” ನಿರಂತರ ಧ್ಯಾನ ಪ್ರಚಾರವೇ … ಪ್ರಣಾಳಿಕೆ “
ನನ್ನ ಹೆಸರು “ಸುಭಾಷ್”.. ನಮ್ಮ ಮನೆತನದ ಹೆಸರು “ಪತ್ರಿ”.
ನಾನು ನಿಜಾಮಾಬಾದ್ ಜಿಲ್ಲೆ “ಬೋಧನ್”ನಲ್ಲಿ ಜನಿಸಿದ್ದೇನೆ. “ನಾವೇ ನಮ್ಮ ಜನ್ಮವನ್ನು ಆಯ್ಕೆಮಾಡಿಕೊಳ್ಳುತ್ತೇವೆ” ಎನ್ನುವ ಆತ್ಮಪ್ರಣಾಳಿಕೆಯ ಅಂಗವಾಗಿ, ನಾನು ನನ್ನ ತಂದೆ ತಾಯಿಯನ್ನು, ಹುಟ್ಟಬೇಕಾದ ಪ್ರದೇಶವನ್ನು ಆಯ್ಕೆಮಾಡಿಕೊಂಡು ನಾನು ಅಲ್ಲಿ ಹುಟ್ಟಿದ್ದೇನೆ. ಉದ್ಯೋಗನಿಮಿತ್ತ ವಿವಿಧ ರಾಜ್ಯಗಳಿಂದ ಬಂದು ಸೇರಿದ ಡೆಕ್ಕನ್ ನಿಜಾಂ ಶುಗರ್ಸ್ ಕಂಪೆನಿ ಉದ್ಯೋಗಿಗಳ ಕುಟುಂಬಗಳ ಜೊತೆ ಕೂಡಿರುವ ಷಕ್ಕರ್ ನಗರ್ನಲ್ಲಿ ನನ್ನ ಬಾಲ್ಯ ಜೀವನವನ್ನು ಕಳೆದಿದ್ದೇನೆ. ಇದೆಲ್ಲದರಿಂದ, ದೇಶ ವಿದೇಶಗಳಲ್ಲಿ ನಾನು ಕೈಗೊಳ್ಳುವ ಧ್ಯಾನ ಪ್ರಚಾರ ಕಾರ್ಯಕ್ಕೆ ಅನುಕೂಲವಾಯಿತು.
ನನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಬೋಧನ್, ಸಿಕಂದ್ರಾಬಾದ್ಗಳಲ್ಲಿ ಮುಂದುವರೆಸಿದೆ. ನಂತರ ನಾನು 1966-1970ರ ಅವಧಿಯಲ್ಲಿ B.Sc. ಅಗ್ರಿಕಲ್ಚರ್ .. 1970-1974 ಅವಧಿಯಲ್ಲಿ M.Sc ಅಗ್ರಿಕಲ್ಚರ್ ಪೂರ್ತಿಮಾಡಿದೆ. ಅದೇ ಸಮಯದಲ್ಲಿ ಹೈದರಾಬಾದ್ ರಾಜೇಂದ್ರನಗರ್ನಲ್ಲಿ ಇರುವ “ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್” ನಲ್ಲಿ ಒಂದು ವರ್ಷಕಾಲ “ರಿಸರ್ಚ್ ಫೆಲೋ” ಆಗಿ ಕೆಲಸ ಮಾಡಿದೆ. I.A.S ಗಾಗಿ ಮೂರುಬಾರಿ ತಯಾರಿ ನಡೆಸಿ… ಪ್ರತಿಯೊಂದು ಬಾರಿ ದೆಹಲಿಗೆ ಇಂಟರ್ವ್ಯೂಗೆ ಹೋಗಿದ್ದೆ. 1970ನಲ್ಲಿ ಒಂದು ವರ್ಷಕಾಲ ‘ಇನ್ಕಮ್ಟಾಕ್ಸ್ ಇನ್ಸ್ಪೆಕ್ಟರ್’ ಆಗಿ ‘ತೆನಾಲಿ’ಯಲ್ಲಿ ಕೆಲಸ ಮಾಡಿದೆ. ಅನಂತರ “ಕೋರಮಂಡಲ್ ಫರ್ಟಿಲೈಜರ್ಸ್ ಲಿಮಿಟೆಡ್” ನಲ್ಲಿ 1975 ರಿಂದ 1992 ರವರೆಗೂ “ಸೇಲ್ಸ್ ಪ್ರಮೋಷನ್ ಆಫೀಸರ್” ಆಗಿ, “ಸೀನಿಯರ್ ಅಗ್ರೋನಮಿಸ್ಟ್”ಆಗಿ, “ರೀಜನಲ್ ಮಾರ್ಕೆಟಿಂಗ್ ಆಫೀಸರ್” ಆಗಿ, ಹೀಗೆ ಒಟ್ಟು ಹದಿನೆಂಟು ವರ್ಷಗಳಕಾಲ ಆ ಕಂಪೆನಿಯಲ್ಲಿ ಕೆಲಸ ಮಾಡಿದೆ.
