” ಸೇವೆಗಳು ಆರು ತರಹದಲ್ಲಿ ಇರುತ್ತದೆ “
ನಾನು ಹೇಳಿದ್ದನ್ನು ಎಲ್ಲರೂ ಹೇಳಿ- ಮೂಲಾಧಾರ, ಸ್ವಾಧಿಷ್ಟಾನ, ಮಣಿಪೂರಕ, ಅನಾಹತ, ವಿಶುದ್ಧ, ಆಜ್ಞ, ಸಹಸ್ರಾರ. ಈಗ ನಾನು ನಿಮಗೆ ಇವುಗಳ ಬಗ್ಗೆ ಹೇಳುತ್ತೇನೆ.
ಮೂಲಾಧಾರ ಎಂದರೆ ‘ ಶರೀರ ‘
ಸ್ವಾಧಿಷ್ಠಾನ ಎಂದರೆ ‘ ಮನಸ್ಸು ‘
ಮಣಿಪೂರಕ ಎಂದರೆ ‘ ಬುದ್ಧಿ ‘
ಮೌನವೇ ‘ ಅನಾಹತ ‘
ಸತ್ಯವೇ ‘ ವಿಶುದ್ಧ ‘
ಧ್ಯಾನ ಎಂದರೆ ‘ ಆಜ್ಞ ‘ ಮತ್ತು
ಸೇವೆಯೇ ‘ ಸಹಸ್ರಾರ ‘
ನೀವು ನಿಮ್ಮ ಮೂಲಾಧಾರ ಚಕ್ರವನ್ನು ಅಭಿವೃದ್ಧಿ ಗೊಳಿಸಬೇಕಾದರೆ ನಿಮ್ಮ ದೇಹವನ್ನು ಪ್ರೀತಿಸಬೇಕು. ನಿಮ್ಮ ದೇಹದ ಆರೈಕೆ ಮಾಡಬೇಕು. ಮೂಲ+ಆಧಾರ=ಶರೀರ. ಈ ಶರೀರವೇ. ನಮ್ಮ ಜೀವನಕ್ಕೆ ಮೂಲ ಮತ್ತು ಆಧಾರ. ಆದ್ದರಿಂದ, ನೀವು ನಿಮ್ಮ ಶರೀರವನ್ನು ಪ್ರೀತಿಸಬೇಕು. ಮತ್ತು ನೀವು ನಿಮ್ಮ ಶರೀರವನ್ನು ಕೆಡಿಸಿಕೊಳ್ಳಬಾರದು. ನಿಮ್ಮ ಶರೀರವನ್ನು ನೋಡಿಕೊಳ್ಳಬೇಕು, ಅದನ್ನು ಆರೈಕೆ ಮಾಡಬೇಕು. ದೇಹದ ಕ್ರಿಯೆಗಳು ನಿಮಗೆ ತಿಳಿದಿದೆ. ತಿನ್ನುವುದು, ನಿದ್ರಿಸುವುದು, ಲೈಂಗಿಕ ಕ್ರಿಯೆ – ಈ ಎಲ್ಲಾ ಚಟುವಟಿಕೆಗಳನ್ನೂ ನೀವು ಪ್ರೀತಿಸಬೇಕು. ಈ ಎಲ್ಲವನ್ನೂ ನೀವು ದ್ವೇಷಿಸಿದರೆ ನೀವು ನಿಮ್ಮ ದೇಹವನ್ನು ಅಭಿವೃದ್ಧಿಗೊಳಿಸಲಾರಿರಿ. ಆದ್ದರಿಂದ, ದೇಹದ ಎಲ್ಲಾ ಅಗತ್ಯ ಚಟುವಟಿಕೆಗಳನ್ನೂ ನೀವು ಪ್ರೀತಿಸಬೇಕು ಮತ್ತು ನೀವು ನಿಮ್ಮ ದೇಹವನ್ನೂ ಪ್ರೀತಿಸಬೇಕು. ಆಗ ನೀವು ನಿಮ್ಮ ಮೂಲಾಧಾರ ಚಕ್ರವನ್ನು ಅಭಿವೃದ್ಧಿಪಡಿಸಿಕೊಳ್ಳುತ್ತೀರಿ.
