"ಪಿರಮಿಡ್ ಮಾಸ್ಟರ್‌ಗಳಿಗಾಗಿ ೧೮ ಮಾರ್ಗಸೂಚಿ ತತ್ವಗಳು"

 

ದಕ್ಷಿಣ ಭಾರತದ ಆಂಧ್ರಪ್ರದೇಶ ರಾಜ್ಯದ ಜಿಲ್ಲಾಕೇಂದ್ರವಾದ ಕರ್ನೂಲ್‌ನಲ್ಲಿ 'ದಿ ಕರ್ನೂಲ್ ಸ್ಪಿರಿಚ್ಯುಯಲ್ ಸೊಸೈಟಿ'ಯನ್ನು ೧೯೯೦ರಲ್ಲಿ ಸ್ಥಾಪಿಸಲಾಯಿತು. ಹೀಗೆ, ಭಾರತದಲ್ಲಿ ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್ ಹೆಸರಿನಲ್ಲಿ ಧ್ಯಾನದ ಆಂದೋಲನವು ಆರಂಭವಾಯಿತು.

* * *

ಅಂದಿನಿಂದ, ನೂರಾರು ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟಿಗಳು ಚಿಗುರೊಡೆದಿವೆ ಮತ್ತು ಸಾವಿರಾರು ಪಿರಮಿಡ್ ಮಾಸ್ಟರ್‌ಗಳು ಈ ಆಂದೋಲನವನ್ನು, ಭಾರತದ ವಿವಿಧೆಡೆಗಳಲ್ಲಿ ಮತ್ತು ವಿಶ್ವಾದ್ಯಂತ ಮುನ್ನಡೆಸಿದ್ದಾರೆ ಹಾಗೂ ಇನ್ನೂ ಮುನ್ನಡೆಸುತ್ತಾ ಸಾಗುತ್ತಿದ್ದಾರೆ.

* * *

ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್‌ನ ಎಲ್ಲ ಮಾಸ್ಟರ್‌ಗಳಿಗೆ ಈ ಕೆಳಕಂಡವುಗಳು ’ಮಾರ್ಗಸೂಚಿ’ಗಳಾಗಿವೆ. ಈ ಮಹಾನ್ ಆಂದೋಲನದ ಮೂಲಕ ... ಮಾಸ್ಟರ್‌ಗಳಾಗಲು... ನಾವು ಪ್ರತಿಯೊಬ್ಬರೂ ಸಹ... ಈ ಕೆಳಕಂಡವುಗಳನ್ನು ಅನುಸರಿಸಲೇಬೇಕು. ಈ ಕೆಳಕಂಡವುಗಳು ಆಧ್ಯಾತ್ಮಿಕ ಜೀವನದ ಪ್ರಾಥಮಿಕ ಮತ್ತು ಮೂಲತತ್ವಗಳಾಗಿವೆ. ಈ ಕೆಳಕಂಡವುಗಳು ’ಪ್ರತ್ಯಕ್ಷ ಆಧ್ಯಾತ್ಮಿಕತೆ’ಯ ಅತ್ಯಾವಶ್ಯಕ ಹೂರಣವಾಗಿದೆ. ಈ ಕೆಳಕಂಡವುಗಳು ಜ್ಞಾನೋದಯದ ಕಡ್ಡಾಯ ಲಕ್ಷಣಗಳಾಗಿವೆ.

* * *

ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್‌ನ ಮಾಸ್ಟರ್‌ಗಳಿಗಾಗಿ ಹದಿನೆಂಟು ಮಾರ್ಗಸೂಚಿ ತತ್ವಗಳನ್ನು ಸೂಚಿಸಲಾಗಿದೆ. ಈ ಹದಿನೆಂಟು ತತ್ವಗಳನ್ನು ಇಡೀ ಪ್ರಪಂಚವೇ ಅರ್ಥಮಾಡಿಕೊಳ್ಳಬೇಕಾಗಿದೆ. ಒಬ್ಬ ಆಧ್ಯಾತ್ಮಿಕ ಮಾಸ್ಟರ್ ಆಗಲು ಪ್ರತಿಯೊಬ್ಬರೂ ಸಹ ಈ ಹದಿನೆಂಟು ತತ್ವಗಳನ್ನು ತಮ್ಮ ಮನಸ್ಸಿನಲ್ಲಿಟ್ಟುಕೊಳ್ಳಬೇಕು.

* * *

ಈ ಅತ್ಯಾವಶ್ಯಕ ಆಧ್ಯಾತ್ಮಿಕ ಅಂಶಗಳಾಗಿರುವ... ಆವಶ್ಯಕ ಜ್ಞಾನೋದಯದ ಅಂಶಗಳಾಗಿರುವ... ಇವುಗಳನ್ನು, ನಾನು ಒಂದಾದ ನಂತರ ಮತ್ತೊಂದು ಅಂಶಗಳನ್ನು, ಬಹಳ ಶ್ರಮವಹಿಸಿ ಸಂಗ್ರಹಿಸಿದ್ದೇನೆ. ಹಲವಾರು ವರ್ಷಗಳ ಕಾಲಘಟ್ಟದಲ್ಲಿ, ಒಂದಾದ ನಂತರ ಮತ್ತೊಂದರಂತೆ ಉಂಟಾದ ಬದಲಾವಣೆಗಳ ಪರಿಣಾಮವಾಗಿ, ಈಗ ಪ್ರಸ್ತುತ, ಹದಿನೆಂಟು ಮಾರ್ಗಸೂಚಿ ತತ್ವಗಳು ಅಂತಿಮ ರೂಪವನ್ನು ಪಡೆದಿವೆ.

 

೧.ಧ್ಯಾನದ ಸರಿಯಾದ ವಿಧಾನ ಎಂದರೆ, ಅದು 'ಆನಾಪಾನಸತಿ'... ಮತ್ತು ಇತರರಿಗೆ ಈ ವಿಧಾನದಲ್ಲಿಯೇ ಧ್ಯಾನ ಮಾಡಲು ಸಹಾಯ ಮಾಡಿ. ಯಾವ ಕಷ್ಟಕರವಾದ ಆಸನಗಳು, ಪ್ರಾಣಾಯಾಮದ ಪದ್ಧತಿಗಳು ಬೇಡ.

ಮೊದಲನೆಯ ತತ್ವ ಏನೆಂದರೆ... ಪ್ರತಿಯೊಬ್ಬರೂ ಸಹ ನಿಯಮಿತವಾಗಿ ಧ್ಯಾನ ಮಾಡಬೇಕು. ಆ ಧ್ಯಾನ ಸರಿಯಾದ ವಿಧಾನದಲ್ಲಿರಬೇಕು. ಸರಿಯಾದ ವಿಧಾನವೆಂದರೆ, ಅದು ’ಆನಾಪಾನಸತಿ’ ಧ್ಯಾನದ ವಿಧಾನ. ಇದೇ ವಿಧಾನದಲ್ಲಿ ಧ್ಯಾನವನ್ನು ಮಾಡಲು ಪ್ರತಿಯೊಬ್ಬರಿಗೂ ಸಹಾಯ ಮಾಡಬೇಕು.

ನಿಯಮಿತವಾಗಿ ಧ್ಯಾನ ಮಾಡುವುದು ಮತ್ತು ನಿಯಮಿತವಾಗಿ ಧ್ಯಾನವನ್ನು ಕಲಿಸುವುದು - ಇದೇ ಮೊದಲನೆಯ ಪ್ರಮಾಣದ ಮಾತು!.

ಧ್ಯಾನ ಮಾಡುವುದು ಮತ್ತು ಧ್ಯಾನವನ್ನು ಕಲಿಸುವುದು.. ಇವೆರಡಕ್ಕೂ ಪರಸ್ಪರ ಸಂಬಂಧವಿದೆ. ನಾವು ಕಲಿತದ್ದನ್ನು ಕಲಿಸಲೇಬೇಕು; ಕಲಿಸಲು ಹೆಚ್ಚು ಹೆಚ್ಚು ಉತ್ಸುಕರಾದಷ್ಟೂ ನಾವು ಹೆಚ್ಚು ಹೆಚ್ಚು ಕಲಿಯಲು ಸಮರ್ಥರಾಗುತ್ತೇವೆ.

