” ಸಾಹಸ – 2 “
“ಸಾಹಸ ಮಾಡೋ ಅಣ್ಣಾ .. ಬಯಸಿದ್ದು ಲಭಿಸುತ್ತದೆ” ಎನ್ನುತ್ತಾ “ಪಾತಾಳಭೈರವಿ” ಎಂಬ ತೆಲುಗು ಸಿನಿಮಾದಲ್ಲಿನ ಖಳನಾಯಕ ನಮಗೆ ಒಂದು ದೊಡ್ಡ ಬೋಧನಾ ರೂಪದ ಸಂದೇಶವನ್ನು ನೀಡಿದ್ದಾನೆ.
ಕೇವಲ “ಪಾತಾಳಭೈರವಿ” ಸಿನಿಮಾದಲ್ಲೇ ಅಲ್ಲ .. ಯಾವ ಸಿನಿಮಾ ನೋಡಿದರೂ ಅದರಲ್ಲಿ “ಸಾಹಸ” ಎನ್ನುವುದೇ ಮೂಲ ಕಥಾವಸ್ತುವಾಗಿ ಹೀರೊ, ಹೀರೊಯಿನ್ಗಳ ಸುತ್ತಾ ಹೆಣೆಯಲ್ಪಟ್ಟು .. ಆದ್ಯಂತದಲ್ಲೂ ಆಕರ್ಷಕವಾಗಿರುತ್ತದೆ. ಅಂತಹ ಸಾಹಸಕೃತ್ಯಗಳ ಹಿನ್ನೆಲೆಯಲ್ಲಿ ಅವರು ನಟಿಸದಿದ್ದರೆ ಆ ಸಿನಿಮಾ ಸಪ್ಪೆಯಾಗಿ ಬದಲಾಗಿ ಅದನ್ನು ಯಾವ ಪ್ರೇಕ್ಷಕರು ಸಹ ನೋಡುವುದೇ ಇಲ್ಲ. ಅಷ್ಟೇಅಲ್ಲದೇ, ಬಾಕ್ಸಾಫೀಸ್ನಲ್ಲಿ ಅದು ಘೋರವಾಗಿ ಉರುಳಿ ಬೀಳುತ್ತದೆ.
ಹಾಗೆಯೇ ನಮ್ಮ ಜೀವನವೂ ಸಹ..
ಕಾರಣ ಜನ್ಮರಾಗಿ ಈ ಭೂಮಿಯ ಮೇಲೆ ಜನ್ಮತಾಳಿದ ನಮ್ಮೆಲ್ಲರ ಜೀವನಗಳು ಕೂಡ “ಸಾಹಸ”ದಿಂದ ಕೂಡಿಕೊಂಡಿರುವುದೇ. ಸಿನಿಮಾಗಳಲ್ಲಿ ಸಾಹಸ ಕಥಾವಸ್ತುವು ಎಷ್ಟು ಸ್ಪಷ್ಟವಾಗಿ ರೂಪಿಸಲ್ಪಡುತ್ತದೊ ಅಷ್ಟೇ ಸ್ಪಷ್ಟವಾಗಿ ನಮ್ಮ ಜೀವನಗಳಲ್ಲಿ ಕೂಡ “ಸಾಹಸ” ಎನ್ನುವುದು ಅಂತರ್ಲೀನವಾಗಿ ಇರುತ್ತದೆ. ಕೇವಲ ತಿಂಡಿ, ನಿದ್ದೆ, ಬಟ್ಟೆಗಾಗಿಯೇ ಜೀವನವನ್ನು ಮೀಸಲಾಗಿಡದೇ .. ಹತ್ತಾರು ಜನಕ್ಕೆ ಉಪಯೋಗವಾಗುವ ಮಹತ್ತರವಾದ ಲೋಕಕಲ್ಯಾಣ ಕಾರ್ಯಕ್ರಮಗಳನ್ನು ಕೈಹಿಡಿದು .. ಅವುಗಳ ಅನುಸರಣೆಗಾಗಿ ತ್ರಿಕರಣಶುದ್ಧಿಯಾಗಿ ನಮ್ಮ ಜೀವನವನ್ನು ಅಂಕಿತಗೊಳಿಸುವುದೇ .. “ಸಾಹಸ”.
ಅದಕ್ಕೆ ಏಸುಪ್ರಭುವು.. “ಕೇವಲ ರೊಟ್ಟಿಯಿಂದ ಮಾತ್ರವೇ ಮಾನವನು ಜೀವಿಸುವುದಿಲ್ಲ” ಎನ್ನುತ್ತಾ ಸಮಸ್ತ ಮಾನವಕುಲಕ್ಕೆ ಒಳ್ಳೆಯ ಸಂದೇಶವನ್ನು ನೀಡಿದರು, ಹಣ ಸಂಪಾದಿಸಿ ಕೊಡಿಟ್ಟು .. ಮದುವೆ ಮಾಡಿಕೊಂಡು, ಮಕ್ಕಳನ್ನು ಹಡೆದು, ಅವರನ್ನು ಬೆಳೆಸಿ ದೊಡ್ಡವರನ್ನು ಮಾಡಿ .. ಅವರು ಕೂಡಾ ಮಕ್ಕಳನ್ನು ಹಡೆಯುತ್ತಿದ್ದರೇ ನೋಡಿ” ನಾನು ತಾತನಾಗಿದ್ದೇನೆ, ಅಮ್ಮಮ್ಮ ಆಗಿದ್ದೇನೆ, ಅಜ್ಜಿ ಆಗಿದ್ದೇನೆ” ಎಂದು ಖುಷಿಪಡುತ್ತಾ “ತುಂಬಾ ದೊಡ್ಡ ಘನಕಾರ್ಯ ಸಾಧಿಸಿದ್ದೇವೆ” ಎಂದುಕೊಂಡರೇ ಲಾಭವಿಲ್ಲ. ಇಂತಹ ಘನಕಾರ್ಯಗಳನ್ನು ಬಾಯಿಯಿಲ್ಲದ ಪಶುಪಕ್ಷ್ಯಾದಿಗಳು ಸಹಿತ ಮಾಡಬಲ್ಲವು. ಅದು ಪ್ರಕೃತಿ ಸಹಜ. ಆದ್ದರಿಂದ .. ನಾವು ಇಷ್ಟಕ್ಕೆ ಪುನಃ ಪುನಃ ಜನ್ಮ ಪಡೆಯಬೇಕಾದ ಅವಶ್ಯಕತೆ ಇಲ್ಲವೇ ಇಲ್ಲ.
