” ಧ್ಯಾನವೇ ಜೀವನ “
ನನ್ನ ಜೀವನದಲ್ಲಿ ಬಹುತೇಕ ಕಾಲ ಯಾವ ಕೊರತೆಯೂ ಸಹ ಇಲ್ಲದೆ ಆನಂದವಾಗಿಯೇ ಸಾಗಿದೆ ಎಂದು ಹೇಳಬಹುದು. ನನ್ನ ತಂದೆ, ತಾಯಿ, ಅಕ್ಕಂದಿರು, ಅಣ್ಣ, ತಮ್ಮ, ಸ್ನೇಹಿತರು… ಎಲ್ಲರೂ ಸಹ ನನ್ನೆಡೆಗೆ ಪ್ರೀತಿಯನ್ನು ತೋರುತ್ತಾ ನನ್ನ ವಿಷಯದಲ್ಲಿ ತುಂಬಾ ಅಭಿಮಾನದಿಂದ ಇದ್ದಾರೆ.
ವಿದ್ಯಾಭ್ಯಾಸದ ಜೊತೆ ನನ್ನ ಸಂಗೀತ ಸಾಧನೆ, ಆಟಗಳೂ, ಹಾಡುಗಳೂ, ಉದ್ಯೋಗ, ಸಂಸಾರ .. ಎಲ್ಲರ ಹಾಗೆ ಅತಿ ಸಾಮಾನ್ಯವಾಗಿ ಕಳೆದು ಹೋಗುತ್ತಿದ್ದರೂ ಕೂಡಾ .. ನನ್ನಲ್ಲಿ ಯಾವುದೊ ಒಂದು ಕೊರತೆ ನನ್ನನ್ನು ಪ್ರಶಾಂತವಾಗಿ ಇರಲು ಬಿಡುತ್ತಿರಲಿಲ್ಲ. “ಏನೋಮಾಡಬೇಕು” ಅನಿಸುತ್ತಿತ್ತು. ಆದರೆ.. ಆ ಮಾಡಬೇಕಾದ್ದೇನು ಎಂಬುದು ತಿಳಿಯುತ್ತಿರಲಿಲ್ಲ. ಆದರೆ, 1976 ನೆಯ ವರ್ಷದಿಂದ ಧ್ಯಾನ ಮಾಡಲು ಪ್ರಾರಂಭಿಸಿದ ನಂತರ ಮಾತ್ರ .. ನನ್ನ ಮನಸ್ಸು ಸಂಪೂರ್ಣವಾಗಿ ಶಾಂತಿಹೊಂದಿ .. ನನ್ನಲ್ಲಿರುವ ತಪನೆಗೆ ಒಂದು ಸ್ಪಷ್ಟವಾದ ಮಾರ್ಗ ಸಿಕ್ಕಹಾಗಾಯಿತು.
1979 ರಲ್ಲಿ ಸಂಪೂರ್ಣವಾಗಿ ಆತ್ಮಜ್ಞಾನ ಲಭ್ಯವಾಯಿತು. ಈ ರೀತಿಯಲ್ಲಿ ಒಂದುಕಡೆ ಸಂಸಾರ .. ಇನ್ನೊಂದುಕಡೆ ಧ್ಯಾನ ಸಾಧನೆ ಹಾಗೆ ಸಾಗುತ್ತಲ್ಲೇ ಇರುತ್ತಾ ಇರುತ್ತಾ .. ಒಂದು ಸಮಯದಲ್ಲಿ ನನ್ನಲ್ಲಿ ಏನೊ ತಿಳಿಯದ ವೈರಾಗ್ಯ: ಈ ಸಂಸಾರ, ಈ ಪ್ರಪಂಚ .. ಈ ಗಲಾಟೆ .. ಇದೆಲ್ಲಾ ಏತಕ್ಕಾಗಿ? ಹಾಯಾಗಿ ಎಲ್ಲಾ ತ್ಯಜಿಸಿ ಹಿಮಾಲಯಗಳಿಗೆ ಹೊರಟು ಹೋದರೆ ಚೆನ್ನಾಗಿರುತ್ತದೇನೊ? ಎನಿಸಿತು.
