” ಪ್ರಾಣಮಯಕೋಶವನ್ನು ವಿಸ್ತರಿಸಿಕೊಳ್ಳುವುದೇ ಲಿಂಗಪೂಜೆ “

ಕಳೆದ ಜೂನ್ 26ರಂದು, ಬೀದರ ನಗರದ ರಂಗಮಂದಿರದಲ್ಲಿ ಸಾಯಂಕಾಲ ಬ್ರಹ್ಮರ್ಷಿ ಪತ್ರೀಜಿಯವರಿಂದ ಪಿರಮಿಡ್ ಧ್ಯಾನ ಶಿಬಿರ ನಡೆಯಿತು.

ಶಿಬಿರದಲ್ಲಿ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಆಂದೋಲನದ ಸಂಸ್ಥಾಪಕರಾದ ಬ್ರಹ್ಮರ್ಷಿ ಪತ್ರೀಜಿರವರು ಮಾತನಾಡಿ, ಧ್ಯಾನದಿಂದ ಮನುಷ್ಯ ಅಜ್ಞಾನದಿಂದ ಜ್ಞಾನದ ಕಡೆಗೆ, ಅನಾರೋಗ್ಯದಿಂದ ಆರೋಗ್ಯದ ಕಡೆಗೆ, ದುಃಖದಿಂದ ಸಂತೋಷದ ಕಡೆಗೆ ಮನುಷ್ಯನನ್ನು ಒಯ್ಯುವ ಸಾಧನವಾಗಿದೆ. ಧ್ಯಾನವು ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಸದೃಢವಾಗಿಡುತ್ತದೆ ಎಂದು ವಿವರಿಸಿದರು.

ಪತ್ರೀಜಿ ಸಂದೇಶ:

ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್‌ನಲ್ಲಿ ಹೇಳುವ ಮೊಟ್ಟಮೊದಲು ವಾಕ್ಯ ‘ನಾವೆಲ್ಲರೂ ದೇವರು’. ನಾವು ‘ಶರೀರ’ ಅಲ್ಲ, ನಾವು ‘ಆತ್ಮ’. ‘ಆತ್ಮ’ ಎಂದರೆ ‘ದೇವರು’, ‘ದೇವರು’ ಎಂದರೆ ‘ಆತ್ಮ’. ಶರೀರ ತಾತ್ಕಾಲಿಕವಾದದ್ದು, ಆತ್ಮ ಶಾಶ್ವತವಾದದ್ದು.

ಮೂವತ್ತು ವರ್ಷಗಳ ಹಿಂದೆ ನನಗೆ ಈ ಸತ್ಯ ತಿಳಿದಿರಲಿಲ್ಲ. ಧ್ಯಾನ ಮಾಡಿದ ನಂತರ ‘ನಾನು ಆತ್ಮ’ ಎಂದು ತಿಳಿದುಕೊಂಡೆ. ನಾನು ಧ್ಯಾನ ಮಾಡದೇ ಇದ್ದಿದ್ದರೆ ನನಗೆ ಇದು ಅನುಭವಕ್ಕೆ ಬರುತ್ತಿರಲಿಲ್ಲ. ಹಾಗಾಗಿ, ಧ್ಯಾನ ಮಾಡಲೇಬೇಕು.

“ಧ್ಯಾನದಿಂದಲೇ ಆತ್ಮಜ್ಞಾನ”, “ಆತ್ಮ ಅನುಭವದಿಂದಲೇ ಮುಕ್ತಿ”. ಕಾಶಿ, ತಿರುಪತಿ ಬೇರೆ ಯಾವ ದೇವಾಲಯಗಳಿಗೆ ಹೋದರೂ ನಿಮಗೆ ಏನೂ ಸಿಗುವುದಿಲ್ಲ. ನಿಮ್ಮ ಮನೆಯಲ್ಲೇ ಕುಳಿತುಕೊಂಡು ಧ್ಯಾನ ಮಾಡಿದರೆ ನಿಮಗೆ ಎಲ್ಲಾ ತಿಳಿಯುತ್ತದೆ.

