” ಮಾಧವ ಸೇವೆಯೇ .. ಮಾನವ ಸೇವೆ “
ಚಿಕ್ಕಂದಿನಿಂದಲೂ ನಾವು “ಮಾನವ ಸೇವೆಯೇ .. ಮಾಧವ ಸೇವೆ” .. ಎಂದು ಓದುತ್ತಾ .. ಸೇವೆ ಮಾಡುವುದು ಎನ್ನುವುದು ಎಷ್ಟು ಶ್ರೇಷ್ಠ ಕಾರ್ಯಕ್ರಮವೊ ಎಂಬುದನ್ನು ತಿಳಿದುಕೊಳ್ಳುತ್ತಾ ಬಂದಿದ್ದೇವೆ.
“ಸೇವೆ” ಮಾಡುವುದು ಎನ್ನುವುದು ನಮ್ಮ ಕುಟುಂಬ ಧರ್ಮಕ್ಕೆ, ನಮ್ಮ ವ್ಯಾಪಾರ ಧರ್ಮಕ್ಕೆ ಮತ್ತು ನಮ್ಮ ಉದ್ಯೋಗ ಧರ್ಮಕ್ಕೆ ಕೂಡ ವಿಭಿನ್ನವಾದ ಒಂದು ಉದಾತ್ತವಾದ ಕಾರ್ಯಕ್ರಮ.
ಆದರೆ, ಈ ಪ್ರಪಂಚದಲ್ಲಿ ಬಹಳ ಮಂದಿ ಪಂಡಿತರು, ಮೇಧಾವಿಗಳು ಎನಿಸಿಕೊಳ್ಳುವವರೂ ಸಹ “ಸೇವೆ” ಮತ್ತು “ಕರ್ತವ್ಯ” ಎನ್ನುವ ಎರಡರ ನಡುವೆ ಇರುವ ವ್ಯತ್ಯಾಸ ತಿಳಿದುಕೊಳ್ಳಲಾಗದೇ ಅವುಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ.
“ಇಂತಹ ದೊಡ್ಡ ಮನುಷ್ಯ ತನ್ನ ತಂದೆತಾಯಿಯರಿಗೆ ಚೆನ್ನಾಗಿ ಸೇವೆ ಮಾಡಿಕೊಳ್ಳುತ್ತಿದ್ದಾನೆ ರೀ” ಎಂದು ಹೇಳುತ್ತಿರುತ್ತಾರೆ .. ಅದೇನೋ ಮಹಾ ದೊಡ್ಡ ವಿಶೇಷವೆಂದು.
“ನಮ್ಮ ತಂದೆತಾಯಂದರಿಗೆ ನಾವು ಸೇವೆ ಮಾಡುತ್ತಿದ್ದೇವೆ” ಎಂದುಕೊಳ್ಳುವುದು ಶುದ್ಧತಪ್ಪು. “ತಂದೆತಾಯಿಯರನ್ನು ನೋಡಿಕೊಳ್ಳುವುದು” ಎನ್ನುವುದು ನಮ್ಮ ಕನಿಷ್ಠ ಕರ್ತವ್ಯ ಮತ್ತು ಅದು ನಮ್ಮ ಮೂಲಭೂತ ಧರ್ಮ. ಅವರು ನಮಗೆ ಜನ್ಮಕೊಟ್ಟು .. ಈ ಲೋಕವನ್ನು ನಮಗೆ ಪರಿಚಯ ಮಾಡಿ .. ನಮ್ಮ ಅಭಿವೃದ್ಧಿಗೆ ತಮ್ಮ ಸಹಾಯವನ್ನು ಒದಗಿಸಿ .. ಎಷ್ಟೆಷ್ಟೋ ಕಷ್ಟನಷ್ಟಗಳನ್ನು ಅನುಭವಿಸುತ್ತಾ ನಮ್ಮನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡುತ್ತಾರೆ. ಅವರ ಕುರಿತಾದ ನಮ್ಮ ಕರ್ತವ್ಯಗಳನ್ನು ನಿರ್ವಹಿಸುವುದು ನಮ್ಮ ‘ಧರ್ಮ’, ಧರ್ಮವನ್ನು ನಾವು ಕಾಪಾಡಿದಾಗ ಆ ಧರ್ಮ ತಿರುಗಿ ನಮ್ಮನ್ನು ಕಾಪಾಡುತ್ತದೆ. ಧರ್ಮವನ್ನು ನಾವು ಮರೆತರೆ ಅದು ನಮ್ಮನ್ನು ತೀವ್ರ ಶಿಕ್ಷೆಗಳಿಗೆ ಗುರಿ ಮಾಡುತ್ತದೆ. ಇದರಲ್ಲಿ ಯಾವುದೇ ರೀತಿಯ ಸಂದೇಹವೂ ಇಲ್ಲ.
ಈಗ ನಾವು ‘ಸೇವೆ’ ಎಂದರೆ ಏನು ಎಂದು ತಿಳಿದುಕೊಳ್ಳೋಣ: ನಾವು ನಮ್ಮ ತಂದೆತಾಯಿಯರನ್ನು ನೋಡಿಕೊಳ್ಳುವ ಹಾಗೆ .. ಇತರರ ತಂದೆತಾಯಿಯರನ್ನು ಸಹ ಚೆನ್ನಾಗಿ ನೋಡಿಕೊಳ್ಳುವುದೇ ‘ಸೇವೆ’. ನಮ್ಮ ತಂದೆತಾಯಿಯರ ಅಗತ್ಯಗಳನ್ನು ಪೂರೈಸುವಂತೆಯೇ ಇತರರ ತಂದೆತಾಯಿಯರ ಅಗತ್ಯಗಳನ್ನು ಸಹ ಪೂರೈಸುವುದೇ ‘ಸೇವೆ’. ನಮ್ಮ ತಂದೆತಾಯಿಯರನ್ನು ಪ್ರೀತಿಯಿಂದ ಮಾತನಾಡಿಸಿದಂತೆ ಇತರರ ತಂದೆತಾಯಿಯರನ್ನು ಸಹ ಪ್ರೀತಿಯಿಂದ ಮಾತನಾಡಿಸುವುದೇ ‘ಸೇವೆ’.
“ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ, ಅಣ್ಣಂದಿರು, ತಮ್ಮಂದಿರು, ಅಕ್ಕಂದಿರು, ತಂಗಿಯರು ಪರಸ್ಪರ ಒಬ್ಬೊರಿಗೊಬ್ಬರು ಸೇವೆ ಮಾಡುತ್ತಿದ್ದಾರೆ” ಎಂದುಕೊಳ್ಳುವುದು ಕೂಡ ಮೂರ್ಖತನವೇ. ಅವೆಲ್ಲಾ ಕೂಡ ಒಬ್ಬರ ಬಗ್ಗೆ ಇನ್ನೊಬ್ಬರು ನಿರ್ವಹಿಸಲೇಬೇಕಾದ, ಅನಿವಾರ್ಯವಾದ, ಕನಿಷ್ಠ ಕರ್ತವ್ಯಗಳು ಮಾತ್ರವೇ. ಇದು ನಾವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದ ಪರಮಸತ್ಯ.
ಹಾಗೆಯೇ ಉದ್ಯೋಗ ವಿಷಯ ಸಹ. ಬಹಳ ಮಂದಿ “ನಾವು ಗವರ್ನಮೆಂಟ್ ‘ಸರ್ವೀಸ್’ ಮಾಡುತ್ತಿದ್ದೇವೆ” ಎಂದು ಹೇಳುತ್ತಿರುತ್ತಾರೆ, ಅಲ್ಲೆಲ್ಲೋ ಅವರು ಉಚಿತವಾಗಿ ಸೇವಾ ಕಾರ್ಯಕ್ರಮಗಳು ಕೈಹಿಡಿಯುತ್ತಿರುವಂತೆ. ತಮಗೆ ಒಪ್ಪಿಸಿದ ಕೆಲಸಕ್ಕೆ ಪ್ರತಿಫಲವಾಗಿ ಅವರು ಸಾವಿರಾರು ರೂಪಾಯಿಗಳನ್ನು ಸಂಬಳವನ್ನಾಗಿ ತೆಗೆದುಕೊಳ್ಳುತ್ತಿರುವಾಗ ಅದು ‘ಸೇವಾ ಕಾರ್ಯಕ್ರಮ’ ಹೇಗೆ ಆಗುತ್ತದೆ? ಹತ್ತು ಮೂಟೆಗಳ ತೂಕವನ್ನು ಎತ್ತಿ ಕೂಲಿಹಣವನ್ನು ತೆಗೆದುಕೊಳ್ಳುವ ಕಾರ್ಮಿಕನಾದರೂ .. ಯೂನಿವರ್ಸಿಟಿಯಲ್ಲಿ ಮಕ್ಕಳಿಗೆ ಪಾಠಗಳನ್ನು ಹೇಳಿ ಸಂಬಳ ತೆಗೆದುಕೊಳ್ಳುವ ಪ್ರೊಫೆಸರ್ ಆದರೂ .. ಮಾಡುತ್ತಿರುವುದು ಕರ್ತವ್ಯನಿರ್ವಹಣೆಯೇ ಹೊರತು ‘ಸೇವೆ’ ಎಷ್ಟು ಮಾತ್ರವೂ ಅಲ್ಲ.
ಹಾಗೆಯೇ, ಶಿಷ್ಯನಿಗೆ ಎಲ್ಲಾ ವಿದ್ಯೆಗಳನ್ನು ಕಲಿಸಿ ಪ್ರತಿಫಲವಾಗಿ ಗುರುದಕ್ಷಿಣೆ ತೆಗೆದುಕೊಳ್ಳುವವನು ‘ಗುರುವು’ ಎಷ್ಟು ಮಾತ್ರವೂ ಅಲ್ಲ ಮತ್ತು ಆತನು ಮಾಡುವುದು ನಿಜವಾಗಿಯು ಸೇವೆಯೇ ಅಲ್ಲ. ಅವರಿಬ್ಬರ ನಡುವೆ ಸಾಗುವುದು ಕೊಟ್ಟು-ತೆಗೆದುಕೊಳ್ಳುವ ‘ವ್ಯಾಪಾರ’ ಮಾತ್ರವೇ. ಎಲ್ಲಿ ವ್ಯಾಪಾರ ಇದೆಯೋ ಅಲ್ಲಿ ‘ಸೇವೆ’ ಎನ್ನುವುದು ಪ್ರವೇಶಿಸುವುದಿಲ್ಲ. ಮಹಾಭಾರತದಲ್ಲಿ ದ್ರೋಣಾಚಾರ್ಯನು, ಅರ್ಜುನನಿಗೆ ಎಲ್ಲಾ ವಿದ್ಯೆಗಳನ್ನು ಕಲಿಸಿ .. ಗುರುದಕ್ಷಿಣೆಯಾಗಿ .. ದ್ರುಪದನನ್ನು ಹಿಡಿದು ತರಹೇಳಿದನು. ಅದು ಅವರಿಬ್ಬರ ನಡುವೆ ನಡೆದ ಲೇವಾದೇವಿಯೇ ಹೊರತು ಮತ್ತೊಂದಲ್ಲ.