* * *

೨. ಸರಿಯಾದ ಆಧ್ಯಾತ್ಮಿಕ ಪುಸ್ತಕಗಳನ್ನು ಓದಿ ಮತ್ತು ಅವುಗಳನ್ನು ಓದಲು ಇತರರನ್ನೂ ಸಹ ಪ್ರೋತ್ಸಾಹಿಸಿ.

ಸರಿಯಾದ ಆಧ್ಯಾತ್ಮಿಕ ಪುಸ್ತಕಗಳನ್ನು ಓದುವುದು ಮತ್ತು ಇತರರೂ ಸಹ ಅವೇ ಸರಿಯಾದ ಪುಸ್ತಕಗಳನ್ನು ಓದುವಂತೆ ಅವರನ್ನು ಉತ್ತೇಜಿಸುವುದು ಎರಡನೆಯ ನಿಯಮ.

ಆಧ್ಯಾತ್ಮಿಕ ಪುಸ್ತಕಗಳಲ್ಲಿ ಅಷ್ಟಾಗಿ ಸರಿಯಾಗಿಲ್ಲದ ಆಧ್ಯಾತ್ಮಿಕ ಪುಸ್ತಕಗಳನ್ನು ಗುರುತಿಸುವುದು ಮತ್ತು ಸರಿಯಾದವುಗಳನ್ನು ಪ್ರತ್ಯೇಕಿಸುವುದು ಅಷ್ಟು ಸುಲಭದ ಕೆಲಸವಲ್ಲ!. ಜಗತ್ತಿನಲ್ಲಿ ಒಂದೋ ಬಹುತೇಕ ಪುಸ್ತಕಗಳು ಪೂರ್ಣವಾಗಿ ತಪ್ಪಾಗಿರುವ ಆಧ್ಯಾತ್ಮಿಕ ಪುಸ್ತಕಗಳಾಗಿರುತ್ತವೆ ಅಥವಾ ಶೇ.೫೦ರಷ್ಟು ಸರಿಯಾಗಿರುವ ಪುಸ್ತಕಗಳು ಇರುತ್ತವೆ. ಕೆಲವು ಶೇ.೮೦ರಷ್ಟು ಸರಿಯಾಗಿರಬಹುದು ಮತ್ತು ಹೀಗೆಯೇ ಅಷ್ಟಿಷ್ಟು ಸರಿಯಾಗಿರುತ್ತವೆ!. ಆದಾಗ್ಯೂ, ಸರಿಯಾದ ಆಧ್ಯಾತ್ಮಿಕ ಪುಸ್ತಕಗಳೂ ಸಹ ಇವೆ!... ಅವು ಸಂಪೂರ್ಣವಾಗಿ ಸರಿಯಾಗಿರುವಂಥವು... ಅಂದರೆ, ಶೇ. ನೂರಕ್ಕೆ ನೂರರಷ್ಟು ಸರಿಯಾಗಿ ಇರುವಂಥವು!.

ನಮಗೆ ಅವಶ್ಯವಿರುವುದನ್ನು ಒದಗಿಸುವಂತಹವು ಕೆಲವು ಪುಸ್ತಕಗಳನ್ನು ಇಲ್ಲಿ ಉದಾಹರಿಸಬಹುದಾಗಿದೆ. ಅವೆಂದರೆ, ಓಶೋ, ಲೋಬ್‌ಸ್ಯಾಂಗ್ ರಾಂಪ, ಕಾಸ್ಟನೆಡ, ಯೋಗಾನಂದ ಪರಮಹಂಸ, ಸ್ವಾಮಿ ರಾಮ, ಆನಿಬೆಸೆಂಟ್, ಲೀಡ್‌ಬೀಟರ್, ದೀಪಕ್ ಚೊಪ್ರಾ, ಆನೀಬೆಸೆಂಟ್, ರಿಚರ್ಡ್ ಬಾಕ್, ಜೇನ್ ರಾಬರ್ಟ್, ತಾರ್ಕೋಮ್ ಸರಾಯ್‌ಡೇರಿಯನ್, ಸಿಲ್ವಿಯಾ ಬ್ರೌನ್, ಶಿರ್ಲಿ ಮ್ಯಾಕ್ಲೆನ್, ಲಿಂಡಾ ಗುಡ್‌ಮನ್, ಬಾರ್ಬರಾ ಹ್ಯಾಂಡ್‌ಕ್ಲೊವ್, ಮಿಖೈಲ್ ನೈಮಿ, ಖಲೀಲ್ ಗಿಬ್ರಾನ್ ಇನ್ನೂ ಮುಂತಾದವರ ಕೃತಿಗಳು.

ಅಸಾಮಾನ್ಯವಾದ ಆಧ್ಯಾತ್ಮಿಕ ಮಾಸ್ಟರ್‌ಗಳಿದ್ದಾರೆ!. ಅಸಾಮಾನ್ಯವಾದ ಆಧ್ಯಾತ್ಮಿಕ ಪುಸ್ತಕಗಳಿವೆ!. ಅವನ್ನೇ, ಅಂಥವೇ ಸರಿಯಾದ ಪುಸ್ತಕಗಳನ್ನು ಓದಲು ನಾವು ಪ್ರತಿಯೊಬ್ಬರನ್ನೂ ಸಹ ಉತ್ತೇಜಿಸಬೇಕು.

* * *

೩. ಧ್ಯಾನದ ಅನುಭವವನ್ನು ಮತ್ತು ಜೀವನ ವಿವೇಕವನ್ನು... ಹಾಗೆಯೇ, ಪ್ರತಿಯೊಬ್ಬರಲ್ಲಿಯೂ ಹಂಚಿಕೊಳ್ಳಿ.

ನಾವು ಸಂಗ್ರಹಿಸಿರುವ ಜೀವನ ವಿವೇಕ ಮತ್ತು ಧ್ಯಾನದ ಅನುಭವಗಳನ್ನು ಪ್ರತಿಯೊಬ್ಬರಲ್ಲಿಯೂ ಪರಸ್ಪರ ಹಂಚಿಕೊಳ್ಳುವುದು ಮೂರನೆಯ ನಿಯಮ. ನಾವು ಧ್ಯಾನ ಮಾಡುವಾಗ ಹಲವಾರು ಅನುಭವಗಳನ್ನು ಪಡೆಯುತ್ತೇವೆ. ಅವುಗಳು - ಆಸ್ಟ್ರಲ್ ಟ್ರಾವೆಲ್ ಅನುಭವಗಳು... ಚೈತನ್ಯದ ಚಲನವಲನಗಳು... ಗತಜನ್ಮ ನೆನಪುಗಳ ದರ್ಶನ... ಇಂದ್ರಿಯಾತೀತ ಶಬ್ದಗ್ರಹಣದ ಅನುಭವಗಳು ಇತ್ಯಾದಿಗಳು. ಈ ರೀತಿಯ ಯಾವುದೇ ಅನುಭವಗಳನ್ನು ನಾವು ಇತರರಲ್ಲಿ, ಅಂದರೆ, ನಮ್ಮ ಸಹ-ಧ್ಯಾನಿಗಳಲ್ಲಿ ತಕ್ಷಣದಲ್ಲಿಯೇ ಹಂಚಿಕೊಳ್ಳಲೇಬೇಕು. ಅವುಗಳ ಕುರಿತು ಹಿರಿಯ ಧ್ಯಾನಿಗಳೊಂದಿಗೂ ಸಹ ಚರ್ಚಿಸಲೇಬೇಕು.

* * *

ನಮ್ಮ ಅನುಭವಗಳನ್ನು ನಮ್ಮಷ್ಟಕ್ಕೇ ನಾವೇ ಸುಮ್ಮನೆ ಇಟ್ಟುಕೊಳ್ಳಬಾರದು. ಅದರಿಂದ ನಮಗೆ ಹೆಚ್ಚಿನ ಅನುಕೂಲವೇನೂ ಆಗುವುದಿಲ್ಲ ! ನಮ್ಮ ಅನುಭವಗಳನ್ನು ಬೇರೆ ಯಾರಿಗೂ ತಿಳಿಸದೆ, ಹಂಚಿಕೊಳ್ಳದೆ, ನಮ್ಮಲ್ಲಿಯೇ ಇಟ್ಟುಕೊಳ್ಳುವುದರಿಂದ ನಾವು ’ಬಾವಿ ಕಪ್ಪೆ’ಗಳಾಗುತ್ತೇವೆ. ನಮ್ಮ ಅನುಭವಗಳನ್ನು ಇತರರಲ್ಲಿ ಹಂಚಿಕೊಳ್ಳುವುದರಿಂದ, ನಮ್ಮ ಚಿಕ್ಕದಾದ ಬಾವಿಗಿಂತಲೂ, ಪ್ರಪಂಚವು ವಿಶಾಲವಾಗಿದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ!.

