ಧರ್ಮ! ನೀವು ಬೇರೆಯವರಿಗಾಗಿ ಜೀವಿಸಿದರೆ, ನೀವು ಬೇರೆಯವರಿಗೆ ಸಹಾಯ ಮಾಡಿದರೆ, ಅದೇ ಬುದ್ಧ ಧರ್ಮ. ಮೊದಲು ನಾವು ಎನ್‌ಲೈಟೆನ್‌ಗಾಗಿ ಹುಡುಕಾಟ ನಡೆಸಬೇಕು. ಅನಂತರ ಎನ್‌ಲೈಟೆನ್ ಆದವರ ಹತ್ತಿರ ಜ್ಞಾನ ಪಡೆಯಬೇಕು. ಅನಂತರ ಬುದ್ಧ ಸಂಘಂ ಶರಣಂ ಗಚ್ಛಾಮಿ. ಅಂದರೆ ಸಮಾಜದಿಂದ ಕಲಿಯಬೇಕು. ಕಲಿತಿದ್ದನ್ನು ಇತರರಿಗೆ ಹೇಳಿಕೊಡಬೇಕು. ಆಗ ಎಲ್ಲಾ ಕಡೆ ಬುದ್ಧರ ಸಂಘ ತಯಾರಾಗುತ್ತದೆ. ಮೀನು ನೀರು ಇಲ್ಲದೇ ಹೇಗೆ ಇರಲಾರದೊ ಹಾಗೆ ನಾವು ಬುದ್ಧ ಸಂಘವಿಲ್ಲದೇ ಇರಲಾಗುವುದಿಲ್ಲ. ಬುದ್ಧ ಎನ್ನುವವರು ಈ ಬುದ್ಧ ಸಂಘವಿಲ್ಲದೇ ಇರಲಾರರು. ಎನ್‌ಲೈಟೆನ್‌ಮೆಂಟ್ ತುಂಬಿರುವ ಸಮಾಜವನ್ನೇ ಬುದ್ಧ ಸಂಘ ಎಂದು ಹೇಳುತ್ತಾರೆ.

1)ಬುದ್ಧಂ 2) ಬುದ್ಧ ಧರ್ಮಂ (action of budda) 3) ಬುದ್ಧ ಸಂಘಂ. ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ ಈ ಭೂಮಿ ಮೇಲೆ ಇರುವ ಅತ್ಯದ್ಭುತವಾದ ಬುದ್ಧ ಸಂಘ. ಇಲ್ಲೇ ಅಲ್ಲ ಇಡೀ ಸೃಷ್ಟಿಯಲ್ಲಿ ಸಹ. "The pyramid spiritual socities movement is the grandest possible buddha sangam on this earth or anywhere in the creation right now"

ನೀವು ಹೆಚ್ಚು ಹೆಚ್ಚು ಧ್ಯಾನ ಮಾಡಿದರೆ, ನೀವು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದರೆ ಈ ಸೃಷ್ಟಿಯಲ್ಲಿ ನಮ್ಮ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ ಒಂದು ಅತ್ಯದ್ಭುತವಾದ ಬುದ್ಧ ಸಂಘ ಎಂದು ಅರ್ಥವಾಗುತ್ತದೆ. ಅದಕ್ಕೆ ನಮಗೆ ಸದಾ ಇಲ್ಲಿಗೆ ಬರಬೇಕು ಎಂದು ಅನಿಸುತ್ತದೆ. ಬುದ್ಧರ ಸಂಘಕ್ಕಾಗಿ ನಾವು ಪದೇ ಪದೇ ಇಲ್ಲಿಗೆ ಬರುತ್ತಿರುತ್ತೇವೆ. ಆಗ ನಾವು ಸದಾ ಬುದ್ಧ ಧರ್ಮದಲ್ಲಿ ಇರುತ್ತೇವೆ. ನಾವು ಇಲ್ಲಿ ನಮಗಿಂತಾ ಸ್ವಲ್ಪ ಕಡಿಮೆ ಜ್ಞಾನ ಇರುವವರಿಗೆ ಮಾರ್ಗದರ್ಶನ ನೀಡುತ್ತೇವೆ. ಬುದ್ಧ ಒಬ್ಬನು ಇದ್ದರೆ ಹಬ್ಬವನ್ನು ಆಚರಿಸುತ್ತಾನೆ. ಇಬ್ಬರಿದ್ದರೆ ಇನ್ನೂ ಚೆನ್ನಾಗಿ ಹಬ್ಬವನ್ನಾಚರಿಸುತ್ತಾರೆ. ಆದರೆ, ಹೀಗೆ ಬುದ್ಧ ಸಂಘವೇ ಇದ್ದರೆ ಅದು ಉತ್ಸವ ಅನಿಸಿಕೊಳ್ಳುತ್ತದೆ. There are degrees of enligtenment, degrees of buddhi, degrees of buddhahood (good- better-best) ಯಾರಾದರೂ ಇಬ್ಬರು ಬುದ್ಧರು ಭೇಟಿಯಾದಾಗ ಅವರು ಸುಮ್ಮನೆ ಮೌನವಾಗಿ ಇರುತ್ತಾರೆ ಅಥವಾ ಅವರು ಎನ್‌ಲೈಟೆನ್‌ಮೆಂಟ್ ಬಗ್ಗೆ ಚರ್ಚಿಸುತ್ತಿರುತ್ತಾರೆ. ಅಲ್ಲಿ ಏನಾದರೂ ಇತರ ವಿಷಯಗಳು ಬಂದರೆ ಅದರ ಅರ್ಥ ಅವರು ಇನ್ನೂ ಎನ್‌ಲೈಟೆನ್ ಆಗಬೇಕಾಗಿದೆ ಎಂದು ಅರ್ಥ.

ಬುದ್ಧಿ ಎಂದರೆ ಆಲೋಚನೆಯಲ್ಲಿ, ಮಾತಿನಲ್ಲಿ, ಬರವಣಿಗೆಯಲ್ಲಿ, ತಿನ್ನುವುದರಲ್ಲಿ ಗುಣಮಟ್ಟ ಇರುವುದು. ಆಲೋಚನೆಯಲ್ಲಿ, ಮಾತನಾಡುವುದರಲ್ಲಿ, ಕೈಕುಲುಕುವುದರಲ್ಲಿ, ಅಪ್ಪಿಕೊಳ್ಳುವುದರಲ್ಲಿ ಇವೆಲ್ಲವುಗಳಲ್ಲಿ ಜ್ಞಾನೋದಯ, ಎನ್‌ಲೈಟೆನ್‌ಮೆಂಟ್ ಇರುವುದು. ಒಬ್ಬ ಜ್ಞಾನಿ ಮಾತ್ರ ಇನ್ನೊಬ್ಬ ಜ್ಞಾನಿಯನ್ನು ಅರ್ಥಮಾಡಿಕೊಳ್ಳಬಲ್ಲ. ಸಂಜಯ್‌ಕಿಂಗ್ ಸಿತಾರ್ ನುಡಿಸುವುದನ್ನು ಅರ್ಥಮಾಡಿಕೊಳ್ಳ ಬೇಕಾದರೆ ಸಂಗೀತ ಜ್ಞಾನ ಇದ್ದವರಿಗೆ ಅವರು ನುಡಿಸುವುದು ಅರ್ಥವಾಗುತ್ತದೆ. ಇತರರು ಸುಮ್ಮನೆ ಆಲಿಸುತ್ತಾರೆ ವಿನಹ ಅದರ ರಾಗ, ತಾಳಗಳ ಜ್ಞಾನ ಇರುವುದಿಲ್ಲ. ಅವರನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಸಹ ಸಿತಾರ್ ನುಡಿಸುವುದನ್ನು ಕಲಿತಿರಬೇಕು. ಹಾಗೆ ಕಡಿಮೆ ಎನ್‌ಲೈಟೆನ್ ಆಗಿರುವವರು, ಹೆಚ್ಚು ಎನ್‌ಲೈಟೆನ್ ಆಗಿರುವವರನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ. ಆದರೆ, ಅವರ ಸಂಘದಲ್ಲಿ ಸಂತೋಷವಾಗಿ ಇರಬಹುದು.

ಸಂಗೀತ ಜ್ಞಾನ ಬರಬೇಕಾದರೆ ತುಂಬಾ ಸಾಧನೆ ಬೇಕು. ಆಗಲೆ ನಾವು ಪೂರ್ಣ ಆನಂದವನ್ನು ಪಡೆಯಬಲ್ಲೆವು. ಹಾಗೆ ಒಬ್ಬ ಎನ್‌ಲೈಟೆನ್ ಆದ ಮಾಸ್ಟರ್‌ನ ಅರ್ಥಮಾಡಿಕೊಳ್ಳಬೇಕಾದರೆ ಧ್ಯಾನ ಸಾಧನೆ ತುಂಬಾ ಮಾಡಿರಬೇಕು. ಧ್ಯಾನ ಸಾಧನೆ ಇಲ್ಲದಿದ್ದರೆ ಎನ್‌ಲೈಟೆನ್ ಆದವರನ್ನು ಅರ್ಥಮಾಡಿಕೊಳ್ಳಲಾರರು.

ಎನ್‌ಲೈಟೆನ್ ಆದರೆ ಎಲ್ಲಾ ವೈಯಕ್ತಿಕ ಸಮಸ್ಯೆಗಳೂ ಅಳಿಸಿಹೋಗುತ್ತವೆ. ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇಲ್ಲಿಗೆ ಬರುತ್ತಾರೆ. ಆದರೆ, ಅವರು ಎನ್‌ಲೈಟೆನ್‌ಮೆಂಟ್ ಹೊಂದಲು ಬರಬೇಕು. ಎನ್‌ಲೈಟೆನ್‌ಮೆಂಟ್ ಹೊಂದುವ ಮಾರ್ಗದಲ್ಲಿ ಅವರ ಸಮಸ್ಯೆಗಳು ತಮ್ಮಷ್ಟಕ್ಕೆ ತಾವೇ ಮಾಯವಾಗಿ ಬಿಡುತ್ತವೆ. ಸಮಸ್ಯೆಗಳ ಕಡೆ ಗಮನ ಕೊಡಬೇಡಿ. ಜ್ಞಾನದ ಕಡೆ ಗಮನ ಕೊಡಿ. ಗಾಂಧೀಜಿ ಹೇಳಿದರು ಸಬ್ ಕೊ ಸನ್ಮತಿ ದೇ ಭಗವಾನ್. ಸನ್ಮತಿ ಎಂದರೆ ಬುದ್ಧಿ, ಬುದ್ಧಂ, ಎನ್‌ಲೈಟೆನ್‌ಮೆಂಟ್. ಆದರೆ, ಮೇಲೆ ಯಾವ ದೇವರಿದ್ದಾರೆ? ಸನ್ಮತಿ ಕೊಡಲು? ನಮ್ಮಿಷ್ಟಕ್ಕೆ ನಾವೇ ಜ್ಞಾನ ಪಡೆದು ಬುದ್ಧಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು! ನಮಗೆ ನಾವೇ ತರಬೇತಿ ಕೊಟ್ಟುಕೊಂಡು ಸದ್ಭುದ್ಧಿಂiನ್ನು ಪಡೆಯಬೇಕು. ಯಾರು ಶಿಕ್ಷಕರಿಲ್ಲ. ಹುಡುಕಾಟ ಎನ್ನುವುದು ತುಂಬಾ ಮುಖ್ಯವಾದದ್ದು. ಅದನ್ನೇ ಬುದ್ಧಂ ಶರಣಂ ಗಚ್ಛಾಮಿ ಎಂದು ಹೇಳಿದರು. ನಮಗೆ ನಾವೇ ದೇವರು. ಸನ್ಮತಿ ಕೊಡುವವರು ನಾವೆ, ಪಡೆಯುವವರೂ ನಾವೆ. ನಮಗೆ ನಾವೇ ದಿಕ್ಕು. ಶರಣು ಕೊಡುವವರು ನಾವೇ, ಶರಣು ಪಡೆಯುವವರೂ ನಾವೇ, ಶರಣು ನೀಡುವವರು ಬೇರೆ ಯಾರೂ ಇಲ್ಲ. ಯಾರು ಯಾರಿಗೂ ಸಂಗೀತವನ್ನು ಕೊಡಲಾಗುವುದಿಲ್ಲ. ಅವರಷ್ಟಕ್ಕೆ ಅವರೇ ಸಾಧನೆ ಮಾಡಿ ಕಲಿಯಬೇಕು. ಹಾಗೆ ಎನ್‌ಲೈಟೆನ್‌ಮೆಂಟ್ ಸಹ.

 

"ಎನ್‌ಲೈಟೆನ್‌ಮೆಂಟ್ ನಂತರದ ಎನ್‌ಲೈಟೆನ್‌ಮೆಂಟ್"

ನಿನ್ನೆ ನಾವು ಬುದ್ಧಂ ಶರಣಂ ಗಚ್ಛಾಮಿಯನ್ನು ಕುರಿತು ಅರಿತುಕೊಂಡಿದ್ದೇವೆ. ‘ಬುದ್ಧಂ’ ಎನ್ನುವ ಪದ ಉಪಯೋಗಿಸುವುಕ್ಕಿಂತಾ ಎನ್‌ಲೈಟೆನ್‌ಮೆಂಟ್ ಎನ್ನುವ ಪದ ಉಪಯೋಗಿಸಿದರೇ ಚೆನ್ನಾಗಿರುತ್ತದೆ. ಬುದ್ಧಂ ಎನ್ನುವುದು ಹಳೇ ಯುಗದ ಪದ. ಎನ್‌ಲೈಟೆನ್‌ಮೆಂಟ್ ಎನ್ನುವುದು ಹೊಸ ಯುಗದ ಪದ. ಇನ್ಮುಂದೇ ನಾವು ‘ಎನ್‌ಲೈಟೆನ್‌ಮೆಂಟ್ ಶರಣಂ ಗಚ್ಛಾಮಿ’ ಎಂದು ಉಚ್ಚರಿಸೋಣ. ನಾವು ಎನ್‌ಲೈಟೆನ್‌ಮೆಂಟ್‌ಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ನಮಗೆ ಮೂರು ತರಹದ ಎನ್‌ಲೈಟೆನ್‌ಮೆಂಟ್ ಇದೆ ಎಂದು ನಿನ್ನೆ ಅರಿತುಕೊಂಡಿದ್ದೇವೆ. 1) ಎನ್‌ಲೈಟೆನ್‌ಮೆಂಟ್‌ಗಿಂತಾ ಮುಂಚೆ ಆಗಿರುವ ಎನ್‌ಲೈಟೆನ್‌ಮೆಂಟ್ 2) ಈಗ ಆಗಿರುವ ಎನ್‌ಲೈಟೆನ್‌ಮೆಂಟ್ 3) ಎನ್‌ಲೈಟೆನ್‌ಮೆಂಟ್ ನಂತರ ಬರುವ ಎನ್‌ಲೈಟೆನ್‌ಮೆಂಟ್.

ಈಗ ನಾವು ಈ ಮೂರರನ್ನು ಕುರಿತು ಕೂಲಂಕಷವಾಗಿ ತಿಳಿದುಕೊಳ್ಳೋಣ. ಎನ್‌ಲೈಟೆನ್‌ಮೆಂಟ್‌ಗಿಂತಾ ಮುಂಚೆ ಆಗಿರುವ ಎನ್‌ಲೈಟೆನ್‌ಮೆಂಟ್ ಅಂದರೆ ಏನು? ಗೌತಮಬುದ್ಧರು ತಮ್ಮ ಅರಮನೆಯನ್ನು ಬಿಟ್ಟಾಗ ಆತ ಎನ್‌ಲೈಟೆನ್ ಆದರಾ-ಇಲ್ಲವಾ? ಆತ ಅರಮನೆ ಬಿಟ್ಟು ಸತ್ಯಕ್ಕಾಗಿ ಹುಡುಕುತ್ತಾ ಹೊರಟಾಗ ಐದುವರೆ ವರ್ಷದ ನಂತರ ಆತನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾಯಿತು. ಯಾವ ಕಾರಣದಿಂದ ಯಾವ ಸತ್ಯವನ್ನು ಅರಿಯಲು ಅರಮನೆ ಬಿಟ್ಟು ಹೋಗುವಂತಾಯಿತೋ ಆ ಕಾರಣವೇ ಎನ್‌ಲೈಟೆನ್‌ಮೆಂಟ್‌ಗಿಂತಾ ಮುಂಚೆ ಆಗಿರುವ ಎನ್‌ಲೈಟೆನ್‌ಮೆಂಟ್. ಸತ್ಯ ಹುಡುಕಲು ಹೊರಡದಿದ್ದರೇ ಸತ್ಯ ಕರಗತವಾಗುವುದಿಲ್ಲ. ಸತ್ಯದ ಹುಡುಕಾಟವೇ ಮೊದಲನೆಯ ಎನ್‌ಲೈಟೆನ್‌ಮೆಂಟ್.

