” ವಿಶ್ವಧ್ಯಾನ ಮಹಾಸಭೆಗಳಲ್ಲಿ ಪತ್ರೀಜಿಯವರ ಸಂದೇಶಗಳು “
” ನಾವು ವಿಶ್ವಾದ್ಯಂತ ಇರುವ ಎಲ್ಲಾ ಲೋಕಗಳಿಗೆ ಸೇರಿದವರು “
ಡಿಸೆಂಬರ್ 22 ರಂದು ಪತ್ರೀಜಿಯವರ ಸಂದೇಶ : ಪ್ರಿಯ ಸ್ನೇಹಿತರೇ, ಪ್ರಿಯ ಮಾಸ್ಟರ್ಗಳೇ, ಪ್ರಿಯ ದೇವರುಗಳೇ, ಪ್ರತಿಯೊಂದು ಭಾಷೆ ದೊಡ್ಡದೆ, ಪ್ರತಿಯೊಂದು ದೇಶ ದೊಡ್ಡದೆ. ಯಾವ ಭೂಮಿಯೇ ಆಗಲಿ ಯಾವ ಭಾಷೆಯೇ ಆಗಿರಲಿ ಪ್ರತ್ಯೇಕವಾಗಿ ದೊಡ್ಡದೇನಲ್ಲ. ನನ್ನ ದೇಶ ನನಗೆ ದೊಡ್ಡದು. ನಿಮ್ಮ ದೇಶ ನಿಮಗೆ ದೊಡ್ಡದು. ಹಾಗೆ ನನ್ನ ಭಾಷೆ ನನಗೆ ದೊಡ್ಡದು, ನಿಮ್ಮ ಭಾಷೆ ನಿಮಗೆ ದೊಡ್ಡದು. ಪ್ರತಿಯೊಂದು ದೇಶ ದೊಡ್ಡದು, ಪ್ರತಿಯೊಂದು ಭಾಷೆಯೂ ದೊಡ್ಡದು. ಎಲ್ಲರೂ ಸೇರಿ ಒಂದಾಗಿ ಜೀವಿಸುವುದೇ ಹಿರಿತನ. ದೇಶಾಭಿಮಾನ, ಭಾಷಾಭಿಮಾನ ಇರಬೇಕು. ಆದರೆ, ನಾವು ಈ ಇಡೀ ಭೂಮಂಡಲಕ್ಕೆ ಸೇರಿದವರು ಎಂಬುದನ್ನು ನಾವು ಮರೆಯಬಾರದು. “ನಾನು ಈ ಭೂಮಂಡಲವಾಸಿ ಮಾತ್ರವೇ ಅಲ್ಲ. ಈ ವಿಶ್ವದಾದ್ಯಂತ ಪಸರಿಸಿರುವ ಎಲ್ಲಾ ಲೋಕಗಳಿಗೆ ನಾನು ಸೇರಿದವನು. ಅನೇಕ ನಕ್ಷತ್ರಮಂಡಲಗಳಿಂದ ನಾವು ಇಲ್ಲಿಗೆ ಬರುತ್ತೇವೆ. ನಾವು ನಕ್ಷತ್ರಲೋಕವಾಸಿಗಳು. ನಮ್ಮೆಲ್ಲರ ದೃಷ್ಟಿಯನ್ನು ತುಂಬಾ ದೊಡ್ಡದಾಗಿ ವಿಸ್ತರಿಸಿಕೊಳ್ಳಬೇಕೆಂದು” ನಾನು ಬಯಸುತ್ತೇನೆ.
ಭೂಮಿ ತನ್ನ ಸುತ್ತ ತಾನು ತಿರುಗಲು ಒಂದು ದಿನ ಬೇಕಾಗುತ್ತದೆ. ಚಂದ್ರನು ಭೂಮಿಯ ಸುತ್ತ ಸುತ್ತಲು ಒಂದು ತಿಂಗಳು ಬೇಕಾಗುತ್ತದೆ. ಭೂಮಿ ಸೂರ್ಯನ ಸುತ್ತ ತಿರುಗಲು ಒಂದು ವರ್ಷ ಬೇಕಾಗುತ್ತದೆ. ಸೂರ್ಯ ತನ್ನ ಸುತ್ತ ತಾನು ತಿರುಗಲು 26,೦೦೦ ವರ್ಷಗಳು ಬೇಕಾಗುತ್ತದೆ. ಆ ಇಪ್ಪತ್ತಾರು ಸಾವಿರ ವರ್ಷಗಳನ್ನು ಒಂದು ಯುಗ ಎನ್ನುತ್ತೇವೆ. ಈ ದಿನ ನಾವು ನೂತನ ಯುಗಕ್ಕೆ ಹೆಜ್ಜೆ ಇಟ್ಟಿದ್ದೇವೆ. ಇಂದಿನಿಂದ ನೂತನಯುಗ, ಅಂದರೆ, ಸತ್ಯಯುಗ, ಸ್ವರ್ಣಯುಗ ಪ್ರಾರಂಭವಾಗಿದೆ. ನಿನ್ನೆ ಹಳೆಯ ಯುಗವೊಂದರ ಅಂತ್ಯವಾಗಿದೆ. “ನಾವೆಲ್ಲರೂ ನಕ್ಷತ್ರಲೋಕವಾಸಿಗಳು. ಅನೇಕ ಲೋಕಗಳಿಂದ ಈ ಭೂಲೋಕಕ್ಕೆ ಬಂದಿದ್ದೇವೆ” ಎಂಬುದನ್ನು ಮರುನೆನಪಿಸಿಕೊಳ್ಳುವುದೇ ಈ 11 ದಿನಗಳ ವಿಶ್ವಧ್ಯಾನ ಮಹಾಸಭೆಯ ಮುಖ್ಯ ಉದ್ದೇಶ. ನನ್ನ ತಾಯಿ ಗರ್ಭದಿಂದ ಈ ಶರೀರ ಪಿಂಡರೂಪದಲ್ಲಿ ಬಂದಿದೆ. ಈ ಆತ್ಮಕ್ಕೂ ನನ್ನ ತಾಯಿಗೂ ಸಂಬಂಧವೇ ಇಲ್ಲ. ಅಂದ, ಮೇಲೆ ಈ ಮಣ್ಣಿಗೆ ನನಗೇನು ಸಂಬಂಧವಿದೆ. ಆದರೆ, ತಾಯಿಯಿಂದಲೇ ಈ ಶರೀರ ಎನ್ನುವ ಮಣ್ಣು ಬಂದಿದೆ. ಈ ಶರೀರವನ್ನು ಇಲ್ಲೇ ಈ ಭೂಮಂಡಲದಲ್ಲೇ ಬಿಟ್ಟುಬಿಡುತ್ತೇವೆ. ಆತ್ಮವು ನಕ್ಷತ್ರಲೋಕಕ್ಕೆ ಹೊರಟುಹೋಗುತ್ತದೆ. ಯಾರು ನಾವು ಆತ್ಮಪದಾರ್ಥ ಎಂದು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಾರೊ ಅವರೇ ಪಿರಮಿಡ್ ಮಾಸರ್ಗಳು.
ಒಂದು ಲಕ್ಷವರ್ಷಗಳ ಹಿಂದೆ. ನಕ್ಷತ್ರಲೋಕದಲ್ಲಿ ಹೀಗೆ ಒಂದು ಮಹಾಸಭೆ ನಡೆಯಿತು. ಗೆಲಾಕ್ಟಿಕ್ ಫೆಡರೇಷನ್ನಲ್ಲಿ ಒಂದು ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಅದೇನೆಂದರೆ ಮುಂಬರುವ ಒಂದು ಲಕ್ಷವರ್ಷಗಳಲ್ಲಿ ಭೂಮಂಡಲದಲ್ಲಿ ಏನೇನು ಮಾಡಬೇಕೆಂದು… ಎಲ್ಲರೂ ಸೇರಿ ಒಂದು ಪ್ರಣಾಳಿಕೆಯನ್ನು ತಯಾರಿಸಿದರು. ಈ ಭೂಮಂಡಲದಲ್ಲಿ ಮಾನವರಿಗೆ ಇರುವ ಎರಡು ಜೊತೆ DNAಯನ್ನು 12 ಜೊತೆ DNA ಯನ್ನಾಗಿ ಬದಲಾಯಿಸಲು ಅನೇಕ ಆಸ್ಟ್ರಲ್ ಮಾಸರ್ಗಳು ಈ ಭೂಮಂಡಲದಲ್ಲಿ ಇರುವವರ ಶರೀರಗಳಲ್ಲಿ ಪ್ರವೇಶಿಸಬೇಕು ಎಂಬುದೇ ಆ ಪ್ರಣಾಳಿಕೆಯಾಗಿತ್ತು. ಕಳೆದ ಒಂದು ಲಕ್ಷ ವರ್ಷಗಳಿಂದ ತುಂಬಾ ಪರಿಶ್ರಮವಹಿಸಿ ಈ ದಿನ ಭೂಮಿಯನ್ನು ರಕ್ಷಿಸಲಾಗಿದೆ. ಅಂತಹ ಕೆಲಸವನ್ನು ಮಾಡಿರುವವರು ನಕ್ಷತ್ರವಾಸಿಗಳು. ಭೂಮಿಯ ಸಂರಕ್ಷಣೆಯಲ್ಲಿ ಅವರ ಕೃಪಾಕಟಾಕ್ಷ ವಿಶೇಷವಾದುದು. ಕಲಿಯುಗ ಅಂತ್ಯಗೊಳ್ಳುತ್ತದೆ, ವಿಸ್ಫೋಟವಾಗುತ್ತದೆ, ಎಲ್ಲಾ ನಾಶವಾಗುತ್ತದೆ ಎಂದು ಅನೇಕರು ಹೇಳಿದ್ದರು. ಆದರೆ, ಹಾಗಾಗಲಿಲ್ಲ, ಏಕೆಂದರೆ, ಇಲ್ಲಿರುವವರೆಲ್ಲರ ಧ್ಯಾನ ಫಲದಿಂದ ಆ ಅನಾಹುತ ನಡೆಯದೆ ಪೃಥ್ವಿಯು ರಕ್ಷಿಸಲ್ಪಟ್ಟಿದೆ ಎನ್ನುವುದು ಸತ್ಯ. ಆದ್ದರಿಂದಲೇ, ನಾವು ಈ ದಿನ ಈ ಸಭೆ, ಸಂಭ್ರಮ ನಡೆಸಿಕೊಳ್ಳುತ್ತಿದ್ದೇವೆ. ಅನೇಕ ಶತಮಾನಗಳಿಂದ, ಅನೇಕ ವರ್ಷಗಳಿಂದ ಈ ಭೂಮಿ ನಾಶವಾಗುತ್ತದೆ ಎಂದು ಹೇಳಿದ್ದು ನಿಜ. ಆದರೆ, ಆ ನಕ್ಷತ್ರ ಲೋಕವಾಸಿಗಳು ಒಂದು ಲಕ್ಷ ವರ್ಷಗಳ ಹಿಂದೆ ರಚಿಸಿದ ಪ್ರಣಾಳಿಕೆಯ ಅನುಷ್ಠಾನಗೊಳಿಸಿದ ಕಾರಣ, ಅವರ ಕೃಪಾಕಟಾಕ್ಷದಿಂದ ಇಂದು ಪೃಥ್ವಿಯು ರಕ್ಷಿಸಲ್ಪಟ್ಟದೆ ಎನ್ನುವುದು ಪರಮ ಸತ್ಯ.
ಭೂಲೋಕವಾಸಿಗಳ ಧ್ಯಾನದಿಂದ ನಕ್ಷತ್ರಲೋಕವಾಸಿಗಳ ಪ್ರಣಾಳಿಕೆಯಿಂದ ಈ ಭೂಮಿ ಈಗ ಸುರಕ್ಷಿತವಾಗಿದೆ. ಭೂಮಂಡಲದಲ್ಲಿ ಸಾಮಾನ್ಯವಾಗಿ ಚಿಕ್ಕ-ಪುಟ್ಟ ತೊಂದರೆಗಳು ಇರುತ್ತವೆ. ಆದರೆ, ಎಲ್ಲರೂ ಅಂದುಕೊಂಡಿದ್ದಂತೆ ದೊಡ್ಡ ಪ್ರಮಾಣದಲ್ಲಿ ಏನೂ ಆಗಲಿಲ್ಲ.
ಈ ಭೂಲೋಕಕ್ಕೆ ಬಂದಿದ್ದೇವೆ ಪುನಃ ನಾವು ಭುವರ್ ಲೋಕಕ್ಕೆ ಹೋಗುತ್ತೇವೆ. ಭುವರ್ ಲೋಕದಿಂದ ಸುವರ್ ಲೋಕಕ್ಕೆ ಹೋಗುತ್ತೇವೆ. ಹಾಗೆ ಸುವರ್ ಲೋಕದಿಂದ ಜನಾಲೋಕಕ್ಕೆ ಹೋಗುತ್ತೇವೆ. ಜನಾಲೋಕದಿಂದ ಮಹಾಲೋಕಕ್ಕೆ ಹೋಗುತ್ತೇವೆ. ಮಹಾಲೋಕದಿಂದ ತಪೋಲೋಕಕ್ಕೆ ಹೋಗುತ್ತೇವೆ. ತಪೋಲೋಕದಿಂದ ಸತ್ಯಲೋಕಕ್ಕೆ ಪ್ರವೇಶಿಸುತ್ತೇವೆ. ಅನೇಕಾನೇಕ ಮಲ್ಟೀಡೈಮೆನ್ಷನ್ಗಳಿವೆ. ಎಣಿಸಲಾರದಷ್ಟು ಡೈಮೆನ್ಷನ್ಗಳಿಂದ ಬಂದ ಆತ್ಮಗಳು ನಾವು. ಯಾವುದೋ ಒಂದು ಪ್ರಾಂತಕ್ಕೊ/ಯಾವುದೋ ಒಂದು ಕುಟುಂಬಕ್ಕೊ ಯಾವುದೊ ಒಂದು ದೇಶಕ್ಕೊ ಯಾವುದೋ ಒಂದು ಭೂಮಂಡಲಕ್ಕೊ ಯಾವುದೋ ಒಂದು ಸೂರ್ಯಕುಟುಂಬಕ್ಕೊ ಯಾವುದೋ ಒಂದು ಗ್ಯಾಲಕ್ಸಿಗೊ ಸೇರಿದವರಲ್ಲ. ನಾವು ಸಕಲ ಲೋಕಗಳಿಗೂ ಸೇರಿದವರು. ಮತ್ತೊಂದು ಮುಖ್ಯ ವಿಷಯವೇನೆಂದರೆ ನಾವೆಲ್ಲರೂ ದೇವರುಗಳೇ.
” ಬ್ರಹ್ಮಾನಂದವನ್ನು ಅನುಭವಿಸುವವರೆಲ್ಲರೂ ಮಹಾನುಭಾವರೆ “
ಡಿಸೆಂಬರ್ 23ರಂದು ಪತ್ರೀಜಿಯವರ ಸಂದೇಶ: “ಬ್ರಹ್ಮಂ ಒಂದೇ ಪರಬ್ರಹ್ಮಂ ಒಂದೇ”… We are all gods my dear friends, we are all that, ತತ್ವಮಸಿ ಶ್ವೇತಕೇತು. ಓ… ಶ್ವೇತಕೇತು ನೀನು ಅದೇ ಆಗಿದ್ದಿಯಪ್ಪಾ…! ನೀನು ಆ ಪರಬ್ರಹ್ಮ… ಅದು ತಿಳಿದುಕೊಳ್ಳುವುದೇ ಧ್ಯಾನದ ಧ್ಯೇಯ, ಧ್ಯಾನದ ಅಭ್ಯಾಸ, ಧ್ಯಾನಾನುಭವ.
ನಾನು ಈ ಶರೀರ ಅಲ್ಲ, ನಾನು ಅಂದರೆ, ನಾನು ಮತ್ತು ಆ ಪರಬ್ರಹ್ಮ ಒಂದೇ… ನಾನು ಈ ನಾನು ಅಲ್ಲ… ನಾನು ಆ ನಾನು… I am that I am. ಅಹಂ ಬ್ರಹ್ಮಾಸ್ಮಿ… ತತ್ವಮಸಿ ಶ್ವೇತಕೇತು… ನಾನು ಶರೀರ ಅಲ್ಲ ನಾನು ಆತ್ಮ. ಪ್ರಿಯ ಮಿತ್ರರೇ… ನಾವು ಆತ್ಮ ಈ ಶರೀರವಲ್ಲ ಎಂದು ಅನುಭವದ ಮೂಲಕ ತಿಳಿದುಕೊಳ್ಳುವವರೆಗೆ ಜೀವನದಲ್ಲಿ ಸುಖ-ಶಾಂತಿ ಸಿಗುವುದಿಲ್ಲ. ಜೀವನದಲ್ಲಿ ಸುಖ-ಶಾಂತಿ ನೆಲಸಬೇಕಾದರೆ ಆತ್ಮಾನುಭವ ಆಗಬೇಕು. ಪರಬ್ರಹ್ಮನ ಅನುಭವ ಆಗಬೇಕು. ಯಾರು ಈ ಜೀವನದಲ್ಲೇ ಈ ಶರೀರದಲ್ಲಿದ್ದುಕೊಂಡೇ ಪರಬ್ರಹ್ಮನ ಅನುಭವವನ್ನು ಪಡೆಯುತ್ತಾರೊ ಅವರನ್ನು ‘ಪರಮ ಆತ್ಮ’ ಎನ್ನುತ್ತಾರೆ. ನಾನು ಮೂಳೆ, ಮಾಂಸಗಳ ಗೂಡಾಗಿರುವ ಈ ಶರೀರವೇ ನಾನು ಎಂದು ಯಾರು ಭಾವಿಸಿದ್ದಾರೆಯೋ ಅವರು ‘ಜೀವಾತ್ಮ’. ನಾವೆಲ್ಲರೂ ಪರಬ್ರಹ್ಮಗಳಾಗಿದ್ದರೂ ಅಜ್ಞಾನಕಾರಣ, ನಾನು ಈ ಶರೀರ, ಈ ಮಾಂಸಪಿಂಡ ಎಂದು ತಿಳಿದಿದ್ದೇವೆ. ಪ್ರತಿಯೊಂದು ವರ್ಷವೂ ಸಹ ನನಗೆ ಇಂತಿಷ್ಟು ವರ್ಷ ವಯಸ್ಸು ಆಗಿದೆ ಎಂದು ಜೀವಿಸುವವರೆಲ್ಲಾ ಜೀವಾತ್ಮಗಳು. ಆದರೆ, ನಾನು ಈ ಶರೀರದಲ್ಲಿದ್ದರೂ ನಾನು ಈ ಶರೀರ ಅಲ್ಲ, ನಾನು ಮೊಳೆ ಮಾಂಸವಲ್ಲ, ಈ ಕಾಲದವನಲ್ಲ ಎಂದು ತಿಳಿದು I am that I am.. I am not this body ಎಂದು ಅನುಭವದ ಮೂಲಕ ಯಾರು ತಿಳಿದುಕೊಳ್ಳುತ್ತಾರೊ ಅವರೇ ‘ಪರಮಾತ್ಮ’.
ಹೃದಯಕಮಲದಲ್ಲಿ ಬ್ರಹ್ಮಾನಂದವನ್ನು ಅನುಭವಿಸುವವರೆಲ್ಲರೂ ಮಹಾನುಭಾವರೆ. ‘ಹೃದಯ ಅಂದರೆ ಆತ್ಮ, ‘ಅರವಿಂದ’ ಅಂದರೆ ಕಮಲದ ಹೂ. ಧ್ಯಾನ ಮಾಡಿದರೆ ಹೃದಯ ಕಮಲ ಅರಳುತ್ತದೆ. ಆತ್ಮಾನಂದವಾಗುತ್ತದೆ. ಧ್ಯಾನ ಮಾಡದಿದ್ದರೆ ಹೃದಯ ಕಮಲ ಅರಳದೇ ಮುದುಡಿಕೊಳ್ಳುತ್ತದೆ. ಯಾರು ಧ್ಯಾನ ಮಾಡಿ ‘ಅಹಂ ಬ್ರಹ್ಮಾಸ್ಮಿ’ ಎಂಬುದನ್ನು ಅರಿತು, ಬ್ರಹ್ಮಾನಂದವನ್ನು ಅನುಭವಿಸುತ್ತಾರೊ, ಅವರೆಲ್ಲರೂ ಮಹಾನುಭಾವರೇ. ‘ಅವರೆಲ್ಲರಿಗೂ ನನ್ನ ವಂದನೆಗಳು’ ಎಂದು ತ್ಯಾಗರಾಜರು ಮಹಾನುಭಾವರಿಗೆಲ್ಲರಿಗೂ ವಂದನೆಗಳನ್ನು ತಿಳಿಸಿದ್ದಾರೆ.
ನಾವೆಲ್ಲಾ ಹುಟ್ಟಿದ್ದೇವೆ, ಮದುವೆ ಮಾಡಿಕೊಂಡಿದ್ದೇವೆ, ಮಕ್ಕಳನ್ನು ಪಡೆದಿದ್ದೇವೆ ಇದೆಲ್ಲಾ ಮಹಾ ಅನುಭವವಲ್ಲ. ಜೀವಾತ್ಮನಿಗೆ ಸಾಧಾರಣ ಅನುಭವ ಬರುತ್ತದೆ, ಪರಮಾತ್ಮನಿಗೆ ಮಹಾನುಭವ ಬರುತ್ತದೆ. ಧ್ಯಾನ ಮಾಡಿದರೇ ‘ಜೀವಾತ್ಮ’, ‘ಪರಮಾತ್ಮ’ ಆಗುತ್ತಾನೆ. ನಾವು ಪರಮಾತ್ಮ ಆಗಲು ಧ್ಯಾನ ಮಾಡಲೇಬೇಕು.
” ಸತ್ಯವನ್ನು ಕುರಿತು ತಿಳಿದುಕೊಳ್ಳುವುದೇ ತೀರ್ಥಯಾತ್ರೆ “
ಯಾರಯ್ಯಾ ನೀನು? ಎಂದು ಅರ್ಜುನ ಕೃಷ್ಣನನ್ನು ಕೇಳಿದ. ಆಗ ಕೃಷ್ಣ ಹೇಳಿದನು “ಅಹಂ ಆತ್ಮ ಗುಡಾಕೇಶ”. ಓ ಅರ್ಜುನಾ… ‘ಅಹಂಆತ್ಮ’ ಅಂದರೆ, ನಾನು ಆತ್ಮ, ಗುಡಾಕೇಶ ಅಂದರೆ ನಿದ್ದೆಯನ್ನು ಗೆದ್ದವನು. ನಿದ್ದೆ ಮಾಡುವವನಿಗೆ ಕೃಷ್ಣನ ಮಾತುಗಳು ಹಿಡಿಸುವುದಿಲ್ಲ. ದುರ್ಯೋಧನ ಮತ್ತು ಕೌರವರು ನಿದ್ರಿಸುತ್ತಿರುವವರು. ಅವರನ್ನು ಕೃಷ್ಣನು ಎಬ್ಬಿಸಲಾಗುವುದಿಲ್ಲ. ಆದರೆ, ಅರ್ಜುನನು, ಪಾಂಡವರು ನಿದ್ರಿಸುತ್ತಿರುವವರಲ್ಲ. ಸತ್ಯಕ್ಕಾಗಿ ಎದುರುನೋಡುತ್ತಿರುವವರು. ಯಾರು ಸತ್ಯಕ್ಕಾಗಿ ಎದುರು ನೋಡುತ್ತಿರುತ್ತಾರೊ ಅವರಿಗೆ ಸತ್ಯವಾಕ್ಕುಗಳು ಜೀರ್ಣವಾಗುತ್ತದೆ. ಯಾರು ಸತ್ಯವಾಕ್ಕುಗಳಿಗಾಗಿ ಎದುರುನೋಡುವುದಿಲ್ಲವೊ, ಅವರಿಗೆ ಸತ್ಯ ಜೀರ್ಣಿಸುವುದಿಲ್ಲ. ಅಂತವರು ತೀರ್ಥಯಾತ್ರೆ ಎಂದು ಹೋಗುತ್ತಾರೆ. ತೀರ್ಥಯಾತ್ರೆಯ ನಿಜಾರ್ಥ ತಿಳಿದಿರುವುದಿಲ್ಲ. ಸತ್ಯವನ್ನು ಕುರಿತು ತಿಳಿದುಕೊಳ್ಳುವುದೇ, ಅನುಭವದ ಮೂಲಕ ಅರಿತುಕೊಳ್ಳುವುದೇ ತೀರ್ಥಯಾತ್ರೆ. ನೀವು ತಿರುಪತಿಗೆ, ಕಾಶಿಗೆ, ಮಕ್ಕಾಗೆ ಹೋಗಿಬಂದರೆ ಅದು ತೀರ್ಥಯಾತ್ರೆ ಆಗುವುದಿಲ್ಲ. ಅದು ಪ್ರಾಪಂಚಿಕದಲ್ಲಿ ಉಲ್ಲಾಸಕ್ಕಾಗಿ ಮಾಡುವ ಯಾತ್ರೆ. ಇದು ಆಧ್ಯಾತ್ಮಿಕ ಪ್ರಯಾಣವಲ್ಲ. ಯಾರು ಸತ್ಯವನ್ನು ತಿಳಿದುಕೊಳ್ಳುತ್ತಾರೊ ಅವರು ಧನ್ಯರು. ಅವರು ‘ಪರಮ ಆತ್ಮರು’. ಯಾರು ಸತ್ಯವನ್ನು ಅರಿತಿರುವುದಿಲ್ಲವೊ, ಅರಿಯಲು ಇಷ್ಟಪಡುವುದಿಲ್ಲವೊ ಅವರು ಜೀವಾತ್ಮರು. ಜೀವಾತ್ಮರಿಗೆ ಆತ್ಮ ಎಂದರೆ ಏನು ಎಂಬುದು ಗೊತ್ತಿಲ್ಲ. ಅರ್ಜುನ ಕೃಷ್ಣನನ್ನು ಕೇಳಿದ… “ಯಾರಯ್ಯಾ ನೀನು” ಎಂದು ಅದಕ್ಕೆ ಕೃಷ್ಣ “ನಾನು ಕೃಷ್ಣ” ಎಂದು ಹೇಳಲಿಲ್ಲ. “ನಾನು ಒಬ್ಬ ಆತ್ಮ” ಎಂದು ಹೇಳಿದರು. ನಾನು ಧ್ಯಾನ ಮಾಡದೆ, ಉಸಿರಿನ ಜೊತೆ ಇಲ್ಲದಿದ್ದರೆ ನನ್ನ ಆತ್ಮ ಎಂದಿಗೂ ಪರಮಾತ್ಮ ಆಗುವುದಿಲ್ಲ..
“ಸತ್ಯಮೇವ ಜಯತೆ” ಸತ್ಯಕ್ಕೆ ಮಾತ್ರ ಜಯ ಸಿಗುತ್ತದೆ. ಸತ್ಯ ಎಂದರೆ ’S’. ’S’ for soul, ’S’ for ಸತ್ಯ, ’S’ for spirituality . ’S’ for ಶ್ವಾಸ. ಶ್ವಾಸದ ಹತ್ತಿರ ಹೋಗುವವರೆಗೂ ಆ ಸತ್ಯ ಅನುಭವಕ್ಕೆ ಬರುವುದಿಲ್ಲ. ಆತ್ಮಾನುಭವಕ್ಕಾಗಿ ಶ್ವಾಸವನ್ನು ಗಮನಿಸುತ್ತಿರಬೇಕು. ನಿಮ್ಮ ಶ್ವಾಸವನ್ನು ಗಮನಿಸದಿದ್ದರೆ ನಿಮಗೆ ಆತ್ಮಾನುಭವ ಆಗುವುದಿಲ್ಲ. ಬಾಯಿಮುಚ್ಚಿಕೊಂಡು ಶ್ವಾಸವನ್ನು ಹಿಡಿಯಬೇಕು. ಮನಸ್ಸಿನಲ್ಲಿ ಯಾರನ್ನೂ ಊಹಿಸಿಕೊಳ್ಳಬಾರದು. ಮನಸ್ಸು ಮೂಕವಾಗಬೇಕು, ಶೂನ್ಯವಾಗಬೇಕು. ಬಾಯಿಯಲ್ಲಿ ಮೌನವಹಿಸಿ ಮನಸ್ಸನ್ನು ಶೂನ್ಯಗೊಳಿಸಿ, ಶ್ವಾಸಾನುಸಂಧಾನ ಮಾಡಿದರೆ ಆಗ ಸತ್ಯ ಬಯಲಾಗುತ್ತದೆ. ಧ್ಯಾನದಿಂದಲೇ ಸತ್ಯ ಲಭ್ಯವಾಗುತ್ತದೆ. ಧ್ಯಾನ ಮಾಡದಿದ್ದರೆ ಸತ್ಯದ ಅರಿವಾಗುವುದಿಲ್ಲ. ಈ ಶರೀರ, ಮನಸ್ಸು ಇದ್ದಹಾಗೆಯೇ ಉಳಿದುಬಿಡುತ್ತೇವೆ.