ಪ್ರತಿಫಲಾಪೇಕ್ಷೆ ಇಲ್ಲದೇ ಶಿಷ್ಯನಿಗೆ ತನ್ನ ಎಲ್ಲಾ ವಿದ್ಯೆಗಳನ್ನು ಬೋಧಿಸುವ ಸೇವಾತತ್ಪರನಾದವನೇ ‘ಗುರುವು’, ಉಳಿದವರೆಲ್ಲಾ ಸಹ ಕೇವಲ ವ್ಯಾಪಾರಿಗಳೇ.
“ಸೇವೆ” ಎನ್ನುವ ಇಂತಹ ಶ್ರೇಷ್ಠ ಗುಣ .. ಒಂದು ಆತ್ಮದ ವಿಕಾಸದ ಹಾದಿಯಲ್ಲಿನ ಅನೇಕಾನೇಕ ಜನ್ಮಗಳ ನಂತರವೇ ಪ್ರಾರಂಭವಾಗುತ್ತದೆ.
ಪ್ರಾರಂಭ ಜನ್ಮಗಳಲ್ಲಿ .. ಶೈಶವಾತ್ಮ ಸ್ಥಿತಿಯಲ್ಲಿರುವ ಆತ್ಮವು .. ತನ್ನ ಸ್ವಂತ ತಿಂಡಿ, ತನ್ನ ಸ್ವಂತ ಕುಡಿತ, ತನ್ನ ಸ್ವಂತ ಕುಟುಂಬ .. ಎನ್ನುವ ತಮೋಗುಣದಲ್ಲಿ ಬಿದ್ದು ಕೊಚ್ಚಿಕೊಂಡು ಹೋಗುತ್ತಾ, ತನ್ನ ಸ್ವಂತ ಕರ್ತವ್ಯವನ್ನು ಕೂಡಾ ಗುರುತಿಸಲಾರದಂತಹ ಸ್ಥಿತಿಯಲ್ಲಿ ಇರುತ್ತದೆ.
ಹಾಗೆ ಕೆಲವು ಜನ್ಮಗಳು ಕಳೆದನಂತರ ಆ ಆತ್ಮ “ನನ್ನವರು, ನನ್ನ ಪ್ರಾಂತ, ನನ್ನ ಮತ” ಎನ್ನುವ ರಜೋಗುಣ ಪ್ರಧಾನವಾದ ಜನ್ಮಗಳಲ್ಲಿ ಬಿದ್ದು ಒದ್ದಾಡುತ್ತಾ .. ತನ್ನ ಕರ್ತವ್ಯಗಳನ್ನು ತಾನು ನಿರ್ವಹಿಸಿಕೊಳ್ಳುತ್ತಾ ಇರುತ್ತದೆ. ಆದರೆ, ರಜೋಗುಣಸ್ಥಿತಿಯಲ್ಲಿ ಇರುವುದರಿಂದ ‘ಕರ್ತವ್ಯವನ್ನು’ .. ಸೇವೆ ಎಂದು ತಪ್ಪಾಗಿ ತಿಳಿಯುತ್ತದೆ.
ಕ್ರಮವಾಗಿ ಅವರು ಜನ್ಮಪರಂಪರೆಯ ಭಾಗವಾಗಿ ಸತ್ವಗುಣ ಹಂತದಲ್ಲಿ ಜನ್ಮಗಳನ್ನು ತೆಗೆದುಕೊಳ್ಳುತ್ತಾ ತಮ್ಮ ಕರ್ತವ್ಯಗಳನ್ನು ತಾವು ನಿರ್ವಹಿಸುತ್ತಲೇ ಉಳಿದ ಸಮಯದಲ್ಲಿ ಸೇವಾ ಕಾರ್ಯಕ್ರಮಗಳನ್ನು ಕೂಡಾ ಕೈಗೊಂಡು ಸಂತೃಪ್ತಿ ಹೊಂದುತ್ತಾರೆ. “ಕರ್ತವ್ಯ” ಮತ್ತು “ಸೇವೆ” ಎರಡರ ನಡುವೆ ಇರುವ ವ್ಯತ್ಯಾಸವನ್ನು ತಾವು ಗ್ರಹಿಸುತ್ತಾರೆ. ಆದರೆ, ಆ ಸೇವಾ ಕಾರ್ಯಕ್ರಮಗಳು ಬಹುತೇಕ ಕನಿಷ್ಠ ಹಂತದಲ್ಲೇ ಇರುತ್ತದೆ.
ಇನ್ನು ಜನ್ಮಪರಂಪರೆಯಲ್ಲಿ ಉತ್ತಮಹಂತವಾದ ನಿರ್ಗುಣ ಸ್ಥಿತಿಯಲ್ಲಿ ಜನ್ಮಗಳನ್ನು ತೆಗೆದುಕೊಳ್ಳುವವರು ಕೈಗೊಳ್ಳುವ ಸೇವಾಕಾರ್ಯಕ್ರಮಗಳು ಉನ್ನತ ಹಂತದಲ್ಲಿ ಇರುತ್ತದೆ. ಅವುಗಳನ್ನು ಮಾಡುತ್ತಿರುವಾಗ ಅವರು ಹೊಂದುವ ಆನಂದ ಅಷ್ಟಿಷ್ಟಲ್ಲ. ಯಾರಿಗೂ ಹೆದರದೇ, ಯಾರ ಅಜ್ಞಾನದ ಸಲಹೆಗಳನ್ನು ಪಾಲಿಸದೆ, ಯಾರ ಬೆದರಿಕೆಗಳಿಗೂ ಒಳಗಾಗದೇ ಇವರು ಕೈಗೊಳ್ಳುವ ಅದ್ಭುತ ಸೇವಾ ಕಾರ್ಯಗಳು ಒಳ್ಳೆಯ ಇತಿಹಾಸವನ್ನೇ ಸೃಷ್ಟಿಸುತ್ತಿರುತ್ತವೆ.