ಕಣ್ಣುಗಳನ್ನು ಮುಚ್ಚಿಕೊಂಡು ಧ್ಯಾನದಲ್ಲಿ ಕುಳಿತುಕೊಂಡು ಕೆಲವೇ ಕ್ಷಣಗಳಲ್ಲಿ ಹಿಮಾಲಯಗಳಿಗೆ ಹೊರಟುಹೋದೆ. ಅಲ್ಲಿರುವ ಪ್ರಕೃತಿಸೌಂದರ್ಯವನ್ನು ಕಣ್ಣು ತುಂಬಾ ವೀಕ್ಷಿಸಿ ಅಲ್ಲಿರುವ ಪ್ರಶಾಂತತೆಯನ್ನು ಅನುಭವಿಸಿ ತೃಪ್ತಿಯಾಗಿ ಹೊರಟುಬಂದೆ.
ಧ್ಯಾನದಿಂದ ಹೊರಬಂದ ಮೇಲೆ ಕುಳಿತು ಯೋಚಿಸಿದೆ. “ಹಿಮಾಲಯಗಳಿಗೆ ಹೋಗಿ ಏನು ಮಾಡೋದು? ನಿಜಕ್ಕೂ ಅಲ್ಲಿ ಕಲಿಯುವುದಕ್ಕಾದರೂ ಏನಿದೆ? ಕಲಿತುಕೊಳ್ಳಬೇಕಾಗಿರುವುದೆಲ್ಲಾ ಇಲ್ಲೇ ಈ ಸಂಸಾರ ಪ್ರಪಂಚದಲ್ಲೇ ಇದ್ದೇ ಕಲಿತುಕೊಂಡಿದ್ದೇನೆ. ಆದ್ದರಿಂದ, ಇಲ್ಲಿ ಕಲಿತಿರುವ ವಿಷಯವನ್ನು ಇಲ್ಲೇ ಇನ್ನೂ ಹೆಚ್ಚಾಗಿ ಸಾಧನೆ ಮಾಡಿ, ಸಂಸಾರ ಪ್ರಪಂಚದಲ್ಲಿರುವ ಸಂಸಾರಿಗಳಿಗೆಲ್ಲಾ ಹಂಚಬೇಕು ” ಎಂದು ಬಲವಾದ ಯೋಚನೆ ಬಂತು, ಅಷ್ಟೇ .. ಇನ್ನು ನನ್ನ ಗುರಿ ನನಗೆ ಸುಸ್ಪಷ್ಟವಾಯಿತು.
ಹಾಗೆಯೇ, ಒಂದು ಕ್ಷಣದಲ್ಲೇ ನನಗೆ ‘ವೈರಾಗ್ಯ’, ‘ಸನ್ಯಾಸ ಜೀವನ’ ಎಲ್ಲಾ ಮುಗಿದು ಹೋಗಿ .. ಹಿಮಾಲಯಗಳಿಗೆ ಕೂಡಾ ಹೋಗಿ ಬಂದು ಒಬ್ಬ ‘ಬುದ್ಧನ’ ಹಾಗೆ ನನ್ನ ಕರ್ತವ್ಯವನ್ನು ನಾನು ತಿಳಿದುಕೊಂಡಿದ್ದೇನೆ.
ಅಂದಿನಿಂದ ನಾನು ಮನೆಯಲ್ಲೇ ಇರುತ್ತಾ .. ಉದ್ಯೋಗ ಧರ್ಮವನ್ನು ನಿಪುಣತೆಯಿಂದ ನಿರ್ವಹಿಸುತ್ತಾ .. ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದೆನೊ ಅಲ್ಲಲ್ಲಿ ಎಲ್ಲರಿಗೂ ಧ್ಯಾನ ಹೇಳಿಕೊಡಲು ಪ್ರಾರಂಭಿಸಿದ್ದೇನೆ. ಆತ್ಮಜ್ಞಾನವನ್ನು, ದುಃಖ ನಿವಾರಣೋಪಾಯಗಳನ್ನು ಎಲ್ಲರಿಗೂ ತಿಳಿಸುತ್ತಾ ಬಂದೆ.