“ಅಹಂ ಆತ್ಮ ಗುಡಾಕೇಶ ಸರ್ವಭೂತಾಶಯಸ್ಥಿತಃ |
ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ || “
ನಾನು ಎಲ್ಲಾ ಕಡೆ ಇದ್ದೇನೆ. ನಾನು ಆದಿ… ಮಧ್ಯ… ಅಂತ್ಯವೂ ಸಹ ಆಗಿದ್ದೇನೆ. ಈ ಶರೀರ ಹುಟ್ಟುವುದಕ್ಕಿಂತಾ ಮುಂಚೆ ನಾನಿದ್ದೆ, ಹುಟ್ಟಿದನಂತರ ನಾನಿದ್ದೇನೆ, ಮರಣಿಸಿದನಂತರ ಸಹ ನಾನು ಇರುತ್ತೇನೆ. ಇಲ್ಲಿರುವವರೆಲ್ಲಾ ಕೂಡಾ ಎಲ್ಲಾ ಕಡೆ ಇದ್ದಾರೆ. ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳಿ ‘ನಾನು ಈ ಶರೀರ ಅಲ್ಲ, ಆತ್ಮ’.
ಪರಮಾತ್ಮನಿಗೆ ದುಃಖವಿಲ್ಲ… ಜೀವಾತ್ಮನಿಗೆ ಸದಾ ದುಃಖವೇ… ಏಕೆಂದರೆ, ಅವರು ಧ್ಯಾನ ಮಾಡಲಿಲ್ಲ. ಅವರು ಪರಮಾತ್ಮ ಎಂದು ತಿಳಿದುಕೊಳ್ಳಲಿಲ್ಲ. ಆದ್ದರಿಂದ, ಸದಾ ದುಃಖದಿಂದ ಇರುತ್ತಾರೆ. ಕೆಲವರು ಅಳಲಾರದೇ ನಗುತ್ತಿರುತ್ತಾರೆ. ಆದರೆ, ಒಳಗೆ ದುಃಖ ಇರುತ್ತದೆ. ನೀವು ಪರಮಾತ್ಮ ಆಗುವವರೆಗೂ ನಿಮ್ಮ ದುಃಖಕ್ಕೆ ಅಂತ್ಯವೇ ಇಲ್ಲ. ಮತ್ತು ನಿಮಗೆ ಆನಂದ ಸಿಗುವುದಿಲ್ಲ. ‘ನಾನು ಆತ್ಮ’ ಎನ್ನುವ ಸತ್ಯವನ್ನು ಅನುಭವಪೂರ್ವಕವಾಗಿ ತಿಳಿದುಕೊಳ್ಳಬೇಕಾದರೆ ನೀವು ಧ್ಯಾನ ಮಾಡಲೇಬೇಕು. ಯಾರಿಗೆ ಸತ್ಯ ತಿಳಿಯುವುದಿಲ್ಲವೊ ಅವರು ದುಃಖದಲ್ಲಿರುತ್ತಾರೆ. ಯಾರು ಸತ್ಯ ತಿಳಿದುಕೊಳ್ಳುತ್ತಾರೊ ಅವರು ಸದಾ ಪರಮಾನಂದದಲ್ಲಿರುತ್ತಾರೆ.
” ಯಾರು ಏನು ಬಯಸಿದರೆ ಅವರಿಗೆ ಅದು ಲಭಿಸುತ್ತದೆ “
ಕೌರವರು ನಿದ್ದೆಯಲ್ಲಿರುವವರು, ಪಾಂಡವರು ಎಚ್ಚರಿಕೆ ಸ್ಥಿತಿಯಲ್ಲಿರುವವರು. ಯಾರು ನಿದ್ದೆಯಿಂದ ಎಚ್ಚೆತ್ತುಕೊಳ್ಳಬೇಕು ಎಂದುಕೊಳ್ಳುತ್ತಾರೊ ಅವರನ್ನು ಎಬ್ಬಿಸುವವನೇ ಕೃಷ್ಣ. ಧ್ಯಾನ ಯಾರಿಗೆ ಬೇಕು ಎಂದುಕೊಳ್ಳುತ್ತಾರೊ ಅವರಿಗೆ ಧ್ಯಾನ ಬರುತ್ತದೆ; ಸಂಗೀತ ಯಾರಿಗೆ ಬೇಕು ಎಂದುಕೊಳ್ಳುತ್ತಾರೊ ಅವರಿಗೆ ಸಂಗೀತ ಬರುತ್ತದೆ “ಶ್ರದ್ಧಾವಾನ್ ಲಭತೇ ಜ್ಞಾನಂ” ಬಯಕೆ ಇರಬೇಕು. ಶ್ರದ್ಧೆ ಇರಬೇಕು, ಆಗಲೇ ಏನಾದರೂ ಸಾಧಿಸಬಹುದು.
ಧ್ಯಾನವನ್ನು, ಸತ್ಯವನ್ನು ಬಯಸಬೇಕು. ಆಗಲೇ ನಮಗೆ ಧ್ಯಾನ, ಸತ್ಯದ ಅರಿವು ಉಂಟಾಗುತ್ತದೆ. ಧ್ಯಾನ ಬೇಕೆಂದು ಬಯಸಿದರೆ ಧ್ಯಾನ ಬರುತ್ತದೆ… ಸಂಗೀತ ಬೇಕೆಂದು ಬಯಸಿದರೆ ಸಂಗೀತ ಬರುತ್ತದೆ. ನಾನು ವಯೊಲಿನ್ ನುಡಿಸಬೇಕೆಂದು ಬಯಸಿದರೆ ನುಡಿಸಲು ಬರುತ್ತದೆ ಇಲ್ಲದಿದ್ದರೆ ಬರುವುದಿಲ್ಲ. ಒಬ್ಬ ದೊಡ್ಡ ಕಲಾವಿದರಿಗೆ ಕೊಳಲು ನುಡಿಸಲು ಚೆನ್ನಾಗಿ ಬರುತ್ತದೆ. ಆದರೆ, ಅವರಿಗೆ ಧ್ಯಾನ ಮಾಡಲು ಬರುವುದಿಲ್ಲ. ಏತಕ್ಕಾಗಿ ಬರುವುದಿಲ್ಲ ಎಂದರೆ ಅವರು ಧ್ಯಾನ ಕಲಿಯಲು ಬಯಸಲಿಲ್ಲ. ನಾನೊಬ್ಬ ಯೋಗಿಯಾಗಬೇಕೆಂದು ಬಯಸಿದ್ದೇನೆ. ಆದ್ದರಿಂದ, ಒಬ್ಬ ಯೋಗಿ ಆಗಿದ್ದೇನೆ. ಯಾರು ಏನು ಬಯಸಿದರೆ ಅವರಿಗೆ ಅದು ಲಭಿಸುತ್ತದೆ. ಏನೂ ಬಯಸದಿದ್ದರೆ ಏನೂ ಸಿಗುವುದಿಲ್ಲ. ಮೋಕ್ಷ ಹೇಗೆ ಸಿಗುತ್ತದೆ? ದೇವರೇ ನನಗೆ ಮುಕ್ತಿ ಕೊಡಿ ಎಂದರೆ ಅಲ್ಲಿ ಮುಕ್ತಿ ಕೊಡುವವರು ಯಾರೂ ಇಲ್ಲ. ಆ ದೇವರು ನೀನೆ. ತತ್ವಮಸಿ ಶ್ವೇತಕೇತು. ನೀನೇ ಆ ಪರಬ್ರಹ್ಮ ಆಗಿರುವೆ. ಮೇಲೆ ಎಲ್ಲೋ ಯಾರೊ ಇದ್ದಾರೆಂದು ನೀನು ತಿಳಿದಿರುವೆ. ಅಲ್ಲಿ ಮೇಲೆ ಯಾರೂ ಇಲ್ಲ. ಅದು ನೀನೇ.
ಹೇಗೆ ಶರೀರಕ್ಕೆ ಊಟ ಬೇಕೋ ಹಾಗೆ ಆತ್ಮಕ್ಕೆ ಧ್ಯಾನ ಬೇಕು. ಶರೀರಕ್ಕೆ ಧ್ಯಾನ ಬೇಡ, ಆತ್ಮಕ್ಕೆ ಊಟ ಬೇಡ. ಶರೀರ ಶವವಾಗಿ ಬಿದ್ದರೆ ಅದಕ್ಕೆ ಧ್ಯಾನ ಬೇಡ. ಶರೀರದಲ್ಲಿ ಆತ್ಮ ಇರುವುದರಿಂದ ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನದ ಆವಶ್ಯಕತೆ ಇದೆ. ನಾವು ಇಲ್ಲಿ ಇದ್ದೇವೆ ಈ ಶರೀರದಲ್ಲಿದ್ದೇವೆ. ಆದ್ದರಿಂದ, ಆತ್ಮಕ್ಕೆ ಊಟ ಬೇಕು. ಆ ಊಟದ ಹೆಸರೇ ಧ್ಯಾನ ಧ್ಯಾನ… ಧ್ಯಾನ. ನಾವು ಅನೇಕ ಲೋಕಗಳಲ್ಲಿ ಇದ್ದೇವೆ. ಆದರೆ, ಸದ್ಯಕ್ಕೆ ಈಗ ನಾವು ಭೂಲೋಕವಾಸಿಗಳು. ಗತಕಾಲದಲ್ಲಿ ಯಾವ ಖಗೋಳದಲ್ಲಿ ಯಾವ ಪ್ರದೇಶದಲ್ಲಿ ಇದ್ದೇವೊ…! ಯಾವ ಆಯಾಮದಲ್ಲಿದ್ದೆವೊ, ಈ ಭೂಮಿ ಮೂರು ಡೈಮೆನ್ಷನ್ನಿಂದ ಕೂಡಿದೆ. ನಾಲ್ಕು, ಐದು, ಆರು… ಹೀಗೆ ಇನ್ನೂ ಅನೇಕಾನೇಕ ಡೈಮೆನ್ಷಗಳಿಂದ ಕೂಡಿದ ಲೋಕಗಳಿವೆ. ನಾವು ಅನೇಕಾನೇಕ ಡೈಮೆನ್ಷನ್ಗಳಿಂದ ಬಂದ ಜೀವಿಗಳು. ನಾವು ಅನೇಕ ಆಯಾಮಗಳಿಗೆ ಸಂಬಂಧಿಸಿದವರು. ಅನೇಕ ಆಯಾಮಗಳಲ್ಲಿ ಪ್ರಯಾಣಮಾಡುತ್ತಿರುತ್ತೇವೆ. ನಾವು cosmic travel ಮಾಡುತ್ತಿರುತ್ತೇವೆ. ನಾವು ಅನೇಕ ಆಯಾಮಗಳಲ್ಲಿ ಸ್ವತಂತ್ರವಾಗಿ ಪ್ರಯಾಣ ಮಾಡುತ್ತಿರುವ ಪರಮಾತ್ಮರು. ನಮಗೆ ಬಂಧನವಿಲ್ಲ. ನಾವು ಅಂದುಕೊಂಡರೆ ಮಾತ್ರವೇ ಬಂಧನ. ನಮ್ಮ ಇಷ್ಟದ ಪ್ರಕಾರ ಎಲ್ಲಾ ಕಡೆ ಸ್ವತಂತ್ರವಾಗಿ ವಿಹರಿಸುವ ಪರಮಾತ್ಮರು ನಾವು. ನಾವೆಲ್ಲರೂ ಅನೇಕ ಲೋಕಗಳಿಂದ ಭೂಮಿಗೆ ಒಳಿತನ್ನು ಮಾಡಲು ಬಂದ ಯಾತ್ರಿಕರು. ನಾವು ಈ ಭೂಲೋಕಕ್ಕೆ ಏತಕ್ಕಾಗಿ ಬಂದಿದ್ದೇವೆ. ನಾವು ಈ ಭೂಲೋಕಕ್ಕೆ ಅನೇಕಾನೇಕ ಖಗೋಳಗಳಿಂದ ಲೋಕಗಳಿಂದ ಯಾತ್ರೆಗಾಗಿ ಬಂದಿದ್ದೇವೆ. ನಾವು ಯಾತ್ರೆಯಲ್ಲಿದ್ದೇವೆ. ಕೆಲವು ದಿನಗಳ ಕಾಲ ನಾವು ಪೃಥ್ವಿಗೆ ಭೇಟಿಕೊಟ್ಟಿರುವ ನೆಂಟರು. ಅದನ್ನೇ ನಾವು ಮರೆತಿದ್ದೇವೆ. ಆದ್ದರಿಂದ, ದುಃಖದಲ್ಲಿದ್ದೇವೆ.
ಈ ಪ್ರಪಂಚದಲ್ಲಿ ಅತ್ಯುನ್ನತವಾದ ವಿಷಯ ಯಾವುದು ಎಂದು ಧರ್ಮರಾಜನಿಗೆ ಯಕ್ಷನು ಕೇಳಿದ. ಸ್ವಲ್ಪವೂ ಯೋಚಿಸದೆ ಯುಧಿಷ್ಟಿರನು; “ತನ್ನ ಸುತ್ತಾ-ಮುತ್ತಾ ಎಲ್ಲರೂ ಸಾಯುತ್ತಿದ್ದರೂ ನಾನು ಮಾತ್ರ ಸಾಯುವುದಿಲ್ಲವೆಂದು ಜನರು ತಿಳಿಯುವುದೇ ಆಶ್ಚರ್ಯಕರವಾದ ವಿಷಯ” ಎಂದು ಉತ್ತರಿಸಿದ. ನಾವು ಯಾವ ಕ್ಷಣದಲ್ಲಾದರೂ ಸಾಯಬಹುದು ಎಂದು ಯಾರು ಅರಿವಿನಿಂದ ಇರುತ್ತಾರೊ ಅವರೇ ‘ಪರಮಾತ್ಮ’.
“‘ಸಿರಿಯಸ್’ ಎನ್ನುವ ನಕ್ಷತ್ರ ಲೋಕವಾಸಿಗಳು ಈಜಿಪ್ಟ್ ಪಿರಮಿಡ್ಡನ್ನು ನಿರ್ಮಿಸಿದ್ದಾರೆ”
ಡಿಸೆಂಬರ್ 24ರಂದು ಪತ್ರೀಜಿಯವರ ಸಂದೇಶ: ನಮ್ಮ ಉದ್ದೇಶವೇನೆಂದರೆ, ಎಲ್ಲಾ ಕಡೆ ಪಿರಮಿಡ್ಗಳನ್ನು ನಿರ್ಮಿಸುವುದು. ಆದ್ದರಿಂದಲೇ, ನಮ್ಮ ಆಧ್ಯಾತ್ಮಿಕ ಸಂಸ್ಥೆಯ ಹೆಸರು “ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್ಮೆಂಟ್”. ಈ ಪಿರಮಿಡ್ ಮೂಲವಾದ ಈಜಿಪ್ಟ್ಗೂ ಭಾರತದೇಶಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮದು ಸಿಂಧೂನದಿ ನಾಗರಿಕತೆ. ಆದರೆ, ಆ ದೇಶದ್ದು ನೈಲ್ ನದಿ ನಾಗರಿಕತೆ. ಈ ಎರಡು ನಾಗರಿಕತೆಗಳೂ ತುಂಬಾ ಪುರಾತನವಾದದ್ದು. ಪಿರಮಿಡ್ ಅಂದರೆ ಏನು? ಪಿರಮಿಡ್ನಲ್ಲಿ ಎರಡು ಪದಗಳಿವೆ. ಪೈರಾ+ಅಮಿಡ್. ‘ಪೈರಾ’ ಅಂದರೆ ಶಕ್ತಿ, ‘ಅಗ್ನಿ’. ‘ಅಮಿಡ್’ ಅಂದರೆ, ‘ಮಧ್ಯದಲ್ಲಿ’ ಎಂದರ್ಥ. ಯಾವ ಕಟ್ಟಡದ ಮಧ್ಯದಲ್ಲಿ ಅಗ್ನಿ ಇರುತ್ತದೆಯೊ ಆ ಕಟ್ಟಡದ ಹೆಸರು “ಪಿರಮಿಡ್”. ಉಳಿದ ಕಟ್ಟಡಗಳು ಕೇವಲ ಕಟ್ಟಡಗಳು ಮಾತ್ರ. ಆದರೆ, ಮಧ್ಯದಲ್ಲಿ ಅಗ್ನಿ ಇಲ್ಲ. ಪಿರಮಿಡ್ನಲ್ಲಿ ಮಾತ್ರ ಮಧ್ಯದಲ್ಲಿ ಅಗ್ನಿಯಂತಹ ಶಕ್ತಿ ಇದೆ. ಆದ್ದರಿಂದ, ಅದನ್ನು ‘ಪೈರಾಮಿಡ್’ ಅಥವಾ ‘ಪಿರಮಿಡ್’ ಎಂದು ಕರೆಯಲಾಗುತ್ತಿದೆ. ಅನೇಕಾನೇಕ ನಿರ್ಮಾಣಗಳು ಬರುತ್ತವೆ. ಬಗೆಬಗೆಯ ಕೋನಗಳಿಂದ ಬಗೆಬಗೆಯ ಜಾಮೆಟ್ರಿಕಲ್ ಆಕಾರದಲ್ಲಿ ಯಾವುದರಲ್ಲೂ ಆ ಶಕ್ತಿ ಇರುವುದಿಲ್ಲ. ಕೇವಲ ಆ ಪಿರಮಿಡ್ನಲ್ಲಿ ಮಾತ್ರ ಅಂಥ ಶಕ್ತಿ, ಅಂಥ ಆಗ್ನಿ ಇರುತ್ತದೆ. ಆದ್ದರಿಂದ, ಅದನ್ನು ಪೈರಾಮಿಡ್ ಎಂದು ಕರೆಯಲಾಗುತ್ತದೆ. ಈಜಿಪ್ಟ್ ದೇಶದಲ್ಲಿ ಆ ಪಿರಮಿಡ್ಗಳನ್ನು ಸುಮ್ಮನೆ ತಮಾಷೆಗಾಗಿ ಕಟ್ಟಲಿಲ್ಲ. ಎಂತಹ ಮಹಾ ಕಟ್ಟಡಗಳೊ ಅವು? ದೊಡ್ಡದೊಡ್ಡ ಕಲ್ಲುಗಳನ್ನು ತಂದುಕಟ್ಟಿದ್ದಾರೆ. ಕಟ್ಟಿದ್ದು ಯಾರು? ಅದನ್ನು ನಕ್ಷತ್ರಲೋಕವಾಸಿಗಳು ಕಟ್ಟಿದ್ದಾರೆ. ಮಾನವಮಾತ್ರರು ಯಾರೂ ಆ ಪಿರಮಿಡ್ಗಳನ್ನು ನಿರ್ಮಿಸಲಿಲ್ಲ. ‘ಸಿರಿಯಸ್’ ಎನ್ನುವ ನಕ್ಷತ್ರಲೋಕವಿದೆ. ಅಲ್ಲಿಯ ನಕ್ಷತ್ರವಾಸಿಗಳು ಭೂಲೋಕಕ್ಕೆ ಬಂದು ಇಲ್ಲಿ ಒಂದು ದೊಡ್ಡ ಶಕ್ತಿ ಕೇಂದ್ರದ ಮೂಲಕ ಎಲ್ಲರಿಗೂ ಧ್ಯಾನವನ್ನು ಹೇಳಿಕೊಡಬೇಕೆಂದು ಸಂಕಲ್ಪಿಸಿ, ತಮ್ಮ ಆತ್ಮಶಕ್ತಿಯಿಂದ ಯಾವ ಪರಿಕರವನ್ನೂ ಉಪಯೋಗಿಸದೆ, ಆ ಬೃಹತ್ ಆಕಾರದಲ್ಲಿರುವ ಕಲ್ಲುಗಳನ್ನು ಸಮವಾಗಿ ತುಂಡರಿಸಿ ಧ್ಯಾನಶಕ್ತಿಯನ್ನು, ಆತ್ಮಶಕ್ತಿಯನ್ನು ಬಳಸಿ ಆ ಕಲ್ಲುಗಳನ್ನು ಜೋಡಿಸಿದ್ದಾರೆ. (ಯಾರೂ ಸಹ ತಮ್ಮ ಶರೀರ ಶಕ್ತಿ ಉಪಯೋಗಿಸಿ, ಕಲ್ಲುಗಳನು ಕೈಗಳಿಂದ ಎತ್ತಿ ಇಡಲಿಲ್ಲ). ‘ಸಿರಿಯಸ್’ ನಕ್ಷತ್ರಲೋಕವಾಸಿಗಳ ಅಪಾರವಾದ ಧ್ಯಾನಶಕ್ತಿಯಿಂದ ಈಜಿಪ್ಟ್ನಲ್ಲಿ ಆ ಪಿರಮಿಡ್ ನಿರ್ಮಿಸಲಾಗಿದೆ. ಅಂತಹ ಪಿರಮಿಡ್ಗಳು ವಿಶ್ವದಾದ್ಯಂತ್ಯ ನಿರ್ಮಿಸಲಾಗಬೇಕೆಂದು ನಾವೆಲ್ಲಾ ಈ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿನಲ್ಲಿ ಬಂದು ಸೇರಿದ್ದೇವೆ. ನಾವೆಲ್ಲಾ ಏತಕ್ಕಾಗಿ ಈ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿನಲ್ಲಿದ್ದೇವೆ ಎಂದರೆ ವಿಶ್ವದಾದ್ಯಂತ, ಭಾರತದೇಶದಾದ್ಯಂತ, ಈ ಆಂಧ್ರಪ್ರದೇಶದಾದ್ಯಂತ ಪಿರಮಿಡ್ಗಳನ್ನು ನಿರ್ಮಿಸಲಿಕ್ಕಾಗಿಯೆ. ಈಗಾಗಲೇ ಈ ಆಂಧ್ರಪ್ರದೇಶದಲ್ಲಿ ಅನೇಕಾನೇಕ ಪಿರಮಿಡ್ಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ಆಂಧ್ರಪ್ರದೇಶದಲ್ಲಿ ಹತ್ತು ಸಾವಿರ ಪಿರಮಿಡ್ಗಳಿವೆ. ಚಿಕ್ಕ ಚಿಕ್ಕ ಊರಿಗಳಲ್ಲೂ ಪಿರಮಿಡ್ಗಳಿವೆ. ಆದರೆ, ಈ ಕಡ್ತಾಲ್ ನಲ್ಲಿರುವ ಈ ಪಿರಮಿಡ್ ತುಂಬಾ ದೊಡ್ಡದು.
ಆ ನಕ್ಷತ್ರಲೋಕಗಳಿಂದ ಶಕ್ತಿಯು ನೇರವಾಗಿ ಭೂಮಂಡಲಕ್ಕೆ ಹರಿಯಬೇಕೆಂದೇ ಈಜಿಪ್ಟ್ನಲ್ಲಿ ಪಿರಮಿಡ್ ನಿರ್ಮಿಸಲಾಗಿದೆ. ಹಾಗೆಯೆ, ಒಂದು ಪಿರಮಿಡ್ನಿಂದ ಇನ್ನೊಂದು ಪಿರಮಿಡ್ಗೆ ಆ ಶಕ್ತಿಯು ಪ್ರಸಾರವಾಗುತ್ತದೆ. ನಮ್ಮ ಆಂಧ್ರಪ್ರದೇಶದಲ್ಲಿರುವ ಪಿರಮಿಡ್ಗಳೆಲ್ಲಾ ಒಂದು Energy grid, Energy network ಗೆ ಸೇರಿವೆ. ಎಲ್ಲೆಲ್ಲಿ ನೂತನವಾಗಿ ಪಿರಮಿಡ್ಗಳು ನಿರ್ಮಿಸಲಾಗುತ್ತದೆಯೊ ಆ ಶಕ್ತಿಯು ಎಲ್ಲಾ ಆ ನೂತನ ಪಿರಮಿಡ್ಗಳ ಕಡೆ ಹರಿಯುತ್ತದೆ. ಆ ಶಕ್ತಿಯು ಬೇರೆ ಎಲ್ಲೂ ಹರಿಯುವುದಿಲ್ಲ. ಆ ಪಿರಮಿಡ್ನ ಅಂಥಾ ಆಕಾರದಲ್ಲೇ, ಅದರ ಮಧ್ಯದಲ್ಲಿಯೇ ಆ ಶಕ್ತಿ ಇರುತ್ತದೆ. ಆ ಶಕ್ತಿಯು ಸ್ವಸ್ಥತೆಗೆ, ವಿಶ್ರಾಂತಿಗೆ, ಮೇಥಾಶಕ್ತಿ ಅಭಿವೃದ್ಧಿ ಆಗಲು, ನಿಮ್ಮ ದಿವ್ಯಚಕ್ಷುವು ಉತ್ತೇಜಿತವಾಗಲು, ಆ ಶಕ್ತಿಕ್ಷೇತ್ರ, ಆ ಪಿರಮಿಡ್ ಉಪಯುಕ್ತವಾಗಿದೆ. ಆ ಕೋನಗಳಲ್ಲಿ ಅಲ್ಪಸ್ವಲ್ಪವೇ ವ್ಯತ್ಯಾಸವಾದರೂ ಸಹ ಆ ಶಕ್ತಿ ಬರುವುದಿಲ್ಲ. 51ಡಿಗ್ರಿ 51’ ಯೇ ಇರಬೇಕು. ಇಲ್ಲದಿದ್ದರೇ ಆ ಶಕ್ತಿ ಸಂಗ್ರಹವಾಗುವುದಿಲ್ಲ. ಹೇಗೆ ಒಬ್ಬ ಮೂಕನಿಗೆ ಎಲ್ಲಾ ಅಂಗಾಂಗಳಿದ್ದರೂ ಬಾಯಿ ಇಲ್ಲದ ಕಾರಣದಿಂದ ಅವನು ಮಾತನಾಡಲಾರನೋ, ಹಾಗೆ, ಪಿರಮಿಡ್ನ ಕೋನಗಳನ್ನು ಸ್ವಲ್ಪ ಆ ಕಡೆ ಈ ಕಡೆ ಮಾಡಿದರೂ ಒಳಗೆ ಆ ಶಕ್ತಿ ಇರುವುದಿಲ್ಲ. ಆಗ ಕೇವಲ ಕಟ್ಟಡ ಮಾತ್ರ ಇರುತ್ತದೆ. ಪಿರಮಿಡ್ ಕಟ್ಟಡಗಳು ಮಾತ್ರ ವಾಕ್ಇರುವ ಕಟ್ಟಡಗಳು, ಶಕ್ತಿ ಇರುವ ಕಟ್ಟಡಗಳು. ಆದ್ದರಿಂದ, ಎಲ್ಲಾ ಕಡೆ ಪಿರಮಿಡ್ಗಳನ್ನು ನಿರ್ಮಿಸಲೇಬೇಕು. ಈ ಪಿರಮಿಡ್ ಶಕ್ತಿ ಕ್ಷೇತ್ರಗಳು ನಕ್ಷತ್ರವಾಸಿಗಳ ಕೊಡುಗೆಗಳು ಎಂದು ನಾವು ಎಲ್ಲರಿಗೂ ತಿಳಿಸಬೇಕು. ಅವರು ಭೂಲೋಕವಾಸಿಗಳಿಗೆ ಪ್ರೀತಿಯಿಂದ ಕೊಟ್ಟ ಬಹುಮಾನಗಳಿವು ಎಂದು ಎಲ್ಲರಿಗೂ ತಿಳಿಸಬೇಕು. ನಾವೆಲ್ಲಾ ಸಹ ನಕ್ಷತ್ರವಾಸಿಗಳೇ. ಅಲ್ಲಿಂದ ಭೂಲೋಕಕ್ಕೆ ಬಂದು ಪ್ರತಿಯೊಂದು ಹಳ್ಳಿಹಳ್ಳಿಯಲ್ಲೂ ಪ್ರತಿಯೊಂದು ಊರುಗಳಲ್ಲೂ, ಪಟ್ಟಣಗಳಲ್ಲೂ ಪಿರಮಿಡ್ಗಳನ್ನು ನಿರ್ಮಿಸಲಿಕ್ಕಾಗಿಯೆ ಬಂದಿದ್ದೇವೆ. ಧ್ಯಾನ ವಿಧವಿಧವಾಗಿ ಅಭಿವೃದ್ಧಿ ಹೊಂದುತ್ತದೆ. ಸಂಗೀತದಿಂದ ಕೂಡಿದ ಧ್ಯಾನ ಮೂರುಪಟ್ಟು ಅಧಿಕ ಶಕ್ತಿಯುಳ್ಳದ್ದು. ಜನರು ಸಾಮೂಹಿಕವಾಗಿ ಕುಳಿತು ಮಾಡುವ ಧ್ಯಾನ ಬಹಳಷ್ಟು ಶಕ್ತಿ ಉಳ್ಳದ್ದು…! ಹಾಗೆಯೇ, ಪಿರಮಿಡ್ನಲ್ಲಿ ಕುಳಿತು ಮಾಡುವ ಧ್ಯಾನವು ಮೂರು ಪಟ್ಟು ಹೆಚ್ಚು ಫಲ ನೀಡುವಂತಹದ್ದು. ‘ನಾದ ಧ್ಯಾನ’, ‘ಸಾಮೂಹಿಕ ಧ್ಯಾನ’, ’ಪಿರಮಿಡ್ ಧ್ಯಾನ’, ‘ಅರಣ್ಯದಲ್ಲಿ ಧ್ಯಾನ’ ಇವುಗಳಲ್ಲಿ ಯಾವುದೇ ಆದರೂ ಅದು ಸಾಮಾನ್ಯ ಧ್ಯಾನಕ್ಕಿಂತ ಮೂರು ಪಟ್ಟು ಶಕ್ತಿಯುತವಾದುದು.