ಒಬ್ಬ “ಗೌತಮಬುದ್ಧನು” .. ಒಬ್ಬ “ಏಸುಕ್ರಿಸ್ತ” .. ಒಬ್ಬ “ವೇದವ್ಯಾಸ” .. ಒಬ್ಬ “ಮದರ್ ಥೆರೆಸಾ” .. ಒಬ್ಬ “ಗಾಂಧೀ ಮಹಾತ್ಮನು” .. ಒಬ್ಬ “ಬ್ಲಾವಟ್ಸ್ಕೀ” ಕೈಗೊಂಡ ಉನ್ನತ ಸೇವಾಕಾರ್ಯಕ್ರಮಗಳು ಈ ಗುಂಪಿಗೆ ಸೇರುತ್ತದೆ.
* * *
ಪ್ರಾರಂಭ ಜನ್ಮಗಳಲ್ಲಿ “ನೀರಿನಹನಿ”ಯಂತೆ ಆರಂಭವಾದ “ಸೇವಾತತ್ಪರತೆ” ಅನೇಕ ನೂರು ಜನ್ಮಗಳಲ್ಲಿ ಸರೋವರದಂತೆ, ನದಿಯಂತೆ ರೂಪುಹೊಂದುತ್ತಾ ಪ್ರಚಂಡವಾಗಿ ಬದಲಾಗಿ ಕೊನೆಗೆ ನಿರ್ಗುಣಸ್ಥಿತಿ ಎನ್ನುವ ಸಮುದ್ರದಲ್ಲಿ ಸೇರಿಕೊಳ್ಳುತ್ತದೆ.
ಅಂದರೆ, ಪ್ರಾರಂಭ ಜನ್ಮಗಳಲ್ಲಿ ಸೇವಾದೃಕ್ಪಥದಲ್ಲಿ ಅತಿ ಸಾಮಾನ್ಯವಾಗಿ ಇರುವ ನಮ್ಮ ವ್ಯಕ್ತಿತ್ವ “ಸೇವಾತತ್ಪರತೆ”ಯಿಂದ ಪುಷ್ಠಿಯಾಗುತ್ತಾ ಕೊನೆಯ ಜನ್ಮಕ್ಕೆಲ್ಲಾ ಸೇವಾಚಕ್ರವರ್ತಿಗಳಾದ .. ಗೌತಮ ಬುದ್ಧನಂತೆ, ಏಸುಕ್ರಿಸ್ತನಂತೆ, ವೇದವ್ಯಾಸನಂತೆ ಪರಾಕಾಷ್ಠೆ ಹೊಂದುತ್ತದೆ! ಸೇವೆ ಮಾಡುವುದರಲ್ಲಿ ಮೂರು ವಿಧಗಳು ಅಥವಾ ಹಂತಗಳು ಇವೆ. ಅವೆಂದರೆ, ಸೇವಾಮಾರ್ಗಿ, ಸೇವಾತತ್ಪರ, ಸೇವಾಚಕ್ರವರ್ತಿ.
ನಾನು ನನ್ನ ಚಿಕ್ಕಂದಿನಿಂದಲೂ, ಅಂದರೆ .. ನನ್ನ ವ್ಯಕ್ತಿತ್ವದ ಪ್ರಾರಂಭದ ದಿನಗಳಿಂದಲೇ ನಮ್ಮ ಮನೆಯವರು ಮಾಡುವ ಚಿಕ್ಕ ಚಿಕ್ಕ ಸೇವಾ ಕಾರ್ಯಕ್ರಮಗಳನ್ನು ನೋಡಿ ಸೇವಾಮಾರ್ಗಿ ಆದೆನು.
ಆ ನಂತರ ನನ್ನ ಉದ್ಯೋಗವನ್ನು ನಾನು ನಿಭಾಯಿಸುತ್ತಾ, ಹೆಂಡತಿ ಮಕ್ಕಳನ್ನು ಪೋಷಿಸಿಕೊಳ್ಳುತ್ತಾ, ನನ್ನ ಆಧ್ಯಾತ್ಮಿಕ ಸಾಧನೆಯನ್ನು ನಾನು ಮಾಡಿಕೊಳ್ಳುತ್ತಲೇ .. ನನಗೆ ತಿಳಿದ ಧ್ಯಾನವಿದ್ಯೆಯನ್ನು ಕೆಲವರಿಗೆ ಉಚಿತವಾಗಿ ಹಂಚುವುದನ್ನು ಪ್ರಾರಂಭಿಸಿದೆನು. ಅದು ನನ್ನ ವ್ಯಕ್ತಿತ್ವದಲ್ಲಿನ ಸೇವಾತತ್ಪರತೆಯ ಹಂತ.
