” ಪಿರಮಿಡ್ ಮಾಸ್ಟರ್ ಎಂದರೆ ಆರು ಮತ್ತು ಒಂದು, ಆರೂ ಸೇರಿಒಂದಾಗಿರುವವನು “
“ಕಾರಣ ಜನ್ಮರಾಗಿ ವಿಶೇಷ ಕಾರ್ಯಾರ್ಥವಾಗಿ ಈ ಭೂಮಿಯ ಮೇಲೆ ಜನ್ಮತಾಳಿದ ನಾವೆಲ್ಲಾ ಸಹ .. ಪ್ರತಿಕ್ಷಣ ಆನಂದವಾಗಿ ಜೀವಿಸಬೇಕು. ಅಂತಹ ಯಶಸ್ವಿಯಾದ ಸಾರ್ಥಕ ಜೀವನವನ್ನು ಜೀವಿಸಬೇಕಾದರೆ … ನಮ್ಮ ಕುರಿತು ನಮಗೆ ಸಂಪೂರ್ಣವಾದ ಜ್ಞಾನ ಇರಬೇಕು. ‘ನಾವು ಎಂದರೆ ಏಳು ಶರೀರಗಳ ಸಮುದಾಯ’ ಎಂದು .. ‘ಅವುಗಳಲ್ಲಿ ಒಂದಾದ ಪ್ರಾಣಮಯ ಶರೀರದಲ್ಲಿರುವ ಆರು ಚಕ್ರಗಳ ಚೈತನ್ಯಸ್ಥಿತಿಯಲ್ಲಿ ಸಂತೋಷದಿಂದ ತುಂಬಿತುಳುಕುತ್ತಾ, ಅರಳಿ ವಿಕಸನಗೊಳ್ಳುತ್ತಿವಾಗಲೇ ನಾವು ಉನ್ನತವಾದ ಸಹಸ್ರಾರ ಎನ್ನುವ ಏಳನೆಯ ಸ್ಥಿತಿಯಲ್ಲಿ ವಿರಾಜಿಸುತ್ತೇವೆ’ ಎಂದು ತಿಳಿದುಕೊಳ್ಳಬೇಕು.
1. ಮೂಲಾಧಾರ ಚಕ್ರ : ‘ನಾನು ಕೇವಲ ಭೌತಿಕ ಶರೀರ ಮಾತ್ರವೇ’ ಎಂದುಕೊಳ್ಳುವವರೆಲ್ಲಾ ಬೆನ್ನುಮೂಳೆಯ ಕಟ್ಟಕಡೆಯ ಆಸನ ಸ್ಥಾನದಲ್ಲಿ ಇರುವ ಮೂಲಾಧಾರ ಚಕ್ರದಲ್ಲಿ ಜೀವಿಸುತ್ತಿರುವವರು. ಯಾರು ಸ್ವಂತ ಶರೀರಧರ್ಮಶಾಸ್ತ್ರದ ಬಗ್ಗೆ ಸರಿಯಾದ ಅರಿವು ಇಲ್ಲದೇ ಅಶಾಸ್ತ್ರೀಯವಾಗಿ ಜೀವಿಸುತ್ತಾ .. ಶರೀರವನ್ನು ದ್ವೇಷಿಸುತ್ತಾ ಅದನ್ನು ಯಮಯಾತನೆಗೆ ಗುರಿ ಮಾಡುತ್ತಾ ಇರುತ್ತಾರೊ ಅವರ ಮೂಲಾಧಾರ ಚಕ್ರ ಮುದುಡಿಕೊಂಡು ಚೈತನ್ಯ ವಿಹೀನವಾಗಿರುತ್ತದೆ. ಹಾಗಲ್ಲದೇ ಸ್ವಂತ ಶರೀರದ ಬಗ್ಗೆ ತುಂಬಾ ಪ್ರೀತಿಯಿಂದ, ಅರಿವಿನಿಂದ ಇರುತ್ತಾ ಶರೀರಧರ್ಮಶಾಸ್ತ್ರವನ್ನು ಅನುಸರಿಸಿ ಯಾರು ಜವಾಬ್ದಾರಿಯುತವಾಗಿ ಜೀವಿಸುತ್ತಿರುತ್ತಾರೋ ಅವರ ಮೂಲಾಧಾರ ಚೆನ್ನಾಗಿ ಅರಳಿ .. ಚೈತನ್ಯದಿಂದ ಸಂತೋಷದಿಂದ ಇರುತ್ತದೆ.”