ಆದರೆ, ಈ ಭೌತಿಕ ಜೀವನ, ಪ್ರಾಪಂಚಿಕ ವಿದ್ಯಾಭ್ಯಾಸದ ಜೊತೆ ನನ್ನ ಬಾಲ್ಯದಿಂದಲೂ ಆಧ್ಯಾತ್ಮಿಕವನ್ನು ಕುರಿತು ತುಂಬಾ ಉತ್ಸಾಹ ಇತ್ತು. ಚಿಕ್ಕಂದಿನಲ್ಲಿ, ವಿಶ್ವಕವಿ ರವೀಂದ್ರನಾಥ್ಠಾಗೂರ್ರವರ “ಶಾಂತಿನಿಕೇತನ್” ಕುರಿತು ಕೇಳಿಸಿಕೊಂಡಾಗಲೆಲ್ಲಾ ನನ್ನ ಶರೀರ ಪುಲಕಿತಗೊಳ್ಳುತ್ತಿತ್ತು. ನಾನು ನನ್ನ ಎಂಟನೆಯ ವಯಸ್ಸಿನಲ್ಲಿ ಮೊದಲನೆಯ ಬಾರಿ ಓದಿದ ಪುಸ್ತಕ “ಮಹಾತ್ಮಗಾಂಧೀ” ಅವರ “ಮೈ ಎಕ್ಸ್ಪೆರಿಮೆಂಟ್ಸ್ ವಿತ್ ಟ್ರೂತ್”,ಹಾಗೆಯೇ, ಹತ್ತನೆಯ ವಯಸ್ಸಿನಲ್ಲಿ ವಿಶ್ವನಾಥ ಸತ್ಯನಾರಾಯಣರವರ “ವೇಯಿ ಪಡಗಲು”(ಸಾವಿರ ಹೆಡೆಗಳು); ಹದಿನೈದಿನೆಯ ವಯಸ್ಸಿನಲ್ಲಿ ಎರಡು ಬಾರಿ ಪಂಡಿತ ಸರ್ವಪಲ್ಲಿ ರಾಧಾಕೃಷ್ಣನ್ರವರು ಬರೆದ ಇಂಡಿಯನ್ ಫಿಲಾಸಫಿ ಇದರ ಎರಡೂ ಭಾಗಗಳನ್ನು ಓದಿದ್ದೇನೆ.
ಅನಂತರ ಹತ್ತು ವರ್ಷಗಳಲ್ಲಿ ಆಂಗ್ಲ ಸಾಹಿತ್ಯವನ್ನು ತುಂಬಾ ಓದಿದ್ದೇನೆ: ಛಾಸರ್, ಷೇಕ್ಸ್ಪಿಯರ್, ಮಿಲ್ಟನ್ನಿಂದ ಹಿಡಿದು ಡಿಕೆನ್ಸ್ರವರೆಗೂ .. ಟಾಲ್ಸ್ಟಾಯ್, ಡೋಸ್ಟೋವಿಸ್ಕೀಗಳಿಂದ ಆರಂಭಿಸಿ ರವೀಂದ್ರರ “ಗೀತಾಂಜಲಿ”ಯ ವರೆಗೂ ನೂರಾರು ಆಂಗ್ಲ ಸಾಹಿತ್ಯದ ಪುಸ್ತಕಗಳನ್ನು ಓದಿದ್ದೇನೆ. ತೆಲುಗಿನಲ್ಲೂ ಅನೇಕಾನೇಕ ಪುಸ್ತಕಗಳನ್ನು .. ಉದಾಹರಣೆಗೆ ಚಲಂ, ಶ್ರೀಶ್ರೀ, ಕೊಡವಟಿಗಂಟಿ ಕುಟುಂಬರಾವು, ಅಡವಿ ಬಾಪಿರಾಜು ಮುಂತಾದವರ ಪುಸ್ತಕಗಳನ್ನು ಓದಿದ್ದೇನೆ.
ನಮ್ಮ ತಾಯಿ ಸಾವಿತ್ರೀದೇವಿಯವರ ಪ್ರೋತ್ಸಾಹದ ಬಲದಿಂದ ಮತ್ತು ನಮ್ಮ ಅಣ್ಣನವರಾದ ವೇಣುವಿನೋದ್ರವರ ಸಹಕಾರದಿಂದ ನಾನು ಸಂಗೀತದಲ್ಲಿ ಅಭಿರುಚಿಯನ್ನು ಹೊಂದಿ … ಶ್ರೇಷ್ಠ ಸಂಗೀತ ಗುರುಗಳ ಹತ್ತಿರ ಸಂಗೀತವನ್ನು ಅಭ್ಯಸಿಸಿದ್ದೇನೆ. 1963 ರಿಂದ 1970 ವರೆಗೂ ಶ್ರೀ T.S. ಚಂದ್ರಶೇಖರನ್ ಸಿಕಿಂದ್ರಾಬಾದ್, ಅವರ ಹತ್ತಿರ ಕೊಳಲು; 1975 ನಿಂದ 1978 ವರೆಗೂ ಕರ್ನೂಲ್ನಲ್ಲಿ “ಪದ್ಮಭೂಷಣ್ ಡಾ|| ಶ್ರೀಪಾದ ಪಿನಾಕಪಾಣಿ” ಅವರ ಹತ್ತಿರ ಕರ್ನಾಟಕ ಸಂಗೀತವನ್ನು ಕಲಿತುಕೊಂಡಿದ್ದೇನೆ.