ಶರೀರ ಮುಡಿದುಕೊಂಡ ನಂತರ .. ಕಾಡಿಗೆ ಕಾಲು ಚಾಚಿಕೊಂಡು .. ರಾಮ, ಕೃಷ್ಣಾ ಎಂದುಕೊಳ್ಳುತ್ತಾ ಅನೇಕ ಜನ ತಮ್ಮ ಉಳಿದ ಜೀವನವನ್ನು ಕಳೆಯುತ್ತಿರುತ್ತಾರೆ. ಹಾಗೆ ಕಳೆಯುವುದರಲ್ಲಿ ಸಹ “ಸಾಹಸ” ಇಲ್ಲ ಎಂದು ಹೇಳಲಾಗುವುದಿಲ್ಲ. ಆದರೆ, ಅಂತಹ ಜೀವನಗಳಲ್ಲಿ ‘ಸಾಹಸ’ ಎನ್ನುವುದು ತುಂಬಾ ತುಂಬಾ ಕಡಿಮೆಯಾಗಿದ್ದು ಅದು ಅವರ ಜೀವನ ಪರಮಾರ್ಥವನ್ನು ನೆರವೇರಿಸಿಕೊಳ್ಳುವುದರಲ್ಲಿ ಸ್ವಲ್ಪವೂ ಸಹಾಯಕಾರಿಯಾಗಿರುವುದಿಲ್ಲ. ಆತ್ಮಸ್ವರೂಪರಾಗಿ ಅವರು ತುಂಬಾ ಕಷ್ಟಪಟ್ಟು ಮೇಲಿನಲೋಕಗಳಿಂದ ತಂದುಕೊಂಡಂತಹ ಅವರ ಅಮೂಲ್ಯವಾದ ಜೀವನಕಾಲ ಕೂಡಾ ಮಾನವ ದೇಹದಲ್ಲಿ ಸೇರಿದ ನಂತರ ವ್ಯರ್ಥವಾಗಿ .. ಅವರಿಗೆ ಮಾರ್ಗದ ದಣಿವು ಮಾತ್ರವೇ ಉಳಿಯುತ್ತದೆ.
ಅದಕ್ಕೇ ತಮ್ಮ ಸ್ವಂತ ಜೀವನಗಳಲ್ಲಿ ಹೀರೋಗಳ ಹಾಗೆ ಸಾಹಸಕರವಾದ ಮಹತ್ತರ ಕಾರ್ಯಕ್ರಮಗಳನ್ನು ಕೈಗೊಂಡ ಶ್ರೀಕೃಷ್ಣ, ಗೌತಮಬುದ್ಧ, ಏಸು ಪ್ರಭು, ಮಹಾತ್ಮಾ ಗಾಂಧೀ, ಮಧರ್ ಥೆರೆಸಾ, ಮೇಡಮ್ ಬ್ಲವಾಟ್ಸ್ಕೀ, ಸತ್ಯಸಾಯಿ, ಓಷೋ .. ಅಂತಹ ಮಹಾತ್ಮರ ಜೀವನ ಚರಿತ್ರೆಗಳನ್ನು ಓದುವಾಗ, ಕೇಳಿಸಿಕೊಳ್ಳುವಾಗ ನಮ್ಮ ಮೈ ಜುಂ ಎನ್ನುತ್ತದೆ. ಸಾಧಾರಣ ಮನುಷ್ಯರಂತೆಯೇ ಜನ್ಮಪಡೆದುಕೊಂಡು ಅಸಾಧಾರಣವಾದ ಸಾಹಸಕೃತ್ಯಗಳನ್ನು ಕೈಗೊಂಡ ಇವರೆಲ್ಲಾ ಕೂಡಾ ಚರಿತ್ರೆಯಲ್ಲಿ ನಿಜವಾದ ಹೀರೋಗಳ ಹಾಗೆ ಉಳಿದಿದ್ದಾರೆ. ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿ ಯೋಗೀಶ್ವರರಾಗಿದ್ದಾರೆ. ಮಾನವ ಜಾತಿಯ ಉದ್ಧಾರಕ್ಕಾಗಿ ಅವರು ಹಗಲು-ರಾತ್ರಿ ಶ್ರಮಿಸುತ್ತಾ .. ಈ ಭೂಮಿಯ ಮೇಲೆ ಮಹಾ ಮಹಾ ಆಂದೋಳ ನಗಳಿಗೆ ಕಾರಣಕರ್ತರಾದರು.