2. ಸ್ವಾಧಿಷ್ಟಾನ ಚಕ್ರ : ಸದಾ ‘ಮನೋಸ್ಥಿತಿ’ಯಲ್ಲಿ ಇರುತ್ತಾ ‘ಮನಸ್ಸಿ’ನಿಂದಲೇ ಜೀವಿಸುವವರೆಲ್ಲಾ ಕೂಡಾ ಜನನೇಂದ್ರಿಯಗಳ ಸ್ಥಾನದಲ್ಲಿರುವ ಸ್ವಾಧಿಷ್ಟಾನ ಚಕ್ರದಲ್ಲಿ ಇರುವವರು.
ನಮ್ಮ ಮನಸ್ಸು ಮೂರು ಸ್ಥಿತಿಗಳಲ್ಲಿ ಕೆಲಸಮಾಡುತ್ತಿರುತ್ತದೆ.
1)ಸಂಕಲ್ಪ ವಿಕಲ್ಪಗಳಿಂದ ಕೂಡಿದ ಮನೋಸ್ಥಿತಿ
2)ಆಲೋಚನಗಳಿಂದ ಕೂಡಿದ ಚಿತ್ತ ಸ್ಥಿತಿ
3)ನಾನು, ನನ್ನದು ಎನ್ನುವ ಪರಿಮಿತಿಗಳಿಂದ ಕೂಡಿದ ಅಹಂಕಾರ ಸ್ಥಿತಿ
ಮನೋಧರ್ಮಶಾಸ್ತ್ರವನ್ನು ಅರಿತುಕೊಳ್ಳದೆ ಅಶಾಸ್ತ್ರೀಯವಾದ ಆಲೋಚನೆಗಳಿಂದ ಮನಸ್ಸನ್ನು ಯಾರು ಪದೇ ಪದೇ ಒತ್ತಡಕ್ಕೆ ಗುರಿಮಾಡುತ್ತಾ ಇರುತ್ತಾರೋ ಅವರ ಸ್ವಾಧಿಷ್ಟಾನ ಚಕ್ರ ಮುದುಡಿಕೊಂಡು ಅತ್ಯಂತ ಹೀನ ಸ್ಥಿತಿಯಲ್ಲಿರುತ್ತದೆ. ಹಾಗಲ್ಲದೇ ಮನಸ್ಸು ಕೆಲಸಮಾಡುವ ಈ ಮೂರು ಸ್ಥಿತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ತಮ್ಮನ್ನು ತಾವೇ ಪ್ರೀತಿಸಿಕೊಳ್ಳುತ್ತಾ, ಕಿವಿಗಳಿಗೆ ಇಂಪಾದ ಸಂಗೀತ, ಚಿತ್ರಕಲೆ, ನಾಟ್ಯ ಮುಂತಾದ 64 ಕಲೆಗಳಿಂದ ಯಾರು ತಮ್ಮ ಮನಸ್ಸನ್ನು ರಂಜಿಸಿಕೊಳ್ಳುತ್ತಾ ಇರುತ್ತಾರೋ ಅವರ ಸ್ವಾಧಿಷ್ಟಾನ ಚಕ್ರ ಅರಳಿ .. ಒಳ್ಳೆಯ ಚೈತನ್ಯದಿಂದ ಸಂತೋಷದಿಂದ ತುಂಬಿ ತುಳುಕುತ್ತಿರುತ್ತದೆ.”
3. ಮಣಿಪೂರಕ ಚಕ್ರ : ಶರೀರದಲ್ಲಿರುವ ನಾಭಿಸ್ಥಾನದಲ್ಲಿನ ಮಣಿಪೂರಕ ಚಕ್ರವು ‘ಬುದ್ಧಿ’ಗೆ ಸಂಬಂಧಿಸಿದ್ದು. ಯುಕ್ತಾಯುಕ್ತ ವಿಚಕ್ಷಣೆಯಿಂದ ಕೂಡಿರುವ ಬುದ್ಧಿಯನ್ನು ಅನುಸರಿಸದೆ ಯಾರು ಅವಿವೇಕದಿಂದ ಕೆಲಸಗಳನ್ನು ಮಾಡುತ್ತಿರುತ್ತಾರೋ ಅವರ ಮಣಿಪೂರಕ ಚಕ್ರ ಮುದುಡಿಕೊಂಡು ಚೈತನ್ಯವಿಹೀನವಾಗಿ ಬದಲಾಗುತ್ತದೆ. ವಿಜ್ಞಾನದಾಯಕವಾದ ಪುಸ್ತಕಗಳನ್ನು ಓದುತ್ತಾ ಧ್ಯಾನ ಸಜ್ಜನ ಸಾಂಗತ್ಯಾದಿಗಳ ಮೂಲಕ ಬುದ್ಧಿಯನ್ನು ಚುರುಕುಗೊಳಿಸುತ್ತಾ ಉಪಯುಕ್ತವಾದ ಕೆಲಸಗಳು ಮಾಡುವುದರ ಮೂಲಕ ಬುದ್ಧಿ ವಿಕಸಿಸಿ .. ಮಣಿಪೂರಕ ಚಕ್ರ ಅರಳಿರುತ್ತದೆ.”
