“ ನಾವು ಪಿರಮಿಡ್ ಮಾಸ್ಟರ್ಗಳು ”
ಸಸ್ಯಾಹಾರವು … ನಮ್ಮ ಮತ
ಮಾಂಸಹಾರವು ವಿಷಭರಿತವಾದದ್ದು. ಅದು ನಮ್ಮ ಶರೀರ ವ್ಯವಸ್ಥೆಯನ್ನು ಹಾಳುಮಾಡುತ್ತದೆ, ಮನಸ್ಸನ್ನು ವಿಪರೀತ ಧೋರಣೆಯಲ್ಲಿ ನಡೆಸುತ್ತದೆ; ಬುದ್ಧಿಭ್ರಮಣೆಗೆ ಗುರಿಪಡಿಸುತ್ತದೆ. ಆತ್ಮೋನ್ನತಿಗೆ, ಆತ್ಮಪ್ರಗತಿಗೆ ಮಾಂಸ ತಿನ್ನುವುದು ಎಂಬುದು ಒಂದು ಅಡ್ಡಿ …. ಆಧ್ಯಾತ್ಮಿಕ ಯೋಗೀಶ್ವರರಾಗಿ ಗುರುತಿಸಲ್ಪಟ್ಟ ಎಲ್ಲರೂ ಸಸ್ಯಾಹಾರಿಗಳೇ. ಬುದ್ಧ, ಮಹಾವೀರ, ವೇಮನ, ವೀರಬ್ರಹ್ಮೇಂದ್ರಸ್ವಾಮಿ … ಇನ್ನೂ ಬಹಳ ಜನ ಸಸ್ಯಾಹಾರಿಗಳೇ.
ಪಕ್ಷಿಜಾತಿಯನ್ನು ಹಿಡಿದು ಪರಮ ಹಿಂಸೆಯನ್ನು ಕೊಟ್ಟು
ಹೊಟ್ಟೆ ತುಂಬ ಕೂಳು ತುಂಬಿಸಿಕೊಳ್ಳಲು
ಬೇಯಿಸಿ ತಿನ್ನುವವನು ವಸುಧ ಚೆಂಡಾಲನು -ವೇಮನ
ಧ್ಯಾನದಲ್ಲಿ ಉತ್ತಮ ಸ್ಥಿತಿ ಹೊಂದಬೇಕೆಂದರೂ, ಜೀವನದಲ್ಲಿ ಜ್ಞಾನವಂತರಾಗಬೇಕೆಂದರೂ, ಪ್ರತಿಯೊಬ್ಬರೂ ತಕ್ಷಣವೇ ಮಾಂಸಾಹಾರವನ್ನು ಬಿಟ್ಟು ಸಸ್ಯಾಹಾರಿಗಳಾಗಿ ಬದಲಾಗಬೇಕು; ಬೇರೆಯವರನ್ನು ಸಸ್ಯಾಹಾರಿಗಳನ್ನಾಗಿ ಬದಲಾಯಿಸಬೇಕು. ನಮ್ಮ ಮತವು ನಿಶ್ಚಯವಾಗಿ ಸಸ್ಯಾಹಾರ ಮತವೇ.
ಧ್ಯಾನವೇ … ನಮ್ಮ ವೃತ್ತಿ
ಎಲ್ಲಾ ರೋಗಗಳಿಗೂ ಮನೋವ್ಯಾಧಿಗಳೇ ಮೂಲ; ಮಾನಸಿಕ ಕಳವಳ, ಭಯ, ಸಂಶಯ, ಅಹಂಕಾರ, ಅಸೂಯೆ, ದ್ವೇಷ, ಸ್ವಾರ್ಥ, ಹೇಡಿತನ, ಸೋಮಾರಿತನ, ಮಿತಿಗಳು, ಗುಲಾಮಗಿರಿ … ಮೊದಲಾದ ಮನೋದೌರ್ಬಲ್ಯಗಳೇ ನಮ್ಮ ಚಡಪಡಿಕೆ, ಅಸ್ತವ್ಯಸ್ತ ಜೀವನಕ್ಕೆ ಕಾರಣಗಳು.
ಮಾನಸಿಕ ದೌರ್ಬಲ್ಯಗಳನ್ನು ಬೇರುಸಹಿತ ತೆಗೆದುಬಿಸಾಡಿ ಮನೋಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕೆಂದರೆ, ನಮ್ಮ ಜೀವನದಲ್ಲಿ ಧ್ಯಾನವನ್ನು ನಿತ್ಯವೂ ಮಾಡಬೇಕು. ಏನೇ ಅಡ್ಡಿಆತಂಕಗಳು ಎದುರಾದರೂ ಅಡಚಣೆಯಿಲ್ಲದ ದೀಕ್ಷೆಯಿಂದ ದಿನನಿತ್ಯವೂ ವಿಶೇಷವಾಗಿ ಧ್ಯಾನ ಸಾಧನೆ ಮಾಡಬೇಕು; ಆಗಲೇ, ಇದ್ದಲಿನಂತಹ ನಮ್ಮ ಜೀವನವನ್ನು ವಜ್ರದಂತೆ ಬದಲಾಯಿಸಿಕೊಳ್ಳಬಹುದು.
ನಿಜವಾದ ಧ್ಯಾನವೊಂದೇ ಸಾಕು
ಥಳಕು ಬೆಳಕಿನ ಪೂಜೆಯ ಗಂಧವು ತಟ್ಟೆತುಂಬ ಯಾಕೆ?
ಮನಸ್ಸು ಸ್ಥಿರಪಡಿಸುವ ಧ್ಯಾನಪದ್ಧತಿ ಸಾಲದೇ? -ವೇಮನ
ನಮ್ಮ ಅಂತರಂಗವನ್ನು ದಿನನಿತ್ಯವೂ ಶಾಂತವಾಗಿ ಇರಿಸಿಕೊಳ್ಳಬೇಕೆಂದರೂ, ಬುದ್ಧಿಕುಶಲತೆ ಬೆಳೆಸಿಕೊಳ್ಳಬೇಕೆಂದರೂ, ಸಂಪೂರ್ಣ ಆರೋಗ್ಯವನ್ನು ಹೊಂದಬೇಕೆಂದರೂ … ಪ್ರತಿಯೊಬ್ಬರೂ ನಿತ್ಯವೂ ಧ್ಯಾನ ಮಾಡಬೇಕು.