“ಕ್ರಿಕೆಟ್” ಎಂದರೆ ಬಾಲ್ಯದಿಂದಲೂ ಪಂಚಪ್ರಾಣ. ಆದ್ದರಿಂದ, ಸದಾ ಒಂದು ‘ಟೀಮ್’ನ ತಯಾರು ಮಾಡಿಕೊಂಡು .. ಭಾನುವಾರ ಬಂದರೆ ಸಾಕು “ಗಲ್ಲೀ ಕ್ರಿಕೆಟ್ ಮ್ಯಾಚ್” ಗಳನ್ನು ಚೆನ್ನಾಗಿ ಆಡುತ್ತಿದ್ದೆ. ಟೇಬಲ್ಟೆನ್ನಿಸ್, ಚದುರಂಗ ಮತ್ತು ಕೇರಂ ಕೂಡಾ ನಾನು ಚೆನ್ನಾಗಿ ಆಡುತ್ತೇನೆ.
ಆದರೆ, ಇವೆಲ್ಲಾ ಇದ್ದರೂ ಸಹ ನಾನು ಏತಕ್ಕಾಗಿ ಜೀವಿಸುತ್ತಿದ್ದೇನೋ ನನಗೆ ತಿಳಿಯುತ್ತಿರಲಿಲ್ಲ. ಏನೊ ನ್ಯೂನತೆ ಭಾವನೆ … ಎಲ್ಲಾ ಅಯೋಮಯ. ಏನಾದರೂ ಸರಿ ಧ್ಯಾನ ಮಾರ್ಗಕ್ಕೆ ಬಾರದ ವಿನಹ ಗೊತ್ತಾಗುವುದಿಲ್ಲ. ಅದುವರೆಗೂ ಎಲ್ಲಾ ಚೆನ್ನಾಗಿರುತ್ತದೆ. ಮನೆ ಕಟ್ಟಿಕೊಳ್ಳುತ್ತೇವೆ .. ಹೆಂಡತಿ ಇರುತ್ತಾಳೆ .. ಗಂಡ ಇರುತ್ತಾನೆ .. ಮಕ್ಕಳು ಇರುತ್ತಾರೆ .. “ಎಲ್ಲಾ ಚೆನ್ನಾಗಿಯೇ ಇರುತ್ತದೆ” ಆದರೆ, … “ಏನೋ ಚೆನ್ನಾಗಿರುವುದಿಲ್ಲ” ಎಂದೆನಿಸುತ್ತದೆ.
ಆದರೆ, ಯಾವಾಗ ನಾವು “ಧ್ಯಾನ” ಮಾರ್ಗಕ್ಕೆ ಬರುತ್ತೇವೆಯೋ, “ಆಧ್ಯಾತ್ಮಿಕಶಾಸ್ತ್ರ”ವನ್ನು ಕುರಿತು ಅರಿತುಕೊಳ್ಳುತ್ತೇವೊ ಆಗ “ಎಲ್ಲಾ ಚೆನ್ನಾಗಿದೆ” ಎನ್ನುವುದು ನಮ್ಮ ಒಳಗೆ ಪ್ರಾರಂಭವಾಗುತ್ತದೆ. ಅದುವರೆವಿಗು ಚೆನ್ನಾಗಿಲ್ಲ ಎಂದೆನಿಸಿದ ಗಂಡ ಸಹ “ಸ್ವಲ್ಪ” ಚೆನ್ನಾಗಿಯೇ ಇರುತ್ತಾನೆ. ಅದುವರೆಗೂ ಚೆನ್ನಾಗಿಲ್ಲ ಎಂದೆನಿಸಿದ ಹೆಂಡತಿ ಸಹ “ಸ್ವಲ್ಪಮಟ್ಟಿಗೆ” ಚೆನ್ನಾಗಿಯೇ ಇದ್ದಾಳೆ ಅನಿಸುತ್ತಾಳೆ. ಹಾಗೆಯೆ, ಅದುವರೆಗು ಚೆನ್ನಾಗಿಲ್ಲ ಎಂದೆನಿಸಿದ “ಮಕ್ಕಳು” ಮತ್ತು ಚೆನ್ನಾಗಿಲ್ಲದ “ಅಕ್ಕಪಕ್ಕದವರು” ಸಹ “ಸ್ವಲ್ಪಮಟ್ಟಿಗೆ” ಚೆನ್ನಾಗಿಯೇ ಇರುತ್ತಾರೆ. ಅದುವರೆಗೂ “ನನಗೆ ಅದು ಬಂದಿಲ್ಲ” .. “ನನಗೆ ಇದು ಕೊಟ್ಟಿಲ್ಲ” ಎಂದು ದೇವರನ್ನು ಬೈಯ್ಯುತ್ತೇವೆ .. ಆದರೆ, ಧ್ಯಾನ ಪ್ರಾರಂಭಿಸಿದನಂತರ “ದೇವರು” ಕೂಡಾ ಸ್ವಲ್ಪ ಮಟ್ಟಿಗೆ ಚೆನ್ನಾಗಿಯೇ ಇರುತ್ತಾನೆ.