ನಾವು ಗಳಿಸುವ ವಿವೇಕವು ಇಡೀ ಮನುಕುಲದ ಉಪಯೋಗಕ್ಕಾಗಿ ಮೀಸಲಾಗಿರಬೇಕು! ನಮ್ಮ ಅನುಭವಗಳು ನಮಗಾಗಿ ಮಾತ್ರವಲ್ಲ, ಅವುಗಳು ಎಲ್ಲರಿಗಾಗಿಯೂ ಇರುವಂಥವು!

* * *

೪. ಸಮಯ ಸಿಕ್ಕಾಗಲೆಲ್ಲ ಹಾಗೂ ಆಗಾಗ ಸಾಕಷ್ಟು ಸಮಯವನ್ನು ಮೌನದಲ್ಲಿ ಕಳೆಯಿರಿ. ಪ್ರಾಪಂಚಿಕವಾಗಿ ಹರಟೆಕೊಚ್ಚುವುದನ್ನು ನಿಷೇಧಿಸಲಾಗಿದೆ.

ಸಮಯ ಸಿಕ್ಕಾಗಲೆಲ್ಲ ಅಥವಾ ಆಗಾಗ ನಾವು ಸಾಕಷ್ಟು ಸಮಯವನ್ನು ಮೌನದಲ್ಲಿ ಕಳೆಯಬೇಕು. ಇದು ನಾಲ್ಕನೆಯ ನಿಯಮ.

ಅವಶ್ಯಕತೆಯಿದ್ದಷ್ಟು ಮಾತ್ರ ಮಾತನಾಡುವುದನ್ನು ನಾವು ಅಭ್ಯಾಸ ಮಾಡಿಕೊಳ್ಳಬೇಕು! ಅತಿ ಹೆಚ್ಚು ಮಾತನಾಡುವುದಕ್ಕೆ ಹೆಚ್ಚಿನ ಪ್ರಯತ್ನವನ್ನು ಮಾಡಬಾರದು! ನಾವು ಅನಾವಶ್ಯಕವಾಗಿ ಮಾತನಾಡಲೇಬಾರದು!

* * *

ನಾವು ಬಹಳಷ್ಟು ಸಮಯವನ್ನು ಮೌನದಲ್ಲಿಯೇ ಕಳೆಯಬೇಕು. ಮೌನ ಪಾಲನೆಗಾಗಿ ವಾರದಲ್ಲಿ ನಿರ್ದಿಷ್ಟವಾದ ದಿನ ಅಥವಾ ಕೆಲವು ದಿನಗಳನ್ನು ನಿಗದಿಪಡಿಸಿಕೊಳ್ಳಬೇಕು. ಮಾತು ಬೆಳ್ಳಿ, ಮೌನ ಬಂಗಾರ!

’ಮೌನ’ ಎಂಬುದು ಅತಿ ಮಹತ್ವದ್ದು. ಪ್ರತಿಯೊಂದು ಬಾರಿಯೂ ಸಹ ನಾವು ಬಾಯಿ ತೆರೆಯಲೇಬೇಕು ಎಂದೇನಿಲ್ಲ. ಕೆಲವೊಂದು ಬಾರಿ, ಆಗಾಗ್ಗೆ, ನಾವು ಬಾಯಿ ಮುಚ್ಚಿಕೊಂಡು ಇರಲೇಬೇಕಾಗುತ್ತದೆ. ಇದನ್ನೇ ನಾವು ’ನಮ್ಮ ಧ್ವನಿಯ ನಿಶಬ್ದೀಕರಣ’ ಎನ್ನುತ್ತೇವೆ.

* * *

ನಾವು ಮೌನವನ್ನು ಪಾಲಿಸಿದರೆ, ಹಲವು ವಿಷಯಗಳನ್ನು ಅರ್ಥಮಾಡಿಕೊಳ್ಳಲು, ನಮಗೆ ನಾವೇ ಮಾನಸಿಕವಾಗಿ ಸ್ಥಳಾವಕಾಶವನ್ನು ಮಾಡಿಕೊಳ್ಳುತ್ತೇವೆ!

ಮೌನದಲ್ಲಿದ್ದು, ನಮ್ಮ ನಿಜತ್ವ ಮತ್ತು ಇತರರ ನಿಜತ್ವವನ್ನೂ ಸಹ ನಾವು ಅರ್ಥಮಾಡಿಕೊಳ್ಳುತ್ತೇವೆ.

* * *

೫. ಪರಿಣಾಮಕಾರಿ ಧ್ಯಾನಕ್ಕೆ ಪೂರ್ಣ-ಹುಣ್ಣಿಮೆ ರಾತ್ರಿಗಳನ್ನು ಬಳಸಿಕೊಳ್ಳಿ.

ಪರಿಣಾಮಕಾರಿಯಾದ ಧ್ಯಾನವನ್ನು ಮಾಡಲು ಪೂರ್ಣ-ಹುಣ್ಣಿಮೆ ರಾತ್ರಿಗಳನ್ನು ಬಳಸಿಕೊಳ್ಳುವುದು ಐದನೆಯ ನಿಯಮ. ಪ್ರತಿ ತಿಂಗಳ ಪೂರ್ಣ-ಹುಣ್ಣಿಮೆ ರಾತ್ರಿಗಳು ಅತ್ಯಂತ ಪ್ರಶಸ್ತವಾದವುಗಳು! ಅಂತಹ ರಾತ್ರಿಗಳಲ್ಲಿ, ವಿಶೇಷವಾಗಿ ಮತ್ತು ಅಗಾಧವಾಗಿ ದೊರೆಯುವ ವಿಶ್ವಶಕ್ತಿ ಅಂದರೆ ಕಾಸ್ಮಿಕ್ ಎನರ್ಜಿಯನ್ನು ಪಡೆದುಕೊಳ್ಳಲೇಬೇಕು. ಇಂತಹ ಶಕ್ತಿಯು ಮೂರು ದಿನಗಳ ಕಾಲ ದೊರೆಯುತ್ತದೆ. ಅವುಗಳೆಂದರೆ, ಪೂರ್ಣ-ಹುಣ್ಣಿಮೆಯ ರಾತ್ರಿ ಹಾಗೂ ಅದಕ್ಕೂ ಹಿಂದಿನ ದಿನ ಮತ್ತು ಮುಂದಿನ ದಿನ.

 

ಹುಣ್ಣಿಮೆಯ ಈ ರಾತ್ರಿಗಳಲ್ಲಿ, ನಾವು ಹೆಚ್ಚು ಪರಿಣಾಮಕಾರಿಯಾಗಿ ಧ್ಯಾನವನ್ನು ಮಾಡಲೇಬೇಕು. ಒಬ್ಬ ಪಿರಮಿಡ್ ಮಾಸ್ಟರ್ ಆಗಿ ನಾವು ಪೂರ್ಣ-ಹುಣ್ಣಿಮೆಯ ಶಕ್ತಿಯನ್ನು ಪಡೆದುಕೊಳ್ಳಲೇಬೇಕು!.

* * *

೬. ಸಾಧ್ಯವಿದ್ದಷ್ಟೂ ಪಿರಮಿಡ್ ಶಕ್ತಿಯನ್ನು ಧ್ಯಾನಕ್ಕೆ ಬಳಸಿಕೊಳ್ಳಿ.

ಪರಿಣಾಮಕಾರಿ ಧ್ಯಾನಕ್ಕಾಗಿ ಪಿರಮಿಡ್ ಶಕ್ತಿಯನ್ನು ಸಾಧ್ಯವಾದಷ್ಟೂ ಹೆಚ್ಚು ಹೆಚ್ಚಾಗಿ ಬಳಸಿಕೊಳ್ಳುವುದು ಆರನೆಯ ನಿಯಮ.