ಧ್ಯಾನವೆಂದರೆ ಚಿತ್ತಿವೃತ್ತಿ ನಿರೋಧ … ಅದಕ್ಕೆ ದಾರಿ ಏನೆಂದರೆ ಶ್ವಾಸದ ಮೇಲೆ ಗಮನ. ಆನಾಪಾನಸತಿ ಧ್ಯಾನವನ್ನು ಯಾವಾಗಾದರೂ, ಎಲ್ಲಿಯಾದರೂ ಮಾಡಬಹುದು. ಹಾಯಾಗಿ ಕುಳಿತುಕೊಂಡು, ಕೈಬೆರಳುಗಳನ್ನು ಸೇರಿಸಿ, ಕಣ್ಣುಗಳನ್ನು ಮುಚ್ಚಿಕೊಂಡು, ಸಹಜ ಶ್ವಾಸವನ್ನು ಗಮನಿಸುವುದೇ ಧ್ಯಾನ ಪದ್ಧತಿ. ಪಿರಮಿಡ್ ಮಾಸ್ಟರ್ಗಳ ಜೀವನವು ಧ್ಯಾನಕ್ಕೇ ಮೀಸಲು … ಆದ್ದರಿಂದ, ಧ್ಯಾನವು ನಮ್ಮ ಏಕೈಕ ವೃತ್ತಿ.
ಪಿರಮಿಡ್ಡುಗಳು … ನಮ್ಮ ದೇವಾಲಯಗಳು
ಪಿರಮಿಡ್ಸ್ ಎನ್ನುವುವು ವಿಶಿಷ್ಟವಾದ ಕೋನಗಳಿಂದ ನಿರ್ಮಿಸಲ್ಪಟ್ಟ ಕಟ್ಟಡಗಳು. ಈ ಆಕಾರದಲ್ಲಿ ನಿರ್ಮಿಸಲ್ಪಟ್ಟ ಅವುಗಳೊಳಗೆ ವಿಶ್ವಪ್ರಾಣಶಕ್ತಿಯು ಅಧಿಕ ಪ್ರಮಾಣದಲ್ಲಿ ಪ್ರವಹಿಸುತ್ತದೆ.
ಮಾಮೂಲಾಗಿ ಇರುವ ಬಹಿರಂಗ ಪ್ರದೇಶದಲ್ಲಿಯೇ ಆಗಲಿ, ಇತರ ಆಕಾರದಲ್ಲಿ ಇರುವ ಕಟ್ಟಡಗಳಲ್ಲಿಯೇ ಆಗಲಿ, ಮಾಡುವ ಧ್ಯಾನಕ್ಕಿಂತ, ಪಿರಮಿಡ್ಗಳಲ್ಲಿ ಧ್ಯಾನ ಸಾಧನೆ ಮಾಡಿದರೆ … ಅದೇ ಸಮಯದಲ್ಲಿ ಮೂರುಪಟ್ಟು ಹೆಚ್ಚು ವಿಶ್ವಪ್ರಾಣಶಕ್ತಿಯನ್ನು ಹೊಂದುತ್ತೇವೆ.
’ಪಿರಮಿಡ್ ಧ್ಯಾನ’ದ ಮೂಲಕ ಆರಂಭದ ಹಂತದಲ್ಲಿರುವ ವ್ಯಾಧಿಗಳು, ತೀವ್ರ ವ್ಯಾಧಿಗಳು, ದೀರ್ಘಕಾಲಿಕ ವ್ಯಾಧಿಗಳು, ಮಾನಸಿಕ ಕಾಯಿಲೆಗಳು … ಎಲ್ಲವನ್ನೂ ಕಡಿಮೆ ಸಮಯದಲ್ಲಿಯೇ ತೊಲಗಿಸಿಕೊಂಡು, ನಾವು ತ್ವರಿತವಾಗಿ ಆರೋಗ್ಯವಂತರಾಗಿ ಬದಲಾಗಬಹುದು. ಅಷ್ಟೇ ಅಲ್ಲದೆ, ಪಿರಮಿಡ್ ಧ್ಯಾನ ಮಾಡುವುದರಿಂದ ದಿವ್ಯಚಕ್ಷುವಿನ ಉತ್ತೇಜನ, ಸೂಕ್ಷ್ಮ ಶರೀರಯಾನದಂತಹವುಗಳನ್ನು ಕಡಿಮೆ ಸಮಯದಲ್ಲಿ ನಾವು ಹೊಂದಬಹುದು.
ಟೋಪಿಯಂತೆ ತಲೆಯ ಮೇಲೆ ಹಾಕಿಕೊಳ್ಳುವ ಪಿರಮಿಡ್ ಹ್ಯಾಟ್ಸ್, ಮನೆಯ ಯಾವುದೇ ಸ್ಥಳದಲ್ಲಿ ತಲೆಯ ಮೇಲೆ ಬರುವಂತೆ ನೇತುಹಾಕಿಕೊಳ್ಳಬಹುದಾದ ಹ್ಯಾಂಗಿಂಗ್ ಪಿರಮಿಡ್ಸ್, ಮನೆಯ ತಾರಸಿಯ ಮೇಲೆ ಕಟ್ಟಿಕೊಳ್ಳಬಹುದಾದ ರೂಫ್ಟಾಪ್ ಪಿರಮಿಡ್ಸ್, ನೆಲಮಟ್ಟದಲ್ಲಿ ನಿರ್ಮಿಸಲಾಗುವ ಗ್ರೌಂಡ್ ಲೆವಲ್ ಪಿರಮಿಡ್ಸ್ … ಅವರವರ ಅನುಕೂಲಕ್ಕೆ ತಕ್ಕಂತೆ ಅವರು … ಏರ್ಪಾಟು ಮಾಡಿಕೊಳ್ಳಬಹುದು, ಉಪಯೋಗಿಸಿಕೊಳ್ಳಬಹುದು. ಧ್ಯಾನಿಗಳಿಗೆ ದೇವಾಲಯಗಳು ಪಿರಮಿಡ್ಗಳು … ಮತ್ತೆ ಪಿರಮಿಡ್ಗಳು ನವೀನಯುಗದ ದೇವಾಲಯಗಳು.
