“ವೃತ್ತಿದಕ್ಷತೆ

 

ವ್ಯಾಪಾರಸ್ಥರು, ಕೃಶಿಕರು, ಪರಿಶ್ರಮಿಗಳು, ಕಾರ್ಮಿಕರು, ಗೃಹಸ್ಥರು, ಪಾಲಕರು, ಬೋಧಕರು – ಇವರೆಲ್ಲರಿಂದ ಕೂಡಿರುವುದೇ ಸಮಾಜ. ಮಾನವ ಶರೀರದಲ್ಲಿ ಕಣ್ಣು, ಕಿವಿ, ಕೈ, ಕಾಲು … ಹೀಗೆ ಯಾವ ಅಂಗ ಮಾಡುವ ಕೆಲಸ ಅದು ಮಾಡಬೇಕು. ಪ್ರತಿಯೊಂದು ಅಂಗಕ್ಕೂ ಸರಿಸಮಾನವಾದ ವಿಶಿಷ್ಟತೆ, ಸರಿಸಮಾನವಾದ ಬಾಧ್ಯತೆ, ಸರಿ ಸಮಾನವಾದ ದೈವತ್ವವಿದೆ. ಶರೀರದಲ್ಲಿ ಯಾವುದೋ ಒಂದು ಭಾಗ ಅಥವಾ, ಯಾವುದೋ ಒಂದು ಅಂಗ; ಪ್ರಧಾನವಾದದ್ದು, ಉಳಿದಿರುವ ಅಂಗ ಅಪ್ರಧಾನವಾದ ಅಂಗ ಎಂದು ಅಲ್ಲ.

ವ್ಯಾಪಾರ ದಕ್ಷತೆ ಇರುವವರು ವ್ಯಾಪಾರ ಮಾಡಬೇಕು. ವ್ಯವಸಾಯ ದಕ್ಷತೆ ಇರುವವರು ವ್ಯವಸಾಯ ಮಾಡಬೇಕು. ಮೇಲೆ ಹೇಳಿರುವ ಯಾವ ದಕ್ಷತೆಯಿಲ್ಲದೇ ಇರುವವರು ಶಾರೀರಿಕ ಶ್ರಮದಲ್ಲಾದರೂ ದಕ್ಷತೆಯನ್ನು ತೋರಿಸಬೇಕು.

ವ್ಯಾಪಾರಸ್ಥರು ಮೊದಲನೆಯದಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾದ್ದು ಏನೆಂದರೆ, ಸಮಾಜಕ್ಕೆ ಅವರು ಮಾಡುವ ವ್ಯಾಪಾರ ಅತಿ ಮುಖ್ಯವಾದದ್ದು ಎಂದು. ವ್ಯಾಪಾರ ವೃತ್ತಿಯಲ್ಲಿ ಇರುವವರು ಮೊದಲು ವ್ಯಾಪಾರ ದಕ್ಷತೆಯನ್ನು ಹೊಂದಿರಬೇಕು. ನ್ಯಾಯವಾಗಿ ವ್ಯಾಪಾರ ಮಾಡಬೇಕು. ಕುಟುಂಬ ಶ್ರೇಯಸ್ಸಿಗೆ ತಕ್ಕಮಟ್ಟಿಗೆ ಲಾಭಗಳನ್ನೇ ದೃಷ್ಟಿಯಲ್ಲಿ ಇಟ್ಟುಕೊಳ್ಳಬೇಕು. ಅದಕ್ಕೂ ಮೀರಿ ಬಂದ ಲಾಭಗಳನ್ನು ಸಂಘಶ್ರೇಯಸ್ಸಿಗೆ ವಿನಿಯೀಗಿಸಬೇಕು.