ಇನ್ನು 1992ರಲ್ಲಿ ನನ್ನ ಉದ್ಯೋಗಕ್ಕೆ ಕೂಡ ರಾಜೀನಾಮೆ ನೀಡಿ .. ನನ್ನ ಸಂಪೂರ್ಣ ಸಮಯವನ್ನು ಧ್ಯಾನ ಪ್ರಚಾರ ಸೇವೆಗೆ ವಿನಿಯೋಗಿಸುತ್ತಿದ್ದೇನೆ. ಇದನ್ನು ನನ್ನ ಸೇವಾಚಕ್ರವರ್ತಿತನ ಎನ್ನುತ್ತಾರೆ.
* * *
“ಪ್ರಾಥಮಿಕ”, “ಮಾಧ್ಯಮಿಕ”, “ಅತ್ಯುನ್ನತ” ಎನ್ನುವ ಈ ಮೂರು ವಿಧಗಳ ಸೇವಾಹಂತಗಳು .. ಪ್ರಾಪಂಚಿಕದಲ್ಲಿ ಮತ್ತು ಆಧ್ಯಾತ್ಮಿಕದಲ್ಲಿ .. ಬೇರೆಬೇರೆಯಾಗಿ ಇರುತ್ತದೆ. ಅವು “ಕರ್ಮಯೋಗ-I” ಮತ್ತು “ಕರ್ಮಯೋಗ-II”.
“ಕರ್ಮಯೋಗ-I” ಎನ್ನುವ ಪ್ರಾಪಂಚಿಕ ಜೀವನದಲ್ಲಿನ ಸೇವೆಯಲ್ಲಿ ಸೇವಾಮಾರ್ಗಿ ಸೇವಾತತ್ಪರತೆ ಸೇವಾಚಕ್ರವರ್ತಿತನ .. ಎನ್ನುವ ಮೂರು ಹಂತಗಳನ್ನು ದಾಟಿದವರೇ “ಕರ್ಮಯೋಗ-II” ಎನ್ನುವ ಆಧ್ಯಾತ್ಮಿಕ ಜೀವನದಲ್ಲಿಯೂ ಸಹ ಸೇವಾಮಾರ್ಗಿ, ಸೇವಾತತ್ಪರತೆ ಸೇವಾಚಕ್ರವತಿತನ .. ಎನ್ನುವ ಮೂರು ಹಂತಗಳನ್ನು ಕೂಡ ದಾಟುತ್ತಾರೆ. ಹಾಗೆ ದಾಟಿದಾಗಲೇ ಅವರ ಆತ್ಮಕ್ಕೆ ತೃಪ್ತಿ ಲಭಿಸುತ್ತದೆ.
* * *
ಸೇವೆ ಎನ್ನುವುದನ್ನು ಎಷ್ಟು ಮಾಡುತ್ತೇವೆಯೋ ನಮಗೆ ಅಷ್ಟು ತೃಪ್ತಿ ಬರುತ್ತದೆ. ನಮ್ಮ ಭೋಗವನ್ನು ನಾವು ನೋಡಿಕೊಳ್ಳುವುದರಲ್ಲಿ, ನಮ್ಮ ಧರ್ಮವನ್ನು ನಾವು ನಿಭಾಯಿಸಿಕೊಳ್ಳುವುದರಲ್ಲಿ “ತೃಪ್ತಿ ಎನ್ನುವಂತಹದ್ದು” ಇದ್ದರೂ .. “ನಿಜವಾದ ತೃಪ್ತಿ” ಮಾತ್ರ ಸೇವೆ ಮಾಡುವುದರಿಂದಲೇ ಪ್ರಾರಂಭವಾಗುತ್ತದೆ ಮತ್ತು ಅದು ಸೇವೆ ಮಾಡುತ್ತಿರುವವರಿಗೆ ಅರ್ಥವಾಗುತ್ತದೆ.
* * *
ಸಂಗೀತ ತಿಳಿಯದವರಿಗೆ ಅದರಲ್ಲಿನ ಮಾಧುರ್ಯ ಹೇಗೆ ತಿಳಿಯುವುದಿಲ್ಲವೋ, .. ಚದುರಂಗ ಆಡದವರಿಗೆ ಅದರಲ್ಲಿನ ಹಿಡಿತಗಳು ಹೇಗೆ ತಿಳಿದಿಲ್ಲವೋ, ಹಾಗೆಯೇ, ಸೇವೆ ಮಾಡದವನಿಗೆ ಅದರಲ್ಲಿನ ಆನಂದ ತಿಳಿಯದು.
ಆದ್ದರಿಂದಲೇ ಧ್ಯಾನಪ್ರಚಾರ ಮಾಡುತ್ತಿರುವವರನ್ನು ನೋಡಿ, ಇತರರು ಅವರನ್ನು ಉದ್ದೇಶಿಸಿ: “ಏನೋ ಹುಚ್ಚನಂತೆ ಸುಮ್ಮನೇ ಹೀಗೆ ‘ಧ್ಯಾನ’, ‘ಧ್ಯಾನ’ ಎಂದು ತಿರುಗುತ್ತಿರುವೆ! ಯಾವುದಾದರೊಂದು ಉದ್ಯೋಗ ಮಾಡಿ ಇನ್ನೂ ಮೂರು ಲಕ್ಷಗಳನ್ನು ಸಂಪಾದಿಸಿದರೆ ಮನೆಯಲ್ಲಿ ಇನ್ನೂ ಮೂರು ಫ್ರಿಜ್ಗಳು, ಇನ್ನೂ ಮೂರು A/Cಗಳು ತೆಗೆದುಕೊಳ್ಳಬಹುದಲ್ಲವೇ. ಈ ಹಳೇಕಾರನ್ನು ಮಾರಿ ಇನ್ನೂ ಹತ್ತು ಲಕ್ಷಗಳನ್ನು ಹಾಕಿ ಇನ್ನೊಂದು ಹೊಸ ಕಾರನ್ನು ತೆಗೆದುಕೊಳ್ಳಬಹುದಲ್ಲವೇ” ಎಂದು ಉಚಿತ ಸಲಹೆಗಳನ್ನು ಕೊಡುತ್ತಿರುತ್ತಾರೆ.