“ದೊಡ್ಡ ದೊಡ್ಡ ಸಾಹಸಕೃತ್ಯಗಳನ್ನು ಮಾಡಲು ನಾವು ಹುಟ್ಟಲಿಲ್ಲ. ಸಾಮಾನ್ಯ ಮಾನವರ ಹಾಗೆ ಚಿಕ್ಕಚಿಕ್ಕ ಕೆಲಸಗಳು ಮಾಡಿ ಸಾಯುತ್ತೇವೆ. ಅದಕ್ಕೂ ಮೀರಿ ಎಲ್ಲಾದಕ್ಕೂ ಆ ಭಗವಂತನೇ ಇದ್ದಾನೆ” ಎಂದು ಆತ್ಮಜ್ಞಾನ ಇಲ್ಲದ ಅನೇಕ ಮಂದಿ ಅಂದುಕೊಳ್ಳುತ್ತಿರುತ್ತಾರೆ. ತಾವು ಹಾಗೆ ಅಂದುಕೊಳ್ಳುವುದಲ್ಲದೇ ತಮ್ಮ ಮಕ್ಕಳನ್ನು ಕೂಡ ಅದೇ ಸೀಮಿತ ಭಾವನೆಗಳಿಂದ ಬೆಳೆಸುತ್ತಾ “ಯಾವುದೋ ಒಂದು ರೀತಿ ಓದಿಕೊಂಡು .. ಡಾಕ್ಟರ್ ಅಥವಾ ಇಂಜನಿಯರ್ ಆಗು, ಹೆಂಡತಿ ಮಕ್ಕಳ ಜೊತೆ ಸುಖವಾಗಿ ಜೀವಿಸುತ್ತಾ ನಮ್ಮ ಕಣ್ಣ್ಮುಂದೆ ಬಿದ್ದಿರು” ಎನ್ನುತ್ತಾ ಅವರಿಗೆ ಒತ್ತಡಹಾಕುತ್ತಾ ಅವರ ಭಾವಪರಿಧಿಯನ್ನು ಸಂಕುಂಚಿತಗೊಳಿಸುತ್ತಾರೆ.
ಆತ್ಮಸ್ವರೂಪರಾಗಿ ನಾವು ಇತರ ಲೋಕಗಳಲ್ಲಿ ಇದ್ದಾಗಲೇ .. ಭೂಮಿಯ ಮೇಲೆ ಹುಟ್ಟಿದ ನಂತರ ಯಾವ ಯಾವ ಸಾಹಸ ಕಾರ್ಯಗಳು ಮಾಡಬೇಕೊ ಪ್ರಣಾಳಿಕೆ ಮಾಡಿಕೊಳ್ಳುತ್ತೇವೆ. ಅದಕ್ಕೆ ತಕ್ಕಂತೆ ತಿಳಿವಳಿಕೆ ಬಂದಾಗಿನಿಂದಲೂ ಸಾಹಸಕರವಾದ ಕಾರ್ಯಕ್ರಮಗಳನ್ನು ಮಾಡಲು ಉತ್ಸಾಹಭರಿತರಾಗಿರುತ್ತೇವೆ. ಆದರೆ, ತಂದೆತಾಯಿಯರು, ಬಂಧು ಬಳಗ ಮತ್ತು ಮಿತ್ರರು ಎಲ್ಲರೂ ಸೇರಿ, ನಾವು ಆ ಸಾಹಸ ಕೃತ್ಯಗಳು ಮಾಡದೇ ಇರುವಂತೆ ಮಾಡಿ ನಮ್ಮಲ್ಲಿ ಭಯವನ್ನು ಉಂಟುಮಾಡಿಸಿ ಪೋಷಿಸುತ್ತಿರುತ್ತಾರೆ. “ಅವೆಲ್ಲಾ ದೊಡ್ಡ ದೊಡ್ಡ ವಿಷಯಗಳು .. ನಿನ್ನಿಂದ ಆಗುವುದಿಲ್ಲ, ಹುಲಿಯನ್ನು ನೋಡಿ ನರಿ ಬರೆ ಹಾಕಿಕೊಂಡಂತೆ ಯಾರನ್ನೋ ನೋಡಿ ನೀನು ದೊಡ್ಡ ದೊಡ್ಡ ಕೆಲಸಗಳು ಮಾಡುತ್ತೇನೆ ಎಂದರೆ ನಿನ್ನನ್ನು ನಂಬಿಕೊಂಡ ನಿನ್ನ ಹೆಂಡತಿ, ಮಕ್ಕಳ ಪರಿಸ್ಥಿತಿ ಏನು? ಬಯಸಿ ಕಷ್ಟಗಳು ತಂದುಕೊಳ್ಳಲು ನೀನೇನು ತುಂಬಾ ದೊಡ್ಡ ಮನುಷ್ಯ ಅಂದುಕೊಳ್ಳುತ್ತಿದ್ದೀಯಾ?ಎನ್ನುತ್ತಾ ಅವರ ಉತ್ಸಾಹದ ಮೇಲೆ ತಣ್ಣಿರು ಎರಚುತ್ತಾರೆ .. ಅಲ್ಲದೇ “ಅವರಿಗೆ ನಾವು ಸರಿಯಾದ ಜೀವನ ವಿಧಾನವನ್ನು ಬೋಧಿಸುತ್ತಿದ್ದೇವೆ” ಎಂದು ತೃಪ್ತಿಪಡುತ್ತಿರುತ್ತಾರೆ.