ಹೀಗೆ, ಧ್ಯಾನದ ಮಾರ್ಗಕ್ಕೆ ಬಂದನಂತರ “ಎಲ್ಲಾ ಸರಿಯಾಗಿಯೇ ನಡೆಯುತ್ತಿದೆ” ಎಂದು ತಿಳಿದುಕೊಳ್ಳುತ್ತೇವೆ. ಒಂದುವೇಳೆ ಧ್ಯಾನ ಮಾರ್ಗಕ್ಕೆ ಬರದಿದ್ದರೆ, ಅಂತಿಮ ಶ್ವಾಸದವರೆಗೂ “ನನ್ನ ಜೀವನ ವ್ಯರ್ಥಜೀವನ” ಎಂದುಕೊಳ್ಳುತ್ತಲೇ ಇರುತ್ತೇವೆ. ಆದ್ದರಿಂದ, ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದದ್ದು ಏನೆಂದರೆ .. ಪ್ರಾಪಂಚಿಕ ವಿದ್ಯೆ ಎಲ್ಲರಿಗೂ ತಪ್ಪದೇ ಬೇಕಾಗಿದ್ದೆ. ಆದರೆ, ಅದಕ್ಕಿಂತಾ ತಪ್ಪದೇ ಬೇಕಾಗಿರುವುದು ಆಧ್ಯಾತ್ಮಿಕ ವಿದ್ಯೆ. ಈ ವಿಷಯಗಳನ್ನು ಪ್ರತಿಯೊಬ್ಬರೂ ಸಹ ತಿಳಿದುಕೊಳ್ಳಬೇಕು. ಜ್ಞಾನಪರವಾಗಿ .. “ಆಧ್ಯಾತ್ಮಿಕತೆ” ಎನ್ನುವುದು ನಾವು ವಿವರವಾಗಿ ತಿಳಿದುಕೊಳ್ಳಬೇಕು .. ಮತ್ತೆ ಅಭ್ಯಾಸಪರವಾಗಿ “ಧ್ಯಾನ” ಎನ್ನುವುದನ್ನು ತಪ್ಪದೆ ಅನುಭವಕ್ಕೆ ತಂದುಕೊಳ್ಳಬೇಕು.
ನನ್ನ ಜನ್ಮದಲ್ಲಿ “ಆಧ್ಯಾತ್ಮಿಕತೆ”ಗೆ ಸಂಬಂಧಿಸಿದ “ಥಿಯರೀ” ಎಲ್ಲಾ ತಿಳಿದುಕೊಂಡಿದ್ದೇನೆ. “ಧ್ಯಾನ”ದ ಮೂಲಕ “ಪ್ರಾಕ್ಟಿಕಲ್ಸ್” ಸಹ ಮಾಡಿ ನನ್ನ ಮುಖ್ಯವಾದ ಜನ್ಮಗಳೆಲ್ಲಾ ನೋಡಿಕೊಂಡಿದ್ದೇನೆ. 1976 ನಲ್ಲಿ ಧ್ಯಾನದ ಮಾರ್ಗದಲ್ಲಿ ಪ್ರವೇಶಿಸಿದ ನನ್ನ ಧ್ಯಾನ ಸಾಧನೆ .. 1979 ನಲ್ಲಿ ಪಕ್ವವಾಗಿದೆ. ಅಂದರೆ, ಕಾಯಿ ಎನ್ನುವುದು “ಹಣ್ಣು” ಆಗಿ ನನ್ನ ಕುರಿತು ನಾನು ಸಂಪೂರ್ಣವಾಗಿ ತಿಳಿದುಕೊಂಡಿದ್ದೇನೆ.
ನಾನು ಅನೇಕಾನೇಕ ಜನ್ಮಗಳು ಎತ್ತಿದ್ದೇನೆಂದು .. ಕಳೆದ ಆರುಜನ್ಮಗಳಿಂದ ಧ್ಯಾನಪ್ರಚಾರ ಮಾಡುತ್ತಿದ್ದೇನೆಂದು .. ಗತಜನ್ಮದಲ್ಲೇ ಆಧ್ಯಾತ್ಮಿಕಶಾಸ್ತ್ರ ಬೋಧಕನಾಗಿದ್ದೇನೆಂದು .. ಈ ಸಲ ಜನ್ಮ ಪಡೆದಿದ್ದು ವಿಶ್ವವನ್ನೆಲ್ಲಾ ಒಂದುಗೂಡಿಸಲಿಕ್ಕಾಗಿಯೇ ಎಂದೂ ತಿಳಿದುಕೊಂಡಿದ್ದೇನೆ. ಜಗತ್ತಿನಲ್ಲೆಲ್ಲಾ ಮಾಂಸಾಹಾರವನ್ನು ಅಳಸಿಹಾಕಲಿಕ್ಕಾಗಿಯೆ ನಾನು ಹುಟ್ಟಿದ್ದೇನೆಂದು .. ಆಧ್ಯಾತ್ಮಿಕ ಶಾಸ್ತ್ರವನ್ನು ಕುರಿತು ಎಲ್ಲರಲ್ಲಿಯೂ ಅರಿವು ಮೂಡಿಸಲೆಂದೇ ಬಂದಿದ್ದೇನೆಂದು .. ಎಲ್ಲರನ್ನೂ ಧ್ಯಾನದಲ್ಲಿ ಉನ್ನತರನ್ನಾಗಿಸುವುದಕ್ಕಾಗಿಯೇ ಬಂದಿದ್ದೇನೆಂದು .. 2095 ರವರೆಗೂ ಈ ಶರೀರದಲ್ಲಿಯೇ ಇರುತ್ತೇನೆಂದು .. ಮತ್ತು “ಇದೆಲ್ಲಾ ನನ್ನ ಸ್ವಂತ ಪ್ರಣಾಳಿಕೆ” ಎಂದು ನನಗೆ ತಿಳಿದು ಬಂದಿದೆ.
