“ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್”
ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಸ್ ಆಂದೋಲನವು ಮನುಕುಲಕ್ಕೆ ಎರಡು ಮಹಾನ್ ಕೊಡುಗೆಗಳನ್ನು ಮರುಪರಿಚಯಿಸಿದೆ: ಒಂದು, ಆನಾಪಾನಸತಿ ಧ್ಯಾನ ಮತ್ತು ಇನ್ನೊಂದು ಪಿರಮಿಡ್ ಶಕ್ತಿ! ಆನಾಪಾನಸತಿ ಧ್ಯಾನವು ಇಡೀ ಮನುಕುಲವನ್ನು ವೇಗವಾಗಿ ಪರಿವರ್ತಿಸುತ್ತಿದ್ದರೆ, ಮೈತ್ರೇಯ ಬುದ್ಧ ಪಿರಮಿಡ್ನಲ್ಲಿರುವ ’ಪಿರಮಿಡ್ ಶಕ್ತಿ’ಯ ಅನುಭವ ಪಡೆದುಕೊಳ್ಳಲು, ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್, ಜಗತ್ತಿನಾದ್ಯಂತ ಇರುವ ಎಲ್ಲಾ ಆಧ್ಯಾತ್ಮಿಕ ಜಿಜ್ಞಾಸುಗಳನ್ನು ಸ್ವಾಗತಿಸುತ್ತಿದೆ.
ಮತ್ತೊಂದೆಡೆ, ಭೂಗ್ರಹದ ನಿವಾಸಿಗಳಲ್ಲಿ – ಅಹಿಂಸೆ, ಸಹ-ಕಾರ್ಯಾಚರಣೆ ಮತ್ತು ಸಾಮರಸ್ಯ, ದೇಶಪ್ರಜ್ಞೆ ತುಂಬಿ ಸೌಹಾರ್ದ ಜೀವನವನ್ನು ನಡೆಸುವಂತೆ ಮತ್ತು ಸಮಾಜದಲ್ಲಿ ಸಸ್ಯಾಹಾರದ ಪ್ರಾಮುಖ್ಯತೆ ಕುರಿತ ಜಾಗೃತಿಯನ್ನು ಉಂಟುಮಾಡುವ ಗುರಿಯನ್ನು ಈ ಆಂದೋಲನವು ಹೊಂದಿದೆ.
ಅರ್ಪಣಾ ಮನೋಭಾವವುಳ್ಳ, ಹಿರಿಯ ಪಿರಮಿಡ್ ಮಾಸ್ಟರ್ಗಳ ಒಂದು ತಂಡವು ಆರಂಭಿಸಿದ ‘ಪಿರಮಿಡ್ ಸ್ಪಿರಿಚ್ಯುಯಲ್ ಟ್ರಸ್ಟ್’ ೨೦೦೩ರಲ್ಲಿ ಈ “ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್” ಹೆಸರಿನಲ್ಲಿ ಈ ಪ್ರದೇಶವನ್ನು ಅಭಿವೃದ್ಧಿಪಡಿಸಿತು. ಇದು, ಗುಡ್ಡಗಳು ಹಾಗೂ ಅರಣ್ಯದಿಂದ ಸುತ್ತುವರೆದಿರುವ, ಪ್ರಶಾಂತವಾದ, ೨೬ ಎಕರೆಗಳ ಭೂಪ್ರದೇಶದಲ್ಲಿ ನೆಲೆಗೊಂಡಿದೆ. ಈ ಪ್ರದೇಶದುದ್ದಕ್ಕೂ ನೈಸರ್ಗಿಕ ಝರಿಯೊಂದು ಸದಾ ಹರಿಯುತ್ತಿದ್ದು, ಇಡೀ ಪ್ರದೇಶವು ಒಂದು ಅಗಾಧವಾದ ಶಕ್ತಿವಲಯವಾಗಿದೆ. ಧ್ಯಾನ ಮಾಡಲು, ವಿಶ್ರಾಂತಿ ಪಡೆಯಲು ಅಥವಾ ಹೊಸ ಜೀವನ ಕೌಶಲ್ಯಗಳನ್ನು ಕಲಿಯಲು ಅಥವಾ ಸುಮ್ಮನೆ ನಿಸರ್ಗದ ಜೊತೆ ಒಂದಾಗಿ ಇರಲು ಈ ಪಿರಮಿಡ್ ವ್ಯಾಲಿಯು ಒಂದು ಸ್ವರ್ಗದಂತಿದೆ.