ಜನಗಳು ಸತ್ಯವನ್ನು ಹುಡುಕುವುದಿಲ್ಲ, ಜನಗಳು ಹಣಕ್ಕಾಗಿ ಹುಡುಕಾಟ ನಡೆಸುತ್ತಾರೆ. ಅದು ಎನ್‌ಲೈಟೆನ್‌ಮೆಂಟ್ ಅನಿಸಿಕೊಳ್ಳುವುದಿಲ್ಲ. ಈಗ ನಾನು ಅಲ್ಲಿದಲ್ಲಿ ಬಿಟ್ಟು ಸತ್ಯಕ್ಕಾಗಿ ಹುಡುಕಾಟ ಪ್ರಾರಂಭಿಸುತ್ತೇನೆ. ನಾನು ಸತ್ಯವನ್ನು ಅರಿಯಲೇಬೇಕು. ಅನೇಕ ಜನ ಋಷಿ, ಮುನಿಗಳು ಪಡೆದಿದ್ದು ನನಗೆ ಏಕೆ ಸಿಗುವುದಿಲ್ಲ. ಬುದ್ಧ ಭಗವಾನರು, ಜೀಸಸ್, ಮಹಾವೀರರು ಎನ್‌ಲೈಟ್ ಆದಾಗ ನಾನು ಏಕೆ ಎನ್‌ಲೈಟ್ ಆಗಬಾರದು. ನನಗೆ ಎನ್‌ಲೈಟೆನ್ ಅಂದರೆ ಏನು ಎಂದು ಗೊತ್ತಿಲ್ಲ. ಆದರೆ, ನಾನು ಎನ್‌ಲೈಟ್ ಆಗಬೇಕು. ಯಾವಾಗ ನಾವು ಎನ್‌ಲೈಟ್ ಆಗಬೇಕೆಂದು ನಿಶ್ಚಯಿಸುತ್ತೇವೊ ಅದು ಎನ್‌ಲೈಟೆನ್ ಆಗಿರುವ ಮೊದಲನೆಯ ಸ್ಥಿತಿ (ಹಂತ). ಅನಂತರ ನಾವು ಅನೇಕ ಗುರುಗಳನ್ನು ಹುಡುಕಿಕೊಂಡು ಹೊರಡುತ್ತೇವೆ. ಗೌತಮರು ೫೦೦ ಜನ ಗುರುಗಳನ್ನು ಭೇಟಿಯಾದರು. ಪ್ರಾರಂಭದಲ್ಲಿ ಎಲ್ಲಾ ಅಭ್ಯಾಸಮಾಡುತ್ತಾ ಬಂದರು. ಕೆಲವು ಅಭ್ಯಾಸಗಳು ಚೆನ್ನಾಗಿ ಇರುತ್ತಿತ್ತು. ಕೆಲವು ಅಷ್ಟು ಚೆನ್ನಾಗಿ ಇರುತ್ತಿರಲಿಲ್ಲ. ಪ್ರತಿಯೊಬ್ಬ ಗುರು ಹೇಳಿದ್ದರ ಕುರಿತು ಸಂಶೋಧನೆ ಮಾಡುತ್ತಾ ಬಂದರು. ಅದೇ ತುಂಬಾ ಮಹತ್ತರವಾದ ಎನ್‌ಲೈಟೆನ್‌ಮೆಂಟ್. ಉದಾ: ನನಗೆ ಡಾ|| ಸಂಜಯ್ ಕಿಂಗಿ ಅವರಂತೇ ಸಿತಾರ್ ನುಡಿಸಬೇಕು ಎಂದು ಆಸೆ. ಆದರೆ, ನನಗೆ ಸಿತಾರ್ ನುಡಿಸಲು ಬರುವುದಿಲ್ಲ. ಈಗ ನಾನು ಒಂದು ಸಿತಾರನ್ನು ಕೊಂಡು ನಂತರ ನಾನು ಕಲಿಯಲು ಆರಂಭಿಸುತ್ತೇನೆ. ಈಗ ನಾನು ಡಾ||ಸಂಜಯ್ ಕಿಂಗಿ ಅವರ ಶಿಷ್ಯನಾಗುತ್ತೇನೆ. ಅದು ಮೊದಲನೆಯ ಎನ್‌ಲೈಟೆನ್‌ಮೆಂಟ್. ಅಂದರೆ, ಇದುವರೆಗೂ ನಾನು ಆ ಸಿತಾರ್ ಕಡೆ ಗಮನಕೊಟ್ಟಿರಲಿಲ್ಲ. ಆದರೆ, ಈಗ ನಾನು ಸಿತಾರ್ ಕಲಿಯಬೇಕೆಂದು ಬಯಕೆ ಇರುವುದರಿಂದ ದಿನನಿತ್ಯಾ ನಾನು ಡಾ||ಸಂಜಯ್ ಕಿಂಗಿ ಅವರ ಹತ್ತಿರ ಸಿತಾರ್ ಕಲಿಯಲು ಹೋಗುತ್ತೇನೆ. ನಾನು ಕೊಳಲು ನುಡಿಸಲು ನಮ್ಮ ಗುರುಗಳ ಹತ್ತಿರಕ್ಕೆ ಒಂದು ಗಂಟಕಾಲ ನಡೆದು ಅಥವಾ ಸೈಕಲ್ ತುಳಿದುಕೊಂಡು ಹೋಗುತ್ತಿದ್ದೆ. ಆಗ ಅವರು ಎರಡು ಗಂಟೆಕಾಲ ಅಭ್ಯಾಸ ಮಾಡಿಸುತ್ತಿದ್ದರು. ಆಗಾಗ ಏಟು ಸಹ ಬೀಳುತ್ತಿತ್ತು. ನನಗೆ ಸಂಗೀತ ಕಲಿಯಬೇಕೆಂದು ಆಸೆ ಹುಟ್ಟಿದರೆ ಅದಕ್ಕಾಗಿ ಪ್ರಯತ್ನಪಡುತ್ತಿದ್ದರೆ ಅದು ಎನ್‌ಲೈಟೆನ್‌ಮೆಂಟ್ ಅಲ್ಲವೇ!? ಅನಂತರ ಅವರು ಶೃತಿ, ಲಯದ ಬಗ್ಗೆ ತುಂಬಾ ಮಾತನಾಡುತ್ತಿದ್ದರು. ಆದರೆ, ನನಗೆ ಅರ್ಥವಾಗಲು ಆರು ವರ್ಷಗಳಾಯಿತು. ಯಾವಾಗ ನಿಮಗೆ ಶೃತಿ, ಲಯದ ಜ್ಞಾನಪೂರ್ಣವಾಗಿ ಅರ್ಥವಾಗುತ್ತದೆಯೊ ಆಗ ನೀವು ಸಂಗೀತದ ಮಾಸ್ಟರ್ ಆಗುವಿರಿ. ಗುರುಗಳ ಹತ್ತಿರ ಹೋಗುವುದು ಬರುವುದು. ಚೆನ್ನಾಗಿ ದಿನನಿತ್ಯಾ ಅಭ್ಯಾಸ ಮಾಡುವುದು. ಮಾಸ್ಟರ್ ಏನು ಹೇಳುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಲು ಯತ್ನಿಸುವುದು ಅದೇ ಮಹಾನ್ ಎನ್‌ಲೈಟೆನ್‌ಮೆಂಟ್. ಇದನ್ನೆ ಎನ್‌ಲೈಟೆನ್‌ಮೆಂಟ್‌ಗಿಂತಾ ಮುಂಚೆ ಆಗುವ ಎನ್‌ಲೈಟೆನ್‌ಮೆಂಟ್ ಎಂದಿರುವುದು.

ಬುದ್ಧ ಅರಮನೆ ಬಿಟ್ಟು ಸತ್ಯಕ್ಕಾಗಿ ಹುಡುಕಿದರು, ಅಭ್ಯಾಸ ಮಾಡಿದರು, ಇದು ಎನ್‌ಲೈಟೆನ್‌ಮೆಂಟ್‌ಗಿಂತಾ ಮುಂಚೆ ಆಗಿರುವ ಎನ್‌ಲೈಟೆನ್‌ಮೆಂಟ್. ಒಂದು ದಿನ ಅವರಿಗೆ ಮೂರನೆಯ ಕಣ್ಣು ತೆರೆದುಕೊಂಡು ಅವರು ಮೊದಲು ತಮ್ಮ ಜನ್ಮಪರಂಪರೆಯನ್ನು ನೋಡಿಕೊಂಡರು, ತನ್ನ ಎಲ್ಲಾ ಜನ್ಮಗಳನ್ನು ನೋಡಿಕೊಂಡರು. ನಂತರ ತಾನು ಪ್ರತಿಯೊಂದು ಜನ್ಮದಲ್ಲೂ ಮಾಡಿದ ಕರ್ಮಗಳನ್ನು ನೋಡಿಕೊಂಡರು. ಅನಂತರ ಜನ್ಮದಲ್ಲಿ ಬಂದ ಕರ್ಮಫಲವನ್ನು ಸಹ ತಿಳಿದುಕೊಂಡರು. ಕೊನೆಗೆ ದುಃಖದಿಂದ ಹೊರಬರುವುದಕ್ಕೆ ಅಷ್ಟಾಂಗಮಾರ್ಗವನ್ನು ಕಂಡುಕೊಂಡರು. ಇದೆಲ್ಲಾ ಅನುಭವ ಅವರಿಗೆ ಒಂದು ರಾತ್ರಿಯಲ್ಲೇ ಆಯಿತು. ಆ ರಾತ್ರಿ ಅವರ ಎನ್‌ಲೈಟೆನ್‌ಮೆಂಟ್ ಆದ ರಾತ್ರಿ. ಆದರೆ, ಅವರು ಅರಮನೆಯಿಂದ ಹೊರ ಬರುವ ಮುನ್ನ ಅವರಿಗೆ ಬಂದ ಪ್ರಶ್ನೆಗಳು ಅದೇ ಎನ್‌ಲೈಟೆನ್‌ಗಿಂತಾ ಮುಂಚೆ ಆದ ಎನ್‌ಲೈಟೆನ್‌ಮೆಂಟ್. ಎನ್‌ಲೈಟೆನ್‌ಮೆಂಟ್‌ಗಿಂತಾ ಮುಂಚೆ ಎನ್‌ಲೈಟೆನ್‌ಮೆಂಟ್ ಆಗದಿದ್ದರೆ ನೀವು ಎನ್‌ಲೈಟೆನ್ ಆಗಲು ಸಾಧ್ಯವಿಲ್ಲ. ಈ ಎನ್‌ಲೈಟೆನ್‌ಮೆಂಟ್‌ಗಿಂತಾ ಮುಂಚೆ ಆಗುವ ಎನ್‌ಲೈಟೆನ್‌ಮೆಂಟ್ ಎನ್ನುವುದು ತುಂಬಾ ಸುದೀರ್ಘಪ್ರಯಾಣ. ಅದು ಶಿಷ್ಯತನದ ಜೀವನ. ಅನಂತರ ಒಂದು ಶುಭಸಮಯದಲ್ಲಿ ನಿಮ್ಮಿಂದ ನಿಮ್ಮ ಸೂಕ್ಷ್ಮಶರೀರ ಹೊರ ಬರುವುದನ್ನು ಗಮನಿಸುವಿರಿ. ಆಗ ನೀವು ಶರೀರವಲ್ಲ ಆತ್ಮ ಎಂದು ತಿಳಿದು ಬರುತ್ತದೆ. ನೀವು ಧ್ಯಾನ ಮಾಡುತ್ತಿರುವಾಗ ನಿಮ್ಮ ಸೂಕ್ಷ್ಮಶರೀರ ಹೊರ ಬಂದು ನಿಮ್ಮ ಸ್ಥೂಲಶರೀರವನ್ನು ನೋಡುತ್ತದೆ. ಇದೇ ಸರಿಯಾದ ಎನ್‌ಲೈಟೆನ್‌ಮೆಂಟ್ (Enlightenment proper). ಆದರೆ, ಇದೆ ಕೊನೆಯಲ್ಲ. ಈಗ ಎನ್‌ಲೈಟೆನ್‌ಮೆಂಟ್ ನಂತರ ಎನ್‌ಲೈಟೆನ್‌ಮೆಂಟ್ ಎನ್ನುವ ಪದ ಬರುತ್ತದೆ.

ನೀವು ಸೂಕ್ಷ್ಮಶರೀರಧಾರಿಗಳಾಗಿ ಧ್ಯಾನ ಮಾಡಿದಾಗ ಸೂಕ್ಷ್ಮಶರೀರದಿಂದ ಕಾರಣಶರೀರ ಹೊರಬರುತ್ತದೆ. ಈ ಕಾರಣಶರೀರಧಾರಿಯಾಗಿ ಧ್ಯಾನ ಮಾಡುತ್ತಿದ್ದರೆ ಅದರೊಳಗಿಂದ ಮಹಾಕಾರಣಶರೀರ ಹೊರ ಬರುತ್ತದೆ. ಇದನ್ನೆಲ್ಲಾ ಎನ್‌ಲೈಟೆನ್‌ಮೆಂಟ್ ನಂತರದ ಆಗುವ ಎನ್‌ಲೈಟೆನ್‌ಮೆಂಟ್. ಈ ಸುದೀರ್ಘ ಪ್ರಯಾಣದಲ್ಲಿ ನೀವು ಅನೇಕಾನೇಕ ಆಯಾಮಗಳನ್ನು ನೋಡುವಿರಿ. ಅಲ್ಲಿ ನಮ್ಮ ಹಾಗೆ ಈ ಸುದೀರ್ಘ ಪ್ರಯಾಣ ಮಾಡಿ ಅನುಭವಗಳಿಸಿರುವ ಮಾಸ್ಟರ್‌ಗಳನ್ನು ನಾವು ನೋಡುತ್ತೇವೆ. ಮೊದಲು ನೀವು ಶಿಷ್ಯರಾಗುವಿರಿ, ಅನಂತರ ಮಾಸ್ಟರ್ ಆಗುವಿರಿ ಅದನಂತರ ರಸರ್ಚರ್ (ಪ್ರಯೋಗ ಮಾಡುವವರು) ಆಗುವಿರಿ, ಕೊನೆಗೆ ಟೀಚರ್ (ಅಧ್ಯಾಪಕ) ಆಗುವಿರಿ.

ಶಿಷ್ಯ ಅಂದರೆ ಎನ್‌ಲೈಟೆನ್‌ಗಿಂತಾ ಮುಂಚೆ ಆಗಿರುವ ಎನ್‌ಲೈಟೆನ್‌ಮೆಂಟ್ ಸ್ಥಿತಿ. ಮಾಸ್ಟರ್ ಅಂದರೆ ಸರಿಯಾದ ಎನ್‌ಲೈಟೆನ್‌ಮೆಂಟ್ (Enlightenment proper) ಆಗಿರುವವರು. ರಿಸರ್ಚರ್ ಅಂದರೆ ಎನ್‌ಲೈಟೆನ್‌ಮೆಂಟ್ ಆದನಂತರ ಆಗಿರುವ ಎನ್‌ಲೈಟೆನ್‌ಮೆಂಟ್. ಟೀಚರ್ ಸ್ಥಿತಿ ಎಂದರೆ ಎನ್‌ಲೈಟೆನ್‌ಮೆಂಟ್ ಆದನಂತರ ಆಗಿರುವ ಎನ್‌ಲೈಟೆನ್‌ಮೆಂಟ್. ಈ ENLIGHTENMENT ಎನ್ನುವುದು ಒಂದು ದೊಡ್ಡ ಸುದೀರ್ಘ ಪ್ರಯಾಣ.

