” ಶ್ವಾಸ ಶಾಸ್ತ್ರ .. ಆತ್ಮ ಶಾಸ್ತ್ರ “

ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್‌ಮೆಂಟ್ .. ಧ್ಯಾನ-ಜ್ಞಾನ ಪ್ರಚಾರ ವಿಸ್ತರಣೆಯ ಅಂಗವಾಗಿ ತಿಳಿಸಲ್ಪಟ್ಟ ಅಸಂಖ್ಯ ಆತ್ಮಜ್ಞಾನ ವಿಶೇಷಗಳಿಂದ ಕೂಡಿದ ಆಂಗ್ಲ ಕರಪತ್ರಗಳಲ್ಲಿ Science of Soul ಒಂದು! ಶ್ವಾಸಶಾಸ್ತ್ರವನ್ನು ಕುರಿತು, ಧ್ಯಾನಶಾಸ್ತ್ರವನ್ನು ಕುರಿತುಆತ್ಮಶಾಸ್ತ್ರವನ್ನು ಕುರಿತು ಇದರಲ್ಲಿ ಬ್ರಹ್ಮರ್ಷಿ ಪತ್ರೀಜಿ ಸುಲಭಸಾಧ್ಯವಾದ ರೀತಿಯಲ್ಲಿ ವಿವರಿಸಿದ್ದಾರೆ.

“ಶ್ವಾಸದ ಮೇಲೆ ಗಮನ”

“ಮತದ ಮೂಲಗಳಲ್ಲಿ ಇರುವುದು ಮೂಲಭೂತವಾದ ಆಧ್ಯಾತ್ಮಿಕತೆ

ಆಧ್ಯಾತ್ಮಿಕತೆಯ ಮೂಲಗಳಲ್ಲಿ ಇರುವುದು ಆತ್ಮಶಾಸ್ತ್ರ

ಆತ್ಮಶಾಸ್ತ್ರದ ಮೂಲಗಳಲ್ಲಿ ಇರುವುದು ಧ್ಯಾನಶಾಸ್ತ್ರ

ಧ್ಯಾನಶಾಸ್ತ್ರದ ಮೂಲಗಳಲ್ಲಿ ಇರುವುದು ಶ್ವಾಸದ ಮೇಲೆ ಗಮನ”

ಹೀಗೆ ಎಲ್ಲಾ ಶಾಸ್ತ್ರಗಳ ಆಧಾರ “ಶ್ವಾಸ” ಮಾತ್ರವೇ, ಈ ಶ್ವಾಸವೇ ನಮ್ಮ ಪ್ರಾಣ. ಈ ಶ್ವಾಸವೇ ನಮ್ಮ ಜೀವನ, ಶ್ವಾಸ ಶಕ್ತಿಯೇ ಪ್ರಾಣಶಕ್ತಿ .. ಪ್ರಾಣಶಕ್ತಿಯೇ ಪ್ರಕೃತಿ ಶಕ್ತಿ .. ಪ್ರಕೃತಿ ಶಕ್ತಿಯೇ ವಿಶ್ವಶಕ್ತಿ.

ಅಂದರೆ, ಈ ಜಗತ್ತಿಗೆಲ್ಲಾ ಜೀವಾಧಾರವಾದ ಈ ವಿಶ್ವಶಕ್ತಿಯೇ ನೀರಿನಲ್ಲೂ, ಗಿಡಗಳಲ್ಲೂ, ಪ್ರಾಣಿಗಳಲ್ಲೂ ಪ್ರಕೃತಿ ಶಕ್ತಿಯಾಗಿ, ಪ್ರಾಣಶಕ್ತಿಯಾಗಿ ಮತ್ತು ಶ್ವಾಸಶಕ್ತಿಯಾಗಿ ಬದಲಾಗಿ .. ಅವುಗಳ ಬೆಳವಣಿಗೆಗೆ, ಅವುಗಳ ಬದುಕಿಗೆ ಸಹಾಯವಾಗುತ್ತಿರುತ್ತದೆ. ಹೀಗೆ ವಿಶ್ವದಲ್ಲಿರುವ ಸಕಲ ಚರಾಚರಗಳೆಲ್ಲದರಲ್ಲೂ ಈ ಮೂಲಶಕ್ತಿ ಆಧಾರವಾಗಿ ಅವೆಲ್ಲವನ್ನೂ ಒಂದುಕಡೆ ಸೇರಿಸಿ ಪುನಃ ಒಂದಾಗಿಸುವುದೇ “ಮತ” ಅಥವಾ “Religion”.