ಆದರೆ .. ಅವರಿಗೇನು ತಿಳಿದಿದೆ? ಧ್ಯಾನಪ್ರಚಾರ ಸೇವೆಯಲ್ಲಿ ಇರುವ ದೊಡ್ಡತನ. ಆ ದೊಡ್ಡತನಕ್ಕಾಗಿಯೇ ದ್ವಾಪರಯುಗದಲ್ಲಿ ಶ್ರೀಕೃಷ್ಣನು ಹದಿನಾರು ಸಾವಿರ ಮಂದಿ ಗೋಪಿಕೆಯರನ್ನು ಹಿಂದೆಹಾಕಿಕೊಂಡು ತಿರುಗಿದನು. ಆ ಗೋಪಿಕೆಯರೆಲ್ಲರೂ ಕಳೆದ ಜನ್ಮದಲ್ಲಿ ಮೌನದೀಕ್ಷೆ ಮಾಡಿದ ಮುನಿಗಳೆಂದು .. ಈ ಜನ್ಮದಲ್ಲಿ ಅವರು ಭಗವಂತನಾದ ಶ್ರೀಕೃಷ್ಣನೊಂದಿಗೆ ಕಲೆತು ಧ್ಯಾನ ಮಾಡಿ, ಯೋಗಿಗಳಂತೆ ಮುಕ್ತಿ ಹೊಂದಲಿಕ್ಕಾಗಿ ವರ ತೆಗೆದುಕೊಂಡು ಜನ್ಮಿಸಿದ್ದಾರೆಂದು ತಿಳಿದುಕೊಳ್ಳಲಿಲ್ಲ. ಅಲ್ಲದೆ, ಶ್ರೀಕೃಷ್ಣನನ್ನು ‘ಸ್ತ್ರೀಲೋಲ’ನಂತೆ ವರ್ಣಿಸುತ್ತಾ ಪರಮಮೂರ್ಖರಂತೆ ಮಾತನಾಡುತ್ತಿರುತ್ತಾರೆ.
ಹಾಗೆಯೇ, ಹಿಮಾಲಯ ಯೋಗಿ “ಸ್ವಾಮಿ ರಾಮಾ”, ಅವರು ತಮ್ಮ ಗುರುವಿನ ಬಳಿ ಇದ್ದು ಧ್ಯಾನಸಾಧನೆ ಮಾಡಿಕೊಳ್ಳುತ್ತಿರುವಾಗ ದೇಶದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ಚಳವಳಿಯ ವಾರ್ತೆಗಳು ಅವರನ್ನು ಒಂದೆಡೆ ನಿಲ್ಲಲಾಗದಂತೆ ಮಾಡುತ್ತಿದ್ದವು.
“ನಾನೂ ಸಹ ಹೋಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳುವೆ” ಎಂದು ಅವರು ತಮ್ಮ ಗುರುವನ್ನು ಕೇಳಿದಾಗ .. “ನೀನು ಒಬ್ಬ ‘ಬುದ್ಧ’ನಂತೆ ಆಗಬೇಕು! ಮೊದಲು ಆ ಸಾಧನೆ ಮಾಡು. ಆ ನಂತರ ನೀನು ಮಾಡುವಂತಹ ‘ಆಧ್ಯಾತ್ಮಿಕ ಸೇವೆ’ ಎನ್ನುವುದು ಈಗ ನೀನು ಮಾಡಬೇಕೆಂದುಕೊಳ್ಳುತ್ತಿರುವ ‘ದೇಶಸೇವೆಗಿಂತ ಬಹಳ ದೊಡ್ಡದು’. ಆ ದೊಡ್ಡ ಸೇವೆ ಮಾಡಲಿಕ್ಕಾಗಿ ನೀನು ಜನ್ಮ ತೆಗೆದುಕೊಂಡಿರುವೆ. ಆದ್ದರಿಂದ, ಈಗ ನಿನ್ನ ಅಮೂಲ್ಯವಾದ ಸಮಯವನ್ನೆಲ್ಲಾ ನಿನ್ನ ಸಾಧನೆಗೆ ಇಡು” ಎನ್ನುತ್ತಾ ಅವರು ತಮ್ಮ ಶಿಷ್ಯನಿಗೆ ಸರಿಯಾದ ದಿಕ್ಕನ್ನು ನಿರ್ದೇಶಿಸಿದರು. ಇದೆಲ್ಲಾವೂ ಸಹ ” Living With the Himalayan Masters “ಎನ್ನುವ ಗ್ರಂಥವನ್ನು ಓದಿದರೆ ತಿಳಿಯುತ್ತದೆ. ಆಧ್ಯಾತ್ಮಿಕ ಸೇವೆಯ ದೊಡ್ಡತನ ಅದೇ.
ಸೇವೆಯಲ್ಲಿ .. “ಸೇವಾಚಕ್ರವರ್ತಿ” ಹಂತಕ್ಕೆ ಸೇರಿದ ಜನರು ಹೀಗೆ ಎವರೆಸ್ಟ್ ಶಿಖರದಂತಹ ಆಧ್ಯಾತ್ಮಿಕ ಸೇವೆಗಳನ್ನೇ ಮಾಡುತ್ತಿದ್ದಾರೆ ಹೊರತು .. ಸಾಧಾರಣ ಪ್ರಾಪಂಚಿಕ ಸೇವೆಯಲ್ಲಿ ತಮ್ಮ ಕಾಲವನ್ನು ವ್ಯರ್ಥ ಮಾಡಿಕೊಳ್ಳುವುದಿಲ್ಲ.