ನೀವು ಧ್ಯಾನ ಮಾಡಬೇಕು, ಮಾಸ್ಟರ್‌ಗಳು ಹೇಳುವುದನ್ನು ಕೇಳಿಸಿಕೊಳ್ಳಬೇಕು ಎಂದು ನಿರ್ಧರಿಸಿಕೊಂಡರೆ, ಎನ್‌ಲೈಟೆನ್‌ಮೆಂಟ್ ಮೊದಲನೆಯ ಹಂತ ಪ್ರಾರಂಭವಾಗಿದೆ. ನಿಮಗೆ ಅದರ ಬಗ್ಗೆ ಚಿಂತನೆ ಇಲ್ಲದಿದ್ದರೆ ನೀವು ಜೀವನ ಜೀವಿಸುವಿರಿ. ಆದರೆ, ಇನ್ನೂ ನಿಮ್ಮಲ್ಲಿ ಮೊದಲನೆಯ ಹಂತದ ಎನ್‌ಲೈಟೆನ್‌ಮೆಂಟ್ ಪ್ರಾರಂಭವಾಗಿಲ್ಲ ಎಂದು ಅರ್ಥ. ಒಬ್ಬ ಶಿಷ್ಯ ಗೌತಮಬುದ್ಧರಿಗೆ ಹೇಳಿದರು "ಸ್ವಾಮಿಜಿ ನೀವು ತುಂಬಾ ಒಳ್ಳೆಯ ವಿಷಯಗಳನ್ನು ಹೇಳಿರುವಿರಿ. ನಾವು ನಿಮ್ಮಿಂದ ಎಲ್ಲಾ ವಿಷಯಗಳನ್ನು ಕಲಿತಿದ್ದೇವೆ" ಎಂದು. ಅದಕ್ಕೆ ಬುದ್ಧ "ಒಂದು ವೇಳೆ ನಾನು ಎಲ್ಲಾ ವಿಚಾರ ಮಾತನಾಡದಿದ್ದರೆ ನೀನು ನನ್ನಿಂದ ಹೇಗೆ ಕಲಿಯುತ್ತಿದ್ದೆ?" ಎಂದು ಕೇಳಿದರು. ನಾನು ಈ ಸಮೀಪದಲ್ಲಿರುವ ವೃಕ್ಷದಿಂದ ಒಂದು ಹಿಡಿಯಷ್ಟು ಎಲೆಗಳನ್ನು ಕಿತ್ತರೇ ಎಷ್ಟು ಇರುತ್ತದೆಯೊ ಅಷ್ಟೇ ನಿನಗೆ ಹೇಳಿರುವೆ. ಇನ್ನೂ ಈ ಮರದಲ್ಲಿ ಉಳಿದ ಎಲೆಗಳಷ್ಟು ಜ್ಞಾನ ಇದೆ ಎಂದು ಹೇಳಿದರು. ಇನ್ನು ಪೂರ್ತಿಹೇಳಲಿಲ್ಲ ಎಂದರು. ನೀನು ಸಂತೋಷವಾಗಿರಲು, ದುಃಖದಿಂದ ಆಚೆ ಬರಲು ಇಷ್ಟು ಜ್ಞಾನ ಸಾಕು ಎಂದು ಹೇಳಿದರು. ಇನ್ನೂ ಈ ಪೂರ್ತಿ ಮರವಿದೆ, ನೀನು ಪ್ರಯೋಗ ಮಾಡಲು ಎಂದು ವಿವರಿಸಿದರು. ಅದು ಎನ್‌ಲೈಟೆನ್‌ಮೆಂಟ್ ಅನಂತರದ ಎನ್‌ಲೈಟೆನ್‌ಮೆಂಟ್. ಆ ಒಂದು ಹಿಡಿಯಷ್ಟು ಎಲೆಗಳ ಜ್ಞಾನ ಅವನಿಗೆ ಎನ್‌ಲೈಟೆನ್ ಆಗುವುದಕ್ಕಿಂತಾ ಮುಂಚೆ ಬೇಕಾದ ಜ್ಞಾನ. ಒಂದು ಬಾರಿ ಎನ್‌ಲೈಟೆನ್ ಆಗಿಬಿಟ್ಟರೇ ಎನ್‌ಲೈಟೆನ್ ಅನಂತರದ ಎನ್‌ಲೈಟೆನ್‌ಗಾಗಿ ನಾವು ಪ್ರಯತ್ನ ಮಾಡುವೆವು. ಪ್ರಯೋಗ ಪ್ರಾರಂಭವಾಗುತ್ತದೆ. 1979ನಲ್ಲಿ ನಾನು (ಪತ್ರೀಜಿ) ಎನ್‌ಲೈಟೆನ್ ಆದೆ. ಅನಂತರ ನನ್ನ ಪ್ರಯೋಗ ಪ್ರಾರಂಭವಾಯಿತು. ಇದು ಎನ್‌ಲೈಟೆನ್‌ಮೆಂಟ್ ನಂತರದ ಎನ್‌ಲೈಟೆನ್‌ಮೆಂಟ್. ಅನಂತರ ನನ್ನ ಬೋಧನೆ ಪ್ರಾರಂಭವಾಗಿದೆ ನಾನು ಎಲ್ಲರಿಗೂ ಹೇಳಿಕೊಡಲಾರಂಭಿಸಿದೆ. ಬೋಧನೆ ಎನ್‌ಲೈಟೆನ್‌ಮೆಂಟ್ ನಂತರದ ಎನ್‌ಲೈಟೆನ್‌ಮೆಂಟ್. ಬುದ್ಧ ಎನ್‌ಲೈಟೆನ್ ಆದ ತಕ್ಷಣ ಬೋಧನೆ ಮಾಡುವುದಕ್ಕೆ ಹುಡುಕುತ್ತಿದ್ದರು, ಅದು ಎನ್‌ಲೈಟೆನ್‌ಮೆಂಟ್ ನಂತರದ ಎನ್‌ಲೈಟೆನ್‌ಮೆಂಟ್. ಅವರು ಬೋಧನೆ ಮಾಡಲಿಲ್ಲ ಎಂದರೆ ಅವರು ಎನ್‌ಲೈಟೆನ್ ಆದರಷ್ಟೇ, ಎನ್‌ಲೈಟೆನ್‌ಮೆಂಟ್ ನಂತರದ ಎನ್‌ಲೈಟೆನ್‌ಮೆಂಟ್‌ಗೆ ಅವರು ಹುಡುಕುತ್ತಿಲ್ಲ ಎಂದು ಅರ್ಧ.

ಶಿಷ್ಯತ್ವ ಎಂಬುದು ಎನ್‌ಲೈಟೆನ್‌ಮೆಂಟ್‌ಗಿಂತಾ ಮುಂಚಿನ ಎನ್‌ಲೈಟೆನ್ ಸ್ಥಿತಿ. ಸಾಕ್ಷಾತ್ಕಾರವು ಎನ್‌ಲೈಟೆನ್ ಆದ ಸ್ಥಿತಿ, ಸಾಕ್ಷಾತ್ಕಾರವು ಹೊಂದಿದ ನಂತರ ಮಾಡುವ ಸಂಶೋಧನೆ ಮತ್ತು ಬೋಧನೆ ಎನ್‌ಲೈಟೆನ್‌ಮೆಂಟ್ ಆದನಂತರದ ಎನ್‌ಲೈಟೆನ್‌ಮೆಂಟ್ ಸ್ಥಿತಿ. ಈ ಮೂರು ಸ್ಥಿತಿಗಳನ್ನೂ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.

 

"ಬುದ್ಧನ ಸಾಕ್ಷಾತ್ಕಾರದಲ್ಲಿ ಮೂವರು ಪೂರ್ಣಚಂದ್ರರ ಪಾತ್ರ”

ಪ್ರಿಯ ಸ್ನೇಹಿತರೆ, ಪ್ರಿಯ ಮಾಸ್ಟರ್‌ಗಳೇ, ಪ್ರಿಯ ಸಹಸೃಷ್ಟಿಕರ್ತರೇ .. ಎಲ್ಲಾ ಆತ್ಮಗಳು ಎಂದೆಂದಿಗೂ ಎನ್‌ಲೈಟೆನ್‌ಮೆಂಟ್‌ನಿಂದ ಜೀವಿಸುತ್ತವೆ. ಇದು ಸತ್ಯ, ಆತ್ಮ ಎನ್ನುವುದು ಸದಾ ಪೂರ್ಣಜ್ಞಾನವನ್ನು ಪಡೆದುಕೊಂಡೇ ಇದೆ. ಆದರೆ, ಮಾನವನ ಮನಸ್ಸಿನ ಪ್ರಕಾರ ನಾವು ಎಷ್ಟು ಅರ್ಥಮಾಡಿಕೊಳ್ಳಬೇಕೊ ಅಷ್ಟು ಅರ್ಥಮಾಡಿಕೊಳ್ಳುತ್ತಿಲ್ಲ. ನಾವೆಲ್ಲಾ ಆತ್ಮಗಳು ಸದಾ ಇರುವವರು ಆತ್ಮದ ದೃಷ್ಟಿಯಿಂದ ನೋಡಿದರೆ ಎನ್‌ಲೈಟೆನ್‌ಮೆಂಟ್ ಎನ್ನುವುದು ಅನಾದಿ ಕಾಲದಿಂದಲೂ ಇದೆ. ಆದರೆ, ನಮ್ಮ ಮನಸ್ಸು, ಬುದ್ಧಿಯ ದೃಷ್ಟಿಯಿಂದ ನೋಡಿದರೆ ಇನ್ನೂ ನಾವು ಎನ್‌ಲೈಟೆನ್‌ಮೆಂಟ್ ಎನ್ನುವುದನ್ನು ಪಡೆಯಬೇಕಾಗಿದೆ, ಇನ್ನೂ ಜ್ಞಾನ ವೃದ್ಧಿಗೊಳಿಸಿಕೊಳ್ಳಬೇಕಾಗಿದೆ ಎಂದು ಅನಿಸುತ್ತದೆ. ಆತ್ಮದ ದೃಷ್ಟಿಯಿಂದ ನೋಡಿದರೆ ಜ್ಞಾನ, ಆನಂದ, ಪ್ರಗತಿ, ಉದ್ಧಾರ ಆಗುತ್ತಿದ್ದೇವೆ.

ಪ್ರತಿಯೊಂದು ಬಾರಿ ನಾವು ಜನ್ಮ ತಾಳಿದಾಗ ನಾವು ಶರೀರ, ಮನಸ್ಸು ಕಡೆ ಗಮನವಿಡುತ್ತೇವೆ. ಆತ್ಮ ಎನ್ನುವುದು ಶರೀರ ಧರಿಸಿ ಜನ್ಮತಾಳುತ್ತಿರುತ್ತದೆ. ಈ ಭೂಮಿಯ ಮೇಲೆ ಇರುವಾಗ ಆತ್ಮವು ಶರೀರ, ಮನಸ್ಸಿನಿಂದ ವರ್ತಿಸುತ್ತದೆ. ಶರೀರ ತ್ಯಾಗ ಮಾಡಿದನಂತರ ಪುನಃ ಆತ್ಮವು ತನ್ನ ಸ್ವರೂಪವನ್ನು (ಜ್ಞಾನದ ಸ್ವರೂಪ) ಪಡೆಯುತ್ತದೆ. ಪ್ರತಿಯೊಂದು ಜನ್ಮಕಾಲದಲ್ಲೂ ಆತ್ಮವು ಶರೀರದಲ್ಲಿ ಪ್ರವೇಶಿಸುತ್ತದೆ. ಆತ್ಮ ಪ್ರತಿಯೊಂದು ಬಾರಿ ಶರೀರ, ಮನಸ್ಸಿನಲ್ಲಿ ಕೊಚ್ಚಿಕೊಂಡು ಹೋಗಿಬಿಡುತ್ತದೆ ಮತ್ತು ದುಃಖಮಯವಾಗಿಬಿಡುತ್ತದೆ. ದುಃಖದಿಂದ ಮುಕ್ತರಾಗಿರಿ ಆಗಲೇ ನಿಮಗೆ ನಿರ್ವಾಣ ಎನ್ನುವುದು ಸಿಗುತ್ತದೆ ಎಂದು ಬುದ್ಧ ಭಗವಾನರು ತಿಳಿಸಿದರು. ಎಲ್ಲಿಯವರೆಗೂ ನೀವು ದೇಹ, ಮನಸ್ಸು ಎಂದು ತಿಳಿದಿರುವಿರೋ ಅಲ್ಲಿಯವರೆಗೂ ನಿಮಗೆ ಸಿಗುವುದು ಕೇವಲ ದುಃಖ ಮಾತ್ರ. ಬುದ್ಧ ಪೂರ್ಣಿಮೆಯ ದಿನಗಳೆಂದರೆ ಬುದ್ಧನ ಬೋಧನೆಗಳನ್ನು ನಾವು ನೆನೆಸಿಕೊಳ್ಳಬೇಕು. ಹೇಗೆ ನಾವು ಪ್ರತಿದಿನ ಸಂಗೀತವನ್ನು ಕೇಳಿಸಿಕೊಳ್ಳುತ್ತೇವೊ ಹಾಗೆ ಪ್ರತಿದಿನ ನಾವು ಆತ್ಮಜ್ಞಾನವನ್ನು ಕುರಿತು ಸಹ ಕೇಳಿಸಿಕೊಳ್ಳುತ್ತಿರಬೇಕು. ಬುದ್ಧ ಹೇಳಿದ್ದು ದುಃಖ ಎನ್ನುವುದಿದೆ. ದುಃಖ ಏತಕ್ಕಿದೆ ಎಂದರೆ ಅತಿ ಆಸೆಯಿಂದ (ಅತಿ ಆಸೆಯೇ ದುಃಖಕ್ಕೆ ಕಾರಣ ಎಂದು ಬುದ್ಧ ಭಗವಾನರು ಹೇಳಿದರು). ಎರಡು ರೊಟ್ಟಿ ತಿನ್ನುವುದು ಬಿಟ್ಟು ಐದು ರೊಟ್ಟಿಗಳನ್ನು ತಿಂದರೆ ಶರೀರಕ್ಕೆ ತೊಂದರೆ ಆಗುತ್ತದೆ. ಅಲ್ಲವೇ? ದಿನಕ್ಕೆ ನೂರು ರೂಪಾಯಿ ಬೇಕಾಗಿರುವಾಗ ಸಾವಿರ ರೂಪಾಯಿ ಪಡೆಯಬೇಕೆಂದು ತಳಮಳಗೊಳ್ಳುತ್ತೆವೊ ಆಗ ದುಃಖ ಖಂಡಿತಾ ಉಂಟಾಗುತ್ತದೆ. ದಿನಕ್ಕೆ ನೂರು ರೂಪಾಯಿ ಬೇಕಾಗಿರುವಾಗ, ನೂರು ರೂಪಾಯಿ ಮಾತ್ರ ಸಂಪಾದಿಸಿ. ಅತಿ ಆಸೆಯಿಂದ ಸಾವಿರಾರು ರೂಪಾಯಿಗಳು ಸಂಪಾದಿಸಲು ಪ್ರಯತ್ನಿಸಿದರೆ ಶಾರೀರಿಕ, ಮಾನಸಿಕ ಆರೋಗ್ಯ ಹದಗೆಟ್ಟು ದುಃಖದ ಪಾಲಾಗುತ್ತೇವೆ. ಇದನ್ನೇ ಆಸೆ ಎಂದು ಹೇಳುತ್ತಾರೆ. ಆ ಆಸೆ ಎನ್ನುವುದೇ ದುಃಖಕ್ಕೆ ಕಾರಣ, ದಿನಕ್ಕೆ ನೂರು ರೂಪಾಯಿ ಬೇಕಾಗಿರುವಾಗ ನೂರು ರೂಪಾಯಿ ಮಾತ್ರ ಸಂಪಾದಿಸಿದರೆ ದುಃಖ ಎನ್ನುವುದು ಇರುವುದೇ ಇಲ್ಲ. ಆಸೆ ಎನ್ನುವುದು ಇಲ್ಲದಿದ್ದರೆ ದುಃಖವಿಲ್ಲ. ಎರಡು ಜಿಲೇಬಿ ತಿನ್ನುವಷ್ಟು ಹಸಿವೆ ಇದ್ದಾಗ ಹತ್ತಾರು ಜಿಲೇಬಿಗಳು ತಿಂದರೆ ಶರೀರ ದುಃಖ ಅನುಭವಿಸ ಬೇಕಾಗುತ್ತದೆ. ಮೂರ್ಖರಾಗಿರುವವರೆಗೂ ಅದರ ಫಲವನ್ನು ಅನುಭವಿಸಲೇಬೇಕು. ಶರೀರಕ್ಕೆ ಎಷ್ಟು ಆಹಾರ ಬೇಕೊ ಅಷ್ಟೇಕೊಡಿ. ಹಾಗೆ ಮನಸ್ಸಿಗೆ ಎಷ್ಟು ಯೋಚಿಸಬೇಕೊ ಅಷ್ಟೇ ಯೋಚಿಸಿ. ಅತಿ ಆಲೋಚನೆ ಮಾಡಿದರೂ ಸಹ ಮಾನಸಿಕ ದುಃಖ ಅನುಭವಿಸ ಬೇಕಾಗುತ್ತದೆ.