4. ಅನಾಹತ ಚಕ್ರ : ‘ಅನ’ ಅಂದರೆ – ‘No’; ‘ಅಹತ’ ಅಂದರೆ ‘Sound Or Friction’
‘ ಅನಾಹತ ’ ಅಂದರೆ .. ‘ ಸಂಪೂರ್ಣ ಮೌನ ’
ನಾವು ಎಷ್ಟು ಮೌನವಾಗಿರುತ್ತೇವೆಯೋ ನಮ್ಮ ಶರೀರದ ಹೃದಯಭಾಗದಲ್ಲಿರುವ ಅನಾಹತ ಚಕ್ರ ಅಷ್ಟು ಅರಳಿರುತ್ತದೆ. ವಟವಟ ವದರುತ್ತಾ ಎಷ್ಟು ನಾವು ಒಳಗೆ, ಹೊರಗೆ ಘರ್ಷಣಪೂರಿತ ವಾತಾವರಣವನ್ನು ಸೃಷ್ಟಿಸುತ್ತಾ ಇರುತ್ತೇವೆಯೋ ಅಷ್ಟು ನಮ್ಮ ಅನಾಹತ ಚಕ್ರ ಮುದುಡಿಕೊಂಡು ಚೈತನ್ಯರಹಿತವಾಗಿ ಬದಲಾಗುತ್ತದೆ.
5. ವಿಶುದ್ಧ ಚಕ್ರ : ನಮ್ಮ ಶರೀರದಲ್ಲಿರುವ ಕಂಠಭಾಗದಲ್ಲಿನ ಸ್ವರಪೆಟ್ಟಿಗೆಯನ್ನು ನಾವು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದೇವೆ ಎಂಬುದನ್ನು ನಮ್ಮ ವಿಶುದ್ಧಚಕ್ರ ತಿಳಿಸುತ್ತದೆ. ಪ್ರಾಣ ಹೋದರೂ ಸರಿ .. ಸತ್ಯಪೂರ್ವಕವಾದ ಮಾತುಗಳನ್ನೇ ನಾವು ಧೈರ್ಯವಾಗಿ ಮಾತನಾಡಬೇಕು. ನಮ್ಮ ಸತ್ಯವಚನಗಳನ್ನು ನಾವು ಪ್ರೀತಿಸುತ್ತಾ ಅವುಗಳನ್ನು ತ್ರಿಕರಣ ಶುದ್ಧಿಯಿಂದ ಆಚರಿಸುತ್ತಾ ಇರುವಾಗ ನಮ್ಮ ವಿಶುದ್ಧ ಚಕ್ರ ಚೆನ್ನಾಗಿ ಅರಳುತ್ತಾ ಇರುತ್ತದೆ.
“ನಾವು ತಿಳಿದುಕೊಂಡ ಸತ್ಯವನ್ನು ಹೊರಗೆ ಹೇಳಲಾರದೇ ಆತ್ಮನ್ಯೂನತಾ ಭಾವನೆಯಿಂದ ರಾಜಿಯಾಗುತ್ತಿರುವಾಗ ನಮ್ಮ ವಿಶುದ್ಧ ಚಕ್ರ ಮುದುಡಿಕೊಂಡು ಕಳಾಹೀನವಾಗಿ ಬದಲಾಗಿಬಿಡುತ್ತದೆ.
6. ಆಜ್ಞಾಚಕ್ರ : ನಮ್ಮ ಹಣೆಯ ಭಾಗದ ಎರಡು ಹುಬ್ಬುಗಳ ನಡುವೆ ಇರುವ ಆಜ್ಞಾಚಕ್ರವನ್ನು ‘ಸುದರ್ಶನ ಚಕ್ರ’ ಅಂದರೆ ‘ಸರಿಯಾದದನ್ನು ದರ್ಶಿಸುವಂತೆ ಮಾಡುವ ಚಕ್ರ’ ಎಂದು ಕೂಡಾ ಹೇಳುತ್ತೇವೆ.