ಶ್ವಾಸವೇ … ನಮ್ಮ ಗುರು
ಸಾಧನೆ ಎನ್ನುವುದು ’ಗುರು’ವಿನ ಬಳಿಯಿಂದಲೇ ಶುರುವಾಗುತ್ತದೆ. ಎಲ್ಲಿ ಸದ್ಗುರುವಿಲ್ಲವೋ … ಎಲ್ಲಿ ಬೋಧಿಸುವವನು ಇಲ್ಲವೋ … ಅಲ್ಲಿ ವಿದ್ಯೆಯು ’ಕುರುಡು ವಿದ್ಯೆ’ ಆಗಿಹೋಗುತ್ತದೆ. ಗುರುವಿಲ್ಲದ ವಿದ್ಯೆ ಕುರುಡುವಿದ್ಯೆ.
ಏನು ಮಾಡಬೇಕೋ, ಹೇಗೆ ಮಾಡಬೇಕೋ, ಯಾವಾಗ ಮಾಡಬೇಕೋ, ಎಲ್ಲಿ ಮಾಡಬೇಕೋ, ಯಾವುದು ಹೀಗೆ ಮಾಡಕೂಡದೋ, ಯಾವುದು ಯಾವಾಗ ಮಾಡಕೂಡದೋ … ಇವೆಲ್ಲವನ್ನು ಹೇಳುವವನೇ ಗುರುವು.
ಸಂಗೀತ ಕಲಿಯಬೇಕೆಂದರೆ ಗುರುವು ಇರಬೇಕು. ಸಂಸ್ಕೃತ ಕಲಿಯಬೇಕೆಂದರೆ ಸಂಸ್ಕೃತದ ಗುರುವಿರಬೇಕು. ಹಾಗೆಯೇ, ಆಧ್ಯಾತ್ಮದಲ್ಲಿ ಅಹಂ ಬ್ರಹ್ಮಾಸ್ಮಿ – ನಾನೇ ಎಲ್ಲಾ ಎನ್ನುವುದು ತಿಳಿಯಬೇಕೆಂದರೆ, ಮತ್ತು ಈ ದೇಹವೇ ದೇವಾಲಯ ಎನ್ನುವುದು ಸ್ವತಃ ಅನುಭವಕ್ಕೆ ಬರಬೇಕಾದರೆ ಏನು ಮಾಡಬೇಕು?
ಏನು ಮಾಡಬೇಕು? ಎಂದರೆ, ಧ್ಯಾನ ಗುರುವಿನ ಹತ್ತಿರವೇ ಸೇರಬೇಕು. ಧ್ಯಾನಗುರುವಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಬೇಕು; ಧ್ಯಾನ ಗುರುವಿನ ಬಳಿ ಮಣೆಹಾಕಿಕೊಂಡು ಕುಳಿತುಕೊಳ್ಳಬೇಕು; ಆಗ ಆ ಗುರುವು ಜ್ಞಾನವನ್ನೂ, ಸರ್ವವನ್ನೂ ಬೋಧಿಸುತ್ತಾನೆ.
ಆದರೆ, ಈ ಆಧ್ಯಾತ್ಮಿಕ ಸಾಧನೆಯ ಸಂದರ್ಭದಲ್ಲಿ ಮಾತ್ರ ಧ್ಯಾನಗುರು ಎಂದರೆ ಯಾರು…? ’ಯಾರು ಅದು’ ಧ್ಯಾನಗುರು?… ಅಂದರೆ.. ಶ್ವಾಸವೇ ಗುರುವು. ವಾಸ್ತವವಾಗಿ ಒಬ್ಬ ಆಧ್ಯಾತ್ಮಿಕ ಮುಮುಕ್ಷು; ಒಬ್ಬ ಆತ್ಮಜ್ಞಾನ ಪಿಪಾಸು, ಇನ್ನೊಬ್ಬ ಗುರುವಿನ ಹತ್ತಿರ ಹೋಗುವ ಅವಶ್ಯಕತೆ ಇಲ್ಲ. ಆಧ್ಯಾತ್ಮಿಕ ಸಾಧನೆ ಅಂದರೆ ನಮ್ಮೊಳಗೆ ನಾವೇ ಮಾಡುವ ಪ್ರಯಾಣ. ಈ ಅಂತರಂಗ ಪ್ರಯಾಣವು ಅಡೆತಡೆಯಿಲ್ಲದೆ ನಡೆಯಬೇಕೆಂದರೆ ನಾವೆಲ್ಲರೂ ಶ್ವಾಸವನ್ನು ತಪ್ಪದೆಯೇ ಹಿಡಿದುಕೊಳ್ಳಬೇಕು. ಬೇರೆ ಇನ್ನೊಂದು ಮಾರ್ಗವು ಇಲ್ಲವೇ ಇಲ್ಲ.
ಈ ವಿಧವಾಗಿಯೇ ಆತ್ಮಾನುಭವಗಳು ನಮ್ಮ ಸ್ವಂತದ್ದಾಗುತ್ತವೆ. ಅನುಭವವೇ ಜ್ಞಾನವಲ್ಲವೇ. ಜ್ಞಾನಿಯಾದ ಒಬ್ಬ ವ್ಯಕ್ತಿಯು ಆತನಿಗೆ ಇರುವ ಜ್ಞಾನದ ಕುರಿತು ಮಾತ್ರವೇ ಹೇಳಬಹುದು. ಆದರೆ, ಒಬ್ಬ ಜ್ಞಾನ ಪಿಪಾಸುವಿಗೆ ಜ್ಞಾನವನ್ನು ಕೊಡಲಾಗುತ್ತದೆಯೇ? ಅವರವರ ಆತ್ಮಾನುಭವದ ಮೂಲಕವೇ ಅವರಿಗೆ ಆತ್ಮಜ್ಞಾನವು ಅಂಕುರಿಸುತ್ತದೆ. ಆದ್ದರಿಂದ, ಶ್ವಾಸವೇ ನಮ್ಮ ನಿಜವಾದ ಗುರುವು.