ನಮ್ಮಲ್ಲಿ ಏಳು ಶರೀರಗಳಿವೆ :

ಅನ್ನಮಯಕೋಶ
ಪ್ರಾಣಮಯಕೋಶ (ಲಿಂಗಮಯಕೋಶ/ಲಿಂಗಮಯಶರೀರ)
ಮನೋಮಯಕೋಶ
ವಿಜ್ಞಾನಮಯಕೋಶ
ಆನಂದಮಯಕೋಶ
ವಿಶ್ವಮಯಕೋಶ
ನಿರ್ವಾಣಮಯಕೋಶ

ಲಿಂಗಪೂಜೆ ಎಂದರೆ ಧ್ಯಾನದಿಂದ ಎರಡನೆಯ ಶರೀರವಾದ ಪ್ರಾಣಮಯಕೋಶದ ಒಳಗೆ ಪ್ರವೇಶಿಸಿ, ಪ್ರಾಣಮಯಕೋಶವನ್ನು ವಿಸ್ತರಿಸಿಕೊಳ್ಳುವುದೇ ‘ಲಿಂಗಪೂಜೆ’ ಎಂದರೆ. ಈ ಭೌತಿಕ ಶರೀರಕ್ಕೆ ಎರಡು ಕಣ್ಣು, ಒಂದು ಮೂಗು, ಒಂದು ಬಾಯಿ, ಎರಡು ಕೈಗಳು, ಎರಡು ಕಾಲು ಈ ತರಹ ಅಂಗಗಳಿವೆ. ಆದರೆ, ಪ್ರಾಣಮಯಕೋಶಕ್ಕೆ (etheric body) ಯಾವ ಅಂಗಗಳು ಇರುವುದಿಲ್ಲ. ಅದು ಲಿಂಗಾಕಾರದಲ್ಲಿ ಇರುತ್ತದೆ. ಭೌತಿಕ ಶರೀರದಲ್ಲಿ kidneys, heart, lungs, bones ಇವೆಲ್ಲಾ ಇವೆ. ಆದರೆ, ಪ್ರಾಣಮಯ ಶರೀರದಲ್ಲಿ ಕೇವಲ ಶಕ್ತಿ, (energy) 2,72,೦೦೦ ನಾಡಿಗಳು ಇವೆ. ಈ ಪ್ರಾಣಮಯ ಕೋಶದಲ್ಲಿ 2,72,೦೦೦ ನಾಡಿಗಳಿವೆ. ಲಿಂಗಪೂಜೆ ಎಂದರೆ ಈ 2,72,೦೦೦ ನಾಡಿಗಳನ್ನು ಶುದ್ಧೀಕರಣಗೊಳಿಸುವುದು. ನಾಡೀಮಂಡಲ ಏಕೆ ಅಶುದ್ಧಿಯಾಗಿದೆ ಎಂದರೆ ನಾವು ಎಷ್ಟೋ ಜನ್ಮಗಳಲ್ಲಿ ಮಾಂಸಾಹಾರ ಸೇವಿಸಿದ್ದೇವೆ, ಎಷ್ಟೋ ಜೀವಿಗಳಿಗೆ ಹಿಂಸೆ ಕೊಟ್ಟಿದ್ದೇವೆ. ಅದೆಲ್ಲಾ ಸೇರಿ ನಾಡೀಮಂಡಲದಲ್ಲಿ ಸೇರಿಕೊಂಡು ಅಶುದ್ಧವಾಗಿರುತ್ತದೆ. ಧ್ಯಾನದಿಂದ ಮಾತ್ರ ನಾಡೀಮಂಡಲವನ್ನು ಸಂಪೂರ್ಣವಾಗಿ ಶುದ್ಧೀಕರಿಸಿಕೊಳ್ಳಬಹುದು. ನಾಡೀಮಂಡಲ ಶುದ್ಧಿ ಆದಾಗಲೇ ಮುಕ್ತಿ ಲಭಿಸುತ್ತದೆ. ಧ್ಯಾನದಿಂದಲೇ ನಾಡೀಮಂಡಲ ಶುದ್ಧಿ.