ಎರಡನೆಯದು ಸ್ವ+ ಅಧಿಷ್ಠಾನ. ‘ಸ್ವ’ ಅಂದರೆ ತಾನು; ಅಧಿಷ್ಠಾನ ಎಂದರೆ ಅಧಿಪತಿ, ಆಡಳಿತ ನಡೆಸುವುದು. ನೀವು ಈ ಭೂಮಿಯಲ್ಲಿ ಇರುವ ತನಕ ನಿಮ್ಮ ಮನಸ್ಸು ನಿಮ್ಮದು, ಸ್ವಂತದ್ದು. ಆದ್ದರಿಂದ, ‘ಸ್ವ’ ಅಂದರೆ ಮನಸ್ಸು. ನೀವು ನಿಮ್ಮ ಮನಸ್ಸಿನ ಜಾಗೃತಿ ವಹಿಸಬೇಕು, ಮನಸ್ಸಿನ ಆರೈಕೆ ಮಾಡಬೇಕು. ನಿಮ್ಮ ಮನಸ್ಸು ಒಂದು ಒಳ್ಳೆಯ ಸಿನಿಮಾ ನೋಡಬೇಕೆಂದು ಇಚ್ಛಿಸಿದರೆ, ನೀವು ಹೋಗಿ ಆ ಸಿನಿಮಾ ನೋಡಬೇಕು. ಪಿರಮಿಡ್ ವ್ಯಾಲಿ ಸುಂದರವಾಗಿದೆ ಅಲ್ಲಿಗೆ ಹೋಗಬೇಕು ಎಂದು ನಿಮ್ಮ ಮನಸ್ಸು ಬಯಸಿದರೆ, ನೀವು ಇಲ್ಲಿಗೆ ಬರಬೇಕು. ಆದ್ದರಿಂದ, ನೀವು ನಿಮ್ಮ ಮನಸ್ಸನ್ನು ಗೌರವಿಸಬೇಕು, ಪ್ರೀತಿಸಬೇಕು, ನಿಮ್ಮ ಮನಸ್ಸನ್ನು ನೋಡಿಕೊಳ್ಳಬೇಕು. ಆಗ ನೀವು ನಿಮ್ಮ ಸ್ವಾಧಿಷ್ಠಾನವನ್ನು ಅಭಿವೃದ್ಧಿಗೊಳಿಸುತ್ತಿದ್ದೀರಿ.
ಏಸು ಕ್ರಿಸ್ತ ಹೇಳಿದ್ದು ಪ್ರೀತಿಸು. ಎಲ್ಲವನ್ನು “ಪ್ರೀತಿಸು”. ” ಎಲ್ಲವನ್ನು ಪ್ರೀತಿಸು”.
“ನಿನ್ನ ಶರೀರವನ್ನು ಪ್ರೀತಿಸು” ಮೂಲಾಧಾರ.
“ನಿನ್ನ ಮನಸ್ಸನ್ನು ಪ್ರೀತಿಸು” – ಸ್ವಾಧಿಷ್ಠಾನ. “ನಿನ್ನ ಬುದ್ಧಿಯನ್ನು ಪ್ರೀತಿಸು”. ಇದು ಮಣಿಪೂರಕ.
ನಾನು ಒಂದು ಉತ್ತಮ ಪುಸ್ತಕವನ್ನು ಓದಬೇಕು. ಉದಾಹರಣೆಗೆ ದೀಪಕ್ ಚೋಪ್ರರವರ ಪುಸ್ತಕ, ಆ ಪುಸ್ತಕವನ್ನು ನಾನು ಓದಬೇಕು. ನೀವು ಆ ಪುಸ್ತಕ ಓದುವಾಗ ನೀವು ನಿಮ್ಮ ಮಣಿಪೂರಕವನ್ನು ಅಭಿವೃದ್ಧಿ ಗೊಳಿಸುತ್ತಿದ್ದೀರಿ. ನೀವು ನಿಮ್ಮ ಬುದ್ಧಿಯನ್ನು (Intelligence) ಪ್ರೀತಿಸಬೇಕು. ನಾವೆಲ್ಲರೂ ಪುಸ್ತಕಗಳನ್ನು ಓದುವುದೇಕೆ? ನಾವು ನಮ್ಮ ಮಣಿಪೂರಕವನ್ನು ಅಭಿವೃದ್ಧಿ ಗೊಳಿಸಬೇಕೆಂದು – ನಮ್ಮ ಪಾಂಡಿತ್ಯ ಅಭಿವೃದ್ಧಿಪಡಿಸಿಕೊಳ್ಳಲು, ನಮ್ಮ ಪಾಂಡಿತ್ಯವನ್ನು (ಸ್ಕಾಲರ್ಶಿಪ್) ನಾವು ಪ್ರೀತಿಸುತ್ತೇವೆ, ನಮ್ಮ ಬುದ್ಧಿವಂತಿಕೆಯನ್ನು ನಾವು ಪ್ರೀತಿಸುತ್ತೇವೆ.