ಅಲೆಗ್ಜಾಂಡರ್ ಪ್ರಪಂಚವನ್ನೇ ಪಡೆಯಬೇಕೆಂದು ಹೊರಟಿದ್ದ. ಅದೇ ಅವನ ದುಃಖಕ್ಕೆ ಕಾರಣವಾಯಿತು. ಅಲೆಗ್ಜಾಂಡರ್ ತಮ್ಮ ದೇಶಕ್ಕೆ ಹಿಂದಿರುಗಿ ಹೋಗುವಾಗ ಒಬ್ಬ ಮುದುಕನನ್ನು ಭೇಟಿಯಾದ ಯಾರೋ ಹೇಳಿದರು ಅವನು ಈ ಪ್ರಪಂಚದಲ್ಲೇ ಆನಂದವಾಗಿ, ಸಂತೋಷವಾಗಿರುವ ವ್ಯಕ್ತಿ ಎಂದು. ಅಲೆಗ್ಜಾಂಡರ್ ಈ ಜಗತ್ತಿನಲ್ಲೇ ಶ್ರೀಮಂತ ವ್ಯಕ್ತಿ. ಆಗ ಅಲೆಗ್ಜಾಂಡರ್ ಡಯೋಜನೀಸ್ ಎಂಬ ಆ ಮುದುಕನಹತ್ತಿರ ಹೋಗಿ ಕೇಳುತ್ತಾನೆ. ನೀನು ಇಷ್ಟು ಆನಂದವಾಗಿರಲು ಕಾರಣವೇನು? ಎಂದು. "ನಾನು ಸಂತೋಷವಾಗಿರಲು ನನಗೇನು ಬೇಡ. ಆದರೆ, ನೀನು ಸಂತೋಷವಾಗಿರಲು ಅನೇಕ ಜನರನ್ನು ಕೊಂದಿರುವೆ" ಎಂದನು. “ನಾನು ಈ ಆಸ್ತಿಯನ್ನೆಲ್ಲಾ ನನ್ನ ದೇಶಕ್ಕೆ ತೆಗೆದುಕೊಂಡು ಹೋಗುತ್ತಿದ್ದೇನೆ. ಅನಂತರ ನಾನು ತುಂಬಾ ಸಂತೋಷವಾಗಿ ಜೀವನವನ್ನು ಕಳೆಯುತ್ತೇನೆ” ಎಂದನು ಅಲೆಗ್ಜಾಂಡರ್. ಎಂದು ಹೇಳಿದನು. "ನೀನು ನಿನ್ನ ದೇಶಕ್ಕೆ ಹೋಗುವುದಿಲ್ಲ. ಸಾಯುವೆ. , ನೀನು ಈ ಆಸ್ತಿಯನ್ನು ಅನುಭವಿಸಲು ಆಗುವುದಿಲ್ಲ" ಎಂದು ಮುದುಕನು ಹೇಳಿದನು. ನಾನು ತುಂಬಾ ಯುವಕನಾಗಿದ್ದೇವೆ ನಾನು ಏಕೆ ಸಾಯುತ್ತೇನೆ ಎಂದನು. ಡಯೋಜನೀಸ್ ನಕ್ಕ... ಅನಂತರ ಅಲೆಗ್ಜಾಂಡರ್ ತನ್ನ ದೇಶಕ್ಕೆ ಮರಳಿ ಹೋದನಂತರ ಕೆಲವೇ ದಿನಗಳಲ್ಲಿ ಮರಣಶಯ್ಯವನ್ನು ಏರಿದ. ಆತ ತನ್ನ ಶವ ಪೆಟ್ಟಿಗೆಯನ್ನು ತಯಾರು ಮಾಡಿಸಿ ತಾನು ಮರಣಿಸಿದನಂತರ ತನ್ನ ಶವವನ್ನು ಅದರಲ್ಲಿ ಇರಿಸಿ ಮತ್ತು ತನ್ನ ಎರಡು ಕೈಗಳನ್ನು ಹೊರಗೆ ಇಡಿ ಎಂದು ತಮ್ಮ ಅನುಚರರಿಗೆ ಹೇಳಿದನು. “ನಾನು ಈ ಪ್ರಪಂಚದಲ್ಲೆ ತುಂಬಾ ಬಡವ ನನ್ನಷ್ಟು ಬಡವ ಈ ಪ್ರಪಂಚದಲ್ಲಿ ಯಾರೂ ಇಲ್ಲ. ಸಾಯುವಾಗ ಯಾರೂ ಏನನ್ನೂ ಕೊಂಡೊಯ್ಯಲಾಗದು, ಎಲ್ಲರೂ ಬರಿಗೈಯಲ್ಲಿಯೇ ತೆರಳಬೇಕು” ಎಂದು ತನ್ನ ಸಂದೇಶವನ್ನು ಈ ವಿಶ್ವಕ್ಕೆ ಕೊಟ್ಟ. ಮತ್ತು ಆ ಮುದುಕನಷ್ಟು ಸಂತೋಷವಾಗಿರುವ ವ್ಯಕ್ತಿ ಈ ವಿಶ್ವದಲ್ಲಿ ಮತ್ತೊಬ್ಬರಿಲ್ಲ ಎಂದು ಅರಿತುಕೊಂಡ. ಅಂದರೆ, ನಮ್ಮ ಸುಖ, ಶಾಂತಿ, ನೆಮ್ಮದಿ, ಸಂತೋಷಕ್ಕಾಗಿ ಇತರರನ್ನು ಪೀಡಿಸಿ, ಮೋಸಮಾಡಿ, ಕೊಲ್ಲುವ ಅವಶ್ಯಕತೆ ಇಲ್ಲ. ಯಾವಾಗ ನಾವು ಏನನ್ನೇ ಆಗಲಿ ಅರ್ಥಮಾಡಿಕೊಳ್ಳುತ್ತೇವೊ ಆಗ ನಮಗೆ ಎನ್‌ಲೈಟೆನ್ ಆದಹಾಗೆ. ಜಪಾನೀ ಭಾಷೆಯಲ್ಲಿ ‘ಸಟೋರಿ’ ಎನ್ನುವ ಪದ ಇದೆ. ಸಟೋರಿ ಎಂದರೆ ಜೀವನದಲ್ಲಿ ನಡೆಯುವ ಪ್ರತಿ ಒಂದು ಘಟನೆಯಿಂದ ನಾವು ಪಾಠ ಕಲಿಯುತ್ತಿರುತ್ತೇವೆ. ಆ ಪಾಠಗಳಿಂದ ಜ್ಞಾನೋದಯವಾಗುತ್ತದೆ. ಇದನ್ನೇ ಮಿನಿ ಎನ್‌ಲೈಟೆನ್‌ಮೆಂಟ್ ಎಂದು ಹೇಳುತ್ತಾರೆ. ಅಂದರೆ ಪ್ರತಿಕ್ಷಣ ಜ್ಞಾನೋದಯ.

ಡಯೊಜನೀಸ್‌ನನ್ನು ನೋಡಿದ ನಂತರ ಅಲೆಗ್ಜಾಂಡರ್‌ಗೆ ಎನ್‌ಲೈಟೆನ್ ಎನ್ನುವುದು ಪ್ರಾರಂಭವಾಯಿತು. ಆವನಿಗೆ ಮೊದಲನೆಯ ಎನ್‌ಲೈಟೆನ್‌ಮೆಂಟ್ ಪ್ರಾರಂಭವಾಯಿತು. ಆದರೆ ಅವರು ಎರಡನೆಯ ಹಂತದ ಎನ್‌ಲೈಟೆನ್‌ಮೆಂಟ್ ಪಡೆಯುವುದಕ್ಕಿಂತಾ ಮುಂಚೆ ತಮ್ಮ ಶರೀರ ತ್ಯಾಗ ಮಾಡಬೇಕಾಗಿ ಬಂತು. ಭಗವದ್ಗೀತೆಯಲ್ಲಿ ಅರ್ಜುನ ಶ್ರೀಕೃಷ್ಣನನ್ನು ಕುರಿತು, ಯಾರಾದರೂ ಯೋಗ ಭ್ರಷ್ಟರಾದರೆ ಅವರ ಗತಿ ಏನು? ಎಂದು ಕೇಳಿದ. ಯೋಗ ಪ್ರಾರಂಭಿಸಿದ ಆದರೇ ಯೋಗ ಭ್ರಷ್ಟನಾಗಿಬಿಟ್ಟೆ. ಯೋಗ ಪ್ರಾರಂಭಿಸಿದ ಆದರೇ ಮುಂದುವರೆಯಲಾಗಲಿಲ್ಲ. ಅದಕ್ಕೆ ಕೃಷ್ಣ ಹೇಳಿದ ಏನೂ ಪರವಾಗಿಲ್ಲ ಅವನು ಪುನಃ ಒಬ್ಬ ಶ್ರೀಮಂತರ ಮನೆಯಲ್ಲೊ ಅಥವಾ ಒಬ್ಬ ಯೋಗಿಯಲ್ಲೇ ಹುಟ್ಟಿ ಬಂದು ತನ್ನ ಯೋಗತ್ವವನ್ನು ಮುಂದುವರೆಸುತ್ತಾನೆ.

ರಮಣಮಹರ್ಷಿ ತನ್ನ ೧೪ ನೆಯ ವಯಸ್ಸಿನಲ್ಲಿ ೭ನೆಯ ತರಗತಿ ಓದುತ್ತಿರುವಾಗ ಅವರು ಮನೆ ಬಿಟ್ಟು ಓಡಿ ಹೋದರು. ಅವರಿಗೆ ಮನೆಯ ವಾತಾವರಣ ಹಿಡಿಸಲಿಲ್ಲ. ಅವರೆಲ್ಲಾ ತಪ್ಪು ಮಾಡುತ್ತಿದ್ದಾರೆ. ನಾನು ಸತ್ಯ ಏನು ಎಂದು ಕಂಡುಹಿಡಿಯುತ್ತೇನೆ ಎಂದು ಮನೆ ಬಿಟ್ಟು ಹೊರಟರು. ಅದು ಅವರ ಪ್ರಾರಂಭ ಹಂತದ ಎನ್‌ಲೈಟೆನ್‌ಮೆಂಟ್. ಅವರು ಓಡಿ ಹೋಗಿ ಅರುಣಾಚಲಂನ ತಿರುವಣ್ಣಾಮಲೈಗೆ ಹೋಗಿ ತಲುಪಿದರು. ಅಲ್ಲಿಗೆ ಹೋಗಿ ಅವರು ಸುಮ್ಮನೆ ಕುಳಿತರು. ಮನಸ್ಸಿಗೆ ಕೆಲಸ ಕೊಡಲಿಲ್ಲ. ಅಲ್ಲಿ ಮನಸ್ಸಿನ ಅವಶ್ಯಕತೆ ಇಲ್ಲ. ಅಗ ಅವರು ಎನ್‌ಲೈಟೆನ್ ಆಗಿದ್ದರು. ಇದು ಎರಡನೆಯ ಹಂತ.. ಮೂರನೆಯ ಹಂತದಲ್ಲಿ ಅವರು ಬಂದವರಿಗೆ ಮೌನದ ಮಹತ್ವವನ್ನು ತಿಳಿಸಿಕೊಟ್ಟರು.

ಬುದ್ಧಭಗವಾನರು ಜನ್ಮತಾಳಿದ್ದು ಪೂರ್ಣಿಮೆಯ ದಿನ, ಅವರಿಗೆ ಜ್ಞಾನೋದಯವಾಗಿದ್ದು ಪೂರ್ಣಿಮೆಯ ದಿನವೇ ಅವರು ನಿರ್ವಾಣ ಹೊಂದಿದ್ದು ಹುಣ್ಣಿಮೆಯ ದಿನವೇ. ಆದ್ದರಿಂದ, ಬುದ್ಧ ಪೂರ್ಣಿಮ ಎನ್ನುವುದು ತುಂಬಾ ಮಹತ್ವ ಉಳ್ಳದ್ದು. ಪ್ರಾರಂಭದ ಜ್ಞಾನೋದಯ, ಜ್ಞಾನೋದಯ ಆಗಿದೆ ಎಂದು ಅರಿತಿರುವ ಜ್ಞಾನೋದಯ ಅವರಿಗೆ ಆದ ಜ್ಞಾನೋದಯವನ್ನು ಇನ್ನೂ ಇಮ್ಮಡಿಗೊಳಿಸುವ ಜ್ಞಾನೋದಯ ಮತ್ತು ತಮಗೆ ಆದ ಜ್ಞಾನೋದಯವನ್ನು ಇತರರಿಗೆ ಹಂಚುವ ಪ್ರಕ್ರಿಯೆ (ಅದೇ ಧ್ಯಾನ-ಜ್ಞಾನ ಪ್ರಚಾರ). ಇದೇ ಮೂರು ಹುಣ್ಣಿಮೆಗಳ ಸಂಕೇತ.

ಮೊದಲನೆಯ ಜ್ಞಾನೋದಯ ಎಂದರೆ ನನಗೆ ಬಂದ ದುಃಖ ಸಾಕು. ಇನ್ನು ನಾನು ಈ ದುಃಖವನ್ನು ಅನುಭವಿಸಲಾರೆ. ಏನಾದರೂ ಮಾಡಿ ದುಃಖ ನಿವಾರಣೆಗೆ ಪರಿಹಾರ ಹುಡುಕಬೇಕು ಎಂದು ಯೋಚಿಸುವುದೇ ಮೊದಲನೆಯ ಎನ್‌ಲೈಟೆನ್‌ಮೆಂಟ್. ದುಃಖ ಎನ್ನುವುದು ಆಸೆಯಿಂದ ಬರುತ್ತದೆ. ಆಸೆ ಎನ್ನುವುದು ಅವಿದ್ಯೆಯಿಂದ ಬರುತ್ತದೆ. ಯಾವ ಆತ್ಮನೂ ಇನ್ನೊಬ್ಬರ ಸೊತ್ತಲ್ಲ.

ಬೃಹದಾರಣ್ಯ ಉಪನಿಷತ್‌ನಲ್ಲಿ ಗಂಡ ಹೆಂಡತಿ ನಡುವೆ ಸಂಭಾಷಣೆ ನಡೆಯುತ್ತಿತ್ತು. ಹೆಂಡತಿ ಗಂಡನನ್ನು ಒಂದು ಪ್ರಶ್ನೆ ಕೇಳಿದಳು. ಏತಕ್ಕಾಗಿ ಒಂದು ಹೆಣ್ಣು, ಒಂದು ಗಂಡನ್ನು ಬಯಸುತ್ತಾಳೆ. ಏಕೆ ಒಂದು ಗಂಡು ಹೆಣ್ಣನ್ನು ಬಯಸುತ್ತಾನೆ ಎಂದು. ಹೆಣ್ಣು ಗಂಡನ್ನು ಬಯಸುವುದು ತನ್ನ ಸ್ವಾರ್ಥಕ್ಕಾಗಿ ಹಾಗೇ ಗಂಡು ಸಹ ಹೆಣ್ಣನ್ನು ಸ್ವಾರ್ಥಕ್ಕಾಗಿ ಬಯಸುತ್ತಾನೆ. ಹಾಗೆ ಅವರಿಬ್ಬರು ಒಂದಾಗಿ ಮಕ್ಕಳನ್ನು ತಮ್ಮ ಸ್ವಾರ್ಥಕ್ಕಾಗಿ ಪಡೆಯುತ್ತಾರೆ. ಹಾಗೆ ಮಕ್ಕಳು ಸಹ ತಮ್ಮ ಸ್ವಾರ್ಥಕ್ಕಾಗಿಯೇ ಜನ್ಮತಾಳುತ್ತಾರೆ. ಯಾರಿಗಾಗಿ ಯಾರೂ ಏನೂ ಮಾಡುತ್ತಿಲ್ಲ. ಎಲ್ಲರೂ ಅವರವರ ಬಯಕೆಗಳನ್ನು ತೀರಿಸಿಕೊಳ್ಳಲು ಒಬ್ಬರು ಇನ್ನೊಬ್ಬರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಯಾರು ಯಾರಿಗಾಗಿಯೂ ಇಲ್ಲ. ಎಲ್ಲರೂ ತಮಗಾಗಿ ತಾವು ಜೀವಿಸುತ್ತಿದ್ದಾರೆ. ಎಂದು ಬೃಹದಾರಣ್ಯಕೋಪನಿಷತ್‌ನಿಂದ ಎಲ್ಲರಿಗೂ ನೀಡಿದ ಸಂದೇಶ. ಗಂಡನ ಹೆಸರು ಯಾಜ್ಞವಲ್ಕ್ಯ, ಹೆಂಡತಿ ಹೆಸರು ಮೈತ್ರೇಯಿ. ಪ್ರತಿಯೊಂದು ಆತ್ಮ ಸಹಜವಾಗಿಯೇ ತುಂಬಾ ಸ್ವಾರ್ಥದಿಂದ ಇರುತ್ತದೆ. ಇದೇ ಸರಿಯಾದದ್ದು. ಆದರೆ, ನಾವು ಬೇರೆಯವರು ನಮಗಾಗಿ ತ್ಯಾಗ ಮಾಡಬೇಕೆಂದು ಬಯಸುತ್ತೇವೆ. ಅದು ತಪ್ಪು (ಸರಿಯಲ್ಲ). ನೀವು ಬೇರೆಯವರಿಗಾಗಿ ತ್ಯಾಗ ಮಾಡುತ್ತಿದ್ದರೆ ಅದು ಸಹ ತಪ್ಪು ಭಾವನೆ. ಆಧ್ಯಾತ್ಮಿಕತೆ ಅಂದರೆ ಅದಲ್ಲ, ಪ್ರತಿಕ್ಷಣ ನಮಗಾಗಿ ನಾವು ಉತ್ಸವವನ್ನು ಆಚರಿಸುವುದೇ ಆಧ್ಯಾತ್ಮಿಕತೆ.

ಶರೀರ, ಮನಸ್ಸು, ಬುದ್ಧಿ ಯಾವ ರೀತಿಯಲ್ಲಿ ನೋಡಿದರೂ ಸದಾ ಉತ್ಸವವನ್ನು ಆಚರಿಸುತ್ತಿರಬೇಕು. ಅದಕ್ಕಾಗಿಯೇ ಆತ್ಮ ಈ ಭೂಮಿಯ ಮೇಲೆ ಇಳಿದುಬಂದಿದೆ. ಎಲ್ಲಾ ರೀತಿಯ ಅನುಭವಗಳನ್ನು ಗಳಿಸಲು ಆತ್ಮ ಈ ಭುವಿಗೆ ಆಗಮಿಸಿದೆ.