ಇವೆಲ್ಲಾ ಸ್ವಂತ ಆತ್ಮಶಕ್ತಿಯ ಬಗ್ಗೆ ಅರಿವಿಲ್ಲದೆ ಹಿರಿಯರು ನಮಗೆ ನೀಡಿದ ಮೂರ್ಖತನದ ಬಳುವಳಿಗಳು ಆದ್ದರಿಂದ .. ನಾವು ಗುರುತಿಸಬೇಕಾದ ಮುಖ್ಯವಾದ ವಿಷಯ ಏನೆಂದರೆ .. ಒಂದು ಉದಾತ್ತವಾದ ಕಾರ್ಯಕ್ರಮವನ್ನು ಕೈ ಹಿಡಿದು .. “ಸಮಾಜದಿಂದ ಪಡೆದ ಒಳಿತಿಗಿಂತಾ ಸ್ವಲ್ಪ ಹೆಚ್ಚು ಒಳಿತನ್ನು ಮರಳಿ ಸಮಾಜಕ್ಕೆ ನೀಡಲು ನಾನು ಹುಟ್ಟಿದ್ದೇನೆ” ಎಂದು ಅರಿತುಕೊಂಡು .. ಜೀವನವನ್ನು ಆ ದಿಸೆಯಲ್ಲಿ ಸಾಗಿಸಬೇಕು. ಅದು “ಸಾಹಸ” ಅಂದರೆ, ನಮ್ಮ ತಂದೆತಾಯಿಯರು ನಮ್ಮನ್ನು ಹುಟ್ಟಿಸಿ .. ನಾವು ನಮ್ಮಂತಹ ಇನ್ನೂ ಕೆಲವರನ್ನು ಹುಟ್ಟಿಸಿ .. ಹೀಗೆ ಕೇವಲ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವುದರಿಂದ ಸಮಾಜಕ್ಕೆ ನಮ್ಮಿಂದ ದೊಡ್ಡದಾಗಿ ಆಗುವುದೇನೂ ಇಲ್ಲ.
ಒಬ್ಬ ಏಸುಪ್ರಭುವು ಸಮಾಜದಿಂದ ತೆಗೆದುಕೊಂಡಿದ್ದು ಎಷ್ಟು? ಮತ್ತು ಸಮಾಜಕ್ಕೆ ಮರಳಿ ಕೊಟ್ಟಿದ್ದು ಎಷ್ಟು? ಒಬ್ಬ ಗೌತಮ ಬುದ್ಧನು, ಮಧರ್ ಥೆರೆಸಾ, ಮಹಾತ್ಮಾ ಗಾಂಧೀ, ಷಿರಿಡೀ ಸಾಯಿ ಅಂತಹ ಮಹಾ ಮಹಾಧೀರರು ಸಮಾಜದಿಂದ ಪಡೆದಿದ್ದು ಎಷ್ಟು? ಮತ್ತು ಸಮಾಜಕ್ಕೆ ಮರಳಿ ಕೊಟ್ಟಿದ್ದು ಎಷ್ಟು? ಈ ವಿಷಯವನ್ನು ಪರಿಶೀಲಿಸಿ ನೋಡಿದರೆ ಆ ಕೊಡುವುದು ಪಡೆಯುವುದರ ನಡುವೆ ಅವರು ಅನಂತವಾದ ವ್ಯತ್ಯಾಸವನ್ನು ತೋರಿಸಿದರು ಎನ್ನುವುದು ನಮಗೆ ತಿಳಿಯಬರುತ್ತದೆ.
ಸುತ್ತಾಮುತ್ತಾ ಇರುವ ಸಾಧಾರಣ ಮನುಷ್ಯರು ಮಾಡಿದ್ದೇ ನಾವೂ ಮಾಡುತ್ತಾ .. “ನಾನು ಕೇವಲ ಶರೀರಧಾರಿ” ಮಾತ್ರ ಎಂದುಕೊಂಡರೆ ಅದು ಜೀವನವನ್ನು ಸಾಮಾನ್ಯ ರೀತಿಯಲ್ಲಿ ಕಳೆಯುವುದೇ ಆಗತ್ತದೆಯೇ ಹೊರತು ಅದು ಸಾಹಸಕರವಾದ ಜೀವನ ಆಗುವುದಿಲ್ಲ. “ಧ್ಯಾನ”ದ ಮೂಲಕ “ನಾನು ಆತ್ಮ” ಎನ್ನುವ ಸತ್ಯವನ್ನು ತಿಳಿದುಕೊಂಡು .. ಆತ್ಮಶಕ್ತಿಗೆ ಅನುಗುಣವಾದ ಸಾಹಸಕರವಾದ ಕೆಲಸಗಳನ್ನು ಕೈಗೊಂಡು .. “ಆತ್ಮವತ್ ಜೀವನವನ್ನು ಕಳೆಯುತ್ತಾ ಇದ್ದರೆ .. ಸಹಜವಾಗಿಯೇ ನಾವು ಸಾಹಸವಂತರಾಗಿ ಬದಲಾಗುತ್ತೇವೆ. ಆಗ ಸಾಹಸವೇ ನಮ್ಮ ದಿನಚರಿಯಾಗಿ, ದಿನನಿತ್ಯದ ಕಾರ್ಯಕ್ರಮವಾಗಿ ಬದಲಾಗುತ್ತದೆ.