ಪಿರಮಿಡ್ ವ್ಯಾಲಿಯಲ್ಲಿರುವ “ಮೈತ್ರೇಯ ಬುದ್ಧ ಪಿರಮಿಡ್” ಎಂಬ ಹೆಸರಿನ ಪಿರಮಿಡ್ ಮಾನವಕುಲದ ಆಧ್ಯಾತ್ಮಿಕ ಪ್ರಗತಿಗೆ ಮೀಸಲಾಗಿರುವ ಜಗತ್ತಿನ ಅತಿದೊಡ್ಡ ಪಿರಮಿಡ್. ಇದು ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ ಸಂಸ್ಥೆಯ ಕಿರೀಟದಲ್ಲಿರುವ ಒಂದು ಅನರ್ಘ್ಯರತ್ನ. ಬೆಂಗಳೂರಿನಲ್ಲಿ ಬೃಹತ್ ಪಿರಮಿಡ್ನ್ನು ನಿರ್ಮಿಸಬೇಕು ಎಂದು, ೧೯೯೮ರಲ್ಲಿ ಪತ್ರೀಜಿಯವರು ಕನಸು ಕಂಡರು. ಆ ಕನಸು ೨೦೦೫ರ ಮೇ ೧೯ರಂದು ನನಸಾಯಿತು. ಅಂದು ಬುದ್ಧಪೂರ್ಣಿಮೆ ಸಂಭ್ರಮಾಚರಣೆಯ ಸಂದರ್ಭ, ಈ ’ಮೈತ್ರೇಯ ಬುದ್ಧ ಪಿರಮಿಡ್’ಗೆ ಆ ದಿನದಂದು ಪತ್ರೀಜಿಯವರು ಪ್ರಾಣಪ್ರತಿಷ್ಠಾಪನೆಯನ್ನು ಮಾಡಿದರು. ೨೦೦೪ ನವೆಂಬರ್ ೨೧ರಂದು ಕೆಲಸ ಆರಂಭಗೊಂಡು ಕೇವಲ ಆರು ತಿಂಗಳೊಳಗೆ ನಿರ್ಮಾಣದ ಸಂರಚನೆಯು ಎದ್ದುನಿಂತಿತು.
ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ ಶಂಭಾಲದ ಶಕ್ತಿಗಳನ್ನು ಕ್ರೋಡೀಕರಿಸಿಕೊಂಡಿರುವ ಪ್ರದೇಶ ಎಂದು ಬ್ರಹ್ಮರ್ಷಿ ಪತ್ರೀಜಿಯವರು, ೨೦೦೫ರ ಬುದ್ಧಪೂರ್ಣಿಮೆಯ ದಿನದಂದು ಘೋಷಿಸಿದರು. ಇದು ಪ್ರಪಂಚದಾದ್ಯಂತದ ಆಧ್ಯಾತ್ಮಿಕ ಮಾಸ್ಟರ್ಗಳ ಹೊಸ ಕೇಂದ್ರವಾಗಿದೆ ಎಂದೂ ಸಹ ಅವರು ಹೇಳಿದರು.