ಶರೀರ ಎನ್ನುವುದು ಒಂದು ಬೊಂಬೆ ಇದ್ದಹಾಗೆ. ಈ ಬೊಂಬೆಜೊತೆಗೆ ಹೇಗೆ ಆಡಿಕೊಳ್ಳಬೇಕು. ಈ ಬೊಂಬೆ ಹೇಗೆ ಕೆಲಸ ಮಾಡುತ್ತದೆ. ನಾನು ಯಾರು? ನಾನು ಅಂದರೆ ಏನು? ನಾನು ಹೇಗಿದ್ದೇನೆ? ಏತಕ್ಕಾಗಿ ನಾನು ಇಲ್ಲಿ ಇದ್ದೇನೆ? ಇದೆಲ್ಲಾ ನನಗೆ ಅರ್ಥವಾಗಬೇಕು ಎಂದು ಯಾವಾಗ ಅನಿಸುತ್ತದೊ ಅದು ಪ್ರಾರಂಭ ಹಂತದ ಜ್ಞಾನೋದಯ-ಅದು ಮೊದಲನೆಯ ಹುಣ್ಣಿಮೆ. ಈಗ ನನಗೆ ಜೀವನ ಅಂದರೆ ಏನು ಎಂದು ಅರ್ಥವಾಗಿದೆ ಎಂದು ಅನಿಸಿದಾಗ ನಮಗೆ ಜ್ಞಾನೋದಯವಾಯಿತು ಎಂದು ಅರ್ಥ-ಅದು ಎರಡನೆಯ ಹುಣ್ಣಿಮೆ. ಅನಂತರ ನಮಗೆ ಸಿಕ್ಕ ಜ್ಞಾನವನ್ನು ಹಲವಾರು ಜನಕ್ಕೆ ಹಂಚಬೇಕು ಎನ್ನುವ ಯೋಚನೆ ಬಂದಾಗ ಹಂಚಲಾರಂಭಿಸಿದ ನಂತರ ನಮಗೆ ಸಿಗುವ ಜ್ಞಾನೋದಯ ಪೂರ್ಣವಾಗುತ್ತದೆ-ಅದು ಮೂರನೆಯ ಹುಣ್ಣಿಮೆ. ಹಂಚುತ್ತಿದ್ದರೆ ಜ್ಞಾನ ಇಮ್ಮಡಿಗೊಳ್ಳುತ್ತದೆ. ನಾವು ಆತ್ಮ. ಆದರೆ, ನಮಗೆ ಮನಸ್ಸು, ಬುದ್ಧಿ ಸಹ ಇದೆ. ಅದರ ಪರಿಣಾಮ ಅದು ಬೀರುತ್ತಿರುತ್ತದೆ. ಮನಸ್ಸು ಸದಾ ತನಗೆ ಎಷ್ಟು ಬೇಕೊ ಅಷ್ಟಕ್ಕಿಂತಾ ಹೆಚ್ಚನ್ನು ಬಯಸುತ್ತಿರುತ್ತದೆ. ಅದು ಅದರ ಸ್ವಭಾವ. ಅದರಿಂದ ನಮಗೆ ದುಃಖ ಸಂಭವಿಸುತ್ತಿರುತ್ತದೆ. ಮನಸ್ಸು - ಆಸೆ - ದುಃಖ. ಮನಸ್ಸು ಅತಿ ಆಸೆ ಹಿಂದೆ ಬಿದ್ದು ಹೋಗುತ್ತದೆ. ಅದನ್ನೇ ಆಸೆ ಎನ್ನುತ್ತಾರೆ. ಆಸೆ ಇದ್ದರೆ ದುಃಖ ಕಟ್ಟಟ್ಟಬುತ್ತಿ. ನೂರಾರು ಹೆಂಡತಿಯರಿದ್ದರೂ ಆತ್ಮಕ್ಕೆ ತೃಪ್ತಿ ಇಲ್ಲ, ಒಳ್ಳೆ ಪದವಿ ಇದ್ದರೂ ತೃಪ್ತಿ ಇಲ್ಲ. ಏತಕ್ಕಾಗಿ? ಅಂದರೆ ಆತ್ಮಕ್ಕೆ ತೃಪ್ತಿ ಎನ್ನುವುದು ತಾನು ಶರೀರವಲ್ಲ ಆತ್ಮ ಎಂದು ಅರಿತಾಗ (ತಿಳಿದಾಗ) ಸಿಗುತ್ತದೆ. ಎನ್‌ಲೈಟೆನ್‌ಗಾಗಿ ಹುಡುಕಾಟ ಪ್ರಾರಂಭಿಸುವುದು ತುಂಬಾ ತುಂಬಾ ಮುಖ್ಯವಾದ ಪ್ರಕ್ರಿಯೆ. ನಾನು ಶರೀರ ಅಲ್ಲ ಆತ್ಮ ಎಂದು ಅರಿತಾಗ ಅದು ಎರಡನೆಯ ಹಂತದ ಎನ್‌ಲೈಟೆನ್ ಪ್ರಕ್ರಿಯೆ.

ಒಬ್ಬ ವ್ಯಕ್ತಿ ಅಲೆದಾಡುವ ಮನಸ್ಸಿನಿಂದ ಸಾಕಾಗಿ ಧ್ಯಾನ ಕಲಿಯೋಣವೆಂದು ಬಂದಾಗ, ಎಲ್ಲರಲ್ಲೂ ಶಾಂತಿ ಇದೆ, ಕಣ್ಣುಗಳು ಮಿಂಚುತ್ತಿವೆ, ಮುಖದಲ್ಲಿ ವರ್ಚಸ್ಸಿದೆ ಎಂದು ಅರಿತು ನನಗೂ ಇದೆಲ್ಲಾ ಬೇಕು. ನನಗೂ ಧ್ಯಾನ ಹೇಳಿಕೊಡಿ ಎಂದು ಬಂದಾಗ ಅದೇ ಅವನಿಗೆ ಮೊದಲನೆಯ ಜ್ಞಾನೋದಯ. ಅಷ್ಟು ಸಾಕು ಜ್ಞಾನೋದಯ ಎನ್ನುವ ಹಾದಿಯಲ್ಲಿ ಅವನು ಮುನ್ನಡೆದು ಒಂದು ದಿನ ಪೂರ್ಣಜ್ಞಾನ ಪಡೆಯಲು.

ಬುದ್ಧಭಗವಾನರು ರೋಗ, ದುಃಖ, ಸಾವಿಗೆ ಕಾರಣವೇನು ಎಂದು ಅರಿಯಲು ಮನೆಬಿಟ್ಟು ಹೋದಾಗ ಅದು ಅವನ ಮೊದಲನೆಯ ಜ್ಞಾನೋದಯ. ಬೋಧಿವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡುತ್ತಿರುವಾಗ ಆಸೆಯೇ ದುಃಖಕ್ಕೆ ಕಾರಣ ಎಂದು ಅರಿತಾಗ ಅದು ಅವನ ಎರಡನೆಯ ಹಂತದ ಜ್ಞಾನೋದಯ. ಅವಿದ್ಯೆಯೇ ಆಸೆಗೆ ಕಾರಣ. ಅದರಿಂದ ಹೊರಬರಲು ಅವರು ಅಷ್ಟಾಂಗಮಾರ್ಗವನ್ನು ಸೂಚಿಸಿದರು.

1) ಸರಿಯಾದ ದೃಕ್ಪಥಗಳು
2) ಸರಿಯಾದ ಸಂಕಲ್ಪಗಳು
3) ಸರಿಯಾದ ವಾಕ್ಕು
4) ಸರಿಯಾದ ಕರ್ಮ
5) ಸರಿಯಾದ ಜೀವನೋಪಾಯ
6) ಸರಿಯಾದ ಕೃಷಿ
7) ಸರಿಯಾದ ಏಕಾಗ್ರತೆ
8) ಸರಿಯಾದ ಧ್ಯಾನ

ಸಿತಾರ್ ಕಲಿಯಬೇಕಾದರೆ ದಿನಕ್ಕೆ ಮೂರು ಗಂಟೆಗಳಾದರೂ ಸಾಧನೆ ಮಾಡಬೇಕು. ಮೂರು ನಿಮಿಷಗಳು ಸಾಧನೆ ಮಾಡಿದರೆ ಸಾಲದು. ನಮ್ಮ ಮನಸ್ಸು ಚಂಚಲವಾಗಲಿ ಅಥವಾ ಸ್ಥಿರವಾಗಲಿ ಧ್ಯಾನ ಮಾಡುತ್ತಿರಬೇಕು. ಮೂರು ಗಂಟೆಗಳಕಾಲ ಕಣ್ಣುಗಳನ್ನು ತೆರೆಯಬಾರದು. ಆತ್ಮದ ಸ್ವಭಾವ ಈ ಪೂರ್ಣ ಸೃಷ್ಟಿಯಲ್ಲಿ ಅದು ಎಲ್ಲಿ ಬೇಕಾದರೂ ಹೋಗಿ ಬರಬಹುದು. ಇದು ಜನ್ಮಜನ್ಮಗಳ ಪರಂಪರೆ. ಆತ್ಮಕ್ಕೆ ಎರಡು ಮರಣಗಳಿವೆ. ನಾವು ಶರೀರ ತ್ಯಾಗ ಮಾಡಿದಾಗ ಆತ್ಮದ ಜೊತೆ ಮನಸ್ಸು ಇರುತ್ತದೆ. ಮನಸ್ಸನ್ನು ಸಹ ಬಿಡಬೇಕು. ಮನಸ್ಸು ಸದಾ ತನಗೆ ಏನು ಬೇಕೊ ಅದನ್ನು ಮಾತ್ರ ನೋಡಲು ಇಷ್ಟಪಡುತ್ತದೆ. ಮನಸ್ಸು ಎಂದಿಗೂ ಅಲ್ಲಿ ಏನಿದೆಯೊ ಅದನ್ನು ನೋಡಲು ಇಷ್ಟಪಡುವುದಿಲ್ಲ. ಆಗ ನಾವೂ ಆ ಮನಸ್ಸನ್ನು ಸಹ ತ್ಯಜಿಸಿದರೆ ಆಗ ಶರೀರ + ಮನಸ್ಸು + ಆತ್ಮದಿಂದ ಬರೀ ಮನಸ್ಸು + ಆತ್ಮ ಉಳಿಯುತ್ತದೆ. ಮನಸ್ಸನ್ನು ಸಹ ತ್ಯಜಿಸಿದರೇ ಬರೀ ಆತ್ಮ ಉಳಿಯುತ್ತದೆ. [BMS -Ms-S] [Body,Mind, soul-Mind, soul-soul] ಆಗಲೇ ನಾವು ಸತ್ಯವನ್ನು ಅರಿಯಬಹುದು. ನಾವು ಸತ್ಯವನ್ನು ಅರಿತನಂತರ ನೀವು ಸತ್ಯದಲ್ಲೇ ಜೀವಿಸಬಹುದು. ನಾವು ಶರೀರ, ಮನಸ್ಸು, ಆತ್ಮದಲ್ಲಿರುವಾಗಲೇ ಮನಸ್ಸನ್ನು ತ್ಯಜಿಸಿದರೆ ಆಗ ನಾವು ದೇಹ ಮತ್ತು ಆತ್ಮದ ಜೊತೆ ಸಂತೋಷವಾಗಿ ಜೀವಿಸಬಲ್ಲೆವು.

ನನಗೆ ಬಾಲ್ಯದಿಂದಲೂ ಎನ್‌ಲೈಟೆನ್‌ಮೆಂಟ್ ಬೇಕಾಗಿತ್ತು. ಆದರೆ, ಎನ್‌ಲೈಟೆನ್‌ಮೆಂಟ್ ಅಂದರೆ ಏನು. ಅದು ಹೇಗೆ ಸಿಗುತ್ತದೆ ಎಂದು ಯೋಚಿಸುತ್ತಿದ್ದೆ. ನಾನು ನನ್ನ 15 ನೆಯ ವಯಸ್ಸಿನಲ್ಲಿ ಪಂಡಿತ್ ರಾಧಾಕೃಷ್ಣನ್ ಅವರ "Indian Philosphy"ಪುಸ್ತಕಗಳ ಎರಡೂ ಭಾಗಗಳನ್ನು ಓದಿದ್ದೇನೆ. ನನ್ನ ಎಂಟನೇ ವಯಸ್ಸಿನಲ್ಲಿ `My exeriment with truth' by Gandhiji ಪುಸ್ತಕವನ್ನು ಓದಿದ್ದೆ. ನನ್ನ ಹತ್ತನೆಯ ವಯಸ್ಸಿನಲ್ಲಿ ರವೀಂದ್ರನಾಥ್ ಠಾಗೂರ್ ಪುಸ್ತಕಗಳನ್ನು ಓದುತ್ತಿದ್ದೆ. ನನ್ನ ಬಾಲ್ಯದಲ್ಲಿ ಸ್ವಾಮಿ ವಿವೇಕಾನಂದ, ರವೀಂದ್ರನಾಥ್ ಠಾಗೂರ್ ಕುರಿತು ತುಂಬಾ ಪುಸ್ತಕಗಳು ಬರುತ್ತಿತ್ತು. ಶಾಂತಿನಿಕೇತನ್ ಪುಸ್ತಕದಲ್ಲಿ ಕೆಲವರು ಒಂದು ಮರದ ಕೆಳಗೆ ಕುಳಿತು ಸಿತಾರ್ ಕಲಿಯುತ್ತಿದ್ದರೆಂದು, ಇನ್ನೂ ಕೆಲವರು ಮತ್ತೊಂದು ಮರದ ಕೆಳಗೆ ಕುಳಿತು ನೃತ್ಯ ಕಲಿಯುತ್ತಿದ್ದಾರೆಂದು, ಇನ್ನೂ ಕೆಲವರು ಇನ್ನೊಂದು ಮರದ ಕೆಳಗೆ ಕುಳಿತು ವಾಯಿಲಿನ್ ಕಲಿಯುತ್ತಿದ್ದಾರೆಂದು ಇವೇ ವಿಷಯಗಳು ನನ್ನ ಮನಸ್ಸಿನಲ್ಲಿತ್ತು, ನನ್ನ ಮನಸ್ಸೆಲ್ಲಾ ಶಾಂತಿನಿಕೇತನ್ ವಿಚಾರಗಳಿಂದ ತುಂಬಿತ್ತು. ನಾನು West Bengal ನಲ್ಲಿರುವ ಶಾಂತಿನಿಕೇತನ್ ಎಂದೂ ನೋಡಿರಲಿಲ್ಲ. ಆದರೆ, ನಾವೆಲ್ಲಾ ಸೇರಿ ಇಲ್ಲಿ "ಧ್ಯಾನನಿಕೇತನ್" ನಿರ್ಮಿಸಿದ್ದೇವೆ. ನನ್ನ ಬಾಲ್ಯದಿಂದಲೂ ಸುಂದರವಾದ ಶಾಂತಿನಿಕೇತನ್ ನಿರ್ಮಿಸಬೇಕೆಂಬುವ ತೀವ್ರ ಬಯಕೆ ಇತ್ತು. ಆದರೆ ನಾವು ಇಲ್ಲಿ ಶಾಂತಿನಿಕೇತನ್‌ಗಿಂತಾ ಚೆನ್ನಾಗಿರುವ ಆತ್ಮಜ್ಞಾನನಿಕೇತನ್ ಸೃಷ್ಟಿಸುತ್ತಿದ್ದೇವೆ. ನಮಗೆಲ್ಲರಿಗೂ ಸಹ ಇಂತಹ ತೀವ್ರವಾದ ಬಯಕೆ ಬಾಲ್ಯದಿಂದಲೂ ಇರುವುದರಿಂದ ಕೂಡ ನಾವು ಇಲ್ಲಿ ಇದ್ದೇವೆ. ಆತ್ಮದ ಕಡೆಯಿಂದ ನೋಡಿದರೇ ನಾವೆಲ್ಲರೂ ಪೂರ್ಣಜ್ಞಾನಿಗಳೇ. ಆದರೆ ಶರೀರ, ಮನಸ್ಸು, ಆತ್ಮದ ಕಡೆಯಿಂದ ನೋಡಿದರೆ ನಮಗೆ ಇನ್ನೂ ಜ್ಞಾನೋದಯ ಆಗಬೇಕಾಗಿದೆ. ಪ್ರತಿಯೊಂದು ಜನ್ಮದಲ್ಲೂ ನಾವು ಹೀಗೆ ಹೆಚ್ಚುಹೆಚ್ಚು ಜ್ಞಾನವನ್ನು ಪಡೆಯುತ್ತಿರುತ್ತೇವೆ. There is no end for undrestanding. ನಾವು ಸದಾ ಧ್ಯಾನ ಕಲಿಯಲೇಬೇಕು, ಸ್ವಾಧ್ಯಾಯ ಮಾಡಲೇಬೇಕು, ಸಜ್ಜನಸಾಂಗತ್ಯ ಮಾಡಲೇಬೇಕು.

