ಮುಕ್ತಿ ಮಾರ್ಗ

ಈ ಭೂಮಿಯ ಮೇಲೆ ಜನ್ಮತಾಳಿದವರೆಲ್ಲಾ ಪ್ರತಿಕ್ಷಣ ಆನಂದದಿಂದ ಜೀವಿಸಬೇಕೆನ್ನುವುದೇ ಸೃಷ್ಟಿಯ ನಿಯಮ. ಹಾಗೆ ಜೀವಿಸಬೇಕಾದರೆ ನಮ್ಮ ಶರೀರ ಎಂದೆಂದಿಗೂ ಆರೋಗ್ಯವಾಗಿ, ತೇಜೋಮಯವಾಗಿ ಇರಬೇಕು; ನಮ್ಮ ಮನಸ್ಸು ಎಂದಿಗೂ ಹಾಯಾಗಿ, ಶಾಂತವಾಗಿರಬೇಕು; ನಮ್ಮ ಬುದ್ಧಿ ಸದಾ ಖಚಿತವಾಗಿ, ಸತ್ಯವನ್ನು ತೋರಿಸುವಂತಿರಬೇಕು.

ಯಾವಾಗ ನಮ್ಮ ಬುದ್ಧಿ ಖಚಿತವಾಗಿ, ಸ್ಥಿರವಾಗಿರುವುದಿಲ್ಲವೋ .. ಸತ್ಯವನ್ನು ದರ್ಶಿಸುವಂತಿರುವುದಿಲ್ಲವೊ .. ಆಗ ನಮ್ಮ ಮನಸ್ಸು ಮಲಿನವಾಗಿ, ಆಶುಚಿಯಾಗಿರುತ್ತದೆ. ಹಾಗೆ ಮಲಿನವಾದ, ಅಶುಚಿಯಾದ ಮನಸ್ಸಿನ ಪ್ರಭಾವವು ಶರೀರದ ಮೇಲೆ ಬಿದ್ದು .. ಶರೀರ ಅನೇಕ ರೋಗಗಳಿಗೆ ಆವಾಸಸ್ಥಾನವಾಗಿ .. ನಮಗೆ ಅನೇಕಾನೇಕ ದುಃಖಗಳನ್ನು ಉಂಟುಮಾಡುತ್ತದೆ. ಜನ್ಮಜನ್ಮಗಳಿಂದ ನಡೆಯುತ್ತಿರುವ ತಂತ್ರ ಇದೇ.

ಇಂತಹ ಅನೇಕಾನೇಕ ದುಃಖಗಳಿಂದ ನಾವು ತಕ್ಷಣ ಬಿಡುಗಡೆ ಹೊಂದಬೇಕು ಮತ್ತು ಆ ಬಿಡುಗಡೆಯನ್ನೇ ಮುಕ್ತಿ ಎನ್ನುತ್ತೇವೆ. ಮುಕ್ತಿ ಎಂದರೂ ಮೋಕ್ಷ ಎಂದರೂ, ನಿಶ್ರೇಯಸ್ಸು ಎಂದರೂ, ‘ಸಾಲ್ವೇಷನ್’ ಎಂದರೂ, ಅಪವರ್ಗ ಎಂದರೂ - ಎಲ್ಲವುಗಳ ಅರ್ಥವೇನೆಂದರೆ ’ತಕ್ಷಣ ಬಿಡುಗಡೆಹೊಂದುವುದು’.

ನಾವು ಶಾರೀರಿಕಪರವಾದ ರೋಗಗಳಿಂದ ಬಿಡುಗಡೆ ಹೊಂದಬೇಕು; ಮಾನಸಿಕ ಪರವಾದ ರೋಗಗಳಿಂದ ಬಿಡುಗಡೆ ಹೊಂದಬೇಕು; ಬುದ್ಧಿಪರವಾದ ಮಾಂದ್ಯದಿಂದ ಬಿಡುಗಡೆ ಹೊಂದಬೇಕು. ಇವೆಲ್ಲಾ ಕೂಡಾ ಶಾಶ್ವತವಾಗಿ ಬುಡಸಮೇತವಾಗಿ ಹೋಗಬೇಕು. ಇಂತಹ ಶಾಶ್ವತವಾದ ಮುಕ್ತಿ ಮಾತ್ರವೇ, ದುಃಖದಲ್ಲಿ ಬಿದ್ದು ಒದ್ದಾಡುತ್ತಿರುವ ನಮ್ಮನ್ನು ಜನ್ಮಪರಂಪರೆಯ ಚಕ್ರದಿಂದ ಹೊರ ಬರುವಂತೆ ಮಾಡುತ್ತದೆ.

ಪ್ರಾಚೀನ ಭಾರತೀಯ ಸಂಪ್ರದಾಯಕ್ಕೆ ಸೇರಿದ ಕಪಿಲ ಮಹಾಋಷಿಯು ”ತ್ರಿವಿಧ ದುಃಖ ಅತ್ಯಂತ್ಯ ನಿವೃತ್ತಿಃ ಅತ್ಯಂತ ಪುರುಷಾರ್ಥ” ಎಂದರು. ಅಂದರೆ .. ಚತುರ್ವಿಧ ಪುರುಷಾರ್ಥಗಳಾದ ಕಾಮ, ಅರ್ಥ, ಧರ್ಮ, ಮೋಕ್ಷಗಳಲ್ಲಿರುವ ನಾಲ್ಕನೆಯ ಪುರುಷಾರ್ಥವಾದ ‘ಮೋಕ್ಷ’ ಎನ್ನುವುದು ನಿಮ್ಮನ್ನು ತ್ರಿವಿಧ ದುಃಖಗಳಿಂದ ಪೂರ್ಣವಾಗಿ ಬಿಡುಗಡೆ ಮಾಡುತ್ತದೆ. ಆದ್ದರಿಂದ, ಅದೇ ಅತ್ಯಂತ ಶ್ರೇಷ್ಠವಾದ ಪುರುಷಾರ್ಥ ಎಂದು ಅವರ ಅಭಿಪ್ರಾಯ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣಪರಮಾತ್ಮನು ಕೂಡಾ ತ್ರೈಗುಣ್ಯ ವಿಷಯಾ ವೇದಾ ನಿಸ್ತ್ರೈಗುಣ್ಯೋಭವಾರ್ಜುನ ಎನ್ನುತ್ತಾ ಅರ್ಜುನಾ, ನೀನು ಮೂರು ಗುಣಗಳಿಂದ ಒಂದಾಗಿರುವೆ. ಆದ್ದರಿಂದ, ಮೊದಲು ನೀನು ಗುಣಾತೀತನಾಗು. ತಮೋಗುಣದಿಂದ ವಿಮುಕ್ತಿ ಹೊಂದು; ರಜೋಗುಣದಿಂದ ವಿಮುಕ್ತಿ ಹೊಂದು; ಸಾತ್ವಿಕ ಗುಣದಿಂದ ಕೂಡಾ ವಿಮುಕ್ತಿ ಹೊಂದಿ ಗುಣಾತೀತನಾಗು. ಆಗಲೇ ನೀನು ಮೂರು ಬಗೆಯ ದುಃಖಗಳಿಂದ ಹೊರಬರುವೆ! ಎನ್ನುತ್ತಾ ಅರ್ಜುನನಿಗೆ ಹೇಳುವ ಮೂಲಕ ಸಕಲ ಮನುಕುಲಕ್ಕೆ ದಿವ್ಯಸಂದೇಶವನ್ನು ನೀಡಿದರು.