ನೀವೇ ನಿಮ್ಮ ದೇಹ, ಮನಸ್ಸು ಮತ್ತು ಬುದ್ಧಿಯನ್ನು ನೋಡಿಕೊಳ್ಳಬೇಕು, ಆರೈಕೆ ಮಾಡಬೇಕು. ಆದ್ದರಿಂದ, ದೇಹ, ಮನಸ್ಸು ಮತ್ತು ಬುದ್ಧಿ ಎಂದರೆ ಮೂಲಾಧಾರ, ಸ್ವಾಧಿಷ್ಠಾನ, ಮತ್ತು ಮಣಿಪೂರಕ ಆರೈಕೆ.
ನಂತರ ಬರುವುದು ನಾಲ್ಕನೆಯದು. ಈಗ ನೀವು ಮೌನವನ್ನು ಪ್ರೀತಿಸುವುದನ್ನು ಕಲಿಯಬೇಕು. ಮೌನ ಶರೀರವಲ್ಲ, ಮನಸ್ಸಲ್ಲ, ಬುದ್ಧಿಯಲ್ಲ. ಮೌನ ಎಂದರೆ ಅಂದರೆ, ಅನಾಹತ.
‘ ಆಹತ ‘ ಅಂದರೆ ಶಬ್ದ. ‘ಅನಾಹತ’ ಎಂದರೆ ನಿಶ್ಶಬ್ದ. ನೀವು ನಿಶ್ಶಬ್ದವನ್ನು ಪ್ರೀತಿಸುವುದನ್ನು ಕಲಿಯಬೇಕು. ಅದು ಅನಾಹತ. ನೀವು ಹೆಚ್ಚು ಮೌನದಲ್ಲಿದ್ದರೆ, ನಿಮ್ಮ ಅನಾಹತ ಹೆಚ್ಚು ಅಭಿವೃದ್ಧಿಯಾಗುವುದು.
ನಿಮ್ಮ ಶರೀರವನ್ನು ನೀವು ಹೆಚ್ಚು ಪ್ರೀತಿಸಿದರೆ- ದೈಹಿಕ ವ್ಯಾಯಾಮ, ಆಟ-ಓಟ ಇತ್ಯಾದಿಗಳ ಮೂಲಕ, ನೀವು ನಿಮ್ಮ ‘ ಮೂಲಾಧಾರ ‘ ವನ್ನು ಪ್ರೀತಿಸುತ್ತಿದ್ದೀರಿ. ‘ಚೆಸ್’ ತರಹದ ಆಟಗಳ ಮೂಲಕ ನೀವು ನಿಮ್ಮ ಮನಸ್ಸನ್ನು ಪ್ರೀತಿಸುತ್ತಿದ್ದೀರಿ. ಪುಸ್ತಕಗಳನ್ನು ಓದುವುದು, ಇತರರಿಂದ ಕಲಿಯುವುದು ಇವುಗಳಿಂದ ನಿಮ್ಮ ಬುದ್ಧಿಯನ್ನು ಪ್ರೀತಿಸಲು ನೀವು ಕಲಿಯುತ್ತೀರಿ. ನಂತರ ಮೌನ. ಸುಮ್ಮನೆ ಇರುವುದು. ಉದಾಹರಣೆಗೆ, ರಮಣ ಮಹರ್ಷಿ- ಎಲ್ಲಾ ಸಮಯದಲ್ಲಿ ಮೌನ. ಒಂದು ಜೀವನಪರ್ಯಂತ ಮೌನ. ಅವರು ಏನು ಮಾಡುತ್ತಿರುವುದು? ಅವರು ಅಭಿವೃದ್ಧಿಗೊಳಿಸುತ್ತಿರುವುದು ಅವರ ಅನಾಹತ.