ಈ ಜನ್ಮವನ್ನು ಕೊನೆಯ ಜನ್ಮವನ್ನಾಗಿ ಮಾಡಿಕೊಳ್ಳಬೇಕು. ನಮಗೆ ಮಾರ್ಚಿ ತಿಂಗಳಲ್ಲಿ ಪರೀಕ್ಷೆ ಇದ್ದರೆ ನಾವು ಫೆಬ್ರವರಿ ತಿಂಗಳಲ್ಲಿ ಓದಲು ಪ್ರಾರಂಭಿಸಿದರೆ ಪರೀಕ್ಷೆಯಲ್ಲಿ ಪಾಸಾಗುವುದಿಲ್ಲ. ಈ ಜನ್ಮವನ್ನು ಕೊನೆಯ ಜನ್ಮವಾಗಿ ಮಾಡಿಕೊಳ್ಳಲಿಕ್ಕೆ ಇವತ್ತಿನಿಂದಲೇ ಧ್ಯಾನ ಪ್ರಾರಂಭಿಸಬೇಕು. ವೃದ್ಧರಾಗುವ ಹಂತದಲ್ಲಿ ಪ್ರಾರಂಭಿಸಿದರೆ, ಮುಕ್ತಿ ಸಿಗುವುದಿಲ್ಲ. ಇವತ್ತಿನಿಂದಲೇ ಧ್ಯಾನ ಪ್ರಾರಂಭಿಸಿದರೆ ಆಗ ಕೊನೆಗೆ ಮೂರನೇ ಕಣ್ಣು ತೆರೆಯುತ್ತದೆ, ಮುಕ್ತಿ ಸಿಗುತ್ತದೆ. ದುಃಖ ಬಂದಾಗ ದೇವರ ನಾಮಸ್ಮರಣೆ ಮಾಡಿದರೆ ಏನೂ ಲಾಭವಿಲ್ಲ. ನಾವು ಸುಖವಾಗಿದ್ದಾಗಲೆ ಧ್ಯಾನ ಸಾಧನೆಯನ್ನು ಪ್ರಾರಂಭಿಸಿದರೆ, ನಮಗೆ ದುಃಖ ಯಾವತ್ತಿಗೂ ಬರುವುದಿಲ್ಲ. ನಾವು ಬಾಲ್ಯಾವಸ್ಥೆ, ಯೌವನಾವಸ್ಥೆಯಲ್ಲಿದ್ದಾಗ ಧ್ಯಾನ ಸಾಧನೆ ಪ್ರಾರಂಭಿಸಿದರೆ, ನಮಗೆ ಎಂದೂ ದುಃಖ ಬರುವುದಿಲ್ಲ. ಬಾಲ್ಯಾವಸ್ಥೆಯಿಂದಲೇ ಧ್ಯಾನ ಮಾಡಿದರೆ ವೃದ್ಧಾಪ್ಯ ಬರುವುದೇ ಇಲ್ಲ. ನಿಮಗೆ 70-80 ವರ್ಷ ಆದರೂ ಸಹ ಶರೀರ ಆರೋಗ್ಯವಾಗಿರುತ್ತದೆ, ಶಕ್ತಿಯುತವಾಗಿರುತ್ತದೆ ಮತ್ತು ಸಾವು ಬೇಕೆಂದಾಗ ಶರೀರ ಬಿಡಬಹುದು. ಇಚ್ಛಾಮರಣ ಇರುತ್ತದೆ. ಸಾವು ನನಗೆ ಬರುತ್ತದೆ ಎಂದು ಹೆದರಿಕೊಂಡು ಜೀವನ ಮಾಡಬೇಕಾಗಿಲ್ಲ. ನಾವು ಸಾವಿಗೆ ಯಾವಾಗ ಆಮಂತ್ರಣ ಕೊಡುತ್ತೇವೊ ಆವಾಗ ಸಾವು ಬರುತ್ತದೆ. ಆ ಶಕ್ತಿ ನಮಗೆ ಬರುತ್ತದೆ. ನಿಮಗೆ ಹೋಗುವುದಕ್ಕೆ ಇಷ್ಟ ಇಲ್ಲವೆಂದರೆ, ಎಷ್ಟು ವರ್ಷಗಳು ಬೇಕೆಂದರೂ ಇಲ್ಲೇ ಇರಬೇಕೆಂದರೆ ಇರಬಹುದು. ನಾವು ದೇವರುಗಳು, ನಮ್ಮ ವಾಸ್ತವಕ್ಕೆ ನಾವೇ ಸೃಷ್ಟಿಕರ್ತರು. ನಾವು ಏನುಬೇಕೆಂದರೆ ಅದು ಸೃಷ್ಟಿಸಿಕೊಳ್ಳಬಹುದು, ನಾವು ಏನು ಬೇಕೆಂದರೆ ಅದು ಮಾಡಬಹುದು, ನಿರ್ಣಯ ತೆಗೆದುಕೊಳ್ಳಬಹುದು ಎಂದು ತುಂಬಾ ‘ಅದ್ಭುತವಾಗಿ’ ಧ್ಯಾನದ ವಿಶಿಷ್ಟತೆಯನ್ನು ಪತ್ರೀಜಿ ತಿಳಿಸಿದರು.