ಆದ್ದರಿಂದ, ನಾವೆಲ್ಲರೂ ಸಹ ಮೂರು ಬಗೆಯ ಗುಣದೋಷಗಳಿಂದ ಕೂಡಿದ ದುಃಖಗಳು, ಅಂದರೆ, ಶಾರೀರಿಕ ಪರವಾದ ತಮೋಗುಣ ದೋಷ ದುಃಖಗಳಿಂದ, ಮಾನಸಿಕ ಪರವಾದ ರಜೋಗುಣ ದೋಷ ದುಃಖಗಳಿಂದ ಮತ್ತು ಬುದ್ಧಿಪರವಾದ ಸತ್ವಗುಣ ದೋಷ ದುಃಖಗಳಿಂದ ಹೊರಬರಬೇಕು.

ಶಾರೀರಿಕಪರವಾದ ದುಃಖಗಳು, ಅಂದರೆ .. ತಲೆನೋವಿನಿಂದ ಕ್ಯಾನ್ಸರ್‌ವರೆಗೂ ಬರುವ ರೋಗಗಳಿಂದ ಹೊರಬರಬೇಕು. ಮಾನಸಿಕ ಪರವಾದ ದುಃಖಗಳು, ಅಂದರೆ .. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಳ್ಳುವುದು; ಯಾರಾದರೂ ಅವಮಾನಿಸಿದರೆ ಕುಗ್ಗಿ B.P. ಯಂತಹ ರೋಗ ತಂದುಕೊಳ್ಳುವುದು ಮುಂತಾದ ಎಲ್ಲ ಮೂರ್ಖತನಗಳಿಂದ ಹೊರಬರಬೇಕು. ಬುದ್ಧಿಪರವಾದ ದುಃಖಗಳೆಂದರೆ ಬುದ್ಧಿಮಾಂದ್ಯತೆ ಎನ್ನುವುದಿಲ್ಲದೆ ಒಳ್ಳೆಯ ಏಕಾಗ್ರತೆ ಶಕ್ತಿಯಿಂದ ಕೂಡಿಕೊಂಡ ಅದ್ಭುತವಾದ ಜ್ಞಾನಶಕ್ತಿಯಿಂದ ಇರಬೇಕು. ನಮ್ಮ ಗತಜನ್ಮಗಳನ್ನು ಕುರಿತ ಸಮಾಚಾರವೆಲ್ಲಾ ಕೂಡಾ ನಾವು ತಿಳಿದುಕೊಂಡಿರಬೇಕು. ಇವೆಲ್ಲಾ ಮಾಡಿದರೆ ಮಾತ್ರವೇ ನಾವು ಅರ್ಜುನನಂತಹ ತ್ರಿಗುಣಾತೀತರಾಗಿ ಬದಲಾಯಿಸಲ್ಪಟ್ಟು .. ಸಕಲ ಗುಣದೋಷದಿಂದ ಮುಕ್ತರಾಗಿ ದುಃಖರಾಹಿತ್ಯ ಸ್ಥಿತಿಯನ್ನು ಹೊಂದಬಲ್ಲೆವು.

ಜೀಸಸ್‌ಕ್ರೈಸ್ಟ್ ಸಹ .. "ದೇವರ ರಾಜ್ಯವನ್ನು ಹುಡುಕಿ; ಆ ಧರ್ಮದಲ್ಲಿ ಜೀವಿಸಿ; ಆಗ ನಿಮಗೆ ಬೇಕಾಗಿರುವುದೆಲ್ಲಾ ಸಿಗುತ್ತವೆ" ಎಂದು ಹೇಳಿದರು. ಬೇಕಾಗಿರುವುದೆಲ್ಲಾ ಎಂದರೆ .. ಶಾರೀರಿಕ ಆರೋಗ್ಯ .. ಮಾನಸಿಕ ಪ್ರಶಾಂತತೆ .. ಬುದ್ಧಿ ಕುಶಲತೆ. ಹೀಗೆ ನಮಗೆ ಬೇಕಾಗಿರುವುದೆಲ್ಲಾ ಪಡೆದಾಗಲೇ ನಾವು ದುಃಖದಿಂದ ಬಿಡುಗಡೆಹೊಂದಿ ಮುಕ್ತಿಯನ್ನು ಹೊಂದುತ್ತೇವೆ.

ನಿರ್ವಾಣ - ಪರಿನಿರ್ವಾಣ - ಮಹಾಪರಿನಿರ್ವಾಣ

ಗೌತಮಬುದ್ಧನು ಈ ಮುಕ್ತಿಯನ್ನು .. ನಿರ್ವಾಣವೆಂದು ವಿವರಿಸುತ್ತಾ ಇದರಲ್ಲಿ ಪುನಃ ಮೂರು ದಶೆಗಳಿವೆ ಎಂದರು.