ಪೂರ್ವಕಾಲದಲ್ಲಿ ಋಷಿ, ಮುನಿಗಳು ಅರಣ್ಯಕ್ಕೆ ಹೋಗಿ ಧ್ಯಾನ ಮಾಡುತ್ತಿದ್ದರು. ಏಕೆಂದರೆ, ಜನ ಸಮೂಹದಲ್ಲಿ ನಕಾರಾತ್ಮಕ ಭಾವನೆಗಳು ಹೆಚ್ಚು. ಅರಣ್ಯದಲ್ಲಿನ ಪ್ರತಿ ಪ್ರಾಣಿಯೂ ದೇವರ ಸಮಾನ. ಪ್ರತಿಯೊಂದು ವೃಕ್ಷವೂ ಮಹತ್ತರವಾದದ್ದು. ಅಲ್ಲಿ ಇರುವುದೆಲ್ಲಾ ದೈವಶಕ್ತಿ. ಅಲ್ಲಿ ಮಾನವರು ಯಾರೂ ಇರುವುದಿಲ್ಲ. ಆದ್ದರಿಂದ, ಅದು ದೊಡ್ಡ ಶಕ್ತಿಕ್ಷೇತ್ರ. ಮಾನವರ ಸಂಕುಚಿತ ಸ್ವಭಾವ, ನಕಾರಾತ್ಮಕ ಆಲೋಚನೆಗಳಿಂದ ಕೂಡಿರುತ್ತಾರೆ. ಅರಣ್ಯದಲ್ಲಿ ಪ್ರತಿಯೊಂದು ವೃಕ್ಷ, ಪ್ರಾಣಿಪಕ್ಷಿಗಳು ದೈವತ್ವದಿಂದ, ಶಕ್ತಿಯಿಂದ ತುಂಬಿದೆ ಆದ್ದರಿಂದ, ಅಲ್ಲಿ ಧ್ಯಾನ ಮಾಡುವುದರಿಂದ ಮೂರುಪಟ್ಟು ಅಧಿಕಶಕ್ತಿ ಉಂಟಾಗುತ್ತದೆ. ಹಾಗೆಯೆ, ಯಾರಾದರೂ ಒಬ್ಬ ಯೋಗಿ ದೇಹತ್ಯಾಗ ಮಾಡಿದಾಗ ಆ ದೇಹವನ್ನು ಸಮಾಧಿ ಮಾಡಿದನಂತರ ಅವರ ಸಮಾಧಿ ಹತ್ತಿರ ಕುಳಿತು ಧ್ಯಾನ ಮಾಡುವುದರಿಂದ ಕೂಡಾ ನಮಗೆ ಮೂರುಪಟ್ಟು ಅಧಿಕಶಕ್ತಿ ಬರುತ್ತದೆ. ಇದನ್ನೇ ನಾವು ‘ಸಮಾಧಿ ಧ್ಯಾನ’ ಎನ್ನುತ್ತೇವೆ.
ಪಿರಮಿಡ್ ಮಾಸ್ಟರ್ಸ್ ಎಲ್ಲರೂ ನಕ್ಷತ್ರಲೋಕಗಳಿಂದ ಇಳಿದುಬಂದು ಸದ್ಯಕ್ಕೆ ಭೂಲೋಕವಾಸಿಗಳಾಗಿದ್ದಾರೆ. ನಾವು ಸದ್ಯಕ್ಕೆ ಈ ಭೂಲೋಕದಲ್ಲಿದ್ದೇವೆ. ಆದರೆ, ನಾವು ಯಾವ ಲೋಕಕ್ಕೂ ಸೇರಿದವರಲ್ಲ. ನಮ್ಮ ಹಿಂದಿನ ಚರಿತ್ರೆ ತುಂಬಾ ವೈಭವೋಪೇತವಾದದ್ದು. ವಿಶ್ವವೆಂಬ ಮಹಾಕ್ಷೇತ್ರದಲ್ಲಿ ಈ ಭೂಮಿಯು ಒಂದು ಪುಟ್ಟ ಗ್ರಾಮ. ಈ ವಿಶ್ವದಲ್ಲಿ ಅನೇಕಾನೇಕ ಲೋಕಗಳಿಂದ ಆತ್ಮಗಳು ಬಂದೂ ಹೋಗಿ ಮಾಡುತ್ತಿರುತ್ತವೆ. ಇದನ್ನು ಅರಿತುಕೊಳ್ಳುವುದೇ ‘ಎನ್ಲೈಟೆನ್ಮೆಂಟ್’. ಈ ಭೂಲೋಕದಲ್ಲಿ ಮಾತ್ರ ಜೀವಿಗಳಿವೆ. ಇನ್ನು ಎಲ್ಲೂ ಜೀವಿಗಳಿಲ್ಲ ಎಂದು ತಿಳಿದುಕೊಂಡಿರುವವರು ಮೂರ್ಖರು. ಭೂಮಿಯ ಮೇಲಿನ ಒಂದು ಹಳ್ಳಿಯಲ್ಲಿರುವವರು ಇದೇ ಪ್ರಪಂಚ ಇನ್ನು ಬೇರೆ ಪ್ರಪಂಚವಿಲ್ಲ ಎಂದು ಭಾವಿಸಿದ್ದರೆ, ಅದು ಬಾವಿಯಲ್ಲಿನ ಕಪ್ಪೆಯ ಕಥೆಯಂತೆ. ಅಂಥವರನ್ನು ‘ಕೂಪಮಂಡೂಕ’ ಎನ್ನುತ್ತಾರೆ ಅದು ಹೇಗೆ ಒಂದು ಸಲ ಬಾವಿಯಿಂದ ಹೊರ ಬಂದರೆ ಈ ವಿಶಾಲ ಸೃಷ್ಟಿ ನೋಡಿ ಆಶ್ಚರ್ಯಪಡುತ್ತದೆಯೋ, ಹಾಗೆ, ಈ ಭೂಲೋಕದಲ್ಲಿ ಮಾತ್ರ ಜೀವ ಇದೆ, ಇನ್ನು ಎಲ್ಲೂ ಜೀವಾತ್ಮ ಇಲ್ಲ ಎಂದು ಭಾವಿಸುವವರು ಬಾವಿಯಲ್ಲಿರುವ ಕಪ್ಪೆಯಂಥವರು. ಪಿರಮಿಡ್ ಮಾಸ್ಟರ್ಸ್ ಯಾರೆಂದರೆ ಬಾವಿಯಿಂದ ಹೊರಬಂದ ಕಪ್ಪೆಗಳು. ಬಾವಿಯಲ್ಲಿರುವ ಕಪ್ಪೆಗೆ ಬಾವಿಯಿಂದ ಹೊರಬರುವುದೇ ಒಂದು ಮಹಾಅನುಭವ.
ಧ್ಯಾನ ಮಾಡಿದೇ ಇರುವವರು, ಖಗೋಳ ಜ್ಞಾನ ಇಲ್ಲದಿರುವವರು, ಆತ್ಮಜ್ಞಾನ ಇಲ್ಲದಿರುವವರು ಬಾವಿಯಲ್ಲಿರುವ ಕಪ್ಪೆಗಳು. ಧ್ಯಾನ ಮಾಡುವವರು ಬಾವಿಯಿಂದ ಹೊರಬಂದ ಕಪ್ಪೆಗಳಿದ್ದಂತೆ. ಆತ್ಮಜ್ಞಾನ ಸಂಪಾದಿಸಿ ‘ಮಮಾತ್ಮ ಸರ್ವಭೂತಾತ್ಮ’ ಎಂದು ಅರಿತಿರುವವರು; ನಾನು ಈ ಶರೀರವಲ್ಲ, ನಾನು ಆತ್ಮ ಎಂದು ಅನುಭವದ ಮೂಲಕ ಅರಿತಿರುವವರು ಇವರೆಲ್ಲರೂ ಬಾವಿಯಿಂದ ಹೊರಬಂದ ಕಪ್ಪೆಗಳು. ಇವರೆಲ್ಲರೂ ಮಹಾನುಭಾವರು. ತ್ಯಾಗರಾಜಸ್ವಾಮಿ ಸಂಗೀತಕಚೇರಿ ಮಾಡುವಾಗ ಹತ್ತಾರು ಜನ ಅವರ ಹಾಡನ್ನು ಕೇಳಲೆಂದು ಅಲ್ಲಿ ಬಂದು ಕುಳಿತಿದ್ದರು. ಆದರೆ, ಅಲ್ಲಿ ಒಬ್ಬನೂ ಮಹಾನುಭಾವನಿಲ್ಲ. ನಕ್ಷತ್ರಲೋಕವಾಸಿಗಳು ಇವರ ಹಾಡನ್ನು ಕೇಳಲು ಬಂದು ಕುಳಿತಿದ್ದರು. ಅವರನ್ನೆಲ್ಲರನ್ನೂ ಇವರು ದಿವ್ಯಚಕ್ಷುವಿನಿಂದ ನೋಡಬಲ್ಲರಾದರು. ಅವರೆಲ್ಲರನ್ನೂ ಉದ್ದೇಶಿಸಿ ಇವರು ‘ಎಂದರೋ ಮಹಾನುಭಾವುಲು’ ಎನ್ನುವ ಕೀರ್ತನೆಯನ್ನು ಹಾಡಿದರು. ಅಲ್ಲಿ ಹತ್ತು ಜನ ಶರೀರಧಾರಿಗಳು ಕುಳಿತ್ತಿದರೆ ಉಳಿದ ‘990 ಜನ ಅಶರೀರಧಾರಿಗಳಾಗಿ ಅಲ್ಲಿ ಕುಳಿತಿದ್ದನ್ನು ನೋಡಿ ಆಗ ಅವರು ಈ ಸುಮಧುರ ಕೀರ್ತನೆಯನ್ನು ಹಾಡಿದರು. ಅವರು ತಮ್ಮ ಮೂರನೆಯ ಕಣ್ಣಿನಿಂದ ಸಾವಿರಾರುಜನ ನಕ್ಷತ್ರಲೋಕವಾಸಿಗಳನ್ನು ಕಂಡು ಹಾಡಿದಂಥ ಕೀರ್ತನೆ ಇದು.
ಈ ಧ್ಯಾನಮಹಾಚಕ್ರಕ್ಕಾಗಿ, ಹೇಗೆ, ನೀವೆಲ್ಲಾ ಅನೇಕ ಪ್ರಾಂತಗಳಿಂದ ಈ ಹತ್ತುದಿನ ಇರಲು, ಸಂಭ್ರಮಗಳನ್ನು ಆಚರಿಸಲು, ಧ್ಯಾನ ಮಾಡಲು ಬಂದಿರುವಿರೊ, ಹಾಗೆ, ಅನೇಕ ಲೋಕಗಳಿಂದ ನಕ್ಷತ್ರಲೋಕವಾಸಿಗಳು ಈಗ ಇಲ್ಲಿಗೆ ಬಂದಿದ್ದಾರೆ. ಸಾಮಾನ್ಯವಾಗಿ ಸಂಗೀತ ಕಚೇರಿಗಳಲ್ಲಿ ನಡೆಯುವ ಸಂಗೀತ ಬೇರೆ ಈ ಧ್ಯಾನ ಮಂದಿರದಲ್ಲಿ ನಡೆಯುವ ಸಂಗೀತ ಕಚೇರಿ ಬೇರೆ. ಆದ್ದರಿಂದ, ಈ ಧ್ಯಾನಿಗಳ ನಡುವೆ ನಡೆಯುವ ಸಂಗೀತವನ್ನು ಆಲಿಸಲು ನಕ್ಷತ್ರವಾಸಿಗಳು ಈ ಹತ್ತು ದಿನಗಳ ಕಾಲ ಇಲ್ಲಿಗೆ ಬಂದಿದ್ದಾರೆ. ಅದು ಮೂರನೆಯ ಕಣ್ಣು ಇರುವವರಿಗೆ ಮಾತ್ರ ಕಾಣುತ್ತದೆ. ಇಲ್ಲದಿದ್ದರೆ ಕಾಣುವುದಿಲ್ಲ. ಬಹುತೇಕ ಜನರಿಗೆ ಕಾಣಿಸಿಲ್ಲವೆಂದು ಇಲ್ಲಿ ಅವರಿಲ್ಲ ಎಂದು ಅರ್ಥವಲ್ಲ. ನೀರಿನಲ್ಲಿ ಬ್ಯಾಕ್ಟೀರಿಯಾ ಇರುತ್ತದೆ. ಆದರೆ, ಈ ಕಣ್ಣುಗಳಿಗೆ ಅದು ಕಾಣಿಸುವುದಿಲ್ಲ. ಹಾಗೆಂದು, ಅಲ್ಲಿ ಬ್ಯಾಕ್ಟೀರಿಯಾ ಇಲ್ಲವೆ? ವೈರಸ್ ಇಲ್ಲವೆ? ಮೈಕ್ರೋಸ್ಕೋಪ್ ಇಟ್ಟುಕೊಂಡರೆ ಆ ಬ್ಯಾಕ್ಟೀರಿಯಾ ಕಾಣುತ್ತದೆ, ಬೃಹತ್ ಆಕಾರದಲ್ಲಿ ಕಾಣುತ್ತದೆ. ಅನೇಕ ನಕ್ಷತ್ರಗಳು ನಮಗೆ ಕಾಣುವುದಿಲ್ಲ. ಆದರೆ, ಟೆಲಿಸ್ಕೋಪ್ ಇಟ್ಟು ನೋಡಿದರೆ ಮಿನುಗುತ್ತಿರುವ ಅನೇಕ ನಕ್ಷತ್ರಗಳು ನಮಗೆ ಕಾಣುತ್ತವೆ.
” ನನ್ನ ತಂದೆಯ ಸಾಮ್ರಾಜ್ಯದಲ್ಲಿ ಅನೇಕ ಲೋಕಗಳು, ಅನೇಕ ಆಯಾಮಗಳಿವೆ “
ಡಿಸೆಂಬರ್ 25 ರಂದು ಪತ್ರೀಜಿಯವರ ಸಂದೇಶ: ಪ್ರಿಯ ಸ್ನೇಹಿತರೇ, ಪ್ರಿಯ ಮಾಸ್ಟರ್ಗಳೇ, ಪ್ರಿಯ ದೇವರುಗಳೇ, ಜೀಸಸ್ ಕ್ರೈಸ್ಟ್ ಏನು ಹೇಳಿದರೆಂದರೆ “ನನ್ನ ತಂದೆಯ ಸಾಮ್ರಾಜ್ಯದಲ್ಲಿ ಅನೇಕ ಲೋಕಗಳು, ಅನೇಕ ಆಯಾಮಗಳಿವೆ”. ಸದಾ ನಾವು ಈ ಪೃಥ್ವಿಯ ಬಗ್ಗೆಯೇ ಯೋಚಿಸುತ್ತೇವೆ. ಈ ಭೂಮಿ ಎನ್ನುವ ಬಾವಿಯಲ್ಲಿ ಕಪ್ಪೆಯ ಹಾಗಿರುತ್ತೇವೆ. ಆದರೆ, ನನ್ನ ತಂದೆಯ ರಾಜ್ಯದಲ್ಲಿ ಅನೇಕಾನೇಕ ಆಯಾಮಗಳು, ಲೋಕಗಳಿವೆ ಎಂದು ಏಸು ತಿಳಿಸಿದರು. ಇಷ್ಟು ಅಷ್ಟು ಅಂತ ಹೇಳಲಾರದಷ್ಟು ಲೋಕಗಳಿವೆ. ಅನೇಕಾನೇಕ ಆಯಾಮಗಳು ಈ ಸೃಷ್ಟಿಯಲ್ಲಿವೆ. ಈ ಭೂಮಂಡಲವೆಲ್ಲಾ ಮೂರನೆಯ ಆಯಾಮಕ್ಕೆ ಸೇರಿದ್ದು. ನಾಲ್ಕನೆಯ ಆಯಾಮದ ಲೋಕವಿದೆ. ಅದು ಈ ಮೂರನೆಯ ಆಯಾಮಕ್ಕೆ ಕಾಣುವುದಿಲ್ಲ. ಅದರೆ, ಆ ನಾಲ್ಕನೆಯ ಆಯಾಮ ಎನ್ನುವುದು ಈ ಮೂರನೆಯ ಆಯಾಮಕ್ಕಿಂದ ದೊಡ್ಡದಾಗಿದೆ. ಹಾಗೆ 5th 6th 7th 8th 9th 10th ಸಾವಿರ, ಲಕ್ಷ ಮುಂತಾದ ಅನೇಕಾನೇಕ ಆಯಾಮಗಳು, ಲೋಕಗಳಿವೆ. ಅದು ತಿಳಿದುಕೊಂಡಿರುವವರೇ ಬಾವಿಯಿಂದ ಹೊರಬಂದ ಕಪ್ಪೆ ಇದ್ದ ಹಾಗೆ. ಒಬ್ಬ ಬುದ್ಧ ಆಗಲಿ, ಒಬ್ಬ ಮಹಮ್ಮದ್ ಆಗಲಿ, ಒಬ್ಬ ಏಸು ಪ್ರಭುವಾಗಲಿ, ಇವರೆಲ್ಲಾ ಕೂಡಾ ಬಾವಿಯಿಂದ ಬಂದ ಕಪ್ಪೆಗಳಿದ್ದಂತೆ. ಅವರೆಲ್ಲರೂ ಎನ್ಲೈಟೆಂಡ್ ಮಾಸ್ಟರ್ಗಳು, ಈ ಶರೀರ ನಾನಲ್ಲ ಎನ್ನುವ ಭಾವನೆಯಿಂದ ಹೊರಬಂದ ಕಪ್ಪೆಗಳು. ಹೊರಬಂದನಂತರ, ಓಹೋ… ಎಷ್ಟು ಆಯಾಮಗಳು ಕಾಣುತ್ತಿವೆ. ಎಷ್ಟು ಲೋಕಗಳು ಕಾಣುತ್ತಿವೆ ಎಂದು ಅನುಭವದಿಂದ ತಿಳಿದುಕೊಂಡಿರುವವರು. ಅದು ಹೇಗೆ ಕಾಣುತ್ತೆ. ಕಾಣಲು ಏನು ಮಾಡಬೇಕು. ಈ ಅಜ್ಞಾನ ಎನ್ನುವ ಬಾವಿಯಿಂದ ಹೊರ ಬರುವುದು ಹೇಗೆ. ದೇಹಪ್ರಜ್ಞೆಯಿಂದ (ಬಾಡಿ ಕಾನ್ಷಿಯಸ್) ಹೊರಗೆ ಬರಲಾರೆವು. ಈ ಎರಡು ಕಣ್ಣು ಒಂದು ಕಣ್ಣು ಆಗಬೇಕು. ಅಂದರೆ, ಎರಡು ಚರ್ಮಚಕ್ಷುಗಳನ್ನು ಮುಚ್ಚಿ ಶ್ವಾಸವನ್ನು ಗಮನಿಸುತ್ತಿದ್ದರೆ ನಮ್ಮ ದಿವ್ಯಚಕ್ಷು ತೆರೆದುಕೊಳ್ಳುತ್ತದೆ. ಎರಡು ಚಕ್ಷುಗಳು, ಅಂದರೆ, ಮೊದಲನೆಯದು ಚರ್ಮಚಕ್ಷುಗಳು, ಎರಡನೆಯದು ಮನೋಚಕ್ಷು ಮನಸ್ಸಿನಿಂದ ಆನೇಕ ವಿಷಯಗಳನ್ನು ಚಿತ್ರಿಸಿಕೊಳ್ಳುತ್ತಿರುತ್ತೇವೆ. ಅದನ್ನು ಕೂಡಾ ಮುಚ್ಚಬೇಕು ಆಗ, ದಿವ್ಯಚಕ್ಷುವು, ಅಂದರೆ, ಮೂರನೆಯ ಕಣ್ಣು ತೆರೆಯಲ್ಪಡುತ್ತದೆ. ಆಗ ನೀನು ದೇವರ ರಾಜ್ಯದಲ್ಲಿ ಪ್ರವೇಶಿಸಬಹುದು. ಅದುವರೆಗೂ ನಿನಗೆ ಆ ದೇವರ ರಾಜ್ಯದಲ್ಲಿ ಪ್ರವೇಶವಿಲ್ಲ. ಅಲ್ಲಿ ದೇವರ ರಾಜ್ಯದಲ್ಲಿ ಕೋಟ್ಯಾಂತರ ಲೋಕಗಳು, ಆಯಾಮಗಳಿವೆ. ಅವೆಲ್ಲವನ್ನೂ ತಿಳಿಯಬೇಕಾದರೆ ಚರ್ಮಚಕ್ಷುಗಳು, ಮನೋಚಕ್ಷುಗಳನ್ನು ಮುಚ್ಚಿ, ಮೂರನೆಯ ಕಣ್ಣು ಎಂದು ಕರೆಯಲಾಗುವ ದಿವ್ಯಚಕ್ಷುವನ್ನು ಉತ್ತೇಜಿಸಿಕೊಳ್ಳಬೇಕು. ಆಗ ನಾವು ಬಾವಿಯಿಂದ ಹೊರಬಂದ ಕಪ್ಪೆಗಳಂತಾಗುತ್ತೇವೆ. ನಾವು ಧ್ಯಾನದಲ್ಲಿ ಎರಡು ಕಣ್ಣುಗಳನ್ನು ಮುಚ್ಚಿಕೊಳ್ಳುತ್ತೇವೆ. ಮೊದಲನೆಯದಾದ ಚರ್ಮಚಕ್ಷುಗಳನ್ನು ಮುಚ್ಚಿದರೇನೆ ಎರಡನೆಯದಾದ ಮನೋಚಕ್ಷುವಿನ ಹತ್ತಿರ ಹೋಗಬಹುದು. ಅದು ಆಗ ಭೂತ, ಭವಿಷ್ಯತ್ ಕುರಿತು ಅನೇಕಾನೇಕ ವಿಷಯಗಳು ಯೋಚಿಸುತ್ತಿರುತ್ತದೆ. ಇದೇ ಎರಡನೆಯ ಚಕ್ಷು. ಎರಡನೆಯ ಚಕ್ಷುವಿನಲ್ಲಿ ಪ್ರವೇಶಿಸಬೇಕಾದರೆ ಮೊದಲನೆಯ ಚಕ್ಷುವನ್ನು ಮುಚ್ಚಬೇಕು. ಮನೋಚಕ್ಷುವಿನಿಂದ ಸಹ ನಾವು ಮೇಲಕ್ಕೆ ಏರಬೇಕು. ಅದೇ ದಿವ್ಯಚಕ್ಷು. ಈ ಚರ್ಮಚಕ್ಷುಗಳನ್ನೂ ಮತ್ತು ಮನೋಚಕ್ಷುವನ್ನು ಮುಚ್ಚದೆ ಮೂರನೆಯ ಕಣ್ಣು ತೆರೆದುಕೊಳ್ಳುವುದಿಲ್ಲ. ದಿವ್ಯಚಕ್ಷುವು ತೆರೆದುಕೊಳ್ಳದೆ ನಾವು ದೇವರ ರಾಜ್ಯದಲ್ಲಿ ಪ್ರವೇಶಿಸಲಾರೆವು.
ಈಗ ನನಗೆ ಈ ಕಣ್ಣಿಗೆ ಕಾಣುವ ಪ್ರಪಂಚ ಬೇಡ, ಕಣ್ಣಿಗೆ ಕಾಣದಪ್ರಪಂಚ ನಾನು ನೋಡಬೇಕು. ಹಾಗೆ ನೋಡ ಬೇಕಾದರೆ ನಾನು ಶ್ವಾಸವನ್ನು ಗಮನಿಸುತ್ತಿರಬೇಕು. ಆಗ ನನ್ನ ಮೂರನೆಯ ಕಣ್ಣು ತೆರೆದುಕೊಂಡು ನನಗೆ ಅನೇಕಾನೇಕ ದಿವ್ಯಲೋಕಗಳು ಕಾಣುತ್ತವೆ. ನೀವು ಎರಡು ರೀತಿಯ ಕಣ್ಣುಗಳನ್ನು (ಚರ್ಮಚಕ್ಷು, ಮನೋಚಕ್ಷು) ಮುಚ್ಚದಿದ್ದರೆ ದಿವ್ಯಚಕ್ಷುವು ಉತ್ತೇಜಿಸಿಕೊಳ್ಳದಿದ್ದರೆ ನೀವು ದೇವರ ರಾಜ್ಯದಲ್ಲಿ ಪ್ರವೇಶಿಸಲಾರಿರಿ. ಎಲ್ಲಿದೆ ಆ ದೇವರ ರಾಜ್ಯ? ಅದು ನಮ್ಮ ಒಳಗೇ ಇದೆ. ಬಹಿರ್ಮುಖ ಪ್ರಯಾಣವೆಂದರೆ ಪ್ರಾಪಂಚಿಕ. ಅಂತರ್ಮುಖ ಪ್ರಯಾಣವೆಂದರೆ ಆಧ್ಯಾತ್ಮಿಕತೆ. ನೀವು ಸ್ವಲ್ಪಕಾಲವಾದರೂ ಬಹಿರ್ಮುಖ ಪ್ರಯಾಣವನ್ನು ನಿಲ್ಲಿಸಬೇಕು. ಅಂತರ್ಮುಖ ಪ್ರಯಾಣ ನಡೆಸಲು ಶ್ವಾಸೋನ್ಮುಖರಾಗಬೇಕು. ಧ್ಯಾನ ಮಾಡುವುದರಿಂದ ಜೀವಾತ್ಮದಿಂದ ದಿವ್ಯಾತ್ಮಗಳಾಗಿ ಉನ್ನತೀಕಣಗೊಳ್ಳುತ್ತೇವೆ. ಭೂಲೋಕವಾಸಿಗಳಷ್ಟೇ ಅಲ್ಲದೆ, ನಾವು ಪರಲೋಕವಾಸಿಗಳಾಗಿರುವುದನ್ನೂ ಸಹ ಮನಗಾಣುತ್ತೇವೆ. ಆ ಪ್ರಯಾಣವೇ ಧ್ಯಾನ, ಅಂದರೆ, ಶ್ವಾಸದ ಮೇಲೆ ಗಮನ. ಸ್ವಲ್ಪ ಹೊತ್ತು ಗಂಡ, ಹೆಂಡತಿ, ಮಕ್ಕಳು, ಆ ಮತ ಈ ಮತ ಮುಂತಾದ ಆಲೋಚನೆಗಳನ್ನು ಬದಿಗಿಟ್ಟು ನಾವು ಧ್ಯಾನ ಮಾಡಲಾರಂಭಿಸಬೇಕು. ಆಗ ನಾವು ಅಂತರ್ಮುಖರಾಗಿ ಅಲ್ಪಕಾಲದಲ್ಲೇ ಆತ್ಮಾನುಭವವನ್ನು ಪಡೆಯುತ್ತೇವೆ. ಅದೇ ನಿಜವಾದ ಆಧ್ಯಾತ್ಮಿಕತೆ. ನಾವು ಈ ಭೂಲೋಕವಾಸಿಗಳು ಮಾತ್ರವಲ್ಲ ಎಂದು ಆಗ ನಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ. ನಾವು ಅನೇಕ ಲೋಕಗಳಿಗೆ ಸೇರಿದವರೆಂದು ಅರಿವು ಉಂಟಾಗುತ್ತದೆ. ಬ್ರಹ್ಮಾತ್ಮದಿಂದ ಅಂಶಾತ್ಮ. ಬ್ರಹ್ಮಾತ್ಮ ಅಂದರೆ ತಂದೆ. ಅಂಶಾತ್ಮ ಅಂದರೆ ಮಗು. ಒಂದು ದೊಡ್ಡ ವೃಕ್ಷವಿದೆ. ಆ ವೃಕ್ಷಕ್ಕೆ ಅನೇಕ ಬೀಜಗಳಿವೆ. ಆ ವೃಕ್ಷ ಆ ಬೀಜ ಎರಡು ಒಂದೇ. ಏಕೆಂದರೆ. ಆ ಬೀಜ ಪುನಃ ವೃಕ್ಷವಾಗುತ್ತದೆ. ಅದಕ್ಕೆ ಜೀಸಸ್ ಹೇಳಿದರು ‘ನಾನು ನನ್ನ ತಂದೆ ಇಬ್ಬರೂ ಒಂದೇ’ ಈ ಬೀಜ, ಮರ ಒಂದೇ. ಬೀಜ ಪುಟ್ಟದಾಗಿದೆ. ಆದರೆ, ಅದು ಮರವೆ, ಮರದಿಂದ ಬಂದ ಬೀಜ ಪುನಃ ಮರವಾಗುತ್ತದೆ. ನಾನು ನನ್ನ ತಂದೆ ಒಂದೆ, ಹಾಗೆ ನೀವು ನಾನು ಸಹ ಒಂದೇ. ಇವೆಲ್ಲಾ ಏಸು ಪ್ರಭುಗಳ ಪ್ರವಚನಗಳು.