ಮಿತ್ರರಾದ “ಶ್ರೀರಾಮಚೆನ್ನಾರೆಡ್ಡಿ” ಅವರ ಮೂಲಕ ನಾನು ಆನಾಪಾನಸತಿ ಧ್ಯಾನವನ್ನು ಕುರಿತು ತಿಳಿದುಕೊಂಡಿದ್ದೇನೆ. ಈ ವಿದ್ಯೆಯನ್ನು ನಾನು ಒಬ್ಬ ಗುರುವಿನ ಮೂಲಕ ಕಲೆತುಕೊಂಡಿಲ್ಲ. ಆದ್ದರಿಂದ, ನಾನು ಕೂಡಾ ಯಾರಿಗೂ ಗುರುವಲ್ಲ; ಒಬ್ಬ ಮಿತ್ರನ ಮೂಲಕ ನಾನು ಇಂತಹ ಶ್ರೇಷ್ಠ ವಿದ್ಯೆಯನ್ನು ಕಲಿತುಕೊಂಡು ಬುದ್ಧನಾಗಿದ್ದೇನೆ. ಆದ್ದರಿಂದ, ನಾನು ಒಬ್ಬ ‘ಮೈತ್ರೇಯ ಬುದ್ಧ’ನು. ಹೀಗೆ, ಎಲ್ಲರಿಗೂ ನನ್ನ ಸ್ನೇಹ ಹಸ್ತವನ್ನು ನೀಡುತ್ತಾ ಮುನ್ನಡೆಯುತ್ತಿದ್ದೇನೆ.
ನನ್ನಲ್ಲಿರುವ ಆಧ್ಯಾತ್ಮಿಕ ಚೈತನ್ಯವನ್ನು ವಿಶೇಷವಾಗಿ ತಟ್ಟಿಎಬ್ಬಿಸಿದ ಕಾರುಣ್ಯಮೂರ್ತಿ .. ಲೋಬ್ಸಾಂಗ್ ರಾಂಪಾ. 1979ರಲ್ಲಿ ಟಿಬೆಟ್ನ ಈ ಮಹಾಯೋಗಿ ಬರೆದ ವೈಜ್ಞಾನಿಕ ಪುಸ್ತಕ “YOU FOR EVER” ನಾನು ಓದಿದ್ದೇನೆ. ಅದರಲ್ಲಿರುವ ಶಾಸ್ತ್ರೀಯಜ್ಞಾನವು ನಾನು ತಲುಪಬೇಕಾದ ಸ್ಥಿತಿಗಳನ್ನು ನನಗೆ ತಿಳಿಸಿದೆ. ದಿವ್ಯಚಕ್ಷುವನ್ನು ಕುರಿತು, ಸೂಕ್ಷ್ಮಶರೀರಯಾನವನ್ನು ಕುರಿತು, ಆಕಾಶಿಕ್ ರಿಕಾರ್ಡ್ಗಳನ್ನು ಕುರಿತು, ಮತ್ತು ಮರಣಾನಂತರ ಜೀವನವನ್ನು ಕುರಿತು ತಮ್ಮ ಸ್ವ-ಅನುಭವಗಳನ್ನು ಊಹಿಸಲಾರದ ರೀತಿಯಲ್ಲಿ ತಿಳಿಸಿದ ಲೋಬ್ಸಾಂಗ್ ರಾಂಪಾ ಅವರು ನನ್ನನ್ನು ಸಹ ಒಬ್ಬ ಆಧ್ಯಾತ್ಮಿಕ ಶಾಸ್ತ್ರಜ್ಞನಾಗಿ ರೂಪಿಸಿದರು.