ನಮ್ಮ ಆಂದೋಲನದ ಹೆಸರೇ, ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಮೂವ್‌ಮೆಂಟ್’. ಅಂದರೆ, ನಮ್ಮ ದೇಹ ಮತ್ತು ಮನಸ್ಸುಗಳ ಚೈತನ್ಯವನ್ನು ವೃದ್ಧಿಸಿಕೊಳ್ಳಲು ನಾವು ಹೆಚ್ಚು ಹೆಚ್ಚಾಗಿ ಪಿರಮಿಡ್ ಶಕ್ತಿಯನ್ನು ಬಳಸಿಕೊಳ್ಳುತ್ತೇವೆ.

* * *

ಪಿರಮಿಡ್‌ನ ಒಳಗೆ ಅಥವಾ ಪಿರಮಿಡ್‌ನಲ್ಲಿ ಕುಳಿತು ಮಾಡುವ ಧ್ಯಾನವು ಉತ್ತಮವಾಗಿರುತ್ತದೆ. ಧ್ಯಾನಮಾಡುವಾಗ ತಲೆಯ ಮೇಲೆ ಪಿರಮಿಡ್ ಟೋಪಿಯನ್ನು ಸಹ ಹಾಕಿಕೊಳ್ಳಬಹುದು. ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟಿ ಮೂವ್‌ಮೆಂಟ್ ಆಂಧ್ರಪ್ರದೇಶದಾದ್ಯಂತ ಮತ್ತು ಭಾರತ ದೇಶದ ವಿವಿಧ ಭಾಗಗಳಲ್ಲಿ ಹಲವಾರು ಪಿರಮಿಡ್‌ಗಳನ್ನು ನಿರ್ಮಿಸಿದೆ. ಅವುಗಳ ಒಳಗೆ ನೂರಾರು ಧ್ಯಾನಿಗಳು ಕುಳಿತು ಪರಿಣಾಮಕಾರಿಯಾದ ಧ್ಯಾನವನ್ನು ಮಾಡಬಹುದಾಗಿದೆ. ಪ್ರತಿಯೊಂದೂ ಹಳ್ಳಿಯೂ ಸಹ ತನ್ನದೇ ಪಿರಮಿಡ್‌ನ್ನು ಹೊಂದಬೇಕು ಮತ್ತು ಪ್ರತಿಯೊಂದು ಪಟ್ಟಣವೂ ಸಹ ಹಲವು ಪಿರಮಿಡ್‌ಗಳನ್ನು ಹೊಂದಬೇಕು.

* * *

ಈಜಿಪ್ಟ್‌ನಲ್ಲಿರುವ ಬೃಹತ್ ಪಿರಮಿಡ್ಡುಗಳ ಮಾದರಿಯಲ್ಲಿ ಈ ಪಿರಮಿಡ್‌ಗಳನ್ನು ನಿರ್ಮಿಸಲಾಗಿದೆ... ಅವುಗಳ ಕೋನಗಳು ಸಮಾನವಾಗಿವೆ. ಶಾಶ್ವತವಾಗಿ ನಿರ್ಮಿಸುವಾಗ, ಪಿರಮಿಡ್‌ಗಳ ಮುಖದಿಕ್ಕನ್ನು ಉತ್ತರ-ದಕ್ಷಿಣವಾದ ಅಕ್ಷರೇಖೆಗೆ ಸಮವಾಗಿ ನಿಗದಿಪಡಿಸಿ ನಿರ್ಮಿಸಬೇಕು. ಪಿರಮಿಡ್‌ಗಳನ್ನು ಯಾವುದೇ ವಸ್ತುವಿನಿಂದ ತಯಾರಿಸಬಹುದು; ಬಹುಮುಖ್ಯವಾಗಿ, ಅವುಗಳಲ್ಲಿ ಸ್ಫಟಿಕದ ಹರಳನ್ನು (ಕ್ರಿಸ್ಟಲ್) ಅಳವಡಿಸಲೇಬೇಕು.

* * *

ಪಿರಮಿಡ್‌ನ ಕೆಳಗೆ ಅಥವಾ ಅದರ ಒಳಗೆ ಧ್ಯಾನ ಮಾಡಿದಾಗ, ಅದು ಸಾಮಾನ್ಯವಾಗಿ ಇತರೆಡೆಯಲ್ಲಿ ಮಾಡುವ ಧ್ಯಾನಕ್ಕಿಂತ, ಮೂರು ಪಟ್ಟು ಚೈತನ್ಯಯುತವಾಗಿ ಪರಿಣಾಮಕಾರಿಯಾಗಿರುತ್ತದೆ. ೨೦ನೇ ಶತಮಾನವು ಪಿರಮಿಡ್ ಚೈತನ್ಯದ ಪುನರಾವಿಷ್ಕಾರದ ಶತಮಾನವಾಗಿದೆ. ೨೧ನೇ ಶತಮಾನದಲ್ಲಿ, ಭೂಮಿಯಾದ್ಯಂತ, ಎಲ್ಲೆಲ್ಲಿಯೂ, ನಾವು ಸಾವಿರಾರು ಧ್ಯಾನದ ಪಿರಮಿಡ್‌ಗಳನ್ನು ಕಾಣಲಿದ್ದೇವೆ!.

 

೭. ಔಷಧಿ ಸೇವನೆಯನ್ನು ಬಿಟ್ಟುಬಿಡಿ: ಕೇವಲ ಧ್ಯಾನ-ಚೈತನ್ಯವೊಂದೇ ಗುಣಪಡಿಸುತ್ತದೆ.

ಏಳನೆಯ ತತ್ವವೇನೆಂದರೆ, ಎಲ್ಲಾ ರೀತಿಯ ಔಷಧಿ ಸೇವನೆಯನ್ನು ಬಿಟ್ಟುಬಿಡುವುದು... ಸ್ವಯಂ ಗುಣಪಡಿಸಿಕೊಳ್ಳಲು ಕೇವಲ ಧ್ಯಾನ-ಚೈತನ್ಯವನ್ನು ಮಾತ್ರ ಅವಲಂಬಿಸುವುದು.

ಭೌತಿಕ ದೇಹವು ಸಹಜ ಮನಸ್ಸಿನ ನೆರಳು ಹೊರತಾಗಿ ಬೇರೇನಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಮೂಲಭೂತವಾದ ವಿವೇಕ. ಮನಸ್ಸು ಹೇಗಿರುತ್ತದೆಯೋ ಹಾಗೇ ದೇಹ ಇರುತ್ತದೆ!. ಮನಸ್ಸನ್ನು ಸರಿಪಡಿಸಿದರೆ, ದೇಹವನ್ನು ಸರಿಪಡಿಸಿದಂತೆಯೇ ಸರಿ. ಮನಸ್ಸನ್ನು ಕೆಡಿಸಿಕೊಂಡರೆ, ದೇಹವೂ ಸಹ ಕೆಡುತ್ತದೆ!

* * *

ಎಲ್ಲಾ ರೋಗಗಳು ಮನೋದೈಹಿಕ ರೋಗಗಳು! (ಸೈಕೋಸೊಮ್ಯಾಟಿಕ್). ರೋಗಗಳು ಮೊದಲು ಮನಸ್ಸಿನಲ್ಲಿ ಸೃಷ್ಟಿಯಾಗುತ್ತವೆ ಮತ್ತು ನಂತರ, ದೇಹದಲ್ಲಿ ಕಾಣಿಸಿಕೊಳ್ಳುತ್ತವೆ!. ಸ್ವಸ್ಥವಾದ ಮನಸ್ಸು ಸ್ವಸ್ಥವಾದ ದೇಹವನ್ನು ಸೃಷ್ಟಿಸುತ್ತದೆ.

* * *

ನಾವು ಮನಸ್ಸಿನೆಡೆಗೆ ಹೆಚ್ಚು ಗಮನವನ್ನು ಹರಿಸಬೇಕು ಎಂದು ಆರೋಗ್ಯ ವಿಜ್ಞಾನವೂ ಸಹ ತಿಳಿಸುತ್ತದೆ. ತಾನು ಒಂದು ಆತ್ಮ ಎಂದು ಮನಸ್ಸು ತಾನೇ ಅರ್ಥಮಾಡಿಕೊಂಡರೆ, ಮನಸ್ಸು ಆರೋಗ್ಯಕರವಾಗುತ್ತದೆ. ಈ ಮೂಲಭೂತವಾದ ತಿಳಿವಳಿಕೆಯನ್ನು ಮತ್ತು ಅನನ್ಯವಾದ ಅನುಭವವನ್ನು ಕೇವಲ ಆಧ್ಯಾತ್ಮ ಮಾತ್ರ ನೀಡಲು ಸಾಧ್ಯ.