ಆದ್ದರಿಂದ, ನಮ್ಮ ಆತ್ಮಶಕ್ತಿಯನ್ನು ನಮಗೆ ತಿಳಿಸುವ ಧ್ಯಾನ ಸಾಧನೆ ಎನ್ನುವುದು ಬಾಲ್ಯದಿಂದಲೇ ನಮ್ಮ ಜೀವನದಲ್ಲಿ ಒಂದು ಭಾಗವಾಗಬೇಕು. ನಮ್ಮ ಮಕ್ಕಳನ್ನು ಭಯರಹಿತರಾಗಿ, ನಿರ್ಭಯರಾಗಿ ಬೆಳೆಸಬೇಕು. “ಕತ್ತಲೆಯಲ್ಲಿ ದೆವ್ವಗಳು, ಭೂತಗಳು ಇರುತ್ತವೆ” ಎಂದು ಅವರಿಗೆ ಹೇಳದೆ .. “ಸ್ವಲ್ಪಹೊತ್ತು ಹಾಗೆ ಕತ್ತಲೆಯಲ್ಲಿ ಓಡಾಡಿಕೊಂಡು ಬಾ” ಎಂದು ಅವರನ್ನು ಬಿಟ್ಟುಬಿಡಬೇಕು. ಸ್ಮಶಾನದಲ್ಲಿ ಅವರನ್ನು ಸ್ವತಂತ್ರ್ಯವಾಗಿ ಓಡಾಡಿಸುತ್ತಾ “ಇಲ್ಲಿ ನಿಮ್ಮ ತಾತನವರು ತಮ್ಮ ಶರೀರವನ್ನು ತ್ಯಜಿಸಿದ್ದಾರೆ” ಎನ್ನುತ್ತಾ ಚಿಕ್ಕಂದಿನಲ್ಲೇ ಸ್ಮಶಾನ ಅಂದರೆ ಅವರಲ್ಲಿರುವ ಭಯವನ್ನು ಹೋಗಲಾಡಿಸಬೇಕು. ತಕ್ಕ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾ .. ನದಿಯಲ್ಲಿ ಈಜುವುದು, ಬೆಟ್ಟ-ಮರಗಳು ಹತ್ತುವುದು ಮುಂತಾದ ಸಾಹಸಕರವಾದ ಕೆಲಸಗಳನ್ನು ಮಾಡುವಂತೆ ಅವರನ್ನು ಪ್ರೋತ್ಸಾಹಿಸಬೇಕು.
“ಬಗೆ ಬಗೆಯ ಸಾಹಸಗಳು”
ಸಾಹಸಗಳು ವಿಧವಿಧವಾಗಿರುತ್ತದೆ. ಓದುವುದರಲ್ಲಿ ಸಾಹಸ .. ಆಟಗಳಲ್ಲಿ ಸಾಹಸ .. ಪಾಟಗಳಲ್ಲಿ ಸಾಹಸ .. ಮಾತುಗಳಲ್ಲಿ ಸಾಹಸ .. ಕೆಲಸಗಳಲ್ಲಿ ಸಾಹಸ.
ಬಗೆಬಗೆಯ ಸಾಹಸಗಳು ಮಾಡಬೇಕು. ಸಂಗೀತದಲ್ಲಿ ಹೊಸ ಹೊಸ ರಾಗಗಳನ್ನು ಕಂಡುಹಿಡಿಯಬೇಕು .. ವಿದ್ಯೆಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕು. “ನಮಗೇಕೆ?” ಅಂದುಕೊಳ್ಳದೆ ಅಕ್ಕ-ಪಕ್ಕದವರು ಯಾರೂ ಕೈಹಿಡಿಯದ ಕೆಲಸಗಳನ್ನು ನಾವು ಕೈಹಿಡಿದು .. ಮಾನ ಅವಮಾನಗಳಿಗೆ ಗುರಿಯಾದರೂ ಭಯಪಡದೇ .. ಪ್ರಾಣವನ್ನು ಪಣವಾಗಿಟ್ಟಾದರೂ ಆ ಕೆಲಸಗಳನ್ನು ಪೂರೈಸಬೇಕು. ಹೀಗೆ ನಮ್ಮ ಆತ್ಮಕ್ಕೆ ತೋಚಿದ್ದು, ನಮ್ಮ ಹೃದಯ ಹೇಳಿದ್ದನ್ನು ನಿರ್ಭಯವಾಗಿ ಮಾಡುವುದೇ ಸಾಹಸ.
ಎಲ್ಲಾ ಸಾಹಸಗಳಲ್ಲೂ ಮತ್ತೊಂದು ಮುಖ್ಯವಾದ ಸಾಹಸ ಅಹಿಂಸಾ ವ್ರತವನ್ನು ತ್ರಿಕರಣಶುದ್ಧಿಯಿಂದ ಅನುಸರಿಸುವುದು.”ಅಹಿಂಸೆಯೇ ವೀರತನದ ಸಂಕೇತ” ಎನ್ನುವ ಮಹಾತ್ಮಾ ಗಾಂಧೀ “ಕೇವಲ ಅಹಿಂಸಾಧರ್ಮಾಚರಣೆ ಮಾತ್ರವೇ ಮಾನವನನ್ನು ನಿರ್ಭಯನನ್ನಾಗಿ ಬದಲಾಯಿಸುತ್ತದೆ” ಎಂದು ತಿಳಿಸಿದರು. ಬಾಯಿಯಿಲ್ಲದ ನಿಸ್ಸಹಾಯ ಮೂಕಪ್ರಾಣಿಗಳನ್ನು ಕೊಂದು ತಿನ್ನುವುದು ಸಾಹಸಕಾರ್ಯ ಎಂದಿಗೂ ಅನಿಸಿಕೊಳ್ಳುವುದಿಲ್ಲ .. ಸಸ್ಯಾಹಾರ ಜೀವನ ವಿಧಾನದ ಮೂಲಕ ಸ್ವಂತ ಇಂದ್ರಿಯಗಳ ನಿಗ್ರಹವನ್ನು ಅನುಸರಿಸುವುದೇ ತುಂಬಾ ದೊಡ್ಡ ‘ಸಾಹಸ’ ಅನಿಸಿಕೊಳ್ಳುತ್ತದೆ.