ಜೀಸಸ್ ಇನ್ನೂ ಏನು ಹೇಳಿದರೆಂದರೆ “ನೀವು ನನಗಿಂತಾ ಹೆಚ್ಚು ಅದ್ಭುತಗಳನ್ನು, ಚಮತ್ಕಾರಗಳನ್ನು ಮಾಡಬಲ್ಲಿರಿ”. ಅವರು ಮಾಡಿದಾಗ ನಾವು ಯಾಕೆ ಮಾಡಲಾರೆವು. ಸಿದ್ಧಾರ್ಥನು ಗೌತಮ ಬುದ್ಧನಾದ ಮೇಲೆ ನಾನು, ನೀವು ಏಕೆ ಬುದ್ಧನಾಗಲಾರೆವು? ಧ್ಯಾನ ಮಾಡಿದರೆ ನಾವು ಬುದ್ಧರಾಗುತ್ತೇವೆ. ಯಾರು ಬೇಕಾದರೂ ಬುದ್ಧನಾಗಬಹುದು. ಸಿತಾರ್ ಕಲಿತುಕೊಂಡರೆ ಯಾರು ಬೇಕಾದರೂ ಪಂಡಿತ್ ರವಿಶಂಕರರ ರೀತಿ ನುಡಿಸಬಲ್ಲರು. ಪಂಡಿತ್ ರವಿಶಂಕರರ ವಸ್ತ್ರಗಳನ್ನು ಧರಿಸುವುದರಿಂದ ರವಿಶಂಕರ್ ಆಗಲಾರರು. ಅವರ ಹಾಗೆ ಯಾರು ಸಿತಾರ್ ಅಭ್ಯಾಸ ಮಾಡುತ್ತಾರೊ ಅವರು ಸಹ ರವಿಶಂಕರ್ರ ಹಾಗೆ ಸಿತಾರ್ ನುಡಿಸಬಹುದು. ಗಂಟಾನುಗಟ್ಟಲೆ ಕೊಳಲು ನುಡಿಸಲು ಅಭ್ಯಾಸ ಮಾಡಿದರೆ ನಾವು ಸಹ ಚೆನ್ನಾಗಿ ನುಡಿಸಬಹುದು. ಕ್ರಿಕೆಟ್ ಆಡಲು ಅಭ್ಯಾಸ ಮಾಡಿದರೆ ನಾವು ಸಹ ಟೆಂಡೂಲ್ಕರ್ನ ಹಾಗೆ ಆಡಬಹುದು. ಹಾಗೆ, ಅನೇಕ ಗಂಟೆಗಳ ಕಾಲ ಧ್ಯಾನಾಭ್ಯಾಸ ಮಾಡಿದರೆ ನಾವು ಸಹ ಜೀಸಸ್ ಆಗಬಹುದು. ನನಗಿಂತಾ ಹೆಚ್ಚು ಅದ್ಭುತಗಳನ್ನು ನೀವು ಸಹ ಸೃಷ್ಟಿಸಬಹುದು ಎಂದು ಜೀಸಸ್ ಹೇಳಿದ ಮೇಲೆ ನಾನು ಮಾಡಿದ್ದೇನೆ. ನೀನೂ ಸಹ ಮಾಡು ಎಂದು ಅವರು ತಮ್ಮ ಕಾಲದಲ್ಲೇ ವಿವರಿಸಿದ್ದಾರೆ. ನನಗೆ ಪೂಜೆ ಮಾಡಬೇಡ. ನಾನು ಮಾಡಿದಹಾಗೆ ನೀನು ಮಾಡು ಎಂದು ತಿಳಿಸಿದರು. ನನಗಿಂತಾ ಹೆಚ್ಚು ಸಾಧಿಸು ಎಂದು ತಿಳಿಸಿದರು. ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು.
ಚರ್ಚ್ಗೆ ಹೋಗಿ ಬಂದರೆ ಕ್ರಿಶ್ಚಿಯನ್ ಆಗಲಾರರು. ಮಂದಿರಗಳಿಗೆ ಹೋಗಿ ಬಂದರೆ ಹಿಂದೂ ಆಗಲಾರರು. ಮಸೀದಿಗೆ ಹೋಗಿ ಬಂದರೆ ಮುಸ್ಲಿಮ್ ಆಗಲಾರರು. ಧ್ಯಾನ ಮಾಡಿದರೇನೆ ಹಿಂದು, ಮುಸ್ಲಿಮ್, ಕ್ರಿಶ್ಚಿಯನ್, ಬುದ್ಧಿಸ್ಟ್ ಆಗುತ್ತಾರೆ. ತಬಲವನ್ನು ತಲೆ ಮೇಲೆ ಇಟ್ಟುಕೊಂಡು ಊರೆಲ್ಲಾ ಸುತ್ತಿದರೆ ತಬಲವಾದಕನಾಗುವುದಿಲ್ಲ. ಒಬ್ಬನು ಕೊಳಲನ್ನು ಕಂಕುಳಲ್ಲಿ ಇಟ್ಟುಕೊಂಡು ತಿರುಗುತ್ತಿದ್ದ. ಅದೇನೆಂದು ಕೇಳಿದಾಗ “ಅದು ಕೊಳಲು” ಎಂದು ಉತ್ತರಿಸಿದ. ಅದನ್ನು ಯಾಕೆ ಕಂಕುಳಲ್ಲಿ ಇಟ್ಟುಕೊಂಡು ತಿರುಗುತ್ತಿರುವೆ? ಎಂದು ಕೇಳಿದಾಗ “ಅದನ್ನು ನುಡಿಸಿದರೆ ತುಂಬಾ ಮೃದುಮಧುರವಾದ ಸಂಗೀತ ಬರುತ್ತದೆ” ಎಂದ! ಹೌದಾ, ಹಾಗಾದರೆ, ನುಡಿಸು ನೋಡೋಣ ಎಂದು ಕೇಳಿದಾಗ “ನಾನು ಇನ್ನೂ ಕಲಿತಿಲ್ಲ. ನನಗೆ ನುಡಿಸಲು ಬರುವುದಿಲ್ಲ” ಎಂದು ಉತ್ತರಿಸಿದ. ಹಾಗೆ, ನಾವು ಸಹ ದೇವಸ್ಥಾನಕ್ಕೆ, ಚರ್ಚ್ಗೆ ಹೋದರೆ ಏನು ಉಪಯೋಗ. ಧ್ಯಾನ ಮಾಡದಿದ್ದರೆ ಉಪಯೋಗವಿಲ್ಲ. ಜೀಸಸ್ ಹೆಸರು ಹೇಳಿ ಚರ್ಚ್ಗೆ ಹೋಗುತ್ತಾರೆ, ಜೀಸಸ್ ನನಗೆ ಕಷ್ಟ ಬಂದಿದೆ ಕರುಣೆ ತೋರಿಸು ಎಂದು ಪ್ರಾರ್ಥನೆ ಮಾಡುತ್ತಾರೆ. ಆದರೆ, ಅವರು ಮಾತ್ರ ಪ್ರಾಣಿಹಿಂಸೆ ಮಾಡಿ ಚಿಕೆನ್, ಮಟನ್ ತಿನ್ನುತ್ತಾರೆ. ಚಿಕನ್, ಮಟನ್ ತಿಂದರೆ ಕ್ರಿಶ್ಚಿಯನ್ ಹೇಗೆ ಆಗುತ್ತಾರೆ. ಕುರಿಯನ್ನು ಕೊಂದುತಿಂದರೆ ಹಿಂದೂ ಹೇಗೆ ಆಗುತ್ತಾರೆ. ಪ್ರಾಣಿಗಳನ್ನು ಕೊಲ್ಲುವವರು ಕ್ರೂರಮೃಗಗಳು ಆಗುತ್ತಾರೆ ವಿನಹ ದಿವ್ಯಾತ್ಮಗಳು ಹೇಗೆ ಆಗುತ್ತಾರೆ. ತಬಲ ತಲೆ ಮೇಲೆ ಇಟ್ಟುಕೊಂಡು ತಿರುಗುವುದರಿಂದ, ಕೊಳಲನ್ನು ಕಂಕುಳಲ್ಲಿ ಇಟ್ಟುಕೊಂಡು ತಿರುಗುವುದರಿಂದ, ಸಿತಾರನ್ನು ಪೂಜೆ ಮಾಡುವುದರಿಂದ ಲಾಭವಿಲ್ಲ. ದೇವರ ರಾಜ್ಯ, ದೇವರ ರಾಜ್ಯ ಎಂದು ಹೇಳುತ್ತಾರೆ. ಯಾವತ್ತಾದರೂ ದೇವರ ರಾಜ್ಯವನ್ನು ನೋಡಿದಿರಾ ಎಂದರೆ ಅದಕ್ಕೆ ಉತ್ತರವಿಲ್ಲ. ಬುದ್ಧನ ಚಿತ್ರವನ್ನು ಇಟ್ಟುಕೊಳ್ಳುವುದಲ್ಲ, ಬುದ್ಧನ ಹಾಗೆ ಆಗಬೇಕು. ವರ್ಷಕ್ಕೆ ಒಂದು ಬಾರಿ ಜೀಸಸ್ ಹಬ್ಬ ಆಚರಿಸುವುದಲ್ಲ. ಆ ಮರ (ಕ್ರಿಸ್ಮಸ್ಟ್ರೀ) ಇಟ್ಟುಕೊಳ್ಳುವುದಲ್ಲ ಜೀಸಸ್ ಹಾಗೆ ನಾವೂ ಸಹ ತಯಾರಾಗಬೇಕು. ನಾವು ಅನೇಕ ಆಯಾಮಗಳಿಂದ ಬಂದಿರುವಂತಹ ಬ್ರಹ್ಮಾತ್ಮಗಳು. ಬ್ರಹ್ಮಾತ್ಮನ ಅಂಶಗಳು ನಾವು. We are that. We are not this. ಒಂದು ದಿನ ಜೀಸಸ್ ತಮ್ಮ ಬಾಲ್ಯದಲ್ಲಿ ಎಲ್ಲರಿಗೂ ಪ್ರವಚನ ನೀಡುತ್ತಿದ್ದರು. ಆಗ ಅವರ ವಯಸ್ಸು 11 ವರ್ಷ. ಜೀಸಸ್ 11 ವರ್ಷಕ್ಕೆ ಪ್ರವಚನ ನೀಡುತ್ತಿದ್ದಾರೆ. ನೀವು ಏಕೆ 3೦ ವರ್ಷ ಆದರೂ ಇನ್ನೂ ಹೀಗಿದ್ದೀರಾ ಎಂದರೆ. ನಾನು ಚರ್ಚ್ಗೆ ಹೋಗಿ ಬರುತ್ತಿದ್ದೇನೆ ಎಂದು ಉತ್ತರಿಸುತ್ತಾರೆ.
ಜೀಸಸ್ ತಮ್ಮ 11 ನೆಯ ವರ್ಷದಲ್ಲಿ ಒಂದು ಎತ್ತರವಾದ ಕಲ್ಲಿನಮೇಲೆ ಕುಳಿತು ಪ್ರವಚನ ನೀಡುತ್ತಿರುವಾಗ, ಅವರ ತಾಯಿಯಾದ ಮೇರಿ; “ಜೀಸಸ್, ಬಾ ಇಲ್ಲಿ” ಎಂದು ಕರೆದರು. ಅಲ್ಲಿ ಸುತ್ತಾ ಮುತ್ತಾ ಇರುವವರು ನಿಮ್ಮ ತಾಯಿ ಕರೆಯುತ್ತಿದ್ದಾರೆ ಎಂದು ಹೇಳಿದರು. ಆಗ ಜೀಸಸ್ ಹೇಳಿದರು “ಯಾರು ನನ್ನ ತಾಯಿ? ಆಕೆ ನನ್ನ ತಾಯಿ ಅಲ್ಲ. ನಾನು ನನ್ನ ತಂದೆ ಒಪ್ಪಿಸಿದ ಕೆಲಸದಲ್ಲಿದ್ದೇನೆ. ಅದು ನಿನಗೆ ಗೊತ್ತಿಲ್ಲವೆ ಎಂದು ಜೀಸಸ್ ಹೇಳಿದ. ತಾಯಿ ಕರೆದರೂ ಹೋಗಲಿಲ್ಲ. ಇಲ್ಲಿರುವ ತಾಯಿ ನನ್ನ ತಾಯಿ ಅಲ್ಲ. ಇಲ್ಲಿರುವ ತಂದೆ ನನ್ನ ತಂದೆ ಅಲ್ಲ. ನನ್ನ ನಿಜವಾದ ತಂದೆ ಸ್ವರ್ಗದಲ್ಲಿದ್ದಾರೆ. ಅವರೇ ನನ್ನ ನಿಜವಾದ ತಂದೆ” ಎಂದು ಹೇಳಿದರು. ಏಸುಪ್ರಭುವು ಇಹಲೋಕದಲ್ಲಿ ಜೀವಿಸುತ್ತಾ ಪರಲೋಕದ ದೃಷ್ಟಿಕೋನದಿಂದ ಹೇಳಿದರು. ಧ್ಯಾನ ಮಾಡಿದರೆ ಪ್ರಭುಗಳು ಆಗುತ್ತಾರೆ. ಧ್ಯಾನ ಮಾಡದಿದ್ದರೆ ಪ್ರಜೆಗಳಾಗಿಯೆ ಉಳಿದುಬಿಡುತ್ತಾರೆ. ಪ್ರಜೆಗಳಾದ ಕಪ್ಪೆಗಳು ಬಾವಿಯ ಒಳಗೆ ಇರುತ್ತವೆ. ಪ್ರಭುಗಳಾದ ಕಪ್ಪೆಗಳು ಬಾವಿಯ ಆಚೆ ಇರುತ್ತವೆ. ಪ್ರಭು ರಾಜ್ಯಾಧಿಪತಿ. ಯಾವ ರಾಜ್ಯಾಧಿಪತಿ? ಆತ್ಮ ರಾಜ್ಯಾಧಿಪತಿ! ನಿಜಾಮ್ ಆಗಲಿ ಅಕ್ಬರ್ ಆಗಲಿ ಯಾವ ರಾಜ್ಯಗಳಿಗೆ ರಾಜರಿವರು. ಈ ಪ್ರಾಪಂಚಿಕ ರಾಜ್ಯಗಳಿಗೆ ರಾಜರು. ಆದ್ದರಿಂದ, ಯಾರು ಆತ್ಮ ರಾಜ್ಯಕ್ಕೆ ರಾಜರಾಗುತ್ತಾರೊ ಅವರೇ ಆತ್ಮರಾಜ್ಯಾಧಿಪತಿಗಳು. ಆದ್ದರಿಂದ, ಸಂತರನ್ನು ‘ಮಹಾರಾಜ್’ ಎಂದು ಕರೆಯುತ್ತಾರೆ. ಸಂತ ಜ್ಞಾನೇಶ್ವರ ಮಹಾರಾಜ್, ಸಂತ ತುಕಾರಾಮ್ ಮಹಾರಾಜ್. ಅವರು ಆತ್ಮರಾಜ್ಯಗಳಿಗೆ ರಾಜರು. ಗೌತಮ ಬುದ್ಧನು ತನ್ನ ಇಹಲೋಕ ರಾಜ್ಯವಾದ ಕಪಿಲವಸ್ತು ಎನ್ನುವ ಚಿಕ್ಕ ರಾಜ್ಯವನ್ನು ತ್ಯಜಿಸಿ ಧ್ಯಾನ ಮಾಡಿ ತನ್ನ ಪರಲೋಕ ಆತ್ಮಸಾಮ್ರಾಜ್ಯವನ್ನು ಸ್ಥಾಪಿಸಿದನು.
ಏಸುಪ್ರಭುವನ್ನು ಕುರಿತ ಪುಸ್ತಕವನ್ನು ಓದಿ ಅವರನ್ನು ಅರಿಯಲಾರೆವು. ಧ್ಯಾನದಿಂದ ಮಾತ್ರ ಅವರನ್ನು ಸಂಪೂರ್ಣವಾಗಿ ಅರಿತುಕೊಳ್ಳಬಹುದು. ಜೀಸಸ್ಕ್ರೈಸ್ಟ್ಗಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. ಹಾಗೆಯೆ, ಗೌತಮಬುದ್ಧನು ಸಹ ತಾವು 2500 ವರ್ಷಗಳನಂತರ ಪುನಃ ಬರುತ್ತೇವೆಂದು ತಿಳಿಸಿದರು. ಕಲಿಯುಗವು ಕತ್ತಲೆಯ ಯುಗ, ಸತ್ಯಯುಗವು ಬೆಳಕಿನ ಯುಗ. ಯಾರು ಧ್ಯಾನ ಮಾಡಿ ಅವರೊಳಗೆ ಬೆಳಕನ್ನು, ಆತ್ಮಜ್ಯೋತಿಯನ್ನು ಬೆಳಸಿಕೊಳ್ಳುತ್ತಾರೊ ಅವರೆಲ್ಲಾ ಜೀಸಸ್ರೇ ಮತ್ತು ಬುದ್ಧರೇ.. ಪ್ರಪಂಚದಾದ್ಯಂತ ಕಲಿಯುಗ ಅಂತ್ಯವಾಗಿ ಸತ್ಯಯುಗ ಆರಂಭವಾಗಿದೆ. ಡಿಸೆಂಬರ್ 21, 2012 ಎನ್ನುವುದು ಮಾಯನ್ ಕ್ಯಾಲೆಂಡರ್ನ ಅಂತಿಮ ದಿನ. ಅಂದರೆ, ‘ಮಾಯೆ’ಯಿಂದ ಕೂಡಿಕೊಂಡಿರುವ ದಿನಗಳು ಅಂತ್ಯವಾಗಿದೆ. ಇನ್ನು ಮುಂದೆ ‘ಮಾಯೆ’ ಎನ್ನುವುದಿಲ್ಲ. ‘ಮಾಯೆ’ ಅಂದರೆ ಏನು? ಸಮಯವೇ ‘ಮಾಯೆ’ ಎಂದು ಅರಿತುಕೊಳ್ಳಿ. ವಿಷ್ಣುಮೂರ್ತಿ ಶೇಷಶಯನನು. ಅಂದರೆ, ಹಾವಿನ ಮೇಲೆ ಮಲಗಿದವನು. ಹಾವಿನ ಮೇಲೆ ಮಲಗುವುದೆಂದರೆ ಏನು? ಹಾವು ಎಂದರೆ ಸಮಯ. ‘ಕಾಲನಾಗ’ ಎನ್ನುತ್ತೇವೆ. ಕಾಲ ಎಂದರೆ ಸಮಯ. ‘ನಾಗ’ ಎಂದರೆ ಹಾವು. ಶೇಷಶಯನ ಎಂದರೆ ಕಾಲದಿಂದ ಹೊರ ಬಂದವನು. ಆ ಶೇಷಶಯನನ ಮೇಲೆ ಹಾಯಾಗಿ ಮಲಗಿರುವವನು ವಿಷ್ಣುಮೂರ್ತಿ, ಎನ್ಲೈಟೆನ್ಡ್ ಮಾಸ್ಟರ್. ನನಗೆ 20 ವರ್ಷ, ನನಗೆ 30 ವರ್ಷ, ನನಗೆ 5೦ ವರ್ಷ ನಾನು ಮುದುಕನಾಗಿದ್ದೇನೆ. ಇದೆಲ್ಲಾ ಸಮಯತತ್ವ ಅಲ್ಲವೇ… ಶೇಷಶಯನನು ಎಂದರೆ ಸಮಯದಿಂದ ಹೊರಬಂದವನು. ಸಮಯದಿಂದ ಹೊರ ಬಂದವನು ಯಾವಾಗಲು ಆರಾಮಾಗಿ ಇರುತ್ತಾನೆ, ಸಮಯದಲ್ಲಿರುವವರು ಸದಾ ಓಡುತ್ತಲಿರುತ್ತಾರೆ.
ನನ್ನ ಪ್ರಿಯ ಸ್ನೇಹಿತರೇ, ನನ್ನ ಪ್ರಿಯ ಮಾಸ್ಟರ್ಗಳೇ ಮತ್ತು ನನ್ನ ಪ್ರಿಯ ದೇವರುಗಳೇ, ನಾವು ಎಲ್ಲರೂ ಸಹ ದೇವರುಗಳೇ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ. ಅದಕ್ಕಾಗಿ ನಾವು ಮನಸ್ಸಿನ ಒಡೆಯರಾಗಬೇಕು. ಮನಸ್ಸಿನ ಒಡೆಯರಾಗಬೇಕಾದರೆ ನಮ್ಮ ಉಸಿರಿನೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳಬೇಕು. ಯಾರು ತನ್ನ ಉಸಿರಿನೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳುತ್ತಾನೆಯೋ ಅವನು ತನ್ನ ಮನಸ್ಸಿನ ಒಡೆಯನಾಗುತ್ತಾನೆಯೇ ಹೊರತು ಗುಲಾಮನಾಗುವುದಿಲ್ಲ.
ಮೈಡಿಯರ್ ಫ್ರೆಂಡ್ಸ್, ಮೈಡಿಯರ್ ಮಾಸ್ಟರ್ಸ್, ಮೈಡಿಯರ್ ಗಾಡ್ಸ್. ಮೊದಲು ನಾವು ಉಸಿರಿನೊಡನೆ ಸ್ನೇಹ ಬೆಳಸಬೇಕು. ಅನಂತರ ನಾವು ಮಾಸ್ಟರ್ ಆಗುತ್ತೇವೆ. ಮಾಸ್ಟರ್ ಆದ ನಂತರ ನಾನೇ ದೇವರೆಂದು ತಿಳಿದುಕೊಳ್ಳುತ್ತೇವೆ.
” ವಿಶೇಷವಾಗಿ ಮೌನದಲ್ಲಿ ಇರುವವರು ‘ ಮುನೀಶ್ವರರು ‘, ಮುನಿಗಳು “
ಡಿಸೆಂಬರ್ 26 ರಂದು ಪತ್ರೀಜಿಯವರ ಸಂದೇಶ: ಯಾರು ಮೌನವಾಗಿರುತ್ತಾರೊ ಅವರನ್ನು ‘ಮುನಿ’ ಎನ್ನುತ್ತಾರೆ. ವಿಶೇಷವಾಗಿ ಮೌನದಲ್ಲಿ ಇರುವವರು ‘ಮುನೀಶ್ವರರು’, ‘ಮುನಿಗಳು’. ರಮಣ ಮಹರ್ಷಿಗಳು ತಮ್ಮ ಜೀವನ ಪೂರ್ತಿ ಮೌನದಲ್ಲಿದ್ದರಲ್ಲವೆ? ಯಾವಾಗಲೋ ಅಪರೂಪಕ್ಕೆ ಮಾತನಾಡುತ್ತಿದ್ದರು. ಅವಶ್ಯಕತೆ ಇದ್ದರೆ ಮಾತನಾಡಬೇಕು. ಹಾಡು ಹಾಡಬಹುದು. ಅವಶ್ಯಕತೆ ಇಲ್ಲದಿದ್ದರೆ ಬಾಯಿಂದ ಶಬ್ದ ಬರಬಾರದು. ಮೌನದಿಂದ ಇರುವುದು ಅಭ್ಯಾಸಮಾಡಬೇಕು.
ಬಾಯಿಯಲ್ಲಿ ಮೌನ, ಮನಸ್ಸಿನಲ್ಲಿ ಶೂನ್ಯ… ಅದರ ಹೆಸರೇ ಧ್ಯಾನವು… ಧ್ಯಾನವು… ಧ್ಯಾನವು. ಬಾಯಿನಲ್ಲಿ ಮಂತ್ರಗಳು ಇರಬಾರದು ಬಾಯಿ ಮೂಕವಾದರೆ ‘ಮುನಿ’. ಮನಸ್ಸು ಮೂಕವಾದರೆ ‘ಯೋಗ”, ಧ್ಯಾನಿ. ಮಾತು ಮಾತನಾಡಿದರೆ ಅರಿವಿನಿಂದ ಮಾತನಾಡಬೇಕು. ಅವಶ್ಯಕತೆ ಇದೆಯಾ? ಇಲ್ಲವಾ? ಪ್ರಸ್ತುತವಾ… ಅಪ್ರಸ್ತುತವಾ? ಎಂದು ಯೋಚಿಸಿ ತೂಕಮಾಡಿ ಮಾತನಾಡಬೇಕು… ಸತ್ಯ ತಿಳಿದರೆ ಮಾತನಾಡಬೇಕು. ಸತ್ಯ ತಿಳಿಯದಿದ್ದರೆ ಮಾತನಾಡಬಾರದು. ಮಾತಿನಲ್ಲಿ ಅರಿವು… ಮಾತಿನಲ್ಲಿ ಸತ್ಯ… ಅದರ ಹೆಸರೇ ಜ್ಞಾನ. ಜ್ಞಾನ ಎಂದರೆ ಪ್ರತಿಯೊಂದು ಮಾತಿನಲ್ಲೂ ಸತ್ಯ ಇರಬೇಕು. ಅರಿತುಕೊಂಡು ಮಾತನಾಡಬೇಕು. ಅದರ ಹೆಸರೇ ಜ್ಞಾನ. ಆ ಜ್ಞಾನ ನಮಗೆ ಧ್ಯಾನದಿಂದ ಬರುತ್ತದೆ. ಧ್ಯಾನದಿಂದ ಜ್ಞಾನ… ಜ್ಞಾನದಿಂದ ಮುಕ್ತಿ…
ತಪ್ಪು ಮಾಡಿದರೆ ಶಿಕ್ಷೆ ಆಗುತ್ತದೆ. ಏನೇ ಮಾಡಲಿ, ಅದರಲ್ಲಿ ನ್ಯಾಯ ಇರಬೇಕು, ಮಾಡುವುದರಲ್ಲಿ ವಿನಯ ಇರಬೇಕು. ನಾವು ಮಾಡುವ ಕರ್ಮಗಳಲ್ಲಿ ವಿನಯ ಇರಬೇಕು, ನ್ಯಾಯದಿಂದ ಇರಬೇಕು. ಧರ್ಮದಲ್ಲಿ ಇರಬೇಕು. ಎಲ್ಲರ ಜೊತೆ ವಿನಯದಿಂದ ಮಾತನಾಡಬೇಕು.
ಆತ್ಮದಲ್ಲಿ ಶಾಂತಿಯೂ, ಆತ್ಮದಲ್ಲಿ ಅಭಯವು. ಆತ್ಮದಲ್ಲಿ ಶಾಂತಿ ಇರಬೇಕು. ಹೆಂಡತಿ ಸತ್ತರೆ ಆತ್ಮದಲ್ಲಿ ಅಶಾಂತಿ ಇರಬಾರದು. ಗಂಡ ಸತ್ತರೂ ಅಶಾಂತಿಯಿಂದ ಇರಬಾರದು. ಅಗಲೇ ಹುಟ್ಟಿದ ಮಗು ಸತ್ತರು ಅಶಾಂತಿಯಿಂದ ಇರಬಾರದು. ಎಲ್ಲಿ ಅಶಾಂತಿ ಇಲ್ಲವೊ ಎಲ್ಲಿ ಶಾಂತಿಯು ಗೂಡುಕಟ್ಟಿಕೊಂಡಿದೆಯೊ ಅದರ ಹೆಸರೇ ಮೋಕ್ಷವು.
ಒಂದು ಹಾವು ಬಂದಿದೆ ಎಂದುಕೊಳ್ಳೋಣ ಆಗ ನಾವು ಹೆದರಿದರೆ ನಮಗಿನ್ನೂ ಮೋಕ್ಷಸ್ಥಿತಿ ಬಂದಿಲ್ಲಾ ಎಂದು ಅರ್ಥ. ಅದೇ ಧ್ಯಾನಿ ಎದುರಿಗೆ ಹಾವು ಬಂದರೆ ಧೈರ್ಯದಿಂದ ಓ… ಹಾವೂ… ಹಾವೂ… ನನ್ನನ್ನು ಸಾಯಿಸಲು ಬಂದಿರುವೆಯಾ… ಸರಿ… ಬಾ… ನನ್ನನ್ನು ಸಾಯಿಸು ಎನ್ನಬೇಕು.