ಯಾವುದೇ ಒಂದು ಮುಖ್ಯ ಪ್ರಣಾಳಿಕೆಯನ್ನು ಸಿದ್ಧಪಡಿಸಿಕೊಳ್ಳುವ ಮೊದಲು ನಾವು “ಬ್ಲೂ ಪ್ರಿಂಟ್” ಹಾಕಿಕೊಳ್ಳುತ್ತೇವೆ. ಹಾಗೆಯೆ, ನಮ್ಮ ಜನ್ಮಪ್ರಣಾಳಿಕೆಗೆ ಸಂಬಂಧಿಸಿದಂತೆ ಕೂಡಾ ನಾವು ಹುಟ್ಟುವುದಕ್ಕಿಂತಾ ಮುಂಚೆಯೆ .. “ಎಲ್ಲಿ ಹುಟ್ಟಬೇಕು? ಯಾರ ಗರ್ಭದಲ್ಲಿ ಹುಟ್ಟಬೇಕು?” ಎಂದು ಸಂಶೋಧನೆ ಮಾಡುತ್ತೇವೆ. ನಾವು ಆರಿಸಿಕೊಂಡ ಆ ತಂದೆ ತಾಯಿ ಮೊದಲು ಗಂಡ – ಹೆಂಡತಿ ಆಗುತ್ತಾರೆಂದೂ, ಅನಂತರ ಅವರ ಗರ್ಭದಲ್ಲಿ ಬಂದು ಸೇರುತ್ತೇವೆಂದೂ .. ಎಲ್ಲಾ ಪ್ರಣಾಳಿಕೆ ಹಾಕಿಕೊಂಡೇ ಬರುತ್ತೇವೆ. ಇದೆಲ್ಲಾ ನಮ್ಮ ಜನ್ಮಕ್ಕೆ ಸಂಬಂಧಿಸಿದ “ಬ್ಲೂ ಪ್ರಿಂಟ್”.
“ಬ್ಲೂ ಪ್ರಿಂಟ್” ಪ್ರಕಾರ “ಸೈನ್ಸ್” ಎಲ್ಲಾ ಓದಿಕೊಂಡು “ಸ್ಪಿರಿಚ್ಯುವಲ್ ಸೈನ್ಸ್” ನಲ್ಲಿ ನಿಷ್ಣಾತನಾಗಿದ್ದೇನೆ; ಅನಂತರ ಇನ್ಕಮ್ಟಾಕ್ಸ್ ಇನ್ಸ್ಪೆಕ್ಟರಾಗಿ ಕೆಲಸಮಾಡಿ .. ನನ್ನನ್ನು ನಾನು ಪರೀಕ್ಷೆ ಮಾಡಿಕೊಂಡು “ಹಣದಾಸೆಗೆ ಒಳಗಾಗದ ವ್ಯಕ್ತಿತ್ವವನ್ನು” ಸಂಪಾದಿಸಿಕೊಂಡಿದ್ದೇನೆ.