ಆತ್ಮಶಾಸ್ತ್ರ… ನಮ್ಮಗುರುತು
ಆತ್ಮಶಾಸ್ತ್ರ ಎಂದರೆ ಆತ್ಮದ ಕುರಿತು ಕೂಲಂಕಷವಾಗಿ ತಿಳಿದುಕೊಳ್ಳುವ ಶಾಸ್ತ್ರ. ಅಂದರೆ, ನಾವು ಒಂದು ಕಡೆ ಶರೀರವಾದರೂ ಇನ್ನೊಂದು ಕಡೆ ಶರೀರಧಾರಿಗಳಾಗಿರುವ ಆತ್ಮಪದಾರ್ಥ ಎಂದು ಸ್ವಾನುಭವದಿಂದ ತಿಳಿದುಕೊಳ್ಳುವುದು.
ಆತ್ಮದ ಕುರಿತು ಜ್ಞಾನ ಎಂದರೆ ಸಂಪೂರ್ಣವಾಗಿ ನಮ್ಮ ಬಗ್ಗೆ ನಾವು ತಿಳಿದುಕೊಳ್ಳುವುದು … ನಾನು ಭೌತಿಕ ಶರೀರ ಮಾತ್ರವೇ ಅಲ್ಲ, ನಾನು ಶರೀರಧಾರಿಯೂ ಹೌದು… ಎಂದು ಸ್ವಾನುಭವದಿಂದ ತಿಳಿದುಕೊಳ್ಳುವುದು. ನಾನು ದೇಹವೊಂದೇ ಅಲ್ಲ, ದೇಹಿ ಎಂದು ತಿಳಿದುಕೊಳ್ಳುವುದು.
ನಾನು ಚೈತನ್ಯಪದಾರ್ಥ ಎಂದು ತಿಳಿದುಕೊಳ್ಳಬೇಕು. ಸದಾ ತನ್ನ ಚೈತನ್ಯವನ್ನು ಧ್ಯಾನದ ಮೂಲಕ ಆ ಮೂಲಚೈತನ್ಯದೊಂದಿಗೆ ಅನುಸಂಧಾನವನ್ನು ಮಾಡಿ, ಆ ಸ್ಥಿತಿಯಲ್ಲಿ ಹೆಚ್ಚು ಸಮಯವನ್ನು ಕಳೆಯುವವನೇ ಪಿರಮಿಡ್ ಮಾಸ್ಟರ್. ಆತ್ಮಾನುಭವವು ಸ್ವತಃ ಧ್ಯಾನಸಾಧನೆಯ ಮೂಲಕವೇ ಸಾಧ್ಯ. ಆದ್ದರಿಂದ, ಆತ್ಮಶಾಸ್ತ್ರವನ್ನು ತಿಳಿದುಕೊಳ್ಳುವುದು ಎಂದರೆ, ಆತ್ಮದ ಕುರಿತು ಜ್ಞಾನವನ್ನು ಹೊಂದುವುದು … ಮುಂದೆ ಆಗುವ ಪಿರಮಿಡ್ ಮಾಸ್ಟರ್ಗಳ ಪ್ರಣಾಳಿಕೆ, ಮತ್ತು ಪಿರಮಿಡ್ ಮಾಸ್ಟರ್ಗಳಾಗಿರುವವರ ಗುರುತು.
ಬುದ್ಧತ್ವ… ನಮ್ಮಆಕಾಂಕ್ಷೆ
ಬುದ್ಧತ್ವ ಅಂದರೆ, ಅದು ಒಂದು ಮತಕ್ಕೆ ಸೀಮಿತವಾಗಿರುವುದು ಅಲ್ಲ, ಒಂದು ಮೂಲಭೂತವಾದ ’ಬುದ್ಧಿ ಸಿದ್ಧಾಂತ’ವನ್ನು ನಮ್ಮದಾಗಿಸಿಕೊಳ್ಳುವುದು. “ಇರುವುದೆಲ್ಲಾ ಸದಾ ಪರಿವರ್ತನೆ ಹೊಂದುತ್ತಲೇ ಇರುವಂಥದ್ದೇ” ಎನ್ನುವ ಸಿದ್ಧಾಂತವನ್ನು ಸ್ವಂತ ಅನುಭವವನ್ನಾಗಿ ಮಾಡಿಕೊಳ್ಳುವುದನ್ನೇ ಬುದ್ಧತ್ವ ಎನ್ನಲಾಗುತ್ತದೆ. ನಿಜಕ್ಕೂ ಕರ್ತೃತ್ವ ಭಾವನೆಯೊಂದಿಗಿದ್ದರೆ, ನಾನು ಎನ್ನುವುದು ಇಲ್ಲವೇ ಇಲ್ಲ … ಇರುವುದೆಲ್ಲಾ ಸಾಕ್ಷೀಭೂತವಾದ ನಾನು … ಕರ್ಮಗಳಿವೆ … ಕರ್ಮಗಳಿಗೆ ತಕ್ಕ ಫಲಗಳು ಇವೆ … ಅವೆಲ್ಲವೂ ಪ್ರಕೃತಿ ಗುಣಗಳಾಗಿ ಆ ವಿಧದಲ್ಲಿಯೇ ನಡೆಯುತ್ತಿರುತ್ತವೆ … ಬುದ್ಧತ್ವ ಅಂದರೆ ಸರಿಯಾದ ಜೀವನ ಮಾರ್ಗದರ್ಶನವನ್ನು ಹೊಂದುವುದು.