ನಿರ್ವಾಣ : ನಾವು ನಮ್ಮ ಸ್ವಂತ ಜೀವನದಲ್ಲಿ ಶಾರೀರಿಕಪರವಾದ ದುಃಖಗಳು ಯಾವುವೂ ಇಲ್ಲದೆ, ಮಾನಸಿಕಪರವಾದ ದುಃಖಗಳು ಯಾವುವೂ ಇಲ್ಲದೆ, ಬುದ್ಧಿ ಪರವಾದ ಅಸ್ಪಷ್ಟತೆಗಳು ಯಾವುವೂ ಇಲ್ಲದೆ ಇದ್ದರೆ ಮಾತ್ರವೇ ನಾವು ಮುಕ್ತಿಯನ್ನು ಅಥವಾ ನಿರ್ವಾಣವನ್ನು ಹೊಂದಬಲ್ಲೆವು.

ಪರಿನಿರ್ವಾಣ : ಆದರೆ, ಕೇವಲ ನಾವು ಮಾತ್ರ ನಿರ್ವಾಣ ಹೊಂದಿದರೆ ಲಾಭವಿಲ್ಲ. ನಮ್ಮ ಸುತ್ತಮುತ್ತಾ ಇರುವವರೆಲ್ಲಾ ಕೂಡಾ ನಿರ್ವಾಣವನ್ನು ಹೊಂದಬೇಕು. ನಮ್ಮ ಸುತ್ತಮುತ್ತಾ ಇರುವವರು ದುಃಖಿಸುತ್ತಿದ್ದರೆ ನಮಗೆ ಸಮಾಧಾನವಿರುವುದಿಲ್ಲ. ಅಲ್ಲದೇ, ಅವರೆಲ್ಲಾ ದುಃಖದಲ್ಲಿದ್ದರೆ, ಅವರ ದುಃಖ ನಮ್ಮ ದುಃಖವಾಗಿ ಪರಿಣಮಿಸುತ್ತದೆ. ಆದ್ದರಿಂದ .. ನಾವು ನಮ್ಮ ಸುತ್ತಮುತ್ತಾ ಇರುವವರ ದುಃಖರಾಹಿತ್ಯಕ್ಕಾಗಿ ಶ್ರಮಿಸಬೇಕು. ನಿರ್ವಾಣಹೊಂದಿದ ನಾವು ಇತರರ ನಿರ್ವಾಣಕ್ಕಾಗಿ ಕೆಲಸ ಮಾಡುವುದನ್ನೇ ’ಪರಿನಿರ್ವಾಣ’ ಎನ್ನುತ್ತೇವೆ. ಅದನ್ನೇ ‘ಪರಿಮುಕ್ತಿ’ ಎಂದು ಸಹ ಹೇಳುತ್ತೇವೆ.

ಮಹಾಪರಿನಿರ್ವಾಣ : ನಮ್ಮ ಸುತ್ತಮುತ್ತಾ ಇರುವವರು ಅಂದರೆ, ಕೇವಲ ಸ್ವಲ್ಪ ಪರಿಧಿವರೆಗೂ ಇರುವವರು ಮಾತ್ರವೇ ದುಃಖರಾಹಿತ್ಯದಲ್ಲಿ ಇದ್ದರೆ ಸಾಲದು. ನಮ್ಮ ಪಕ್ಕದ ದೇಶದವರು ಕೂಡಾ ಚೆನ್ನಾಗಿರಬೇಕು. ಅವರ ಪಕ್ಕದ ದೇಶದವರು ಕೂಡಾ ಚೆನ್ನಾಗಿರಬೇಕು. ಅವರು ಸಹ ಸಕಲ ದುಃಖಗಳಿಂದ ಮುಕ್ತಿಯನ್ನು ಹೊಂದಬೇಕು.
ಹೀಗೆ, ಪ್ರಪಂಚದಾದ್ಯಂತ್ಯ ಕೂಡಾ ದುಃಖವನ್ನು ತೆಗೆಯಬೇಕು ಎಂದು ಪರಿತಪಿಸುತ್ತಾ ಯಾರು ಕಂಕಣವನ್ನು ಕಟ್ಟಿಕೊಳ್ಳುತ್ತಾರೊ ಅವರು ಮಹಾಪರಿನಿರ್ವಾಣದಲ್ಲಿ .. ಮಹಾಪರಿಮುಕ್ತಿಯ ಸ್ಥಿತಿಯಲ್ಲಿರುವ ಮಹಾಯೋಗಿಗಳು. ಸದಾ ಮಹಾಪರಿನಿರ್ವಾಣದಲ್ಲಿ ಇರುವವರಿಗೆ ಪ್ರಪಂಚದ ದುಃಖವೇ ತಮ್ಮ ದುಃಖವಾಗಿ ಬದಲಾಗುತ್ತದೆ. ಪ್ರಪಂಚದಲ್ಲೆಲ್ಲರೂ ದುಃಖದಿಂದ ವಿಮುಕ್ತಿಯನ್ನು ಹೊಂದಿದಾಗಲೇ ಅವರೂ ಸಹ ದುಃಖದಿಂದ ವಿಮುಕ್ತಿಯನ್ನು ಹೊಂದುತ್ತಾರೆ. ಇದನ್ನೇ ‘ತೀರ್ಥಂಕರ ಗೋತ್ರ ಬಂಧ’ ಎನ್ನುತ್ತೇವೆ.

ತೀರ್ಥಂಕರ, ಅಂದರೆ, ಟೀಚರ್. ಈ ಟೀಚರ್‌ಗೆ ಟೀಚಿಂಗ್ ಮಾಡದಿದ್ದರೇ ದುಃಖವಾಗುತ್ತದೆ ಮತ್ತೂ ಬೋಧಿಸಿದರೆ ಮಾತ್ರವೇ ಆತನ ದುಃಖ ನಿವಾರಣೆಯಾಗುತ್ತದೆ. ಆದರೆ, ಆತನು ಕೆಲವರಿಗೆ ಮಾತ್ರ ಬೋಧಿಸಿ ಕೈಗಳನ್ನು ಜಾಡಿಸಿಕೊಳ್ಳದೇ ಪ್ರಪಂಚದಾದ್ಯಂತ್ಯ ತನ್ನ ಬೋಧನೆಗಳನ್ನು ವಿಸ್ತರಿಸುವ ಸರ್ವ ವ್ಯಾಪಕತ್ವವನ್ನು ಹೊಂದಿರುತ್ತಾನೆ.