ನನ್ನನ್ನು ನೀನು ಸಾಯಿಸಿದರೂ ನಾನು ಸೂಕ್ಷ್ಮಶರೀರಯಾನ (ಆಸ್ಟ್ರಲ್ ಟ್ರಾವೆಲ್) ಮಾಡಿ ಸ್ವರ್ಗಕ್ಕೆ ಹೋಗುತ್ತೇನೆ. ಬೇಕಾದರೆ ಸಾಯಿಸು … ನನ್ನ ನುಂಗು… ಎಂದು ಹೇಳುವುದು ಅಷ್ಟು ಸುಲಭವಲ್ಲ. ಅದೇ ನಾವು ಧ್ಯಾನ ಮಾಡಿದರೆ ಆತ್ಮದಲ್ಲಿ ಶಾಂತಿ ಸಿಗುತ್ತದೆ. ಅಭಯ ಸಿಗುತ್ತದೆ. ಆದ್ದರಿಂದ, ಆತ್ಮಕ್ಕೆ ಸಾವಿಲ್ಲ ಎನ್ನುವ ಸತ್ಯವನ್ನು ಅರಿತು ಧೈರ್ಯದಿಂದ ಇರುತ್ತೇವೆ. ಅದನ್ನೇ ಮೋಕ್ಷ ಎಂದು ಹೇಳುತ್ತಾರೆ. ಎಲ್ಲೋ ಹೋಗಿ ನದಿಗಳಲ್ಲಿ, ಸಮುದ್ರಗಳಲ್ಲಿ ಮಿಂದರೆ ಮೋಕ್ಷ ಸಿಗುವುದಿಲ್ಲ. ಈ ಸಂಸಾರಸಾಗರದಲ್ಲಿ ಶಾಂತಿಯಿಂದ, ಪ್ರಶಾಂತಿಯಿಂದ, ಅಭಯದಿಂದ, ನಿಶ್ಚಿಂತೆಯಿಂದ ಇರಲಾದಾಗ ಮಾತ್ರವೇ ನಮಗೆ ಮೋಕ್ಷ ಪ್ರಾಪ್ತಿ ಆಗುತ್ತದೆ. ಛಾವಣಿ ಕಳಚಿ ಮೇಲೆ ಬಿದ್ದರೂ, ಅಂದರೆ, ಕಷ್ಟಗಳು ಒಂದರ ಮೇಲೊಂದು ಬಂದರೂ ಪ್ರಶಾಂತತೆಯಿಂದ ಇದ್ದರೆ, ಹಾವು ಬಂದು ನಮ್ಮನ್ನು ನುಂಗುತ್ತಿದ್ದರೂ ಪ್ರಶಾಂತತೆಯಿಂದ ಇದ್ದರೆ ಅದೇ ಮೋಕ್ಷ. ಹಾಗೆ ಇರಲಾಗುವವರೆಗೂ ನಾವು ಜನ್ಮತೆಗೆದುಕೊಳ್ಳುತ್ತಲೇ ಇರಬೇಕು. ಕೇಳುತ್ತಾ ಕೇಳುತ್ತಾ ‘ರಾಗ’ ಸುಶ್ರಾವ್ಯಗೊಳ್ಳುತ್ತದೆ. ತಿನ್ನುತ್ತಾ ತಿನ್ನುತ್ತಾ ಬೇವು ಸಿಹಿ ಆಗುವುದು. ಹಾಗೆಯೇ, ಧ್ಯಾನಾಭ್ಯಾಸ ಮಾಡುತ್ತಾ… ಮಾಡುತ್ತಾ ನಮ್ಮ ಆತ್ಮದಲ್ಲಿ ಶಾಂತಿ ತುಂಬಿಕೊಂಡು ನಮ್ಮಲ್ಲಿ ಅಭಯ ಎನ್ನುವುದು ಬರುತ್ತದೆ. ಕಟ್ಟಕಡೆಯ ಜನ್ಮದಲ್ಲಿ ನಮಗೆ ಆ ಪ್ರಶಾಂತತೆ ಬರುತ್ತದೆ. ಪಿರಮಿಡ್ ಮಾಸ್ಟರ್ಸ್ ಎಲ್ಲರೂ ಮೋಕ್ಷವನ್ನು ಸಾಧಿಸಿದ್ದಾರೆ.
ಪ್ರತಿಯೊಬ್ಬ ಪಿರಮಿಡ್ ಮಾಸ್ಟರ್ ಪೂರ್ಣ ಮೋಕ್ಷದಿಂದ ಜೀವಿಸುತ್ತಿದ್ದಾನೆ. ಅದಕ್ಕೆ ಇಂಥ ಕಾಸ್ಮಿಕ್ ಪಾರ್ಟಿ ಸಂಭ್ರಮಗಳನ್ನು ಮಾಡುತ್ತಿದ್ದೇವೆ. ಇದು ಈ ಜನ್ಮದ ಪ್ರಯತ್ನವಲ್ಲ ಅನೇಕ ಜನ್ಮಗಳಿಂದ ಪ್ರಯತ್ನ ಮಾಡಿ, ಮಾಡಿ ಕಟ್ಟಕಡೆಗೆ ಮೋಕ್ಷಸ್ಥಿತಿಗೆ ಬಂದು ತಲುಪಿದ್ದೇವೆ. ಯಾರು ಭೂಲೋಕದಲ್ಲಿದ್ದಾಗಲೇ ಮೋಕ್ಷವನ್ನು ಸಾಧಿಸುತ್ತಾರೊ ಅವರು ಮರಣಿಸಿದನಂತರ ನಕ್ಷತ್ರಲೋಕಗಳಲ್ಲಿ ರಾಜರಾಗಿ ಮೆರೆಯುತ್ತಾರೆ. Administrator ಆಗುತ್ತಾರೆ. ಹಾಗೆ ಒಬ್ಬIAS passs ಆದ ಎಂದು ತಿಳಿಯೋಣ. ಆಗ ಅವನು ಏನು ಮಾಡುತ್ತನೆ ಜಿಲ್ಲಾಧಿಕಾರಿ ಆಗುತ್ತಾನೆ ಓದದಿದ್ದರೆ, ಕಚೇರಿ ಜವಾನ ಆಗುತ್ತಾನೆ. ಯಾರು ಭೂಲೋಕದಲ್ಲಿದ್ದಾಗ ಧ್ಯಾನಮಾಡಿ, ಜ್ಞಾನ ಪಡೆದು, ಯೋಗಿಯಾಗಿ ಮೋಕ್ಷವನ್ನು ಪಡೆಯುತ್ತಾನೊ ಆತನು ನಕ್ಷತ್ರಲೋಕದಲ್ಲಿ ಅಧಿಕಾರಪಡೆಯುತ್ತಾನೆ. ಅಂದರೆ, ಇಂದ್ರ ಪದವಿ ಪಡೆಯುತ್ತಾನೆ.
ಧ್ಯಾನ ಮಾಡದಿದ್ದರೆ, ಸ್ವಾಧ್ಯಾಯ ಮಾಡದಿದ್ದರೆ, ಸಜ್ಜನ ಸಾಂಗತ್ಯ ಮಾಡದಿದ್ದರೆ ಈ ‘ಪುನರಪಿ ಜನನಂ, ಪುನರಪಿ ಮರಣಂ’ ಎನ್ನುವ ಚಕ್ರದಲ್ಲಿ ಬಿದ್ದು ಒದ್ದಾಡಬೇಕಾಗುತ್ತದೆ.
” ನವ್ಯ, ದಿವ್ಯ, ಭವ್ಯಯುಗದಲ್ಲಿ ಪ್ರತಿದಿನ ನಮಗೆಲ್ಲಾ ಹಬ್ಬವೆ “
ಡಿಸೆಂಬರ್ 27 ರಂದು ಪತ್ರೀಜಿಯವರ ಸಂದೇಶ : “ನಾವು ಈ ಶರೀರ ಪದಾರ್ಥವಲ್ಲ, ಶರೀರದಲ್ಲಿರುವ ಅಂಗಾಂಗಗಳಲ್ಲ. ನಾವು ಮೂಲ ಚೈತನ್ಯ” ಎಂದು ತಿಳಿದುಕೊಳ್ಳುವುದೇ ಸತ್ಯವನ್ನು ತಿಳಿದುಕೊಳ್ಳುವುದು. ‘ಆಧ್ಯಾತ್ಮಿಕತೆ’ ಎಂದರೆ “ಸತ್ಯವನ್ನು ತಿಳಿದುಕೊಳ್ಳುವುದು, ಸತ್ಯದಲ್ಲಿ ಜೀವಿಸುವುದು, ಸತ್ಯವನ್ನು ಬೋಧಿಸುವುದು”. ಸತ್ಯ ಎಂದರೆ ಏನು? ಆತ್ಮ ಎನ್ನುವುದೇ ಸತ್ಯ. ನಾವು ಆ ಆತ್ಮವೇ ಆಗಿದ್ದೇವೆ. ಆ ಸತ್ಯ ನಾವು ಆಗಿದ್ದೇವೆ. ಆ ಸತ್ಯವನ್ನು ಕುರಿತು ಅರಿಯಬೇಕಾದರೆ ನಾವು ಶ್ವಾಸದೊಂದಿಗೆ ಕೂಡಿಇರಬೇಕು. ಆಗ ಆ ಶ್ವಾಸ ನಮ್ಮನ್ನು ಧ್ಯಾನದಲ್ಲಿ ಕೊಂಡೊಯ್ಯುತ್ತದೆ. ಶ್ವಾಸ ಎನ್ನುವ ಹಡಗಲ್ಲಿ ಧ್ಯಾನ ಎನ್ನುವ ಯಾನವನ್ನು ಮಾಡುತ್ತೇವೆ. ಶ್ವಾಸ ಎನ್ನುವ ಕ್ಷೇತ್ರದಲ್ಲಿ ಆತ್ಮಪ್ರಯಾಣವನ್ನು ಸಾಗಿಸುತ್ತೇವೆ. ಈ ಶರೀರವು ಒಂದು ಕ್ಷೇತ್ರ, ಆತ್ಮ ಒಬ್ಬ ಕ್ಷೇತ್ರಜ್ಞ. ಕ್ಷೇತ್ರ, ಕ್ಷೇತ್ರಕ್ಕೆ ನಡುವೆ ಇರುವ ವ್ಯತ್ಯಾಸ ತಿಳಿದುಕೊಳ್ಳುವುದೆ ಅಧ್ಯಾತ್ಮಿಕತೆ. ದೇಹಿ ಬೇರೆ, ದೇಹ ಬೇರೆ, ಹಾಗೆಯೇ, ಕ್ಷೇತ್ರ ಬೇರೆ, ಕ್ಷೇತ್ರಜ್ಞ ಬೇರೆ. ಪ್ರತಿಯೊಬ್ಬರೂ ಸಹ ಪ್ರತಿದಿನ ಧ್ಯಾನ ಮಾಡಲೇಬೇಕು.
ಈ ನೂತನ ನವ್ಯ, ದಿವ್ಯ, ಭವ್ಯಯುಗವು ಧ್ಯಾನ ಯುಗ, ಪಿರಮಿಡ್ ಯುಗ. ಸಸ್ಯಾಹಾರ ಯುಗ, ಅಹಿಂಸಾ ಯುಗ. ನಾವು ನೂತನ ಯುಗದಲ್ಲಿ ಪ್ರವೇಶಮಾಡಿದ್ದೇವೆ. ಈ ನವ್ಯ, ದಿವ್ಯ, ಭವ್ಯಯುಗದಲ್ಲಿ ಪ್ರತಿದಿನ ನಮಗೆಲ್ಲಾ ಹಬ್ಬವೆ. ಎಲ್ಲೆಡೆ ಹಸಿರು ಫಸಲೇ ಫಸಲು. ಪ್ರತಿಕ್ಷಣ ಹಬ್ಬವೆ, ಪ್ರತಿದಿನ ಹಬ್ಬವೆ, ಈ ಜೀವನವೆಲ್ಲಾ ಹಬ್ಬವೆ. ನಾವು ಶರೀರ ಅಲ್ಲ, ಆತ್ಮಪದಾರ್ಥ ಎಂದು ಚೆನ್ನಾಗಿ ಅರಿತುಕೊಂಡ ಮೇಲೆ ಇನ್ನು ಉಳಿದಿದ್ದೆಲ್ಲಾ ಹಬ್ಬವೆ. ನಾವು ಆತ್ಮಪದಾರ್ಥ ಎಂದು ತಿಳಿದುಕೊಳ್ಳದಿದ್ದರೆ ಇರುವುದೆಲ್ಲಾ ವ್ಯರ್ಥವೆ. ಈ ಪೃಥ್ವಿಯ ಎಲ್ಲಾಕಡೆ ಹಬ್ಬವೆ. ಈ ಪ್ರಾಂಗಣದಲ್ಲಿ ಲಕ್ಷ್ಯಾಂತರ ಜನ ಹಬ್ಬವನ್ನು ಆಚರಿಸುತ್ತಾ ಹೇಗೆ ಸಂಭ್ರಮದಿಂದ ಇದ್ದಾರೊ ಇನ್ನೂ ಮುಂದೆ ಹತ್ತು ವರ್ಷಗಳಲ್ಲಿ ಭೂಮಂಡಲವೆಲ್ಲಾ ಹಾಗೆ ಇರುತ್ತದೆ. ಸಂಭ್ರಮಗಳಲ್ಲಿ ತೇಲಿ ಆಡುತ್ತಿರುತ್ತದೆ. ಪ್ರತಿದಿನ ಧ್ಯಾನ, ಸಂಗೀತ, ನೃತ್ಯ ಹೇಗಿದೆಯೊ, ಹಾಗೆ ಇಡೀ ಪ್ರಪಂಚವೆಲ್ಲಾ ಆಡುತ್ತಾ, ಹಾಡುತ್ತಾ, ನೃತ್ಯಮಾಡುತ್ತಾ, ರುಚಿಕರವಾದ ಊಟಮಾಡುತ್ತಾ, ಧ್ಯಾನ ಮಾಡುತ್ತಾ ಹಬ್ಬವನ್ನು ಆಚರಿಸುತ್ತಾ ಅನಂದದಲ್ಲಿ ತೇಲಿಯಾಡುತ್ತದೆ. ಎಲ್ಲಿ ನೋಡಿದರೂ ಹಬ್ಬದ ವಾತಾವರಣವೇ. ಸಂಭ್ರಮದಿಂದ ಜನ ಜೀವಿಸುತ್ತಿರುತ್ತಾರೆ. ನಾವು ಹಬ್ಬ ಆಚರಿಸಲೆಂದೇ ಈ ಭೂಲೋಕಕ್ಕೆ ಬಂದಿದ್ದೇವೆ. ದುಃಖಿಸುತ್ತಾ ಜೀವಿಸಲು ಹುಟ್ಟಲಿಲ್ಲ. ನಾವು ನೋವು ಅನುಭವಿಸಲು ಇತರರಿಗೆ ನೋವು ಕೊಡಲು ಬರಲಿಲ್ಲ. ನಾವು ಸಂತೋಷವಾಗಿರಲು ಇತರರನ್ನು ಸಂತೋಷಪಡಿಸಲು ನಾವು ಹುಟ್ಟಿದ್ದೇವೆ. ನಾವು ಆನಂದವಾಗಿರಲು, ವೈಭೋಗವನ್ನು ಅನುಭವಿಸಲು, ಇತರರಿಗೆ ವೈಭೋಗವನ್ನು ನೀಡಲು ನಾವು ಹುಟ್ಟಿದ್ದೇವೆ. ವೈರಾಗ್ಯ ಅನವಶ್ಯಕ. ‘ರಾಗ’ದ ಅಗತ್ಯ ಮಾತ್ರ ಇದೆ. ಭೋಗ ಅವಶ್ಯಕ. ವೈಭೋಗ ಎನ್ನುವುದೂ ಅಗತ್ಯವೇ. ಧ್ಯಾನವೆ ಭೋಗ. ಜ್ಞಾನವೇ ವೈಭೋಗ. ಸತ್ಯವೇ ದೈವ.
” ಆಧ್ಯಾತ್ಮಿಕ ಪ್ರಯಾಣ “
ಆಧ್ಯಾತ್ಮಿಕತೆ ಎಂದರೆ ಸತ್ಯದ ಆರಾಧನೆ, ಸತ್ಯವನ್ನು ಪ್ರಕಟಿಸುವುದು, ಸತ್ಯವನ್ನು ಕುರಿತು ಪ್ರವಚನ. ಸತ್ಯ ಎಂದರೆ ಏನು? ನಾವೆಲ್ಲಾ ದೇವರುಗಳೇ… ನಾವೆಲ್ಲಾ ಆತ್ಮಗಳು…ಎನ್ನುವುದೇ ಸತ್ಯ. ಮರಣ ಎನ್ನುವುದು ಎಲ್ಲೂ ಇಲ್ಲ. ಬದಲಾವಣೆ ಎನ್ನುವುದು ಸದಾ ಸತತವಾಗಿದೆ. ನಾವು ಜನ್ಮಿಸಿದ್ದೇವೆ, ಬಾಲ್ಯಾವಸ್ಥೆ, ಯೌವನಾವಸ್ಥೆ, ಪ್ರೌಢಾವಸ್ಥೆ, ವೃದ್ಧಾಪ್ಯ ಬಂದನಂತರ ಒಂದು ದಿನ ಮೇಲಿನ ಲೋಕಗಳಿಗೆ ಹೊರಟುಹೋಗುತ್ತೇವೆ. ಈಗ ನಾವು ಸ್ಥೂಲಶರೀರ ರೂಪದಲ್ಲಿ ಭೂಲೋಕದಲ್ಲಿ ಇದ್ದೇವೆ. ಮರಣಿಸಿದನಂತರ ಭುವರ್ಲೋಕಕ್ಕೆ ತೆರಳುತ್ತೇವೆ. ಅಲ್ಲಿ ನಾವು ಸೂಕ್ಷ್ಮಶರೀರದಲ್ಲಿರುತ್ತೇವೆ. ಪುನಃ ನಾವು ಸೂಕ್ಷ್ಮಶರೀರವನ್ನು ಸೂಕ್ಷ್ಮಲೋಕಗಳಲ್ಲಿ ತ್ಯಜಿಸಿ. ಕಾರಣಶರೀರದಿಂದ ಕಾರಣಲೋಕಗಳಿಗೆ ಹೋಗುತ್ತೇವೆ. ಅನಂತರ ಜನಾಲೋಕಕ್ಕೆ ಹೋಗುತ್ತೇವೆ, ಅನಂತರ ಮಹಾಲೋಕಕ್ಕೆ ಹೋಗುತ್ತೇವೆ. ಅದಾದನಂತರ ತಪೋಲೋಕಕ್ಕೆ ಹೋಗುತ್ತೇವೆ. ಅನಂತರ ಸತ್ಯಲೋಕಕ್ಕೆ ಹೋಗುತ್ತೇವೆ. ಇದು ಅನಂತವಾದ ಯಾತ್ರೆ. ಭೂಲೋಕದಲ್ಲಿ ಸತ್ಯದಲ್ಲಿ ಜೀವಿಸುವುದು. ಸೂಕ್ಷ್ಮಲೋಕಗಳಲ್ಲಿ ಸೂಕ್ಷ್ಮಶರೀರದಿಂದ ಭೋಗಗಳನ್ನು ಅನುಭವಿಸುತ್ತಾ ಜೀವಿಸುವುದು. ಕಾರಣಲೋಕಗಳಲ್ಲಿ ಕಾರಣಶರೀರದಿಂದ ಜ್ಞಾನದಿಂದ ಜೀವಿಸುವುದು. ಮಹಾಕಾರಣಲೋಕಗಳಲ್ಲಿ ಮಹಾಕಾರಣಶರೀರದಿಂದ ಸಕಲ ಲೋಕಗಳನ್ನು ತಿರುಗುತ್ತಾ ತ್ರಿಲೋಕ ಸಂಚಾರಿ ಆಗುವುದು. ಇದು ನಮ್ಮ ಆಧ್ಯಾತ್ಮಿಕ ಪ್ರಯಾಣ.
” ಆತ್ಮ – ತ್ರಿಪುರ ಸುಂದರಿ “
ಸಾಯುವುದು ಎಂದರೆ ನಮ್ಮ ಮೈಮೇಲಿನ ಬಟ್ಟೆಯನ್ನು ಕಳಚಿಹಾಕಿದ ಹಾಗೆ. ನಾವು ನಮ್ಮ ಶರೀರದ ಮೇಲಿರುವ ಬಟ್ಟೆಯನ್ನು ಕಳಚಿದ ಮಾತ್ರಕ್ಕೆ ನಾವು ಅಲ್ಲಿ ಇಲ್ಲವೆ? ನಾವು ಅಲ್ಲೇ ಇರುತ್ತೇವೆ. ಆತ್ಮ ಸಾಯುವಾಗ ತನ್ನ ಶರೀರ, ಎನ್ನುವ ಬಟ್ಟೆಯನ್ನು ತ್ಯಜಿಸಿ ಮೇಲಿನ ಲೋಕಗಳಿಗೆ ತೆರಳುತ್ತದೆ. ಅಷ್ಟೇ ಹೊರತು, ಆತ್ಮಕ್ಕೆ ಸಾವಿಲ್ಲ. ಈ ಶರೀರಗಳೆಲ್ಲಾ ಬಟ್ಟೆಗಳಿದ್ದಂತೆ. ಆತ್ಮಕ್ಕೆ ಮೂರು ತರಹ ಬಟ್ಟೆಗಳಿರುತ್ತವೆ. ಇರುತ್ತವೆ. 1)ಸ್ಥೂಲಶರೀರ, 2)ಸೂಕ್ಷ್ಮಶರೀರ 3)ಕಾರಣಶರೀರ ಎನ್ನುವ ಬಟ್ಟೆಗಳು ಅಂದರೆ, ವಸ್ತ್ರಗಳನ್ನು ಧರಿಸುತ್ತದೆ. ಆತ್ಮವನ್ನು ‘ತ್ರಿಪುರ ಸುಂದರಿ’ ಎನ್ನುತ್ತಾರೆ. ತ್ರಿಪುರಸುಂದರಿ ಎಂದರೆ ಮೂರು ವಿಧವಾದ ವಸ್ತ್ರಗಳನ್ನು ಧರಿಸಿದ ಆತ್ಮ. ತುಂಬಾ ಸುಂದರವಾದ ಆತ್ಮ. ಸತ್ಯಂ, ಶಿವಂ, ಸುಂದರಂ, ಎನ್ನುವ ಹಾಡನ್ನು ಹಾಡಿದ್ದಾರೆ. ಆತ್ಮವು ಸತ್ಯವಾದದ್ದು, ಶಿವವಾದದ್ದು, ಸುಂದರವಾದದ್ದು. ಅದಕ್ಕೆ ಅದನ್ನು ‘ತ್ರಿಪುರ ಸುಂದರಿ’ ಎಂದಿದ್ದಾರೆ. ಮರಣಿಸುವಾಗ ಸ್ಥೂಲಶರೀರ, ಕಾರಣಶರೀರ, ಮಹಾಕಾರಣ ಶರೀರ ಇವೆಲ್ಲ ಬಿಟ್ಟುಬಿಡುತ್ತೇವೆ. ಅನೇಕಾನೇಕ ವಸ್ತ್ರಗಳನ್ನು ಬದಲಾಯಿಸುತ್ತಾ ಈ ಭೂಲೋಕಕ್ಕೆ ಬಂದೂಹೋಗಿ ಮಾಡುತ್ತಿರುತ್ತೇವೆ. ಭೂಮಂಡಲ ಎನ್ನುವುದು ಒಂದು ಪಾಠಶಾಲೆ. ಆತ್ಮಗಳೆಲ್ಲಾ ಪಾಠ ಕಲಿಯಲು ಈ ಭೂಲೋಕಕ್ಕೆ ಬರುತ್ತವೆ. ತನ್ನನ್ನು ತಾನು ಅರಿಯಲು ಈ ಲೋಕಕ್ಕೆ ಬರುತ್ತವೆ.
ವಸ್ತ್ರಗಳು ಹಳೆಯದಾದರೆ, ಹರಿದುಹೋದರೆ ಹೇಗೆ ನಾವು ಹೊಸಬಟ್ಟೆಯನ್ನು ಧರಿಸುತ್ತೇವೆಯೋ… ಹಾಗೆ ಈ ಶರೀರ ಶಿಥಿಲಗೊಂಡನಂತರ ಇದನ್ನು ತ್ಯಜಿಸಿ ನೂತನ ಶರೀರ ಧರಿಸಿ ಪುನಃ ಈ ಭೂಮಂಡಲಕ್ಕೆ ಬರುತ್ತೇವೆ. ಭಗವದ್ಗೀತೆ ಹೇಳುವುದೆಲ್ಲಾ ಅದೇ. ಏತಕ್ಕಾಗಿ ದುಃಖಿಸುತ್ತಿರುವೆ. ನಿಮಗೆ ದುಃಖಿಸಲು ಅರ್ಹತೆ ಇಲ್ಲ. ನಿನ್ನ ದುಃಖಕ್ಕೆ ಅಜ್ಞಾನವೇ ಕಾರಣ. ಸಾವು ಎನ್ನುವುದು ಇಲ್ಲ ಎಂದ ಮೇಲೆ ನಮಗೆ ದುಃಖ ಎಲ್ಲಿದೆ. ಪ್ರತಿಕ್ಷಣ ಹಬ್ಬವೆ. ಅಜ್ಞಾನದಿಂದ ಮರಣಭಯದಿಂದ ನಾವು ದುಃಖಕ್ಕೀಡಾಗುತ್ತಿದ್ದೇವೆ. ಅಜ್ಞಾನ ಹೋಗಿ ಜ್ಞಾನ ಬಂದರೆ ನಮಗೆ ದುಃಖ ಹೋಗಿ ಸಂಭ್ರಮದಿಂದ ದಿನ ನಿತ್ಯಹಬ್ಬದ ವಾತಾವರಣ ಪ್ರಪಂಚದಾದ್ಯಂತ ಇರುತ್ತದೆ. ಆತ್ಮ ಎನ್ನುವುದು ಸದಾ ಇರುತ್ತದೆ. ಅದಕ್ಕೆ ಸಾವಿಲ್ಲ. ನಾವು ಶಾಶ್ವತವಾಗಿರುವವರು, ಕೆಲವು ಕ್ಷಣಗಳಿಗಾಗಿ, ಕೆಲವು ದಿನಗಳಿಗಾಗಿ ಇರುವವರಲ್ಲ. ಆತ್ಮದಿಂದಲೇ ಎಲ್ಲಾ ಉದ್ಭವಿಸುತ್ತವೆ. ಪುರುಷನಿಂದ ಪ್ರಕೃತಿ ಉದ್ಭವಿಸಿ ಪುನಃ ಆ ಪುರುಷ, ಪ್ರಕೃತಿಯಲ್ಲಿ ಪ್ರವೇಶಿಸುತ್ತದೆ.
” 1 ಗಂಟೆ ಧ್ಯಾನ, 1 ಗಂಟೆ ಸ್ವಾಧ್ಯಾಯ, 1 ಗಂಟೆ ಸಜ್ಜನಸಾಂಗತ್ಯ “
ಯಾರು ಆಧ್ಯಾತ್ಮಿಕ ಶಾಸ್ತ್ರಾಧ್ಯಯನ ಮಾಡುತ್ತಾರೊ ಅವರು ಆಧ್ಯಾತ್ಮಿಕ ಜ್ಞಾನ ಪಡೆಯುತ್ತಾರೆ. ಶಾಸ್ತ್ರವಿಲ್ಲದೆ ವಿಜ್ಞಾನವಿಲ್ಲ. ಶಾಸ್ತ್ರ ಓದಿದರೇನೆ ವಿಜ್ಞಾನ ಬರುತ್ತದೆ. ಪಿರಮಿಡ್ ಮಾಸ್ಟರ್ಸ್ ಎಲ್ಲರೂ ಆಧ್ಯಾತ್ಮಿಕ ಶಾಸ್ತ್ರ ವಿದ್ಯಾರ್ಥಿಗಳು, ಪ್ರವೀಣರು, ಪ್ರೊಫೆಸರ್ಗಳು. ಫಿಜಿಕ್ಸ್, ಕೆಮಿಸ್ಟ್ರಿ, ಮ್ಯಾಥಮೆಟಿಕ್ಸ್, ಆಸ್ಟ್ರಾಲಜೀ ಮುಂತಾದ ವಿಷಯಗಳು ಇದ್ದಹಾಗೆ ‘ಸ್ಪಿರಿಚ್ಯುವಲ್ ಸೈನ್ಸ್’ ಸಹ ಒಂದು ಪ್ರಮುಖವಾದ ವಿಷಯ. ಅದನ್ನೇ ನಾವು ಓದುತ್ತಿರುವುದು, ಹೇಳಿಕೊಡುತ್ತಿರುವುದು. ನಮ್ಮ ಹತ್ತಿರ ಆಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳು ಅನೇಕಾನೇಕವಿದೆ. ಅನಿಬಿಸೆಂಟ್, ಲೋಬ್ಸಾಂಗ್ ರಾಂಪಾ, ರಿಚರ್ಡ್ ಬಾಕ್, ಸ್ವಾಮಿರಾಮ, ಯೋಗಾನಂದ ಪರಮಹಂಸ ಮುಂತಾದ ಅನೇಕಾನೇಕ ಲೆಕ್ಕವಿಲ್ಲದಷ್ಟು ಆಧ್ಯಾತ್ಮಿಕ ಶಾಸ್ತ್ರಜ್ಞರು ಈ ಭೂಮಂಡಲದಲ್ಲಿದ್ದಾರೆ. ಅವರು ಅನುಭವದಿಂದ ಬರೆದ ಎಲ್ಲಾ ಪುಸ್ತಕಗಳನ್ನು ಓದಬೇಕು. ಅವರಿಂದ ಅನೇಕ ವಿಷಯಗಳನ್ನು ಕಲಿಯಬೇಕು. ಧ್ಯಾನ ಎಷ್ಟು ಮುಖ್ಯವೊ ಸ್ವಾಧ್ಯಾಯ ಸಹ ಅಷ್ಟೇ ಮುಖ್ಯ. ಪ್ರತಿದಿನ ಒಂದು ಗಂಟೆಕಾಲ ಪುಸ್ತಕ ಓದಬೇಕು. ಪ್ರತಿ ದಿನ ಒಂದು ಗಂಟೆಕಾಲ ಧ್ಯಾನ ಮಾಡಬೇಕು. ಪ್ರತಿದಿನ ಒಂದು ಗಂಟೆ ಕಾಲ ಸಜ್ಜನಸಾಂಗತ್ಯ ಮಾಡಬೇಕು. 24 ಗಂಟೆಗಳಲ್ಲಿ 1 ಗಂಟೆ ಧ್ಯಾನ, 1 ಗಂಟೆ ಸ್ವಾಧ್ಯಾಯ, 1 ಗಂಟೆ ಸಜ್ಜನಸಾಂಗತ್ಯ ಮಾಡಿ ಉಳಿದ 21 ಗಂಟೆಗಳು ಹಾಯಾಗಿರಿ. ನಮ್ಮಲ್ಲಿ ಶಕ್ತಿ ತುಂಬಿಕೊಳ್ಳಲು ಧ್ಯಾನ, ಸ್ವಾಧ್ಯಾಯ, ಸಜ್ಜನಸಾಂಗತ್ಯ ತುಂಬಾ ಮುಖ್ಯ ಆಗಲೇ ಉಳಿದ 21 ಗಂಟೆಗಳ ಕಾಲ ನಾವು ನಮ್ಮ ಜೀವನವನ್ನು ಸುಖವಾಗಿ ಕಳೆಯಬಹುದು. ಒಂದು ಬ್ಯಾಟರಿಯನ್ನು ಚಾರ್ಜ್ ಮಾಡುತ್ತೇವೆ. ಅನಂತರ ಅದು ಕೆಲವು ಗಂಟೆಗಳ ಕಾಲ ಕೆಲಸಮಾಡುತ್ತದೆ. ಪುನಃ ಬ್ಯಾಟರಿ ಚಾರ್ಜ್ ಕಡಿಮೆಯಾಗಿ ಹೋಗುತ್ತದೆ. ಪುನಃ ಚಾರ್ಜ್ ಮಾಡುತ್ತೇವೆ. ಹಾಗೆಯೆ, ನಮ್ಮ ಆತ್ಮವನ್ನು ನಾವು ಚಾರ್ಜ್ ಮಾಡಬೇಕಾದರೆ ನಾವು ಖಂಡಿತಾ ಧ್ಯಾನ, ಸ್ವಾಧ್ಯಾಯ, ಸಜ್ಜನಸಾಂಗತ್ಯ ಬಹುಮುಖ್ಯ. ನಮ್ಮನ್ನು ನಾವು ರಿಚಾರ್ಜ್ ಮಾಡಿಕೊಳ್ಳಲು ಮೂರು ಗಂಟೆಕಾಲ ನಾವು ಧ್ಯಾನ, ಸ್ವಾಧ್ಯಾಯ, ಸಜ್ಜನಸಾಂಗತ್ಯಕ್ಕಾಗಿ ಮುಡುಪಾಗಿಡಬೇಕು. ಆಗಲೇ ನಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಂತೋಷ ಲಭ್ಯ. ಇಲ್ಲದಿದ್ದರೆ,. ಜೀವನ ದುಃಖಭರಿತವಾಗಿರುತ್ತದೆ.