ಅನಂತರ, ನೂರಾರು ವರ್ಷಗಳಷ್ಟು ವಯಸ್ಸಾದ ಶ್ರೀ ಸದಾನಂದಯೋಗಿ ಅವರು ಕರ್ನೂಲ್ಗೆ ಬಂದು .. ಅಲ್ಲಿ ‘ನನ್ನ ಭಾಗ್ಯವೆನೋ’ ಎಂಬ ರೀತಿಯಲ್ಲಿ, ನನಗಾಗಿ ಆರುವರ್ಷಗಳು ನಿರೀಕ್ಷಿಸಿದರು. ನನ್ನ “ದಿವ್ಯಪ್ರಣಾಳಿಕೆ” ಪ್ರಕಾರ ಅಂದುಕೊಂಡಹಾಗೆ ಅವರನ್ನು ಭೇಟಿಯಾದೆ. ಅವರ ಸಾಂಗತ್ಯದಲ್ಲಿ ಎರಡು ವರ್ಷಗಳಕಾಲ ನಾನು ಹೊಂದಿದ ಅದ್ಭುತ ಜ್ಞಾನಕ್ಕೆ ಬೆಲೆಕಟ್ಟಲಾಗುವುದಿಲ್ಲ.
“ಸುಭಾಷ್, ನೀನು ಮಾಂಸಪಿಂಡವಲ್ಲ … ಮಂತ್ರಪಿಂಡ” ಎಂದು ಹೇಳಿ ನನಗೆ ನನ್ನ ದಿಕ್ಕನ್ನು ತೋರಿಸಿದ ಅವರು, ತಮ್ಮ ಆತ್ಮಸ್ಪೂರ್ತಿಯನ್ನು ನನಗೆ ನೀಡಿದರು. ತಾವು ಬಂದಕೆಲಸ ಪೂರ್ತಿ ಆಗಿದೆ ಎಂದು ಪ್ರಕಟಿಸಿ.. ಮೊದಲೇ ತಾವು ನಿರ್ಣಯಿಸಿಕೊಂಡ ದಿನಾಂಕ ಮತ್ತು ಸಮಯದ ಪ್ರಕಾರ ಹಾಯಾಗಿ ತಮ್ಮ ಭೌತಿಕ ಶರೀರವನ್ನು ತ್ಯಜಿಸಿದರು.
“ಮಾಡಲಾದರೆ ಮಾಡು .. ಇಲ್ಲದಿದ್ದರೆ ಮಡಿ (ಮರಣಿಸು)” ಎನ್ನುವುದೆ ಗುರುಗಳ ಆಜ್ಞೆ. ಅವರ ಆಜ್ಞಾನುಸಾರ ಧ್ಯಾನ ಪ್ರಚಾರವನ್ನು ಇನ್ನೂ ಅಧಿಕಗೊಳಿಸಿ 2004 – ಧ್ಯಾನಾಂಧ್ರಪ್ರದೇಶ್ .. 2008 – ಧ್ಯಾನ ಭಾರತ್ .. 2012 – ಪಿರಮಿಡ್ಜಗತ್ಗಳ ಸಾಧನೆಗಾಗಿ ಮುಂದಕ್ಕೆ ಸಾಗುತ್ತಿರುವ ರೀತಿ ಎಲ್ಲರಿಗೂ ತಿಳಿದಿದ್ದೇ.