ಒಬ್ಬ ಬುದ್ಧನ ಜೀವನದಲ್ಲಿ ಮೊದಲನೆಯ ಬುದ್ಧ ಪೂರ್ಣಿಮೆ ಎರಡನೆಯ ಬುದ್ಧ ಪೂರ್ಣಿಮೆ, ಮೂರನೆಯ ಬುದ್ಧ ಪೂರ್ಣಿಮೆ ಬಂದೇ ಬರುತ್ತದೆ.

 

"ಬುದ್ಧಿ"

ಪ್ರಿಯಸ್ನೇಹಿತರೆ, ಪ್ರಿಯ ಮಾಸ್ಟರ್‌ಗಳೇ, ಪ್ರಿಯ ಬುದ್ಧರೇ .. ಯಾರು ಬುದ್ಧ ಎಂದರೆ? ಯಾರು ಬುದ್ಧಿಯನ್ನು ಸತತವಾಗಿ ಪ್ರಯೋಗದ ಮೂಲಕ ಪಡೆಯುತ್ತಾ ಹೋಗುತ್ತಾರೊ ಅವರು ಬುದ್ಧರು. ಬುದ್ಧಿ ಎನ್ನುವ ಪದದಿಂದ ಬುದ್ಧ ಎನ್ನುವ ಪದ ಬಂದಿದೆ. ಬುದ್ಧಿ ಎನ್ನುವುದು ಪ್ರಾಪಂಚಿಕ ವಿಚಾರದಲ್ಲಿ ಸಾಮಾನ್ಯ ಅರಿವು ಮತ್ತು ಆಧ್ಯಾತ್ಮಿಕ ವಿಷಯಕ್ಕೆ ಬಂದರೆ ಜ್ಞಾನ. ನಮ್ಮ ಭೌತಿಕ ಜೀವನದಲ್ಲಿ, ನಮ್ಮ ಮಾನಸಿಕ ಜೀವನದಲ್ಲಿ, ನಮ್ಮ ಆಧ್ಯಾತ್ಮಿಕ ಜೀವನದಲ್ಲಿ ಉತ್ತಮ ಸ್ಥಿತಿಗೆ ಹೋಗುತ್ತಿರಬೇಕು. ನೀವು ಬಾಯಿ ತೆರೆದು ಮಾತನಾಡುವಾಗ ಖಚಿತವಾಗಿ, ಮೃದುವಾಗಿ, ಅಳೆದು, ತೂಗಿ, ಮಾತನಾಡಬೇಕು. ಯಾರಾದರೂ ಬಾಯಿ ಬಿಟ್ಟು ಹೆಚ್ಚು ಮಾತನಾಡಿದರೆ ಅವರಿಗೆ ಎಷ್ಟು ಬುದ್ಧಿ ಇದೆ ಎಂದು ಗೊತ್ತಾಗಿ ಬಿಡುತ್ತದೆ. ಒಂದು ಪ್ರಶ್ನೆ ಹಾಕಿ ಉತ್ತರಕ್ಕಾಗಿ ಎದುರುನೋಡಿದಾಗ ಅವರ ಉತ್ತರದಿಂದ ಅವರಲ್ಲಿರುವ ಬುದ್ಧಿ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಗೊತ್ತಾಗುತ್ತದೆ. ಆ ಮನುಷ್ಯನಿಗೆ ೦% ಬುದ್ಧಿ ಇದೆಯಾ, 1% ಬುದ್ಧಿ ಇದೆಯಾ .. 5%, 10%, 50%, 80% ಇದರ ಪರೀಕ್ಷೆ ಗೊತ್ತಿಲ್ಲದೇನೆ ನಡೆಸಲ್ಪಡುತ್ತದೆ. ಯಾರಾದರೂ ಮಾತನಾಡುವಾಗ ಅವರ ಮಾತುಗಳನ್ನು ಕೇಳಿ, ಅವರಲ್ಲಿ ಆಗುವ ಪ್ರತಿಕ್ರಿಯೆ ನೋಡಿ ನಾನು ಅವರ ಬುದ್ಧಿಯನ್ನು ಅಳದು ಬಿಡುತ್ತೇನೆ. ನಿಮಗೆ ಗೊತ್ತಿಲ್ಲದಿದ್ದರೆ ಗೊತ್ತಿಲ್ಲ ಎಂದು ಹೇಳಬೇಕು. ನಿಮಗೆ ಗೊತ್ತಿದ್ದರೆ ನೀವು ನನಗೆ ಗೊತ್ತು ಅಂತ ಹೇಳಬೇಕು. ನಿಮಗೆ ಪುಸ್ತಕ ಜ್ಞಾನ (ಥಿಯರಿಟಕಲ್) ಮಾತ್ರ ಇದ್ದರೇ ಥಿಯರಿಟಿಕಲ್ ಆಗಿ ಮಾತ್ರ ಗೊತ್ತು ಅಂತ ಹೇಳಬೇಕು. ನಿಮಗೆ ಅನುಭವ ಜ್ಞಾನ ಇದ್ದರೆ ಅನುಭವದಿಂದ ಹೇಳುತ್ತಿದ್ದೇವೆ ಎಂದು ಹೇಳಬೇಕು. ಯಾರಾದರೂ ಮಾತನಾಡಿದ್ದನ್ನು ಕೇಳಿದ್ದರೆ ನಾನು ಹೀಗೆ ಕೇಳಿದೆ ಎಂದು ಮಾತ್ರ ಹೇಳಬೇಕು. ಮಾತನಾಡುವುದು ಸುಲಭವಲ್ಲ. ಉದಾಹರಣೆಗೆ ನೀವು ಯಾವತ್ತೂ ಸಿತಾರನ್ನು ಮುಟ್ಟದಿದ್ದರೆ, ಕನಸಿನಲ್ಲೂ ನೋಡದಿದ್ದರೆ .. ಯಾರಾದರೂ ನಿಮಗೆ ಸಿತಾರನ್ನು ಕೊಟ್ಟರೆ ನಾನು ಸಿತಾರ್ ನುಡಿಸುತ್ತೇನೆ ಎಂದು ಹೇಳಿದರೆ ಅದು ಮೂರ್ಖತನ. ಹಾಗೆಯೇ, ನೀವು ಧ್ಯಾನ ಮಾಡದಿದ್ದರೆ, ನಿಮ್ಮ ಮೂರನೆಯ ಕಣ್ಣು ಇನ್ನೂ ಉತ್ತೇಜನವಾಗದಿದ್ದರೆ, ನೀವು ಸಹಸ್ರಾರಕ್ಕೆ ಸೇರಿಲ್ಲದಿದ್ದರೆ, ಇತರ ಆಯಾಮಗಳಿಗೆ ತಲುಪದಿದ್ದರೆ .. ನೀವು ಈ ವಿಚಾರದಲ್ಲಿ ಬಾಯಿ ತೆಗೆಯುವ ಹಾಗಿಲ್ಲ (ಮಾತನಾಡುವ ಹಾಗಿಲ್ಲ). ಎನ್‌ಲೈಟೆನ್ ಆಗಿರುವ ಬುದ್ಧರು ಮಾತ್ರ ಸರಿಯಾಗಿ ಮಾತನಾಡಬಲ್ಲರು. ನಿಮ್ಮ ಮಾತುಗಳಿಂದ ನೀವು ಏನು ಎನ್ನುವುದು ಗೊತ್ತಾಗಿ ಬಿಡುತ್ತದೆ. ನಾನು ನಿಮ್ಮ ಆಲೋಚನೆಗಳನ್ನು ಹಿಡಿಯಬಲ್ಲೆ. ಆದರೆ, ನಾನು ನಿಮ್ಮ ಪದಗಳ ಕಡೆ ಗಮನ ಕೊಡುತ್ತೇನೆ. ಕರ್ಮಗಳು ನಿಮಗೆ ಅರ್ಥವಾಗುವುದಿಲ್ಲ. ಆಲೋಚನೆಗಳು ಇತರರಿಗೆ ಗೊತ್ತಾಗುವುದಿಲ್ಲ ಆದರೆ ಪದಗಳು ಮಾತ್ರ ತುಂಬಾ ಸುಂದರವಾದ ಅಳತೆಗೋಲು ಎಂದು ಹೇಳಬಹುದು. ಆಲೋಚನೆಗಳಿಗೂ, ಕರ್ಮಗಳಿಗೂ ನಡುವೆ ಪದಗಳು (ಮಾತುಗಳು) ಇರುತ್ತವೆ.

ನಿನ್ನೆ ಒಬ್ಬರು ಮಾತನಾಡುತ್ತಲೇ ಇದ್ದರು. ನಾನು ೫ ನಿಮಿಷ ಮಾತನಾಡಲು ಹೇಳಿದೆ. ಆತ ಹತ್ತು ನಿಮಿಷಗಳವರೆಗೂ ಮಾತನಾಡುತ್ತಲೇ ಇದ್ದ. ಹಾಗೆ ಮಾತನಾಡುವುದು ಸರಿಯಲ್ಲ. ನಮ್ಮ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್‌ನಲ್ಲಿ ನೀವು ಹೇಗೆ ಧ್ಯಾನ ಮಾಡುವಿರಿ ಎನ್ನುವುದಕ್ಕಿಂತಾ ನೀವು ಹೀಗೆ ಮಾತನಾಡುವಿರಿ ಎನ್ನುವುದು ತುಂಬಾ ಮುಖ್ಯವಾದ ವಿಷಯ. ನಿಮ್ಮ ಆಲೋಚನೆಗಳನ್ನು ಹಿಡಿತ ಮಾಡುವುದಕ್ಕಿಂತಾ, ಮಾತುಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳವುದು ತುಂಬಾ ಮುಖ್ಯ. ಮಾತಿನಲ್ಲಿ ಶಿಸ್ತು ಇದ್ದರೇ ಆಲೋಚನೆಗಳು ತಮ್ಮಷ್ಟಕ್ಕೆ ತಾವೆ ಹಿಡಿತದಲ್ಲಿ ಬರುತ್ತದೆ. ಆಗ ನಿಮ್ಮ ಜೀವನದ ಗಾಡಿ ಸರಿಯಾಗಿ ಪಯಣಸುತ್ತದೆ.

ಚೆನ್ನಾಗಿ ಯೋಚಿಸಿ, ಚೆನ್ನಾಗಿ ತಿಳಿದುಕೊಂಡು ಮಾತನಾಡಿ ಎಂದು ನಾನು ಪದೇ ಪದೇ ಹೇಳುತ್ತಿರಬೇಕಾಗುತ್ತದೆ. ಮುಂಜಾನೆ ಎದ್ದು ಇಲ್ಲಿಗೆ ನೀವೆಲ್ಲರೂ ಬರುವಿರಿ. ನಾನು ಸಹ ಬರುತ್ತೇನೆ. ಹೇಗಿದ್ದೀರಾ? ಎಂದು ಕೇಳಿದರೆ ಅವರಿಗೆ ಬುದ್ಧಿ ಇಲ್ಲ ಎಂದು ಅರ್ಥ. ನಾವು ಆಸ್ಪತ್ರೆಯಲ್ಲಿ ಭೇಟಿ ಆಗುತ್ತಿಲ್ಲವಲ್ಲ. ಇಲ್ಲಿ ಧ್ಯಾನಕ್ಕಾಗಿ ಒಂದಾಗುತ್ತಿದ್ದೆವಲ್ಲವೆ. ಇಂತಹ ಬುದ್ಧಿ ಇಲ್ಲದ ಪ್ರಶ್ನೆ ಹಾಕಿದರೆ ಅವರಿಗೆ ಬುದ್ಧಿ ಇಲ್ಲ ಎಂದು ಅರ್ಥ. ನೀವು ಒಂದು ಬುದ್ಧಿವಂತಿಕೆಯ ಪದವನ್ನು ಉಪಯೋಗಿಸದಿದ್ದರೆ .. ಬುದ್ಧತ್ವವನ್ನು ಹೇಗೆ ತಲುಪುವಿರಿ. ಎಂದಿಗೂ ಯಾರನ್ನೂ ಹೇಗಿದ್ದೀರಾ ಎಂದು ಕೇಳಬೇಡಿ. ಈ ಪದವನ್ನು ನಾವು ಬ್ರಿಟಿಷರಿಂದ ಕಲಿತಿದ್ದೇವೆ. ಪ್ರತಿಯೊಂದು ಕ್ಷಣ, ಪ್ರತಿಯೊಂದು ಪದ, ಪ್ರತಿಯೊಂದು ಮುಂಜಾನೆ, ಪ್ರತಿಯೊಂದು ರಾತ್ರಿ ಅಷ್ಟೇ ಪ್ರಾಮುಖ್ಯತೆ ಇಂದ ಇರುತ್ತದೆ. ಪ್ರತಿಯೊಬ್ಬ ಮನುಷ್ಯ, ಇನ್ನೊಬ್ಬ ಮನುಷ್ಯನಷ್ಟೇ ಮುಖ್ಯಸ್ಥನಾಗಿರುತ್ತಾನೆ. ದೇವತೆಗಳು ಒಂದು ಮಾತು ಮಾತನಾಡಲು ಹೆದರುತ್ತಾರೆ. ಆದರೆ, ಮೂರ್ಖರು ವಟವಟ ಮಾತನಾಡುತ್ತಲೇ ಇರುತ್ತಾರೆ ತುಂಬಾ ಗೊತ್ತಿರುವಂತೆ.

ನಮ್ಮ ಮಾತು ನಮಗೆ ಕೇಳಿಸಿಕೊಳ್ಳಲು ಇಷ್ಟ, ಕನ್ನಡಿಯಲ್ಲಿ ನಮ್ಮ ಮುಖ ನಮಗೆ ನೋಡಿಕೊಳ್ಳಲು ಇಷ್ಟ. ನಾವು ನುಡಿಸಿದ ವಾದ್ಯಗಳನ್ನು ನಮಗೆ ಆಲಿಸಲು ಇಷ್ಟ. ಇದು ಸತ್ಯ ಸಂಗತಿ. ನಮ್ಮನ್ನು ನಾವು ಸಂರಕ್ಷಿಸಿಕೊಳ್ಳಲು ಇಷ್ಟ. ನಾನು ಸ್ನಾನಮಾಡಿ ಮನೆ ಬಿಟ್ಟು ಹೊರಗೆ ಹೋಗುವಾಗ ನಮ್ಮನ್ನು ನಾವು ಅಲಂಕರಿಸಿಕೊಳ್ಳುತ್ತೇವೆ, ಅಲಂಕರಿಸಿಕೊಳ್ಳಲೇಬೇಕು. ಆಗಲೇ ನಾವು ಇನ್ನೊಬ್ಬರನ್ನು ಭೇಟಿಆಗಲು ಹೋಗುತ್ತೇವೆ. ಸುಮ್ಮನೆ ಅಶುಚಿಯಾಗಿ ಅಲ್ಪಸ್ವಲ್ಪವಾದರೂ ಅಲಂಕರಿಸಿಕೊಳ್ಳದೆ ಹೊರಗೆ ಹೋಗುವುದಿಲ್ಲ. ಹಾಗೆ ನಾವು ಇತರರ ಮುಂದೆ ಹೋಗುವಾಗ ನಮ್ಮನ್ನು ನಾವು ಶುಚಿಮಾಡಿಕೊಂಡು, ಅಲಂಕರಿಸಿಕೊಂಡು ನಂತರವೇ ಮಾತನಾಡಬೇಕು. ಏನೂ ಗೊತ್ತಿಲ್ಲದೆ, ಏನೂ ತಿಳಿಯದೆ ಇತರರ ಜೊತೆ ಮಾತನಾಡಬಾರದು. ಹೊಟ್ಟೆ ಇದೆ ಅಂತ ಇಷ್ಟ ಬಂದ ಹಾಗೆ ಉಣ್ಣುತ್ತೇವಾ? ಹಸಿವೆ ಇದ್ದರೆ ಮಾತ್ರವೆ ಉಣ್ಣಬೇಕು. ಬಾಯಿ ಇದೆ ಅಂತ ವಟವಟ ಮಾತನಾಡುತ್ತಾರಾ? ತುಂಬಾ ಅವಶ್ಯಕತೆ ಇದ್ದರೆ ಮಾತ್ರವೆ ಬಾಯಿ ತೆಗೆಯಬೇಕು. ಹಸಿವೆ ಇದ್ದರೆ ಮಾತ್ರ ತಿನ್ನಬೇಕು. ಅತ್ಯವಶ್ಯಕತೆ ಇದ್ದರೆ ಮಾತ್ರ ಯೋಚನೆಮಾಡಿ. ಪಕ್ಕದ ಮನೆಯಲ್ಲಿ ಗಂಡಹೆಂಡರು ಜಗಳವಾಡಿದರೆ ನಮಗೇಕೆ? ಅದು ನಮಗೆ ಸಂಬಂಧಪಟ್ಟದ್ದಲ್ಲ. ನಾವು ಏಕೆ ಯೋಚಿಸಬೇಕು!