ಅರಿಹಂತ್ - ಬೋಧಿಸತ್ವನು - ಬುದ್ಧನು

ಮೊದಲು ನಾವು ನಮ್ಮ ದುಃಖದಿಂದ ಬಿಡುಗಡೆಯಾಗಿ ಅರಿಹಂತರಾಗಿ ಬದಲಾಗಬೇಕು. ಅರಿ ಅಂದರೆ ಶತ್ರು. ಹಂತ್ ಅಂದರೆ ಕೊಲ್ಲಲ್ಪಟ್ಟಿದವನು. ಅರಿಹಂತ್ ಅಂದರೆ ಶತ್ರುಗಳನ್ನು ನಿರ್ಮೂಲ ಮಾಡಿದವನು. ನಮ್ಮಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಎನ್ನುವ ಅರಿಷಡ್ವರ್ಗಗಳ ಮೇಲೆ ಹಿಡಿತವನ್ನು ಸಾಧಿಸಲು .. ಅಡ್ಡಿಯಾಗುತ್ತಿರುವ ನಮ್ಮಲ್ಲಿರುವ ಮೂರು ಶತ್ರುಗಳನ್ನು ಕೊಲ್ಲಬೇಕು.

ಆ ಮೂರು ಶತ್ರುಗಳೇ .. ನಮ್ಮಲ್ಲಿರುವ ‘ಸೋಂಬೇರಿತನ’ ಎನ್ನುವ ತಮೋಗುಣ; ‘ಅಹಂಕಾರ’ ಎನ್ನುವ ರಜೋಗುಣ ಮತ್ತು ‘ಅತಿ ಒಳ್ಳೆಯತನ’ ಎನ್ನುವ ಸಾತ್ವಿಕಗುಣ. ಈ ಮೂರು ಗುಣಗಳು ಸಹ ನಮಗೆ ಶತ್ರುಗಳೇ. ಆದ್ದರಿಂದ, ಇವುಗಳನ್ನು ಬುಡಸಮೇತ ನಿರ್ಮೂಲನಗೊಳಿಸಿ ನಿರ್ಗುಣಸ್ಥಿತಿಯಲ್ಲಿ ಜೀವಿಸುತ್ತಾ ಅರಿಷಡ್ವರ್ಗಗಳ ಮೇಲೆ ಹಿಡಿತವನ್ನು ಸಾಧಿಸಬೇಕು. ಜೀವನವನ್ನು ಒಂದು ಆಟದಂತೆ ಆಡುತ್ತಾ ಆನಂದದಿಂದ ಮುಂದಕ್ಕೆ ಸಾಗಬೇಕು.

ಹೀಗೆ ನಾವು ಅರಿಹಂತ್‌ರಾಗಿ ಬದಲಾದ ನಂತರ ನಮ್ಮ ಸುತ್ತಮುತ್ತಾ ಇರುವವರೆಲ್ಲಾ ಕೂಡಾ ಅರಿಹಂತರಾಗಿ ಬದಲಾಗಲು ಅವರಿಗೆ ಸಹಾಯ ಮಾಡಬೇಕು. ಅದರಿಂದ ನಾವು ಬೋಧಿಸತ್ವರಾಗಿ ಬೆಳೆಯುತ್ತೇವೆ. ಬೋಧಿಸತ್ವರಾಗಿರುತ್ತಾ ಪ್ರಪಂಚದಲ್ಲಿರುವ ಅರಿಹಂತರೆಲ್ಲರನ್ನೂ ಬೋಧಿಸತ್ವರಾಗಿ ಬದಲಾಗಲು ಮಾರ್ಗದರ್ಶನ ನೀಡುತ್ತಾ ಅವರೆಲ್ಲರ ಆತ್ಮದ ಉನ್ನತಿಗೆ ಕೂಡಾ ಸಹಾಯ ಮಾಡುತ್ತಿರಬೇಕು. ಅಂತಹವನೇ ಬುದ್ಧನು. ಆ ಬುದ್ಧಸ್ಥಿತಿಯೇ ಮಹಾಪರಿನಿರ್ವಾಣ ಸ್ಥಿತಿ, ಮಹಾ ಪರಿಮುಕ್ತಸ್ಥಿತಿ.

ಧ್ಯಾನಸಾಧನೆ

ನಿರ್ವಾಣಸ್ಥಿತಿ ನಮಗೆ ಕೇವಲ ಧ್ಯಾನ ಸಾಧನೆಯಿಂದಲೇ ಬರುತ್ತದೆ. ನಿರಂತರ ಧ್ಯಾನಸಾಧನೆಯಲ್ಲಿ ಮಾತ್ರವೇ ನಾವು ನಮ್ಮಲ್ಲಿರುವ ಎಲ್ಲಾ ಅನರ್ಥಗಳನ್ನು ಕುರಿತು ತಿಳಿದುಕೊಳ್ಳುತ್ತೇವೆ. ನಮಗೆ ಆಗುವ ನಷ್ಟಗಳ ತಾರತಮ್ಯವನ್ನು ತಿಳಿದುಕೊಂಡು ನಮಗೆ ನಾವೇ ಅವುಗಳನ್ನು ಸರಿಮಾಡಿಕೊಳ್ಳಬಲ್ಲೆವು.

ಧ್ಯಾನಸಾಧನೆಯೊಂದಿಗೆ ಒಳ್ಳೆಯ ಆತ್ಮಜ್ಞಾನವನ್ನು ಉಂಟುಮಾಡುವ ಪುಸ್ತಕಗಳನ್ನು ಓದುತ್ತಾ ಸ್ವಾಧ್ಯಾಯ ಮಾಡಬೇಕು. ವೇದವ್ಯಾಸರು, ವಾಲ್ಮೀಕಿ .. ಓಷೋ .. ರಾಂಪಾ .. ಅನಿಬೆಸೆಂಟ್ .. ಯೋಗಾನಂದ ಪರಮಹಂಸ .. ಸ್ವಾಮಿರಾಮಾ ಇವರಂತಹ ಮಹಾನ್ ಯೋಗಿಗಳು, ಜ್ಞಾನಿಗಳು ಬರೆದ, ಸ್ವಂತ ಅನುಭವಗಳಿಂದ ಕೂಡಿದ ಪುಸ್ತಕಗಳನ್ನು ಓದುವುದರಿಂದ ಅದ್ಭುತವಾದ ಜ್ಞಾನಸಾಧನೆ ನಡೆಯುತ್ತದೆ. ಹಾಗೆ ಧ್ಯಾನ-ಜ್ಞಾನ ಸಾಧನೆಗಳು ಮಾಡುವವರ ಜೊತೆ ನಿರಂತರವಾಗಿ ಒಡನಾಡುತ್ತಾ ಸಜ್ಜನಸಾಂಗತ್ಯ ಮಾಡಬೇಕು.