ನನಗೆ ಸಂಗೀತ ಹಾಡಲು ಬರುತ್ತದೆ .. ಕೊಳಲನ್ನು ನುಡಿಸಲು ಬರುತ್ತದೆ .. ಇಂಗ್ಲೀಷ್ ಕಲಿಸಲು ಬರುತ್ತದೆ. ಹಾಗೆಂದು ಎಲ್ಲರಿಗೂ ಅವುಗಳನ್ನು ಉಚಿತವಾಗಿ ಕಲಿಸುತ್ತಾ ತಿರುಗುತ್ತಿದ್ದೀನಾ?
ಅಂತಹ ವಿದ್ಯೆಗಳು ಅವರಿಗೆ ಯಾರಾದರೂ ಕಲಿಸುತ್ತಾರೆ. ಅವರಿಗೆ ನಾನು ಕಲಿಸಬೇಕಾಗಿರುವುದು ಆತ್ಮವಿದ್ಯೆ. ಅದು ಕಲಿಸುವುದಕ್ಕಾಗಿ ನಾನು ಈ ಭೂಮಿಯ ಮೇಲೆ ಜನ್ಮ ತೆಗೆದುಕೊಂಡಿರುವೆ. ಆದ್ದರಿಂದ, ನನ್ನ ಅತಿ ಅಮೂಲ್ಯವಾದ ಸಮಯವನ್ನು ನಾನು ಅವರಿಗೆ ಧ್ಯಾನ ಕಲಿಸಲಿಕ್ಕಾಗಿಯೇ ಖರ್ಚು ಮಾಡುತ್ತೇನೆ.
ಈ ಲೋಕದಲ್ಲಿ ಪ್ರಾಪಂಚಿಕ ವಿದ್ಯೆಗಳನ್ನು ಕಲಿಸಲು ಬಹಳಷ್ಟು ಮಂದಿ ಇದ್ದಾರೆ. ಆದರೆ, ಆತ್ಮಶಾಸ್ತ್ರದ ಕುರಿತು, ಧ್ಯಾನಶಾಸ್ತ್ರದ ಕುರಿತು ತಿಳಿದುಕೊಂಡಿರುವವರು ಬಹಳ ಅಪರೂಪ.
ಹೈದರಾಬಾದ್ನಲ್ಲಿ ರಸ್ತೆಗಳನ್ನು ಗುಡಿಸಲುಬೇಕಾದ ಶಕ್ತಿ ನನಗೆ ಇದೆ .. ಚೆನ್ನಾಗಿ ಗುಡಿಸಬಲ್ಲೆನು ಸಹ. ಆದರೆ, ನಾನು ರಸ್ತೆಗಳನ್ನು ಗುಡಿಸುತ್ತಾ ಕುಳಿತರೆ ನನ್ನ ಕೆಲಸವಾಗಿರುವ ಧ್ಯಾನಪ್ರಚಾರ ಯಾರು ಮಾಡುತ್ತಾರೆ? ಆದ್ದರಿಂದ, ಯಾವ ಕೆಲಸ ಯಾರು ಮಾಡಬೇಕೋ ಅವರು ಆ ಕಲಸವೇ ಮಾಡಬೇಕು. ಯಾರ ಪರಾಕಾಷ್ಠೆ ಯಾವುದರಲ್ಲಿ ಇದೆಯೋ ಆ ಪರಾಕಾಷ್ಠೆಯಲ್ಲೇ ಅವರು ಜೀವಿಸಬೇಕು.
ಸ್ವಾಮಿ ವಿವೇಕಾನಂದ ಅವರು “ಸೇವೆ”ಯ ಕುರಿತು ಅದ್ಭುತವಾಗಿ ತಿಳಿಸುತ್ತಾ “ಅನ್ನದಾನ, ವಸ್ತ್ರದಾನ, ಭೂದಾನ, ಗೋದಾನ, ಆರ್ಥಿಕ ದಾನ ಎನ್ನುವ ತಾತ್ಕಾಲಿಕ ದಾನಗಳೆಲ್ಲವನ್ನೂ ಸ್ವೀಕರಿಸಿದವರನ್ನು ಪರಾನ್ನಭುಕ್ತರಂತೆ ಮಾಡುತ್ತದೆ. ಪ್ರಜೆಗಳನ್ನು ನಿಸ್ತೇಜಪಡಿಸುವ ಇಂತಹ ತಾತ್ಕಾಲಿಕ ಸೇವೆಗಳಿಗೆ ಬದಲಾಗಿ ಅವರನ್ನು ಸರ್ವಸ್ವತಂತ್ರರಾಗಿ ಮಾಡಲಾಗುವ ಆತ್ಮವಿದ್ಯಾದಾನದಂತಹ ಶಾಶ್ವತವಾದ ಸೇವೆಯನ್ನು ಮಾಡಿ! ಅವರಲ್ಲಿರುವ ಆತ್ಮಶಕ್ತಿಯನ್ನು ಎಚ್ಚರಗೊಳಿಸಿ” ಎನ್ನುತ್ತಾ ಸ್ಫೂರ್ತಿದಾಯಕವಾದ ಸೇವೆಗಳನ್ನು ಕೈಗೊಳ್ಳಿ ಎಂದು ಕರೆನೀಡಿದರು.