“Re-ligate” ಅಂದರೆ “ಪುನಃ ಒಂದಾಗುವುದು” ಆದ್ದರಿಂದ, ಇಂತಹ ಬೇರೆಯಾದಂತಹ ಆತ್ಮಗಳೆಲ್ಲವನ್ನೂ ಪುನಃ ಒಂದಾಗಿಸುವ ಮೂಲಚೈತನ್ಯ ಶಕ್ತಿಯನ್ನು ಕುರಿತು ವಿಶೇಷವಾಗಿ ಅಧ್ಯಯನ ಮಾಡುವುದೇ ನಮ್ಮ ನಿಜವಾದ ಮತ, ಅದೇ ನಮ್ಮ “ಆತ್ಮಶಾಸ್ತ್ರ ಮತ”..

“ಧ್ಯಾನಶಾಸ್ತ್ರ”

ಶ್ವಾಸಶಕ್ತಿಯೇ ನಮ್ಮ ಬದುಕಿಗೆ ಜೀವನಾಧಾರ. ಮತ್ತು ಈ ಶ್ವಾಸಶಕ್ತಿಯೇ ನಮ್ಮ ಮೂಲಕ್ಕೆ ನಮ್ಮನ್ನು ಕರೆದೊಯುತ್ತದೆ. ಯಾವಾಗ ನಾವು ಶ್ವಾಸಾನುಸಂಧಾನ ಮಾಡುತ್ತೇವೆಯೋ ಆಗ ಶ್ವಾಸ ಸೂಕ್ಷ್ಮವಾಗಿ .. ಮನಸ್ಸು ಶೂನ್ಯವಾಗಿ .. ಪರಿಶೂನ್ಯವಾಗಿ ವಿಸ್ತಾರವಾಗಿ ವಿಶ್ವಮಯ ಪ್ರಾಣಶಕ್ತಿ ನಮ್ಮಲ್ಲಿ ಪ್ರವಹಿಸಿ, ನಮ್ಮ ದಿವ್ಯಚಕ್ಷುವು ಉತ್ತೇಜಿತವಾಗುತ್ತದೆ .. ನಾವು ಸೂಕ್ಷ್ಮ ಶರೀರಯಾನಗಳು ಮಾಡುತ್ತೇವೆ. ಹೀಗೆ ನಮ್ಮ ಆತ್ಮಶಕ್ತಿ ಅನಂತವಾಗಿ ನಮಗೆ ಅರಿವಾಗುತ್ತಿರುತ್ತದೆ. ಇದೆಲ್ಲವೂ ಸಹ ಸರಿಯಾದ “ಧ್ಯಾನಶಾಸ್ತ್ರ”.

“ಆತ್ಮಶಾಸ್ತ್ರ”

ವಿಶೇಷ ಧ್ಯಾನಾಭ್ಯಾಸ ಮೂಲಕ ಯಾವಾಗ ನಮ್ಮ ಆತ್ಮ ಎಚ್ಚರಗೊಳ್ಳುತ್ತದೆಯೋ ಆಗ ಆತ್ಮಶಕ್ತಿಯ ಮೂಲಕ ನಾವು ನಮ್ಮ ಅನೇಕ ಹಿಂದಿನ ಜನ್ಮಗಳನ್ನು ತಿಳಿದುಕೊಳ್ಳುತ್ತೇವೆ. “ನಾವು ಅನೇಕ ಜನ್ಮಗಳನ್ನು ತಾಳುತ್ತಾ, ಇನ್ನೂ ಅನೇಕ ಅನುಭವಗಳನ್ನು ಪಡೆಯುತ್ತಾ ಇದ್ದೇವೆ” ಎಂದು ತಿಳಿದುಕೊಳ್ಳುತ್ತೇವೆ .. “ಇನ್ನೂ ಹೊಸ ಹೊಸ ಅನುಭವಗಳಿಗಾಗಿ ಈ ಜನ್ಮವನ್ನು ಪುನಃ ಪಡೆದಿದ್ದೇವೆ” ಎನ್ನುವ ವಿಷಯವನ್ನು ಕೂಡಾ ಆತ್ಮಶಾಸ್ತ್ರ ಅಭ್ಯಾಸದ ಮೂಲಕ ಪಡೆಯುವ ಆತ್ಮಜ್ಞಾನದಿಂದಲೇ ನಮಗೆ ಅರ್ಥವಾಗುತ್ತದೆ.