ಈ ಮೂರು ಬಗೆಯ ಸಾಧನೆಗಳ ಮೂಲಕ ನಾವು; ಹೇಗೆ ಮಾತನಾಡಬೇಕು? ಹೇಗೆ ತಿನ್ನಬೇಕು? ಎಷ್ಟು ಸಮಯ ನಿದ್ದೆ ಮಾಡಬೇಕು? ಹೇಗೆ ಯೋಚಿಸಬೇಕು? ಹೇಗೆ ಯೋಚಿಸಬಾರದು? ಕುಟುಂಬದಲ್ಲೂ ಮತ್ತು ಸಮಾಜದಲ್ಲೂ ಹೇಗೆ ಜೀವಿಸಬೇಕು? ಎನ್ನುವ ಎಲ್ಲಾ ವಿಷಯಗಳ ಮೇಲೆ ನಮಗೆ ಸಹಜವಾದ ಹಿಡಿತ ಬರುತ್ತದೆ. ಈ ಮೂರು ಬಗೆಯ ಸಾಧನೆಗಳಿಂದಲೇ ನಮ್ಮ ಶರೀರದಿಂದ ಎಲ್ಲಾ ಬಗೆಯ ರೋಗಗಳೂ ದೂರವಾಗುತ್ತವೆ. ತಲೆನೋವಿನಿಂದ ಹಿಡಿದು ಕ್ಯಾನ್ಸರ್‌ವರೆಗೂ ಯಾವ ರೋಗಗಳೂ ಎಂದಿಗೂ ಬರುವುದಿಲ್ಲ. ಏಕೆಂದರೆ, ರೋಗಗಳಿಗೆ ಕಾರಣವಾದ ಪರಿಶುಭ್ರವಲ್ಲದ ನಾಡೀಮಂಡಲ ವ್ಯವಸ್ಥೆ ಎಲ್ಲಾ ಕೂಡಾ ಧ್ಯಾನ - ಸ್ವಾಧ್ಯಾಯ - ಸಜ್ಜನಸಾಂಗತ್ಯ ಸಾಧನೆಗಳಿಂದ ಪರಿಶುದ್ಧವಾಗುತ್ತದೆ.

‘ಪೂರ್ವಜನ್ಮ ಕೃತಂ ಪಾಪಂ ವ್ಯಾಧಿರೂಪೇಣ ಪೀಡ್ಯತೇ’ ಎಂದಂತೆ .. ನಮ್ಮ ಅನೇಕಾನೇಕ ಜನ್ಮಗಳಿಂದ ಹೊತ್ತುಕೊಂಡು ಬರುತ್ತಿರುವ ಕರ್ಮಫಲಗಳೆಲ್ಲಾ ಶಾರೀರಿಕ ವ್ಯಾಧಿಗಳ ರೂಪದಲ್ಲಿ ಹೊರಬರುತ್ತಿರುತ್ತವೆ. ಅವೆಲ್ಲಾ ಕೂಡಾ ಧ್ಯಾನಶಕ್ತಿಯಿಂದ ಶುಚಿಗೊಳ್ಳುತ್ತವೆ. ಮಾನಸಿಕ ಪ್ರಶಾಂತತೆ ಸಿಗುವುದರ ಮೂಲಕ ಎಲ್ಲಾ ಬಗೆಯ ಮಾನಸಿಕ ರೋಗಗಳಿಂದ ಹೊರಬಂದು .. ಮಾನ-ಅವಮಾನಗಳನ್ನು ಸಮಾನವಾಗಿ ಸ್ವೀಕರಿಸುವ ಉನ್ನತಸ್ಥಿತಿಗೆ ನಾವು ತಲಪುತ್ತೇವೆ. ನಮ್ಮ ಗತಜನ್ಮಗಳ ಸಮಾಚಾರವೆಲ್ಲಾ ಕೂಡಾ ಅದ್ಭುತವಾಗಿ ನಮ್ಮ ಕಣ್ಣುಗಳ ಮುಂದೆ ಸಾಕ್ಷಾತ್ಕಾರ ಆಗುವುದರಿಂದ .. ಆತ್ಮ ಸತ್ಯವನ್ನು ಅರಿತುಕೊಳ್ಳುತ್ತೇವೆ.

ಸಜ್ಜನಸಾಂಗತ್ಯದಿಂದ .. ಬುದ್ಧಿಪರವಾದ ಜ್ಞಾನ ಹೆಚ್ಚುತ್ತದೆ. ಅದರಿಂದ ನಮಗಿಂತಾ ಹಿರಿಯರು ಸಹ ಅತಿ ಸಾಮಾನ್ಯರಂತೆ ನಮ್ಮ ಎದುರಿಗೆ ಓಡಾಡುತ್ತಿರುವುದನ್ನು ನೋಡಿ ವಿನಮ್ರತೆ ಎಂಬುವುದನ್ನು ವಿಶೇಷವಾಗಿ ಅರ್ಥಮಾಡಿಕೊಳ್ಳುತ್ತೇವೆ. ವಿನಮ್ರತೆ ಎನ್ನುವುದು ಇಲ್ಲದಿದ್ದರೆ ಗರ್ವ ಬರುತ್ತದೆ.