ಬುದ್ಧತ್ವ ಅಂದರೆ, ಕೆಟ್ಟಆಲೋಚನೆಗಳು, ಕೆಟ್ಟಕರ್ಮಗಳಿಂದ ದೂರವಿರುವುದು. ರಾಗ, ದ್ವೇಷ, ಹಿಂಸೆ, ಮೋಹಗಳಿಗೆ ದೂರವಿರುತ್ತಾ ಜನನ-ಮರಣಗಳ ಚಕ್ರದಿಂದ ಹೂರಗೆ ಬರುವ ಸರಿಯಾದ ಆಧ್ಯಾತ್ಮಿಕ ಶಾಸ್ತ್ರವಿಧಾನವೇ ಬುದ್ಧತ್ವ. ಸತ್ಯದ ಕುರಿತು ತಿಳಿದುಕೊಳ್ಳುತ್ತಾ, ತಿಳಿದುಕೊಂಡ ಸತ್ಯವನ್ನು ಇತರರಿಗೆ ಬೋಧಿಸುತ್ತಾ ಧರ್ಮಮಾರ್ಗವನ್ನು ಅನುಸರಿಸುವುದೇ ಬುದ್ಧತ್ವ. ಸಕಲ ಪ್ರಾಣಿಕೋಟಿಯ ಜೊತೆಗೆ ಮೈತ್ರಿಭಾವದೊಂದಿಗೆ ಇರುವುದೇ ಬುದ್ಧತ್ವ. ಇಂತಹ ಅದ್ಭುತ ಅಂತರಂಗ ಪರಿವರ್ತನೆ ಕೇವಲ ಧ್ಯಾನ ಸಾಧನೆಯಿಂದ ಪ್ರಾಪ್ತಿಯಾಗುತ್ತದೆ. ಆದ್ದರಿಂದ, ಬುದ್ಧತ್ವ ಪ್ರಾಪ್ತಿ ಹೊಂದುವುದೇ ನಮ್ಮ ನಿಜವಾದ ಪಿರಮಿಡ್ ಮಾಸ್ಟರ್ಗಳ ಆಕಾಂಕ್ಷೆ.
ಧ್ಯಾನಪ್ರಬೋಧೆ… ನಮ್ಮಆತ್ಮರಂಜನೆ
ಧ್ಯಾನ ಸಾಧನೆ ಎಲ್ಲಾ ತರಹದ ವ್ಯಕ್ತಿಗತ ಲಾಭಗಳನ್ನು ನಿಸ್ಸಂದೇಹವಾಗಿ ಉಂಟುಮಾಡುತ್ತದೆ. ಆದರೆ, ಕೇವಲ ವ್ಯಕ್ತಿಗತ ಸುಖ, ವ್ಯಕ್ತಿಗತ ಸಂತೋಷ, ವ್ಯಕ್ತಿಗತ ಶಾಂತಿ, ವ್ಯಕ್ತಿಗತ ಆನಂದವನ್ನು ಹೊಂದುವುದು ಎನ್ನುವುದು … ಒಂದು ರೀತಿಯಲ್ಲಿ ಸೀಮಿತವಾದ ಸ್ಥಿತಿ … ಇನ್ನೊಂದು ರೀತಿಯಲ್ಲಿ ಸ್ವಲ್ಪ ಸ್ವಾರ್ಥದಿಂದ ಕೂಡಿಕೊಂಡಿರುವುದು.
ಆನಂದವನ್ನು ಮುಷ್ಠಿಯಲ್ಲಿಯೇ ಹಿಡಿದುಕೊಂಡರೆ ಅದು ಸೀಮಿತವಾಗಿರುತ್ತದೆ. ಅದೇ ಆನಂದವನ್ನು ಇತರರಿಗೆ ಹಂಚಿದರೆ, ಅದು ಎಷ್ಟೊಂದು ಉನ್ನತವಾದುದು ಎಂಬುದು ತಿಳಿದುಬರುತ್ತದೆ.
ಧ್ಯಾನಶಾಸ್ತ್ರವನ್ನು ಬೇರೆಯವರಿಗೆ ಬೋಧಿಸುವುದರ ಮೂಲಕ, ಅವರಲ್ಲಿ ಅನೇಕಾನೇಕ ಶಾರೀರಿಕ, ಮಾನಸಿಕ, ಬುದ್ಧಿಪರವಾದ, ಆತ್ಮಪರವಾದ ಪರಿವರ್ತನೆಯಾಗುವುದರಿಂದ ಅವರ ಜೀವನವನ್ನು ಆನಂದಭರಿತವಾಗಿ ಮಾರ್ಪಡಿಸಬಹುದು ಮತ್ತು ನಮ್ಮ ಜ್ಞಾನವನ್ನು ಮತ್ತಷ್ಟು ಸವಿಸ್ತಾರವಾಗಿ ಮಾಡಿಕೊಳ್ಳಬಹುದು. ಆದ್ದರಿಂದ, ಧ್ಯಾನಶಾಸ್ತ್ರ ಬೋಧನೆಯ ಮುಖಾಂತರ ಪ್ರತಿಯೊಬ್ಬರೂ ತಪ್ಪದೆಯೇ ಅಪರಿಮಿತವಾದ ಆತ್ಮಾನಂದ … ಆತ್ಮರಂಜನೆಯನ್ನು ಹೊಂದಬಲ್ಲರು. ಬೋಧನೆ ಎನ್ನುವುದು ಪಿರಮಿಡ್ ಮಾಸ್ಟರ್ಗಳಿಗೆ ಮಹಾ, ಮಹಾ ಆನಂದವು.
ಸತ್ಯ… ನಮ್ಮಅಂತರಾಂತರಗಳ ಆನಂದಾನುಭೂತಿ
ನಿತ್ಯ ಇರುವುದೇ ಸತ್ಯ, ಒಂದುಬಾರಿ ಇದ್ದು ಇನ್ನೊಂದು ಬಾರಿ ಇಲ್ಲದಿರುವುದೇ ಅಸತ್ಯ.
ಅನಿತ್ಯ ಎನ್ನುವುದು ಅನುಕೂಲವಾಗಿ ಇದ್ದರೆ ಮೇಲ್ಮೈ ಆನಂದಾನುಭೂತಿಯನ್ನು ಪ್ರಸಾದಿಸುತ್ತದೆ. ಅನಿತ್ಯ ಎನ್ನುವುದು ಅನುಕೂಲವಾಗಿ ಇದ್ದರೆ ದುಃಖಾನುಭೂತಿಯನ್ನು ಪ್ರಸಾದಿಸುತ್ತದೆ. ಆದರೆ, ಸತ್ಯ ಎನ್ನುವುದು ಅಂತರಾಂತರಗಳ ಆನಂದಾನುಭೂತಿ.