” ನಿನ್ನನ್ನು ನೀನು ಉದ್ಧ್ದರಿಸಿಕೊಳ್ಳಬೇಕು “
ಡಿಸೆಂಬರ್ 28 ರಂದು ಪತ್ರೀಜಿಯವರ ಸಂದೇಶ :
” ಅಸತೋಮ ಸದ್ಗಮಯ, ತಮಸೋಮ ಜ್ಯೋತಿರ್ಗಮಯ, ಮೃತ್ಯೋರ್ಮ ಅಮೃತಂಗಮಯ”.
ನಾವು ಯಾವ ದಿಸೆಯಲ್ಲಿ ಪಯಣಿಸುತ್ತಿದ್ದೇವೆ. ನಾವು ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದಕಡೆಗೆ… ಹೀಗೆ, ಇದೇ ನಮ್ಮ ಪ್ರಯಾಣ.
‘ಅಸತೋಮ ಸದ್ಗಮಯ’ ಎಂದರೆ, ಓ ದೇವರೆ, ನನ್ನನ್ನು ಅಸತ್ಯದಿಂದ ಸತ್ಯದೆಡೆಗೆ ನಡೆಸು,
‘ತಮಸೋಮ ಜ್ಯೋತಿರ್ಗಮಯ’ಎಂದರೆ, ಓ ದೇವರೆ ನನ್ನನ್ನು ಅಜ್ಞಾನದಿಂದ ಜ್ಞಾನದಕಡೆಗೆ ಕರೆದುಕೊಂಡು ಹೋಗು,
‘ಮೃತ್ಯೋರ್ಮ ಅಮೃತಂಗಮಯ’, ಎಂದರೆ, ಓ ದೇವರೆ ನನ್ನನ್ನು ಮೃತ್ಯುವಿನಿಂದ ಅಮೃತತ್ವದ ಕಡೆ ದಾರಿ ತೋರಿಸು.
ಭಾರತದೇಶದಲ್ಲಿ ಹೇಳುತ್ತಿರುವ ಮೂಲಭೂತವಾದ ಈ ಪ್ರಾರ್ಥನೆ ಕಡು ಅಸತ್ಯ. ಅಲ್ಲಿ ಮೇಲೆ ಯಾವ ದೇವರೂ ಇಲ್ಲ ನಿಮ್ಮನ್ನು ಕರೆದುಕೊಂಡು ಹೋಗಲು. ನೀವೇ ದೇವರು ನೀವೇ ಅಲ್ಲಿಗೆ ಹೋಗಬೇಕು. ನಿಮ್ಮ ಸ್ವಪ್ರಯತ್ನದಿಂದ ನೀವೇ ಧ್ಯಾನಮಾಡಿ, ಸ್ವಾಧ್ಯಾಯ ಮಾಡಿ, ಸತ್ಸಂಗ ಮಾಡಿ ಸತ್ಯದೆಡೆಗೆ, ಜ್ಞಾನದ ಕಡೆ, ಅಮೃತತ್ವವನ್ನು ಪಡೆಯಲು ನೀವೆ ಸ್ವಯಂ ಹೋಗಬೇಕಾಗಿದೆ.
ಉದ್ಧರೇನಾತ್ಮ ನಾತ್ಮಾನಂ ನಾತ್ಮಾನಮವಸಾದಯೇತ್ |
ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ |
ಭಗವದ್ಗೀತೆಯಲ್ಲಿ ಕೃಷ್ಣ ಏನು ಹೇಳಿದ್ದಾನೆ… ಹೇ…! ಅರ್ಜುನಾ, ನಿನ್ನ ಸ್ವಪ್ರಯತ್ನದಿಂದ ನಿನ್ನನ್ನು ನೀನು ಉದ್ಧರಿಸಿಕೊಳ್ಳಬೇಕು. ಯಾರೂ ಬಂದು ನಿನ್ನನ್ನು ಉದ್ಧಾರಮಾಡುವುದಿಲ್ಲ. ನಿನಗೆ ನೀನೆ ಶತ್ರು… ನಿನಗೆ ನೀನೇ ಮಿತ್ರ.
ಯಾರೊ ಬರುತ್ತಾರೆ ಏನೊ ಸಹಾಯ ಮಾಡುತ್ತಾರೆ ಎಂದುಕೊಂಡಿದ್ದರೆ, ಅದು ನಮ್ಮ ಭ್ರಮೆ. ಭ್ರಮೆ ತೊಲಗಬೇಕು. ಮರುಭೂಮಿಯಲ್ಲಿ ನೀರು ಇದ್ದಹಾಗೆ ಕಾಣುತ್ತದೆ. ಆದರೆ, ಅಲ್ಲಿ ನೀರು ಇರುವುದಿಲ್ಲ. ಅಲ್ಲಿ ನೀರು ಇದೆ ಎಂದು ಓಡಿದರೆ ಲಾಭವಿಲ್ಲ. ಅದು ಒಂದು ಭ್ರಮೆ ಅಷ್ಟೆ. ಅದು ಮರೀಚಿಕೆ ಇದ್ದಹಾಗೆ ಸತ್ಯ ಎನ್ನುವುದು ಎಲ್ಲೋ ಇಲ್ಲ. ನೀನೆ ಆ ಸತ್ಯ. ನೀನೇ ಸತ್ಯ ಆಗಿರುವೆ. ಅದರ ಮೇಲೆ ತುಂಬಾ ಬೂದಿ ಮುಚ್ಚಿಕೊಂಡಿದೆ. ಆ ಬೂದಿಯನ್ನು ತೊಲಗಿಸುವ ವಿಧಾನವೇ ಧ್ಯಾನ, ಸ್ವಾಧ್ಯಾಯ, ಸತ್ಸಂಗ. ಧ್ಯಾನ ಮಾಡದಿದ್ದರೆ, ಸ್ವಾಧ್ಯಾಯ ಮಾಡದಿದ್ದರೆ, ಸಜ್ಜನಸಾಂಗತ್ಯ ಮಾಡದಿದ್ದರೆ ಜ್ಞಾನ ಎನ್ನುವುದು, ಸತ್ಯ ಎನ್ನುವುದು, ಅಮೃತತ್ವ ಎನ್ನುವುದು ಬೂದಿ ಮುಚ್ಚಿಕೊಂಡ ಕೆಂಡದ ಹಾಗೆ ಉಳಿದುಬಿಡುತ್ತದೆ. ನಾವು ಜೀವನವೆಲ್ಲಾ ಅಜ್ಞಾನದಿಂದ ಇದ್ದು ಕಷ್ಟಪಡುತ್ತಾ ಇರುತ್ತೇವೆ. ಒಂದು ದಿನ ಹಾಗೆ ನಮ್ಮ ಜೀವನ ಅಂತ್ಯಗೊಳ್ಳುತ್ತದೆ. ಮೇಲಿನ ಲೋಕಗಳಲ್ಲಿ ಸ್ವಚ್ಛ ಕೆಂಡವಿರುತ್ತದೆ ಹೊರತು ಬೂದಿಯಿರುವುದಿಲ್ಲ. ಅಲ್ಲಿ ಹೋದ ತಕ್ಷಣ ಏತಕ್ಕಾಗಿ ಧ್ಯಾನ ಮಾಡಿಲ್ಲ, ಏತಕ್ಕಾಗಿ ಸ್ವಾಧ್ಯಾಯ ಮಾಡಿಲ್ಲ, ಏತಕ್ಕಾಗಿ ಸಜ್ಜನಸಾಂಗತ್ಯ ಮಾಡಿಲ್ಲ ಎಂದು ಅಲ್ಲಿ ಕೇಳುತ್ತಾರೆ. ”ಏನೋ ಸ್ವಾಮಿ, ಗೊತ್ತಾಗಲಿಲ್ಲ. ಯಾರೋ ಬರುತ್ತಾರೆ ಎಂದುಕೊಂಡೆ, ಯಾರೂ ಬರಲಿಲ್ಲ” ಎಂದು ಹೇಳುತ್ತೀರಿ. ಹೌದಾ ಸರಿ, ಆದರೆ, ಬರುವ ಜನ್ಮದಲ್ಲಾದರೂ ಭೂಲೋಕಕ್ಕೆ ಹೋಗಿ ಧ್ಯಾನ ಮಾಡು, ಮರೆಯಬೇಡ ಅರಿವಿನಿಂದ ಇರು. ನಿನ್ನ ಸ್ವಂತ ಬುದ್ಧಿ ಉಪಯೋಗಿಸು. ಅಕ್ಕಪಕ್ಕದವರು ಹೇಳಿದ ಹಾಗೆ ಮಾಡಬೇಡ. ಎಲ್ಲರೂ ಹೇಳುವುದನ್ನು ಕೇಳಿಸಿಕೊ ಆದರೆ, ನಿನಗೆ ಏನು ಸರಿ ಅನಿಸುತ್ತೊ ಅದೇ ಮಾಡು” ಎಂದು ಹೇಳುತ್ತಾರೆ.
ಪ್ರತಿಯೊಬ್ಬರು ಅನೇಕ ಜನ್ಮಗಳನ್ನು ಪಡೆಯುತ್ತೇವೆ. ಸುಮಾರು 4೦೦ ಜನ್ಮಗಳು. ಪ್ರತಿಬಾರಿ ಭೂಲೋಕಕ್ಕೆ ಬಂದಾಗಲೆಲ್ಲಾ ತಿರುಪತಿ ತಿಮ್ಮಪ್ಪ ಸಹಾಯ ಮಾಡುತ್ತಾನೆ. ಕಾಶಿ ವಿಶ್ವನಾಥ ಸಹಾಯ ಮಾಡುತ್ತಾನೆ, ಮೇಲಿನ ಲೋಕಗಳಿಂದ ಯಾರೋ ದೇವ-ದೇವತೆಗಳು ಬಂದು ಸಹಾಯ ಮಾಡುತ್ತಾರೆ ಎಂದು ಎದುರು ನೋಡುತ್ತಿರುತ್ತಾರೆ. ಆದರೆ, ಸಹಾಯ ಮಾಡುವವರು ಯಾರೂ ಇಲ್ಲ.
ಉದಾಹರಣೆಗೆ, ಒಂದು ಕ್ರಿಕೆಟ್ ಮ್ಯಾಚ್ನಲ್ಲಿ ಅಮ್ಪೈರ್ ನೋಡುತ್ತಿರುತ್ತಾನೆ. ನೀನು ಔಟ್ ಆದರೆ ಔಟ್ ಅಂತಾನೆ. ಅವರು ಬೌಂಡರಿ ಹೊಡೆದರೆ ಬೌಂಡರಿ ಎನ್ನುತ್ತಾನೆ. ಅವನು ನಿನಗೆ ರನ್ಸ್ ಕೊಡುವುದಿಲ್ಲ. ಔಟ್ ಸಹ ಮಾಡುವುದಿಲ್ಲ. ನೀನೆ ರನ್ಸ್ ಪಡೆಯಬೇಕು. ಔಟಾದರೆ ನೀನೆ ಆಗಬೇಕು. ನೀನು ಮಾಡುವ ಕರ್ಮಗಳಿಗೆ ಫಲಕೊಡುತ್ತಿರುತ್ತಾನೆ. ನೀನು ಕಳ್ಳತನ ಮಾಡಿದರೆ ಪೊಲೀಸ್ ಕಳಿಸುತ್ತಾನೆ. ನೀನು ಮಾಂಸ ತಿಂದರೆ ರೋಗಗಳನ್ನು ಕಳಿಸುತ್ತಾನೆ. ನೀನು ಸುಳ್ಳು ಹೇಳಿದರೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಅಷ್ಟೆ ಹೊರತು, ನಿನ್ನ ಕರ್ಮಗಳನ್ನು ನಿರ್ದೇಶಿಸುವುದಿಲ್ಲ, ನಿನ್ನನ್ನು ಉದ್ಧರಿಸುವುದಿಲ್ಲ. ನೀವು ಯಾವ ತರಹದ ಕರ್ಮಗಳನ್ನು ಮಾಡುತ್ತಿರುತ್ತೀಯೋ ಅದಕ್ಕೆ ತಕ್ಕ ಪ್ರತಿಫಲ ನಮ್ಮ ಹಿಂದೆ ಬಿದ್ದು ಬರುತ್ತಿರುತ್ತದೆ. ನೀನು ಈ ಕರ್ಮ ಮಾಡು, ಆ ಕರ್ಮ ಮಾಡು ಎಂದು ಮೇಲಿನ ಲೋಕಗಳಿಂದ ಯಾರೂ ಹೇಳುವುದಿಲ್ಲ. ಆ ಪರಮಾತ್ಮ ಅಮ್ಪೈರ್ನ ಹಾಗೆ ನಿಶ್ಶಬ್ದವಾಗಿ ಎಲ್ಲಾ ಗಮನಿಸುತ್ತಿರುತ್ತಾನೆ. ನಾನು ಮಧ್ಯೆಪ್ರವೇಶಿಸುವುದಿಲ್ಲ ಎಂದು ಹೇಳುತ್ತಾನೆ.
ಹಾಗೆ, ಮೇಲಿನ ಲೋಕದವರು ಭೂಲೋಕದವರ ವಿಷಯದಲ್ಲಿ ಯಾರೂ ಸಹ ಮಧ್ಯೆಪ್ರವೇಶಿಸುವುದಿಲ್ಲ. ಹಾಗೆ ಮಧ್ಯೆಪ್ರವೇಶಿಸಲು ಸಾಧ್ಯವೂ ಇಲ್ಲ. ಅದು ನಿಯಮಗಳಿಗೆ ವಿರುದ್ಧ. ಇದೆಲ್ಲವೂ ಗಜೇಂದ್ರಮೋಕ್ಷ ಕಥೆಯಲ್ಲಿದೆ. ವಿಷ್ಣುಮೂರ್ತಿ ಬಂದು ಕಾಪಾಡಿದನೆಂದು. ಅದೆಲ್ಲಾ ಕಥೆಗಳು. ಈ ಕಥೆಗಳಿಂದ ಹೊರಬಂದವನೇ ಶಾಸ್ತ್ರಗಳ ವರಿಧಿ ಒಳಗೆ ಬರುತ್ತಾನೆ. ಆ ಶಾಸ್ತ್ರದ ವರಿಧಿ ಒಳಗೆ ಬಂದಿರುವವರೇ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವ್ಮೆಂಟ್ ಧ್ಯಾನಿಗಳು. ಇಲ್ಲದಿದ್ದರೆ, ಈ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ನ ಆಂದೋಲನಕ್ಕೆ ಬರಲು ಅಸಾಧ್ಯ, ಅವರು ಇಲ್ಲಿ ಇರಲಾರರು. ನಿನಗೆ ನೀನೇ ದೇವರು. ನಿನ್ನನ್ನು ನೀವೆ ಕಾಪಾಡಿಕೊಳ್ಳಬೇಕು. ಮೇಲೆ ಕಾಪಾಡಲು ಯಾರೂ ಇಲ್ಲ. ದೇವರಿದ್ದಾರೆ. ಆದರೆ, ಅವನು ನಮ್ಮ ಕೆಲಸಕಾರ್ಯಗಳನ್ನು ನೋಡಿ ಸ್ವಲ್ಪ ಹೊತ್ತು ಗಹಗಹಿಸಿ ನಗುತ್ತಾನೆ, ಸ್ವಲ್ಪ ಹೊತ್ತು ದುಃಖಿಸುತ್ತಾನೆ. ಆತನು ನಮಗೆ ಸಹಾಯ ಮಾಡಲಾಗುವುದಿಲ್ಲ.
” ಭೂಮಂಡಲ ಎನ್ನುವುದು ಒಂದು ಪರೀಕ್ಷಾ ಕೊಠಡಿ “
ನೀವು ಪರೀಕ್ಷೆ ಬರೆಯಲು ಹೋದರೆ ಪರೀಕ್ಷಾ ಕೊಠಡಿಯಲ್ಲಿ ನಿಮಗೆ ಅಧ್ಯಾಪಕರು ಬಂದು ಸಹಾಯ ಮಾಡು ಎಂದರೂ ಮಾಡುವುದಿಲ್ಲ. ಅದು ನಿಯಮಗಳಿಗೆ ವಿರುದ್ಧ. ಪರೀಕ್ಷಕ ನಿಮ್ಮ ಸ್ವಂತ ತಂದೆಯೇ ಆದರೂ, ಅಲ್ಲಿ ನಿಮಗೆ ಸಹಾಯ ಮಾಡುವುದಿಲ್ಲ. ಈ ಭೂಮಂಡಲ ಎನ್ನುವುದು ಒಂದು ಪರೀಕ್ಷಾ ಕೊಠಡಿ ಇದ್ದಂತೆ. ನಾವು ಮೇಲಿನ ಲೋಕಗಳಲ್ಲಿ ಪಾಠಗಳನ್ನು ಕಲಿತು, ಭೂಲೋಕದಲ್ಲಿ ಬಂದು ಪರೀಕ್ಷೆ ಬರೆಯುತ್ತೇವೆ. ನಿನ್ನ ಈ ಪರೀಕ್ಷೆಗಳಿಗೆ ಯಾರು ಬಂದು ಸಹಾಯ ಮಾಡುತ್ತಾರೆ? ಯಾರೂ ಬರುವುದಿಲ್ಲ. ನಾವು ಸೂಕ್ಷ್ಮಲೋಕಗಳಲ್ಲಿದ್ದಾಗ ಎಲ್ಲಾ ಕಲಿತಿರುತ್ತೇವೆ. ಆದರೆ, ಈ ಭೂಮಿಗೆ ಬಂದಮೇಲೆ ಜೀವನದಲ್ಲಿ ಪರೀಕ್ಷೆಗಳು ಎದುರಾದಾಗ ನಾವು ತೋರಿಸುವ ಪ್ರತಿಕ್ರಿಯೆಯಿಂದ ನಾವು ಉತ್ತೀರ್ಣರಾಗಿದ್ದೇವಾ? ಇಲ್ಲವಾ? ಎನ್ನುವುದು ಗೊತ್ತಾಗುತ್ತದೆ. ಇದು ಪರೀಕ್ಷಾ ಸಮಯ.
ಮನೆಯಲ್ಲಿ ಸಿತಾರ್ ಅಭ್ಯಾಸ ಮಾಡುತ್ತೇವೆ. ಆದರೆ, ವೇದಿಕೆಯ ಮೇಲೆ ಬಂದು ಧೈರ್ಯವಾಗಿ ಅಪಸ್ವರ ಇಲ್ಲದೆ ನುಡಿಸಬೇಕು. ಅದೇ ಪರೀಕ್ಷಾ ಸಮಯ. ಹಾಗೆ ನಾವು ಮೇಲಿನ ಲೋಕಗಳಲ್ಲಿ ಇರುವ ಶಾಲಾಕಾಲೇಜುಗಳಲ್ಲಿ ಚೆನ್ನಾಗಿ ಪಾಠಗಳನ್ನು ಕಲಿಯುತ್ತೇವೆ. ಆದರೆ, ಜೀವನದಲ್ಲಿ ಎದುರಾಗುವ ಪರೀಕ್ಷೆಗಳನ್ನು ಬರೆಯಲು ಭೂಮಿಗೆ ಬರುತ್ತೇವೆ. ಇಲ್ಲಿ ಉತ್ತೀರ್ಣರಾದರೆ ಮೇಲಿನ ಲೋಕಗಳಲ್ಲಿ ಉತ್ತಮ ಹಂತಕ್ಕೆ ತಲುಪುತ್ತೇವೆ.
ಪಾಠಶಾಲೆಗಳು, ಶಾಲಾಕಾಲೇಜುಗಳು ಮೇಲಿನ ಸೂಕ್ಷ್ಮಲೋಕಗಳಲ್ಲಿವೆ. ಅಲ್ಲಿ ನಾವು ಸೂಕ್ಷ್ಮಶರೀರ ಧರಿಸಿ ಕಲಿಯುತ್ತೇವೆ. ಹಾಗೆ ಸ್ಥೂಲ ಪ್ರಪಂಚವಾದ ಈ ಭೂಲೋಕಕ್ಕೆ ಸ್ಥೂಲಶರೀರವನ್ನು ಹೊತ್ತು ಪರೀಕ್ಷೆಗಳನ್ನು ಎದುರಿಸುತ್ತೇವೆ. ಪರೀಕ್ಷೆಗಳನ್ನು ಸರಿಯಾಗಿ ಎದುರಿಸಲಾಗದೆ ಹೋದರೆ ಉತ್ತೀರ್ಣರಾಗದೆ ಪುನಃ ಜನ್ಮ ಪಡೆಯುತ್ತೇವೆ. ಮೊದಲನೆಯ ಪ್ರಶ್ನೆ ನೀನು ಆತ್ಮವೋ? ಅಥವ ಶರೀರವೋ? ಎಂದು ಕೇಳಿದರೆ. ನಾವು ಆತ್ಮ ಎಂದು ಬರೆಯಬೇಕು. ಹಾಗಲ್ಲದೆ ನಾನು ಶರೀರ ಎಂದು ತಿಳಿದುಕೊಂಡು, ಅದನ್ನೇ ಬರೆದರೆ ಸೊನ್ನೆ ಅಂಕ ಬಂದು, ಪುನಃ ಅದೇ ಪಾಠ ಕಲಿತು ಪರೀಕ್ಷೆಗಳನ್ನು ಎದುರಿಸಲು ಮತ್ತೆ ಈ ಲೋಕಕ್ಕೆ ಬರಬೇಕಾಗುತ್ತದೆ. ಮೇಲಿನ ಲೋಕಗಳಲ್ಲಿ ಪಾಠ, ಕೆಳಗಿನ ಲೋಕಗಳಲ್ಲಿ ಪರೀಕ್ಷೆಗಳು. ಮೇಲಿನಲೋಕದಲ್ಲಿ ಅತ್ತೆ-ಸೊಸೆ ಸರಿಯಾಗಿರುತ್ತೇವೆ ಎಂದು ಒಪ್ಪಿಕೊಂಡು ಕೆಳಗಿನ ಲೋಕಕ್ಕೆ ಬಂದು ಅಲ್ಲಿ ಕಲಿತಿದ್ದೆಲ್ಲಾ ಮರೆತು, ಅತ್ತೆಯು ಸೊಸೆಯನ್ನು, ಸೊಸೆಯು ಅತ್ತೆಯನ್ನು ಕಿತ್ತುತಿಂದರೆ ಎಲ್ಲವೂ ವಿಫಲವಾದ ಹಾಗೆಯೇ. ನಾವು ನಮ್ಮ ಪಠ್ಯಕ್ರಮವನ್ನು (ಸಿಲಬಸ್) ಪೂರ್ತಿ ಮಾಡಬೇಕು. ಉತ್ತರಗಳನ್ನು ಸರಿಯಾಗಿ ಬರೆಯಬೇಕು. ಇಲ್ಲಿ ನಾವು ಹಣದ ಕಾರಣ ಬಿದ್ದು ಹೋದರೆ ಪರೀಕ್ಷೆ ವಿಫಲ. ಪದವಿ ಕಾರಣ ಬಿದ್ದು ಹೋದರೂ ಪರೀಕ್ಷೆ ವಿಫಲ. ಇಲ್ಲಿ ನ್ಯಾಯವಾಗಿ ಹೇಗೆ ಜೀವಿಸಬೇಕೊ ಹಾಗೆ ಜೀವಿಸಿದರೇನೆ ಪರೀಕ್ಷೆಯಲ್ಲಿ ಉತ್ತೀರ್ಣ, ಇಲ್ಲದಿದ್ದರೆ ಪುನಃಪುನಃ ಬರುತ್ತಲೇ ಇರಬೇಕು. ಸಾವಿರ ಬಾರಿ ಬಂದರೂ ನಾವು ಜೀವನದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದಿದ್ದರೆ ಇದು ಸರಿಯಲ್ಲ.
” ಜೀವದಲ್ಲಿ ಸುಸ್ವರ ಬರಬೇಕಾದರೆ ಧ್ಯಾನಾಭ್ಯಾಸ ಮಾಡಬೇಕಾದ್ದೆ “
ಡಿಸೆಂಬರ್ 29 ರಂದು ಪತ್ರೀಜಿಯವರ ಸಂದೇಶ : ಪ್ರತಿಯೊಂದು ದಿನವೂ ಧ್ಯಾನಕ್ಕಾಗಿಯೆ ಇದೆ. ನಮಗಾಗಿ ನಾವು ಧ್ಯಾನ ಮಾಡಬೇಕು ನಮ್ಮೊಂದಿಗೆ, ನಮ್ಮ ಉಸಿರಿನೊಂದಿಗೆ, ನಮ್ಮ ಅರಿವಿನೊಂದಿಗೆ ನಾವು ನಮ್ಮ ಜೊತೆ ಜೀವಿಸಬೇಕು. ನಮ್ಮ ಶ್ವಾಸದ ಜೊತೆ ನಾವಿದ್ದಾಗ ನಮ್ಮ ಜೊತೆ ನಾವು ಜೀವಿಸುತ್ತೇವೆ. ನಮ್ಮ ಜೊತೆ ನಮಗೆ ಸ್ನೇಹ. ನಾವು ಸಂತೋಷವಾಗಿರಲು ನಮಗೆ ಪರರ ಅವಶ್ಯಕತೆ ಇಲ್ಲ. ಇತರರ ಜೊತೆ ಜೀವಿಸಿದರೆ ‘ಸಂಸಾರ’. ನಮ್ಮ ಜೊತೆ ನಾವು ಜೀವಿಸಿದರೆ ‘ನಿರ್ವಾಣ’. ಯಾರಿಗೆ ತಮ್ಮ ಜೊತೆ ತಾವು ಜೀವಿಸಲು ಬರುವುದಿಲ್ಲವೊ ಅವರಿಗೆ ನಿರ್ವಾಣಪ್ರಾಪ್ತಿ ಇಲ್ಲ. ಜೀವನ ಎರಡು ರೀತಿಯಾಗಿದೆ. ನಾವು ಇತರರ ಜೊತೆ ಚೆನ್ನಾಗಿ ಜೀವಿಸಿದರೆ ಸುಖಮಯ ಸಂಸಾರ. ನಮ್ಮ ಜೊತೆ ನಾವು ಚೆನ್ನಾಗಿ ಜೀವಿಸಿದರೆ ಅದು ಆನಂದಕರವಾದ ನಿರ್ವಾಣ. ಹೀಗೆ, 1) ಸುಖಮಯ ಸಂಸಾರ 2) ಆನಂದಕರವಾದ ನಿರ್ವಾಣ ಎಂದು ಎರಡಿವೆ.