ಆತ್ಮಜ್ಞಾನ ಹೊಂದಿದವರು ತಮ್ಮ ಸಂಗತಿಯನ್ನು ತಾವು ಮಾಡಿಕೊಳ್ಳುತ್ತಲೇ ಇಂತಹ ಶಾಶ್ವತವಾದ ಸೇವೆಗಳು ಮಾಡುತ್ತಾ ಇತರರಿಗೆ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ.
ಶರೀರ ಎಂದರೆ “ಮಾನವನ ಹಂತ” .. ಆತ್ಮ ಎಂದರೆ “ಮಾಧವನ ಹಂತ” ಆದ್ದರಿಂದ, ಶರೀರಕ್ಕೆ ಮಾಡುವ ಸೇವೆಗಳು ಅಲ್ಪಹಂತಕ್ಕೆ ಸಂಬಂಧಿಸಿದ್ದು; ಮನಸ್ಸಿಗೆ ಮಾಡುವ ಸೇವೆಗಳು ಮಧ್ಯಮ ಹಂತಕ್ಕೆ ಸಂಬಂಧಿಸಿದ್ದು ಮತ್ತು ಆತ್ಮಕ್ಕೆ ಮಾಡುವ ಸೇವೆಗಳು ಅತ್ಯುತ್ತಮ ಹಂತಕ್ಕೆ ಸಂಬಂಧಿಸಿದ್ದು.
ನಾವು ಶರೀರಕ್ಕೆ ಮಾಡುವ ಅಶಾಶ್ವತವಾದ ಸೇವೆಗಳು ಶರೀರಕ್ಕೇ ಮಿತವಾಗುತ್ತದೆ. ಆದರೆ, ಆತ್ಮಕ್ಕೆ ಸ್ವಲ್ಪ ಮಾತ್ರವೂ ಸೇರುವುದಿಲ್ಲ. ಆತ್ಮಕ್ಕೆ ಶಾಶ್ವತವಾದ ‘ಜ್ಞಾನ’ ಎನ್ನುವುದು ಆಹಾರವಾದರೆ .. ಶರೀರಕ್ಕೆ ಇಡುವ ತಾತ್ಕಾಲಿಕವಾದ ಆಹಾರವಾದ, ಒಂದು ಗಂಟೆಯಲ್ಲಿ ಅರಗಿಹೋಗುವ ಅನ್ನದಿಂದ ಆತ್ಮದ ಹಸಿವು ಹೇಗೆ ತೀರುತ್ತದೆ? ಆ ಆತ್ಮವು ಪರತಂತ್ರದೆಡೆಯಿಂದ ಸ್ವಾತಂತ್ರದೆಡೆಗೆ ಹೇಗೆ ಹೋಗುತ್ತದೆ?
ಆದ್ದರಿಂದ, ‘ಆತ್ಮವಿದ್ಯಾದಾನ’ ಎನ್ನುವ ಆಧ್ಯಾತ್ಮಿಕ ಸೇವೆ ಇಲ್ಲದ ಮಾನವ ಸೇವೆಯು ಕೇವಲ ‘ಮಾನವ ಸೇವೆ’ಯೇ ಆಗುತ್ತದೆ ಹೊರತು ‘ಮಾಧವಸೇವೆ’ ಎಂದಿಗೂ ಆಗಲಾರದು.
ಆದ್ದರಿಂದ, ಶಾಶ್ವತವಾದ ಮಾಧವ ಸೇವೆ ಮಾಡಬೇಕಾದರೆ ಮಾತ್ರವೇ ಆಧ್ಯಾತ್ಮಿಕ ಸೇವೆಯಾದ ಧ್ಯಾನಪ್ರಚಾರವನ್ನು ಕೈಗೊಳ್ಳಬೇಕು. ಪ್ರತಿ ಶರೀರದಲ್ಲಿ ಇರುವ ಮಾಧವನನ್ನು ತಟ್ಟಿ ಎಬ್ಬಿಸಬೇಕು. ಆ ಶರೀರಕ್ಕೆ ಆತ್ಮವಿದ್ಯೆಯನ್ನು ದೊರಕಿಸಿ ಅವರು ಮಾಧವತ್ವದೊಂದಿಗೆ ವಿಕಸಿಸುವಂತೆ ಮಾಡಬೇಕು! ಮಾಧವತ್ವದಿಂದ ವಿಕಸಿಸುವ ಅಂತಹ ಆತ್ಮಸ್ವರೂಪಗಳೇ ಈ ಭೂಮಿಯನ್ನು ಸ್ವರ್ಗಸಮಾನವಾಗಿ ಮಾಡುತ್ತಾರೆ!
ಆದ್ದರಿಂದ, “ಮಾಧವಸೇವೆಯೇ .. ಮಾನವಸೇವೆ” ಆಗುತ್ತದೆಯೆ ಹೊರತು “ಮಾನವಸೇವೆ .. ಮಾಧವ ಸೇವೆ” ಎಂದಿಗೂ ಆಗುವುದಿಲ್ಲ! ಈ ಪರಮಸತ್ಯವನ್ನು ತಿಳಿದುಕೊಂಡು ಇನ್ನಷ್ಟು ಧ್ಯಾನ-ಜ್ಞಾನ ಪ್ರಚಾರಗಳನ್ನು ಕೈಗೊಳ್ಳೋಣ .. ಇನ್ನಷ್ಟು ಮಾಧವಸೇವೆ ಮಾಡೋಣ!
Recent Comments