“ಧ್ಯಾನದ ಮೂಲಕ ನಮ್ಮ ದಿವ್ಯಚಕ್ಷುವು ತೆರೆಯಲ್ಪಟ್ಟು ಒಳ್ಳೆಯ ಪ್ರಕೃತಿ ದೃಶ್ಯಗಳನ್ನು, ಸೂಕ್ಷ್ಮಲೋಕಗಳನ್ನು ನಾವು ದರ್ಶಿಸುತ್ತಾ ಇದ್ದರೆ ನಮ್ಮ ಆಜ್ಞಾಚಕ್ರ ಇನ್ನೂ ಹೆಚ್ಚಾಗಿ ಅರಳುತ್ತಾ ಚೈತನ್ಯಯುತವಾಗಿ ಬದಲಾಗುತ್ತದೆ. ಆಗಲೇ ನಾವು ನಮ್ಮ ಪೂರ್ವಜನ್ಮ ಕರ್ಮಫಲಗಳಿಗೆ ಸಂಬಂಧಿಸಿದ ಆತ್ಮಜ್ಞಾನವನ್ನು ಅರಿತುಕೊಳ್ಳುತ್ತಾ ಸ್ಥಿತಪ್ರಜ್ಞ ಸ್ಥಿತಿಯಲ್ಲಿರುತ್ತೇವೆ. ಅಂತಹ ನಿಶ್ಚಲ ಗುರುಸ್ಥಿತಿಯಲ್ಲಿ ನಾವು ಇರುವಾಗ .. ನಮ್ಮ ಮಾತು ಮಂತ್ರದಂತೆ ಬದಲಾಗುತ್ತದೆ.
7. ಸಹಸ್ರಾರ ಸ್ಥಿತಿ : ಬೆನ್ನುಮೂಳೆಯ ಕಟ್ಟಕಡೆಯ ಆಸನ ಭಾಗದಲ್ಲಿರುವ ಮೂಲಾಧಾರ ಚಕ್ರದಿಂದ ಆರಂಭಿಸಿ ಹಣೆಯ ಭಾಗದಲ್ಲಿರುವ ಎರಡು ಹುಬ್ಬುಗಳ ನಡುವೆ ಇರುವ ಆಜ್ಞಾಚಕ್ರದ ಹಂತದವರೆಗೂ ಇರುವ ಆರು ಚಕ್ರಗಳು ಸಂಪೂರ್ಣವಾಗಿ ಅರಳಿ ಉನ್ನತ ಚೈತನ್ಯದ ಹಂತದಲ್ಲಿ ನಾವು ಇದ್ದಾಗ ನಮ್ಮ ಕುರಿತು ಸಂಪೂರ್ಣ ಜ್ಞಾನ ನಮಗೆ ತಿಳಿಯುತ್ತದೆ. ಆಗಲೇ ಇತರರಿಗೆ ಸೇವೆ ಮಾಡುವ ಅರ್ಹತೆ ನಮಗೆ ಬರುತ್ತದೆ. ಮತ್ತು ಇಂತಹ ಸೇವಾರ್ಹತೆಯನ್ನು ಸಂಪಾದಿಸಿಕೊಳ್ಳುವ ಮಟ್ಟವನ್ನೇ ‘ಸಹಸ್ರಾರಸ್ಥಿತಿ’ ಎನ್ನುತ್ತೇವೆ.
ಇದೆಲ್ಲಾ ಕೂಡಾ ಆಧ್ಯಾತ್ಮಿಕ ಪರಿಭಾಷೆಯಲ್ಲಿ “6+1 ಫಾರ್ಮುಲಾ” ಆಗಿ ಹೇಳಿಕೊಳ್ಳಬಹುದು.
“ಹೀಗೆ ಸಹಸ್ರಾರ ಸ್ಥಿತಿಯಲ್ಲಿ ಇತರರಿಗೆ ಸೇವೆ ಮಾಡುವ ನಿಷ್ಕಾಮಕರ್ಮ ಹಂತಕ್ಕೆ ತಲುಪಿದಾಗ ನಾವು ಆರು ಬಗೆಯ ಸೇವೆಗಳನ್ನು ಮಾಡಬಲ್ಲೆವು.