ಯಾವಾಗಲೂ ಇರುವುದೇ ಸತ್ಯ. ಸದಾ ಸಾಕ್ಷೀಭೂತವಾಗಿ ಇರುವ ನಾನು ಎನ್ನುವ ಪದಾರ್ಥವೇ ಯಾವಾಗಲೂ ಇರುವ ಪರಮಸತ್ಯವು. ಎಲ್ಲ ಮೇಲ್ಮೈ ಅನುಕೂಲ, ಅನಾನುಕೂಲ ಪರಿಸ್ಥಿತಿಯಲ್ಲಿ ಸದಾ ಸಾಕ್ಷೀಭೂತವಾಗಿ ಇರುವ ನಾನು ಎನ್ನುವ ಸತ್ಯಪದಾರ್ಥದ ಹೆಸರೇ ಆತ್ಮ. ಆತ್ಮಸತ್ಯದಲ್ಲಿ ಜೀವಿಸುವುದರ ಮೂಲಕವೇ ಅಂತರಂಗದಲ್ಲಿ ವಿಶಿಷ್ಟ ಆನಂದಾನುಭೂತಿ ಲಭಿಸುತ್ತದೆ.
ದೇಹವು ವಿಷಯ-ವಾಸನೆಗಳೊಂದಿಗೆ ಮಾತ್ರವೇ ಜೀವಿಸುವುದು ಎನ್ನುವುದೇ ಅಸತ್ಯ; ಅದೇ ದುಃಖಕ್ಕೆ ಕಾರಣವು. ದೇಹವನ್ನು ಭೌತಿಕ ಅವಶ್ಯಕತೆಗಳಿಗೆ ವಿನಿಯೋಗಿಸುತ್ತಾ, ನಾನು ಆತ್ಮ ಎಂದು ಸದಾ ಅರಿವಿನಿಂದ ಜೀವಿಸುವುದೇ ಸತ್ಯ… ಅಂತರಾಂತರಗಳ ಆನಂದಾನುಭೂತಿಗೆ ಇದೇ ನಿದರ್ಶನವು. ನಮ್ಮ ಸುತ್ತೂ ಇರುವ ಸಕಲ ಪ್ರಾಣಿಕೋಟಿಗಳೂ ಆತ್ಮಸ್ವರೂಪಗಳೇ ಎಂದು ಅರಿವು ಹೊಂದಿರುವುದೇ ಸತ್ಯದಲ್ಲಿ ಜೀವಿಸುವುದು. ಎಲ್ಲ ಕರ್ಮಗಳ ಪ್ರಕ್ಷಾಳನಾ ಮಾರ್ಗವು ತನ್ನ ಹತ್ತಿರವೇ ಇದೆಯೆಂದು ತಿಳಿದುಕೊಂಡು, ಆ ಮೂಲಕ ಸಾಧನಾ ಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದನ್ನೇ -ಸತ್ಯದಲ್ಲಿ ಜೀವಿಸುವುದು- ಎಂದು ಕರೆಯಲಾಗಿದೆ. ಈ ವಿಧವಾಗಿ ಎಲ್ಲಾ ಕೋನಗಳಿಂದ ಸತ್ಯಪದಾರ್ಥವನ್ನು ತಿಳಿದುಕೊಳ್ಳುತ್ತಾ, ಸತ್ಯದ ಕುರಿತು ಸರಿಯಾದ ಅವಗಾಹನೆಯನ್ನು ಹೊಂದುವುದರ ಮೂಲಕ ಅಂತರಾಂತರಗಳಲ್ಲಿ ಆನಂದಾನುಭೂತಿಗೆ ಹತ್ತಿರವಾಗುತ್ತೇವೆ. ಈ ಸ್ಥಿತಿಯನ್ನು ಹೊಂದುವುದು ಕೇವಲ ದೀಕ್ಷಾಬದ್ಧ ಧ್ಯಾನ ಸಾಧನೆಯ ಮೂಲಕವೇ ಸಾಧ್ಯ.
ಆತ್ಮಸ್ಥೆರ್ಯ… ನಮ್ಮಸಂದೇಶ
ಆತ್ಮಸ್ಥೆರ್ಯ ಅಂದರೆ ನಮ್ಮ ಬಗ್ಗೆ ನಮಗೆ ಸ್ಥಿರತೆ ಹೊಂದಿರುವುದು. ಎಂತಹ ಪರಿಸ್ಥಿತಿ ಎದುರಾದರೂ, ಎಂತಹ ವ್ಯಕ್ತಿಗಳು ಎದುರಾದರೂ, ಯಾವ ಪ್ರದೇಶದಲ್ಲಿ ವಿಹರಿಸಿದರೂ… ಮೊಟಕಾಗದ ಅಂತರಂಗ ಸ್ಥಿರತೆ ಸಾಧಿಸಿ ಮುಂದಕ್ಕೆ ಸಾಗುತ್ತಾ, ಕೈಹಿಡಿದ ಕೆಲಸವನ್ನು ಸಾಧಿಸುವುದೇ ಆತ್ಮಸ್ಥೆ ರ್ಯಕ್ಕೆ ನಿದರ್ಶನ.
ಹಿಡಿದ ಕೆಲಸ ಬಿಟ್ಟು… ಪರಿಸ್ಥಿತಿಗಳಿಗೆ, ಬಲಹೀನತೆಗಳಿಗೆ ತಲೆಬಾಗಿ ಕಾರ್ಯಾಚರಣೆಯಿಂದ ನಿಷ್ಕ್ರಮಿಸುವುದು, ಪಲಾಯನ ಮಾಡುವುದು ಆತ್ಮಸ್ಥೆ ರ್ಯ ಅನಿಸಿಕೊಳ್ಳುವುದಿಲ್ಲ.
ಎಷ್ಟೇ ಅಡ್ಡಿಗಳು ಎದುರಾದರೂ, ಎಷ್ಟೇ ದುರ್ಘಟನೆಗಳು ನಡೆದರೂ, ಎಷ್ಟೇ ಜನ ವಿಮರ್ಶಿಸಿದರೂ… ಹಿಡಿದ ಕೆಲಸವನ್ನು ನಡೆಸುತ್ತಾ ಆರೋಹಣ ಕ್ರಮದಲ್ಲಿ ಪಯಣಿಸುವುದೇ ಆತ್ಮಸ್ಥೆ ರ್ಯಕ್ಕೆ ಸರಿಯಾದ ನಿದರ್ಶನ. ಇದೇ ಮಾಸ್ಟರ್ಸ್ ಎಲ್ಲರ ಏಕೈಕ ಸಂದೇಶ. ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಾರದು. ದೀನನಾಗಿ ಇರಬಾರದು… ಪುಕ್ಕಲರಾಗಿ ಇರಬಾರದು. ಕ್ಲೈ ಬ್ಯಂ ಮಾ ಸ್ಮ ಗಮಃ ಪಾರ್ಥ … ಕ್ಷುದ್ರಂ ಹೃದಯದೌರ್ಬಲ್ಯಂ ಎಂದಿದ್ದಾನಲ್ಲವೆ ಶ್ರೀಕೃಷ್ಣ.