ಅನಂತರ ಗೊಬ್ಬರದ ಕಂಪೆನಿಯಲ್ಲಿ ಕೆಲಸಮಾಡಿ .. “ಭವಿಷ್ಯತ್ತಿನಲ್ಲಿ ಧ್ಯಾನ ಪ್ರಚಾರಕ್ಕಾಗಿ ಎಲ್ಲಾ ಕಡೆ ಓಡಾಡಲು ನನಗೆ ಅನುಭವ ಬರಬೇಕು ಆದ್ದರಿಂದ, ಊರೂರು ಸುತ್ತುವುದನ್ನು ಕಲಿತುಕೊಂಡಿದ್ದೇನೆ. ಭವಿಷ್ಯತ್ತಿನಲ್ಲಿ ಧ್ಯಾನ ಪ್ರಚಾರ ತುಂಬಾ ಮಾಡಬೇಕಾಗಿರುವುದರಿಂದ ಎಲ್ಲಾ ರೈತಬಾಂಧವರ ಜೊತೆ ಮಾತನಾಡುತ್ತಾ” ಎಲ್ಲಾ ಪ್ರಜೆಗಳ ಜೊತೆ ಮಾತನಾಡುವ ವಾಕ್ಶಕ್ತಿಯನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಹೀಗೆ “ಆ ಗೊಬ್ಬರದ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ, ಅನಂತರ ಧ್ಯಾನದಲ್ಲಿ ಬರುತ್ತೇನೆ, ಒಬ್ಬ ಮಿತ್ರನು ಸಿಗುತ್ತಾನೆ, ನನಗೆ ಧ್ಯಾನ ಹೇಳಿಕೊಡುತ್ತಾನೆ, ಅನಂತರ ಧ್ಯಾನವನ್ನು ಊರೂರಿಗೆ ಹೋಗಿ ಪ್ರಚಾರ ಮಾಡುತ್ತೇನೆ, ಎಲ್ಲರಿಗೂ ಆಧ್ಯಾತ್ಮಿಕ ಶಾಸ್ತ್ರವನ್ನು ಕುರಿತು ತಿಳಿಸಿಕೊಡುತ್ತೇನೆ ..” ಇದೆಲ್ಲಾ ಒಂದು ಪ್ರಣಾಳಿಕೆ. ಪ್ರತಿಯೊಂದೂ ಹುಟ್ಟುವುದಕ್ಕಿಂತಾ ಮುಂಚೆಯೆ ಒಂದು “ಪ್ಲಾನ್” ಆಗಿರುತ್ತದೆ.
ಅಕ್ಕ-ಪಕ್ಕದ ಊರಿಗೆ ಹೋಗಬೇಕಾದರೂ ಅಥವಾ ಒಂದು ಚಿಕ್ಕಕೆಲಸ ಮಾಡಬೇಕಾದರೂ ನಾವು ತುಂಬಾ ಪ್ಲಾನ್ ಮಾಡಿಕೊಳ್ಳುತ್ತೇವೆ. ಅಂಥದ್ದರಲ್ಲಿ ಹುಟ್ಟುವುದಕ್ಕಿಂತಾ ಮುಂಚೆ ಅಂತಹ ದೊಡ್ಡ ಪ್ಲಾನ್ ಮಾಡಿಕೊಂಡರೆ ಮಾತ್ರವೇ ಹಾಗೆ ಬರಲಾಗುತ್ತದೆ. ಸುಮ್ಮನೆ ಈ ಭೂಮಿಗೆ ಬಂದುಬಿಡುತ್ತೇವೆಯೆ??
ನಾನು ಅನೇಕಾನೇಕ ಪುಸ್ತಕಗಳನ್ನು ಓದಿ “ಜ್ಞಾನಯೋಗಿ” ಆಗಿದ್ದೇನೆ; ಸಂಗೀತ ಕಲಿತುಕೊಂಡು “ನಾದಯೋಗಿ” ಆಗಿದ್ದೇನೆ; ಒಳ್ಳೆಯ ಕೆಲಸಗಳನ್ನು ಮಾಡುತ್ತಾ “ಕರ್ಮಯೋಗಿ” ಆಗಿದ್ದೇನೆ; ಆದರೆ, “ಧ್ಯಾನ” ಮಾತ್ರ ಗೊತ್ತಿರಲಿಲ್ಲ. ಆಕಡೆ ಈಕಡೆ ತಿರುಗಿ ಬಲೆಹಾಕಿ ಧ್ಯಾನವನ್ನು ಹಿಡಿದುಕೊಂಡಿದ್ದೇನೆ. 1976 ರವರೆಗೂ ಆ “ಮಂತ್ರ”, ಈ “ಆಸನ” ಎಂದು .. ಕೆಲವನ್ನು ಕಲಿತುಕೊಂಡಿದ್ದೇನೆ. ಆದರೆ, ಅನುಭವ ಜ್ಞಾನ ಬರಲಿಲ್ಲ. 1976 ರ ನಂತರ ನನ್ನ ಮಿತ್ರನಾದ ಶ್ರೀ ರಾಮಚೆನ್ನಾರೆಡ್ಡಿ ಮೂಲಕ “ಆನಾಪಾನಸತಿ” ಧ್ಯಾನ ಕಲಿತುಕೊಂಡಿದ್ದೇನೆ. ಇನ್ನು ಅಷ್ಟೇ .. ಎಲ್ಲಾ ತುಂಬಾ ಚೆನ್ನಾಗಿ ನನ್ನ ಜೀವನದಲ್ಲಿ ಬದಲಾವಣೆ ಬಂದಿದೆ. ಅದುವರೆಗೂ ನನ್ನ ಜೀವನ ಎನ್ನುವ ಕುರ್ಚಿಯಲ್ಲಿ .. ಹಿಂದಕ್ಕೆ, ಮುಂದಕ್ಕೆ ಬಗ್ಗುತ್ತಾ ಆಕಡೆ, ಈಕಡೆ ತೂಗುತ್ತಾ ಇರುತ್ತಿದ್ದ ನಾನು .. ಅನಂತರ ಅದೇ ಕುರ್ಚಿಯಲ್ಲಿ ‘ರಿಲಾಕ್ಸ್’ ಆಗಿ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡಿದ್ದೇನೆ.