“ಈ ಪ್ರಪಂಚ ಹೇಗಿರಬೇಕೋ ಹಾಗೆ ಇರುತ್ತದೆ” ಎನ್ನುವ ಸತ್ಯವನ್ನು ತಿಳಿದುಕೊಂಡಿದ್ದೇನೆ. ಪ್ರಪಂಚ ಬದಲಾಗುವುದಿಲ್ಲ “ಧ್ಯಾನದ ಮೂಲಕ ನಮ್ಮಲ್ಲಿರುವ ಅಶಾಸ್ತ್ರೀಯತೆಯನ್ನು ಸರಿಪಡಿಸಿಕೊಂಡು ನೋಡಿದರೆ .. ಪ್ರಪಂಚದಲ್ಲಿರುವ ಪ್ರತಿಯೊಂದೂ ನಮಗೆ ಅದ್ಭುತವಾಗಿ ಕಾಣುತ್ತಿರುತ್ತದೆ” ಎನ್ನುವ ಅರಿವನ್ನು ಹೊಂದಿದ್ದೇನೆ. ನಮ್ಮಲ್ಲಿ ಎಷ್ಟು ಬದಲಾವಣೆ ಬರುತ್ತದೆಯೊ ಪ್ರಪಂಚದಲ್ಲಿಯೂ ಸಹ ಅಷ್ಟೇ ಬದಲಾವಣೆ ಸಹಜವಾಗಿಯೆ ಬರುತ್ತದೆ. ನಮ್ಮಲ್ಲಿ ಎಷ್ಟು ಅಭಿವೃದ್ಧಿ ಕಾಣುತ್ತದೆಯೊ ಪ್ರಪಂಚದಲ್ಲಿಯೂ ಸಹ ಅಷ್ಟೇ ಅಭಿವೃದ್ಧಿ ನಮಗೆ ಸಹವಾಗಿಯೆ ಕಾಣುತ್ತದೆ ಎನ್ನುವುದು ನಾವೆಲ್ಲರೂ ತಿಳಿದುಕೊಳ್ಳಬೇಕಾದ ಸತ್ಯ.
ಮುಳ್ಳಿನ ಗಿಡಗಳಿಂದ ತುಂಬಿರುವ ಕಾಡಿನಲ್ಲಿ ನಾವು ನಡೆಯಬೇಕಾದರೆ ಆ ಕಾಡಿನಲ್ಲಿರುವ ಮುಳ್ಳಿನ ಗಿಡಗಳೆನ್ನೆಲ್ಲಾ ನಾವು ತೆಗೆಯಬೇಕಾದ ಅವಶ್ಯಕತೆ ಇಲ್ಲ. ಕೇವಲ ನಮ್ಮ ಪಾದಗಳಿಗೆ ಮಾತ್ರ ಪಾದರಕ್ಷೆಗಳನ್ನು ಹಾಕಿಕೊಂಡು ನಡೆದರೆ ಸಾಕು .. ಕ್ಷೇಮವಾಗಿ ಹೋಗಿ ನಮ್ಮ ಗಮ್ಯವನ್ನು ತಲಪುತ್ತೇವೆ. ಹಾಗೆಯೆ, ಈ ಪ್ರಪಂಚದಲ್ಲಿ ನಾವು ಸುಖವಾಗಿ ಜೀವಿಸಬೇಕಾದರೆ ಪ್ರಪಂಚವನ್ನು ಶುಚಿ (ಪ್ರಕ್ಷಾಳನೆ) ಮಾಡಬೇಕಾದ ಅವಶ್ಯಕತೆ ಇಲ್ಲ. ನಾವು ಸಾಗಬೇಕಾಗಿರುವ ನಮ್ಮ ಮಾರ್ಗವನ್ನು ಶಾಸ್ತ್ರೀಯವಾಗಿರುವ ಹಾಗೆ ಸರಿಮಾಡಿಸಿಕೊಳ್ಳುತ್ತಾ .. ಸೃಷ್ಟಿಯಲ್ಲಿರುವ ಪ್ರತಿಯೊಂದು ಕ್ರಿಮಿಕೀಟ, ಪ್ರಾಣಿ, ಪಶುಪಕ್ಷಿ ಮತ್ತು ಮಾನವರ ಕುರಿತು ಗೌರವ ಭಾವನೆಯಿಂದ ಇದ್ದರೆ ಸಾಕು. ನಾವು ಆನಂದವಾಗಿದ್ದರೆ ಎಲ್ಲರೂ ಆನಂದವಾಗಿಯೇ ಇರುತ್ತಾರೆ. ಅವರವರ ವಾಸ್ತವಕ್ಕೆ ಅವರೇ ‘ಕರ್ತೃ’, ‘ಕರ್ಮ’, ‘ಕ್ರಿಯೆ’ ಎನ್ನುವ ಸತ್ಯವನ್ನು ಅರಿವಿನಲ್ಲಿಟ್ಟುಕೊಂಡು ಜೀವಿಸಬೇಕು.