ವ್ಯಾಪಾರ ದಕ್ಷತೆ ಎಂಬುವುದು ಒಂದು ಶಾಸ್ತ್ರ; ಇದನ್ನೇ ಆಂಗ್ಲ ಭಾಷೆಯಲ್ಲಿ Business Management ಎನ್ನುತ್ತೇವೆ. ಇದಕ್ಕೇ ಪ್ರತ್ಯೇಕವಾಗಿ ಪ್ರಪಂಚದಲ್ಲೆಲ್ಲಾ ಕಲಾಶಾಲೆಗಳಿವೆ. ಆದ್ದರಿಂದ, ವ್ಯಾಪಾರ ಮಾಡುವವರು ವ್ಯಾಪಾರ ದಕ್ಷತೆಯನ್ನು ಸಂಪಾದಿಸಬೇಕಾದರೇ ಬಿಜಿನೆಸ್ ಅಡ್ಮಿನಿಸ್ಟ್ರೇಷನ್, Business Management ಕೋರ್ಸುಗಳಿಂದ ವ್ಯಾಪಾರ ದಕ್ಷತೆಯನ್ನು ಸಂಪಾದಿಸಿಕೊಳ್ಳಬೇಕು. ಅದರಲ್ಲಿರುವ ಸೂತ್ರಗಳನ್ನು ಅರ್ಥಮಾಡಿಕೊಳ್ಳಬೇಕು. ಇತರ ವ್ಯಾಪಾರಸ್ಥರ ಜೊತೆ ವ್ಯಾಪಾರ ವಿಷಯಗಳನ್ನು ಪರಸ್ಪರ ಚರ್ಚಿಸುತ್ತಾ, ಪರಸ್ಪರ ಕಲಿತುಕೊಳ್ಳುತ್ತಾ ಇರಬೇಕು. ಆ ಪರಿಸ್ಥಿತಿಯಲ್ಲಿ ಕೈಹಿಡಿದ ವೃತ್ತಿಗೆ ತಕ್ಕ ಸಜ್ಜನ ಸಾಂಗತ್ಯ, ಆ ಪರಿಸ್ಥಿತಿಗಳಲ್ಲಿ ತಕ್ಕ ಸ್ವಾಧ್ಯಾಯ ಮಾಡಬೇಕು. ಆ ಪರಿಸ್ಥಿತಿಗಳಲ್ಲಿ ಸ್ವಂತ ವ್ಯಾಪಾರದ ಮೇಲೆ ಪೂರ್ತಿ ಗಮನವಿಡಬೇಕು.

* ಪಾಲಕರು ಪಾಲನಾ ದಕ್ಷತೆಯನ್ನು ಹೊಂದಿರಬೇಕು.

* ವ್ಯವಸಾಯಗಾರರು ವ್ಯವಸಾಯ ದಕ್ಷತೆಯನ್ನು ಹೊಂದಿರಬೇಕು.

* ವ್ಯಾಪಾರಸ್ಥರು ವ್ಯಾಪಾರ ದಕ್ಷತೆಯನ್ನು ಹೊಂದಿರಬೇಕು.

* ಗೃಹಸ್ಥರು ಗೃಹ ನಿರ್ವಹಣೆ ದಕ್ಷತೆಯನ್ನು ಹೊಂದಿರಬೇಕು.

* ಕಾರ್ಮಿಕರು ಕಾರ್ಮಿಕ ದಕ್ಷತೆಯನ್ನು ಹೊಂದಿರಬೇಕು.

ಆದರೆ, ಎಲ್ಲರೂ ಆತ್ಮಜ್ಞಾನ ಪರಾಯಣರಾಗಬೇಕು. ಅದು ಕಡ್ಡಾಯ. ಅಂದರೆ, ತಪ್ಪದೆ ಆತ್ಮಜ್ಞಾನ ಪಡೆಯಬೇಕು. ಒಂದು ಕಡೆ ವೃತ್ತಿ ದಕ್ಷತೆ, ಮತ್ತೊಂದು ಕಡೆ ಆತ್ಮಜ್ಞಾನ ದಕ್ಷತೆ ಹೊಂದಿರಬೇಕು.