೧೦೧ ಅಡಿಗಳು ೯.೫ ಇಂಚುಗಳ ಎತ್ತರ ಹಾಗೂ ೧೬೦ x ೧೬೦ ಅಡಿಗಳ ತಳವಿಸ್ತಾರವನ್ನು ಹೊಂದಿರುವ ಈ ಬೃಹತ್ ಪಿರಮಿಡ್ ೨೦ ಅಡಿಗಳ ಆಳದಷ್ಟು ಆರ್.ಸಿ.ಸಿ. ಅಡಿಪಾಯದ ಮೇಲೆ ನಿರ್ಮಿಸಲಾಗಿರುವ ಉಕ್ಕಿನ ಬೃಹತ್ ಸಂರಚನೆಯಾಗಿದೆ. ಯಾವುದೇ ನಿರ್ದಿಷ್ಟ ಸಮಯದಲ್ಲಿ ಸುಮಾರು ೫೦೦೦ ಜನರು ಪಿರಮಿಡ್ ಒಳಗೆ ಕುಳಿತು ಧ್ಯಾನ ಮಾಡಬಹುದು. ಪಿರಮಿಡ್ನ ಮಧ್ಯಭಾಗದಲ್ಲಿ, ತಳಭಾಗದಿಂದ ಮೂರನೇ ಒಂದರಷ್ಟು ಎತ್ತರದಲ್ಲಿ ರಚಿಸಲಾಗಿರುವ ಅತ್ಯದ್ಭುತವಾಗಿರುವ ’ಕಿಂಗ್ಸ್ ಚೇಂಬರ್’ನಲ್ಲಿ ಒಮ್ಮೆಗೆ ೬೦ ಜನರು ಕುಳಿತು ಧ್ಯಾನ ಮಾಡಬಹುದಾಗಿದ್ದು, ಈ ಕಿಂಗ್ಸ್ ಚೇಂಬರ್, ಪಿರಮಿಡ್ನೊಳಗಿನ ಅತ್ಯಂತ ಶಕ್ತಿಯುತ ತಾಣವಾಗಿದೆ. ಈ ಬೃಹತ್ ಪಿರಮಿಡ್ನ ಚೈತನ್ಯಶಕ್ತಿಯನ್ನು ಹೆಚ್ಚಿಸಲು ಸಂರಚನೆಯ ಚೌಕಟ್ಟುಗಳೊಳಗೆ ೭೦೦ ಸ್ಫಟಿಕಗಳನ್ನು ಇರಿಸಲಾಗಿದೆ.
ಈ ಪಿರಮಿಡ್ನ ಮೇಲೆ, ಸುಮಾರು ೪೧.೬೦೦ ಚದರಡಿಗಳಷ್ಟು ವಿಸ್ತಾರದಲ್ಲಿ , ಎಲ್ಲಾ ನಾಲ್ಕು ಕಡೆಗಳಲ್ಲಿ ಗಾಳಿ, ನೀರು, ಅಗ್ನಿ ಮತ್ತು ಭೂಮಿಯನ್ನು ಸಂಕೇತಿಸುವ ನೈಸರ್ಗಿಕ ಅಂಶಗಳನ್ನು ಬಿಂಬಿಸುವ, ಸುಂದರವಾದ, ವಿಸ್ಮಯಕಾರಿಯಾಗಿರುವ ಉಬ್ಬುಶಿಲ್ಪಗಳನ್ನು ರಚಿಸಲಾಗಿದೆ. ಪಿರಮಿಡ್ನೊಳಗೆ ಧ್ಯಾನ ಮಾಡುವ ಮೂಲಕ ನಿಸರ್ಗದ ಐದನೇ ಅಂಶವಾದ ’ಆಕಾಶ ತತ್ವ’ದ ಅನುಭವವನ್ನು ಪಡೆಯಬಹುದು.
ಪಿರಮಿಡ್ನ ನೆಲಮಾಳಿಗೆಯಲ್ಲಿ ಒಂದು ಹಜಾರದಂತಹ ಹಾಲ್ ಇದೆ. ಅಲ್ಲಿ ಒರಗಿಕೊಂಡು ಮಲಗಿರುವ ಮತ್ತು ಕುಳಿತಿರುವ ಬುದ್ಧನ ವಿಗ್ರಹಗಳಿವೆ. ಮೌನವಾಗಿಯೇ ಕುಳಿತು, ಕಣ್ಣುಗಳಿಂದ ನೋಡಿ ಆನಂದಿಸಲು ಸುಂದರವಾದ ಉಬ್ಬುಶಿಲ್ಪಗಳ ಕಲೆಯಿಂದ ಕೂಡಿರುವ ಮೇಲ್ಛಾವಣಿ ಇದೆ. ಅಲ್ಲದೆ, ಆನಂದಿಸಲು ಇನ್ನೂ ಅನೇಕ ಸಂಗತಿಗಳು ಅಲ್ಲಿವೆ.
ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ಗೆ ಸಾವಿರಾರು ಆಧ್ಯಾತ್ಮಿಕ ಜಿಜ್ಞಾಸುಗಳು ಭೇಟಿನೀಡಿದ್ದಾರೆ. ಅವರಿಗಾಗಿ, ಬ್ರಹ್ಮರ್ಷಿ ಪತ್ರೀಜಿ ಮತ್ತು ಇತರ ಅನೇಕ ಅತ್ಯಂತ ಹಿರಿಯ ಪಿರಮಿಡ್ ಮಾಸ್ಟರ್ಗಳು ನಡೆಸಿದ ಅನೇಕಾನೇಕ “ಗುಂಪು ಧ್ಯಾನ” ಗೋಷ್ಠಿಗಳಿಗೆ ಈ ಪಿರಮಿಡ್ ವ್ಯಾಲಿಯು ಸಾಕ್ಷಿಯಾಗಿದೆ.
ಯಾವುದೇ ಗುಂಪಿಗೆ ಸೇರಿದ ಆಧ್ಯಾತ್ಮಿಕ ಜಿಜ್ಞಾಸುಗಳಿಗೆ ಈ ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ ಒಂದು ಮುಕ್ತ ವೇದಿಕೆಯಾಗಿದ್ದು, ಈಗಾಗಲೇ – ಯೋಗದಾ ಸತ್ಸಂಗ ಸಮಿತಿ, ಶ್ರೀ ಕುಂಡಲಿನಿ ಯೋಗ, ಓಶೋ ಧ್ಯಾನ ಕೇಂದ್ರ, ನಾರಾಯಣ ಪ್ರಜ್ಞಾ ಸಂಘ, ಸ್ಪಿರಿಚ್ಯುಯಲ್ ಸಲ್ಯೂಷನ್ಸ್ ಸಂಸ್ಥೆ ಇತ್ಯಾದಿ ವಿವಿಧ ಸಂಸ್ಥೆಗಳು – ತಮ್ಮ ಕಾರ್ಯಚಟುವಟಿಕೆಗಳು ಮತ್ತು ತಮ್ಮ ಗುಂಪಿನ ಧ್ಯಾನಗೋಷ್ಠಿಗಳನ್ನು ಈ ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ನಲ್ಲಿ ನಡೆಸಿವೆ. ಸಿದ್ಧಿ ಸಮಾಧಿ ಯೋಗ, ಆರ್ಟ್ ಆಫ್ ಲಿವಿಂಗ್, ಧ್ಯಾನ ಪ್ರೀತಂ ಮತ್ತು ಇತರ ಅನೇಕ ಇತರ ಸಂಸ್ಥೆಗಳಿಂದ ಬಂದ ಜಿಜ್ಞಾಸುಗಳು ಸಹ ಇಲ್ಲಿಗೆ ಭೇಟಿ ನೀಡಿ ಪಿರಮಿಡ್ ಶಕ್ತಿಚೈತನ್ಯದ ಪರಿಚಯವನ್ನು ಮಾಡಿಕೊಂಡಿದ್ದಾರೆ.