* * *

ಎಲ್ಲಾ ಔಷಧಿಗಳು ನಮ್ಮನ್ನು ನಿಜವಾದ ಆರೋಗ್ಯ ವಿಜ್ಞಾನದಿಂದ ಬಹುದೂರ ಕೊಂಡೊಯ್ಯುತ್ತವೆ. ವೈದ್ಯರೂ ಅಗತ್ಯವಿಲ್ಲ.. ಔಷಧಿಗಳೂ ಅಗತ್ಯವಿಲ್ಲ! ಚಿಕ್ಕ ತಲೆನೋವಿನಿಂದ ಆರಂಭಿಸಿ ಮಾರಣಾಂತಕ ರೋಗವಾದ ಕ್ಯಾನ್ಸರ್‌ವರೆಗೆ, ಎಲ್ಲಾ ವ್ಯತ್ಯಯಗಳನ್ನು ನಮ್ಮ ಕರ್ಮಗಳಿಂದ ನಾವೇ ಸೃಷ್ಟಿಸಿಕೊಂಡಿರುವುದು.... ಮತ್ತು ಋಣಾತ್ಮಕವಾದ ಕರ್ಮವನ್ನು ಸಮತೋಲನಗೊಳಿಸಬೇಕಾದುದು ಧನಾತ್ಮಕ ಕರ್ಮದಿಂದ ಅಥವಾ ಧ್ಯಾನದಿಂದ ಮಾತ್ರ.

೮. ಮಾಂಸವನ್ನು ಎಂದಿಗೂ ಸೇವಿಸಬೇಡಿ.. ಮೊಟ್ಟೆಯೂ ಸಹ ಬೇಡ.. ಅಗತ್ಯಕ್ಕೆ ತಕ್ಕಂತೆ ತಿನ್ನಿ.. ಆಸೆಗೆ ತಕ್ಕಂತೆ ಅಲ್ಲ.

ಎಂಟನೆಯ ತತ್ವವೇನೆಂದರೆ... ಮಾಂಸವನ್ನು ಎಂದಿಗೂ ಸೇವಿಸಬೇಡಿ; ಮತ್ತು ಮೊಟ್ಟೆಯೂ ಸಹ ಬೇಡ! ಪ್ರಾಣಿಗಳ ಭಕ್ಷಣೆ ಖಂಡಿತವಾಗಿಯೂ ಕೂಡದು! ಮಾಂಸದ ಆಹಾರ ಬೇಡವೇ ಬೇಡ.. ಕೇವಲ ಸಸ್ಯದ ಆಹಾರ ಮಾತ್ರ!.

ಆಧ್ಯಾತ್ಮಿಕ ಜೀವನಕ್ಕೆ ಪರಿಪೂರ್ಣ ಸಸ್ಯಾಹಾರವು ಕಡ್ಡಾಯವಾಗಿರಬೇಕು. ಆಧ್ಯಾತ್ಮ ಮತ್ತು ಸಸ್ಯಾಹಾರ ಎರಡೂ ಸಹ ಒಂದೇ ಆಗಿವೆ!. ಪ್ರತಿಯೊಬ್ಬರೂ ಸಹ ಸಸ್ಯಾಹಾರಿಯಾಗಲೇಬೇಕು.

ಮಾನವರಿಗೆ ಮಾಂಸಾಹಾರದ ಪಥ್ಯವನ್ನು ಶಿಫಾರಸ್ಸು ಮಾಡುತ್ತಿರುವ ಆಧುನಿಕ ವೈದ್ಯಶಾಸ್ತ್ರವು ತನ್ನ ತಪ್ಪನ್ನು ಅರಿತುಕೊಳ್ಳುತ್ತದೆ. ಮಾನವ ಶರೀರಕ್ಕೆ ಮಾಂಸಾಹಾರದಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಇದೀಗ ಆಧುನಿಕ ವೈದ್ಯಶಾಸ್ತ್ರವು ನಿಧಾನವಾಗಿ ಗುರುತಿಸುತ್ತಿದೆ.

* * *

ಪ್ರೀತಿ ಒಂದೇ ಎಲ್ಲಾ ಧಾರ್ಮಿಕ ಆಂದೋಲನಗಳ ಸೌಹಾರ್ದಯುತವಾದ ತತ್ವ. ಪ್ರೀತಿಯೇ ಧರ್ಮ. ಪ್ರೀತಿ ಎಂದರೆ ಭೂಮಿಯ ಮೇಲಿರುವ ಸಹ-ಜೀವಿಗಳ ಎಡೆಗೆ ಇರುವ ದಯೆ. ಪ್ರಾಣಿಗಳು ಇರುವುದು ಮಾನವನಿಗೆ ಆಹಾರವಾಗಲು ಎಂಬುದು ತಪ್ಪು. ಮನುಷ್ಯನೂ ಸಹ ಪ್ರಾಣಿಪ್ರಪಂಚದ ಒಂದು ಭಾಗವಷ್ಟೇ ಮತ್ತು ಪ್ರಾಣಿಪ್ರಪಂಚವೆಲ್ಲ ಸಸ್ಯಗಳನ್ನು ಅವಲಂಬಿಸಿ ಬದುಕಬೇಕು ಎಂಬುದು ಮೂಲ ವಿನ್ಯಾಸವಾಗಿದೆ.

* * *

ಅತಿಯಾಗಿ ತಿಂದು ನಾವು ಅರಗಿಸಿಕೊಳ್ಳಲಾರೆವು! ನಮ್ಮ ಅಗತ್ಯಕ್ಕೆ ತಕ್ಕಂತೆ ನಾವು ತಿನ್ನಬೇಕೇ ಹೊರತು ನಮ್ಮ ಆಸೆಗೆ ತಕ್ಕಂತೆ ಅಲ್ಲ. ಹಸಿವನ್ನು ತಣಿಸಿಕೊಳ್ಳುವುದೇನೋ ಸರಿಯೇ, ಆದರೆ, ಹೊಟ್ಟೆಬಿರಿಯುವಂತೆ ತಿನ್ನುವುದು ಖಂಡಿತವಾಗಿಯೂ ತಪ್ಪು!.

ನಿಮಗೆ ಹಸಿವಾಗಿದ್ದರೆ ಮಾತ್ರ ನೀವು ತಿನ್ನಬಹುದು. ನಿಮಗೆ ಹಸಿವಾಗಿಲ್ಲದಿದ್ದರೆ, ನೀವು ತಿನ್ನಲೇಬಾರದು. ನಿಮಗೆ ಮರಳಿ ಹಸಿವಾಗುವವರೆಗೂ ತಾಳ್ಮೆಯಿಂದ ಕಾಯಿರಿ, ನಂತರ, ನಿಮ್ಮ ಹಸಿವಿಗೆ ತಕ್ಕಂತೆ ತಿನ್ನಿ.. ಹೆಚ್ಚಾಗಿ ತಿನ್ನಬೇಡಿ. ಹೆಚ್ಚಾಗಿ ತಿನ್ನುವುದರಿಂದಲೇ ಭೌತಿಕ ದೇಹಕ್ಕೆ ಹಲವು ರೀತಿಯ ತೊಂದರೆಗಳು, ಸಮಸ್ಯೆಗಳು ಉಂಟಾಗುತ್ತವೆ.

೯. ಪರಿಶುದ್ಧವಾದ ಪ್ರಕೃತಿಯಲ್ಲಿ ಸಾಕಷ್ಟು ಸಮಯವನ್ನು ಕಳೆಯಿರಿ.. ಉದಾಹರಣೆಗೆ ಕಾಡು, ಹುಲ್ಲುಗಾವಲು, ನದಿಗಳು, ಪರ್ವತಗಳು ಇತ್ಯಾದಿ.

ಒಂಭತ್ತನೆಯ ತತ್ವವೇನೆಂದರೆ... ಪರಿಶುದ್ಧವಾದ ಪ್ರಕೃತಿಯಲ್ಲಿ ಸಾಕಷ್ಟು ಸಮಯವನ್ನು ಕಳೆಯುವುದು!