“ಒಬ್ಬರ ಸಾಹಸ ಮತ್ತೊಬ್ಬರಿಗೆ ಸ್ಫೂರ್ತಿಯನ್ನು ನೀಡುತ್ತದೆ ಮತ್ತು .. ಒಬ್ಬರ ಸಾಹಸವನ್ನು ನೋಡಿ ಮತ್ತೊಬ್ಬರು ಸಾಹಸ ಮಾಡಲು ಪ್ರಯತ್ನಿಸುತ್ತಾರೆ. ಬ್ರಿಟೀಷರ ದಾಸ್ಯಶೃಂಖಲೆಗಳಿಂದ ಭಾರತಮಾತೆಯನ್ನು ವಿಮುಕ್ತಗೊಳಿಸಬೇಕು” ಎನ್ನುವ ಗಾಂಧೀಜಿಯವರ ಸಾಹಸ ಕಳೆದ ಎರಡು ನೂರು ವರ್ಷಗಳಿಂದ ತನ್ನ ಸ್ವಂತ ದೇಶದಲ್ಲೇ ಆಳುಗಳಾಗಿ ಬದುಕುತ್ತಿರುವ ಪ್ರತಿಯೊಬ್ಬ ಭಾರತೀಯನಲ್ಲೂ ಸಾಹಸ ಮಾಡುವ ನೈಜಗುಣವನ್ನು ತಟ್ಟಿ ಎಬ್ಬಿಸಿತು. ಅದರಿಂದ ದೇಶದಾದ್ಯಂತ ಕೂಡಾ ದೇಶಭಕ್ತಿಯು ಪಸರಿಸಿ, ಅಲ್ಪಕಾಲದಲ್ಲೇ ಇಡೀ ದೇಶವೇ ಸಾಹಸಯುತವಾಗಿ ಸ್ವಾತಂತ್ರದ ಗಾಳಿಯನ್ನು ಹೀರಿಕೊಂಡಿತು.
ದಕ್ಷಿಣ ಆಫ್ರಿಕಾ ಸ್ವಾತಂತ್ರ್ಯ ಸಮರ ಯೋಧರಾದ “ನೆಲ್ಸನ್ ಮಂಡೇಲಾ” ಮೂರು ದಶಕಗಳ ಕಾಲ ಜೈಲಿನಲ್ಲಿದ್ದುಕೊಂಡೇ ಸತತವಾಗಿ ತಮ್ಮ ಹೋರಾಟವನ್ನು ಸಾಗಿಸಿದರು. ವೀರ ಸಾವರ್ಕರ್ ಇಪ್ಪತ್ತೈದು ವರ್ಷಗಳವರೆಗೂ ಅಂಡಮಾನ್ ಜೈಲಿನಲ್ಲೇ ಕೊಳೆಯುತ್ತಾ .. ಅನೇಕಾನೇಕ ವ್ಯಕ್ತಿಗತ ಬಾಧೆಗಳನ್ನು ಅನುಭವಿಸಿದರು. ಅಲ್ಲಿಂದಲೇ ಆ ವೀರನು ದೇಶ ಪ್ರಜೆಗಳನ್ನು ಉತ್ತೇಜಿಸಿದರು. ಅದು ಸಾಹಸ ಅಂದರೆ.
ಹೀಗೆ ಪ್ರತಿಕ್ಷಣ “ಸಾಹಸ”ದಿಂದ ಜೀವಿಸುವುದೆನ್ನುವುದು ಒಂದು ಸಂಪೂರ್ಣ ಜೀವನವನ್ನು ಜೀವಿಸುವ ವ್ಯಕ್ತಿಯ ಉನ್ನತ ಬಯಕೆ.
“ಜ್ಞಾನ”ದ ಮೂಲಕ ಹೇಗೆ “ಅಜ್ಞಾನ” ಎನ್ನುವುದು ನಶಿಸುತ್ತದೊ .. ಹಾಗೆಯೇ ಸಾಹಸ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ನಮ್ಮಲ್ಲಿ ಜನ್ಮಜನ್ಮಗಳಿಂದ ಗೂಡುಕಟ್ಟಿಕೊಂಡಿರುವ “ಭಯ” ಎನ್ನುವುದು ನಶಿಸುತ್ತದೆ.
“ಪ್ರಾಣ ಹೋದರೆ ಹೋಗಲಿ .. ಈ ಕೆಲಸ ಮಾತ್ರ ಪೂರ್ತಿಮಾಡು” ಎಂದು ಯಾರಾದರೂ ಇನ್ನೊಬ್ಬರಿಗೆ ಹೇಳುವುದೆನ್ನುವುದು ಅವರು ಮಾಡುವ ಅತ್ಯಂತ ಸಾಹಸಕರವಾದ ಬೋಧನೆ. ಲಂಕಾ ವಿಜಯದ ನಂತರ ಶ್ರೀರಾಮನು ತನ್ನ ಧರ್ಮಪತ್ನಿ ಸೀತೆಯನ್ನು “ಅಗ್ನಿ ಪ್ರವೇಶ ಮಾಡು” ಎಂದು ಆಜ್ಞಾಪಿಸಿದನು. ಅದು “ಸಾಹಸ”. ಮರುಮಾತನಾಡದೇ ಸೀತಾದೇವಿ ಗಂಡನ ಸುತ್ತಾ ಮೂರು ಪ್ರದಕ್ಷಿಣೆಗಳನ್ನು ಮಾಡಿ ಅಗ್ನಿಪ್ರವೇಶ ಮಾಡುವುದು ಅದಕ್ಕಿಂತಾ ದೊಡ್ಡ “ಸಾಹಸ”.