“ನಾನು ಶರೀರವಲ್ಲ” .. “ಅಯಾಮಾತ್ಮಾ ಬ್ರಹ್ಮ” .. “ನಾನು ಎಲ್ಲರಲ್ಲೂ ಇದ್ದೇನೆ” .. “ಅಹಂ ಬ್ರಹ್ಮಾಸ್ಮಿ” .. ನಾನು ಆತ್ಮ ಎನ್ನುತ್ತಾ .. ಆತ್ಮವನ್ನು ಕುರಿತು ಖಂಡಿತವಾಗಿ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಇರುತ್ತೇವೆ. ಹೀಗೆ ಧ್ಯಾನದ ವಿಶೇಷ ಅಭ್ಯಾಸದಿಂದ ಆತ್ಮಶಾಸ್ತ್ರ ವಿವರವಾಗಿ ತಿಳಿಯುತ್ತದೆ. ನಮ್ಮಲ್ಲಿ ಇಂತಹ ಆತ್ಮಜ್ಞಾನದಿಂದಲೇ ಸರಿಯಾದ ವ್ಯವಹಾರಿಕ ಪರಿವರ್ತನೆ ಬರುತ್ತದೆ.

“ಹೇಗೆ ಮಾತನಾಡಬೇಕು?” .. “ಯಾವ ಭಾವವನ್ನು ವ್ಯಕ್ತಗೊಳಿಸಬೇಕು?” .. “ಹೇಗೆ ನಡೆದುಕೊಳ್ಳಬೇಕು?” .. ಎನ್ನುವ ವಿಷಯಗಳಲ್ಲಿ ಕೂಡಾ ತುಂಬಾ ಪರಿಪಕ್ವತೆ ಬರುತ್ತದೆ. ಜೀವನದಲ್ಲಿ ಅನೇಕ ಅನುಭವಗಳು ಎದುರಾಗುತ್ತಾ .. ಅವುಗಳಿಂದ ನಾವು ತುಂಬಾ ಕಲಿತುಕೊಳ್ಳುತ್ತಾ, “ಆತ್ಮದ ಬೆಳವಣಿಗೆಗಾಗಿಯೇ ಈ ಶರೀರವನ್ನು ಧರಿಸಿ ಜನ್ಮ ಪಡೆದಿದ್ದೇವೆ” ಎನ್ನುವ ಆತ್ಮಸಾಕ್ಷಾತ್ಕಾರವನ್ನು ಕ್ರಮೇಣ ಪಡೆಯುತ್ತೇವೆ.

ಹೀಗೆ ನಿಧಾನವಾಗಿ ದೇಹಭಾವನೆಯನ್ನು ದಾಟುತ್ತಾ ಆತ್ಮಭಾವನೆಯ ಕಡೆಗೆ ನಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತೇವೆ. ಕ್ರಮೇಣ ಶರೀರಕ್ಕೆ ಇರುವ ಮಿತಿಗಳು, ಸರಹದ್ದುಗಳು ಆತ್ಮಕ್ಕೆ ಇಲ್ಲವೆಂದು ಅರ್ಥಮಾಡಿಕೊಂಡು, ಆನಂದವಾಗಿ ಒಂದೇಬಾರಿ ಬಹುಮುಖ ಆಯಾಮಗಳಲ್ಲಿ ವಿಹರಿಸುತ್ತಾ ಅನಂತವಾದ ಆತ್ಮಜ್ಞಾನವನ್ನು ಅಪಾರವಾಗಿ ಪಡೆಯುತ್ತಿರುತ್ತೇವೆ. ಹೀಗೆ ನಮ್ಮ “ಆತ್ಮಕಥೆ”ಗೆ ಮೂಲ “ಶ್ವಾಸಾನುಸಂಧಾನ” ಮಾತ್ರವೇ ಎನ್ನುವ ಮುಖ್ಯ ಅರಿವನ್ನು ಚೆನ್ನಾಗಿ ಪಡೆಯುತ್ತೇವೆ.