ಒಳಗಿನ ಪ್ರಪಂಚದಿಂದ, ಒಳಗಿನ ಸೃಷ್ಟಿಯೊಂದಿಗೆ ನಾವು ಒಂದಾದಾಗ ನಾವು ಆನಂದವಾದ ನಿರ್ವಾಣದಲ್ಲಿರುತ್ತೇವೆ. ಹೊರಗೆ ಎಲ್ಲರ ಜೊತೆ ಸ್ನೇಹದಿಂದ ಜೀವಿಸಿದರೆ ಅದು ಸುಖಮಯ ಸಂಸಾರವಾಗುತ್ತದೆ. ದಂಪತಿಗಳು ಸುಖಮಯ ಸಂಸಾರ ನಡೆಸಬೇಕಾದರೆ ಆ ಗಂಡ-ಹೆಂಡತಿ ಆನಂದಮಯ ನಿರ್ವಾಣದಲ್ಲಿ ಜೀವಿಸುತ್ತಿರಬೇಕು. ಎಲ್ಲರಿಗೂ ಸುಖಮಯ ಸಂಸಾರ ಬೇಕು. ಹೇಗೆ ಪಡೆಯುವುದು ಎಂಬುದು ತಿಳಿದಿಲ್ಲ. ಅವರಿಬ್ಬರೂ ತಮ್ಮ ಒಳಗೆ ತಾವು ಜೀವಿಸುವುದನ್ನು ಕಲಿತರೆ ಅದು ಸಾಧ್ಯ. ಅವರಿಬ್ಬರು ಆನಂದಮಯವಾದ ನಿರ್ವಾಣವನ್ನು ಪ್ರಾಪ್ತಿಸಿಕೊಳ್ಳುವವರೆಗೂ ಅದು ಅಸಾಧ್ಯ. ಅವರಿಗೆ ಸುಖ ಎನ್ನುವುದು ಸಂಸಾರದಲ್ಲಾಗಲಿ, ಹೊರಗಿನ ಪ್ರಪಂಚದಲ್ಲಾಗಲಿ ಅಸಾಧ್ಯ. ಸಂಸಾರ ಸುಖಮಯವಾಗುವುದಿಲ್ಲ. ಆಗಾಗ ಸ್ವಲ್ಪ ಸುಖ ಸಿಗುತ್ತಿರಬಹುದು. ಸಂಪೂರ್ಣ ಹಂತದಲ್ಲಿ ಸುಖಮಯ ಸಂಸಾರ ಬೇಕಾದರೆ ಗಂಡಹೆಂಡತಿ ಇಬ್ಬರೂ ಒಳಮುಖ ಪ್ರಯಾಣ ನಡೆಸಲೇಬೇಕು. ನಾವು ಆನಂದಮಯವಾದ ನಿರ್ವಾಣಸ್ಥಿತಿಯನ್ನು ಹೊಂದುವುದು ಅತ್ಯವಶ್ಯಕ. ಇದು ಸತತ ಧ್ಯಾನಾಭ್ಯಾಸದಿಂದಲೇ ಸಾಧ್ಯ. ಧ್ಯಾನಾಭ್ಯಾಸ ಮಾಡುತ್ತಾ… ಮಾಡುತ್ತಾ… ಮಾಡುತ್ತಾ ನಾವು ಆನಂದಮಯವಾದ ನಿರ್ವಾಣಸ್ಥಿತಿಗೆ ಬಂದು ತಲುಪುತ್ತೇವೆ.
ಜೀವನದಲ್ಲಿ ಸಹ ಸುಸ್ವರ ಬರಬೇಕಾದರೆ ಧ್ಯಾನಾಭ್ಯಾಸ ಮಾಡಬೇಕಾದ್ದೆ. ಇಲ್ಲದಿದ್ದರೆ ಜೀವನದಲ್ಲಿ ಅಪಸ್ವರ ಉಂಟಾಗುತ್ತದೆ. ಯಾರು ಧ್ಯಾನ ಮಾಡುವುದಿಲ್ಲವೊ ಅವರ ಜೀವನದಲ್ಲಿ ಸದಾ ಅಪಸ್ವರವೆ. ಧ್ಯಾನರಹಿತ ಜೀವನ ನಡೆಸುತ್ತಿರುವ ಪ್ರತಿಯೊಂದು ಮನೆಗಳಲ್ಲಿ ಮಕ್ಕಳ ಜೀವನ ದುಃಖಭರಿತ. ಏಕೆಂದರೆ, ತಂದೆ-ತಾಯಿ ಸದಾ ಜಗಳದಲ್ಲಿ ಮಗ್ನರಾಗಿರುತ್ತಾರೆ. ಅವರ ಅಜ್ಞಾನದಿಂದ ಮಕ್ಕಳ ಮೇಲೆ ಆಗುತ್ತಿರುವ ಪರಿಣಾಮವೇನು ಎಂಬುದರ ಅರಿವು ಅವರಿಗೆ ಸ್ವಲ್ಪವೂ ಇರುವುದಿಲ್ಲ. ಯಾರ ಮನೆಯಲ್ಲೂ ಆನಂದವೇ ಇಲ್ಲ. ಏಕೆಂದರೆ, ಯಾರ ಮನೆಗಳಲ್ಲೂ ಧ್ಯಾನ ಎನ್ನುವುದೇ ಇಲ್ಲ. ಆದರೆ, ಯಾರ ಮನೆಯಲ್ಲಿ ಧ್ಯಾನ ಇರುತ್ತದೋ ಅವರ ಮನೆಗಳು ಸುಂದರವಾಗಿ, ಆನಂದವಾಗಿ, ಸುಖವಾಗಿ, ಸಕಾರಾತ್ಮಕವಾಗಿರುತ್ತದೆ. ಅಂತಹ ಮನೆಗಳಲ್ಲಿ ಸ್ವರ್ಗನೆಲೆಸಿರುತ್ತದೆ. ಯಾರ ಮನೆಯಲ್ಲಿ ಧ್ಯಾನ ಇರುವುದಿಲ್ಲವೊ ಅಂತಹ ಮನೆಯಲ್ಲಿ ಜನ ನರಕಯಾತನೆ ಅನುಭವಿಸುತ್ತಿರುತ್ತಾರೆ.
ನನ್ನ ಬಾಲ್ಯದಲ್ಲಿ ನಮ್ಮ ಮನೆ ನರಕದಂತೆ ಇತ್ತು. ಆ ನರಕದಲ್ಲಿ ನಾನು ಜೀವಿಸುತ್ತಿದೆ. ಏಕೆಂದರೆ, ನಮ್ಮ ತಂದೆ-ತಾಯಿಗೂ, ಮನೆ ಹಿರಿಯರಿಗೂ, ಅಕ್ಕ-ಪಕ್ಕದವರೆಗೂ ಧ್ಯಾನ ಗೊತ್ತಿರಲಿಲ್ಲ. ಆದ್ದರಿಂದ, ನಾನು ನರಕದಲ್ಲೇ ಜೀವಿಸಿದ್ದೆ. ಆದರೆ, ಈ 2012 ರಲ್ಲಿ ಇಲ್ಲಿ ಇಷ್ಟು ಜನಕ್ಕೆ ಧ್ಯಾನವನ್ನು ಕುರಿತು ಗೊತ್ತಾಗಿದೆ. ಇದು ಎಂತಹ ದೊಡ್ಡ ವಿಷಯ. ಈಗ ಎಲ್ಲಿ ನೋಡಿದರೂ ಧ್ಯಾನವೇ. ನನ್ನ ಬಾಲ್ಯದಲ್ಲಿ ಎಲ್ಲೂ ಧ್ಯಾನವಿರಲಿಲ್ಲ. ಆದರೆ, ಈಗಿನ ದಿನಗಳಲ್ಲಿ ಎಲ್ಲರಿಗೂ ಧ್ಯಾನಗೊತ್ತಿದೆ. ಈಗ ಧ್ಯಾನ ಜಗತ್ತು ಸಮುದ್ರದ ಹಾಗೆ ವಿಶಾಲವಾಗಿದೆ. ಅಂದರೆ, ಒಂದು ಆಯಾಮದಲ್ಲಿ ಇಷ್ಟು ಬದಲಾವಣೆ ಬಂದಿದೆ. ಆಂಧ್ರಪ್ರದೇಶ ರಾಜ್ಯದಲ್ಲಿ, ಭಾರತದೇಶದಲ್ಲಿ, ವಿಶ್ವಾದಾದ್ಯಂತ ಈಗ ತುಂಬಾ ಬದಲಾವಣೆ ಬಂದಿದೆ. ಒಂದು ಪೀಳಿಗೆಯ ಸಮಾಜವನ್ನು ಸಂಪೂರ್ಣ ರೂಪಾಂತರಮಾಡಿದ್ದೇವೆ. ಪ್ರತಿಯೊಂದು ಮನೆಯಲ್ಲೂ ಈಗ ಧ್ಯಾನವನ್ನು ಕುರಿತು ತಿಳಿದುಕೊಂಡಿರುವವರು ಇದ್ದಾರೆ.
” ಆನಂದಮಯ ಆಧ್ಯಾತ್ಮದ ಮೂಲಕವೇ ಸುಖಮಯ ಪ್ರಾಪಂಚಿಕತೆ “
ನಿನ್ನ ಜೊತೆ ನೀನು ಎಷ್ಟು ಹತ್ತಿರದಿಂದ, ಅನ್ಯೋನ್ಯದಿಂದ, ಎಷ್ಟು ಸಂತೋಷದಿಂದ ಇರಲಾದರೆ ಅಷ್ಟು ಆನಂದಮಯವಾದ ನಿರ್ವಾಣಸ್ಥಿತಿಯಲ್ಲಿ ಇರಲಾಗುತ್ತದೆ. ಎಷ್ಟು ಆನಂದಮಯ ನಿರ್ವಾಣಸ್ಥಿತಿಯಲ್ಲಿ ಇರಲಾಗುತ್ತದೆಯೋ ಅಷ್ಟು ಸುಖಮಯ ಸಂಸಾರವಿರುತ್ತದೆ. ಪ್ರತಿಯೊಬ್ಬರ ಜೊತೆಯಲ್ಲೂ ಸಾಮರಸ್ಯದಿಂದ, ಸಂತೋಷದಿಂದ ನಾವು ಜೀವಿಸುತ್ತೇವೆ. ಸಂಸಾರದಲ್ಲಿ ಎಲ್ಲೂ ಅಪಸ್ವರ ಇರುವುದಿಲ್ಲ. ಆನಂದಮಯವಾದ ನಿರ್ವಾಣದಿಂದಲೇ ಸುಖಮಯ ಸಂಸಾರ, ಸುಖಮಯ ಜೀವನ, ಸುಖಮಯ ಪ್ರಾಪಂಚಿಕತೆ. ಆನಂದಮಯ ಆಧ್ಯಾತ್ಮಿಕತೆಯ ಮೂಲಕವೇ ಸುಖಮಯ ಪ್ರಾಪಂಚಿಕತೆ. ಆಧ್ಯಾತ್ಮ ಎನ್ನುವುದು ಆನಂದದಿಂದ ಕೂಡಿಕೊಂಡಿದೆ. ಪ್ರಾಪಂಚಿಕತೆ ಎಂಬುದು ಸುಖದಿಂದ ಕೂಡಿಕೊಂಡಿರಬೇಕು. ದುಃಖದಿಂದ ಇರಬಾರದು. ಎಲ್ಲಿ ಆಧ್ಯಾತ್ಮ ಇಲ್ಲವೊ ಅಲ್ಲಿಯ ಪ್ರಾಪಂಚಿಕತೆ ಅನಾರೋಗ್ಯದಿಂದ ಇರುತ್ತದೆ, ರೋಗ ಪೀಡಿತವಾಗಿರುತ್ತದೆ. ಬೆಂಕಿಯಂಥ ಬಿಸಿ ವಾತಾವರಣ, ಪರಸ್ಪರ ದ್ವೇಷಪೂರಿತ… ಎಲ್ಲಾ ಸೇರಿ ನರಕಯಾತನೆ. ಎಲ್ಲಿ ಮನುಷ್ಯ 2,3,4,5 ಗಂಟೆಗಳ ಕಾಲ ಧ್ಯಾನ ಮಾಡುತ್ತಾನೊ… ತನ್ನ ಜೊತೆ ತಾನು ಜೀವಿಸುತ್ತಾನೊ, ತನ್ನಲ್ಲಿ ತಾನು ಸ್ಥಿತವಾಗಿರುತ್ತಾನೊ… ಆ ಆನಂದಮಯ ಜೀವನವನ್ನು ತನ್ನಲ್ಲಿ ಸ್ಥಿರಗೊಳಿಸುತ್ತಾನೊ ಆಗ ದಿವ್ಯಚಕ್ಷುವು ತೆರೆದುಕೊಂಡಾಗ ಸಂಸಾರ ಮಾಡುತ್ತಿರುವಾಗಲು, ವ್ಯಾಪಾರ ಮಾಡುತ್ತಿರುವಾಗಲೂ, ಉದ್ಯೋಗ ಮಾಡುತ್ತಿರವಾಗಲೂ, ಮಕ್ಕಳ ಜೊತೆ, ಇತರರ ಜೊತೆ ಆಡುತ್ತಿರುವಾಗಲೂ ಪ್ರತಿಕ್ಷಣ ಆನಂದವಾಗಿರುತ್ತದೆ, ಸುಖವಾಗಿರುತ್ತದೆ.
ನನ್ನ ಬಾಲ್ಯದಲ್ಲಿ ಎಲ್ಲೂ ಧ್ಯಾನವೇ ಇರಲಿಲ್ಲ. ಆದರೆ, ಈಗ ನಾವೆಲ್ಲಾ ಸೇರಿ ಆಂಧ್ರರಾಜ್ಯದಲ್ಲಿ ದೊಡ್ಡ ಬದಲಾವಣೆಯನ್ನೇ (ವಿಪ್ಲವವನ್ನೇ) ಸೃಷ್ಟಿಸಿದ್ದೇವೆ. ನೀವು ಭೂಮಂಡಲದಿಂದ ದೂರ ಹೋಗಿ, ಅಲ್ಲಿಂದ ಇನ್ನೂ ದೂರದ ಸೌರಮಂಡಲಕ್ಕೆ ಹೋಗಿ, ಅಲ್ಲಿಂದ ದೂರದ ಗೆಲಾಕ್ಸಿಗೆ ಹೋಗಿ, ಅಲ್ಲಿಂದ ಈ ಭೂಮಿಯನ್ನು ನೋಡಿದರೆ ಹೇಗಿರುತ್ತದೆ ಗೊತ್ತಾ? ಈ ಭೂಮಿಯಲ್ಲಿ ಒಂದು ಪ್ರದೇಶವು ತುಂಬಾ ಪ್ರಕಾಶಮಾನವಾಗಿರುತ್ತದೆ. ಉಳಿದ ಭಾಗದಲ್ಲಿ ಕಪ್ಪು ಇರುತ್ತದೆ. ಅಂತಹ ಪ್ರಕಾಶಮಾನವಾಗಿರುವ ಪ್ರದೇಶವೇ ಆಂಧ್ರರಾಜ್ಯ. ಏಕೆಂದರೆ, ಇಲ್ಲಿ ಎಲ್ಲರೂ ತುಂಬಾ ಜನರು ಧ್ಯಾನಮಾಡುತ್ತಿದ್ದಾರೆ. ಪ್ರಿಯ ಸ್ನೇಹಿತರೇ, ನಾವು ಧ್ಯಾನಾಂಧ್ರಪ್ರದೇಶವನ್ನು ಸಾಧಿಸಿದ್ದೇವೆ. ಧ್ಯಾನ ಭಾರತ್ನ ಸಾಧಿಸಿದ್ದೇವೆ ಮತ್ತು ಧ್ಯಾನ ಜಗತ್ತನ್ನು ಸಹ ಸಾಧಿಸಿದ್ದೇವೆ. ಲಕ್ಷಾಂತರ ಜನಗಳ ಜೊತೆ ಕೂಡಿ ಧ್ಯಾನ ಮಾಡಬೇಕೆಂದು ನಾನು ಪ್ರಾರಂಭದಿಂದಲೇ ಕನಸುಕಾಣುತ್ತಿದ್ದೆ. ಆದರೆ, ಆ ಕನಸು ಈಗ ನನಸಾಗಿದೆ. ನಾನು ಯಾವಾಗಲು ಎಂದುಕೊಳ್ಳುತ್ತಿದೆ. ನನ್ನಂತಹ ದೊಡ್ಡ ಯೋಗೀಶ್ವರನು ಕುಳಿತು ಧ್ಯಾನ ಹೇಳಿಕೊಡುತ್ತಿದ್ದರೆ ಒಬ್ಬರಿಬ್ಬರು ಬಂದು ಧ್ಯಾನ ಕಲಿತರೆ, ಇದೇನು ಹೀಗೆ ರಾಮಚಂದ್ರಾ ಎಂದು ಅನಿಸುತ್ತಿತ್ತು. ನಾನು ಧ್ಯಾನ ಹೇಳಿಕೊಡಲು ಬಂದಾಗ ಲಕ್ಷಾಂತರ ಜನ ಇರಬೇಕು ಎಂದುಕೊಂಡೆ. ಆದರೆ, ಏನು ಮಾಡೋದು ಸಹನೆಯಿಂದ ಕಾಯಬೇಕು. ಈ ಪ್ರಾಂಗಣದಲ್ಲಿ ಈಗ ಲಕ್ಷಾಂತರ ಜನರು ನಿತ್ಯ ಕುಳಿತು ಧ್ಯಾನಿಸುತ್ತಿದ್ದೇವೆ. ಈ ದೃಶ್ಯವನ್ನು ನೋಡಲು ನಾನು 30 ವರ್ಷಗಳ ಕಾಲ ಕಾಯಬೇಕಾಗಿ ಬಂತು. 2012 ಅಂತ್ಯದಲ್ಲಿ ನನ್ನ ಕನಸು ನನಸಾಗಿದೆ.
10,12 ವರ್ಷಗಳ ಹಿಂದೆ ಯಾವುದೊ ಕಾಸ್ಮಿಕ್ ಪಾರ್ಟಿ ಆಗುತ್ತದಂತೆ ಎಂದು ಪುಸ್ತಕಗಳಲ್ಲಿ ಓದಿದ್ದೆ. ಓಹೋ … ಭೂಮಂಡಲದಲ್ಲಿ ಆ ಕಾಸ್ಮಿಕ್ ಪಾರ್ಟಿ ಎನ್ನುವುದು ಎಲ್ಲಿ ನಡೆಯುತ್ತೊ… ಆದಿನ ಆ ಕಾಸ್ಮಿಕ್ ಪಾರ್ಟಿಯಲ್ಲಿ ನಾನು ಇರುತ್ತೇನೊ ಇಲ್ಲವೊ… ನನಗೆ ಅಂತಹ ಭಾಗ್ಯ ಇದೆಯೋ ಇಲ್ಲವೋ… ಎಂದು ಅಂದುಕೊಳ್ಳುತ್ತಿದೆ. ಆದರೆ, ಆ ಕಾಸ್ಮಿಕ್ ಪಾರ್ಟಿಯನ್ನು ನಾವೇ ಸಂಘಟಿಸುತ್ತೇವೆ. ನಾವೇ ಕಾಸ್ಮಿಕ್ ಪಾರ್ಟಿಮಾಡಿಕೊಳ್ಳುತ್ತೇವೆಂದು ಆಗ ನನಗೆ ಗೊತ್ತೇ ಇರಲಿಲ್ಲ. ಈ ಭೂಮಂಡಲದಲ್ಲಿ ಕಾಸ್ಮಿಕ್ ಪಾರ್ಟಿಮಾಡಿಕೊಳ್ಳುವುದು ನಾವು ಮಾತ್ರ. ಇನ್ಯಾರೂ ಈ ಪಾರ್ಟಿಮಾಡಿಕೊಳ್ಳುತ್ತಿಲ್ಲ. ಯುಗಾಂತವಾಗಿ ಯುಗಾರಂಭವಾಗುವ ಸಮಯದಲ್ಲಿ ಒಂದು ವಿಸ್ತಾರವಾದ, ವಿಶೇಷವಾದ ಅತ್ಯಂತಸಂಭ್ರಮಕರವಾದ ಕಾಸ್ಮಿಕ್ ಪಾರ್ಟಿ, ಅಂದರೆ ಈ ಹಬ್ಬವನ್ನು ನಾವು ಆಚರಿಸುತ್ತಿದ್ದೇವೆ. ಎಲ್ಲಾ ಪಿರಮಿಡ್ ಮಾಸ್ಟರ್ಸ್ ವಿಶೇಷವಾದ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬ ಪಿರಮಿಡ್ ಮಾಸ್ಟರ್ ಹಗಲು-ರಾತ್ರಿ ಎನ್ನದೆ, ಊರೂರು, ಬೀದಿ ಬೀದಿ ಸುತ್ತುತ್ತಾ, ಗ್ರಾಮ-ಗ್ರಾಮ ತಿರುಗುತ್ತಾ ಮನೆ ಮನೆ ಬಾಗಿಲು ತಟ್ಟುತ್ತಾ ಪ್ರತಿಯೊಬ್ಬ ಮನುಷ್ಯನನ್ನು ಎಚ್ಚರಿಸುತ್ತಾ ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ತನಗಾಗಿ ತಾನು ಮಾಡಿಕೊಂಡರೆ ಕರ್ಮ ಆಗುತ್ತದೆ. ಇತರರಿಗಾಗಿ ಮಾಡಿದರೆ ಅದು ಯಜ್ಞವಾಗುತ್ತದೆ. ಇತರರಿಗೆ ಧ್ಯಾನ ಹೇಳಿಕೊಡುವುದು ಅದೂ ಸಹ ಒಂದು ದೊಡ್ಡ ಯಜ್ಞವೇ. ಅನೇಕಾನೇಕ ಯಜ್ಞಗಳನ್ನು ಮುಗಿಸಿ, ಅನೇಕಾನೇಕ ಧ್ಯಾನಚಕ್ರಗಳನ್ನು ಆಚರಿಸಿ ಈಗ ನಾವು ಧ್ಯಾನ ಮಹಾ ಸಭೆಯನ್ನು ನೆರವೇರಿಸುತ್ತಿದ್ದೇವೆ. ಲಕ್ಷಾಂತರ ಜನ ಒಂದು ಕಡೆ ಸೇರಿ ಇಲ್ಲಿ ನಮ್ಮ ಸ್ವಂತ ಊರಾದ ಹೈದರಾಬಾದ್ನಲ್ಲಿ ಕಾಸ್ಮಿಕ್ಪಾರ್ಟಿ ಹಬ್ಬವನ್ನು ಆನಂದದಿಂದ ಆಚರಿಸುತ್ತಿದ್ದೇವೆ.
ಧ್ಯಾನಮಹಾಯಜ್ಞಗಳಾಗಲಿ, ಧ್ಯಾನ ಮಹಾಚಕ್ರಗಳಾಗಲಿ ಎಲ್ಲಾ ನಾವು ಸಾರ್ವಜನಿಕ ಮೈದಾನಗಳಲ್ಲಿ ಆಚರಿಸಿದ್ದೇವೆ. ಆದರೆ, ಈ ಕಾಸ್ಮಿಕ್ ಪಾರ್ಟಿಯನ್ನು ನಮ್ಮ ಸ್ವಂತ ಊರಿನಲ್ಲಿ, ನಮ್ಮ ಸ್ವಂತ ಸ್ಥಳವಾದ ಹೈದರಾಬಾದ್ನಲ್ಲಿ ಕಡ್ತಾಲ್ ಎನ್ನುವ ಗ್ರಾಮದಲ್ಲಿ ಈ ಹಬ್ಬ ಆಚರಿಸುತ್ತಿದ್ದೇವೆ. ಅಂದರೆ, ಈ ಪಾರ್ಟಿಯನ್ನು ನಾವು ನಮ್ಮ ಸ್ವಂತಮನೆಯಲ್ಲಿ ನಾವು ಆಚರಿಸುವುದು ತುಂಬಾ ಸಂತೋಷಕರವಾದ ವಿಷಯ. ಈ ಕಡ್ತಾಲ ಗ್ರಾಮಕ್ಕೆ ನಾವು “ಕೈಲಾಸಪುರಿ” ಎಂದು ನಾಮಕರಣ ಮಾಡಿಕೊಳ್ಳೋಣ.
” ಹಿಂಸಾ ಛೋಡಿಯೆ ಹಂಸಾ ಪಕಡಿಯೆ “
ಡಿಸೆಂಬರ್ 3೦ ರಂದು ಪತ್ರೀಜಿಯವರ ಸಂದೇಶ : ಮೀನುಗಳನ್ನು ಹಿಡಿದು, ಕೊಂದು, ರಕ್ತಕುಡಿದು, ಆ ಮಾಂಸವನ್ನು ತಿಂದು ಹೊಟ್ಟೆಯಲ್ಲಿ ಹಾಕಿಕೊಳ್ಳುವುದು ಎಂದರೆ ಅದೇ ಪರಮಹಿಂಸೆ. ಆ ಪರಮಹಿಂಸೆಯನ್ನು ಬಿಟ್ಟು ನಾವು ಹಂಸವನ್ನು, ಅಂದರೆ, ಶ್ವಾಸವನ್ನು ಹಿಡಿಯಬೇಕು. ಪರಮಹಂಸರಾಗಬೇಕು. ಸರಸ್ವತೀದೇವಿಯ ವಾಹನ ಹಂಸ. ಆದ್ದರಿಂದ, ನಾವು ಆ ಹಂಸದ ಜೊತೆ ಇದ್ದರೆ, ಅಂದರೆ, ಶ್ವಾಸದ ಜೊತೆ ಇದ್ದರೆ ನಮಗೆ ಸರಸ್ವತಿಯ ಪೂರ್ಣಜ್ಞಾನ ಲಭ್ಯವಾಗುತ್ತದೆ. ಸರಸ್ವತಿಯು ಜ್ಞಾನ ದೇವತೆ. ಹಂಸಗಾಮಿ ಆಗದೆ, ಹಂಸಗಮನ ಇಲ್ಲದೆ, ಹಂಸಾರೋಹಣವಾಗದೆ ನಾವು ಸರಸ್ವತೀ ಪುತ್ರರಾಗಲಾರೆವು. ಧ್ಯಾನದಿಂದಲೇ ಜ್ಞಾನ, ಜ್ಞಾನದಿಂದಲೇ ಮುಕ್ತಿ. “ಜ್ಞಾನಾನ್ ಮುಕ್ತಿಃ” ಎಂದು ಸಾಂಖ್ಯಯೋಗದಲ್ಲಿ ಹೇಳಲಾಗಿದೆ. ಅಂದರೆ, ಜ್ಞಾನದಿಂದಲೇ ಮುಕ್ತಿ ಸಿಗುತ್ತದೆ. ಆ ಜ್ಞಾನ ಹೇಗೆ ಬರುತ್ತದೆ? ಹಂಸ ವಾಹನದಲ್ಲಿ ಪಯಣಿಸಬೇಕು. ಹಂಸಗಾಮಿ ಆಗಬೇಕು. ಹಂಸಯಾನ ಮಾಡಬೇಕು. ಹಂಸಯಾನ ಮಾಡುತ್ತಾ ಮಾಡುತ್ತಾ ನಾವು ಪರಮ ಹಂಸರಾಗುತ್ತೇವೆ. “ಹಿಂಸಾ ಛೋಡಿಯೇ ಹಂಸಾ ಪಕಡಿಯೆ” ಅಂದರೆ, ಹಿಂಸೆಯನ್ನು ಬಿಡಿ, ಹಂಸವನ್ನು ಹಿಡಿದುಕೊಳ್ಳಿ. ವಿಶ್ವಕ್ಕೆ ನೀಡಲಾದ ನಮ್ಮ ಧ್ಯಾನ ಮಹಾಚಕ್ರದ ಸಂದೇಶ ಇದೇ.
” ಯಾರು ಸಾವು ಎಂದರೆ ಹೆದರುವುದಿಲ್ಲವೊ ಅವರ ಹತ್ತಿರ ಸಾವು ಬರುವುದೇ ಇಲ್ಲ “
ಡಿಸೆಂಬರ್ 31 ರಂದು ಪತ್ರೀಜಿಯವರ ಸಂದೇಶ : ಬ್ರಹ್ಮಜ್ಞಾನವನ್ನು ಹೊಂದಿದವರೆಲ್ಲಾ ಬ್ರಹ್ಮರ್ಷಿಗಳೇ. “ನಾನೆ ಎಲ್ಲಾ, ಎಲ್ಲಾ ನಾನೆ” ಎಂದು ಅರಿತುಕೊಳ್ಳುವುದೆ ‘ಬ್ರಹ್ಮಜ್ಞಾನ’. ಪಿರಮಿಡ್ ಮಾಸ್ಟರ್ಸ್ ಎಲ್ಲರೂ ಬ್ರಹ್ಮರ್ಷಿಗಳು.