ನೀವು ಇನ್ನೊಬ್ಬರ ವಿಷಯಕ್ಕೆ ಮೂಗುತೊರಿಸಿಕೊಂಡು ಹೋದರೆ ನಿಮಗೆ ಬುದ್ಧಿ ಇಲ್ಲ ಎಂದು ಅರ್ಥ! ನೀವು ಇನ್ನೊಬ್ಬರನ್ನು ಗಮನಿಸುತ್ತಿದ್ದರೆ ನಿಮಗೆ ಬುದ್ಧಿ ಇಲ್ಲ ಎಂದು ಅರ್ಥ! ದಿನನಿತ್ಯ ಜೀವನದಲ್ಲೇ ನಿಮಗೆ ಸಾಮಾನ್ಯ ಬುದ್ಧಿ ಇಲ್ಲದಿದ್ದರೆ ಉತ್ತಮ ಮಟ್ಟದ ಆಧ್ಯಾತ್ಮಿಕ ಬುದ್ಧಿ ನಿಮಗೆ ಹೇಗೆ ಬರುತ್ತದೆ. ಕಣ್ಣಿಗೆ ಕಾಣದ ವಿಷಯಗಳು ಬಹಳಷ್ಟಿವೆ. ಅವೆಲ್ಲಾ ನಿಮಗೆ ತಿಳಿಯುವುದು ಹೇಗೆ. ಬುದ್ಧಿ ಎನ್ನುವುದು ಧ್ಯಾನದಿಂದ ಮಾತ್ರ ಸಿಗುತ್ತದೆ. ಯಾರು ಧ್ಯಾನಕ್ಕೆ ಬಂದಿಲ್ಲವೊ ಅವರು ಬುದ್ಧರಲ್ಲ. ಒಬ್ಬ ಬುದ್ಧ ಇನ್ನೊಬ್ಬ ಬುದ್ಧನ ಜೊತೆ ಅನುಕೂಲವಾಗಿ ಇರಬಲ್ಲ. ಧ್ಯಾನಿ ಅಲ್ಲದವರು, ಬುದ್ಧಿ ಇಲ್ಲದವನು. ಬುದ್ಧಿ ಹೊಂದಿದವನು ಹತ್ತಿರ ಬಂದರೆ ಅವನು ದೂರುವುದಿಲ್ಲ. ನಕ್ಕು ಸುಮ್ಮನಾಗುತ್ತಾನೆ. ಯಾರಾದರು ಬುದ್ಧ ಅಲ್ಲದವನ ಬಗ್ಗೆ ದೂರು (ಕಂಪ್ಲೈಂಟ್) ನೀಡಿದರೆ ಅವನು ಸಹ ಬುದ್ಧನಲ್ಲ ಎಂದು ಅರ್ಥ. ನೀವೇನಾದರು ಯಾರ ಬಗ್ಗೆಯಾದರು ದೂರಿದರೆ ನೀವು ಬುದ್ಧ ಅಲ್ಲ ಎಂದು ಅರ್ಥ! ಅದು ನೆನಪಿರಲಿ. ಜೀರೊ ಕಂಪ್ಲೈಂಟ್ಸ್ ಇರಬೇಕು. ಯಾರ ಬಗ್ಗೆಯೂ ಯಾವುದೂ ದೂರುಗಳಿಲ್ಲ, ಯಾವುದೂ ತೀರ್ಮಾನಗಳಿಲ್ಲ, ಯಾವುದೂ ಇದಿಷ್ಟೇ ಎನ್ನುವಂತಿಲ್ಲ.

ನಾನು ಯಾರನ್ನೂ ಜಡ್ಜ್ ಮಾಡುವುದಿಲ್ಲ, ಯಾರ ಬಗ್ಗೆಯೂ ಕಂಪ್ಲೈಂಟ್ ಮಾಡುವುದಿಲ್ಲ ಯಾರ ಬಗ್ಗೆ ಕನ್‌ಕ್ಲೂಜನ್‌ಗೆ ಬರುವುದಿಲ್ಲ. ನಿಮ್ಮನ್ನು ನೀವು ಸರಿಮಾಡಿಕೊಳ್ಳಲು ಇಷ್ಟಪಟ್ಟರೆ ನಾನು ನಿಮ್ಮನ್ನು ಸರಿ ಮಾಡುತ್ತೇನೆ. ಅಲ್ಲಿ judge ಮಾಡುವ ಪ್ರಶ್ನೆ ಇಲ್ಲ. ನೀವು ನನ್ನ ಹತ್ತಿರ ಬರದಿದ್ದರೆ ನಾನು care ಮಾಡುವುದಿಲ್ಲ. ನನ್ನ ಹತ್ತಿರ ಬಂದರೆ ಮಾತ್ರ ಖಂಡಿತಾ care ತೆಗೆದುಕೊಳ್ಳುತ್ತೇನೆ. ಏಕೆಂದರೆ, ನೀವು ನನ್ನ ಹತ್ತಿರ ಬಂದಿರುವಿರಿ. ಒಂದು ವೇಳೆ ನಿಮ್ಮಲ್ಲಿ ಯಾವುದೇ ದೂರಿಗಳಿಲ್ಲದಿದ್ದರೆ, ಯಾವುದೇ ನಿರ್ಣಯಗಳು, ತೀರ್ಮಾನಗಳು ಅಂದರೆ ಜಡ್ಜ್‌ಮೆಂಟ್‌ಗಳು ಇಲ್ಲದಿದ್ದರೆ, ಯಾವುದರ ಕುರಿತೂ ಇದಿಷ್ಟೇ ಎಂದು ನಿರ್ಣಯಕ್ಕೆ ಬರುವ ಗುಣವಿಲ್ಲದಿದ್ದರೆ ಖಂಡಿತಾ ನೀವು ಒಬ್ಬ ಹೀರೋ, ನೀವೇ ನಿಜವಾದ ಬುದ್ಧ. ನೀವು ನಿಜವಾದ ಬುದ್ಧತ್ವ ಉಳ್ಳವರು ಎಂದು ಅರ್ಥ.

 

"ಸತ್ಯಂ .. ಶಿವಂ .. ಸುಂದರಂ"

ಜನ ನನ್ನ ಹತ್ತಿರ ಬಂದು ಕೇಳುತ್ತಾರೆ. ಸ್ವಾಮಿಜಿ ನಾವು ಏಕೆ ಜೀವಿಸಿದ್ದೇವೆ. ನಮ್ಮ ಈ ಜೀವನದ ಧ್ಯೇಯವೇನು. ಸದಾ ಈ ಮುಖ್ಯವಾದ ಪ್ರಶ್ನೆಯನ್ನೇ ಕೇಳುತ್ತಿರುತ್ತಾರೆ. ನಾವು ಏಕೆ ಬದುಕಿದ್ದೇವೆ ಎಂದು. ಏಕೆ ನಾವು ಈ ಇಡ್ಲೀ, ವಡೆ, ದೊಸೆ ಮುಂತಾದವನ್ನು ತಿನ್ನುತ್ತಿದ್ದೇವೆ? ಇವೆಲ್ಲಾ ತಿನ್ನಲಿಕ್ಕಾಗಿ ಜೀವಿಸುತ್ತಿದ್ದೇವಾ? ಇವೆಲ್ಲಾ ತಿಂದು ಏನು ಮಾಡಬೇಕಾಗಿದೆ? ಒಂದು ಪಶು ಮತ್ತು ಮಾನವನಲ್ಲಿ ಇರುವ ಅಂತರವೇನು? ಅವು ತಿನ್ನುವುದನ್ನೇ ನಾವು ತಿನ್ನುತ್ತಿದವೆ, ಪಶುಗಳು ತಮ್ಮ ಮರಿಗಳಿಗೆ ಜನ್ಮನೀಡುತ್ತಿವೆ. ನಾವು ಸಹ ನಮ್ಮ ಮಕ್ಕಳಿಗೆ ಜನ್ಮ ನೀಡುತ್ತಿದ್ದೇವೆ. ಮಾನವನಿಗೂ ಮತ್ತು ಪಶುವಿಗೂ ಇರುವ ವ್ಯತ್ಯಾಸವೇನು ಎಂದರೇ "ಸತ್ಯಂ .. ಶಿವಂ .. ಸುಂದರಂ!" ಈ ವ್ಯತ್ಯಾಸ ಇರಲೇಬೇಕು. ಮನುಷ್ಯನಲ್ಲಿ ಈ ಸತ್ಯಂ .. ಶಿವಂ .. ಸುಂದರಂ .. ಇಲ್ಲದಿದ್ದರೆ ಅವರು ಪಶು ಸಮಾನ. ಮಾನವ ಪಶುತ್ವದಿಂದ ಮಾನವತೆಗೆ ಬದಲಾಗಲಿಲ್ಲ ಎಂದು ಅರ್ಥ.

ಒಂದು ಕಡೆ ಪಶು .. ಮತ್ತೂಂದು ಕಡೆ ಪಶುಪತಿ .. ಪಶುವಿನಲ್ಲೂ ಮತ್ತು ಪಶುಪತಿಯಲ್ಲೂ ಊಟ, ನಿದ್ರೆ, ಮೈಥುನ ಮುಂತಾದವು ಒಂದೇ ರೀತಿ ಇರುತ್ತದೆ. ಆದರೆ, ಪಶುಪತಿಯಲ್ಲಿ ಸತ್ಯಂ .. ಇದೆ, ಶಿವಂ .. ಇದೆ .. ಸುಂದರಂ .. ಇದೆ!

ಸತ್ಯಂ ಎಂದರೇ ನಿತ್ಯವಾಗಿರುವುದು ಸತ್ಯ! ಸದಾ ಇರುವುದು ಸತ್ಯ! ಯಾವುದು ಅನಿತ್ಯವಾಗಿರುವ ಯಾವುದೇ ಆದರೂ ಅದು ಅಸತ್ಯ ಎನ್ನಿಸಿಕೊಳ್ಳುತ್ತದೆ. ಅಂದರೆ ಅರ್ಥ ಸತ್ಯದ ನಿರ್ವಚನೆ ನಿತ್ಯವಾಗಿರುವುದು. ಉದಾಹರಣೆಗೆ ಈ ಶರೀರ ನಿತ್ಯವಲ್ಲ! ಇದು ನಾವು ಹುಟ್ಟುವುದಕ್ಕಿಂತಾ ಮುಂಚೆ ಇರಲಿಲ್ಲ ಮತ್ತು ನಾವು ಸತ್ತನಂತರ ಇರುವುದಿಲ್ಲ. ಆದರೆ, ಈಗ ಇದೆ. ಮಧ್ಯದಲ್ಲಿ ಬಂದು ಹೋಗುವ ಈ ಶರೀರ ಸತ್ಯವಲ್ಲ. ರೂಪ ಇರುವುದು ಸತ್ಯವಲ್ಲ. ಈ ಶರೀರ, ಹೆಸರೂ ಎರಡೂ ಸತ್ಯವಲ್ಲ ಈ ಶರೀರ ಬದಲಾಗುತ್ತಿರುತ್ತದೆ. ಬದಲಾವಣೆ ಇರುವುದು ಯಾವುದೂ ಸತ್ಯವಲ್ಲ. ಯಾವುದಕ್ಕೆ ಬದಲಾವಣೆ ಎನ್ನುವುದು ಉಂಟಾಗುವುದಿಲ್ಲವೊ ಅದು ಸತ್ಯ.

ನಾನು ಸತ್ಯಕ್ಕಾಗಿ ಹುಡುಕುತ್ತಿದ್ದೇನೆ ಎಂದರೆ ನಾನು ಬದಲಾವಣೆ ಎನ್ನುವುದು ಯಾವುದಕ್ಕೆ ಇರುವುದಿಲ್ಲವೊ ಅದಕ್ಕಾಗಿ ನಾನು ಹುಡುಕಾಟ ನಡೆಸುತ್ತಿದ್ದೇನೆ. ಬದಲಾವಣೆ ಇಲ್ಲದ್ದು ಯಾವುದು? ಎಂದರೆ, ಅದೇ ನಮ್ಮ ಆತ್ಮ. ನಿಮ್ಮ ಶರೀರದಲ್ಲಿ ಸದಾ ಬದಲಾವಣೆ ಇರುತ್ತದೆ, ನಿಮ್ಮ ಮನಸ್ಸಿನಲ್ಲಿ ಸದಾ ಬದಲಾವಣೆ ಇರುತ್ತದೆ, ಬುದ್ಧಿ ಎನ್ನುವುದು ಸದಾ ಇಮ್ಮಡಿಯಾಗುತ್ತಿರುತ್ತದೆ. ಆದರೆ, ನಿಮ್ಮ ಆತ್ಮ ಮಾತ್ರ ಹಾಗೇ ಇರುತ್ತದೆ. ಅದರಲ್ಲಿ ಬದಲಾವಣೆ ಎನ್ನುವುದು ಇರುವುದೇ ಇಲ್ಲ. ಏನೂ ಇಲ್ಲ, ಆದರೆ ಎಲ್ಲಾ ಇದೆ .. ಅದೇ ಆತ್ಮ!

ಬೌದ್ಧ ಧರ್ಮಾನುಯಾಯಿಗಳು ಎಲ್ಲಾ ಶೂನ್ಯ ಎಂದು ಹೇಳುತ್ತಾರೆ. ಆದರೆ, ಹಿಂದು ಧರ್ಮೀಯರು ಎಲ್ಲಾ ಪೂರ್ಣ ಎಂದು ಹೇಳುತ್ತಾರೆ. ಎರಡರ ಅರ್ಥ ಒಂದೇ. ಇದೇ ಸತ್ಯ. ನೀವು ಆತ್ಮ ಎಂದರೆ ಶೂನ್ಯ ಎಂದುಕೊಂಡರೆ ಅದು ಅರ್ಥದಷ್ಟು ಸತ್ಯ .. ಒಂದು ವೇಳೆ ನೀವು ಆತ್ಮ ಎನ್ನುವುದು ಪೂರ್ಣ ಎಂದುಕೊಂಡರೆ ಅದೂ ಅರ್ಥದಷ್ಟು ಸತ್ಯ. ಎರಡೂ ಸೇರಿದರೇನೆ ಪೂರ್ಣ ಸತ್ಯವಾಗುತ್ತದೆ. ಬುದ್ಧತ್ವ ಇಲ್ಲದೇ ಹಿಂದುತ್ವ ಪೂರ್ಣವಲ್ಲ ಹಾಗೇ ಹಿಂದುತ್ವ ಇಲ್ಲದೇ ಬುದ್ಧತ್ವ ಪೂರ್ಣವಲ್ಲ. ಪಿರಮಿಡ್ ಮಾಸ್ಟರ‍್ಸ್ ಎಂದರೆ ಹಿಂದುಯಿಸಂ ಮತ್ತು ಬುದ್ಧಿಸಂ ಎರಡರ ಮಿಲನ.

ಬುದ್ಧಿಸಂ + ಹಿಂದುಯಿಸಂ = ಪಿರಮಿಡಿಸಂ .. ಅದಕ್ಕೆ ಪಿರಮಿಡ್ ಮಾಸ್ಟರ್‌ಗಳೆಲ್ಲರೂ ಎಲ್ಲರೂ ಈ ಪೃಥ್ವಿಯ ಮೇಲೆ ಸದಾ ಸಂತೋಷವಾಗಿ, ಆನಂದವಾಗಿ ಇದ್ದಾರೆ.

ಪೂರ್ಣ ಬುದ್ಧಿಸಂಅನ್ನು ಅನುಸರಿಸುವವರೂ ಮತ್ತು ಪೂರ್ಣ ಹಿಂದೂಯಿಸಂ ಅನ್ನು ಅನುಸರಿಸುವವರೂ ಇಬ್ಬರೂ ನಮ್ಮನ್ನು ಅರ್ಥಮಾಡಿಕೊಳ್ಳಲಾರರು. ನಾವು ಅವರಿಬ್ಬರಿಗಿಂತಾ ತುಂಬಾ ಉತ್ತಮ ಹಂತದಲ್ಲಿ (ಮಟ್ಟದಲ್ಲಿ) ಇದ್ದೇವೆ! ನಾಣ್ಯದ ಒಂದು ಮುಖ ಬುದ್ಧಿಜಮ್ ಆದರೆ ಇನ್ನೊಂದು ಮುಖ ಹಿಂದುಯಿಸಂ! ಆ ಎರಡು ಸೇರಿದರೇ ಸತ್ಯಂ .. ಶಿವಂ .. ಸುಂದರಂ!