ನಾವು ಒಂದು ಕಾಡಿಗೆ ಅಥವಾ ಒಂದು ಬೆಟ್ಟದ ತುದಿಗೆ, ಗುಡ್ಡದ ತುದಿಗೆ ಹೋಗಬಹುದು. ಪ್ರಕೃತಿಗೆ ಹೋಗುವುದರಿಂದ, ಪ್ರಕೃತಿಯ ಜೊತೆಯಲ್ಲಿ ಕಾಲ ಕಳೆಯುವುದರಿಂದ, ನಾವು ಹೆಚ್ಚು ಬದಲಾದ ವ್ಯಕ್ತಿಗಳಾಗಿ ಮತ್ತು ಹೆಚ್ಚು ಬಲಶಾಲಿಗಳಾಗಿ ಮತ್ತೆ ಹೊರಹೊಮ್ಮುತ್ತೇವೆ. ಮರಳಿ ಪ್ರಕೃತಿಗೆ!

ದಟ್ಟವಾದ ಅರಣ್ಯ ಪ್ರದೇಶದ ತೆರೆದ ಪ್ರಕೃತಿಯಲ್ಲಿ ಧ್ಯಾನವನ್ನು ಮಾಡುತ್ತಾ ಮೂರು ಹುಣ್ಣಿಮೆ-ರಾತ್ರಿಗಳನ್ನು ಕಳೆಯಿರಿ... ನಂತರ, ಅದರಿಂದ, ನಿಮ್ಮಲ್ಲಿ ಮಹತ್ತರವಾದ ಬದಲಾವಣೆಗಳು ಆಗಿರುವುದನ್ನು ನೀವೇ ನೋಡಬಹುದು.

೧೦. ಯಾವುದೇ ಆಧ್ಯಾತ್ಮಿಕ ದಿರಿಸುಗಳನ್ನು ಅಥವಾ 'ಪವಿತ್ರ'ವಾದ ದೈಹಿಕ 'ಗುರುತು'ಗಳನ್ನು ಎಂದಿಗೂ ಧರಿಸುವುದು ಬೇಡ.

ಹತ್ತನೆಯ ತತ್ವವೇನೆಂದರೆ... ಯಾವುದೇ ಆಧ್ಯಾತ್ಮಿಕ ದಿರಿಸುಗಳನ್ನು ಧರಿಸಬೇಡಿ ಅಥವಾ ದೇಹದ ಮೇಲೆ ಯಾವುದೇ ’ಪವಿತ್ರ’ವಾದ 'ಗುರುತು’ಗಳನ್ನು ಹಾಕಿಕೊಳ್ಳಬೇಡಿ.

ಸಾಮಾನ್ಯವಾದ ಮತ್ತು ಸರಳವಾದ ಪೋಷಾಕುಗಳನ್ನು ಧರಿಸುವುದಕ್ಕೆ ಮಾತ್ರ ನೀವು ಬದ್ಧರಾಗಿರಬೇಕು. ನೀವು ಧರಿಸಿರುವ ಉಡುಪಿನಿಂದಾಗಿ, ನೀವಿರುವ ಒಂದು ಗುಂಪಿನಲ್ಲಿ ನೀವೇ ಎದ್ದುಕಾಣುವಂತಿರಬಾರದು.

ನಿಮ್ಮ ಉಡುಪನ್ನು ನೋಡಿಯೇ, ಒಂದು ಗುಂಪಿನಲ್ಲಿ, ಯಾರೂ ಸಹ ನಿಮ್ಮನ್ನು ಪ್ರತ್ಯೇಕಿಸಿ ಗುರುತಿಸುವಂತೆ ನಿಮ್ಮ ಉಡುಪು ಇರಬಾರದು. ಹಣೆಯಲ್ಲಿ ಅಥವಾ ದೇಹದ ಇತರೆ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ’ಗುರುತು’ಗಳು ಇರಬಾರದು. ಆಧ್ಯಾತ್ಮಿಕತೆ ಎಂದರೆ, ಅದು ಒಬ್ಬನ ಆಂತರಿಕ ಸಾಧನೆಯ ವಿಚಾರವಾಗಿದೆ... ಮತ್ತು ಬೇರೆಯವರಿಗೆ ಅದನ್ನು ತೋರಿಸುವ ಪ್ರಮೇಯವಿಲ್ಲ. ಅದು ತೋರಿಕೆಯ ವಿಷಯವೂ ಸಹ ಆಗಬಾರದು.

೧೧. ಬಾಲ್ಯದಿಂದಲೇ ಮಕ್ಕಳಿಗೆ ಧ್ಯಾನದ ತರಬೇತಿ ನೀಡಿ.

ಹನ್ನೊಂದನೆಯ ತತ್ವವೇನೆಂದರೆ... ಬಾಲ್ಯಾರಂಭದಿಂದಲೇ ಮಕ್ಕಳಿಗೆ ನಾವು ಧ್ಯಾನದ ತರಬೇತಿಯನ್ನು ನೀಡಲೇಬೇಕು.

ಅವರು ಚಿಕ್ಕವರಿದ್ದಾಗಲೇ ಧ್ಯಾನಕ್ಕೆ ಪರಿಚಿತರಾಗಲಿ, ನೀವು ಶಾಲೆಗಳಿಗೆ ಹೋಗಿ, ಧ್ಯಾನಕ್ಕೆ ಕುಳಿತುಕೊಳ್ಳುವುದು ಹೇಗೆ ಎಂಬುದನ್ನು ಅವರಿಗೆ ಬೋಧಿಸಿ. ಅವರೊಂದಿಗೆ ಕುಳಿತು, ಅವರ ಧ್ಯಾನದ ಅನುಭವಗಳನ್ನು ಕೇಳಿ ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಿ! ನೀವು ಮಕ್ಕಳ ಕುರಿತು ಕಾಳಜಿವಹಿಸಿದರೆ, ಇಡೀ ಮನುಕುಲದ ಕುರಿತು ಕಾಳಜಿವಹಿಸಿದ್ದೀರಿ ಎಂದೇ ಅರ್ಥ!

೧೨. ಮಾಸ್ಟರ್‌ಗಳಾಗಿ ಬದುಕುವುದನ್ನು ಕಲಿಯಿರಿ ಶಿಷ್ಯರಾಗಿ ಅಲ್ಲ.

ಹನ್ನೆರಡನೆಯ ತತ್ವವೇನೆಂದರೆ... ಮಾಸ್ಟರ್‌ಗಳಾಗಿ ಬದುಕುವುದನ್ನು ಕಲಿಯಿರಿ. ಎಂದಿಗೂ ನೀವು ಶಿಷ್ಯರು ಎಂದು ಪ್ರತ್ಯೇಕಿಸಿಕೊಳ್ಳುವುದು ಬೇಡ!

ದೀರ್ಘಕಾಲ ನೀವು ಯಾರೊಬ್ಬರ ಶಿಷ್ಯ ಎಂದು ನೀವೇ ಪರಿಗಣಿಸಿಕೊಳ್ಳಬೇಡಿ. ನಾವುಗಳು ಇಲ್ಲಿ ಇರುವುದೇ ಸಾಧ್ಯವಾದಷ್ಟು ಬೇಗ ಮಾಸ್ಟರ್‌ಗಳಾಗುವುದಕ್ಕೆ ಮತ್ತು ಯಾರೊಬ್ಬರ ಖಾಯಂ ಶಿಷ್ಯರಾಗಿರುವುದಕ್ಕೆ ಯಾರೊಬ್ಬರೂ ಸಹ ಇಲ್ಲಿಗೆ ಬಂದಿಲ್ಲ.