ಸಾಹಸಗಳು ಮಾಡುವವರಿಗೆ ಮೇಲಿನಲೋಕಗಳಲ್ಲಿ ಬಹಳಷ್ಟು ಮಾರ್ಕ್ಸ್ಗಳು ಸಿಗುತ್ತವೆ. ಇವತ್ತೋ, ನಾಳೆಯೋ ನಾವು ಸಹ ಮೇಲೆ ಲೋಕಗಳಿಗೆ ಹೋಗುತ್ತೇವೆ. ಆಗ ಅಲ್ಲಿರುವ ಉನ್ನತಾತ್ಮಗಳು ನಮ್ಮನ್ನು “ಏನಯ್ಯಾ, ಭೂಮಿಯ ಮೇಲೆ ಇರುವಾಗ ಏನೇನು ಸಾಹಸ ಕಾರ್ಯಗಳು ಮಾಡಿರುವೆ?” ಎಂದು ಕುತೂಹಲದಿಂದ ಕೇಳುತ್ತಾರೆ.
ಆಗ ನಾವು ಸಪ್ಪೆ ಮುಖ ಇಟ್ಟುಕೊಂಡು “ಇಲ್ಲರೀ, ಹೆಂಡತಿ-ಮಕ್ಕಳು, ಉದ್ಯೋಗ-ಕೆಲಸ, ಜವಾಬ್ದಾರಿಗಳು-ಹೊಣೆಗಾರಿಕೆಗಳು .. ಇದರಿಂದಲೇ ಜನ್ಮ ಎಲ್ಲಾ ಸರಿಹೋಯಿತು. ಇನ್ನು ಸಾಹಸಗಳನ್ನು ಮಾಡಲು ಸಮಯವೆಲ್ಲಿದೆ?. ನಿಜಕ್ಕೂ ಅದರ ಕುರಿತು ಯೋಚಿಸುವ ಸಮಯವೇ ಇರಲಿಲ್ಲ” ಎಂದು ಹೇಳುತ್ತಿರುವಾಗ ಅವರು ನಗುತ್ತಾರೆ. ಏಕೆಂದರೆ, ಭೂಲೋಕದಲ್ಲಿ ಇರುವಾಗ ಅಂತಹ ಸ್ಥಿತಿಯಲ್ಲಿ ಇದ್ದು ಕೂಡಾ ಸಾಹಸಗಳನ್ನು ಮಾಡಿ ಬಂದವರು ಮೇಲಿನಲೋಕಗಳಲ್ಲಿ ಅನೇಕಾನೇಕ ಜನ ಇರುತ್ತಾರೆ, ಕೇವಲ ಭೂಲೋಕ ಎನ್ನುವ ಈ ಪಾಠಶಾಲೆಯಲ್ಲಿಯೇ ನಮಗೆ ಅನೇಕಾನೇಕ ಕರ್ಮಗಳ ಮೂಲಕ ಸಾಹಸಗಳನ್ನು ಮಾಡುವ ಅವಕಾಶವಿರುತ್ತದೆ.
ಬಾಹ್ಯ ಪ್ರಪಂಚದಲ್ಲಿ ಕರ್ಮಗಳು ಮಾಡುತ್ತಲೇ ಆತ್ಮಸ್ವರೂಪರಾಗಿ ಬೆಳಗುವುದು ಒಂದು “ಮಹಾ ಸಾಹಸ”. ನಿರಂತರ ಧ್ಯಾನ ಸಾಧನೆಯ ಮೂಲಕ ಸ್ವಂತ ಆತ್ಮತತ್ವದ ಬಗ್ಗೆ ಅರಿವಿನಿಂದ ಇರುವುದು “ಸಾಹಸ”. ಆಲೋಚನೆಗಳ ಬಗ್ಗೆ ಅರಿವಿನಿಂದ ಇರುವುದು “ಸಾಹಸ”. ಆಲೋಚನೆಗಳ ಹುತ್ತದಂತೆ ಇರುವ ಮನಸ್ಸನ್ನು ನಿರ್ಮೂಲನೆ ಮಾಡಿಕೊಳ್ಳುವುದು “ಸಾಹಸ”,ಮೂರನೆಯ ಕಣ್ಣು ತೆರೆದುಕೊಂಡು ಗತಜನ್ಮಗಳನ್ನು ನೋಡಿಕೊಂಡು ಕರ್ಮಸಿದ್ಧಾಂತವನ್ನು ಅರ್ಥಮಾಡಿಕೊಳ್ಳುವುದು ಎಲ್ಲದಕ್ಕಿಂತಾ ದೊಡ್ಡ “ಸಾಹಸ”.
ಆದರೆ, ಅತಿ ಚಿಕ್ಕ ವಯಸ್ಸಿನಿಂದಲೇ ಧ್ಯಾನ ಮಾಡಿ ಅವಧೂತರಾಗಿ ಬದಲಾದ ಮುಮ್ಮಿಡಿವರಂ ಬಾಲಯೋಗಿಯವರನ್ನು ಮಾತ್ರ ಪೂಜಿಸುತ್ತಾ ನಮ್ಮ ಸುತ್ತಲಿರುವ ಪ್ರಪಂಚವು ನಮ್ಮನ್ನು ಮಾತ್ರ “ಈ ಚಿಕ್ಕ ವಯಸ್ಸಿನಲ್ಲಿ ಧ್ಯಾನ ಏಕೆ? ಮುದಿ ವಯಸ್ಸಿನಲ್ಲಿ ಧ್ಯಾನ ಮಾಡಿಕೊಳ್ಳಬೇಕು ಎನ್ನುತ್ತದೆ.”