ಮೂಲಾಧಾರ – ಭೌತಿಕಕಾಯ
ಸ್ವಾಧಿಷ್ಟಾನ – ಮನಸ್ಸು/ಚಿತ್ತ/ಅಹಂಕಾರ
ಮಣಿಪೂರಕ – ಬುದ್ಧಿ
ಅನಾಹತ – ಮೌನ
ವಿಶುದ್ಧ – ಸತ್ಯವಾಕ್ಕು
ಆಜ್ಞಾ – ಧ್ಯಾನ
ಸಹಸ್ರಾರ – ಸೇವೆ/ಸಹಕಾರ
1) ಮೂಲಾಧಾರ ಸೇವೆ: ಇತರರ ಭೌತಿಕ ಶರೀರಕ್ಕೆ ಮಾಡುವ ಸೇವೆ; ಉದಾ: ಪಾದಗಳನ್ನು ಒತ್ತುವುದು, ರೋಗಿಗಳ ಶರೀರಗಳಿಗೆ ಉಪಚಾರ ಮಾಡುವುದು, ಹಸಿವೆಯನ್ನು ನೀಗಿಸಲು ಅನ್ನದಾನ ಮಾಡುವುದು ಮುಂತಾದವು.
2) ಸ್ವಾಧಿಷ್ಟಾನ ಸೇವೆ: ಇತರರ ಮನಸ್ಸನ್ನು ರಂಜಿಸುವ ಒಳ್ಳೆಯ ಸಂಗೀತವನ್ನು ಹಾಡುವುದು, ವಾದ್ಯಗಳನ್ನು ನುಡಿಸುವುದು, ನೃತ್ಯ ಮಾಡುವುದು, ಚಿತ್ರಗಳನ್ನು ಬರೆಯುವುದು ಮುಂತಾದವು.
3) ಮಣಿಪೂರಕ ಸೇವೆ: ಇತರರ ಬುದ್ಧಿಯನ್ನು ವಿಕಾಸಗೊಳಿಸುವ ವಿಜ್ಞಾನದಾಯಕವಾದ ಪುಸ್ತಕಗಳನ್ನು ಬರೆಯುವುದು, ಓದಿ ಕೇಳಿಸುವುದು, ಸಜ್ಜನ ಸಾಂಗತ್ಯ ಇತ್ಯಾದಿಗಳನ್ನು ಏರ್ಪಾಟು ಮಾಡುವುದು ಮುಂತಾದವು.
4) ಅನಾಹತ ಸೇವೆ: ಇತರರಿಂದ ವಿಶೇಷವಾಗಿ ಮೌನಾಭ್ಯಾಸ ಮಾಡಿಸುವುದು.
5) ವಿಶುದ್ಧ ಸೇವೆ: ಇತರರಿಗೆ ಸತ್ಯಪುರ್ವಕವಾದ ಮಾತುಗಳನ್ನು ಮಾತನಾಡುವ ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು.
6) ಆಜ್ಞಾ ಸೇವೆ: ಧ್ಯಾನ ಪ್ರಚಾರವನ್ನು ವಿಶೇಷವಾಗಿ ಮಾಡುವುದೇ ಆಜ್ಞಾ ಸೇವೆ.
“ಹೀಗೆ ಮೂಲಾಧಾರದಿಂದ ಆಜ್ಞಾಚಕ್ರದವರೆಗೂ ಅತ್ಯಂತ್ಯ ಅರಿವಿನಿಂದ ವಿನಯ, ವಿಧೇಯತೆಯಿಂದ ನಿರಂತರ ಸೇವೆ ಮಾಡುತ್ತಾ ಇರುವುದೇ… ಸಹಸ್ರ ಸ್ಥಿತಿಯಲ್ಲಿ ಇರುವ ಪಿರಮಿಡ್ ಮಾಸ್ಟರ್ಗಳ ಲಕ್ಷಣ ಮತ್ತೂ ಹಾಗೆ ಜೀವಿಸುವುದೇ ಸಾರ್ಥಕ ಜೀವನದ ಯಶಸ್ಸಿನ ರಹಸ್ಯ.”
ಹೀಗೆ ಒಬ್ಬ ಮಾಸ್ಟರ್ ಸಮಾಜದಲ್ಲಿ ಹೇಗೆ ಜೀವಿಸಬೇಕು ಎಂಬುದನ್ನು ಬ್ರಹ್ಮರ್ಷಿ ಪತ್ರೀಜಿ ಅತ್ಯಂತ ಸರಳವಾದ ರೀತಿಯಲ್ಲಿ ವಿವರವಾಗಿ ವಿವರಿಸಿದ್ದಾರೆ.
Recent Comments