“ಆನಾಪಾನಸತಿ”

ಪಿರಮಿಡ್ ಸ್ಪಿರಿಚ್ಯುಯಲ್ ಸೊಸೈಟೀಗಳ ಮೂಲಭೂತವಾದ ಆಧ್ಯಾತ್ಮಿಕ ಸಾಧನಾ ಸಿದ್ಧಾಂತವೇ “ಆನಾಪಾನಸತಿ”.

ಆನಾಪಾನಸತಿ ಎಂಬುದು ಗೌತಮ ಬುದ್ಧ ೨೫೦೦ ವರ್ಷದ ಹಿಂದೆ ಪಾಳಿ ಭಾಷೆಯಲ್ಲಿ ಉಪಯೋಗಿಸಿದಂತಹ ಪದ.

ಪಾಳಿ ಭಾಷೆಯಲ್ಲಿ ‘ಆನ’ ಎಂದರೆ ‘ಉಚ್ಛ್ವಾಸ’

‘ಅಪಾನ’ ಎಂದರೆ ‘ನಿಶ್ವಾಸ’

‘ಸತಿ’ ಎಂದರೆ ‘ಕೂಡಿಕೊಂಡಿರುವುದು’

ಆದುದರಿಂದ, ಆನಾಪಾನಸತಿ ಅಂದರೆ ‘ಶ್ವಾಸದೊಂದಿಗೆ ನಾವು ಕೂಡಿಕೊಂಡಿರುವುದು’. ಇನ್ನೂ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ‘ಶ್ವಾಸದ ಮೇಲೆ ಗಮನ’.

ಈ ಆನಾಪಾನಸತಿ ಎಂಬುದು ಎಲ್ಲ ಋಷಿಗಳು ಮತ್ತು ಎಲ್ಲ ಯೋಗಿಗಳು ಪ್ರಪಂಚಕ್ಕೆ ನೀಡಿರುವ ಒಂದು ಅದ್ಭುತವಾದ ವರ !

ಈ ಆನಾಪಾನಸತಿ ಎಂಬುದು ‘ಪಶುವನ್ನು ಪಶುಪತಿ’ಯನ್ನಾಗಿ ಪರಿವರ್ತಿಸುತ್ತದೆ.

‘ಪಶು’ ಅಂದರೆ ಪ್ರಾಣಿ. ‘ಪಶುಪತಿ’ ಎಂದರೆ ಪ್ರಾಣಿ ಸ್ವಭಾವಕ್ಕೆ ಅಧೀನನಾಗದೆ ತಾನು ‘ಪತಿ’ ಅಥವಾ ‘ಯಜಮಾನ’ನಾಗುವುದು.

ಮನುಷ್ಯ ಒಂದು ಪ್ರಾಣಿ ಇದ್ದಹಾಗೆ, ಒಂದು ಪಶು ಇದ್ದಹಾಗೆ. ಪ್ರಾಣಿ ಪ್ರಪಂಚದಲ್ಲಿ ಒಂದು ಸ್ಪೀಸಿಸ್.

ಹೋಮೋಸೇಪಿಯನ್ಸ್ ಎಂಬುದು ಮಾನವಜಾತಿ. ಪ್ರಾಣಿಕುಲದಲ್ಲಿ ಒಂದು ಜಾತಿ ಈ ಮಾನವ ಜಾತಿ. ಅಂದರೆ ಒಂದು ಪಶು. ಈ ಪಶುವು ತನ್ನನ್ನು ತಾನು ತಿಳಿದು ತನಗೆ ತಾನು ಪಶುಪತಿಯಾಗಬೇಕೆಂದರೆ, ಇರುವುದು ಒಂದೇ ಒಂದು ಮಾರ್ಗ ಅದು ‘ಆನಾಪಾನಸತಿ’. ಈ ‘ಆನಾಪಾನಸತಿ’ಯನ್ನೇ ನಾವು ‘ಪಾಶುಪತಾಸ್ತ್ರ’ ಎಂದು ಹೇಳಬಹುದು. ‘ಪಶುಪತಿಯ ಅಸ್ತ್ರ’.

ಪಶುವನ್ನು ‘ಪಶುಪತಿ’ಯಾಗಿ ಪರಿವರ್ತಿಸುವ ಪಾಶುಪತಾಸ್ತ್ರವೇ ‘ಆನಾಪಾನಸತಿ’.