ಪಿರಮಿಡ್ ಮಾಸ್ಟರ‍್ಸ್ ಸದಾ ಧ್ಯಾನ ಮಾಡುತ್ತಾ ನಿರಂತರ ಸ್ವಾಧ್ಯಾಯ ಮಾಡುತ್ತಾ, ಸಜ್ಜನಸಾಂಗತ್ಯ ಮಾಡುತ್ತಿರುತ್ತಾರೆ. ತಾವು ಹಾಗೆ ಮಾಡುತ್ತಾ ಇತರರಿಂದ ಮಾಡಿಸುತ್ತಾ ಸದಾ ಮಹಾಪರಿಮುಕ್ತ ಸ್ಥಿತಿಯಲ್ಲಿರುತ್ತಾರೆ. ಹೀಗೆ, ಈ ಭೂಮಿಯ ಮೇಲೆ ಜನಿಸಿ ತಮ್ಮ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸುವವರಿಗೆ ಇನ್ನು ಮತ್ತೆ ಜನಿಸಬೇಕಾದ ಅವಶ್ಯಕತೆ ಇರುವುದಿಲ್ಲ.

ಅರಿಹಂತ್ ಆಗಿ ಮರಣಿಸಿದರೂ ಪುನಃ ಹುಟ್ಟಬೇಕಾದ್ದೆ; ಬೋಧಿಸತ್ವನಾಗಿ ಮರಣಿಸಿದರೂ ಪುನಃ ಹುಟ್ಟಬೇಕಾದ್ದೇ; ಬುದ್ಧನಾಗಿ ಬೆಳೆಯುವವರೆಗೂ ಆ ಜನ್ಮಪರಂಪರೆ ಹಾಗೆಯೇ ಮುಂದುವರೆಯುತ್ತಲೇ ಇರುತ್ತದೆ. ಜನ್ಮರಾಹಿತ್ಯಸ್ಥಿತಿಯನ್ನು ಹೊಂದಿದ ಜಗದ್ಗುರುಗಳು ಬುದ್ಧತ್ವದ ಸ್ಥಿತಿಯನ್ನು ಹೊಂದಿ, ಆ ಸ್ಥಿತಿಯಲ್ಲೇ ಜೀವಿಸುತ್ತಾ ಅದೇ ಸ್ಥಿತಿಯಲ್ಲಿ ತಮ್ಮ ಕೊನೆಯ ಶ್ವಾಸವನ್ನು ಬಿಡುತ್ತಾರೆ. ಜೀಸಸ್ ಕ್ರೈಸ್ಟ್ ಸ್ಥಿತಿ .. ಶ್ರೀಕೃಷ್ಣನ ಸ್ಥಿತಿ .. ಮಹಾವೀರನ ಸ್ಥಿತಿ .. ಮತ್ತು ಜೊರಾಸ್ಟರ್ ಸ್ಥಿತಿ .. ಎಲ್ಲಾ ಸಹ ಬುದ್ಧತ್ವದ ಸ್ಥಿತಿಗಳೇ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ..

" ಬಹೂನಿ ಮೇ ವ್ಯತೀತಾನಿ ಜನ್ಮಾನಿತವ ಚಾರ್ಜುನ
ತಾನ್ಯಹಂ ವೇದ ಸರ್ವಾಣಿ ನತ್ಯಂ ವೇತ್ಥ ಪರಂತಪ "

(ಭ, ೪-೫)

ಅರ್ಜುನಾ, "ನೀನು-ನಾನು ಅನೇಕ ಜನ್ಮಗಳನ್ನು ತಾಳಿದ್ದೇವೆ. ಆದರೆ, ನನಗೆ ನನ್ನ ಜನ್ಮಗಳೇ ಅಲ್ಲದೆ ನಿನ್ನ ಜನ್ಮಗಳ ಕುರಿತು ಕೂಡಾ ತಿಳಿದಿದೆ. ನಿನಗೇ ಏನೂ ತಿಳಿದಿಲ್ಲ ಎನ್ನುತ್ತಾ ಜನ್ಮಪರಂಪರೆಯ ಜ್ಞಾನದ ಗುಟ್ಟನ್ನು ಬಿಡಿಸಿ ಹೇಳಿದರು.

ಈ ಜನ್ಮಪರಂಪರೆಯ ಜ್ಞಾನವೇ ಮುಕ್ತಿ. ಈ ಜ್ಞಾನದಿಂದ "ನಾನು ಅಶಾಶ್ವತವಾದ ದೇಹದಲ್ಲಿ ವಾಸಿಸುತ್ತಿದ್ದರೂ ಶಾಶ್ವತವಾದ ಆತ್ಮ" ಎನ್ನುವ ಕರ್ಮಸಿದ್ಧಾಂತವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. "ನನ್ನ ವಾಸ್ತವಕ್ಕೆ ನಾನೇ ಸೃಷ್ಟಿಕರ್ತ. ಆದ್ದರಿಂದ, ನನ್ನ ಸಂಕಲ್ಪಶಕ್ತಿಯ ಮೂಲಕ ನಾನು ನನ್ನ ವಾಸ್ತವವನ್ನು ಬದಲಾಯಿಸಿಕೊಂಡು ಈ ಜನ್ಮ ಕರ್ಮಪರಂಪರೆಯ ಚಕ್ರದಿಂದ ಹೊರಬರುತ್ತೇನೆ" ಎನ್ನುವ ಜ್ಞಾನವನ್ನು ಹೊಂದಿ, ತಕ್ಷಣ ಅದರಿಂದ ಬಿಡುಗಡೆಯಾಗಲು ಸಾಧನೆ ಮಾಡುತ್ತೇವೆ.