ನಂತರ, ವಿಶುದ್ಧ. ನಾವು ಮಾತನಾಡುವುದನ್ನು ಕಲಿಯಬೇಕು. ನಾವು ವ್ಯಕ್ತಪಡಿಸುವುದನ್ನು ಕಲಿಯಬೇಕು. ನೀವು ನಿಮ್ಮ ಧ್ವನಿಯನ್ನು ಅಡಗಿಸಬೇಡಿ, ನಿಮ್ಮ ಭಾವನೆಗಳನ್ನು ಮುಚ್ಚಿಡಬೇಡಿ. ನೀವು ಹೇಳಲು ಇಚ್ಚಿಸಿದ್ದನ್ನು ಹೇಳಿ. ನಿಮಗೆ ಹೇಳಬೇಕೆನಿಸಿದ್ದನ್ನು ನೀವು ಹೇಳಿಬಿಡಿ. ನಿಮ್ಮನ್ನು ಸಾಯಿಸುತ್ತಾರೆ ಎನಿಸಿದರೂ ಸರಿಯೇ?! ಅದು ನಿಮ್ಮ ವಿಶುದ್ಧವನ್ನು ಅಭಿವೃದ್ಧಿಪಡಿಸುವುದು. ಅದೇ ನಿಮ್ಮ ಸತ್ಯ. ನಿಮ್ಮ ಸತ್ಯವನ್ನು ನೀವು ಹೇಳಿ. ‘ಇಲ್ಲ ನಾನು ನನ್ನ ಸತ್ಯವನ್ನು ಹೇಳಿದರೆ, ಆತ ನನ್ನನ್ನು ಸಾಯಿಸುತ್ತಾನೆ.’ ಖಂಡಿತವಾಗಿ, ಆತ ನಿಮ್ಮನ್ನು ಸಾಯಿಸುತ್ತಾನೆ. ಆದರೆ, ನಿಮ್ಮ ಸತ್ಯ ನೀವು ವ್ಯಕ್ತಪಡಿಸಲು ಸಾಧ್ಯವಿಲ್ಲದಿದ್ದರೆ, ಬದುಕಿರುವುದು ಏತಕ್ಕೆ?
ಒಂದು ದಿನದ ಆಯುಷ್ಯ ಇರುವ ಒಂದು ಹೂವಿನ ಜೀವನವು 100 ವರ್ಷಗಳ ಆಯುಷ್ಯವಿರುವ, ಆದರೆ, ಹೂವೇ ಇಲ್ಲದ ನೀಲಗಿರಿ ಮರದ ಜೀವನಕ್ಕಿಂತ ಉತ್ತಮವಾದದ್ದು. ಆದ್ದರಿಂದ, ನನ್ನ ಆತ್ಮೀಯ ಮಿತ್ರರೇ, ನಿಮ್ಮ ಸತ್ಯವನ್ನು ವ್ಯಕ್ತಪಡಿಸಿ. ನಿಮ್ಮ ಧ್ವನಿಯನ್ನು ಪ್ರೀತಿಸಿ. ನಿಮ್ಮ ಸತ್ಯವನ್ನು ಪ್ರೀತಿಸಿ. ಅದು ಏನೇ ಆಗಿದ್ದರೂ ಸರಿಯೇ. ‘ನೀನು ಇಸ್ಲಾಂ ಧರ್ಮವನ್ನು ಒಪ್ಪಿಕೊಳ್ಳದಿದ್ದರೆ ನಾನು ಸಾಯಿಸುತ್ತೇನೆ’- ‘ಇಸ್ಲಾಂ’ ಎನ್ನುವುದೊಂದೇ ತನಗೆ ತಿಳಿದ ಸತ್ಯ. ಅವನು ತನ್ನ ಸತ್ಯವನ್ನು ತಾನು ವ್ಯಕ್ತಪಡಿಸುತ್ತಿದ್ದಾನೆ. ತಾನು ತನ್ನ ವಿಶುದ್ಧ ಅಭಿವೃದ್ಧಿಪಡಿಸಿಕೊಳ್ಳಲು ಪರಿಶ್ರಮಿಸುತ್ತಿದ್ದಾನೆ ಇತರರನ್ನು ಸಾಯಿಸುವುದು ಬೇರೆ ವಿಚಾರ- ಏಕೆಂದರೆ, ನಾವು ನಮ್ಮ ಸತ್ಯವನ್ನು ವ್ಯಕ್ತಪಡಿಸಬೇಕು. ಸತ್ಯವನ್ನು ನಿರ್ಭೀತಿಯಿಂದ, ಸ್ಪಷ್ಟವಾಗಿ ವ್ಯಕ್ತಪಡಿಸಬೇಕು. ಸದಾಕಾಲ ನಿಮ್ಮ ಸತ್ಯವನ್ನು ಹೇಳಿಬಿಡಿ. ಈ ರೀತಿಯಾಗಿ ನಿಮ್ಮ ವಿಶುದ್ಧವನ್ನು ನೀವು ಅಭಿವೃದ್ಧಿಪಡಿಸಿಕೊಳ್ಳುವಿರಿ.