ಪಾಶುಪತಾಸ್ತ್ರದಿಂದ ಸಾಧಿಸಲಾರದಂಥದ್ದು ‘ಏನೂ ಇಲ್ಲ’. ಹಾಗೇ, ‘ಆನಾಪಾನಸತಿ’ ಯಿಂದ ಸಾಧಿಸಲಾರದಂಥದ್ದು ಏನೂ ಇಲ್ಲ.

ಆನಾಪಾನಸತಿ – ಸರ್ವರೋಗ ನಿವಾರಿಣಿ!

ಆನಾಪಾನಸತಿ – ಸರ್ವಭೋಗಕಾರಿಣಿ!

ಆನಾಪಾನಸತಿ – ಸರ್ವಜ್ಞಾನ ಪ್ರಸಾದಿನಿ!

ಆದ್ದರಿಂದ, ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್‌ಗಳ ಮೂಲಭೂತ ಆಧ್ಯಾತ್ಮಿಕ ಸಾಧನಾ ಸಿದ್ಧಾಂತ ಈ ಆನಾಪಾನಸತಿ ಆಗಿದೆ.

ಮುಖ್ಯವಾಗಿ ಆಧ್ಯಾತ್ಮಿಕ ಮಾರ್ಗದಲ್ಲಿ ಎರಡು ಹಂತಗಳಿವೆ. ಒಂದು ’ಉಪಾಸನಾಹಂತ’ ಎರಡು ’ವಿಪಸ್ಸನಾಹಂತ’.

’ಉಪಾಸನ’ ಅಂದರೆ ಅದು ಬಾಯಿಂದ ಮಾಡುವಂಥ ಕ್ರಿಯೆ. ’ವಿಪಸ್ಸನ’ ಅಂದರೆ ನಾಸಿಕದಿಂದ ಆರಂಭವಾಗಿ ಮೂರನೆಯ ನೇತ್ರದ ತನಕ ನಡೆಯುವ ಕ್ರಿಯೆ.

’ಉಪಾಸನೆ’ ಎಂಬುದು ಮಂತ್ರೋಚ್ಛಾರಣೆಯ ಮುಖಾಂತರ ಮಂತ್ರೋಪಾಸಕರು ಮಾಡುತ್ತಾ ಇರುತ್ತಾರೆ. ಮಂತ್ರವನ್ನು ಹೇಳಿ ಕೊನೆಗೆ ಮಂತ್ರೋಪಾಸಕರು ಒಂದು ನಿಶ್ಶಬ್ದ ಸ್ಥಿತಿಗೆ, ಅಂದರೆ, ಮಂತ್ರರಹಿತ ಸ್ಥಿತಿಗೆ ಸೇರಿದಾಗ ಆತನಿಗೆ ಕೆಲವು ದಿವ್ಯದೃಷ್ಟಿ ರೂಪಗಳು ಕಾಣುತ್ತವೆ. ಆದರೆ, ಅವರ ಸಾಧನೆ ಅಲ್ಲಿಗೇ ನಿಲ್ಲುತ್ತದೆ. ಅಂದರೆ, ಆ ದಿವ್ಯದೃಷ್ಟಿಯ ರೂಪಗಳು ಪ್ರಾಥಮಿಕ ಹಂತದಲ್ಲಿ ಸಂಚರಿಸುವುದೇ ಉಪಾಸಕರು ಸಾಧಿಸುವ ಫಲ. ಅದಕ್ಕಿಂತ ಮೇಲಕ್ಕೆ ಹೋಗುವುದು ಅಂದರೆ, ’ಸಂಪೂರ್ಣ ದಿವ್ಯದೃಷ್ಟಿ’ಯನ್ನು ಪಡೆಯುವುದೆನ್ನುವುದು ’ಉಚ್ಛಾರಣೆ’ ಅಥವಾ ಮಂತ್ರೋಪಾಸನೆಯಿಂದ ಸಾಧ್ಯವಾಗುವುದಿಲ್ಲ. ಸಂಪೂರ್ಣ ದಿವ್ಯದೃಷ್ಟಿಗೆ ಸೇರಬೇಕೆಂದರೆ, ಸಂಪೂರ್ಣ ವಿಪಸ್ಸನೆಗೆ ಸೇರಬೇಕೆಂದರೆ ಇರುವ ಮಾರ್ಗವು ಮಂತ್ರೋಪಾಸನೆ ಅಲ್ಲ ಅದು ’ಆನಾಪಾನಸತಿ’.