ಧ್ಯಾನ ವಿಧಾನದ ಸಂಕ್ಷಿಪ್ತ ವಿವರಣೆ ನೀಡುವ ಕೇಂದ್ರ, ಉಪಾಹಾರ ಮಂದಿರ, ಊಟದ ಹಾಲ್ನಂತಹ (ನಿತ್ಯ ಅನ್ನದಾನ ಸೇವಾ) ಸೌಕರ್ಯಗಳ ಸಹಿತ ಈ ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ ಸಜ್ಜುಗೊಂಡಿದೆ. “ಶಾಂತಂ” ಹೆಸರಿನ ಕೊಠಡಿಗಳ ಬ್ಲಾಕ್, ‘ಧರ್ಮಂ’ ಮತ್ತು ‘ವೈಶಾಖಿ’ ಹೆಸರಿನ ಡಾರ್ಮಿಟರಿ ಬ್ಲಾಕ್ಗಳು, ‘ಸ್ವಚ್ಛಂ’ ಹೆಸರಿನ ವಿವಿಧೋದ್ದೇಶದ ಹಾಲ್, ‘ಮಾರ್ಪ’ ಮತ್ತು ‘ಮಿಲಾರೇಪ’ ಹೆಸರಿನ ಪಗೋಡಾ ಕಾಟೇಜ್ಗಳು – ಇವೆಲ್ಲವೂ, ಒಮ್ಮೆಗೆ, ಸುಮಾರು ೫೦೦ ಜನರ ವಸತಿಗಾಗಿ ಬಳಕೆಯಾಗುತ್ತಿವೆ. ವಿಶೇಷವಾದ ಕಾರ್ಯಕ್ರಮಗಳ ಸಂದರ್ಭದಲ್ಲಿ ಬರುವ ಜನರಿಗಾಗಿ ೪೦೦ ಜನರು ಉಳಿಯಬಹುದಾದ, ಸುಂದರವಾದ ಡೇರೆಗಳನ್ನು ಹಾಕಲಾಗಿದೆ. ಬೆಟ್ಟದ ತುದಿಯಲ್ಲಿ ಇರುವ ‘ತಪಸ್ಥಳ’ ಎಂಬ ಹೆಸರಿನ ಧ್ಯಾನ ಸ್ಥಳವು ಧ್ಯಾನಿಗಳಿಗೆ ಒಂದು ವಿಶಿಷ್ಟ ಧ್ಯಾನಾನುಭವವನ್ನು ನೀಡುವ ಜೊತೆಗೆ ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ನ ವಿಹಂಗಮವಾದ ಪಕ್ಷಿನೋಟವನ್ನು ನೀಡುತ್ತದೆ.
ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ ನಿಯಮಿತವಾಗಿ, ಉಚಿತವಾಗಿ, ಕೆಳಗಿನ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ.
ನಿತ್ಯ ಧ್ಯಾನ ತರಗತಿಗಳು
“ಹರ್ಷದಾಯಕ ಜೀವನಕ್ಕಾಗಿ ಧ್ಯಾನ” ಪ್ರತಿ ಭಾನುವಾರದ ಕಾರ್ಯಾಗಾರ
ಯುವಕರಲ್ಲಿ ಸ್ಪೂರ್ತಿಯನ್ನು ತುಂಬಲು “ಧ್ಯಾನ ಯುವಜನ” ಪ್ರತಿ ಮೊದಲ ಶನಿವಾರದಂದು ನಡೆಯುವ ಕಾರ್ಯಕ್ರಮ
ಪ್ರತಿ ತಿಂಗಳ ೧೫ ರಂದು ಮಹಿಳೆಯರಿಗೆ ಪ್ರತ್ಯೇಕವಾಗಿ “ಧ್ಯಾನ ಮಹಿಳಾ ಯಜ್ಞ”
ಪ್ರತಿ ತಿಂಗಳ ೨೫ ರಂದು ಹಿರಿಯ ನಾಗರಿಕರಿಗೆ “ಆಧ್ಯಾತ್ಮಿಕ ಏಕಾಂತ”
ಪ್ರತಿ ತಿಂಗಳ ೨೦ ರಂದು ಗ್ರಾಮೀಣ ಜನರ ಸಶಕ್ತೀಕರಣಕ್ಕಾಗಿ “ಧ್ಯಾನ ಬೆಳಗು”
“ಪ್ರೇರಣ ಹಾಗೂ ಪ್ರಕ್ಷಾಳನ” ಕನ್ನಡದಲ್ಲಿ ಒಂದು ಪ್ರೇರೇಪಣಾ ಕಾರ್ಯಕ್ರಮ, ಪ್ರತಿ ಎರಡನೇ ಶನಿವಾರ ಮತ್ತು ಭಾನುವಾರ