ನಂತರ, ಆಜ್ಞಾ. ಆಜ್ಞಾ ಅಂದರೆ ಏನು?- ಧ್ಯಾನ.
ನೀವು ನಿಮ್ಮ ಶರೀರವನ್ನು ಪ್ರೀತಿಸಲೇಬೇಕು- ಮೂಲಾಧಾರ.
ನೀವು ನಿಮ್ಮ ಮನಸ್ಸನ್ನು ಪ್ರೀತಿಸಲೇಬೇಕು. ಅಂದರೆ, ಮಾನಸಿಕ ಚಟುವಟಿಕೆಗಳು; ಸಂಗೀತ, ನೃತ್ಯ, ಆಟಗಳು, ಕ್ರೀಡೆಗಳು ಯಾವುದಾದರೂ ಸರಿ ಇವೆಲ್ಲವೂ ಮನಸ್ಸಿಗೆ ಸಂಬಂಧಿಸುವುದು. ನಂತರ ಬುದ್ಧಿಯ ಚಟುವಟಿಕೆಗಳು ಬೇರೆಯವರಿಂದ ಕಲಿಯುವುದು; ಚಿನ್ಮಯಾನಂದ, ಯೋಗಾನಂದ ಪರಮಹಂಸ ಇವರಿಂದ; ಇವರ ಪುಸ್ತಕಗಳನ್ನು ಓದುವುದು. ಇವೆಲ್ಲಾ ಬುದ್ಧಿಯ ಚಟುವಟಿಕೆಗಳು, ಮನಸ್ಸಿನ ಬುದ್ಧಿ. ನಂತರ ಮೌನ. ಚಿನ್ಮಯಾನಂದ, ಯೋಗಾನಂದ ಪರಮಹಂಸ ಯಾರೂ ಇರುವುದಿಲ್ಲ. ಪತಿ ಇಲ್ಲ, ಪತ್ನಿ ಇಲ್ಲ. ಕೇವಲ ಮೌನ. ನಂತರ ಮಾತನಾಡಿ, ವ್ಯಕ್ತಪಡಿಸಿ(ಮಾತಲ್ಲಿ)!! ನಂತರ ಮೌನ. ನೀವು ನಿಮ್ಮ ಕಣ್ಣುಗಳನ್ನು ಮುಚ್ಚಲೇಬೇಕು. ನಂತರ ಶ್ವಾಸವನ್ನು ಗಮನಿಸಿ. ಆಗ ಮನಸ್ಸು ಶೂನ್ಯವಾಗಿ ನಂತರ ಆಜ್ಞಾಚಕ್ರ ಅರುಳುವುದು. ಇದು (ಮೂಗಿನ ಮೇಲ್ತುದಿ) ಸುದರ್ಶನ ಚಕ್ರ. ಇದು(ಹುಬ್ಬುಗಳ ನಡುವೆ) ಆಜ್ಞಾಚಕ್ರ. ಇದು ಗುರುಚಕ್ರ.