ಅಂದಿನಿಂದ ಉದರಪೋಷಣೆಗಾಗಿ ನನ್ನ ಉದ್ಯೋಗ ನಾನು ಮಾಡಿಕೊಳ್ಳುತ್ತಲೇ … ಪ್ರತಿಯೊಬ್ಬರಿಗೂ ಧ್ಯಾನಮಾಡು .. “ಶ್ವಾಸದ ಮೇಲೆ ಗಮನ ಇಡು” ಎಂದು ಹೇಳುತ್ತಿದ್ದೆ.
“ನಿನಗೆ ಸ್ಕೂಟರ್ ಓಡಿಸುವುದನ್ನು ಹೇಳಿಕೊಡುತ್ತೇನೆ .. ಧ್ಯಾನಮಾಡು”, “ನಿನಗೆ ಟೇಬಲ್ ಟೆನ್ನಿಸ್ ಆಡುವುದನ್ನು ಹೇಳಿಕೊಡುತ್ತೇನೆ, ಧ್ಯಾನ ಮಾಡು” ಎನ್ನುತ್ತಾ ಧ್ಯಾನ ಹೇಳಿಕೊಡಲು “ಲಂಚ ನೀಡುತ್ತಾ ಒಬ್ಬೊಬ್ಬರನ್ನೇ ಹಿಡಿದುಕೊಂಡು ಧ್ಯಾನಕ್ಕೆ ಎಳೆದುಕೊಂಡೆ. ಮನೆಗೆ ತರಕಾರಿ ಮಾರುವವಳು ಬುಟ್ಟಿ ಹಿಡಿದುಕೊಂಡು ಮನೆಗೆ ಬಂದರೆ .. “ಸರಿ .. ಆ ಬುಟ್ಟಿಯಲ್ಲಿರುವ ತರಕಾರಿ ಎಲ್ಲಾ ನಾನೇ ಕೊಂಡುಕೊಳ್ಳುತ್ತೇನೆ, ಅದರ ಬೆಲೆ ಎಷ್ಟು?” ಎಂದು ಕೇಳುತ್ತಿದ್ದೆ. ನೂರು ರೂಪಾಯಿ ಎಂದು ಹೇಳುತ್ತಿದ್ದಳು. “ಸರಿ, ಆ ನೂರು ರೂಪಾಯಿಗಳು ನಾನೇ ಕೊಡುತ್ತೇನೆ”, ಒಂದು ಗಂಟೆಕಾಲ ಕುಳಿತು ಧ್ಯಾನಮಾಡಿಕೊ ಅಂದರೆ, ಆಕೆಗೆ “ಇವನು ಹುಚ್ಚನಾ. ಮೆಂಟಲ್ ಕೇಸಾ”. ಎಂದು ಅವಳಿಗೆ ನನ್ನನ್ನು ಅರ್ಥಮಾಡಿಕೊಳ್ಳಲಾಗುತ್ತಿರಲಿಲ್ಲ. ಕಣ್ಣುಗಳನ್ನು ತೆರೆದರೆ ಒಂದು ರೂಪಾಯಿ ಸಹ ನೀಡುವುದಿಲ್ಲ ಎಂದು ಹೇಳುತ್ತಿದ್ದೆ.
ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಬೇಕಾದರೆ ಬಸ್ಸ್ಟಾಂಡ್ಗೆ ಹೋಗಬೇಕಲ್ಲವೆ. ಅಲ್ಲಿ ಬಟಾಣಿ ಮಾರುತ್ತಿರುವವನ ಹತ್ತಿರಹೋಗಿ “ಇದೆಲ್ಲಾ ಮಾರಿದರೆ ಎಷ್ಟು ಹಣ ಬರುತ್ತದೆ?” ಎಂದು ಕೇಳುತ್ತಿದ್ದೆ. “ಹದಿನೈದು ರೂಪಾಯಿ” ಸಾರ್ ಎಂದು ಹೇಳಿದ. ನನ್ನ ಬಸ್ಸು ಬರಲು ಇನ್ನೂ ಒಂದು ಗಂಟೆಸಮಯ ಇದೆ. ನಿನಗೆ ಆ ಹದಿನೈದು ರೂಪಾಯಿ ನಾನು ಕೊಡುತ್ತೇನೆ ಅದುವರೆಗೂ ಧ್ಯಾನ ಮಾಡುತ್ತಾ ಕುಳಿತುಕೊ ಎಂದು ಹೇಳುತ್ತಿದ್ದೆ. ಹಾಗೆ ನನ್ನ ಜೀವನ ಪ್ರಾರಂಭವಾಗಿ .. ಈಗ .. ಇಲ್ಲಿಯವರೆಗೂ ಬಂದಿದೆ. ಪ್ರತಿಯೊಬ್ಬರನ್ನೂ ಧ್ಯಾನಯೋಗಿಯನ್ನಾಗಿ ಬದಲಾಯಿಸಬೇಕೆನ್ನುವ ತಪನೆ ನನ್ನಲ್ಲಿತ್ತು. ಮತ್ತು ಇನ್ನೂ ಇದೆ.