ಮಾನವ ನಾಗರಿಕತೆಯಲ್ಲಿ ಮಾಂಸಾಹಾರ ಎನ್ನುವುದು ಪೀಳಿಗೆಗಳಿಂದ ಬರುತ್ತಿದೆ. “ಇದು ಒಂದು ತಪ್ಪು ಕೆಲಸ ಎಂದಾಗಲೀ ..” ಅದರಿಂದ ನಾವು ಒಂದು ಜೀವಿಯನ್ನು ಹಿಂಸಿಸುತ್ತಿದ್ದೇವೆ” ಎಂಬ ಅರಿವಾಗಲಿ ಅನೇಕ ಜನರಿಗೆ ಇಲ್ಲ. ಕೋಳಿ, ಮೇಕೆ, ಏಡಿ, ಮೀನು ಮುಂತಾದ ನಿಸ್ಸಹಾಯಕ ಜೀವಿಗಳನ್ನು ಕೊಂದು ಲಾಭಗಳನ್ನು ಪಡೆಯುವುದನ್ನೇ ಅನೇಕ ಸಾವಿರಾರು ಕುಟುಂಬಗಳು ಜೀವನಾಧಾರವಾಗಿ ಮಾಡಿಕೊಂಡು ವ್ಯಾಪಾರ ಮಾಡಿಕೊಳ್ಳುತ್ತಿವೆ.
“ಸಹಜೀವಿಗಳನ್ನು ಬೆಳೆಸಿ ಸಂಹಾರಮಾಡುತ್ತಿದ್ದೇವೆ” ಎನ್ನುವ ಪರಿಕಲ್ಪನೆಯೇ ಇಲ್ಲವಾಗಿದೆ. ಸ್ವಲ್ಪವೂ ಸಹ ಮಾನವೀಯ ಭಾವನೆಗಳು ಎನ್ನುವುದು ಇಲ್ಲದೆಯೇ ಅವರು ಅದನ್ನು ಒಂದು ವೃತ್ತಿಯಾಗಿ ಸ್ವೀಕರಿಸುತ್ತಿದ್ದಾರೆ. ಉಣ್ಣುವವರು ಸಹ .. “ಸತ್ತಿರುವ ಪ್ರಾಣಿಗಳ ಮೃತ ಕಳೇಬರಗಳನ್ನು ತಿನ್ನುತ್ತಿದ್ದೇವೆ” ಎನ್ನುವ ಅರಿವು ಸಹ ಇಲ್ಲದೇ ಅದನ್ನು ಸಾಮಾನ್ಯ ಆಹಾರದಹಾಗೆ ತಿನ್ನುತ್ತಾ .. ಅನೇಕಾನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಸರ್ವ ದುಃಖಗಳಿಗೂ ಮೂಲಕಾರಣವಾದ ಮಾಂಸಾಹಾರ ಭಕ್ಷಣೆಯನ್ನು ನಿಲ್ಲಿಸಬೇಕು ಮತ್ತು ಮಾಂಸಾಹಾರವನ್ನು ತಕ್ಷಣವೇ ಬಿಡಬೇಕು .. ಜೀವಹಿಂಸೆಗೆ ಪ್ರೋತ್ಸಾಹ ನೀಡುವ ಸಕಲ ಅನರ್ಥಗಳನ್ನು ತಪ್ಪಿಸಬೇಕು. ಶ್ವಾಸವನ್ನು ಗಮನಿಸುತ್ತಾ ಧ್ಯಾನ ಮಾಡುವುದರಿಂದ ನಾವು ಯೋಗಿಗಳಾಗಿ ಪರಿವರ್ತನೆಗೊಳ್ಳುತ್ತೇವೆ .. ಮತ್ತು ಮಾಂಸಾಹಾರವನ್ನು ತ್ಯಜಿಸುವುದರಿಂದ ಶಾರೀರಿಕ ಶುದ್ಧಿಯಾಗುತ್ತದೆ. ಈ ಎರಡು ಬಗೆಯ ಶುದ್ಧಿಗಳು ತಪ್ಪದೇ ಆದರೆ ಮಾತ್ರವೇ ನಾವು ಆತ್ಮಪರವಾಗಿ ಅತ್ಯುನ್ನತವಾದ ಸ್ಥಿತಿಗೆ ತಲಪುತ್ತೇವೆ.