ಪ್ರತಿ ತಿಂಗಳ ಹುಣ್ಣಿಮೆ ದಿನದಂದು, “ಮೂನ್-ಮ್ಯೂಸಿಕ್-ಮೆಡಿಟೇಷನ್” ಸಂಗೀತ ಧ್ಯಾನ ಕಾರ್ಯಕ್ರಮ
ಪ್ರತಿ ವರ್ಷ ಮೇ ತಿಂಗಳಲ್ಲಿ “ಬುದ್ಧಪೂರ್ಣಿಮೆ ಸಂಭ್ರಮಾಚರಣೆ”
ಹಿರಿಯ ಪಿರಮಿಡ್ ಮಾಸ್ಟರ್ಗಳೊಡನೆ ಒಡನಾಟ
ಇವೆಲ್ಲವುಗಳ ಜೊತೆಗೆ, ಜಗತ್ತಿನ ಎಲ್ಲ ಮಾಸ್ಟರ್ಗಳು ಮತ್ತು ಆಧ್ಯಾತ್ಮಿಕ ವಿಜ್ಞಾನಿಗಳನ್ನು ಒಂದು ಸಾಮಾನ್ಯ ವೇದಿಕೆ ಮೇಲೆ ತರಲು “ಜಾಗತಿಕ ಆಧ್ಯಾತ್ಮಿಕ ವಿಜ್ಞಾನಿಗಳ ಸಮ್ಮೇಳನ”ವನ್ನು ಪ್ರತಿ ವರ್ಷವೂ ಸಹ ಸಂಘಟಿಸಲಾಗುತ್ತಿದೆ.
ಈ ವರ್ಷದ ಆರಂಭದಲ್ಲಿ, “ಬೆಂಗಳೂರು ಮಿರರ್” ಹೆಸರಿನ ಇಂಗ್ಲಿಷ್ ದಿನಪತ್ರಿಕೆಯು ಓದುಗರ ಒಂದು ಸ್ಪರ್ಧೆಯನ್ನು ನಡೆಸಿತು. ಹಾಗೂ, ಜನರ ಆಯ್ಕೆಗಳನ್ನು ದಾಖಲಿಸುವ ಮೂಲಕ “ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್”ಅನ್ನು “ಬೆಂಗಳೂರಿನ ಏಳು ಅದ್ಭುತಗಳಲ್ಲಿ ಒಂದು” ಎಂದು ಆಯ್ಕೆ ಮಾಡಿ, ಘೋಷಿಸಿತು. ಈ ಘೋಷಣೆಯ ನಂತರ ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್ ಲಕ್ಷಾಂತರ ಜನರ ಗಮನವನ್ನು ಸೆಳೆಯಿತು.
ಇಂದು, ಈ “ಮೈತ್ರೇಯ ಬುದ್ಧ ಪಿರಮಿಡ್” ಬೆಂಗಳೂರಿನ ಹಲವಾರು ಗಮನಾರ್ಹ ಹೆಗ್ಗುರುತುಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಮತ್ತು “ಭಾರತದ ಆಧ್ಯಾತ್ಮಿಕ ರಾಜಧಾನಿ” ಎಂದು ಬೆಂಗಳೂರನ್ನು ಕರೆಯುವಷ್ಟರಮಟ್ಟಿಗೆ ಈ ಪಿರಮಿಡ್ ವ್ಯಾಲಿಯು ಬೆಂಗಳೂರಿನ ಪ್ರತಿಷ್ಠಿತ ಮೆಟ್ರೋ ಸಿಟಿ ವೈಭವಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ.
ನಮ್ಮ ವಿಳಾಸ
ಪಿರಮಿಡ್ ವ್ಯಾಲಿ ಇಂಟರ್ನ್ಯಾಷನಲ್,
ಕೆಬ್ಬೆದೊಡ್ಡಿ ಗ್ರಾಮ, ಹಾರೋಹಳ್ಳಿ ಹೊಬ್ಲಿ, ಕನಕಪುರ ರಸ್ತೆ, ಬೆಂಗಳೂರು – 562112, ಕರ್ನಾಟಕ.
ಸಂಪರ್ಕಿಸಿ: +91 81470 93627, ವೆಬ್ಸೈಟ್: www.pyramidvalley.org
Recent Comments