ಒಂದು ಸಲ ಸ್ವರ್ಣಮಾಲಾ ಮೇಡಂ ಅವರಿಗೆ ಚೇಳು ಕುಟಿಕಿತ್ತು. ಆಗ ಆಕೆ ಕಿರುಚುತ್ತಾ ವೈದ್ಯರ ಹತ್ತಿರ ಹೋಗೋಣವೆಂದು ಹೇಳಿದರು.ನಾನು ಆಕೆಯನ್ನು ಒಂದು ಕೊಠಡಿಯಿಂದ ಹೊರಗೆ ಬಂದು T.V.ನಲ್ಲಿ ಕ್ರಿಕೆಟ್ ಮ್ಯಾಚ್ ವೀಕ್ಷಿಸುತ್ತಿದೆ. ಆಕೆ ಒಳಗೆ ಒಂದೇ ಸಮ ಕಿರುಚುತ್ತಿದ್ದರು. ಅನಂತರ ಧ್ಯಾನಮಾಡಿದ್ದಕ್ಕೆ ಅವರ ನೋವು ನಿವಾರಣೆ ಆಗಿ ನಗುನಗುತ್ತಾ ಹೊರಗೆ ಬಂದರು. ಆದ್ದರಿಂದ, ಸತ್ತರೂ ಪರವಾಗಿಲ್ಲ ವೈದ್ಯರಹತ್ತಿರ ಹೋಗಬೇಡಿ ಔಷಧಿ ಸೇವನೆ ಮಾಡಬೇಡಿ. ಧ್ಯಾನಮಾಡಿ ನಮ್ಮ ರೋಗವಾಸಿ ಮಾಡಿಕೊಳ್ಳಬೇಕು. ಮನುಷ್ಯ ಸಾವಿಗೆ ಎಷ್ಟು ಹೆದರಿದರೆ ಅಷ್ಟು ಬೇಗ ಸಾವಿಗೆ ಹತ್ತಿರವಾಗುತ್ತಾನೆ. ಸಾವಿಗೆ ಏಕೆ ಹೆದರಬೇಕು. ಆತ್ಮಕ್ಕೆ ಸಾವಿಲ್ಲವಲ್ಲ. ದೇಹಕ್ಕೆ ಮಾತ್ರ ಸಾವು. ನಾವು ಈ ದೇಹ ತ್ಯಜಿಸಿದರೆ ಮತ್ತೊಂದು ಹೊಸ ದೇಹ ಧರಿಸಿ ಪುನಃ ಈ ಭೂಮಂಡಲಕ್ಕೆ ಬೇಕಾದರೆ ಬರಬಹುದು ಅಲ್ಲವೇ?. ಆದ್ದರಿಂದ, ಸಾವಿಗೆ ಹೆದರದೆ ಧ್ಯಾನಮಾಡಿ ನಿಮ್ಮ ಕಷ್ಟಗಳನ್ನು ನಿವಾರಿಸಿಕೊಂಡು, ಬಯಕೆಗಳನ್ನು ತೀರಿಸಿಕೊಂಡು, ಕರ್ಮಗಳನ್ನು ಕಳೆದುಕೊಂಡು, ಪೂರ್ಣಜ್ಞಾನವನ್ನು ಪಡೆದು, ಮುಕ್ತ ಜೀವಿಗಳಾಗಿರಿ. ಯಾರು ಸಾವು ಎಂದರೆ ಹೆದರುವುದಿಲ್ಲವೊ ಅವರ ಹತ್ತಿರ ಸಾವು ಬರುವುದೇ ಇಲ್ಲ.
ಪಿರಮಿಡ್ ಮಾಸ್ಟರ್ ಆಗಬೇಕಾದರೆ ಮೊದಲು ಸಸ್ಯಾಹಾರಿ ಆಗಬೇಕು. ನನ್ನ ಹಿಂದಿನ ಜನ್ಮದಲ್ಲಿ ನಾನು ಒಬ್ಬ ಸೂಫೀ ಮಾಸ್ಟರ್ ಆಗಿದ್ದೆ. ಇನ್ನೂ ಒಂದು ಜನ್ಮದಲ್ಲಿ ಯೂರೋಪ್ನಲ್ಲಿ ಜನಿಸಿದೆ. ಅಲ್ಲಿ ಆಗ ನಾನು ‘ವಿಚಿತ್ರ ವೀಣೆ’ ನುಡಿಸುತ್ತಿದೆ. ಮತ್ತೊಂದು ಜನ್ಮದಲ್ಲಿ ಅಮೆರಿಕಾದಲ್ಲಿ ಜನಿಸಿ ಅಲ್ಲಿ ಕಾರ್ಯವನ್ನು ನಿರ್ವಹಿಸಿದೆ. 2,500 ವರ್ಷಗಳ ಹಿಂದೆ ನಾನು ಗೌತಮ ಬುದ್ಧರ ಹತ್ತಿರ ಪ್ರಧಾನ ಶಿಷ್ಯನಾಗಿದ್ದೆ. ಆಗ ನನ್ನ ಹೆಸರು ಆನಂದ. 40 ವರ್ಷಗಳಕಾಲ ನಾನು ಗೌತಮ ಬುದ್ಧನ ಹತ್ತಿರ ಇದ್ದು ಅವರಿಗೆ ಸೇವೆ ಮಾಡಿದ್ದೇನೆ. ನನ್ನ ಮಡಿಲಲ್ಲೇ ಅವರು ತಮ್ಮ ಕೊನೆಯುಸಿರನ್ನು ಎಳೆದು, ದೇಹವನ್ನು ತ್ಯಜಿಸಿದರು. ಈ ಪಿರಮಿಡ್ ಸ್ಪಿರಿಚ್ಯುವಲ್ ಮೂವ್ಮೆಂಟ್ ಸೊಸೈಟಿ ಅಲ್ಲಿಂದ (ಗೌತಮಬುದ್ಧನ ಕಾಲದಿಂದ) ಪ್ರಾರಂಭವಾಯಿತು. ಇಲ್ಲಿರುವ ಅನೇಕ ಜನ ಅಲ್ಲಿ ನನ್ನ ಜೊತೆ ಇದ್ದವರೆ. ನಾವೆಲ್ಲರೂ ಅನೇಕ ಜನ್ಮಗಳಿಂದ ಸಹ ಪ್ರಯಾಣಿಕರು. ಅನೇಕ ಜನರಿಗೆ ತಂದೆಯಾಗಿ, ತಾಯಿಯಾಗಿ, ಮಗನಾಗಿ, ಮಗಳಾಗಿ, ಗಂಡನಾಗಿ, ಹೆಂಡತಿಯಾಗಿ, ಗಂಡಾಗಿ, ಹೆಣ್ಣಾಗಿ ನಾವೆಲ್ಲಾ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದೇವೆ. ಪ್ರತಿಯೊಬ್ಬರೂ ಸಹ ಸುಮಾರು 400 ಜನ್ಮಗಳನ್ನು ಪಡೆಯುತ್ತೇವೆ. ಆದ್ದರಿಂದ, ಕೆಲವು ಜನ್ಮಗಳು ಸ್ತ್ರೀಯಾಗಿ, ಕೆಲವು ಜನ್ಮಗಳು ಪುರುಷನಾಗಿ, ಇನ್ನು ಕೆಲವು ಜನ್ಮಗಳು ಬಡವನಾಗಿ, ಶ್ರೀಮಂತರಾಗಿ ಇನ್ನೂ ಕೆಲವು ಜನ್ಮಗಳು M.L.Aಯಾಗಿ, M.P.ಯಾಗಿ ಹುಟ್ಟುತ್ತೇವೆ. ಇವೆಲ್ಲಾ ಸಹ ಒಳ್ಳೆಯ ಪಾತ್ರಗಳು (ನಾಟಕದಲ್ಲಿ ಇದ್ದ ಹಾಗೆ) ಈ ನಾಟಕಗಳನ್ನೇ ಸತ್ಯ ಎಂದುಕೊಂಡು ಜೀವಿಸಿದರೆ ದುಃಖ, ಈ ನಾಟಕವನ್ನು ನಾಟಕ ಎಂದು ಸ್ವೀಕರಿಸಿದರೆ ಎಂತಹ ಆನಂದವು.
ನಾವು ಸಿನಿಮಾ ನೋಡಿಬರುತ್ತೇವೆ. ಹಾಗೆ ಜೀವನ ಸಹ ಒಂದು ಸಿನಿಮಾ ಇದ್ದಹಾಗೆ. ವಿಲಿಯಮ್ ಷೇಕ್ಸ್ಪಿಯರ್ ಹೇಳಿರುವುದೇನೆಂದರೆ ಈ ಭೂಮಂಡಲವೆಲ್ಲಾ ಒಂದು ವೇದಿಕೆ. ಅದರ ಮೇಲೆ ನಾವೆಲ್ಲಾ ನಟಿಸುತ್ತಿರುವ ನಟರು. ನಮ್ಮ ಪಾತ್ರ ಮುಗಿದನಂತರ ನಾವು ವೇದಿಕೆ ಬಿಟ್ಟು ಹೊರಟು ಹೋಗುತ್ತೇವೆ. ಆದ್ದರಿಂದ, ಈ ಅಂತಿಮ ಜನ್ಮದಲ್ಲಿ ನಾವೆಲ್ಲರೂ ಒಬ್ಬ ಪಿರಮಿಡ್ ಮಾಸ್ಟರಾಗಿ, ಒಬ್ಬ ಗೌತಮಬುದ್ಧರಾಗಿ ನಾವು ಇಲ್ಲಿಗೆ ಬಂದಿದ್ದೇವೆ. ಇಲ್ಲಿ ನಮ್ಮ ಕೆಲಸವೇನೆಂದರೆ ಎಲ್ಲರನ್ನೂ ಸಸ್ಯಾಹಾರಿಗಳಾಗಿ ಬದಲಾಯಿಸುವುದು. ಎಲ್ಲರನ್ನೂ ಧ್ಯಾನಿಗಳಾಗಿ ಮಾಡುವುದು. ಎಲ್ಲರಿಂದಲೂ ಒಳ್ಳೆಯ ಆಧ್ಯಾತ್ಮಿಕ ಪುಸ್ತಕಗಳನ್ನು ಓದಿಸುವುದು. ಎಲ್ಲರಿಗೂ ಪಿರಮಿಡ್ಗಳನ್ನು ನಿರ್ಮಿಸಿ ಎಂದು ಪ್ರೋತ್ಸಾಹ ನೀಡುವುದು.
ನಾವು ಚಿರಕಾಲ ಜೀವಂತವಾಗಿರಲು ಊಟ ಮಾಡುವ ಅವಶ್ಯಕತೆ ಇಲ್ಲ. ಜಾಸ್ಮುಹೀನ್ ಎನ್ನುವ ಮಹಿಳೆ ಆಸ್ಟ್ರೇಲಿಯಾದಿಂದ ಬಂದಿದ್ದಾರೆ. ಆಕೆ 13 ವರ್ಷಗಳಿಂದ ಏನೂ ತಿನ್ನುತ್ತಿಲ್ಲ. ಬರೀ ನೀರು ಮಾತ್ರ ಕುಡಿಯುತ್ತಿದ್ದಾರೆ. ಮತ್ತೆ ನಾವು ಯಾಕೆ ಹಾಗೆ ಮಾಡುತ್ತಿಲ್ಲ. ನಮ್ಮ ಈ ಶರೀರ ದೇವಾಲಯ, ನಮ್ಮ ಆತ್ಮವೇ ದೇವರು. ನಾವು ರುಚಿಗಾಗಿ ಊಟಮಾಡುತ್ತಿರುತ್ತೇವೆ. ಇದು ದೇವರ ಶರೀರ, ಅನಂತಕಾಲದವರೆಗೂ ಉಳಿದಿರುತ್ತದೆ. “ದೇಹೋ ದೇವಾಲಯೋ ಪ್ರೋಕ್ತಃ, ಜೀವೋ ದೇವೋ ಸನಾತನಃ” ನಮ್ಮ ಅನಾದಿಕಾಲದಿಂದ ಇರುವ ದೇವರುಗಳು ಈ ಶರೀರ ದೇವಾಲಯ. ಈ ದೇವರಿರುವ ದೇವಾಲಯ ಎಷ್ಟು ದಿನ ಬೇಕಾದರೂ ಇರುತ್ತದೆ. ನಮ್ಮ ಭಾವನೆಯನ್ನು ಬದಲಾಯಿಸಿಕೊಳ್ಳಬೇಕು. “ಯದ್ಭಾವಂ ತದ್ಭವತಿ”. ಉದಾಹರಣೆಗೆ ಒಬ್ಬ ಹುಡುಗ 20 ದಿನಗಳ ಕಾಲ ಉಪವಾಸವಿದ್ದ. ಶರೀರ ಕ್ಷೀಣಿಸಿತು. ಇನ್ನು 5 ದಿನಗಳು ಉಪವಾಸಮುಂದುವರೆಸಿದ, ಮರಣಿಸಿದ. ಏತಕ್ಕಾಗಿ ಮರಣಿಸಿದ? ಆ ಆಸ್ಟ್ರೇಲಿಯನ್ ಮಾಸ್ಟರ್ ಆದ ಜಾಸ್ಮುಹಿನ್ 13 ವರ್ಷ ಆದರೂ ಹೇಗೆ ಜೀವಂತವಾಗಿದ್ದಾರೆ. ಒಬ್ಬ ಮನುಷ್ಯನಿಗೆ ಹೀಗಾಯಿತು. ಇನ್ನೊಬ್ಬ ಮನುಷ್ಯನಿಗೆ ಹಾಗಾಯಿತು. ಇದೇಕೆ ಹೀಗೆ? ಏಕೆಂದರೆ, ಒಬ್ಬರ ಭಾವನೆ ಊಟವಿಲ್ಲದಿದ್ದರೆ ನಾನು ಸಾಯುತ್ತೇನೆ ಎಂದಿದೆ. ಇನ್ನೊಬ್ಬರ ಮನಸ್ಸು ನಾನು ಊಟವಿಲ್ಲದಿದ್ದರೂ ಸಾಯುವುದಿಲ್ಲ ಎಂದು ಭಾವಿಸಿದ್ದಾರೆ. ಹೀಗೆ, ಸತ್ಯದಲ್ಲಿ ಜೀವಿಸಿದರೆ ನಾವು ಎಷ್ಟು ವರ್ಷ ಬೇಕಾದರೂ ಜೀವಿಸಬಹುದು.
ಒಂದುಬಾರಿ ಏನಾಯಿತೆಂದರೆ ಏಸುಪ್ರಭುವು ಎಲ್ಲೋ ಹೋಗುತ್ತಿದ್ದರು. ಅನೇಕ ಜನರು ಅವರ ಬಟ್ಟೆಗಳನ್ನು ಹಿಡಿದುಕೊಳ್ಳುತ್ತಿದ್ದರು, ಎಳೆಯುತ್ತಿದ್ದರು. ಜೀಸಸ್ ಹಿಂದೆ ತಿರುಗಿ ನೋಡಿ, ಯಾರದು ನನ್ನ ಬಟ್ಟೆಗಳನ್ನು ಹಿಡಿದು ಎಳೆಯುತ್ತಿರುವುದು ಎಂದರು. ನಾವೇ ಸ್ವಾಮಿ ನಿಮ್ಮನ್ನು ಮುಟ್ಟಿದರೆ, ನಿಮ್ಮ ಬಟ್ಟೆಗಳನ್ನು ತಾಕಿದರೆ ನಮ್ಮ ಕುಷ್ಟರೋಗ ವಾಸಿಯಾಗಿಹೋಗಿದೆ. ನಮ್ಮ ಆರೋಗ್ಯ ಸುಧಾರಿಸಿದೆ ಎಂದು ಹೇಳಿದರು. “ನನ್ನನ್ನು ಮುಟ್ಟುವುದರಿಂದ ನಿಮ್ಮ ವ್ಯಾಧಿ ನಿವಾರಣೆ ಆಗುವುದಿಲ್ಲ, ನಿಮ್ಮ ವಿಶ್ವಾಸವೇ ನಿಮ್ಮ ಆರೋಗ್ಯ ಸುಧಾರಣೆಗೆ ಕಾರಣ” ಎಂದು ಉತ್ತರಿಸಿದರು. ನೋಡಿದ್ದಿರಾ, ನಾನು ನಿಮಗೆ ವಾಸಿ ಮಾಡಿದ್ದೇನೆ ಎಂದು ಹೇಳಲಿಲ್ಲ. ನಿಮ್ಮ ವಿಶ್ವಾಸದಿಂದಲೇ ನೀವು ರೋಗಮುಕ್ತರಾಗಿದ್ದೀರ ಎಂದು ಅವರು ಹೇಳಿದರು. ಇನ್ನು ಅನೇಕರು ಏಸುಪ್ರಭುವಿನ ಬಟ್ಟೆಗಳನ್ನು ಮುಟ್ಟಿದರೆ ನಮಗೆ ರೋಗ ನಿವಾರಣೆ ಆಗುತ್ತಾ… ನೋಡೋಣ ಎಂದು ಮುಟ್ಟಿದರು. ಆದರೆ, ಅವರಿಗೆ ಏನೂ ಫಲ ಸಿಗಲಿಲ್ಲ. ಆಗ ಏಸುಪ್ರಭುವಲ್ಲಿ ಏನೇನೂ ಮಹತ್ವವಿಲ್ಲ ಎಂದು ಹೇಳತೊಡಗಿದರು. ಅಂದರೆ, ಇಲ್ಲಿ ನಂಬಿಕೆ, ಭಾವನೆ ಮುಖ್ಯ. ಏಸುಪ್ರಭುವಲ್ಲಿ ಮಹತ್ವವಿಲ್ಲ. ನಿಮ್ಮ ವಿಶ್ವಾಸದಲ್ಲಿ ಮಹತ್ವವಿದೆ. ನಾನು ಈ ಶರೀರ, ಆದ್ದರಿಂದ, ನಾನು ಊಟಮಾಡದಿದ್ದರೆ ನಾನು ಸಾಯುತ್ತೇನೆ ಎಂದು ಭಾವಿಸಿದರೆ ಸಾಯುವುದು ಖಚಿತ. ಹಾಗೆಲ್ಲದೆ, ನಾನು ಈ ಶರೀರ ಅಲ್ಲ. ನಾನು ಆತ್ಮ, ನಾನು ಉಳಿಯಲು ಈ ಶರೀರಕ್ಕಲ್ಲ ಆಹಾರ ಬೇಕಾಗಿರುವುದು, ಆತ್ಮಕ್ಕೆ ಎನ್ನುವ ಸತ್ಯದಲ್ಲಿ ಜೀವಿಸಿದರೆ ಆಗ ನಾವು ಎಷ್ಟುಕಾಲ ಬೇಕಾದರೂ ಜೀವಂತವಾಗಿ ಇರಬಹುದು.
ನಾನು M.L.A ಆಗುತ್ತೇನೆ ಎನ್ನುವ ತಮ್ಮ ಮೇಲೆ ತಮಗೆ ನಂಬಿಕೆ ಇರುವುದರಿಂದಲೇ M.L.A ಆಗಲು ಸಾಧ್ಯ. ನಾನು M.L.A ಆಗಬೇಕು ಎಂದು ಆಸೆ ಇದೆ. ಆದರೆ, ಆಗುತ್ತೇನೊ? ಇಲ್ಲವೊ? ಎನ್ನುವ ಸಂಶಯವಿದ್ದರೆ M.L.A ಆಗಲು ಸಾಧ್ಯವೇ ಇಲ್ಲ. M.L.A ಆಗುವುದು ಸಾಮಾನ್ಯ ವಿಷಯವಲ್ಲ. ಸಮಾಜ ಸೇವೆ ಮಾಡಿ ಅನೇಕ ಜನರ ಮನಸ್ಸನ್ನು ಗೆಲ್ಲಬೇಕಾಗುತ್ತದೆ. ಹಾಗೇ ನಾನು ಯೋಗೀಶ್ವರನಾಗಬೇಕೆಂದು ದೃಢಸಂಕಲ್ಪ ಮಾಡಿದರೆ ನಾವು ಯೋಗೀಶ್ವರರಾಗಿಯೇ ತೀರುತ್ತೇವೆ. ಈ ಕಡ್ತಾಲ್ನಲ್ಲಿ ಇಂಥ ಬೃಹತ್ ಆಕಾರದ ಪಿರಮಿಡ್ ಆಗಬೇಕು ಎಂದು ನಿರ್ಣಯಿಸಿದ್ದೇವೆ. ನಾವು ಸಂಕಲ್ಪಿಸಿದ ಹಾಗೆ ಆಯಿತಲ್ಲವೆ? ಕೆಲಸಗಳು ನೆರವೇರಲು ಕೈಯಲ್ಲಿ ಹಣವಲ್ಲ ಬೇಕಾಗಿರುವುದು, ನಮ್ಮಲ್ಲಿ ಭಾವನೆ ಶಕ್ತಿಯುತವಾಗಿರಬೇಕು. ಅದಕ್ಕೇ ಹೇಳುವುದು “ಯದ್ಭಾವಂ ತದ್ಭವತಿ” ಎಂದು. ನಾನು ಆತ್ಮ ಎಂದು ಜೀವಿಸಿದರೆ ಚಿರಕಾಲ ಜೀವಿಸುತ್ತಾರೆ. ನಾನು ಆತ್ಮ, ನಾನು ದೇವರೆ. ಆದರೆ, ನಮಗೆ ಆ ವಿಷಯದಲ್ಲಿ ವಿಶ್ವಾಸವಿಲ್ಲ. ವಿಶ್ವಾಸ ಬರಬೇಕಾದರೆ ಏನು ಮಾಡಬೇಕು? ಧ್ಯಾನ ಮಾಡಬೇಕು. ಆ ವಿಶ್ವಾಸವು ಧ್ಯಾನದಿಂದ ಬರುತ್ತದೆ. 30 ವರ್ಷಗಳ ಹಿಂದೆ ಇನ್ನೂ ನನಗೆ ಧ್ಯಾನವನ್ನು ಕುರಿತು ತಿಳಿಯದಿದ್ದಾಗ ನಾನು ಒಬ್ಬ ಸಾಮಾನ್ಯ ಮನುಷ್ಯ. ನಾನು ಒಬ್ಬ ಗಂಡ, ಎರಡು ಮಕ್ಕಳ ತಂದೆ, ನಾನು ಒಬ್ಬ ಉದ್ಯೋಗಿ. ನಾನಾಯಿತು ನನ್ನ ಸಂಸಾರವಾಯಿತು… ಹೀಗೆ ಇತ್ತು ನನ್ನ ಜೀವನ. ಆದರೆ, ಧ್ಯಾನಕ್ಕೆ ಬಂದನಂತರ ಜೀವನವೆಲ್ಲಾ ಬದಲಾಗಿಬಿಟ್ಟಿದೆ. ನಾನೇ ಜಗತ್ತಿಗೆಲ್ಲಾ ಧ್ಯಾನ ಹೇಳಿಕೊಡುತ್ತೇನೆ. ನಾನು, ನನ್ನ ಕುಟುಂಬ ಅಂತ ಇದ್ದ ನಾನು, ಧ್ಯಾನ ಮಾಡಿದ ಮೇಲೆ ಈ ವಿಶ್ವವೇ ನನ್ನ ಕುಟುಂಬವಾಯಿತು. ಸ್ನೇಹಿತರೇ, ನೋಡಿದಿರಾ, ನನ್ನ ಜೀವನದಲ್ಲಿ ಎಂತಹ ಬದಲಾವಣೆ ಬಂದಿದೆ.
ಆ ದಿನಗಳಲ್ಲಿ ನಮ್ಮ ಕಂಪನಿಯವರು ನಮಗೆ ಮನೆಕಟ್ಟಿಕೊಳ್ಳಲು ಸಾಲಕೊಡುತ್ತಿದ್ದರು. ಆದರೆ, ಏಕೋ ನನಗೆ ಮನೆ ಕಟ್ಟಲು ಮನಸ್ಸಿರಲಿಲ್ಲ. ಮನೆ ಕಟ್ಟಿಕೊಂಡರೆ ಬಂಧಿತರಾಗುತ್ತೇವೆ. ಮನೆ ಕಟ್ಟಿಕೊಳ್ಳದಿದ್ದರೆ ಹಾಯಾಗಿ ಬೀದಿಯಲ್ಲಿ ಓಡಾಡಿಕೊಂಡಿರಬಹುದು ಎಂದು ನಾನು ತಮಾಷೆ ಮಾಡಿದ್ದೆನು. ಧ್ಯಾನವು ಈ ದಿನ ಇಂತಹ ಮಹಾಕಾರ್ಯವನ್ನು ಮಾಡಿಸಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ M.L.A ಯವರನ್ನು, ರಾಜ್ಯದ ರಾಜ್ಯಪಾಲರನ್ನು ಇಲ್ಲಿಗೆ ಕರೆ ತಂದದ್ದು ಯಾರು? ಧ್ಯಾನ ಅಲ್ಲವೇ. ನಮ್ಮ ಹತ್ತಿರ ಸಂಪತ್ತು ಏನಾದರೂ ಇದೆಯಾ? ನಾವೆಲ್ಲಾ ಭಿಕಾರಿಗಳು. ನಾವು ಬಡವರಾದರು ನಮಗೆ ಸಂಕಲ್ಪಶಕ್ತಿ ಇದೆ ಮತ್ತು ಗುಣಗಳಲ್ಲಿ ನಾವು ಶ್ರೀಮಂತರು.
” ಸತ್ಯಮೇವ ಜಯತೇ… ಪತ್ರೀಜಿ ನೂತನ ವರ್ಷಸಂದೇಶ “
“ಪಿರಮಿಡ್ ಮಾಸ್ಟರ್ಗಳೆಲ್ಲರೂ ಈ ಭೂಮಿಗೆ ಇಳಿದು ಬಂದ ದೇವರುಗಳು. ಈ ದೇವರುಗಳೆಲ್ಲಾ ನೂತನ ಯುಗದಲ್ಲಿನ ಹೊಸ ವರ್ಷದಲ್ಲಿ ಕೈಗೊಳ್ಳಬೇಕಾದ ಪ್ರಮುಖ ಪ್ರಣಾಳಿಕೆ… ಸತ್ಯವನ್ನು ಪ್ರಪಂಚಕ್ಕೆ ಸ್ಪಷ್ಟಪಡಿಸುವುದು. ‘ದೇವರೆಲ್ಲಿ’? ಎನ್ನುತ್ತಾ ಹುಡುಕಾಡುವವರೆಲ್ಲರಿಗೂ ಧ್ಯಾನ ಪ್ರಚಾರದ ಮೂಲಕ, ‘ನೀನೆ ದೇವರಯ್ಯಾ’ ಎನ್ನುವ ಆತ್ಮಸತ್ಯವನ್ನು ತಿಳಿಸಬೇಕು”.
“ಆತ್ಮಜ್ಞಾನವನ್ನು ನೀಡುವ ನವ್ಯಯುಗ ವಿಜ್ಞಾನಶಾಸ್ತ್ರ ವಿಚಾರವನ್ನು ಅವರಿಗೆ ತಲುಪಿಸುವ ಸ್ವಾಧ್ಯಾಯವನ್ನು ಪ್ರೋತ್ಸಾಹಿಸಬೇಕು. ಪಿರಮಿಡ್ ಅದ್ಭುತಶಕ್ತಿಯನ್ನು ಇನ್ನೂ ಹೆಚ್ಚಾಗಿ ವಿಶ್ವವ್ಯಾಪಿ ಮಾಡುವುದರ ಮೂಲಕ ಭೂಮಿಯನ್ನು ಇನ್ನು ಅಧಿಕವಾಗಿ ಶಕ್ತಿಯುತವಾಗಿಸಬೇಕು”. “ಅವರವರ ವಾಸ್ತವತೆಗಳಿಗೆ ಅವರವರೇ ಕಾರಣಕರ್ತರು” ಎನ್ನುವ ಸತ್ಯವನ್ನು ಅರ್ಥಮಾಡಿಕೊಂಡು… ಅದಕ್ಕನುಗುಣವಾಗಿ ಅರಿವಿನಿಂದ ಜೀವಿಸುವ ಹಾಗೆ ಅವರಿಗೆ ಸಜ್ಜನಸಾಂಗತ್ಯದ ಭಾಗ್ಯವನ್ನು ದೊರಕಿಸಿಕೊಡಬೇಕು.
“ಹೀಗೆ ಈ ನಾಲ್ಕು ಆತ್ಮಸತ್ಯಗಳನ್ನು ಪ್ರಜೆಗಳಿಗೆಲ್ಲರಿಗೂ ನೀಡುತ್ತಾ ಸತ್ಯಮಾರ್ಗದಲ್ಲಿ ಜೀವಿಸಬೇಕು. ಅಹಿಂಸಾ ಧರ್ಮವನ್ನು ಚಾಚೂತಪ್ಪದೇ ಪಾಲಿಸಬೇಕು. ಮುಂಬರುವ ದಿನಗಳಲ್ಲಿ ಮತ್ತೆಯಾವ ’ಮತಗಳು’, ಮತ್ತೆಯಾವ ‘ಇಸಂ’ಗಳು, ಜಾತಿಗಳು ವಿಶ್ವದಲ್ಲಿರುವುದಿಲ್ಲ.
ಇರುವುದು ಎರಡೇ ಎರಡು ‘ಮತಗಳು’ ಒಂದು ಸಸ್ಯಾಹಾರ ಮತ… ಅಂದರೆ, ಧರ್ಮಯುತ ದೇವತೆಗಳ ಮತ ಮತ್ತು ಎರಡನೆಯದು ಮಾಂಸಾಹಾರ ಮತ, ಅಂದರೆ, ಅಧರ್ಮಯುತ ರಾಕ್ಷಸರ ಮತ.
“ವಿಜಯ ಎಂದಿಗೂ ಧರ್ಮದ ಕಡೆಯೇ ಇರುತ್ತದೆ ಎನ್ನುವುದು ಚರಿತ್ರೆ ಹೇಳುತ್ತಿರುವ ಸತ್ಯ. ಆದ್ದರಿಂದ… ಎಂದಿಗಾದರೂ ಈ ಪ್ರಪಂಚದಲ್ಲಿ ಉಳಿದು ಬಾಳುವುದು ಕೇವಲ ಸಸ್ಯಾಹಾರಿಗಳು ಮಾತ್ರವೆ. ಆ ಮಹಾ ಸಂದೇಶವನ್ನು ಈ ದಿನ ನಾವು ಈ ಮಹಾ ಪಿರಮಿಡ್ ಶಕ್ತಿಕ್ಷೇತ್ರವಾದ ‘ಕೈಲಾಸಪುರಿ’ಯಿಂದ ಇಡೀ ಪ್ರಪಂಚಕ್ಕೆ ತಿಳಿಸೋಣ. ‘ಸತ್ಯಮೇವ ಜಯತೇ’. ಸತ್ಯವೇ ಎಂದೆಂದಿಗೂ ಜಯಿಸುತ್ತದೆ.
Recent Comments