ನಾವು ಮೊದಲು ಸತ್ಯವನ್ನು ತಿಳಿದುಕೊಳ್ಳುತ್ತೇವೆ .. ತಕ್ಷಣ ನಮಗೆ ಶಿವತತ್ವ ಬರುತ್ತದೆ. ಅಂದರೆ ಆನಂದ, ಸಂತೋಷ ಸಂಭ್ರಮ .. ಸಮಾರಂಭ .. ನೃತ್ಯ .. ಶಿವತಾಂಡವ! ಸತ್ಯದಲ್ಲಿ ಲೀನವಾದ ತಕ್ಷಣ ಶರೀರ ಶಿವತಾಂಡವವಾಡುತ್ತದೆ .. ಸಂತೋಷದಿಂದ ಕುಣಿದುಕುಪ್ಪಳಿಸುತ್ತದೆ. ಸೂರ್ಯ ಇದ್ದು ಸೂರ್ಯ ಕಿರಣ ಪ್ರಸಾರವಾಗದೆ ಇರುತ್ತದೆಯೇ..? ಹಾಗೆ ಸತ್ಯವಿಲ್ಲದೆ ಶಿವತತ್ವ ಅಂದರೆ ಆ ಆನಂದತತ್ವ ಬರುತ್ತದೆಯೆ? ಎಂದಿಗೂ ಇಲ್ಲ. ಆದ್ದರಿಂದ, ಸತ್ಯದಿಂದ ಶಿವತತ್ವ ತನ್ನಷ್ಟಕ್ಕೆ ತಾನೆ ಹೊರಹೊಮ್ಮುತ್ತದೆ. ಒಂದು ಚಿಕ್ಕ ಮಗು ಮುಗುಳ್ನಗು ಬೀರುತ್ತದೆ. ಅದು ನೋಡಲು ಎಷ್ಟು ಚೆನ್ನ. ಅದೇ ಸುಂದರಂ.

ಪುಟ್ಟ ಮಕ್ಕಳು ನಕ್ಕರೂ ಸುಂದರ .. ಹಿರಿಯರು ನಕ್ಕರು ಸುಂದರ ..! ಸತ್ಯ ಎನ್ನುವುದು ಧ್ಯಾನದಿಂದ, ಸ್ವಾಧ್ಯಾಯದಿಂದ ಮತ್ತು ಸಜ್ಜನಸಾಂಗತ್ಯದಿಂದ ಅರಿವಾಗುತ್ತದೆ. ಕೇವಲ ಧ್ಯಾನದಿಂದ 33.3% ಸತ್ಯವನ್ನು ಅರಿಯಬಲ್ಲೆವು, ಕೇವಲ ಸ್ವಾಧ್ಯಾಯದಿಂದ 33.3% ಸತ್ಯವನ್ನು ಅರಿಯಬಲ್ಲೆವು. ಕೇವಲ ಸಜ್ಜನಸಾಂಗತ್ಯದಿಂದ 34% ಸತ್ಯವನ್ನು ಅರಿಯಬಲ್ಲೆವು. ಈ ಮೂರರ ಅಭ್ಯಾಸ ಮಾಡುವುದರಿಂದ ಪೂರ್ಣ ಸತ್ಯವನ್ನು ಅರಿಯಬಲ್ಲೆವು.

ಧ್ಯಾನ ಅಂದರೆ ಕಣ್ಣುಗಳನ್ನು ಮುಚ್ಚಿಕೊಂಡು, ಕೈಕಾಲುಗಳನ್ನು ಕಟ್ಟಿಕೊಂಡು ನಮ್ಮ ಉಸಿರಾಟವನ್ನು ಗಮನಿಸುತ್ತಿರಬೇಕು. ದಿನಕ್ಕೆ 24 ಗಂಟೆಗಳಿವೆ. ಏನು ಮಾಡುವುದು. ಆದಷ್ಟು ಹೆಚ್ಚು ಸಮಯ ಧ್ಯಾನ ಮಾಡುತ್ತಿರಬೇಕು. ನನ್ನ ಗತಜನ್ಮ ವೊಂದರಲ್ಲಿ ಒಂದು ಜನ್ಮ ನಾನು 200 ವರ್ಷಗಳ ಕಾಲ ಧ್ಯಾನ ಮಾಡಿದೆ. ನೀವು ಏಕೆ ಧ್ಯಾನಕ್ಕೆ ಕುಳಿತುಕೊಳ್ಳುವುದಿಲ್ಲ? 200 ವರ್ಷಗಳಲ್ಲದಿದ್ದರೂ 200 ದಿನಗಳಲ್ಲದಿದ್ದರೂ 2 ಗಂಟೆಗಳಾದರೂ (ದಿನಕ್ಕೆ) ಧ್ಯಾನಮಾಡಿ. ಹನಿಹನಿ ಸೇರಿದರೇ ಸಮುದ್ರ ಆಗುತ್ತದಲ್ಲವೇ? ಧ್ಯಾನ, ಸ್ವಾಧ್ಯಾಯ, ಸಜ್ಜನಸಾಂಗತ್ಯ ಮಾಡಿದರೆ ಮಾತ್ರವೇ ಪೂರ್ಣಸತ್ಯದ ಅರಿವಾಗುವುದು. "ತ್ರಿಜಗತಿ ಸಜ್ಜನ ಸಂಗತಿ ರೇಖ ಭವತಿ ಭವಾರ್ನವ ತರಣೆ ನೌಕ" .. ಸಜ್ಜನಸಾಂಗತ್ಯವನ್ನು ಕುರಿತು ಆದಿಶಂಕರಾಚಾರ್ಯರು ಎಷ್ಟು ಚೆನ್ನಾಗಿ ವಿವರಿಸಿದ್ದಾರಲ್ಲವೇ! ಎಲ್ಲರ ಅನುಭವಗಳನ್ನು ಕೇಳಿಸಿಕೊಳ್ಳಬೇಕು!

"ತಪಃ ಸ್ವಾಧ್ಯಾಯ ಈಶ್ವರ ಪ್ರಣಿಧಾನೇನ ಕ್ರಿಯಾ ಯೋಗಃ"
ಸ್ವಾಧ್ಯಾಯದ ಮಹತ್ವವನ್ನು ಎಷ್ಟು ಚೆನ್ನಾಗಿ ವಿವರಿಸಿದ್ದಾರಲ್ಲವೇ! ಸ್ವಾಧ್ಯಾಯ ಎಂದರೆ ಎಲ್ಲಾ ಮಾಸ್ಟರ್‌ಗಳ ಪುಸ್ತಕಗಳನ್ನೂ ಓದಬೇಕು! ಎಲ್ಲಾ ಪುಸ್ತಕಗಳನ್ನೂ ಓದಬೇಕು, ಎಲ್ಲರ ಅನುಭವಗಳನ್ನು ಕೇಳಿಸಿಕೊಳ್ಳಬೇಕು. ಅನಂತರ ನಮಗೆ ಮನ ಬಂದಂತೆ ನಡೆದುಕೊಳ್ಳಬೇಕು. ‘ಸಬ್ ಕಾ ಸುನ್‌ನಾ ಫಿರ್ ಅಪನಾ ಕರ್‌ನಾ!’ ಪಿರಮಿಡ್ ಮಾಸ್ಟರ್ ಎಂದರೆ ತುಂಬಾ ತುಂಬಾ ಧ್ಯಾನ ಮಾಡುತ್ತಾನೆ, ಅನೇಕಾನೇಕ ಪುಸ್ತಕಗಳನ್ನು ಓದುತ್ತಾನೆ, ಅನೇಕಾನೇಕ ಅನುಭವಗಳನ್ನು ಕೇಳಿಸಿಕೊಳ್ಳುತ್ತಾನೆ! ಪಿರಮಿಡ್ ಮಾಸ್ಟರ್‌ಗಳ ಮನಸ್ಸು ೩೬೦೦ ಕೋನಗಳಲ್ಲಿಯೂ ತೆರೆದಿರುತ್ತದೆ. ನಾವು ಪ್ರತಿಯೊಬ್ಬರ ಪ್ರವಚನ ಕೇಳಿಸಿಕೊಳ್ಳಬೇಕು.

ನಾವು ಅನೇಕಾನೇಕ ಜನ್ಮಗಳಿಂದ ಸುದೀರ್ಘ ಪ್ರಯಾಣ ಮಾಡಿ ಬಂದಿದ್ದೇವೆ. ಒಂದು ಜನ್ಮದಲ್ಲಿ ಹಿಂದುವಾಗಿ, ಒಂದು ಜನ್ಮದಲ್ಲಿ ಜುಡಾಯಿಸಂ ಅನುಯಾಯಿಯಾಗಿ, ಇನ್ನೊಂದು ಜನ್ಮದಲ್ಲಿ ಮುಸ್ಲಿಮ್, ಒಂದು ಜನ್ಮದಲ್ಲಿ ಸಿರಿವಂತರಾಗಿ ಮತ್ತೊಂದು ಜನ್ಮದಲ್ಲಿ ಬಡವರಾಗಿ, ಒಂದು ಜನ್ಮದಲ್ಲಿ ಸ್ತ್ರೀಯಾಗಿ, ಇನ್ನೊಂದು ಜನ್ಮದಲ್ಲಿ ಪುರುಷರಾಗಿ ಜನ್ಮ ತಾಳಿದ್ದೇವೆ. ಒಂದು ಜನ್ಮದಲ್ಲಿ ಅನೇಕ ಮಕ್ಕಳಿಗೆ ತಾಯಿ ಆಗಿದ್ದೇವೆ. ಮತ್ತೊಂದು ಜನ್ಮದಲ್ಲಿ ತಾಯಿತನವೇ ಪಡೆದಿರುವುದಿಲ್ಲ. ಎಲ್ಲರೂ ಎಲ್ಲಾ ಅನುಭವಗಳನ್ನೂ ಪಡೆಯಬೇಕು. ಬಹುನಾಂ ಜನ್ಮನಾಮಂತೆ ಜ್ಞಾನವಾನ್ ಮಾಂ ಪ್ರಪತ್ಯತೆ ಅನೇಕಾನೇಕ ಜನ್ಮಗಳ ನಂತರ ಒಬ್ಬ ಜ್ಞಾನಿ ತಾನು ಶಿವೋಹಂ ಎಂದು ಕಂಡು ಹಿಡಿದುಕೊಳ್ಳುತ್ತಾನೆ ಸತ್ಯೋಹಂ, ಸುಂದರೋಹಂ ಎಂದು ತನ್ನನ್ನು ತಾನು ಅರಿತುಕೊಳ್ಳುತ್ತಾನೆ.

"ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ
ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ"
ಹೇ ಅರ್ಜುನ ನೀನು, ನಾನು ಅನೇಕಾನೇಕ ಜನ್ಮಗಳನ್ನು ಪಡೆದಿದ್ದೇವೆ. ಆದರೆ, ಆ ಬಗ್ಗೆ ನಿನಗೆ ಏನೂ ಗೊತ್ತಿಲ್ಲ. ಆದರೆ, ನನಗೆ ಎಲ್ಲಾ ಗೊತ್ತಿದೆ. ಏಕೆಂದರೆ, ನಾನು ಅನೇಕ ಜನ್ಮಗಳಿಂದ ಧ್ಯಾನ ಮಾಡುತ್ತಿದ್ದೇನೆ. ನೀನು ಧ್ಯಾನ ಮಾಡಿಲ್ಲ. ಆದ್ದರಿಂದ, ನಿನಗೆ ಏನೂ ನೆನಪಿಲ್ಲ. ಇಷ್ಟೆ ವ್ಯತ್ಯಾಸ! ನೀವು ಸಹ ಸಂಜಯ್‌ಕಿಂಗ್ ಅವರ ಹಾಗೆ ಸಿತಾರ್ ಅಭ್ಯಾಸ ಮಾಡಿದರೆ ಅವರಂತೆ ನುಡಿಸಬಲ್ಲಿರಿ. ಸಿತಾರ್ ಅಭ್ಯಾಸ ಮಾಡದಿದ್ದರೇ ಎಂದಿಗೂ ನುಡಿಸಲಾರಿರಿ. ಅಭ್ಯಾಸ ಬಲದಿಂದ ಅವರಿಗೆ ಸಿತಾರ್ ನುಡಿಸಲು ಬಂದಿದೆ ಅಲ್ಲವೇ!

"ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್ದ ಢಮ್ ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್"
ಹೇ! ಕೃಷ್ಣ ನೀವು ಸದಾ ಮನಸ್ಸನ್ನು ವಶ ಮಾಡಿಕೊ ಎಂದು ಹೇಳುವಿರಿ. ಆದರೆ, ಈ ಮನಸ್ಸು ಗಾಳಿಯ ಹಾಗೆ ತುಂಬಾ ಚಂಚಲ. ವಶಮಾಡಿಕೊಳ್ಳುವುದು ಹೇಗೆ? ಎಂದು ಕೇಳಿದನು ಅರ್ಜುನ.

ಅದು ನಿಜವೇ. ಆದರೆ, ಅಭ್ಯಾಸ ಬಲದಿಂದ ಎಲ್ಲವೂ ಸಾಧ್ಯ. ಆ ಧ್ಯಾನ ಮಾಡುವ ಸಮಯದಲ್ಲಿ ವೈರಾಗ್ಯದಿಂದ ಇರು. ಅಂದರೆ ಭೋಗಲಾಲಸೆ ಬೇಡ. ಉದಾಹರಣೆಗೆ ಪರೀಕ್ಷೆಗಳು ಬಂದಾಗ ನಾವು ಸಿನಿಮಾ ನೋಡುವುದಿಲ್ಲ. ಆದರೆ, ಪರೀಕ್ಷೆಗಳು ಮುಗಿದ ನಂತರ ನಾವು ಸಿನಿಮಾ ನೋಡಲು ಹೋಗುತ್ತೇವೆ. ಹಾಗೆ ಧ್ಯಾನ ಸಮಯದಲ್ಲಿ ವೈರಾಗ್ಯ, ನಂತರ ವೈಭೋಗ! ಇದನ್ನೆ ತಾತ್ಕಾಲಿಕ ವೈರಾಗ್ಯ ಎಂದು ಹೇಳಿದ್ದಾರೆ ವಿನಹ, ಜೀವನ ಪರ್ಯಂತ ವೈರಾಗ್ಯದಿಂದ ಇರಿ ಎಂದು ಯಾವ ದೇವರೂ ಹೇಳಲಿಲ್ಲ.

ಪತಂಜಲಿ ಮಹಾಶಯರು "ಯೋಗಃ ಚಿತ್ತವೃತ್ತಿ ನಿರೋಧಃ" ಎಂದು ಹೇಳಿದರು. "ಅಭ್ಯಾಸ ವೈರಾಗ್ಯಾಮ ತಂ ನಿರೋಧಃ"

ಧ್ಯಾನದಿಂದ ಆತ್ಮಕ್ಕೆ ಶಕ್ತಿ ಬರುತ್ತದೆ, ಸ್ವಾಧ್ಯಾಯದಿಂದ ಬುದ್ಧಿ ವಿಕಾಸಗೊಳ್ಳುತ್ತದೆ ಮತ್ತು ಸಜ್ಜನಸಾಂಗತ್ಯದಿಂದ ಹೃದಯ ವಿಶಾಲವಾಗುತ್ತದೆ. ಯಾರು ಬೇರೆಯವರ ಅನುಭವಗಳನ್ನು ಕೇಳಿಸಿಕೊಳ್ಳುವುದಿಲ್ಲವೊ ಅವರ ಹೃದಯ ವಿಶಾಲವಾಗಿರುವುದಿಲ್ಲ (ಸಂಕುಚಿತವಾಗಿರುತ್ತದೆ).

ಧ್ಯಾನ, ಸ್ವಾಧ್ಯಾಯ, ಸಜ್ಜನಸಾಂಗತ್ಯ 100% ಇದ್ದರೇನೆ ನೀವು ಈ ಜನ್ಮಪರಂಪರೆಯಿಂದ ತಪ್ಪಿಸಿಕೊಳ್ಳಬಹುದು. ಇದು ಸತ್ಯದ ಸಿಲಬಸ್. ನೀವು 10% ಸತ್ಯದಲ್ಲಿದ್ದರೇ ಶಿವಂ 10% ಇರುತ್ತದೆ. ಒಂದುವೇಳೆ ನೀವು 50% ಸತ್ಯದಲ್ಲಿದ್ದರೆ ಶಿವಂ ಸಹ 50% ಇರುತ್ತದೆ. ಶಿವಂ ಎನ್ನುವುದು ಸತ್ಯದ ನೆರಳು ಇದ್ದಂತೆ. ಶಿವಂ ಅಂದರೆ ಆನಂದ! ನಿಮಗೆ 100% ಶಿವಂ ಬೇಕಾದರೆ ನೀವು 100% ಸತ್ಯದಲ್ಲಿ ಇರಬೇಕು. ಸುಂದರಂ ಎನ್ನುವುದು ಶಿವಂನ ನೆರಳು. ನೀವು ಸದಾ ಶಿವಂನಲ್ಲಿ ಇದ್ದರೆ ನಿಮ್ಮ ಮುಖದಲ್ಲಿ ವರ್ಚಸ್ಸು ಬರುತ್ತದೆ. ಆಗ ನೀವು ಸುಂದರವಾಗಿ ಕಾಣುವಿರಿ. ಕ್ರೀಮ್ ಹೆಚ್ಚುವುದರಿಂದ ಸುಂದರವಾಗಿ ಕಾಣುವುದಿಲ್ಲ. ಶಿವಂನಲ್ಲಿ ಇರುವುದರಿಂದ ನೀವು ಸುಂದರವಾಗಿ ಕಾಣುವಿರಿ.

Go to top