ನಂತರ ಒಂದು ಗಂಟೆಯ ಕಾಲ ಧ್ಯಾನ ಮಾಡಿಸಿದರು.

ಇದೇ ಸಂದರ್ಭದಲ್ಲಿ ಪಿರಮಿಡ್ ಧ್ಯಾನ ಕೇಂದ್ರದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಹುಡಗೆ ಮಾತನಾಡಿ, ಪಿರಮಿಡ್ ಧ್ಯಾನವು ಸಾಮಾನ್ಯವಾಗಿ ಮಾಡುವ ಧ್ಯಾನಕ್ಕಿಂತ ವಿಶೇಷವಾಗಿದ್ದು, ಪಿರಮಿಡ್ ಧ್ಯಾನ ಮಾಡುವುದರಿಂದ ಮೂರು ಪಟ್ಟು ಹೆಚ್ಚು ವಿಶ್ವಪ್ರಾಣಶಕ್ತಿ ದೊರೆಯುತ್ತದೆ ಎಂದು ಹೇಳಿ, ತಮ್ಮ ಧ್ಯಾನದ ಅನುಭವವನ್ನು ಶಿಬಿರಾರ್ಥಿಗಳಿಗೆ ವಿವರಿಸಿದರು.

ಪಿರಮಿಡ್ ಧ್ಯಾನ ಕೇಂದ್ರ ಬೀದರನ ಕಾರ‍್ಯದರ್ಶಿಗಳಾದ ಶ್ರೀ ಅಶೋಕಕುಮಾರ ಕುಲಕರ್ಣಿ ಮಾತನಾಡಿ, ಬ್ರಹ್ಮರ್ಷಿ ಪತ್ರೀಜಿಯವರ ಕುರಿತು ಪರಿಚಯವನ್ನು ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀ D.S ನಾಗೂರೆ, ಶಿವರಾಜ ಹುಡೆದ್, ಡಾ||ಕೈಲಾಸ್, ಸಿರಗುಪ್ಪಾದಿಂದ ಆಗಮಿಸಿದ ಶ್ರೀಮತಿ. ಸುಮಂಗಲಾ ತಮ್ಮ ಧ್ಯಾನದ ಅನುಭವವನ್ನು ಶಿಬಿರಾರ್ಥಿಗಳ ಜೊತೆ ಹಂಚಿಕೊಂಡರು. ಸಂಗಮೇಶ ಮತ್ತು ಬಸವರಾಜ, ಕೈಲಾಸ್ ನಗರ ಬೀದರ ಇವರು ತಮ್ಮ ಸಂಗೀತದಿಂದ ಎಲ್ಲರನ್ನೂ ತನ್ಮಯಗೊಳಿಸಿದರು. ಶಿಬಿರದಲ್ಲಿ ಸುಮರು 550 ಜನ ಪಾಲ್ಗೊಂಡು, ಶಿಬಿರದ ಲಾಭವನ್ನು ಪಡೆದುಕೊಂಡರು.