ಸಾಮಾನ್ಯವಾಗಿ, ಪ್ರತಿಯೊಬ್ಬರಿಂದಲೂ ಸಹ ಒಂದೊಂದನ್ನು ಕಲಿಯುವುದಕ್ಕೇ ನಾವು ಇಲ್ಲಿಗೆ ಬಂದಿರುವುದು ಮತ್ತು ನಿರ್ದಿಷ್ಟವಾಗಿ ಒಬ್ಬ ಮಾಸ್ಟರ್‌ರ ಖಾಯಂ ಶಿಷ್ಯರಾಗಿಯೇ ಉಳಿಯುವುದಕ್ಕೆ ನಾವು ಇಲ್ಲಿಗೆ ಬಂದಿಲ್ಲ. ಪಿರಮಿಡ್ ಸ್ಪಿರಿಚ್ಯುಯಲ್ ಮೂವ್‌ಮೆಂಟ್‌ಗೆ ಸೇರುವ ಪ್ರತಿಯೊಬ್ಬರೂ ಸಹ, ಸೇರಿದ ಮೊದಲ ದಿನದಿಂದಲೇ ಮಾಸ್ಟರ್‌ಗಳೇ ಆಗಿರುತ್ತಾರೆ.

* * *

ಆಗತಾನೆ ಬಂದವರು ಅಥವಾ ಹೊಸಬರನ್ನು ತಮ್ಮ ’ಶಿಷ್ಯರು’ ಎಂದು ಪಿರಮಿಡ್ ಮಾಸ್ಟರ್‌ಗಳು ಪರಿಗಣಿಸುವುದಿಲ್ಲ... ಬದಲಾಗಿ ವ್ಯವಹಾರಕ್ಕೆ ಹೊಸಬರಾಗಿರುವ ’ಕಿರಿಯ ಸಹ-ಮಾಸ್ಟರ್‌ಗಳು’ ಎಂದೇ ಹೊಸದಾಗಿ ಬಂದವರನ್ನು ಪರಿಗಣಿಸುತ್ತಾರೆ!. ’ಹಿರಿಯರು’ ಮತ್ತು ’ಕಿರಿಯರು’ ಎಂಬ ಭಾವನೆ ಮಾತ್ರ ಅಲ್ಲಿರುತ್ತದೆ, ಅಷ್ಟೇ, ಹೊರತು ಮಾಸ್ಟರ್‌ಗಳು ಮತ್ತು ಶಿಷ್ಯರು ಎಂಬ ಸಂಬಂಧ ಅಲ್ಲಿರುವುದಿಲ್ಲ.

೧೩. ಧ್ಯಾನ ತರಬೇತಿ ಕಾರ್ಯಕ್ರಮದಲ್ಲಿ ಹಣದ ವಿನಿಮಯವನ್ನು ತಿರಸ್ಕರಿಸಿ.

ಹದಿಮೂರನೆಯ ತತ್ವವೇನೆಂದರೆ... ಧ್ಯಾನ ತರಬೇತಿ ಕಾರ್ಯಕ್ರಮದಲ್ಲಿ ಹಣದ ವಿನಿಮಯವನ್ನು ತಿರಸ್ಕರಿಸುವುದು. ಧ್ಯಾನವನ್ನು ಬೋಧಿಸುವುದಕ್ಕೆ ನಾವು ಹಣವನ್ನು ತೆಗೆದುಕೊಳ್ಳಲು ಸಾಧ್ಯವೇ ಇಲ್ಲ.

ಹಣ ಸಂಪಾದಿಸಲು ನಾವು ತರಕಾರಿಯನ್ನು ಮಾರಬಹುದು. ತೋಟಗಾರಿಕೆಯನ್ನು ಮಾಡಬಹುದು... ನಮ್ಮ ಸಂಗೀತವನ್ನು ಮಾರಾಟ ಮಾಡಬಹುದು ಅಥವಾ ಆಂಗ್ಲ ಬೋಧನೆಯನ್ನು ಕೈಗೊಳ್ಳಬಹುದು... ಇಂತಹ ಯಾವುದೇ ಮಾರ್ಗದಲ್ಲಿ ನಾವು ಹಣ ಸಂಪಾದಿಸಬಹುದು... ಆದರೆ, ಧ್ಯಾನವನ್ನು ಬೋಧಿಸಿ ಹಣ ಸಂಪಾದಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ನಾವು ಧ್ಯಾನವನ್ನು ಬೋಧಿಸುವಾಗ ಹಣವನ್ನು ಕೇಳಲು ಸಾಧ್ಯವೇ ಇಲ್ಲ. ಧ್ಯಾನವನ್ನು ಸಂಪೂರ್ಣ ಉಚಿತವಾಗಿಯೇ ಬೋಧಿಸಬೇಕು.

೧೪. ಮೂರ್ತಿಪೂಜೆಯಲ್ಲಿ ಅಥವಾ ಜೀವಂತ ಗುರುಗಳ, ಮಾಸ್ಟರ್‌ಗಳ ಪೂಜೆಯಲ್ಲಿ ತೊಡಗದಿರಿ.

ಹದಿನಾಲ್ಕನೆಯ ತತ್ವವೇನೆಂದರೆ... ದೇವರುಗಳು ಎಂದು ಕರೆಯಲಾಗುವ ಮೂರ್ತಿಗಳ ಪೂಜೆಯಲ್ಲಿ ಅಥವಾ ಜೀವಂತ ಗುರುಗಳು, ಮಾಸ್ಟರ್‌ಗಳು ಇವರ ಪೂಜೆಯಲ್ಲಿ ತೊಡಗಿಕೊಳ್ಳಬಾರದು.

ನಾವೇ ಸ್ವತಃ ದೇವರುಗಳು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ, ಪೂಜೆ ಮಾಡುವ ಪ್ರಮೇಯ ಎಲ್ಲಿದೆ ಸ್ವತಃ ನಮ್ಮೊಳಗೇ ಇರುವ ದೈವತ್ವವನ್ನು ನಾವೇ ಹೊರತರುವ ಅಂಶವು ಇಲ್ಲಿ ಪ್ರಮುಖವಾಗಿದೆ.

ಮೂರ್ತಿಪೂಜೆಯು ಕೇವಲ ಮೂರ್ಖತ್ವದಿಂದ ಕೂಡಿದ್ದು! ಜೀವಂತ ಮಾಸ್ಟರ್‌ಗಳನ್ನು ಪೂಜಿಸಲು ಇಲ್ಲಿ ಅವಕಾಶವೇ ಇಲ್ಲ. ಇಲ್ಲಿ, ಜೀವಂತ ಮಾಸ್ಟರ್‌ಗಳನ್ನು ನಾವು ಕೇವಲ ಮೀರಿಸಬೇಕು ಅಷ್ಟೇ!

೧೫. ಎಲ್ಲಾ ವೈಯಕ್ತಿಕ ಸಮಸ್ಯೆಗಳನ್ನು ತನ್ನ ಧ್ಯಾನದ ಶಕ್ತಿ-ಚೈತನ್ಯದಿಂದಲೇ ಪರಿಹರಿಸಿಕೊಳ್ಳಬೇಕು.

ಹದಿನೈದನೆಯ ತತ್ವವೇನೆಂದರೆ... ತನ್ನ ಎಲ್ಲಾ ವೈಯಕ್ತಿಕ ಸಮಸ್ಯೆಗಳನ್ನು ಸ್ವತಃ ತನ್ನದೇ ಆಧ್ಯಾತ್ಮಿಕ ವಿವೇಕ ಮತ್ತು ಸ್ವತಃ ತನ್ನದೇ ಧ್ಯಾನದ ಶಕ್ತಿ-ಚೈತನ್ಯದಿಂದಲೇ ಪರಿಹರಿಸಿಕೊಳ್ಳುವುದನ್ನು ಕಲಿತುಕೊಳ್ಳುವುದು!

ನಮಗೆಲ್ಲರಿಗೂ ನಮ್ಮವೇ ವೈಯಕ್ತಿಕ ಸಮಸ್ಯೆಗಳು ಇವೆ. ಆದಾಗ್ಯೂ, ನಮ್ಮದೇ ಧ್ಯಾನದ ಶಕ್ತಿಯನ್ನು ಅನ್ವಯಿಸಿಯೇ ನಮ್ಮ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು.