ಈ ಭೂಗ್ರಹದ ಚರಿತ್ರೆಯಲ್ಲಿ ಇದುವರೆಗೂ ಅನೇಕ ಜನ ಬುದ್ಧರು ಆಗಮಿಸಿದ್ದಾರೆ .. ಇನ್ನೂ ಅನೇಕ ಜನ ಬುದ್ಧರು ಭವಿಷ್ಯತ್ತಿನಲ್ಲಿ ಕೂಡಾ ಆಗಮಿಸುತ್ತಾರೆ. ಆದರೆ, “ಸತ್ಯಯುಗ ಕಾಂತಿ ಕಾರ್ಯಕರ್ತರುರಾಗಿ” ಈ ಭೂಮಿ ಮೇಲೆ ಬರಲಿರುವವರನ್ನು ಬುದ್ಧರಾಗಿ ಗುರ್ತಿಸುವುದು ಸಾಮಾನ್ಯ ಜನರಿಗೆ ತುಂಬಾ ಕಷ್ಟ. ಎಲ್ಲರ ಜೊತೆ ಸ್ನೇಹಪರರಾಗಿರುತ್ತಾ ಕರುಣೆಯನ್ನು ತೋರಿಸುವವರೇ ಮೈತ್ರೇಯ ಬುದ್ಧರು ಮತ್ತು ಮುಂಬರುವ ಕಾಲದಲ್ಲಿ ಈ ಭೂಮಿಯ ಮೇಲೆ ಪಾದ ಇಡುವವರೆಲ್ಲಾ ಕೂಡಾ ಆ ಮೈತ್ರೇಯ ಬುದ್ಧನ ಪ್ರತಿರೂಪಗಳೇ.
ನಿಜಕ್ಕೂ ಜೀವನ ಎನ್ನುವುದನ್ನು ನಾವು “ಸಾಹಸೋಪೇತ”ವಾಗಿಯೇ ಜೀವಿಸಬೇಕು. ಮಾಡಿದ್ದೇ ಮಾಡುತ್ತಾ, ಕೇಳಿಸಿಕೊಂಡಿದ್ದೇ ಕೇಳಿಸಿಕೊಳ್ಳುತ್ತಾ, ತಿಂದಿದ್ದೇ ತಿನ್ನುತ್ತಾ, ನೋಡಿದ್ದೇ ನೋಡುತ್ತಾ ಸಮಯವನ್ನು ಕಳೆಯುತ್ತಿದ್ದರೆ .. ಅಂತಹ ಜೀವನದಲ್ಲಿ ಸ್ವಲ್ಪವೂ ಬೆಳವಣಿಗೆ ಇರುವುದಿಲ್ಲ. ಇದು ಕಂಬಳಿಹುಳದಂತಹ ಜೀವನ.
ಆಗಿಂದಾಗ ಹೊಸ ಮನುಷ್ಯರನ್ನು ಭೇಟಿ ಆಗುತ್ತಾ .. ಹೊಸ ಹೊಸ ಪ್ರದೇಶಗಳಲ್ಲಿ ಸಂಚರಿಸುತ್ತಾ .. ಹೊಸ ಹೊಸ ಧ್ಯಾನಾನುಭವಗಳನ್ನು ಹೊಂದುತ್ತಿದ್ದರೆ .. ಜೀವನ ಒಂದು ಹಬ್ಬದ ಹಾಗಿರುತ್ತದೆ. ಇದು ಚಿಟ್ಟೆ(butterfly) ಅಂತಹ ಜೀವನ. ಇಂತಹ ಅದ್ಭುತವಾದ ಜೀವನವನ್ನೇ ಸಾಹಸೋಪೇತವಾದ ಜೀವನ ಎನ್ನುತ್ತೇವೆ.
Recent Comments