ನೀವು ಧ್ಯಾನ ಕಲಿತನಂತರ ಏನಾಗುತ್ತೆ ನಿಮಗೆ ತಿಳಿದಿದೆಯೇ? ನಿಮ್ಮ ಬಾಯಿನಿಂದ ಯಾವ ಯಾವ ವಿಚಾರ ಮಾತನ್ನಾಡುತ್ತೀರೋ ಅವೆಲ್ಲಾ ಆಜ್ಞೆಯಾಗುತ್ತದೆ- ಇತರರಿಗೆ. ನಿಮ್ಮ ಮೂರನೆಯ ಕಣ್ಣನ್ನು ಶೂನ್ಯಗೊಳಿಸಿದ ಹೊರತು ನಿಮ್ಮ ಬಾಯಿ ಕ್ರಮದಲ್ಲಿರುವುದಿಲ್ಲ. ನಿಮ್ಮ ದೇಹ, ಮನಸ್ಸು, ಬುದ್ಧಿ ಇವು ಯಾವೂ ಸಕ್ರಮವಾಗಿರುವುದಿಲ್ಲ. ನಿಮ್ಮ ಮೌನ ಸಹ ಸಕ್ರಮವಾಗಿರುವುದಿಲ್ಲ. ಎಲ್ಲವೂ ಕ್ರಮಭಂಗ ಗೊಡಿರುತ್ತವೆ. ಇದು ಆಜ್ಞ. ಆಜ್ಞ ಅಂದರೆ ಆಜ್ಞೆ. ನೀನು ಗುರು ಆಗುತ್ತೀಯ. ನೀನು ಪ್ರಪಂಚದ ಗುರು ಆಗುತ್ತೀಯ. ಆಜ್ಞಾಚಕ್ರದಿಂದ ಬಂದಿರುವ ಪಿರಮಿಡ್ ಧ್ಯಾನಿಗಳು, ತಮ್ಮ ಆಜ್ಞಾಚಕ್ರವನ್ನು ಅಭಿವೃದ್ಧಿ ಪಡಿಸಿಕೊಂಡಿರುವವರು. ಅಂದರೆ, ಸುದರ್ಶನ ಚಕ್ರವನ್ನು – ಅಲ್ಲಿ ಎಲ್ಲವನ್ನು ನೋಡುವಂತಹವರು – ನೀವೆಲ್ಲರೂ ಜಗತ್ತಿನ ಗುರುಗಳಾಗುವಿರಿ. ಜಗದ್ಗುರು. ಇಲ್ಲಿರುವ ವ್ಯಕ್ತಿಗಳೆಲ್ಲರೂ ಜಗದ್ಗುರುಗಳು, ಏಕೆಂದರೆ, ನೀವೆಲ್ಲರೂ ಧ್ಯಾನದ ಮಾಸ್ಟರುಗಳು. ಆದರಿಂದ ಏನಾಗುತ್ತದೆ? ಅವರೆಲ್ಲರ ಆರೂ ಚಕ್ರಗಳನ್ನು ಸಮನಾಗಿ ಅಭಿವೃದ್ಧಿಪಡಿಸಿಕೊಂಡಿರುವವರು.
ಈಗ ನಾವು ಚಕ್ರಗಳ ಆಚೆಗೆ ಹೋಗೋಣ. ಸಹಸ್ರಾರ ದೇಹದ ಒಳಗೆ ಇಲ್ಲ ಅಥವಾ ದೇಹಕ್ಕೆ ಕೂಡಿಕೊಂಡಿಲ್ಲ. ಅದು ಶರೀರದ ಆಚೆ ಇದೆ.ಸಹಸ್ರಾರ ಎಂದರೆ ಏನು – ನೀವೇ.. ಇತರರಿಗೆ ಸಹಾಯ ಮಾಡುವುದು. ಕಲಿಸುವುದು. ಈಗ ಎಷ್ಟು ತರಹದ ಸೇವೆಗಳು ಇವೆ?- ಆರು ತರಹ
ಮೂಲಾಧಾರ ಸೇವೆ, ಸ್ವಾಧಿಷ್ಠಾನ ಸೇವೆ, ಮಣಿಪೂರಕ ಸೇವೆ, ಅನಾಹತ ಸೇವೆ, ವಿಶುದ್ಧ ಸೇವೆ ಮತ್ತು ಆಜ್ಞಾ ಸೇವೆ. ಕನಿಷ್ಠ ಆರು ತರಹದ ಸೇವೆಗಳು ಇವೆ.
ಮೂಲಾಧಾರ ಸೇವೆ ಎಂದರೆ ಏನು?