ನಮಗೆ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಇರುತ್ತವೆ... ವ್ಯಕ್ತಿ-ವ್ಯಕ್ತಿಗಳ ನಡುವಣ ಸಂಬಂಧಗಳಲ್ಲಿ ಸಿಕ್ಕಿಕೊಂಡಿರುತ್ತೇವೆ... ನಾವು ಧ್ಯಾನವನ್ನು ಮಾಡಿದರೆ, ಅಂತಹ ಸಮಸ್ಯೆಗಳು ತಾವಾಗಿಯೇ ಪರಿಹಾರಗೊಳ್ಳುತ್ತವೆ. ನಮ್ಮ ಹಣಕಾಸಿನ ಸಮಸ್ಯೆಗಳೂ ಸಹ ಇದೇ ರೀತಿಯಲ್ಲಿಯೇ ಪರಿಹಾರವಾಗುತ್ತವೆ... ನಾವು ಧ್ಯಾನ ಮಾಡುತ್ತೇವೆ... ಸರಿಯಾದ ವ್ಯಕ್ತಿಗಳೊಂದಿಗೆ ವ್ಯವಹರಿಸುತ್ತೇವೆ... ಮತ್ತು ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳುತ್ತೇವೆ!

ನಾವು ಮನೆಯಲ್ಲಿ ಧ್ಯಾನ ಮಾಡದಿದ್ದರೆ, ಮಾರುಕಟ್ಟೆಗೆ ಹೋದಾಗ, ಸರಿಯಾಗಿಲ್ಲದ ವ್ಯಕ್ತಿಗಳೊಂದಿಗೆ ವ್ಯವಹಾರದಲ್ಲಿ ಸಿಲುಕುತ್ತೇವೆ. ನಾವು ಮನೆಯಲ್ಲಿ ಧ್ಯಾನ ಮಾಡಿದರೆ, ಮಾರುಕಟ್ಟೆಯಲ್ಲಿ ಸರಿಯಾದ ವ್ಯಕ್ತಿಗಳನ್ನು ಆಕರ್ಷಿಸುತ್ತೇವೆ.. ಮತ್ತು ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳುತ್ತೇವೆ. ಆದ್ದರಿಂದ, ಸ್ವತಃ ನಮ್ಮದೇ ಧ್ಯಾನದ ಶಕ್ತಿಯನ್ನು ಬಳಸಿ ನಮ್ಮ ಎಲ್ಲಾ ಸಮಸ್ಯೆಗಳನ್ನು ಎದುರಿಸುವುದನ್ನು ಮತ್ತು ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದನ್ನು ಕಲಿಯೋಣ.

೧೬. ಸಹಜವಾದ ಕುಟುಂಬ-ಜೀವನದ ಸುಖಾನುಭವ ಪಡೆಯಿರಿ; ಸನ್ಯಾಸತ್ವ ಪಡೆಯುವುದು ಬೇಡ ಮತ್ತು ಇತರ ಎಲ್ಲಾ ಜೀವಿಗಳಿಗೆ ಸಂತಸವನ್ನು ನೀಡಿ.

ಹದಿನಾರನೆಯ ತತ್ವವೇನೆಂದರೆ.. ಸಹಜ ಕುಟುಂಬ-ಜೀವನವನ್ನು ಸುಖವಾಗಿ ಅನುಭವಿಸುವುದು ಮತ್ತು ಇತರ ಎಲ್ಲಾ ಜೀವಿಗಳಿಗೆ ಸಂತಸವನ್ನು ನೀಡುವುದು.

ಮಾನವನ ಉಳಿವಿಗೆ ಮತ್ತು ಮಾನವನ ಸಂತೋಷಕ್ಕೆ ಲೈಂಗಿಕತೆಯು ಬಹಳ ಮುಖ್ಯವಾದುದು! ಅತ್ಯಂತ ಹೆಚ್ಚು ಲೈಂಗಿಕಾಸಕ್ತರಾಗಿದ್ದರೂ ಸಹ, ಅವರಲ್ಲಿ, ಅಷ್ಟೇ ಹೆಚ್ಚಾಗಿ ಆಧ್ಯಾತ್ಮಿಕರಾಗಿರುವವರು ಅನೇಕರಿದ್ದಾರೆ!

ಅಹಿಂಸೆಯನ್ನು ತಿರಸ್ಕರಿಸಬೇಕೇ ಹೊರತು, ಲೈಂಗಿಕತೆಯನ್ನಲ್ಲ... ಹಿಂಸೆಯು ಆಧ್ಯಾತ್ಮ ವಿರೋಧಿಯೇ ಹೊರತು, ಲೈಂಗಿಕತೆಯಲ್ಲ! ಹಿಂಸಾತ್ಮಕ ಲೈಂಗಿಕತೆಯು, ಅದು ನಮ್ಮ ಜೀವನ-ಸಂಗಾತಿಯೊಂದಿಗಾದರೂ ಸಹ, ಸಮರ್ಥನೀಯವಲ್ಲ ಎಂಬುದನ್ನು ನಾವು ಮನಗಾಣಬೇಕು!

೧೭. ಎಲ್ಲಾ ನಗರಗಳಲ್ಲಿ, ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿ ಪಿರಮಿಡ್ ಧ್ಯಾನ ಕೇಂದ್ರಗಳನ್ನು ಸ್ಥಾಪಿಸಿ.

ಹದಿನೇಳನೆಯ ತತ್ವವು ಯಾವುದಕ್ಕೆ ಸಂಬಂಧಿಸಿದೆ ಎಂದರೆ, ಎಲ್ಲಾ ನಗರಗಳಲ್ಲಿ, ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿ ಪಿರಮಿಡ್ ಧ್ಯಾನ ಕೇಂದ್ರಗಳನ್ನು ಸ್ಥಾಪಿಸಿ. ಇದು ಎಲ್ಲಾ ಪಿರಮಿಡ್ ಮಾಸ್ಟರ್‌ಗಳು ಮಾಡಲೇಬೇಕಾದ ಕೆಲಸ.

ಎಲ್ಲಾ ಹಳ್ಳಿಗಳಲ್ಲಿ ಮತ್ತು ನಗರ ಹಾಗೂ ಪಟ್ಟಣಗಳ ಎಲ್ಲಾ ಬಡಾವಣೆಗಳಲ್ಲಿ ಪಿರಮಿಡ್ ಧ್ಯಾನ ಕೇಂದ್ರಗಳು ಆರಂಭಗೊಳ್ಳಬೇಕು. ಪ್ರತಿಯೊಂದೂ ಪಿರಮಿಡ್ ಧ್ಯಾನ ಕೇಂದ್ರವೂ ಸಹ ಆಧ್ಯಾತ್ಮಿಕ ಗ್ರಂಥಾಲಯವನ್ನು ಹೊಂದಿರಬೇಕು. ಪ್ರತಿಯೊಂದೂ ಪಿರಮಿಡ್ ಧ್ಯಾನ ಕೇಂದ್ರವೂ ಸಹ ಸಾರ್ವಜನಿಕರಿಗೆ ಉಚಿತವಾಗಿ ಸೇವೆಯನ್ನು ಒದಗಿಸಬೇಕು.

೧೮. ತಮ್ಮ ಧ್ಯಾನದ ಅನುಭವಗಳು ಮತ್ತು ವೈಯಕ್ತಿಕ ಆಧ್ಯಾತ್ಮಿಕ ಪರಿವರ್ತನೆ ಕುರಿತು ಪ್ರಕಟಣೆಗಳನ್ನು ಹೊರತರಬೇಕು.

ಹದಿನೆಂಟನೆಯ ತತ್ವವೇನೆಂದರೆ, ಧ್ಯಾನದ ಅನುಭವಗಳು ಮತ್ತು ವೈಯಕ್ತಿಕ ಆಧ್ಯಾತ್ಮಿಕ ಪರಿವರ್ತನೆ ಕುರಿತು ಪ್ರಕಟಣೆಗಳನ್ನು ಹೊರತರುವುದು.

ನಮ್ಮ ಅನುಭವಗಳನ್ನು ನಾವು ಬರೆಯಬೇಕು ಮತ್ತು ಅದನ್ನು ಪ್ರಕಟಿಸಬೇಕು. ಪ್ರತಿಯೊಬ್ಬ ಪಿರಮಿಡ್ ಮಾಸ್ಟರ್ ಸಹ ಇದನ್ನು ಮಾಡಬೇಕು. ಇದೇ ಈ ಜಗತ್ತಿಗೆ - ನಿರ್ದಿಷ್ಟವಾಗಿ ಪ್ರತಿಯೊಬ್ಬರದೂ, ತಮ್ಮದೇ ಸ್ವಂತ - ಬರವಣಿಗೆ ರೂಪದ ಕೊಡುಗೆಯಾಗುತ್ತದೆ.

Go to top