ಇಂತಹ ಮುಕ್ತಸ್ಥಿತಿ ನಮಗೆ ಪ್ರಾರ್ಥನೆಯ ಮೂಲಕವೋ, ಭಜನೆಗಳ ಮೂಲಕವೋ, ತೀರ್ಥಯಾತ್ರೆಗಳ ಮೂಲಕವೋ, ಗುರುಗಳ ಪಾದಸೇವೆಯಿಂದಲೋ, ವಿಗ್ರಹರಾಧನೆಯ ಮೂಲಕವೋ ಅಥವಾ ಮಂತ್ರೋಚ್ಛಾರಣೆ ಮಾಡುವುದರಿಂದಲೋ ಬರುವುದಿಲ್ಲ. ಇದು ಧ್ಯಾನದಲ್ಲಿ ನಮಗೆ ನಮ್ಮ ಸ್ಥೂಲಶರೀರದಿಂದ ಹೊರಬಂದು ನಮ್ಮ ಸೂಕ್ಷ್ಮಶರೀರದಿಂದ ವಿಹರಿಸುತ್ತಾ ಸೂಕ್ಷ್ಮಲೋಕಗಳ ಅನುಭವಗಳನ್ನು ಹೊಂದುವುದರ ಮೂಲಕ ಬರುತ್ತದೆ. ಸೂಕ್ಷ್ಮಶರೀರದಿಂದ ಕೂಡಾ ಬಿಡುಗಡೆಯಾಗಿ ಕಾರಣಶರೀರದಿಂದ ವಿಹರಿಸುತ್ತಾ ಕಾರಣಲೋಕಗಳ ಅನುಭವಗಳನ್ನು ಹೊಂದುವುದರ ಮೂಲಕ ಬರುತ್ತದೆ. ಅನಂತರ ಕಾರಣಶರೀರದಿಂದ ಕೂಡಾ ಹೊರಬಂದು ಮಹಾಕಾರಣ ಶರೀರದಿಂದ ಮಹಾಕಾರಣ ಲೋಕಗಳಲ್ಲಿ ವಿಹರಿಸುತ್ತಾ ಅಲ್ಲಿಯ ಅನುಭವಗಳನ್ನು ಕೂಡಾ ಪಡೆದುಕೊಳ್ಳುತ್ತಿದ್ದರೆ ಇಂತಹ ಮುಕ್ತಸ್ಥಿತಿ ಬರುತ್ತದೆ. ಮಹಾಕಾರಣ ಲೋಕಗಳಲ್ಲಿ ನಮಗೆ ಈ ಸೃಷ್ಟಿಯ ಪೂರ್ಣರೂಪ ಅನುಭವಪೂರ್ವಕವಾಗಿ ಅರ್ಥವಾಗುತ್ತದೆ.

ಇಷ್ಟು ನಡೆಯದ ಹೊರತು ಮುಕ್ತಸ್ಥಿತಿ ಲಭಿಸುವುದಿಲ್ಲ. ಆದ್ದರಿಂದ .. ನಾನು ಕೇವಲ ಶರೀರ ಮಾತ್ರವೇ ಎಂದುಕೊಳ್ಳುತ್ತಾ "ಹೇ ಭಗವಾನ್, ನನಗೆ ಮೋಕ್ಷ ಕೊಡು" ಎಂದ ತಕ್ಷಣ ನಿಮಗೆ ಮೋಕ್ಷ ಕೊಡಲು ಯಾವ ದೇವರೂ ಸಹ ಇಳಿದು ಬರುವುದಿಲ್ಲ.

"ನನ್ನನ್ನು ಯಾರೋ ಹುಟ್ಟಿಸಿದ್ದಾರೆ; ನನಗೆ ಯಾರೋ ಬಂದು ಮಾರ್ಗ ತೋರಿಸುತ್ತಾರೆ; ನನ್ನನ್ನು ಯಾರೋ ಕಾಪಾಡುತ್ತಾರೆ; ನನ್ನ ಈ ಸ್ಥಿತಿಗೆ ತಂದೆ ತಾಯಿಯರೊ, ದೇವರೊ ಕಾರಣ" ಎಂದುಕೊಳ್ಳುವಷ್ಟು ಕಾಲ ನಾವು ದುಃಖದಿಂದ ಕೂಡಿರುವ ಬಂಧನದಲ್ಲೇ ಇರುತ್ತೇವೆ. ಮುಕ್ತಸ್ಥಿತಿಯಲ್ಲಿ ಇರುವವರು ತಮ್ಮ ಮೇಲೆ ತಾವು ಕನಿಕರ ತೋರಿಸುವುದಿಲ್ಲ; ಇತರರ ಮೇಲೆ ಸಹ ಕನಿಕರ ತೋರಿಸುವುದಿಲ್ಲ. ಯಾರಿಗೆ ಏನು ಬೇಕೊ ಅದನ್ನು ಕೊಡುವುದರಲ್ಲಿ ಮಗ್ನವಾಗುತ್ತಾ .. ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾ ಇರುತ್ತಾರೆ.

ಕನಿಕರ ತೋರಿಸುವುದು ಎನ್ನುವುದು ನಮ್ಮ ಸಮಯವನ್ನೇ ಅಲ್ಲದೆ ಇತರರ ಸಮಯವನ್ನು ಕೂಡಾ ವ್ಯರ್ಥವಾಗಿಸುತ್ತದೆ .. ಆದ್ದರಿಂದ, ಒಬ್ಬ ಮಾಸ್ಟರ್ ಇತರರ ವಿಷಯಗಳಲ್ಲಿ ಕನಿಕರವನ್ನು ತೋರಿಸುವುದನ್ನು ಬಿಟ್ಟು "ಸುಮ್ಮನೆ ಏಕೆ ನೊಂದುಕೊಳ್ಳುವೆ? ಸುಮ್ಮನೆ ಏತಕ್ಕಾಗಿ ಯೋಚಿಸುವೆ? ಎರಡು ಕಣ್ಣುಗಳನ್ನೂ ಮುಚ್ಚಿಕೊಂಡು ಶ್ವಾಸದ ಮೇಲೆ ಗಮನವಿಟ್ಟು ಧ್ಯಾನ ಮಾಡು. ಚೆನ್ನಾಗಿ ಚಿತ್ತನಿವೃತ್ತಿ ಮಾಡಿಕೊಂಡು ವಿಶ್ವಶಕ್ತಿಯನ್ನು ಆವಾಹನೆ ಮಾಡಿಕೋ .. ಪಿರಮಿಡ್ ಶಕ್ತಿಯನ್ನು ಉಪಯೋಗಿಸಿಕೋ .. ಇಂತಹ ಪುಸ್ತಕವನ್ನು ಓದಿಕೋ" ಎನ್ನುತ್ತಾ ಅವರಿಂದ ಸರಿಯಾದ ಸಾಧನೆಯನ್ನು ಮಾಡಿಸುತ್ತಾನೆ. ಅಷ್ಟೇ ವಿನಹ "ಅಯ್ಯೋ, ಹೀಗಾಯಿತಾ? ಹಾಗೆ ಆಗಬಾರದಾಯಿತು" ಎನ್ನುತ್ತಾ ಕೆಲಸಕ್ಕೆಬಾರದ ಪರಿಪಕ್ವವಿಲ್ಲದ ಮಾತುಗಳನ್ನು ಎಂದಿಗೂ ಮಾತನಾಡುವುದಿಲ್ಲ.