ಯಾರಿಗಾದರೂ ನೋವು ಇದ್ದಲ್ಲಿ, ನೀನು ಹೋಗಿ ಅವರ ಶರೀರವನ್ನು ಒತ್ತಿ, ಅಂದರೆ, ಭೌತಿಕವಾಗಿ ಅಂಗಾಂಗಗಳನ್ನು, ಮಾಂಸಖಂಡಗಳನ್ನು ಒತ್ತಿ, ನೋವು ನಿವಾರಿಸಲು ಸಹಾಯ ಮಾಡುವುದು. ಬೇರೆಯವರ ಶರೀರಕ್ಕೆ ಸಹಾಯ ಮಾಡುವುದು.
ಲತಾ ಮಂಗೇಶ್ಕರ್ ಹಾಡುತ್ತಿರುತ್ತಾರೆ. ಎಲ್ಲರೂ ಅದನ್ನು ಕೇಳಿ ಆನಂದಿಸುತ್ತಾರೆ. ಆಕೆ ಇತರರ ಮನಸ್ಸನ್ನು ಮನರಂಜಿಸುತ್ತಿದ್ದಾರೆ. ಇದು ಸ್ವಾಧಿಷ್ಠಾನ ಸೇವೆ.
ಯಾರಾದರೂ ಪ್ರವಚನ ನೀಡುತ್ತಿರುವಾಗ ಇತರರೆಲ್ಲರೂ ಕೇಳುತ್ತಿರುತ್ತಾರೆ. ಆ ಪ್ರವಚನಕಾರರು ಮಣಿಪೂರಕ ಸೇವೆ ನೀಡುತ್ತಿದ್ದಾರೆ.
ನಾನು ನಿಮಗೆ ಹೇಳುತ್ತೇನೆ “ಏನೂ ಮಾಡಬೇಡ. ಬಂದು ಮೌನವಾಗಿ ಕುಳಿತಿರು. ಬಾಯಿ ತೆಗೆದರೆ ಕ್ರಮ ಕೈಗೊಳ್ಳುತ್ತೇನೆ” ಎಂದು. ಇಲ್ಲಿ ಏನು ಮಾಡುತ್ತಿರುವುದು? ಆತನು ಮೌನದಲ್ಲಿ ಇರುವಂತೆ ಮಾಡಲಾಗುತ್ತಿದೆ. ಅದು ಅನಾಹತ ಸೇವೆ.
ನೀನು ಸತ್ಯವನ್ನು ಮಾತನಾಡಲು ಜನರಿಗೆ ಪ್ರೋತ್ಸಾಹಿಸುತ್ತಿದ್ದರೆ, ನೀನು ವಿಶುದ್ಧ ಸೇವೆ ಮಾಡುತ್ತಿದ್ದೀಯ. ಧೈರ್ಯವಾಗಿ ಸತ್ಯವನ್ನು ಹೇಳು, ಭಯಪಡಬೇಡ ಎಂದು ಪ್ರೋತ್ಸಾಹಿಸಿದರೆ ಅದು ವಿಶುದ್ಧ ಸೇವೆ.
ನೀನು ಜನರಿಗೆ ಧ್ಯಾನ ಕಲಿಸುತ್ತಿದ್ದರೆ ಆಗ ನೀನು ಇತರರಿಗೆ ಆಜ್ಞಾ ಸೇವೆ ಮಾಡುತ್ತಿರುವೆ.
ಈ ರೀತಿಯಾಗಿ ಸೇವೆ ಆರು ತರಹದಲ್ಲಿ ಇರುತ್ತದೆ.
ನೀವು ಸೇವೆಯಲ್ಲಿ ಮಾಸ್ಟರುಗಳಾಗಬೇಕು. ಎಲ್ಲಾ ವಿಭಾಗಗಳಲ್ಲೂ ಸೇವೆ. ಭೌತಿಕವಾಗಿ ಸೇವೆ. ಮಾನಸಿಕವಾಗಿ ಸೇವೆ, ಬೌದ್ಧಿಕವಾಗಿ ಸೇವೆ, ಮೌನದಲ್ಲಿ ಸೇವೆ, ಸತ್ಯವನ್ನು ವ್ಯಕ್ತಪಡಿಸುವುದರಲ್ಲಿ ಸೇವೆ, ಧ್ಯಾನ ಕಲಿಸುವುದರಲ್ಲಿ ಸೇವೆ. ಈ ರೀತಿಯಾಗಿ ಆರು ತರಹದ ಸೇವೆಗಳು ಇವೆ.
Recent Comments