ಆದ್ದರಿಂದ, ಧ್ಯಾನ ಎನ್ನುವುದು ತಮಾಷೆಯ ವಿಷಯವೇನಲ್ಲ. “ಒಂದು ಮಹಾ ಸಾಹಸ ಕಾರ್ಯಕ್ರಮ ಮಾಡಲಿಕ್ಕಾಗಿಯೇ ನಾನು ತೀರ್ಮಾನಿಸಿದ್ದೇನೆ. ಆಲೋಚನೆಗಳನ್ನು ಇಲ್ಲವಾಗಿಸಲು ಪ್ರಯತ್ನಿಸುತ್ತಾ ನನ್ನ ಆತ್ಮದ ಮೂಲಪ್ರಕೃತಿಯನ್ನು ಕುರಿತು ನಾನು ತಿಳಿದುಕೊಳ್ಳುತ್ತಿದ್ದೇನೆ” ಎಂದುಕೊಂಡು ಧ್ಯಾನಕ್ಕೆ ಕುಳಿತುಕೊಂಡು ಮನಸ್ಸು ಎನ್ನುವ ಕೊಳದಲ್ಲಿ ಇಳಿದು ಮೊಸಳೆಗಳು ಎನ್ನುವ ಆಲೋಚನೆಗಳನ್ನು ನಿರ್ಮೂಲನೆಗೊಳಿಸುವುದು ಒಂದು ದೊಡ್ಡ ಸಾಹಸ. ಇದು ಒಬ್ಬ ಬುದ್ಧನು ಮಾತ್ರವೇ ಕೈಗೊಳ್ಳುವ ಮಹಾಸಾಹಸ ಕಾರ್ಯ.
ನಿಜಕ್ಕೂ ಬಾಂಬುಗಳನ್ನು ಹಾಕಿ, ಕತ್ತಿಯಿಂದ ದಾಳಿಮಾಡಿ ಅಥವಾ ತುಪಾಕಿಯಿಂದ ಸುಟ್ಟು ಒಬ್ಬ ಮನುಷ್ಯನನ್ನು ಕೊಲ್ಲುವುದಕ್ಕಿಂತಾ ನಮ್ಮ ಮನಸ್ಸನ್ನು ನಾವು ಕೊಲ್ಲುವುದು ತುಂಬಾ ಕಷ್ಟ. ಎರಡು ಕಣ್ಣುಗಳನ್ನು ಮುಚ್ಚಿಕೊಂಡು, ಶರೀರವನ್ನು ಸ್ಥಿರಗೊಳಿಸಿ, ಮನಸ್ಸನ್ನು ಶೂನ್ಯವನ್ನಾಗಿಸಿ ಗಂಟೆಗಟ್ಟಲೆ ಧ್ಯಾನದಲ್ಲಿ ಕುಳಿತುಕೊಳ್ಳುವುದು ಪರಮ ಸಹನೆಯಿಂದ ಕೂಡಿದ “ಸಾಹಸ”. ಅದು ನಮ್ಮನ್ನು ‘ಮುಕ್ಕಣ್ಣ’ನಾದ ಪರಮಶಿವನಂತೆ ಬದಲಾಯಿಸುತ್ತದೆ.
ಜಯಾಪಜಯಗಳಿಗೂ ತನಗೂ ಸಂಬಂಧವಿಲ್ಲದೇ ಕೆಲಸ ಮಾಡುವುದೆನ್ನುವುದು ಒಬ್ಬ ಸಾಹಸಿಯ ಲಕ್ಷಣ. ಅವರು ಇತರರು ಹೇಳುವ ಅಪರಿಪಕ್ವ ಅಭಿಪ್ರಾಯಗಳನ್ನು ಸ್ವಲ್ಪವೂ ಲೆಕ್ಕಿಸದೆ ಆರಿಸಿಕೊಂಡ ಕೆಲಸದಲ್ಲೇ ಮಗ್ನವಾಗಿ, ತಮಗಾಗಿ ತಾವು ಆತ್ಮವತ್ ಜೀವನವನ್ನು ಜೀವಿಸುತ್ತಾ ಇರುತ್ತಾರೆ. ಹೀಗೆ “ಶರೀರ ತಾತ್ಕಾಲಿಕ, ಆತ್ಮ ಒಂದೇ ಶಾಶ್ವತ” ಎಂದು ತಿಳಿದುಕೊಂಡ ಇಂತಹ ಮಹನೀಯರ ಜೀವನದಲ್ಲಿನ ಸಾಹಸಗಳು .. ಹತ್ತಾರು ಜನಕ್ಕೆ ಉಪಯೋಗವಾಗುವ ಪ್ರಯೋಗಗಳಂತೆ ರೂಪಿಸಿಕೊಳ್ಳುತ್ತಿವೆ.
ಆದ್ದರಿಂದ, ಈ ಭೂಮಿಯ ಮೇಲೆ ಮಾನವಜನ್ಮ ತೆಗೆದುಕೊಂಡ ಪ್ರತಿಯೊಬ್ಬರೂ ಎಲ್ಲಾ ಸಾಹಸಗಳಲ್ಲೂ ಅತ್ಯಂತ ಉತ್ತಮ ಸಾಹಸವಾದ ಧ್ಯಾನವನ್ನು ತಮ್ಮ ದಿನನಿತ್ಯದ ಜೀವನಗಳಲ್ಲಿ ಒಂದು ಅಂಗವಾಗಿ ಮಾಡಿಕೊಳ್ಳಬೇಕು. ಆಗಲೇ ಅವರ ಜೀವನಗಳು ಕೂಡಾ ಅದ್ಭುತವಾದ ಪ್ರಯೋಗಗಳಾಗಿ ಬದಲಾಗಿ .. ಆತ್ಮಕ್ಕೆ ಅಡೆತಡೆಗಳು ಎನ್ನುವುವು ಇಲ್ಲದೆ ತನ್ನ ಸ್ವಂತ ಆತ್ಮದ ವಿಕಾಸಯಾತ್ರೆಯಲ್ಲಿ ಆತ್ಮವು ಮುಂದಕ್ಕೆ ನುಗ್ಗಿಕೊಂಡು ಹೋಗುತ್ತಿರುತ್ತದೆ.
Recent Comments