ಬಾಯಿಯಿಂದ ಒಂದು ಮಾತಾದರೂ ಅಪರಿಪಕ್ವವಾಗಿ ಬಂತು ಅಂದರೆ, ಅವನಿಗೆ ಮುಕ್ತಸ್ಥಿತಿ ಇಲ್ಲ ಎಂದು ಅರ್ಥ. ಹಾಗೆಯೇ, ಇತರರು ಕೂಡಾ ಅಶಾಸ್ತ್ರೀಯವಾದ, ಅಪರಿಪಕ್ವವಾದ ಮಾತುಗಳನ್ನು ಮಾತನಾಡುತ್ತಿದ್ದರೆ ಕೇಳಿಸಿಕೊಳ್ಳುತ್ತಾ ಸುಮ್ಮನೆ ಇರುವವನು ಕೂಡಾ ತನ್ನಷ್ಟಕ್ಕೆ ತಾನು ಮುಕ್ತಸ್ಥಿತಿಯಲ್ಲಿ ಇದ್ದರೂ ಸಹ ಪರಿಮುಕ್ತಸ್ಥಿತಿಗೆ ಬೆಳೆಯಲಿಲ್ಲವೆಂದೇ ಅರ್ಥ. ಸಂಘದಲ್ಲಿ ಕೊಳಕು ಹೇಗಿದ್ದರೆ ನನಗೇಕೆ .. ನನ್ನಪಾಡಿಗೆ ನಾನು ಮುಕ್ತಸ್ಥಿತಿಯನ್ನು ಹೊಂದುತ್ತೇನೆ" ಎಂದುಕೊಂಡರೆ ಅವನು ಎಂದಿಗೂ ದುಃಖರಾಹಿತ್ಯ ಸ್ಥಿತಿಯನ್ನು ಹೊಂದಲಾರ. ಪರಿಮುಕ್ತಿ, ಮಹಾಪರಿಮುಕ್ತಿ ಹೊಂದುವವರೆಗೂ ಆತನು ಪುನಃಪುನಃ ಜನ್ಮಗಳನ್ನು ಪಡೆಯಬೇಕಾದ್ದೇ.

ಕೊಳಕನ್ನು ಆಗಿಂದಾಗ ತೊಳೆಯುತ್ತಲೇ ಇರಬೇಕು. ಯಾರಾದರೂ ಉಪಯೋಗವಿಲ್ಲದ ಮಾತುಗಳನ್ನು ಮಾತನಾಡುತ್ತಿದ್ದರೆ .. "ಬಾಯಿ ಮುಚ್ಚಿಕೊಂಡು ಮೌನವಾಗಿ ಕುಳಿತು ಧ್ಯಾನ ಮಾಡು" ಎಂದು ಹೇಳಬೇಕು. ಉಪಯೋಗವಿಲ್ಲದ ಕೆಲಸಗಳು, ಅಂದರೆ, ಮಾಂಸಾಹಾರ ಭಕ್ಷಣೆ ಮಾಡುತ್ತಿದ್ದರೆ ಅದು ಅಶಾಸ್ತ್ರೀಯ ಎಂದು ಹೇಳಬೇಕು. ಹೇಳಿದರೂ ಕೇಳದಿದ್ದರೆ ಅವನ ಕರ್ಮ, ತಿಳಿದಿದ್ದರೂ ಹೇಳದಿದ್ದರೆ ಅದು ನಮ್ಮ ಕರ್ಮ.

* * *
" ಮುಕ್ತಾಭಿಮಾನೀ ಮುಕ್ತೋ ಹಿ ಬದ್ಧಾಭಿಮಾನೀ ಬದ್ಧೋಹಿ
ಕಿಂ ವದಂತೀಹ ಸತ್ಯೇಯಂ ಯಾ ಮತಿಃ ಸಾ ಗತಿರ್ಭವೇತ್ "

ಎಂದು ಅಷ್ಟಾವಕ್ರನು ಹೇಳಿದಂತೆ .. ಮುಕ್ತಸ್ಥಿತಿಯನ್ನು ಅಭಿಮಾನಿಸುವವನು ಶಾಸ್ತ್ರೀಯವಾದ ಪದ್ಧತಿಯನ್ನು ಅನುಸರಿಸಿದರೆ ಮುಕ್ತನಾಗುತ್ತಾ ಬಂಧನವನ್ನು ಅಭಿಮಾನಿಸುವವನು ಬದ್ಧನೇ ಆಗುತ್ತಾನೆ.

' ಯಾ ಮತಿಃ ಸಾ ಗತಿರ್ಭವೇತ್.. ' ಎಂದಂತೆ ನಮ್ಮ ಮತಿ ಹೇಗಿರುತ್ತದೊ ನಮ್ಮ ಗತಿಯೂ ಹಾಗೇ ಇರುತ್ತದೆ ಎನ್ನುವ ಆರ್ಯೋಕ್ತಿಯನ್ನು ಅರಿವಿನಲ್ಲಿಟ್ಟುಕೊಂಡು ಈಗ ಏನು ಮಾಡುವುದು ಏನು ಬಿಡುವುದು ಎಂಬ ವಿಚಾರವನ್ನು ಮಾಡದೇ, ತಕ್ಷಣ ಮುಕ್ತಸ್ಥಿತಿಗಾಗಿ ಸಾಧನೆ ಮಾಡಬೇಕು. ಪರಿಸಾಧನೆ ಮಾಡಬೇಕು .. ಮಹಾಪರಿಸಾಧನೆ ಮಾಡಬೇಕು .. ವಿಶ್ವಾದಾದ್ಯಂತ್ಯ ಎಲ್ಲರೂ ಕೂಡಾ ನಮ್ಮಂತೆ ದುಃಖರಾಹಿತ್ಯ ಸ್ಥಿತಿಯನ್ನು ಹೊಂದುವವರೆಗೂ ಹಾಗೆ ಮಾಡುತ್ತಲೇ ಇರಬೇಕು.

Go to top