ಮಿತ್ರತ್ವವು… ನಮ್ಮನಿಜತತ್ವ
ಯಾರೂ ಶಾಶ್ವತವಾದ ವಿರೋಧಿಗಳಲ್ಲ; ಯಾರೂ ಶಾಶ್ವತವಾದ ಅಭಿಮಾನಿಗಳೂ ಅಲ್ಲ. ಸಮಯ ಸಂದರ್ಭಾನುಸಾರ ವಿರೋಧಿಗಳು ಮಿತ್ರರಾಗಿ ಬದಲಾಗುತ್ತಾರೆ; ಮಿತ್ರರು ವಿರೋಧಿಗಳಾಗಿ ಬದಲಾಗಬಹುದು.
ಕೇವಲ ಪರಿಸ್ಥಿತಿಗಳನ್ನು ಆಧರಿಸಿದ ವಿರೋಧವು ಯಾರೊಂದಿಗೂ ಇರಕೂಡದು. ಯಾಕೆಂದರೆ ಮಮಾತ್ಮಾ ಸರ್ವಭೂತಾತ್ಮಾ ಅಲ್ಲವೇ. ಅಂದರೆ, ತಾನು ಯಾವ ಆತ್ಮಸ್ವರೂಪನಾಗಿದ್ದಾನೋ ಎಲ್ಲರೂ ಆ ಆತ್ಮಸ್ವರೂಪರೇ. ತಾನು ಆತ್ಮವಾಗಿ ಇದ್ದು ಇನ್ನೊಬ್ಬ ಆತ್ಮಸ್ವರೂಪನೊಂದಿಗೆ ವಿರೋಧವು ಚೋದ್ಯವು. ಸಿದ್ಧಾರ್ಥನು ಬುದ್ಧತ್ವ ಪ್ರಾಪ್ತಿ ಹೊಂದಿ ಬುದ್ಧನಾಗಿ ಎಲ್ಲರೊಂದಿಗೆ ಮೈತ್ರೀಭಾವ ಹೊಂದಿ ಮೈತ್ರೇಯ ಬುದ್ಧನಾದನು. ಸಕಲ ಜೀವಿಗಳ ಜೊತೆ, ಪಶುಪಕ್ಷಿಗಳ ಜೊತೆ, ವೃಕ್ಷಗಳ ಜೊತೆ, ಮೈತ್ರಿಭಾವದೊಂದಿಗೆ ಇರುವುದೇ … ನಮ್ಮ ನಿಜ ತತ್ವ. ಈ ಅದ್ಭುತ ಸ್ಥಿತಿಯನ್ನು ನಾವು ಹೊಂದಬೇಕೆಂದರೆ ಇರುವ ಏಕೈಕ ಮಾರ್ಗವೇ ಧ್ಯಾನಮಾರ್ಗವು.
ನಿರಾಡಂಬರತೆ… ನಮ್ಮಸಹಜಲಕ್ಷಣ
ನಿರಾಡಂಬರತೆ ಎನ್ನುವುದು ಅಹಂಕಾರರಹಿತ ಜೀವನಕ್ಕೆ ನಿದರ್ಶನ. ನಿರಾಡಂಬರತೆ ಎಂದರೆ ಸೀಮಿತವಾದ ಉಡುಪುಗಳನ್ನು ಧರಿಸುವುದು, ಮನುಷ್ಯರಿಂದ ದೂರವಿದ್ದು ಒಂದು ಮೂಲೆಯಲ್ಲಿರುವುದು ಅಲ್ಲ. ಮನುಷ್ಯ ಸಾಮಾಜಿಕವಾಗಿ, ಆರ್ಥಿಕವಾಗಿ, ಆಧ್ಯಾತ್ಮಿಕವಾಗಿ ಎಷ್ಟು ಉನ್ನತ ಹಂತಕ್ಕೆ ತಲುಪಿದರೂ ಬಾಹ್ಯ ಆಡಂಬರಗಳ ಕಡೆಗೆ ಹೆಚ್ಚಿನ ಒಲವು ತೋರಿಸದೆ ಅಂತರಂಗದಲ್ಲಿ ನಿರಾಡಂಬರತೆ ಹೊಂದಿರುವುದೇ ನಿಜವಾದ ನಿರಾಡಂಬರತೆ.
ಬಹಿರಂಗ ದುರಾಸೆಗಳಿಗೆ ತಲೆಬಗ್ಗಿಸದೆ ಅಂತರಂಗದೊಂದಿಗೆ ನಾವು ಒಂದಾಗಿ ಇರುವುದೇ ನಿರಾಡಂಬರತೆ. ಒಬ್ಬ ಮನುಷ್ಯನಿಗೆ ವಿಜಯವು ನಿರಾಡಂಬರತೆಯಿಂದಲೇ ಸಾಧ್ಯವಾಗುತ್ತದೆ. ನಮ್ಮ ಬಾಹ್ಯ ಅಹಂಕಾರವನ್ನು ತೊಲಗಿಸಿಕೊಳ್ಳುವುದೇ ಅಲ್ಲದೆ ಒಳಗೆ ಬಚ್ಚಿಟ್ಟುಕೊಂಡ ಅಹಂಕಾರವನ್ನೂ ಪೂರ್ತಿಯಾಗಿ ತ್ಯಾಗಮಾಡುವುದೇ ನಿಜವಾದ ನಿರಾಡಂಬರತೆ. ಈ ವಿಧವಾಗಿ ಜೀವನಯಾತ್ರೆ ಸಾಗಿಸುವುದೇ ಪ್ರತಿವ್ಯಕ್ತಿಯ ಸಹಜ ಲಕ್ಷಣವು. ನಿರಾಡಂಬರತೆ ಎನ್ನುವುದು ಪಿರಮಿಡ್ ಮಾಸ್ಟರ್ಗಳಿಗೆ ಲೀಲಾಜಾಲವಾದ ವಿದ್ಯೆ.