ನನ್ನ ಚಿಕ್ಕಅಕ್ಕ, ಭಾವಾ ಅನೇಕ ವರ್ಷಗಳಿಂದ ಅಮೆರಿಕಾದಲ್ಲಿದ್ದಾರೆ. ನಾನು ಓದಿಕೊಳ್ಳುವ ದಿನಗಳಲ್ಲಿ … “ನೀನು ಸಹ ಅಮೆರಿಕಾಗೆ ಬಾರೋ, ಅಲ್ಲಿಗೆ ಬಂದು ತುಂಬಾ ಓದಿಕೊಳ್ಳಬಹುದು, ತುಂಬಾ ಹಣವನ್ನು ಸಹ ಸಂಪಾದಿಸಬಹುದು” ಎನ್ನುತ್ತಿದ್ದರು .. ಆದರೆ, ನಾನು ಎಲ್ಲಿಗೂ ಹೋಗಲಿಲ್ಲ. ಆದರೆ .. ದೇಶ ವಿದೇಶದವರೇ ಈಗ ನನ್ನ ಹತ್ತಿರಕ್ಕೆ ಬರುತ್ತಿದ್ದಾರೆ .. ಅದೇ ಸತ್ಯಕ್ಕೆ ಇರುವ ದೊಡ್ಡತನ.
ಇದುವರೆಗೂ ಸುಮಾರು ಹತ್ತುಸಾವಿರ ಜನ ಆಧ್ಯಾತ್ಮಿಕ ಗುರುಗಳು ಬರೆದ ಸುಮಾರು 50 ಸಾವಿರ ಆಧ್ಯಾತ್ಮಿಕ ಗ್ರಂಥಗಳನ್ನು ಓದಿದ್ದೇನೆ. ಉದ್ಯೋಗದಲ್ಲಿದ್ದಾಗ ಐದು ಸಾವಿರ ರೂಪಾಯಿಗಳು ಕೈಗೆ ಬಂದರೆ ಎರಡು ಸಾವಿರ ರೂಪಾಯಿಗಳಷ್ಟು ಪುಸ್ತಕಗಳನ್ನು ಕೊಂಡುಕೊಳ್ಳುತ್ತಿದೆ. ಉಳಿದ ಮೂರು ಸಾವಿರ ರೂಪಾಯಿಗಳನ್ನು ಮನೆ ಖರ್ಚಿಗೆ ಕೊಡುತ್ತಿದ್ದೆ. ಭಾನುವಾರ ಬಂದರೆ ಸಾಕು ಬ್ಯಾಗ್ ತೆಗೆದುಕೊಂಡು ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಮಾರ್ಕೆಟ್ಗೆ ಹೋಗಿ ಬ್ಯಾಗ್ ತುಂಬಾ ಪುಸ್ತಕಗಳನ್ನು ಖರೀದಿಸಿ ತುಂಬಿಕೊಂಡು ಬರುತ್ತಿದ್ದೆ.
ಈಗ ನನ್ನ ಹಿಂದೆ ಲಕ್ಷ್ಯಾಂತರ ಜನ “ನಿರಂತರ ಧ್ಯಾನ ಅಭ್ಯಾಸ”ಎನ್ನುವ ದಾರಿಯಲ್ಲಿ ನಡೆಯುತ್ತಿದ್ದಾರೆ. ನನಗೆ ಏತಕ್ಕಾಗಿ ಇಷ್ಟು ಗೌರವ? ನನಗೆ ಏತಕ್ಕಾಗಿ ಇಂತಹ ಭಾಗ್ಯ? :”ಧ್ಯಾನ ಮಾಡಿದ್ದೇನೆ” ಆದ್ದರಿಂದಲೇ ಈ ಭಾಗ್ಯ ದೊರೆತಿದೆ. ಧ್ಯಾನ ಮಾಡದಿದ್ದರೆ ಏನೂ ಬರುವುದಿಲ್ಲ.
ಜೇಬಿನಲ್ಲಿ ಹಣವಿಲ್ಲ ಪ್ರಪಂಚದಲ್ಲೆಲ್ಲಾ ಸುತ್ತುತ್ತಾ ಧ್ಯಾನ ಹೇಳಿಕೊಡುತ್ತಿದ್ದೇನೆ. ಪ್ರತಿಯೊಬ್ಬರೂ ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಪ್ರತಿಯೊಂದು ಮನೆಯೂ ನನ್ನದೇ. ಇದೆಲ್ಲಾ ನನಗೆ ಧ್ಯಾನದಿಂದ ದೊರೆತಿದೆ. ಇದೇ ಧ್ಯಾನವನ್ನು ನೀವೂ ಸಹ ಮಾಡಿ. ಇದೇ ಧ್ಯಾನವನ್ನು ನೀವೂ ಸಹ ಎಲ್ಲರಿಗೂ ಹೇಳಿಕೊಡಿ. ನಿಮಗೂ ಸಹ ಸಕಲ ಸೌಭಾಗ್ಯಗಳೂ ಲಭಿಸುತ್ತವೆ.
Recent Comments