ವಿನಯ… ನಮ್ಮ ಪುರಾತನ ಸಂಸ್ಕೃತಿ
ವಿನಯವಿಲ್ಲದ ವಿದ್ಯೆಗೆ ಸೌರಭವಿರದು. ಮನುಷ್ಯನಿಗೆ ವಿನಯವಿಲ್ಲದಿದ್ದರೆ ಎಂತಹ ದೊಡ್ಡವನಾದರೂ ಯಾವಾಗಾದರೂ ಒಂದುಸಲ ಆಭಾಸಕ್ಕೆ ಒಳಗಾಗುತ್ತಾನೆ.
ಎಷ್ಟು ಭೌತಿಕ ವಿದ್ಯೆಗಳನ್ನು ಅಭ್ಯಾಸಮಾಡಿದ್ದರೂ, ಎಷ್ಟು ಆಧ್ಯಾತ್ಮಿಕ ವಿದ್ಯೆಗಳನ್ನು ಅಭ್ಯಾಸಮಾಡಿದ್ದರೂ, ವಿನಯವಿಲ್ಲದಿದ್ದರೆ ಗೌರವವನ್ನು ಗಳಿಸಿಕೊಳ್ಳುವುದಿಲ್ಲ.
ವಿದ್ಯಾದದಾತಿ ವಿನಯಂ… ನಿಜವಾದ ವಿದ್ಯೆಯ ಮೂಲಕ ಮಾತ್ರವೇ ವಿನಯವು ಬರುತ್ತದೆ. ಎಲ್ಲಿ ನಿಜವಾದ ವಿದ್ಯೆಯಿಲ್ಲವೋ ಅಲ್ಲಿ ವಿನಯಫಲವಿರುವುದಿಲ್ಲ. ವಿನಯದಿಂದಲೇ ಎಲ್ಲರೂ ಆಕರ್ಷಿತರಾಗುತ್ತಾರೆ. ಎಷ್ಟೇ ಪ್ರಜ್ಞಾವಂತನಾದರೂ ಅವಿಧೇಯತೆಯಿಂದ ಇರುವಾಗ ಎಲ್ಲರಿಗೂ ದೂರವಾಗುತ್ತಾನೆ. ಪ್ರತಿ ಪಿರಮಿಡ್ ಮಾಸ್ಟರ್ ಸದಾ ವಿನಯದಿಂದ ಸಹಜವಾಗಿ ವರ್ತಿಸುತ್ತಾನೆ. ವಿನಯವೇ ಮಾಸ್ಟರ್ಗಳ ನಿಜವಾದ ಸಂಸ್ಕೃತಿ.
ಸಮಸ್ತ ಜೀವಕೋಟಿ… ನಮ್ಮಸಂಪೂರ್ಣಬೃಹತ್ ಕುಟುಂಬ
ಈ ಸಮಸ್ತ ವಿಶ್ವದಲ್ಲಿ ಸರ್ವಜೀವಕೋಟಿ, ಸಮಸ್ತ ಮೌಲ್ಯಗಳನ್ನು ಗಳಿಸಿಕೊಂಡಿದೆ. ಯಾವ ಮನುಷ್ಯನೂ ಮತ್ತೊಬ್ಬ ಮನುಷ್ಯನಿಗೆ ಕಡಿಮೆ ಅಲ್ಲ. ಯಾವ ಪ್ರಾಣಿಯೂ ಇನ್ನೊಂದು ಪ್ರಾಣಿಗಿಂತ ಹೀನವಾದುದು ಅಲ್ಲ. ಸರ್ವ ಜೀವರಾಶಿಗಳೂ ಉದ್ಭವಿಸುತ್ತಾ ತಮ್ಮ ತಮ್ಮ ಚೈತನ್ಯದ ಸ್ಥಿತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ನಿರಂತರ ಪ್ರಯತ್ನದಲ್ಲಿ ಇರುತ್ತವೆ. ಒಂದೊಂದು ಪರಿಸ್ಥಿತಿಯಲ್ಲಿ … ತಮ್ಮತಮ್ಮ ಚೈತನ್ಯದ ಸ್ಥಿತಿಯಲ್ಲಿ ಹೆಚ್ಚು-ಕಡಿಮೆ ಇರಬಹುದು. ಆದರೆ… ಎಲ್ಲವೂ ಕೂಡಾ ಚೈತನ್ಯವನ್ನು ವಿಸ್ತರಿಸಿಕೊಳ್ಳಲು ನಿರಂತರ ಪ್ರಯತ್ನದಿಂದ ಮುಂದಕ್ಕೆ ಸಾಗುತ್ತವೆ … ಆದ್ದರಿಂದ, ಸಂಕುಚಿತ ಅವಗಾಹನೆಯಿಂದ ಕೆಲವು ಪ್ರಾಣಿಗಳನ್ನು ಕಡಿಮೆ ಎಂದು ಭಾವಿಸುವುದು ಸರಿಯಾದ ವಿಧಾನವಲ್ಲ.
ಪ್ರತಿಯೊಬ್ಬರೂ, ಪ್ರತಿಯೊಂದು ಪ್ರಾಣಿಯೂ ನಿರಂತರವಾಗಿ ಈ ವಿಶ್ವದಲ್ಲಿ ತಿರುಗಾಡುವ ಪ್ರಯಾಣಿಕನೇ. ಎಲ್ಲರೂ ಈ ವಿಶ್ವಕುಟುಂಬದಲ್ಲಿ ಪಾಲುಗಾರರೇ. ನಾವೆಲ್ಲಾ ಈ ಬೃಹತ್ ವಿಶ್ವಕುಟುಂಬಕ್ಕೆ ಸೇರಿದವರು. ಇಂತಹ ಸಹಜ ಸಿದ್ಧವಾದ ಸ್ಥಿತಿಯಲ್ಲಿ ಸದಾ ಬೆಳಗಬೇಕೆಂದರೆ ನಮಗಿರುವ ಏಕೈಕ ಮಾರ್ಗವೇ ಧ್ಯಾನ ಸಾಧನೆ.
Recent Comments